’ನಡೆದಾಡುವ ದೇವರು’ ಎಂಬ ಬಿರುದು ಪಡೆದಿರುವ ಸಿದ್ಡಗಂಗಾ ಮಠದ ‘ಪದ್ಮಭೂಷಣ’ ಶಿವಕುಮಾರ ಸ್ವಾಮಿಗಳ ಜೀವನವನ್ನು ನೋಡಿ! ಯಾವ ವಿಶ್ವವಿದ್ಯಾಲಯದಲ್ಲೂ ಕಲಿಯಲಾಗದ, ಯಾವ ಪುಸ್ತಕದಿಂದಲೂ ಮೈಗೂಡಿಸಿಕೊಳ್ಳಲಾಗದ, ನಾಯಕತ್ವದ ಗುಣಗಳು ಅವರಲ್ಲಿ ಕಾಣಿಸುತ್ತವೆ. ಅವುಗಳನ್ನು ಅವರು ಹೇಗೆ ಮೈಗೂಡಿಸಿಕೊಂಡಿದ್ದಾರೆ ಅಂತ ತಿಳಿದುಕೊಂಡರೆ ನಮ್ಮಲ್ಲೂ ಅವುಗಳು ಮೂಡಲು ಸಾಧ್ಯವಾಗುತ್ತದೆ. ಯಾವ ಗುಣಗಳವು? ಮುಂದೆ ಓದಿ:

1. ಯಾವುದಾದರೊಂದು ಸಂಸ್ಥೆ ಕಟ್ಟಬೇಕಾದರೆ ದಣಿವಿಲ್ಲದೆ ದುಡಿಯಬೇಕು

ಶಿವಕುಮಾರ_ಸ್ವಾಮಿಗಳು.jpg

ಕಳೆದ ಸುಮಾರು 70 ವರುಷಗಳಿಂದ ಸಿದ್ದಗಂಗಾ ಮಠದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ ನಮ್ಮ ಶಿವಕುಮಾರ ಸ್ವಾಮಿಗಳು. ಒಂದು ನಿಯಮಕ್ಕೆ ಬದ್ಧರಾದರೆ ಅದನ್ನು ಎಡಬಿಡದೇ ಪಾಲಿಸಬೇಕು ಅನ್ನುವುದನ್ನು ಶಿವಕುಮಾರ ಸ್ವಾಮಿಗಳ ಜೀವನದ ಸಾಧನೆ ತೋರಿಸುತ್ತದೆ. ಈರೀತಿ ಹತ್ತಾರು ವರುಷ ತೊಡಗಿಸಿಕೊಂಡಾಗ ಮಾತ್ರ ದೊಡ್ಡ ಸಂಸ್ಥೆಗಳನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ.

2. ಛಲವಿದ್ದರೆ ಎಂತಹ ಗುರಿಯನ್ನು ಬೇಕಾದರೂ ಸಾಧಿಸಬಹುದು

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ಅನ್ನ, ಅಕ್ಷರ, ಜ್ಞಾನ ಎಂಬ ಮೂರು ರೀತಿಯ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ. ಇದು ಸಾಮಾನ್ಯವಾದ ಕೆಲಸವಲ್ಲ.

x1-HPIM7328.jpg

3. ಯಶಸ್ಸು ಸಿಗಬೇಕಾದರೆ ಲೌಕಿಕ ಮತ್ತು ಅಲೌಕಿಕ ವಿದ್ಯೆಗಳೆರಡೂ ಮುಖ್ಯ

ಶಿವಕುಮಾರ ಸ್ವಾಮಿಗಳ ಸನ್ಯಾಸತ್ವ ಸ್ವೀಕಾರ ಅಕಸ್ಮಾತಾಗಿ ನಡೆದದ್ದು. ತಮ್ಮ ಹಿರಿಯ ಶ್ರೀಗಳ ಶಿವೈಕ್ಯವಾದಾಗ ಅಂತಿಮ ದರ್ಶನಕ್ಕೆಂದು ಬಂದವರು ಸನ್ಯಾಸಿಯಾಗಿ ಹಿಂದಿರುಗಿದರು! ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತಲೂ ಹಾಗು ಶಿಸ್ತುಬದ್ಧ ವಿದ್ಯಾರ್ಥಿಯಾಗಿಯೂ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ.

4. ಯಾರು ನಮ್ಮನ್ನು ಹೇಗೆ ಅಳೆಯುತ್ತಾರೆ ಅನ್ನುವುದಕ್ಕಿಂತ, ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು

ಶ್ರೀಗಳು ಮಠದ ಸಂಪೂರ್ಣ ಹೊಣೆ ಹೊತ್ತ ಆರಂಭದ ದಿನಗಳಲ್ಲಿ ‘ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ’ ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ತಮ್ಮ ಕೆಲಸದಿಂದಲೇ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ.

x1-HPIM7335.jpg

5. ದೊಡ್ಡ ಕೆಲಸ ಮಾಡಬೇಕಾದರೆ ದೂರದೃಷ್ಟಿ ಇರಬೇಕು

ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಅಡಿಯಿಡುತ್ತಿದ್ದ ಭಾರತದಲ್ಲಿ ಶಿಕ್ಷಣದ ಮಹತ್ವವನ್ನು ಪಸರಿಸಲು ಹಾಗು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಲು ಸರ್ಕಾರವೂ ಸೇರಿದಂತೆ ಅನೇಕ ಮಹನೀಯರು ಮೊದಲಾದರು. ಆದರೆ ಸಿದ್ದಗಂಗೆಯಲ್ಲಿ ಅದಾಗಲೇ ಅವೆಲ್ಲವೂ ಕಾರ್ಯರೂಪಕ್ಕೆ ಬಂದಾಗಿತ್ತು. ಇದು ಸ್ವಾಮೀಜಿಯವರ ದೂರದೃಷ್ಟಿಗೆ ಒಂದು ಉದಾಹರಣೆ.

6. ಕೆಲಸದಲ್ಲಿ ಕುಶಲತೆಗೆ ವೈಯಕ್ತಿಕ ಶಿಸ್ತು ಬಹಳ ಮುಖ್ಯವಾದುದು

ಶ್ರೀಗಳು ಇಂದಿಗೂ ಪ್ರತಿದಿನವೂ ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ಇದು ಅವರು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ನಿತ್ಯಕರ್ಮ!

7. ಆರೋಗ್ಯವೇ ಭಾಗ್ಯ

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಶ್ರೀಗಳು ತಮ್ಮ ಆರೋಗ್ಯಕ್ಕೆ ಎಷ್ಟು ಗಮನ ಕೊಡುತ್ತಾರೆ ಅನ್ನುವುದಕ್ಕೆ ಅವರ ಊಟದ ನಿಯಮಗಳೇ ಕೈಗನ್ನಡಿ.

  • ಮುಂಜಾನೆ 6:30ಕ್ಕೆ: ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’, ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’.
  • ಮಧ್ಯಾಹ್ನ – ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ .
  • ರಾತ್ರಿ – ಒಂದು ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ಣಿ ಅಥವಾ ಪಲ್ಯ. ಇದಿಲ್ಲದೇ ಹೋದರೆ, ಉಪ್ಪಿಟ್ಟು, ನಂತರ ಹಣ್ಣು.

ನಿಮಗೆ ಗೊತ್ತಿದೆಯೋ ಇಲ್ಲವೋ ಈ ವರ್ಷ ಶ್ರೀಗಳು 109 ನೆಯ ವರ್ಷಕ್ಕೆ ಕಾಲಿಡುತ್ತಾರೆ! ಆದರೂ ಅವರ ಚಟುವಟಿಕೆ ಹದಿ ಹರಯದವರನ್ನೂ ನಾಚಿಸುವಂತಿದೆ.

x1-HPIM7337.jpg

8. ಸುತ್ತಲ ಪ್ರಪಂಚದ ಬಗ್ಗೆ ಚೆನ್ನಾಗಿ ಅರಿವಿರಬೇಕು

ಶ್ರೀಗಳು ದಿನಾ ಕಚೇರಿಗೆ ಬಂದು ಪತ್ರಿಕೆಗಳ ಓದಿಸಿ ಕೇಳುತ್ತಾರೆ. ಆಧ್ಯಾತ್ಮದ ಕಡೆ ಒಲವಿದ್ದರೂ ಎಲ್ಲೋ ಧ್ಯಾನ ತಪಸ್ಸುಗಳಲ್ಲಿ ಕಳೆದುಹೋಗದೇ ಸುತ್ತಲ ಸಮಾಜದ ಆಗುಹೋಗುಗಳ ಬಗ್ಗೆಯೂ ಗಮನವಿಟ್ಟಿರುವುದು ವಿಶೇಷವೇ ಸರಿ!

9. ಸಂಸ್ಥೆಯ ಪ್ರತಿಯೊಂದು ವಿಷಯದ ಬಗ್ಗೆಯೂ ಕಾಳಜಿಯಿರಬೇಕು

ನಾಯಕತ್ವದ ಮುಖ್ಯ ಗುಣಗಳಲ್ಲೊಂದು ತಮ್ಮ ಸಂಸ್ಥೆಯಲ್ಲಿ ದುಡಿಯುವವರೊಡನೆ ಒಡನಾಟ ಇಟ್ಟುಕೊಳ್ಳುವುದು. ಶ್ರೀಗಳು ಮಠದ ಆಡಳಿತ ಕಡತಗಳ ಪರಿಶೀಲನೆ,ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಈ ಮೂಲಕ ಸಂಸ್ಥೆಯ ಆಗುಹೋಗುಗಳನ್ನು ಸಮರ್ಥವಾಗಿ ನಿಭಾಯಿಸಲು ಆಗುತ್ತದೆ ಮತ್ತು ಯಾವುದೇ ವಿಷಯ ಕೈಮೀರಿ ಹೋಗದಂತೆ ಹಿಡಿತ ಸಾಧಿಸಲೂ ನೆರವಾಗುತ್ತದೆ.

10. ನುಡಿದಂತೆ ನಡೆಯಬೇಕು

ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ “ಕಾಯಕವೇ ಕೈಲಾಸ” ಎಂಬುದನ್ನು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.

11. ಸತತವಾಗಿ ಕಲಿಯುತ್ತಲೇ ಇರಬೇಕು

ಜ್ಙಾನವೆಂಬುದಕ್ಕೆ ಕೊನೆಯೇ ಇಲ್ಲ. ತಮ್ಮ ಸುದೀರ್ಘವಾದ ಜೀವನದಲ್ಲಿ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಅನುಭವಗಳಿದ್ದರೂ ಶ್ರೀಗಳು ಅದರಲ್ಲೇ ಸೆರೆಯಾಗದೇ ಜ್ಙಾನ ದಾಹವನ್ನು ಉಳಿಸಿಕೊಂಡಿರುವುದು ಅವರ ಮತ್ತೊಂದು ನಾಯಕತ್ವದ ಲಕ್ಷಣ. ಇಂದಿಗೂ ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದಾರೆ.

12. ಸಾಮಾಜಿಕ ಚಟುವಟಿಕೆಗಳಲ್ಲಿ ಬಹಳ ಆಸಕ್ತಿಯಿಂದ ಪಾಲ್ಗೊಳ್ಳಬೇಕು

ಆಗಲೇ ಹೇಳಿದಂತೆ ಶ್ರೀಗಳು ಆಧ್ಯಾತ್ಮ ಅಥವಾ ಇನ್ನಾವುದೇ ನೆಪದಲ್ಲಿ ಸಾಮಾಜಿಕ ಜೀವನದಿಂದ ದೂರ ಸರಿದವರಲ್ಲ. ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಾರೆ. ದೂರದ ಊರುಗಳಿಗೂ ಓಡಾಡುತ್ತಾರೆ! ಆರೋಗ್ಯಕರವಾದ ಸಾಮಾಜಿಕ ಸಂಬಂಧವನ್ನು ಜನರೊಂದಿಗೆ ಕಾಯ್ದುಕೊಂಡು ಬರುವಲ್ಲಿ ಅವರು ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ.

x1024px-Sree_Shivakumara_Swamiji_Dr_Abdul_Kalam copy.jpg

13. ಮಾನವೀಯತೆ ಎಲ್ಲಕ್ಕಿಂತ ಮುಖ್ಯ ಎನ್ನುವುದನ್ನು ಮರೆಯಬಾರದು

ಶ್ರೀಗಳು ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ, ಮೇಲು ಕೀಳೆಂಬುದನ್ನು ನೋಡದೇ, ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ, ಎಲ್ಲ ಧರ್ಮಗಳ ಮತ್ತು ಒಟ್ಟಾರೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದ್ದಾರೆ.

ಒಟ್ಟಿನಲ್ಲಿ ಶಿವಕುಮಾರ ಸ್ವಾಮಿಗಳು ಮೈಗೂಡಿಸಿಕೊಂಡಿರುವ ಈ ನಾಯಕತ್ವದ ಗುಣಗಳು ಎಲ್ಲರಿಗೂ ಮಾದರಿ. ಏನಂತೀರಿ?