https://qph.ec.quoracdn.net/main-qimg-d3268a37ea94cb0e6ca1f71d518ef3c2-c

ಈ ಬೀಟ್ರೂಟು, ನೋಡಕ್ಕೆ ಕೆಂಪು ಕೆಂಪಾಗಿ ಎಷ್ಟು ಚೆನ್ನಾಗಿರತ್ತೆ ಅಲ್ವಾ? ರುಚೀನೂ ಅಷ್ಟೇ. ಸಿಹಿ ಇಷ್ಟ ಆಗೋರು, ಹಾಗೇ ಹಸಿಯಾಗಿ ತಿನ್ಬೋದು. ರುಚಿ ಎಲ್ಲಾ ಏನೋ ಸರಿ. ಆದ್ರೆ ನಮ್ ಆರೋಗ್ಯಕ್ಕೂ ಉಪ್ಯೋಗ ಆಗೋ ಎಷ್ಟೊಂದ್ ಗುಣ ಬೀಟ್ ರೂಟಲ್ಲಿ ಇದೆ ಗೊತ್ತಾ? ಈ ತರಕಾರಿನ, ಪೋಷಕಾಂಶಗಳು ಮತ್ತೆ ರೋಗನಿರೋಧಕಗಳ ಖಜಾನೆ ಅಂತಾನೇ ಹೇಳ್ಬೋದು. ಇದನ್ನ ಆಗಾಗ ತಿಂತಿದ್ರೆ, ಕ್ಯಾನ್ಸರ್, ಸಂಧಿವಾತದಂಥ ಖಾಯಿಲೆಗಳು ಗಂಟುಬೀಳಲ್ಲ. ಜೊತೆಗೆ ಬಿಪಿ ನಿಯಂತ್ರಣದಲ್ಲಿ ಇಟ್ಕೊಳಕ್ಕೆ, ಕ್ರೀಡಾಪಟು ಆಗಿದ್ರೆ ದೈಹಿಕ ಸಾಮರ್ಥ್ಯ ಹೆಚ್ಚಿಸ್ಕೊಳಕ್ಕೆ ಈ ಬೀಟ್ ರೂಟ್ಗಿಂತ ಒಳ್ಳೆ ತರಕಾರಿ ಇನ್ನೊಂದಿಲ್ಲ. ಇನ್ನು ಈ ಬೀಟ್ರೂಟು ಯಾಕಿಷ್ಟು ಗಾಢ ಬಣ್ಣಕ್ಕಿರತ್ತೆ ಅಂದ್ರೆ, ಅದ್ರಲ್ಲಿರೋ ಬೀಟಾಲಿನ್ಸ್ ಅನ್ನೋ ಅಂಶದಿಂದ. ಇದ್ರಲ್ಲಿ ರೋಗನಿರೋಧಕ ಶಕ್ತಿ ಮತ್ತೆ ಉರಿ ಊತ ಇವನ್ನೆಲ್ಲಾ ಕಮ್ಮಿಮಾಡೋ ತಡಿಯೋ ಶಕ್ತಿ ಎಥೇಚ್ಚವಾಗಿದೆ.

ಅಂದ್ಮೇಲೆ ಬೀಟ್ರೂಟ್ ತಿನ್ನೋದ್ರಿಂದ ಏನೆಲ್ಲಾ ಲಾಭ ಇದೆ ಅಂತ ನೋಡೇ ಬಿಡಣ್ವಾ?

1. ರೋಗನಿರೋಧಕ ಶಕ್ತಿ ಹೆಚ್ಸತ್ತೆ

ಈ ಫ್ರೀ ರಾಡಿಕಲ್ಸ್, ದೇಹದಲ್ಲಿ ಕೆರಳಿ ಹಾನಿ ಮಾಡೋದನ್ನ ಬೀಟ್ ರೂಟ್ ತಡಿಯತ್ತೆ. ಈ ಫ್ರೀ ರಾಡಿಕಲ್ ನಮ್ ದೇಹದಲ್ಲಿ ನಡಿಯೋ ಮಾಮೂಲಿ ಪಚನ ಕ್ರಿಯೆಯಿಂದ, ಜೀವನಶೈಲಿಯಿಂದ, ತಿನ್ನೋ ಅಭ್ಯಾಸದಿಂದ ಮತ್ತೆ ಮಾನಸಿಕ ಒತ್ತಡದಿಂದಾನೂ ಉತ್ಪತ್ತಿಯಾಗಿ ಕೆರಳ್ಬೋದು. ಇದೆಲ್ಲಾ ಒಳಗಿಂದ ಆಗೋದು. ಇನ್ನು ಹೊರಗೆ ಓಡಾಡುವಾಗ ವಾತವರಣದಲ್ಲಿರೋ ಧೂಳು, ಫ್ಯಾಕ್ಟರಿಯಿಂದ ಬಿಡುಗಡೆ ಆಗೋ ರಾಸಾಯನಿಕಗಳಿಂದಾನೂ ಉತ್ಪತ್ತಿಯಾಗತ್ತೆ. ಅದೇನ್ ಮಾಡತ್ತೆ ಬಿಡಿ ಅನ್ನೋಹಾಗಿಲ್ಲ ಯಾಕಂದ್ರೆ ಈ ಫ್ರೀ ರಾಡಿಕಲ್ಸ್ ಕೆರಳೋದ್ರಿಂದನೇ ಕ್ಯಾನ್ಸರ್, ಸಂಧಿವಾತ ಮತ್ತೆ ಆಲ್ಝೈಮರ್ಸ್ ಖಾಯಿಲೆ ಎಲ್ಲಾ ಬರೋದು.

ಆದ್ರೆ ಬೀಟ್ರೂಟ್ನಲ್ಲಿ ರುಟಿನ್, ಕೆಫೀಕ್ ಆಸಿಡ್, ಎಪಿಕೆಟೆಚಿನ್ ಮತ್ತೆ ಬೀಟಾಲಿನ್ಸ್ ಅನ್ನೋ ರೋಗನಿರೋಧಕಗಳು ಹೇರಳವಾಗಿದೆ. ಅವು ಫ್ರೀ ರಾಡಿಕಲ್ಸ್ ಹಾರಾಟನ ತಣ್ಣಗ್ ಮಾಡತ್ತೆ. ಹಾಗಾಗಿ ಪದೇ ಪದೇ ಖಾಯಿಲೆ ಬೀಳದು ತಪ್ಪಿ, ಪ್ರತಿರೋಧ ಶಕ್ತಿ ಬರತ್ತೆ.

ಮೂಲ

2. ಬಿಪಿ ಹೆಚ್ಚಾಗಿದ್ರೆ ಕಮ್ಮಿ ಮಾಡತ್ತೆ

ಬಿಪಿ ತೊಂದ್ರೆ ನಿಭಾಯಿಸಕ್ಕೆ ಬೀಟ್ರೂಟ್ ಒಳ್ಳೆ ದಾರಿ. ಒಂದ್ ಅಧ್ಯಯನದ್ ಪ್ರಕಾರ, ಆರೋಗ್ಯವಾಗಿರೋ ಒಂದಷ್ಟು ಜನಕ್ಕೆ ಸುಮಾರು 500 ಎಂ ಎಲ್ ಬೀಟ್ರೂಟ್ ರಸ ಕುಡಿಸಿ, 3 ಗಂಟೆ ಕಳದು ಟೆಸ್ಟ್ ಮಾಡ್ದಾಗ, ಬಿಪಿ ಕಂಟ್ರೋಲಿಗ್ ಬಂದಿತ್ತಂತೆ. ಇದಕ್ಕೆ ಕಾರಣ ಏನಪ್ಪ ಅಂದ್ರೆ, ಬೀಟ್ ರೂಟಲ್ಲಿರೋ ನೈಟ್ರೇಟ್, ದೇಹದೊಳಕ್ಕೆ ಹೋದ್ಮೇಲೆ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಆಗತ್ತೆ. ಆ ನೈಟ್ರಿಕ್ ಆಕ್ಸೈಡು ಬಿಪಿನ ಜಾಸ್ತಿ ಆಗ್ದೇ ಇರೋ ಹಾಗೆ ನೋಡ್ಕೊಳತ್ತೆ.

ಮೂಲ

3. ಕ್ಯಾನ್ಸರ್ ಬರ್ಸೋ ಜೀವಕೋಶಗಳ್ನ ನಾಶ ಮಾಡತ್ತೆ

ಒಂದಷ್ಟು ಪ್ರಾಣಿಗಳ್ ಮೇಲ್ ಮಾಡಿದ್ ಪ್ರಯೋಗದ ಪ್ರಕಾರ, ಬೀಟ್ರೂಟ್ ತಿನ್ನೋದ್ರಿಂದ ಚರ್ಮದ ಕ್ಯಾನ್ಸರ್ ಮತ್ತೆ ಶ್ವಾಸಕೋಶದ ಕ್ಯಾನ್ಸರ್ ಗೆಡ್ಡೆಗಳು ಬೆಳಿಯೋದ್ನ ತಡಿಬೋದಂತೆ. ಅಷ್ಟೆ ಅಲ್ಲ, ಈ ಬೀಟ್ರೂಟು ಮನುಷ್ಯರಲ್ಲಿ ಕಾಣುಸ್ಕೊಳೋ ಪ್ರಾಸ್ಟೇಟ್ ಮತ್ತೆ ಸ್ಥನ ಕ್ಯಾನ್ಸರ್ ಜೀವಕೋಶಗಳ್ನೂ ನಾಶಮಾಡತ್ತೆ ಅಂತ ಈ ಪ್ರಯೋಗ್ದಿಂದ ಸಾಬೀತಾಗಿದೆ. ಇದಕ್ಕೆಲ್ಲಾ ಕಾರಣ, ಬೀಟ್ ರೂಟಲ್ಲಿರೋ ಬೀಟಾನಿನ್ ಅನ್ನೋ ಅಂಶ. ಈ ಬಗ್ಗೆ ಇನ್ನೂ ಆಳವಾದ್ ಅಧ್ಯಯನ ನಡೀತಿದೆ. ನೋಡಣ ಹೇಗೆಲ್ಲಾ ಕ್ಯಾನ್ಸರ್ ಖಾಯಿಲೆಗೆ ಇದು ತಿರುಬಾಣ ಆಗತ್ತೇಂತ.

ಮೂಲ

4. ಶಕ್ತಿ ಹೆಚ್ಸತ್ತೆ

ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಸಾಧನೆ, ಹೆಸರು ಮಾಡಿರೋ ಕ್ರೀಡಾಪಟುಗಳೆಲ್ಲಾ ಒಂದು ರಹಸ್ಯವಾದ್ ಜ್ಯೂಸ್ ಕುಡೀತಾರೆ. ತಮ್ ಶಕ್ತಿ ಸಾಮರ್ಥ್ಯ ಜಾಸ್ತಿಯಾಗ್ಲಿ ಅಂತ. ಅದೇನ್ ಗೊತ್ತಾ? ಬೀಟ್ರೂಟ್ ಜ್ಯೂಸ್. ಇದು ನಿಜ್ವಾಗ್ಲೂ ಕೆಲ್ಸ ಮಾಡತ್ತಾ ಅಂತ ನೋಡಕ್ಕೆ, ಒಂದಷ್ಟು ಜನ ಸೈಕಲಿಸ್ಟ್ ಗಳನ್ನ ಗುಡ್ಡೆ ಹಾಕ್ಕೊಂಡು ಅಧ್ಯಯನ ಮಾಡಿದ್ರಂತೆ. ಮೊದ್ಲು ಅವ್ರು ಸೈಕಲ್ ತುಳಿದು, ಕೊನೇ ಘಟ್ಟ ತಲುಪಿದ್ದಕ್ಕೂ, ಅರ್ಧ ಲೀಟರ್ ಬೀಟ್ ರೂಟ್ ಜ್ಯೂಸ್ ಕುಡಿದು ಆಮೇಲೆ ಸೈಕಲ್ ತುಳಿದು ಕೊನೆ ಮುಟ್ಟೋದಕ್ಕೂ ತುಂಬಾ ವ್ಯತ್ಯಾಸ ಕಾಣುಸ್ತಂತೆ. ಅವರ ಸಾಮರ್ಥ್ಯ ಸುಮಾರು 3% ಜಾಸ್ತಿ ಆಗಿತ್ತಂತೆ. ಅಂದ್ರೆ ಅರ್ಥ, ಬೀಟ್ ರೂಟ್ ರಸ ಕುಡಿದು, ವ್ಯಯಾಮ ಮಾಡೋದ್ರಿಂದ ಮಾಮೂಲಿಗಿಂತ ಜಾಸ್ತಿ ಶಕ್ತಿ ಸಿಗತ್ತೆ, ಜಾಸ್ತಿ ಕೆಲ್ಸ ಮಾಡ್ಬೋದು ಅಂತ. ಅಯ್ಯೋ ಬರೀ ದೇಹ ಬೆಳ್ಸೋರಿಗೆ, ಕ್ರೀಡಾಪಟುಗಳ್ಗೆ ಮಾತ್ರ ಅಂದ್ಕೊಂಡ್ರಾ? ಹಾಗೇನಿಲ್ಲ. ಅರ್ಧ ಲೀಟರ್ ಅಲ್ದೇ ಹೋದ್ರೂ, ಸ್ವಲ್ಪ ಬೀಟ್ ರೂಟ್ ರಸ ಕುಡುದ್ರೂ ದಿನ ಪೂರ್ತಿ ಲವಲವಿಕೆಯಿಂದ ಕೆಲ್ಸ ಮಾಡ್ಕೊಂಡ್ ಇರ್ಬೋಹುದು. ಆಯಾಸ ಸುಸ್ತು ಯಾವ್ದೂ ಕಾಡಲ್ಲ.

ಮೂಲ

5. ಬುದ್ಧಿ ಚುರುಕಾಗ್ಸತ್ತೆ

ಬೀಟ್ರೂಟಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿರೋದ್ರಿಂದ, ಮೆದುಳಿಗೆ ರಕ್ತ ಸಂಚಾರ ಸರಾಗ್ವಾಗಿ, ಚೆನ್ನಾಗಿ ಆಗತ್ತೆ. ಅಂದ್ಮೇಲೆ ಬುದ್ಧಿ ಚುರುಕಾಗ್ದೇ ಇರತ್ತಾ? . ಬೀಟ್ ರೂಟ್ ರಸನ ಸತತವಾಗಿ ಎರಡು ವಾರ ಕುಡುದ್ರೆ ಬುದ್ಧಿಶಕ್ತಿ ಸಾಕಷ್ಟು ಸುಧಾರಣೆ ಆಗತ್ತೆ. ಇನ್ಮೇಲೆ ಬುದ್ಧಿ ಚುರುಕಾಗ್ಬೇಕು ಅಂದ್ರೆ ಅಂಗಡಿನಲ್ಲಿ ಸಿಕ್ಕೋ ಇಪ್ಪತ್ತೆಂಟ್ ರಾಸಾಯನಿಕ ಪೌಡರ್ರು, ಲೇಹ್ಯ ಎಲ್ಲಾ ತಿನ್ನೋದ್ ಬಿಟ್ಟು ಗಂಭೀರ್ವಾಗಿ ಬೀಟ್ ರೂಟ್ ಜ್ಯೂಸ್ ಕುಡಿಯಣ.ಏನು ಸರಿತಾನೇ

ಮೂಲ

6. ಲಿವರಿನ ಆರೋಗ್ಯ ಕಾಪಾಡತ್ತೆ

ನಮ್ ದೇಹದಲ್ಲಿರೋ ವಿಷಕಾರಿ ಪದಾರ್ಥಗಳ್ನ ಫಿಲ್ಟರ್ ಮಾಡಿ ಆಚೆ ಹಾಕೋದ್ರಲ್ಲಿ ಲಿವರ್ದು ತುಂಬಾ ಮುಖ್ಯವಾದ ಪಾತ್ರ. ಆದ್ರೆ ಕೆಲವು ಸರ್ತಿ ಏನಾಗತ್ತೆ ಅಂದ್ರೆ, ನಾವ್ ತೊಗೊಳೋ ಮಾತ್ರೆಗಳು, ಜಂಕ್ ಫುಡ್ಡು… ಇವುಗಳಿಂದ ಲಿವರ್ ಮೇಲೆ ಒತ್ತಡ ಬೀಳತ್ತೆ ಜೊತೆಗೆ ಅದು ಫಿಲ್ಟರ್ ಮಾಡಕ್ಕೆ ಆಗ್ದೇ ಇರೋವಷ್ಟು ವಿಷ ಪದಾರ್ಥ ತುಂಬೋಗತ್ತೆ. ಮುಂದೇನು? ಲಿವರ್ ಕಥೆ ಗೋವಿಂದ. ಹಾಗಾಗ್ಬಾರ್ದು ಅಂದ್ರೆ ಮೊದಲ್ನೇದಾಗಿ ಹುಚ್ಚಾಪಟ್ಟೆ ಮಾತ್ರೆ ತೊಗೊಳದು, ಮನೆ ಆಚೆನೇ ಜಾಸ್ತಿ ಊಟ ತಿಂಡಿ ಮಾಡದು… ಈ ಅಭ್ಯಾಸಾನೆಲ್ಲಾ ಕಮ್ಮಿ ಮಾಡ್ಬೇಕು. ಆದ್ರೂ ಅನಿವಾರ್ಯ ಅಂದಾಗ, ಬೀಟ್ರೂಟನ್ನ ಆಗಾಗ ತಿಂತಾ ಬಂದ್ರೆ, ಲಿವರ್ ಮಾಮೂಲಾಗಿ ಕೆಲ್ಸ ಮಾಡ್ಕೊಂಡ್ ಹೋಗತ್ತೆ. ಇದಕ್ಕೂ ಒಂದ್ ಪ್ರಯೋಗ ಮಾಡಿದಾರೆ ವಿಜ್ಜಾನಿಗಳು. ಆಗ ಗೊತ್ತಾದ್ ವಿಷ್ಯ ಅಂದ್ರೆ, ಬೀಟ್ ರೂಟ್ ತಿನ್ನೋದ್ರಿಂದ ಲಿವರಲ್ಲಿ ಕೊಬ್ಬಿನಂಶ ಜಾಸ್ತಿ ಶೇಖರಣೆ ಆಗಲ್ಲ. ಆಗ ಲಿವರ್ರು ಆರೋಗ್ಯವಾಗಿರತ್ತೆ ಅಂತ.

ಮೂಲ

7. ಬೀಟ್ರೂಟ್ನ ಹೇಗ್ ತಿನ್ಬೇಕು? ಎಷ್ಟ್ ತಿನ್ಬೇಕು?

ಅಮೇರಿಕಾದಲ್ಲಿ ಮಾಡಿರೋ ಅಧ್ಯಯನದ್ ಪ್ರಕಾರ, ಒಬ್ಬ ವ್ಯಕ್ತಿ ವಾರಕ್ಕೆ ಸುಮಾರು ಐದುವರೆ ಇಂದ ಆರು ಬಟ್ಟಲಷ್ಟು ಕೆಂಪಗಿರೋ ತರಕಾರಿಗಳ್ನ ತಿನ್ಬೇಕಂತೆ. ಈಗ ನಿಮ್ಗೆ ಬೀಟ್ರೂಟಿಂದಾಗೋ ಲಾಭಗಳ ಬಗ್ಗೆ ಗೊತ್ತಾಗಿದ್ಯಲ್ಲಾ, ಖಂಡಿತಾ ಬೇರೆ ಕೆಂಪು ತರಕಾರಿಗಳ ಜೊತೆ ಇದನ್ನೂ ಸೇರುಸ್ಕೊತಿರಾ ಅಲ್ವ? ಇದನ್ನ ಬೇಯಿಸೇ ತಿನ್ಬೇಕು ಅಂತಿಲ್ಲ. ಊಟ ಮಾಡುವಾಗ ಹಾಳು ಮೂಳು ನೆಂಚ್ಕೊಳೋ ಬದ್ಲು, ಇಂಥ ತರಕಾರಿಗಳ್ನ ಹೆಚ್ಚಿ ಪಕ್ದಲ್ಲಿ ಇಟ್ಕೊಂಡ್ ತಿನ್ನೋದ್ ಒಳ್ಳೇದು. ಹೇಗೂ ಬೇಯಿಸೋದ್ರಿಂದ ಬೀಟ್ರೂಟಲ್ಲಿರೋ ನೈಟ್ರೇಟ್ ಅಂಶ ಕಮ್ಮಿಯಾಗೋಗತ್ತೆ. ಹಾಗಾಗಿ ಹಸೀನೇ ತಿನ್ನಿ. ಇಲ್ಲ ಜ್ಯೂಸ್ ಮಾಡ್ಕೊಂಡ್ ಕುಡೀರಿ. ಹಾಗಂತ ಸಕ್ಕರೆ ಎಲ್ಲಾ ಹಾಕ್ಕೊಂಡ್ ಪಾನಕದ್ ಥರ ಕುಡುದ್ಬಿಟ್ಟೀರ. ಬರೀ ರಸ ಕುಡಿಬೇಕು.

ಮೂಲ

8. ಬೀಟ್ರೂಟ್ನ ಯಾರ್ ತಿನ್ಬಾರ್ದು?

ಬೀಟ್ರೂಟ್ ತಿಂದಾಗ ಅಥವ ಅದರ ಜ್ಯೂಸ್ ಕುಡ್ದಾಗ ನಮ್ಮ ಮಲ ಮೂತ್ರ ಸ್ವಲ್ಪ ಕೆಂಪಾಗಿ ಹೋಗೋದು ಸಹಜ. ಅದ್ರಿಂದೇನೂ ಗಾಬರಿ ಆಗ್ಬೇಕಾಗಿಲ್ಲ. ಆದ್ರೆ ಕಿಡ್ನಿನಲ್ಲಿ ಕಲ್ಲಿದ್ರೆ ಅಂಥೋರು ಈ ತರಕಾರಿನ ಕಣ್ಣೆತ್ತೂ ನೋಡ್ಬಾರ್ದು. ಕಿಡ್ನಿ ಕಲ್ಲು ಅಂದ್ರೆ ಅದು ಕ್ಯಾಲ್ಸಿಯಂ ಅಂತ ನಿಮ್ಗೂ ಗೊತ್ತು. ಈ ಬೀಟ್ ರೂಟಲ್ಲಿ ಎಥೇಚ್ಚವಾಗಿರೋ ಆಕ್ಸಲೇಟ್ಸ್ ಇದ್ಯಲ್ಲ, ಅವು ದೇಹ ಕ್ಯಾಲ್ಸಿಯಂ ಅಂಶನ ಹೀರ್ಕೊಳ್ದೇ ಇರೋಹಾಗೆ ತಡಿಯತ್ತೆ. ಮೊದ್ಲೇ ಜಾಸ್ತಿ ಪ್ರಮಾಣದಲ್ಲಿರೋ ಕ್ಯಾಲ್ಸಿಯಂ ಕಲ್ಲಾಗಿದೆ. ಜೊತೆಗೆ ಇದನ್ನೂ ತಿಂದ್ಬಿಟ್ರೆ ಅಷ್ಟೇ ಆಮೇಲೆ. ಬರೀ ಕಿಡ್ನಿ ಕಲ್ಲಲ್ಲ, ಕರುಳಿನಲ್ಲಿ ಏನಾದ್ರೂ ಸಮಸ್ಯೆ ಇದ್ರೆ, ಅಂಥೋರ್ ಕೂಡ ಬೀಟ್ರೂಟ್ ತಿನ್ಬಾರ್ದು.

ಮೂಲ

ಆಗಾಗ ಅಡುಗೇಲಿ… ಇಲ್ಲಾ ಹಸಿಹಸಿಯಾಗಿ ತಿಂತಿರಿ. ಆರೋಗ್ಯಕ್ಕೆ ಒಳ್ಳೇದು.