OLYMPUS DIGITAL CAMERA

ಒಂದು ದಿನ ಭಗವಾನ್ ಬುದ್ಧನು ತಾನಿದ್ದ ಬೌದ್ಧವಿಹಾರದಲ್ಲಿ ಸುತ್ತಾಟಕ್ಕಾಗಿ ಹೊರಗೆ ಹೊರಟಿದ್ದ.

ಆಗ ಒಬ್ಬ ಭಿಕ್ಷುವು ಅವನ ಬಳಿ ಬಂದು ವಂದಿಸಿ, ತನಗೆ ಒಂದು ಉಣ್ಣೆಯ ಹೊಸ ಶಾಲು ನೀಡಬೇಕೆಂದು ಕೋರಿಕೊಂಡ.

“ನಿನ್ನ ಬಳಿ ಇದ್ದ ಹಳೆಯ ಶಾಲು ಏನಾಯಿತು?”  ಎಂದು ಬುದ್ಧನು ಅವನನ್ನು ಪ್ರಶ್ನಿಸಿದ.

“ಅದು  ಬಹಳ ಹಳೆಯದಾಗಿಬಿಟ್ಟಿತ್ತು. ಹಾಗಾಗಿ ಅದನ್ನು ನಾನೀಗ ಹಚ್ಚಡವಾಗಿ ಬಳಸುತ್ತಿದ್ದೇನೆ” ಎಂದ ಆ ಭಿಕ್ಷು.

ಬುದ್ಧ ಆಗ ” ಹಾಗಾದರೆ ನಿನ್ನ ಆ ಹಳೆಯ ಹಚ್ಚಡ ಎಲ್ಲಿ ಹೋಯಿತು?” ಎಂದು ಕೇಳಿದ.

“ಗುರುಗಳೇ, ತುಂಬ  ಬಳಸಿ ಬಳಸಿ ಅದು ಜೀರ್ಣವಾಗಿ ಹೋಗಿತ್ತು. ಅದರ ನೂಲೆಲ್ಲಾ ಹೊರಬರುತ್ತಿತ್ತು. ಹಾಗಾಗಿ ನಾನು ಅದನ್ನು ಕತ್ತರಿಸಿಕೊಂಡು ಅದರಿಂದ ಒಂದು ತಲೆದಿಂಬಿನ ಹೊದಿಕೆಯನ್ನು ಮಾಡಿಕೊಂಡಿದ್ದೇನೆ.” ಎಂದ ಆ ಭಿಕ್ಷುವು ” ಈಗ ನನಗೆ ಹೊಸ ಶಾಲು ಸಿಗಬಹುದೇ?” ಎಂದು ಪ್ರಾರ್ಥಿಸಿದ.

“ಒಳ್ಳೆಯ ಕೆಲಸ ಮಾಡಿದೆ. ಆದರೆ ಇದಕ್ಕಿಂತ ಮೊದಲು ನಿನ್ನ ಬಳಿ ಒಂದು ದಿಂಬಿನ ಹೊದಿಕೆ ಇತ್ತಲ್ಲವೇ? ಅದೇನಾಯಿತು?” ಬುದ್ಧನ ಪ್ರಶ್ನೆ.

“ಹೌದು. ತುಂಬ ಬಳಸಿದ ಹೊದಿಕೆ ಅದು. ಆ ದಿಂಬಿನ  ಮೇಲೆ ನಾನು ಲಕ್ಷ ಬಾರಿ ತಲೆ ಉಜ್ಜಿರಬಹುದು , ಗುರುಗಳೇ. ಅದು ನವೆದೂ ನವೆದೂ ಹೋಗಿ ಅದರಲ್ಲಿ ದೊಡ್ಡ ದೊಡ್ಡ ತೂತುಗಳು ಬಿದ್ದಿದ್ದವು. ಆ ಹೊದಿಕೆಯನ್ನು ಬಳಸಿ ನಾನೊಂದು ನೆಲಹಾಸನ್ನು ಇತ್ತೀಚಿಗಷ್ಟೇ ಮಾಡಿಕೊಂಡಿದ್ದೇನೆ.” ಎಂದು ಉತ್ತರ ಬಂದಿತು.

ಆದರೂ ಬುದ್ಧನಿಗೆ ತೃಪ್ತಿಯಾದಂತೆ ತೋರಲಿಲ್ಲ. ಪ್ರತಿಯೊಂದು ಸಂಗತಿಯನ್ನೂ ಆಮೂಲಾಗ್ರವಾಗಿ ತಿಳಿಯುವ ಸ್ವಭಾವದ ಗೌತಮ ಬುದ್ಧನು ಮುಂದುವರೆಸುತ್ತಾ ” ಮೊದಲು ನಿನ್ನಲ್ಲಿದ್ದ  ನೆಲಹಾಸನ್ನು ಏನು ಮಾಡಿದೆ?” ಎಂದು ಸಂಶಯದಿಂದ ಕೇಳಿದ.

ಎರಡೂ ಕೈಗಳನ್ನೆತ್ತಿ ನಮಸ್ಕರಿಸುತ್ತ ಆ ಭಿಕ್ಷುವು ” ಮಹಾಪ್ರಭೂ , ನನ್ನಲ್ಲಿದ್ದ ಆ ಹಳೆಯ ನೆಲಹಾಸು ಪೂರ್ಣವಾಗಿ ಹರಿದುಹೋಗಿತ್ತು. ಅದರಲ್ಲಿನ ದಾರವೆಲ್ಲಾ ಹೊರಗೆ ಬಂದುಬಿಟ್ಟಿತ್ತು . ನಾನು ಆ ಎಳೆಗಳನ್ನೆಲ್ಲಾ ತೆಗೆದು ಅವನ್ನು ಹೊಸೆದು ಚಿಕ್ಕ ಚಿಕ್ಕ ಬತ್ತಿಗಳನ್ನಾಗಿ ಮಾಡಿಕೊಂಡೆ . ಅವು ಈಗ ಹಣತೆಯ ಬತ್ತಿಗಳಾಗಿ ಉರಿದು ಎಲ್ಲರಿಗೂ ಬೆಳಕು ನೀಡುತ್ತಿವೆ” ಎಂದು ವಿನೀತನಾಗಿ ಹೇಳಿದ.

ಇದನ್ನು ಕೇಳಿದ ಬುದ್ಧನ ಮುಖದಲ್ಲಿ ಮಂದಹಾಸ ಮೂಡಿತು. ಆಗ ಆ ಭಿಕ್ಷುವಿಗೆ ಹೊಸ ಶಾಲು ನೀಡಿದ.

ಲೇಖಕ : ಅರವಿಂದ ಗುಪ್ತ

ಅನುವಾದ : ಗಣನಾಥ ಎಸ್ ಎನ್

ಶಿಕ್ಷಣ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದ ಕುರಿತಾಗಿ ಕಾಳಜಿ ಇರುವ ಆಸಕ್ತರಿಗೆ ಉಪಯುಕ್ತವಾಗಲೆಂದು ಬೇರೆ ಬೇರೆ ಮೂಲಗಳಿಂದ ಆಯ್ದ ಲೇಖನ ಮತ್ತು ವಿಡಿಯೋಗಳ ಕನ್ನಡ ಅನುವಾದವನ್ನು ದರ್ಪಣ ಯೋಜನೆ ನೀಡುತ್ತಿದೆ .

ವಿವರಗಳಿಗೆ ಸಂಪರ್ಕಿಸಿ : ಎಸ್. ಎನ್. ಗಣನಾಥ

9980131765

sngananath@gmail.com