https://antekante.com/sites/default/files/images/kodanda_rama_temple_at_chunchanakatte_mysore_district.jpg

ನಮ್ಮ ಕರ್ನಾಟಕದಲ್ಲಿ ಜಲಪಾತಗಳಿಗೇನ್ ಕಮ್ಮಿ ಇಲ್ಲ ಬಿಡಿ. ಒಂದೊಂದು ಜಲಪಾತದ್ದೂ ಒಂದೊಂದ್ ರೀತಿ ಸೊಬಗು. ನೋಡಕ್ಕ್ ಎರಡ್ ಕಣ್ಣ್ ಸಾಲಲ್ಲ! ಅಂತಾ ಜಲಪಾತಗಳ ಪಟ್ಟಿಗೆ ಸೇರೋದೇ, ಮೈಸೂರು ಜಿಲ್ಲೆಯ ಚುಂಚನಕಟ್ಟೆ ಅನ್ನೋ ಚಿಕ್ಕ ಹಳ್ಳೀಲಿರೋ ಚುಂಚನಕಟ್ಟೆ ಜಲಪಾತ. ಈ ಜಲಪಾತದ ಬಗ್ಗೆ ಎಲ್ರೂ ಕೇಳಿದ್ರೂ, ಈ ಜಲಪಾತ ಹುಟ್ಕೊಳಕ್ಕೆ ಹಿಂದಿರೋ ಕಥೆ ಮಾತ್ರ ತುಂಬಾ ಜನಕ್ಕೆ ಗೊತ್ತಿರಲ್ಲ. ಅದನ್ನ ನಾವಿವತ್ತು ಹೇಳ್ತೀವಿ… ಕೇಳಿ.

ಚುಂಚನಕಟ್ಟೆ ಕಾವೇರಿ ನದಿ 60 ಅಡಿ ಎತ್ತರದಿಂದ ಧುಮುಕತ್ತೆ…

ಕಾವೇರಿ ನದಿ ಭೋರ್ಗರೀತಾ 60 ಅಡಿ ಎತ್ತರದಿಂದ, 300-400 ಅಡಿ ಅಗಲ ಇರೋ ಚುಂಚನಕಟ್ಟೆ ಜಲಪಾತಾನ ಸೇರತ್ತೆ. ಮೈಸೂರಿಂದ 57 ಕಿ ಮೀ ದೂರದಲ್ಲಿರೋ ಕೆ ಆರ್ ನಗರ ತಾಲ್ಲೂಕಲ್ಲಿ ಈ ಚುಂಚನಕಟ್ಟೆ ಇದೆ . ನಗರದಲ್ಲಿ ಯಾರ್ನ ಕೇಳಿದ್ರೂ ನಿಮ್ಗೆ ಚುಂಚನಕಟ್ಟೆ ಕಡೆ ದಾರಿ ತೋರಿಸ್ತಾರೆ. ಅಲ್ಲಿಂದ ಸುಮಾರು 8 ಕಿಮೀ ಇರ್ಬೋದು ಅಷ್ಟೆ.

ನದಿ ಇನ್ನೇನು ಜಲಪಾತದ ಹತ್ರ ಬರ್ತಿದ್ದಂಗೆ ಎರಡು ಕವಲಾಗಿ ಒಡೆದು, ಕೆಳಗೆ ಧುಮುಕಿ ಮತ್ತೆ ಒಂದಾಗಿ ಕೆ ಆರ್ ಎಸ್ ಡ್ಯಾಮ್ ಸೇರತ್ತೆ. ಕಿವುಡಾಗೋ ಅಷ್ಟು ಜೋರು ಭೋರ್ಗರೆತ ಮತ್ತು ಅದರಿಂದ ಸಿಡಿಯೋ ನೀರಿನ ಹನಿಗಳು ನಮ್ಮಲ್ಲಿ ’ಆಹಾ’ ಅನ್ಸೋ ತಾಜಾತನ ತುಂಬತ್ತೆ. ಕಲ್ಲು ಬಂಡೆಗಳ ಮಧ್ಯದಲ್ಲಿ ರಭಸವಗಿ ಹರೀತಿರೋ ಈ ನೀರು ಹಾಲಿನಷ್ಟೇ ಬಿಳಿ ಇದ್ರೂ, ಅಲ್ಲಲ್ಲಿ ಕಾಣಿಸೋ ಕಂದು ಬಣ್ಣ ನೋಡಿದ್ರೆ ಗೊತ್ತಾಗತ್ತೆ… ನಮ್ಮ ಜೀವನದಿ ಕಾವೇರಿ ತನ್ನೊಂದಿಗೆ ಎಷ್ಟು ಭೂಸಂಪತ್ತನ್ನ ತರ್ತಾಳೆ ಅಂತ. ಇನ್ನು ಮಳೆಗಾಲ ಇಲ್ಲಿನ ಅಂದ ಸವಿಯಕ್ಕೆ ಸರಿಯಾದ ಸಮಯ ನೋಡಿ. ನೀರು ಕಡಿಮೆ ಇದ್ದಾಗ್ಲೂ ಬಂಡೆಗಳ ಮೇಲೆ ಸಾಗ್ತಾ ಸ್ವಲ್ಪ ಆ ಕಡೆ, ಈ ಕಡೆ ಹೋಗ್ಬೋದು.

ಮೂಲ

ವನವಾಸದ ಸಮಯದಲ್ಲಿ ರಾಮ ಇಲ್ಲಿಗೆ ಬಂದಿದ್ದ…

ಇಲ್ಲಿ ಕೋದಂಡರಾಮನಿಗೆ ಕಟ್ಟಿರೋ ಒಂದು ಹಳೇ ದೇವಸ್ಥಾನ ಕೂಡ ಇದೆ. ಇಲ್ಲಿನ ವಿಶೇಷ ಏನಪ್ಪಾ ಅಂದ್ರೆ, ಎಲ್ಲಾ ಕಡೆ ಸೀತೆ ರಾಮನ ಎಡಕ್ಕೆ ಇದ್ರೆ… ಇಲ್ಲಿ ಬಲಕ್ಕೆ ನಿಂತಿದಾಳೆ. ಪುರಾಣಗಳ ಪ್ರಕಾರ, ರಾಮ- ಸೀತೆ ಮತ್ತು ಲಕ್ಷ್ಮಣ ವನವಾಸದಲ್ಲಿದ್ದಾಗ, ಚುಂಚ ಮತ್ತೆ ಚುಂಚಿ ಅನ್ನೋ ಕಾಡು ಮನುಷ್ಯರ ಆತಿಥ್ಯದಲ್ಲಿದ್ರಂತೆ. ಆಗ ಇಲ್ಲಿ ಒಂದು ಹನಿ ನೀರು ಕೂಡ ಇರ್ಲಿಲ್ವಂತೆ. ಸೀತೆ ಸ್ನಾನಕ್ಕೆ ನೀರು ಬೇಕು ಅಂದಾಗ ರಾಮನ ಆಜ್ಞೆ ಮೇಲೆ, ಲಕ್ಷ್ಮಣ ಬಂಡೆಗೆ ಬಾಣ ಬಿಟ್ಟ. ತಕ್ಷಣ ರಭಸವಾಗಿ ನೀರು ಚಿಮ್ಮಿ ಸೀತೆಯ ಸ್ನಾನಕ್ಕೆ ಅಣಿಯಾಯ್ತು.

ಋಷಿ ಒಬ್ಬಂಗೆ ಕೊಟ್ಟ ವರದ ಫಲಾನೇ ಇಲ್ಲಿರೋ ಕೋದಂಡರಾಮ ಸ್ವಾಮಿ ದೇವಸ್ಥಾನ…

ಅದೇ ಕಾಡಲ್ಲಿ ರಾಮ ಒಬ್ಬ ಅಜ್ಞಾತ ಋಷೀನ ಭೇಟಿ ಮಾಡ್ತಾನೆ. ಆ ಋಷಿಗೆ ನಾರಾಯಣನ ಮೇಲಿರೋ ಭಕ್ತಿಗೆ ಮೆಚ್ಚಿ ಅವನಿಗೆ ಬೇಕಾದ ವರ ಕರುಣಿಸ್ತೀನಿ ಅಂತ ರಾಮ ಹೇಳಿದ್ನಂತೆ. ಆಗ ಆ ಋಷಿ ಸೀತೇನ ರಾಮನ ಬಲಭಾಗದಲ್ಲಿ ನೋಡ್ಬೇಕು ಅಂತ ಆಸೆ ಪಟ್ನಂತೆ. ಅದಕ್ಕೇ ಅವನಿಚ್ಛೆ ಪ್ರಕಾರ, ಇಲ್ಲಿರೋ ವಿಗ್ರಹದಲ್ಲಿ ಸೀತೆ ರಾಮನ ಬಲಕ್ಕೆ ನಿಂತಿದಾಳೆ. ಇಲ್ಲಿ ಎರಡು ಹನುಮಂತನ ದೇವಸ್ಥಾನಗಳೂ ಇವೆ. ಒಂದು ಮುಖ್ಯ ದೇವಸ್ಥಾನದ ಬಾಗಿಲಲ್ಲಿ… ಇನ್ನೊಂದು ನದಿ ಹತ್ರ.

ಮೂಲ

ಪಕ್ದಲ್ಲೇ ಭೋರ್ಗರಿಯೋ ಜಲಪಾತ ಇದ್ರೂ, ದೇವಸ್ಥಾನ ನಿಶಬ್ಧವಾಗಿರತ್ತೆ!

ಈ ದೇವಸ್ಥಾನದ ಬಗ್ಗೆ ಆಶ್ಚರ್ಯ ಮೂಡ್ಸೋ ವಿಷಯ ಏನಂದ್ರೆ, ಹೊರಗೆ ಅಷ್ಟು ಜೋರಾಗಿ ಭೋರ್ಗರೀತಿರೋ ಜಲಪಾತ ಹರೀತಿದ್ರೂ, ಗರ್ಭಗುಡಿ ಒಳಗೆ ಚೂರು ಸದ್ದು ಕೇಳ್ಸಲ್ಲ. ಹೊರಗೆ ಜಲಪಾತಾನೇ ಇಲ್ವೇನೋ ಅನ್ಕೋಬೇಕು. ಇದಕ್ಕೂ ಒಂದು ಕಥೆ ಇದೆ ಕೇಳಿ.

ಒಂದ್ಸರ್ತಿ ರಾಮ ತುಂಬಾ ಸುಸ್ತಾಗಿ ಬಂದಾಗ, ಸೀತೆ ಒಂದೇ ಸಮ ಗೊಣಗ್ತಾ ಇದ್ಳಂತೆ. ಆಗ ಅವ್ನಿಗೆ  ಬೇಜಾರಾಗಿ, ಹೆಂಗಸರು ಅನಗತ್ಯವಾಗಿ ಮಾತಾಡೋದ್ ಕಮ್ಮಿ ಆಗ್ಲಿ ಅಂತ ಶಾಪ ಕೊಟ್ನಂತೆ. ಈ ಶಾಪ ಹೆಂಗಸ್ರಿಗೆ ತಟ್ಟಿದ್ಯೋ ಇಲ್ವೋ, ಆದ್ರೆ ಕಾವೇರಿ ತಾಯಿ ಕೂಡ ಹೆಂಗ್ಸಲ್ವೇ? ಅದಕ್ಕೇ ಅವಳ ಘರ್ಜನೆ ಗರ್ಭಗುಡೀಲಿ ಕೇಳ್ಸಲ್ಲ.

ಮೂಲ

ಮಕರ ಸಂಕ್ರಾಂತಿ ಸಮಯದಲ್ಲಿ ಇಲ್ಲಿ ಬ್ರಹ್ಮ ರಥೋತ್ಸವ ನಡ್ಯತ್ತೆ. ಆಗಸ್ಟ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಪ್ರಸಿದ್ಧವಾಗಿರೋ ಎತ್ತುಗಳ ಉತ್ಸವ ಕೂಡ ಜೋರು. ನೀರು ಮತ್ತು ನೆಲದ ಜಾತಿಯ ಎಷ್ಟೋ ಹಕ್ಕಿಗಳನ್ನ ಇಲ್ಲಿ ನೋಡ್ಬೋದು. ಪಿಕ್ನಿಕ್ಗೆ ಒಳ್ಳೆ ಜಾಗ. ಒಂದ್ಸಲ ಹೋಗಿ ಬನ್ನಿ.