ನಮ್ಮವ್ರು ನದೀಮೂಲ ಹುಡ್ಕೋದು ಬ್ಯಾಡ ಅಂದ್ರೆ, ಯುರೋಪಿಯನ್ನರಿಗೆ ಅದೇ ಒಂದು ಗೀಳಾಗಿತ್ತು. 18,19ನೇ ಶತಮಾನಗಳಲ್ಲಿ ಆಫ್ರಿಕಾ, ಅಮೇರಿಕಾ ಖಂಡಗಳ ನದಿಗಳ ಮೂಲ ಕಂಡುಹಿಡಿತೀವಿ ಅಂತ ಹೊರಟ ಯುರೋಪಿಯನ್ನರ ತಂಡ ಎದುರಿಸಿದ ಸಾಹಸಗಳು ಒಂದೇ, ಎರಡೇ,… ಇದೇ ರೀತಿ ಜಗತ್ತಿನ ಅತಿ ಉದ್ದ ನೈಲ್ ನದಿಯ ಮೂಲವನ್ನು ತಡಕಿ ಹೊರಟ ತಂಡದ ರೋಚಕ ಕಥೆ ಇಲ್ಲಿದೆ ಒಮ್ಮೆ ಓದ್ನೋಡಿ.

1) ನೈಲ್ ನದಿ ಮೂಲದ ಬಗ್ಗೆ ಈಗ್ಗೆ ಇನ್ನೂರು ವರ್ಷಗ್ಳ ಹಿಂದೆ ಏನ್ ತಿಳ್ದಿತ್ತು?

ಸುಮಾರು 6,650 ಕಿ.ಮೀ. ದೂರ ಮೂರು ದೇಶಗಳಾದ ಕೀನ್ಯ, ಸುಡಾನ್ ಹಾಗು ಈಜಿಪ್ತಗಳಲ್ಲಿ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಕೈರೋ ಬಳಿ ಸೇರೋ ನೈಲ್ ನದಿ ಮೂಲ ಆಫ್ರಿಕಾದ ಮಧ್ಯಭಾಗದ ವಿಕ್ಟೋರಿಯಾ ಸರೋವರದಲ್ಲಿ ಎಂಬುದು ಆಧುನಿಕತೆಗೆ ಮೂಲ ತಾವೇ ಎಂದು ಎದೆತಟ್ಟಿಕೊಳ್ತಿದ್ದ ಅಂದಿನ ಯುರೋಪಿಗೆ ಗೊತ್ತಿರಲಿಲ್ಲ. ಆದ್ರಿಂದ ಸಾಹಸಕ್ಕಾಗಿ ಹಾತೊರೀತಿದ್ದ ಯುರೋಪಿಯನ್ನರು ಸಹಜ್ವಾಗೆ ನೈಲ್ ನದಿ ಮೂಲ ಹುಡ್ಕೊಂಡು ಹೋಗೋ ಸಾಹಸಕ್ಕೆ ಮನಸ್ಸು ಮಾಡಿದ್ರು. ಆ ಸಾಧನೆಯಿಂದ ಸಿಗ್ತಾ ಇದ್ದ ಮನ್ನಣೆ ಮಾತ್ರ ಸಾಮಾನ್ಯದ್ದೇನೂ ಆಗಿರ್ಲಿಲ್ಲ ಅನ್ನೋದೂ ಅಷ್ಟೇ ಸತ್ಯ.

2) ರಿಚರ್ಡ್ ಬರ್ಟನ್ ಯಾರು, ಅವನಿಗೂ ನೈಲ್ ನದೀಗೂ ಏನು ನಂಟು?

ಬ್ರಿಟಿಷ್ ಸಾಹಸಿಗ ಹಾಗು ಪಂಡಿತ ಸರ್ ರಿಚರ್ಡ್ ಬರ್ಟನ್ ಸುಮಾರು ಮುವ್ವತ್ತು ಭಾಷೆಗಳನ್ನು ಬಲ್ಲಂಥ ಪ್ರವೀಣ. ಬದುಕ್ಬೇಕು ಅಂತ ಆಸೆ ಇಟ್ಕೊಂಡ ಯಾವ ಯುರೋಪಿಯನ್ನನೂ ಮೆಕ್ಕಾಗೆ ಹೋಗೋದು ದೂರದ ಮಾತಾಗಿದ್ದ 17ನೇ ಶತಮಾನದಲ್ಲಿ ವೇಷ ಬದಲಿಸ್ಕೊಂಡು ಮೆಕ್ಕಾಗೆ ಹೋದೋನು ಇವ್ನು. “ಅರೇಬಿಯನ್ ನೈಟ್ಸ್” ಕಥೆಗಳ್ನ ಇಂಗ್ಲಿಷ್ ಗೆ ಅನುವಾದ ಮಾಡ್ದೋನೂ ಇವ್ನೇ. ಈಸ್ಟ್ ಇಂಡಿಯ ಕಂಪನಿಯ ತುಕಡಿಯ ಕ್ಯಾಪ್ಟನ್ ಆಗಿ ಭಾರತದಲ್ಲಿ ಸೇವೆ ಸಲ್ಲಿಸಿದ್ದ. “ಕಾಮಸೂತ್ರ”ನ್ನ ಇಂಗ್ಲೀಷಿಗೆ ತರ್ಜುಮೆ ಮಾಡ್ದೋನೂ ಇದೇ ಬರ್ಟನ್ನೇ. ಇವ್ನು ನೈಲ್ ಮೂಲ ಹುಡುಕುವ ಯುರೋಪಿಯನ್ ಮೊದಲ ತಂಡದ ಮುಖ್ಯಸ್ಥನೂ ಆಗಿದ್ದ. ಆದ್ರೆ ನೈಲ್ ನದಿ ಮೂಲ ಕಂಡು ಹಿಡ್ಯೋ ಭಾಗ್ಯ ಮಾತ್ರ ಇವಂದಾಗಿರ್ಲಿಲ್ಲ.

3) ರಿಚರ್ಡ್ ಬರ್ಟನ್ ಅಂಥಾ ಪಂಡಿತನ ಎದ್ರು ಹೇಳ ಹೆಸ್ರಿಲ್ಲದ ಜಾನ್ ಸ್ಪೀಕ್ ಯಾರು?

ಜಾನ್ ಸ್ಪೀಕ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನೀಲಿ ಇದ್ದ ಒಬ್ಬ ಅನಾಮಧೇಯ ಕ್ಯಾಪ್ಟನ್. ಆಗ ತಾನೇ ಭಾರತದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಸ್ವಾತಂತ್ರ ಸಂಗ್ರಾಮಕ್ಕೆ ತಯಾರಿ ನಡೀತಿದ್ದಾಗ ಸೇವೆಗೆ ರಜಾ ಹಾಕಿ ಇಂಗ್ಲೆಂಡಿಗೆ ಆತ ಮರಳಿದ್ದ. ಅವ್ನನ್ನೂ ಆಫ್ರೀಕಾ ಗೀಳು ಆವರಿಸಿಕೊಂಡಿತ್ತು. ಅದಕ್ಕೆ ಕಾರಣಾನೂ ಇತ್ತು…

4) ನೀಲ ನದಿ ನಕ್ಷೇನ ಸ್ಪೀಕ್ ಗೆ ಕೊಟ್ಟೋರು ಯಾರು?

ನೈಲ್ ನದಿ ಹುಚ್ಚು ಹತ್ತಿಸ್ಕೊಂಡಿದ್ದ ಜಾನ್ ಸ್ಪೀಕ್ ಒಮ್ಮೆ ಕಾಶಿಯಲ್ಲಿ ಒಬ್ಬ ಪಂಡಿತನ್ನ ಭೇಟಿ ಆಗ್ತಾನೆ. ಅದೂ ಇದೂ ಮಾತಾಡ್ತಾ ನೈಲ್ ನದಿ ಬಗ್ಗೆ ತನ್ಗಿರೋ ಹುಚ್ಚನ್ನ ಸ್ಪೀಕ್ ಆ ಪಂಡಿತ್ನ ಎದ್ರು ಹೇಳ್ಕೋತಾನೆ. ಅವ್ನಾದ್ರೋ ಸುಮ್ನೆ ಇರದೆ, ನಮ್ಗೆ ಈ ನೈಲ್ ನದಿ ನೀಲ ಅಥ್ವಾ ಕಾಲಿ ನದಿ ಅಂತ ಗೊತ್ತು, ಇಲ್ಲಿದೆ ನೋಡು ಅದ್ರ ಮೂಲದ ಬಗ್ಗೆ ನಕ್ಷೆ ಅಂತ ಒಂದು ಒಬೀರಾಯನ ಕಾಲ್ದ ನಕ್ಷೆ ಹರವಿಕೊಂಡು ಕೂರ್ತಾನೆ. ಅದ್ರಲ್ಲಿ ಮಧ್ಯ ಆಫ್ರಿಕಾದಲ್ಲಿ ಭೂಮಧ್ಯರೇಖೆಯ ಎರಡು ಬದಿಗೂ ಕಾಲು ಹಾಕಿ ಕುಳ್ತ ಜವಳಿ ಹಿಮಪರ್ವತಗಳಾದ ಸೋಮಗಿರಿಗಳೇ ನೈಲ್ ನದಿಯ ಮೂಲ ಅನ್ನೋ ಪುರಾಣ ಕೂಡ ಹೇಳ್ತಾನೆ. ಇದನ್ನೇ ಬಲವಾಗಿ ನಂಬಿ, ನಕ್ಷೆಯ ನಕಲನ್ನ ಜೇಬಿಗೆ ಇಳಿಬಿಟ್ಟು ಹೊರಡ್ತಾನೆ ಸ್ಪೀಕ್.

5) ಬರ್ಟನ್ ಮತ್ತು ಸ್ಪೀಕ್ ನೈಲ್ ಮೂಲ ಹುಡ್ಕೊಂಡು ಹೊರಟ ಯಾತ್ರೇಲಿ ಏನಾಗತ್ತೆ?

ರಿಚರ್ಡ ಬರ್ಟನ್ ನಾಯಕತ್ವದ ಸಾಹಸಯಾತ್ರೆ ಹಡಗಿನಲ್ಲಿ ಸೋಮಾಲಿಯಾ, ಕೀನ್ಯಾ ಸಮುದ್ರ ತೀರ ದಾಟಿ ತಾಂಜಾನಿಯಾ ತೀರದ ದರ್ ಎ ಸಲಾಮ್ ನಲ್ಲಿ ಜೂನ್ 1857ರಲ್ಲಿ ಬಂದಿಳ್ಯತ್ತೆ. ಅಲ್ಲಿಂದ ಕಾಲ್ನಡಿಗೆಯಲ್ಲೇ ಸುಮಾರು ಸಾವಿರ ಕಿಲೋಮಿಟರ್ ದಾಟಿ, ಟ್ಯಾಂಗನ್ಯೀಕಾ ಸರೋವರದ ಬಳಿಗೆ ಬರಕ್ಕೆ ಅವ್ರಿಗೆ ಎಂಟು ತಿಂಗ್ಳೇ ಹಿಡ್ಯತ್ತೆ. ದಾರೀಲಿ ಅವ್ರು ಎದುರಿಸಿದ ಕಷ್ಟಗಳಂತೂ ಎಂಥಾವ್ರಿಗೂ ಬೇಡ! ನರಭಕ್ಷಕ ಆದಿವಾಸಿಗಳು, ಮಲೇರಿಯಾ,… ಹೀಗಾಗಿ ಇಲ್ಲಿಗೆ ಬರೋ ಹೊತ್ತಿಗಾಗ್ಲೇ ಬಸ್ವಳ್ದಿದ್ದ ಬರ್ಟನ್, ಟ್ಯಾಂಗನ್ಯೀಕಾ ಸರೋವರಾನೇ ನೈಲ್ ನದಿ ಮೂಲ ಅಂದ್ಬಿಡ್ತಾನೆ. ಆದ್ರೆ ಸ್ಪೀಕ್ ಜೇಬಲ್ಲಿರೋ ನಕ್ಷೆ ಮಾತ್ರ ಅದು ಸುಳ್ಳು ಅಂತ ಸಾರಿ ಹೇಳ್ತಿರತ್ತೆ. ಇದಾದ ಸ್ವಲ್ಪೇ ದಿವ್ಸಕ್ಕೆ ಬರ್ಟನ್ ಮಲೇರಿಯಾ ಕಾಯಿಲೆಗೆ ತುತ್ತಾಗಿ ಹಾಸ್ಗೆ ಹಿಡೀತಾನೆ. ಇದೇ ಸ್ಪೀಕ್ ಗೆ ವರವಾಗತ್ತೆ… ಸ್ಪೀಕ್ ತನ್ನ ಜೊತೆಗಾರರನ್ನ ಹುರಿದುಂಬಿಸಿ ತನ್ಜೊತೆ ಕರೆದುಕೊಂಡು ನೈಲ್ ನದಿ ತೀರನ್ನ ಅರಸುತ್ತಾ ಉತ್ತರಕ್ಕೆ ಹೊರಡ್ತಾನೆ.

6) ಸ್ಪೀಕ್ ಗೆ ಸೋಮಗಿರಿ ಪರ್ವತಗಳು ಕಾಣ್ಸಿದ್ದಾದ್ರೂ ಎಲ್ಲಿ?

ಇನ್ನೂ ಆರು ತಿಂಗ್ಳು ಪ್ರಯಾಣ ಮುಂದ್ವರಿಸಿದ ಸ್ಪೀಕ್ 1858ರ ಆಗಸ್ಟ್ ತಿಂಗ್ಳಲ್ಲಿ ತಾನೇ “ವಿಕ್ಟೋರಿಯ ಸರೋವರ” ಅಂತ ಹೆಸ್ರಿಟ್ಟ ವಿಶಾಲ ಸರೋವರದ ದಕ್ಷಿಣ ತೀರಕ್ಕೆ ಬಂದು ತಲುಪ್ತಾನೆ. ಅವ್ನಿಗೆ ಈ ಸರಸ್ಸೇ ನೈಲ್ ನದಿ ಮೂಲ ಅಂತ ಖಾತ್ರಿ ಆಗತ್ತೆ. ಯಕಂದ್ರೆ ಅವ್ನು ನಿಂತ ಜಾಗ್ದಿಂದ ಪಶ್ಚಿಮಕ್ಕೆ ಸೋಮಗಿರಿಯಂಥ ಬೆಟ್ಟಗಳು ಕಾಣ್ಸತ್ತೆ. ಸರಿ, ಹಾಗಾದ್ರೆ, ಇಲ್ಲಿಂದ ಸುಮಾರು 300 ಕಿ.ಮೀ. ಉತ್ತರಕ್ಕಿದ್ದ ಸರೋವರದ ದಡದಿಂದ ನೈಲ್ ನದಿ ಹೊರಡತ್ತೆ ಅನ್ನೋ ತೀರ್ಮಾನಕ್ಕೆ ಬಂದೇ ಬಿಡ್ತಾನೆ. ಆದ್ರೆ ಅವ್ನ ತೀರ್ಮಾನಕ್ಕೆ ಇನ್ನೂ ಒಂದು ಕಾರಣಾನೂ ಇದೆ ಅಂತ ತಿಳ್ದೋರು ಹೇಳ್ತಾರೆ. ಅದೇನಂದ್ರೆ, ಇಲ್ಲಿ ನೀರು ಕುದಿಯೋ ತಾಪನ್ನ ಗಮನಿಸ್ದಾಗ ಟ್ಯಾಂಗನ್ಯೀಕಾ ಸರೋವರಕ್ಕಿಂತ ವಿಕ್ಟೋರಿಯಾ ಸರೋವರ ಎತ್ರದಲ್ಲಿದೆ ಅಂತ ಅವಂಗೆ ಗೊತ್ತಾಯ್ತು. ನೈಲ್ನ ನಿಜ್ವಾದ ಮೂಲ ವಿಕ್ಟೋರಿಯಾ ಸರೋವರಾನೇ ಅನ್ನೋ ಗುಮಾನಿಗೆ ಇದೇ ಕಾರಣ ಅಂತಾರೆ.

7) ನೈಲ್ ನದಿ ಮೂಲನ್ನ ಸ್ಪೀಕ್ ಪತ್ತೆ ಮಾಡಿದ್ರೂ, ಸೋಮಗಿರಿ ಪರ್ವತನ್ನ ಗುರ್ತಿಸೋದ್ರಲ್ಲಿ ಎಡ್ವಟ್ಟಾಗಿತ್ತು

ಇಂಗ್ಲೆಂಡಿಗೆ ವಾಪಸ್ಸಾದ ಮೇಲೆ, ಸ್ಪೀಕ್ ಗೆ ಸಿಗೋ ಮನ್ನಣೆ ಅಂದ್ರೆ. ವಿಕ್ಟೋರಿಯ ಸರೋವರದ ಉತ್ತರ ತೀರಕ್ಕೆ 1860ರ ಏಪ್ರಿಲ್ನಲ್ಲಿ ಮತ್ತೊಂದು ಸಾಹಸಯಾತ್ರೆಯ ನಾಯಕನಾಗಿ ಆಯ್ಕೆ. ಬರ್ಟನ್ ಈ ತಂಡದಲ್ಲಿ ಇರಲ್ಲ. ಇಲ್ಲಿಂದ ಶುರುವಾಗತ್ತೆ ಅವ್ರಿಬ್ರಿಗೂ ಎಣ್ಣೆ-ಸೀಗೆಕಾಯಿ ಸಂಬಂಧ… ಸ್ಪೀಕ್ ಸೋಮಗಿರಿ ಗುರ್ತ್ಸೋದ್ರಲ್ಲಿ ಎಡ್ವಟ್ಟಾದ್ರೂ ನೈಲ್ ನದಿ ಮೂಲ ಕಂಡುಹಿಡಿದ ಖ್ಯಾತಿ ಮಾತ್ರ ಅವ್ನಿಗೇ ಸೇರ್ಬೇಕು. ಸಮುದ್ರಮಟ್ಟದಿಂದ ಸುಮಾರು 17,000 ಅಡಿ ಎತ್ರದ, ಹಿಮದಿಂದ ಬೆಳ್ಳಗಿರುವ ನಿಜವಾದ ಸೋಮಗಿರಿ ಪರ್ವತಗಳ್ನ, ಮೊದ್ಲು ಸರಿಯಾಗಿ ಗುರ್ತಿಸ್ದೋನು ಹೆನ್ರಿ ಸ್ಟೇನ್ಲಿ, ಅದೂ 1889ರಲ್ಲಿ.

ಇಷ್ಟೆಲ್ಲ ಸಾಧನೆ ಮಾಡಿದ್ರೂ, ಆರು ವರ್ಷಗಳ ಬಳಿಕ,  ತನ್ನ ಮುವತ್ತೇಳ್ನೇ ವಯಸ್ಗೆ, ಸ್ಪೀಕ್ ನಿಗೂಡವಾಗಿ ಆತ್ಮಹತ್ಯೆಗೆ ಶರಣಾಗ್ತಾನೆ. ಅದೂ, ಬರ್ಟನ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿ ಅವನು ಮುಖಾಮುಖಿ ಆಗ್ಬೇಕಾಗಿದ್ದ ಹಿಂದಿನ ದಿನ. ನಿಗೂಡ ಯಾಕಂದ್ರೆ, ಅವ್ನು ಹಾರಿಸ್ಕೊಂಡ ಗುಂಡಿನ ಏಟು ಕಂಕುಳ ಕೆಳಗೆ ಇದ್ದು, ಇದು ಆತ್ಮಹತ್ಯೆ ಅಲ್ಲ ಅನ್ನೋದನ್ನ ತಿಳ್ಸತ್ತೆ ಅಂತಾನೂ ವಾದ ಇದೆ. ಆದ್ರೆ ಬರ್ಟನ್ ಮಾತ್ರ ತನ್ನಂಥ ದಿಗ್ಗಜನ್ನ ಚರ್ಚೇಲಿ ಎದ್ರಿಸೋ ಗುಂಡ್ಗೆ ಇಲ್ದೆ ತನ್ನನ್ನ ತಾನೇ ಕೊಂದ್ಕೊಂಡ ಅಂತ ಸುದ್ದಿ ಹಬ್ಬಿಸೋದ್ರಲ್ಲಿ ಮಾತ್ರ ಹಿಂದೆ ಬೀಳ್ಲಿಲ್ಲ. ಏನೇ ಆದ್ರೂ, “ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ…” ಅನ್ನೋದಂತೂ ಸತ್ಯ.