ಸೂರ್ಯ ಯಾವಾಗ್ಲೂ ಪೂರ್ವದಲ್ಲೇ ಹುಟ್ಬೇಕಾ? ಹಾಗೇನೂ ಇಲ್ಲ. ಭೂಮಿ ಸುತ್ತೋದು ಪಶ್ಚಿಮ್ದಿಂದ ಪೂರ್ವಕ್ಕಾದ್ರಿಂದ ಹೀಗಾಗತ್ತೆ. ಹಾಗಾದ್ರೆ ಪಶ್ಚಿಮ್ದಲ್ಲೇ ನೇಸರು ಮೂಡೋದನ್ನ ನೋಡ್ಬೇಕು ಅಂತ ನೀವೇನಾರೂ ಹಟ ಹಿಡಿದ್ರೆ ಭೂಮಿ ಸುತ್ತೋ ದಿಕ್ಕು ಬದ್ಲಿಸಕ್ಕಾಗತ್ತ? ಆ ತೊಂದ್ರೆ ತೊಗೊಳ್ದೇ ಪಡುವಣ ದಿಕ್ನಲ್ಲಿ ಮೂಡೋ ನೇಸರನ್ನ ನೋಡಕ್ಕೆ ಹೇಗಾಗತ್ತೆ? ಓದ್ನೋಡಿ ಗೊತ್ತಾಗತ್ತೆ.

1) ತಿರೆ ತನ್ಸುತ್ತಾ ತಾನು ತಿರುಗ್ಗಕ್ಕಿಂತ ಜೋರಾಗಿ ಹೋಗೋ ವಿಮಾನ್ದಲ್ಲಿ ಕುಂತು

ಭೂಮಿ ವೇಗ ಬೇರೆ-ಬೇರೆ ಅಕ್ಷಾಂಶದಲ್ಲಿ ಬೇರೆ-ಬೇರೆ ಇರೋದ್ರಿಂದ ಸ್ವಲ್ಪ ಉತ್ತರದ ಅಕ್ಷಾಂಶಗಳಲ್ಲಿ ಇದು ಸುಲಭ. ನೀವೇನಾದ್ರೂ ಲಂಡನ್ನಿಂದ ಕೆಬೆಕ್ ನಗರಕ್ಕೆ (ಕೆನಡ) ಬೋಯಿಂಗ್ 777 ಅಥ್ವಾ ಏರ್ ಬಸ್ 330ರಲ್ಲೋ ಮಧ್ಯಾಹ್ನ ಕೂತು ಹಾರಿದ್ರೆ, ಪಶ್ಚಿಮ್ದಲ್ಲಿ ಮೊದ್ಲು ನೇಸರ ಮುಳ್ಗದು ಕಾಣ್ಸತ್ತೆ ಮತ್ತೆ ಪಶ್ಚಿಮ್ದಲ್ಲೇ ಅವ್ನು ಹುಟ್ಟೋದ್ನೂ ನೋಡ್ಬೋದು. ನೀವೇನಾದ್ರೂ ಈ ಚಮತ್ಕಾರ ನಮ್ಮ್ ಬೆಂಗ್ಳೂರಿಂದ ಹಾರೋ ವಿಮಾನ್ದಲ್ಲೇ ಬೇಕು ಅಂತ ತಗಾದೆ ತೆಗ್ದ್ರೆ, ನಮ್ಮ ಎಚ್. ಎ. ಎಲ್. ತಯಾರುಮಾಡಿರೋ ತೇಜಸ್ ಸೂಪರ್ ಸಾನಿಕ್ ಜೆಟ್ನಲ್ಲಿ ಈ ಸಾಹಸ ನಡಸ್ಬೇಕಾಗತ್ತೆ. ಅಂದ್ರೆ ಗಂಟೆಗೆ ಸುಮಾರು 1500 ಕಿ. ಮೀ. ವೇಗ್ದಲ್ಲಿ ಹಾರಿ ಹೋಗ್ಬೇಕಾಗತ್ತೆ.

2) ದುಬೈನ ಬುರ್ಜ್ ಖಲೀಫಾ ಆತಿಥ್ಯ ಪಡೀಬೇಕಾಗತ್ತೆ

ಜಗತ್ತಲ್ಲೇ ಅತ್ಯಂತ ಎತ್ರದ ಟವರ್ ಅನ್ನೋ ಹೆಗ್ಗಳ್ಕೆ ಇರೋ ಬುರ್ಜ ಖಾಲೀಫಾ ಎತ್ರ ಸುಮಾರು 800 ಮೀ. ಇದ್ರ 124ನೇ ಮಹಡಿಗೆ ಕೊಂಡೊಯ್ಯೋ ಲಿಫ಼್ಟ್ ಜಗತ್ತಲ್ಲೇ ಅತಿ ವೇಗದ್ದು. ನೀವೇನಾದ್ರೂ ಬುರ್ಜ್ ಖಾಲೀಫಾ ಕೆಳ್ಗೆ ನಿಂತು ಸೂರ್ಯ ಮುಳ್ಗದ್ ನೋಡಿ,  ಈ ಲಿಫ್ಟ ಹತ್ತಿದ್ರೆ ಸುಮಾರು ಒಂದು ನಿಮಿಷ್ದೊಳ್ಗೆ ನಿಮ್ಮನ್ನ 124ನೇ ಮಹಡಿ ಮೇಲಕ್ಕೆ ಹತ್ಸೋವಾಗ ಸೂರ್ಯ ಮುಳ್ಗಿದ ದಿಕ್ಕನ್ನೇ ನೋಡ್ತಾ ಇದ್ರೆ ಸೂರ್ಯ ಇನ್ನೋಮ್ಮೆ ಪಶ್ಚಿಮ್ದಿಂದ ಮೂಡಿ ಬರ್ತಾನೆ. ಮೇಲೆ ಹೋದ್ಮೇಲೆ ಮತ್ತೆ ಸೂರ್ಯ ಮುಳ್ಗೋದನ್ನ ನೋಡ್ಬೋದು.

3) ಏನಾದ್ರೂ ಇವೆರ್ಡೂ ಆಗಲ್ಲ ಅಂದ್ರೆ ಸುಲ್ಭದ ಉಪಾಯ ಒಂದಿಲ್ಲಿದೆ ಕೇಳಿ

ಸೂರ್ಯ ಹುಟ್ಟೋ ಹೊತ್ತಲ್ಲಿ ಪಶ್ಚಿಮಕ್ಕೆ ತಿರುಗಿ ನಿಂತಿರೋ ಕಾರಿನ ಸೈಡ್ ಕನ್ನಡಿಲಿ ಏನೂ ತೊಂದ್ರೆ ತೊಗೊಳ್ದೇ ಆರಾಮವಾಗಿ ಸೂರ್ಯ ಪಶ್ಚಿಮ್ದಲ್ಲಿ ಹುಟ್ಟೋದ್ನ ನೋಡ್ಬೋದು ! ತುಂಬಾ ಜನ ಕಂಡು ಹಿಡ್ಕೊಳೋ ಉಪಾಯ ಇದು.

4) ಉತ್ತರಧ್ರುವದ ಮೇಲೆ ಏರೋಪ್ಲೇನಲ್ಲಿ ಹಾರ್ತಾ ಇರೋವಾಗ

ನೀವೇನಾದ್ರೂ ಉತ್ತರಾಯಣ ಪುಣ್ಯಕಾಲ್ದಲ್ಲಿ ಹಾಂಕಾಂಗ್ನಿಂದ ನ್ಯೂಯಾರ್ಕ್ಗೆ ಹಾರಿದ್ರಿ ಅಂದ್ರೆ, ಅದೂ ಉತ್ತರಧ್ರುವದ ಮೇಲೆ ಹಾರೋ ವಿಮಾನನ್ನ ಹತ್ತಿದ್ರೆ, ಇದು ಸಾಧ್ಯವಾಗತ್ತೆ. ನೀವು ಸಂಜೆ ವಿಮಾನ ಹತ್ತಿದ್ರೆ, ಉತ್ತರ ಧ್ರುವದ ಪಕ್ದಲ್ಲಿ ಹಾದೋಗ್ಬೇಕಾದ್ರೆ ಕತ್ಲಿಂದ ಬೆಳಕಿಗೆ ಬರೋ ಹೊತ್ತು ನಿಮ್ಗೆ ಸೂರ್ಯ ಪಶ್ಚಿಮ್ದಲ್ಲಿ ಹುಟ್ತಾನೆ. ಉತ್ತರಧ್ರುವ ಅಥ್ವಾ ನಮ್ಮ ಪುರಾಣ್ಗಳ ಮೇರುಪರ್ವತದ ಬಗ್ಗೆ ಸ್ವಲ್ಪ ಎಚ್ಚರ ಒಳ್ಳೇದು: ಇಲ್ಲಿ ಯಾವ್ದಿಕ್ಕನ್ನಾದ್ರೂ ಪಶ್ಚಿಮ ಅಂದ್ಕೋಬೋದು!

5) ಸಂಜೆ ಸೂರ್ಯ ಮುಳ್ಗೋ ಹೊತ್ತಲ್ಲಿ ಪಶ್ಚಿಮಕ್ಕೆ ಹಾರೋ ವಿಮಾನ್ದಲ್ಲಿ ಮೇಲೋಗೋದು

ಇದೂ ಎರಡನೇ ಉಪಾಯ್ದ ಥರಾನೇ ಕೆಲ್ಸ ಮಾಡತ್ತೆ. ಆದ್ರಿಂದ ಇದ್ರಲ್ಲೇನೂ ಹೊಸ್ದಿಲ್ಲ

6) ಎತ್ರದ ಬೆಟ್ಗಳ ನಡ್ವೆ ವಿಮಾನ ಹಾರಾಡ್ತಾ ಇರ್ಬೇಕಾದ್ರೆ

ನೀವೇನಾದ್ರೂ ಎತ್ರದ ಪರ್ವತಗಳ ಮೇಲೆ ಸಂಜೆ ಸೂರ್ಯ ಮುಳ್ಗೋ ಹೊತ್ತಲ್ಲಿ ಪಶ್ಚಿಮ ದಿಕ್ಗೆ ಹಾರಿಹೋಗ್ತಿದ್ದಾಗ ಯಾವ್ದಾದ್ರೂ ಬೆಟ್ಟದ ಪೂರ್ವಭಾಗ್ದಲ್ಲಿ ಅದ್ರ ನೆಳ್ಳಲ್ಲಿ ಹಾರುತ್ತಾ ಇದ್ದು ಆಮೇಲೆ ಅದ್ರಿಂದ ಹೊರಗ್ಬಂದಾಗ ಸೂರ್ಯ ಪಶ್ಚಿಮ್ದಲ್ಲಿ ಹುಟ್ಟಿ ಬಂದಂಗ್ ಕಾಣಿಸ್ತಾನೆ.