http://1u88jj3r4db2x4txp44yqfj1.wpengine.netdna-cdn.com/wp-content/uploads/2015/10/Intelligence-augmentation-930x522.jpg

ಮಿದುಳಿಗೂ ವ್ಯಾಯಾಮ ಬೇಕು. ಬರೀ ಮೈಗಲ್ಲ. ದಿನಾ ಸ್ವಲ್ಪ ಹೊತ್ತು ಮಿದುಳ್ನ ವ್ಯಾಯಾಮಕ್ಕೆ ಹಚ್ಚಿದರೆ ನಿಮ್ಮ ಚಿಂತನಾಶಕ್ತಿ ಹೆಚ್ಚುತ್ತೆ, ನೆಮ್ಮದಿ ಕೂಡ ಸಿಗುತ್ತೆ. ಕೆಳಗೆ ಕೊಟ್ಟಿರೋ 10 ಅಭ್ಯಾಸಗಳ್ನ ನಿಮ್ಮ ಜೀವನದಲ್ಲಿ ರೂಪಿಸಿಕೊಂಡರೆ ನಿಮ್ಮ ಮಿದುಳಿನ ಆರೋಗ್ಯ ಹೆಚ್ಚಾಗಿ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ:

1. ಬರೀ ನೋಡಬೇಡಿ, ಗಮನಿಸಿ

ನೋಡೋದು ಬೇರೆ, ಗಮನಿಸೋದು ಬೇರೆ. ಗಮನಿಸುವಾಗ ನಾವು ನೋಡ್ತಿರೋದನ್ನ ಆಳವಾಗಿ ಅರ್ಥ ಮಾಡ್ಕೋತೀವಿ. ಎಷ್ಟೋ ಸಲ ನೋಡಿದಾಗ ಕಾಣಿಸದೆ ಇರೋದೆಲ್ಲ ಗಮನಿಸಿದಾಗ ಕಾಣುತ್ತೆ. ನಿಮ್ಮ ಸುತ್ತ ಮುತ್ತ ಇರೋದನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಮಿದುಳು ಏನು ಕಲ್ಪಿಸಿಕೊಳ್ಳುತ್ತೋ ಅದನ್ನ ಕಲ್ಪಿಸಿಕೊಳ್ಳಲಿ, ಬಿಡಿ. ಕಲ್ಪನೆಗಳಿಗೆ ಕಡಿವಾಣ ಹಾಕಬೇಡಿ.

 

2. ಎಂದಿಗೂ ಕಲಿಯೋದು ನಿಲ್ಲಿಸಬೇಡಿ

ತೆರೆದ ಮನಸ್ಸಿನಿಂದ ಜೀವನ ಮಾಡಿ. ಎಂದಿಗೂ ಕಲಿಕೆಗೆ ಇಲ್ಲ ಅನ್ಬೇಡಿ. ಕಲಿಕೆ ಅಂದ್ರೆ ಸ್ಕೂಲು ಕಾಲೇಜಲ್ಲಿ ಮಾಡೋದಲ್ಲ, ಸುತ್ತಮುತ್ತಲ ಪ್ರಪಂಚದಿಂದ ಕಲಿಯೋದು. ಈ ಅನುಭವ ರೂಢಿಸಿಕೊಂಡ್ರೆ ನಿಮ್ಮ ಮಿದುಳು ಯಾವಾಗಲೂ ಕಲಿಕೆಗಾಗಿ ಹಾತೊರೆಯುತ್ತೆ. ಬೇರೆಯೋರಿಂದ ಏನಾದರೂ ಕಲಿಯಕ್ಕೆ ಸಿಕ್ಕರೆ ಅವಕಾಶ ಬಿಟ್ಟುಕೊಡಬೇಡಿ.

 

3. ಚೆನ್ನಾಗಿ ಕೇಳಿಸಿಕೊಳ್ಳಿ

ನಿಮ್ಮ ಸುತ್ತಮುತ್ತಲಲ್ಲಿ ಆಗೋ ಶಬ್ದಗಳ್ನ ಕೇಳಿಸಿಕೊಂಡಾಗ ನೀವು ಪ್ರಪಂಚದ ಒಂದು ಭಾಗವನ್ನೇ‌ ನಿಮ್ಮೊಳಗೆ ಸೇರಿಸಿಕೊಳ್ತೀರಿ. ಬೀದಿಯಲ್ಲಿ ನಡ್ಕೊಂಡ್ ಹೋಗ್ತಿರುವಾಗ ಜನ ಏನ್ ಮಾತಾಡ್ತಿದಾರೆ ಅಂತ ಕೇಳಿಸಿಕೊಳ್ಳಿ. ಅದರಿಂದಲೂ ಕಲೀಬೋದು. ಕೇಳಿಲ್ಲದಿರೋ ಸಂಗೀತ (ಯಾವ ಭಾಷೆ ಆದರೂ‌ ಸರಿ) ಕೇಳೋದ್ರಿಂದಾನೂ ನಿಮಗೆ ಈ ಅಭ್ಯಾಸ ಆಗುತ್ತೆ.

 

4. ಹೊಸದರಿಂದ ಹಿಂಜರೀಬೇಡಿ, ಪರೀಕ್ಷಿಸಿ ನೋಡಿ

ಮಾಡಿದ್ದನ್ನೇ‌ ಮಾಡ್ಕೊಂಡು, ಇರೋ ಕಡೇನೇ ಇದ್ರೆ ನಿಮಗೆ ಜೀವನದ ಎಷ್ಟೋ ಅನುಭವಗಳು ಆಗೋದೇ ಇಲ್ಲ. ಅದಕ್ಕೆ ಹೊಸದು ಏನಾದರೂ‌ ಕಂಡರೆ ಹಿಂಜರೀಬೇಡಿ, ಪರೀಕ್ಷಿಸಿ ನೋಡಿ. ನೀವು ಕಾಲೇಜಲ್ಲಿ ಏನ್ ಓದಿದೀರೋ ಅದನ್ನ ಬಿಟ್ಟು ಹೊಸ ಸಬ್ಜೆಕ್ಟುಗಳ್ನ ಕಲಿಯೋ ಪ್ರಯತ್ನ ಮಾಡಿ. ಈಗಂತೂ ಪ್ರತಿಯೊಂದೂ ಇಂಟರ್ನೆಟ್ಟಲ್ಲೇ ಸಿಗುತ್ತೆ. ಅದಕ್ಕೇನು ಕಾಲೇಜಿಗೆ ಹೋಗಬೇಕಾಗಿಲ್ಲ.

 

5. ಪ್ರಶ್ನೆ ಮಾಡಿ

ಈಗಾಗಲೇ ಏನು ಕಲಿತಿದ್ದೀರೋ ಅಷ್ಟೆ ನನ್ನ ತಿಳುವಳಿಕೆ ಅಂತ ಕೂತಿರ್ಬೇಡಿ. ಅದನ್ನೆಲ್ಲ ಪ್ರಶ್ನೆ ಮಾಡಿ. ಆಗ ನಿಮ್ಮ ಅರಿವು ಹೆಚ್ಚುತ್ತೆ; ಮಿದುಳು ಹಳೇದರಲ್ಲೇ‌ ಕಚ್ಕೊಂಡ್ ಕೂತ್ಕೊಳಲ್ಲ. ಹೀಗೆ ನಿಮ್ಮನ್ನ ನೀವೇ ಪ್ರಶ್ನಿಸಿಕೊಳೋದು ಬಹಳ ಮುಖ್ಯ. ಬೇರೆಯೋರ ತಿಳುವಳಿಕೇನ ಪ್ರಶ್ನೆ ಮಾಡೋದು ಸುಲಭ ಅಂತ ಅದನ್ನೇ‌ ಮಾಡ್ತಾ ಇರ್ಬೇಡಿ; ನಿಮ್ಮ ತಿಳುವಳಿಕೇನ ನೀವು ಪ್ರಶ್ನೆ ಮಾಡ್ಕೊಳಿ.

 

6. ಅರಿವು ಹಂಚಿಕೊಳ್ಳಿ

ನಿಮಗೆ ಬರೋ ಐಡಿಯಾಗಳ್ನ, ನಿಮ್ಮ ಅರಿವನ್ನ, ಬೇರೆಯೋರ ಹತ್ತಿರ ಹಂಚಿಕೊಳ್ಳಿ. ಆಗ ನಿಮ್ಮ ಮಿದುಳು ಇನ್ನಷ್ಟು ಆಕ್ಟಿವ್ ಆಗುತ್ತೆ. ಹಾಗೇ ಬೇರೆಯೋರು ನಿಮಗೆ ಹೇಳೋ ಮಾತುಗಳಿಂದ ನೀವೂ ಇನ್ನಷ್ಟು ಕಲೀತೀರಿ.

 

7. ಮೈ ಬಗ್ಗಿಸಿ

ಮೈ ಆರೋಗ್ಯ ಚೆನ್ನಾಗಿಲ್ಲದೆ ಹೋದ್ರೆ ನಿಮ್ಮ ಬುದ್ಧಿಶಕ್ತಿ ಹೆಚ್ಚಿಸಿಕೊಳಕ್ಕಾಗಲ್ಲ. ದಿನಕ್ಕೆ 20 ನಿಮಿಷ ಆದರೂ ಬೇರೆ ಬೇರೆ ವ್ಯಾಯಾಮಗಳ್ನ ಮಾಡಿ. ಯೋಗ ಮಾಡಿದರೆ ಅದಕ್ಕಿಂತ ಇನ್ನೇನೂ ಬೇಕಾಗಿಲ್ಲ. ವ್ಯಾಯಾಮ ಮಾಡುವಾಗ ಮಿದುಳಿಗೆ ಚೆನ್ನಾಗಿ ಆಕ್ಸಿಜನ್ ಹೋಗುತ್ತೆ. ಅದರಿಂದ ತುಂಬ ಬೇಗ ಬುದ್ಧಿಶಕ್ತಿ ಹೆಚ್ಚುತ್ತೆ.

 

8. ನಿಮ್ಮ ತಲೇಲಿ ನಡೆಯೋದನ್ನ ನೀವೇ ಗಮನಿಸೋದು ಕಲ್ತುಕೊಳ್ಳಿ

ಧ್ಯಾನ ಅಂದ್ರೆ ಇದೇನೇ. ನಿಮ್ಮ ಮಿದುಳಲ್ಲಿ ಏನೇನ್ ನಡೀತಿದೆ ಅಂತ ನಿಮಗೆ ಗೊತ್ತಾಗಕ್ಕೆ ಶುರು ಆದ್ರೆ ಅದರಿಂದ ತುಂಬ ಲಾಭಗಳಿವೆ. ನಿಮಗೆ ನೀವ್ಯಾರು ಅಂತ ಅರ್ಥ ಆಗ್ತೀರಿ. ಇದರಿಂದ ಮಿದುಳು ಚೆನ್ನಾಗಿ ಆರೋಗ್ಯವಾಗಿರುತ್ತೆ, ಜೀವನದಲ್ಲಿ ಸಂತೋಷಾನೂ ಹೆಚ್ಚುತ್ತೆ.

 

9. ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಒಂದಕ್ಕಿಂತ ಜಾಸ್ತಿ ಹುಡುಕಿ

ಸಾಮಾನ್ಯವಾಗಿ ಏನಾದರೂ ಸಮಸ್ಯೆ ಎದುರಾದ್ರೆ ತಕ್ಷಣ ಇದನ್ನ ಮಾಡ್ಬೇಕು ಅನ್ನಿಸುತ್ತೆ. ಆದರೆ ಹಾಗೆ ತಕ್ಷಣ ಮಾಡಕ್ಕೆ ಹೋಗಬೇಡಿ. ಬದಲಾಗಿ ನಿಮ್ಮ ಮುಂದೆ ಇರೋ ದಾರಿಗಳ್ನೆಲ್ಲ ಒಂದ್ಸಲ ಪರಿಶೀಲಿಸಿ ನೋಡಿ. ಆಗ ನಿಮಗೇ ಆಶ್ಚರ್ಯ ಆಗುತ್ತೆ – ನೀವು ದುಡುಕಿದ್ದರೆ ಸಮಸ್ಯೆಗೆ ಅತ್ಯಂತ ಉತ್ತಮವಾದ ಪರಿಹಾರ ಸಿಗ್ತಾನೇ ಇರ್ಲಿಲ್ಲ ಅಂತ.

 

10. ಮಿದುಳಿನ ಜೊತೆ ಆಟ ಆಡಿ

ನಿಮ್ಮ ಮಿದುಳು ಎಲ್ಲಿಗೆ ಹೋಗಬೇಕು ಅನ್ನುತ್ತೋ‌ ಅಲ್ಲಿಗೆ ಹೋಗಕ್ಕೆ ಬಿಡಿ. ಅದಕ್ಕೂ‌ ಆಟ ಆಡಬೇಕು ಅಂತ ಇರುತ್ತೆ. ಉದಾಹರಣೆಗೆ, ತಮಾಷೆ ಮಾಡುವಾಗ ಅದಕ್ಕೂ ಇಂಥ ಚೌಕಟ್ಟು ಅಂತ ಹಾಕ್ಕೋಬೇಡಿ. ಇನ್ನೊಂಥರ ಮಿದುಳಿನ ಆಟ ಅಂದ್ರೆ ಒಗಟು. ಇತ್ತೀಚೆಗೆ ನಮ್ಮಲ್ಲಿ ಈ ಒಗಟಿನ ಕಲೆ ಸ್ವಲ್ಪ ಹಿಂದೆ ಬಿದ್ದಿದೆ. ಆದರೆ ಅಂತೆಕಂತೆಯಲ್ಲಿ ಅದನ್ನ ಮತ್ತೆ ಮೇಲೆ ತರಕ್ಕೆ ಒಂದ್ ಸ್ವಲ್ಪ ಪ್ರಯತ್ನ ಮಾಡ್ತಿದೀವಿ.