https://antekante.com/sites/default/files/images/gossipp.jpg

ಹರಟೆ ಹೊಡಿಯೋದು, ಗಾಸಿಪ್ ಮಾಡೋದು ಅಂದ್ರೆ ಅದೇನ್ ಖುಷಿನೋ. ಅದ್ರಲ್ಲೂ ಇನ್ನೊಬ್ರು ಬಗ್ಗೆ, ಅವ್ರ ಬೆನ್ ಹಿಂದೆ ಮಾತಾಡಕ್ಕೆ ನಿಂತ್ಬಿಟ್ರೆ, ಪಕ್ಕದಲ್ಲಿ ಭೂಕಂಪ ಆದ್ರೂ ಗೊತ್ತಾಗಲ್ಲ.

ಒಂದ್ ಸರ್ವೆ ಪ್ರಕಾರ, ದಿನಗಟ್ಟಲೆನಲ್ಲಿ ನಾವು ಮಾತಾಡೋ ಮುಕ್ಕಾಲುವಾಸಿ ಮಾತು ಅವ್ರಿವ್ರ ಬಗ್ಗೆನೇ ಇರತ್ತಂತೆ. ಎದುರುಗ್ ಮಾತಾಡೋ ಮುಖ ಇರಲ್ಲ, ಹಿಂದೆ ಮಾತಾಡಿ ಬಾಯಿ ಚಪಲ ತೀರುಸ್ಕೊಳದು. ತಪ್ಪಲ್ವ? ಬೇರೆಯೋರ್ ಕಡೆ ಬೆಟ್ಟು ತೋರ್ಸಿ ಮಾತಾಡೋ ಜನಕ್ಕೆ, ತಮ್ ಬಗ್ಗೆನೂ ಜನ ಬೆನ್ ಹಿಂದೆ ಗುಸು ಗುಸು ಪಿಸು ಪಿಸು ಅಂತ ಮಾತಾಡ್ಬೋದು ಅನ್ನೋ ಪರಿಜ್ಞಾನ ಇರತ್ತೋ ಇಲ್ವೋ. ಇಂಥೋರು ಎಲ್ಲಾ ಊರು, ಕೇರಿ, ಆಫೀಸು, ಡಿಪಾರ್ಟ್ಮೆಂಟಲ್ಲೂ ಇರ್ತಾರೆ.

ಇವ್ರುದ್ದು ಒಂಥರಾ ಕಲ್ಲು ಹೃದಯ. ಎಷ್ಟೊಂದ್ ಸಲ, ತಮ್ ಪ್ರತಿಷ್ಟೆ ಮೆರಿಸಕ್ಕೆ, ತಾವು ನಾಲ್ಕು ಜನರ ಕಣ್ಣಲ್ಲಿ ಒಳ್ಳೆಯೋರು ಅನ್ನುಸ್ಕೊಳಕ್ಕೆ ಇನ್ನೊಬ್ರು ಬಗ್ಗೆ ಎರ್ರಾಬಿರ್ರಿ ಮಾತಾಡ್ತಾರೆ. ಗೊತ್ತಾದ್ರೆ ಅವ್ರಿಗ್ ನೋವಾಗತ್ತೆ ಅನ್ನೋ ಕಿಂಚಿತ್ ಕಾಳಜಿನೂ ಇರಲ್ಲ. ಈಗ ಪ್ರಶ್ನೆ, ಇನ್ನೊಬ್ರು ಬಗ್ಗೆ ನಾವಾಡೋ ಎಲ್ಲಾ ಮಾತೂ ಗಾಸಿಪ್ಪಾ? ಖಂಡಿತಾ ಇಲ್ಲ ಕಣ್ರಿ. ಬರೀ ಕೆಟ್ಟದಾಗಿ, ನೆಗೆಟಿವಾಗಿ ಆಡೋ ಮಾತು ಮಾತ್ರ ಗಾಸಿಪ್ಪು, ಯಪ್ಪಾ…ಇವ್ರುಗಳ್ನ ಹೇಗಪ್ಪಾ ನಿಭಾಯಿಸೋದು ಅನ್ಸತ್ತೆ. ಅದೇನ್ ಅಂಥಾ ಬ್ರಹ್ಮವಿದ್ಯೆ ಅಲ್ಲ.

ಯಾರಾದ್ರೂ ನಿಮ್ ಎದುರು ಅಥ್ವ ನಿಮ್ ಹಿಂದೆ ಗಾಸಿಪ್ಪು, ಮಣ್ಣೂ ಮಸಿ ಅಂತ ಹರಟ್ತಿದ್ರೆ, ಇಲ್ಲಿ ಕೊಟ್ಟಿರೋ 7 ಬಾಣ ಬಿಡಿ. ಎಂಥಾ ಗಾಸಿಪ್ಪು, ಹರಟೆ ಕೊಚ್ತಿದ್ರೂ ಸುಮ್ನೆ ಆಗೋಗ್ತಾರೆ.

1. ಅವರೆಲ್ಲಾ ಕುಯ್ತಾ ಇದ್ರೆ ನೀವು ಮಾತಾಡ್ತಿರೋ ವ್ಯಕ್ತಿ ಬಗ್ಗೆ ಎರಡು ಒಳ್ಳೆ ಮಾತಾಡಿ…

ಇನ್ನೊಬ್ರು ಜೀವನ್ದಲ್ಲಿ ಏನೋ ಎಡವಟ್ಟಾಗೋಗಿದೆ ಅಂದ್ರೆ, ಈ ಗಾಸಿಪ್ ಮಾಡೋರ್ ಬಾಯಿಗೆ ಹಬ್ಬ ಕಣ್ರಿ. ಗುಂಪಲ್ಲಿ ಮಾತಾಡುವಾಗ ಎಂಥೆಂಥದೋ ಸ್ಟೋರಿ ಕೇಳಿರ್ತೀವಿ. ಯಾರೋ ಅಷ್ಟು ಕಷ್ಟ ಪಟ್ಟು ಮಕ್ಕಳನ್ನ ಸಾಕಿದ್ರಂತೆ, ಇನ್ಯಾರೋ ಇಷ್ಟು ಕಷ್ಟ ಪಟ್ಟು ಸಮಾಜಸೇವೆ ಮಾಡ್ತಿದ್ರಂತೆ ಅಂತೆಲ್ಲಾ. ಆಗ ಒಂದು ಸಮಾಜದಲ್ಲಿ ಬದುಕುವಾಗ, ಹೇಗಿರ್ಬೇಕು, ಹೇಗಿರ್ಬಾರ್ದು ಅನ್ನೋ ಪಾಠ ಕಲಿಬೋದು. ಹೀಗಿರುವಾಗ ಯಾರೋ ಗಾಸಿಪ್ ಮಾಡ್ಕೊಂಡು, ಕಿವಿ ತೂತ್ ಬೀಳೋಹಾಗೆ ಬರೀ ನೆಗೆಟಿವ್ ವಿಷ್ಯಾನೇ ಮಾತಾಡ್ತಿದ್ರೆ, ಅದನ್ನ ಮುಂದುವರ್ಸೋ ಬದ್ಲು, ಮುಲಾಜಿಲ್ದೇ ನಿಮ್ಗೆ ಅದೆಲ್ಲಾ ಇಷ್ಟ ಆಗಲ್ಲ ಅಂತ ತೋರ್ಸಿ. ಅಂದ್ರೆ, ಅವ್ರ ಬಗ್ಗೆ ನಿಮ್ಗೆ ಗೊತ್ತಿರೋ ಒಳ್ಳೆ ವಿಷ್ಯಗಳು, ಅವ್ರ ಟ್ಯಾಲೆಂಟು… ಹೀಗೆ ಬರೀ ಪಾಸಿಟಿವಾಗೇ ಮಾತಾಡಿ. ಆಗ ಈ ಗಾಸಿಪ್ ಮಾಡೋರೂ ತಮಗೇ ಗೊತ್ತಿಲ್ದೆ ನಿಮ್ ದಾರಿಗ್ ಬರ್ತಾರೆ.

2. ಗಾಸಿಪ್ ಮಾಡೋರಲ್ಲೂ ಇರೋ ಒಳ್ಳೇತನದ ಬಗ್ಗೆ ಮಾತಾಡಿ…

ಸಾಮಾನ್ಯವಾಗಿ ಈ ಗಾಸಿಪ್ ಮಾಡೋರು, ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಎಲ್ರ ಹತ್ರ ಹೇಳ್ಕೊಂಡ್ ಬರೋರು, ತುಂಬಾ ವೀಕಾಗಿರ್ತಾರಂತೆ. ಪಾಪ ಆತ್ಮವಿಶ್ವಾಸ ಕಮ್ಮಿ. ಹಾಗಾಗಿ, ತಮ್ಗಿಂತ ಕೆಳಮಟ್ಟದಲ್ಲಿರೋರ್ ಬಗ್ಗೆ ಮಾತಾಡಿ, ಅವ್ರ ಜೊತೆ ಹೋಲಿಕೆ ಮಾಡ್ಕೊಂಡು ಸಮಾಧಾನ ಮಾಡ್ಕೊಳಕ್ಕೆ ಈ ಗಾಸಿಪ್ಪು ಒಂದ್ ನೆಪ. ನಾವು ಗಟ್ಟಿಯಾಗ್ಬೇಕು ಅಂತ ಇನ್ಯಾರ್ ಬಗ್ಗೆನೋ ಕೀಳಾಗಿ ಮಾತಾಡಿದ್ರೆ ಯಾವ್ ನ್ಯಾಯ? ಅದೊಂದ್ ಕೆಟ್ಟ ಚಟ ಆಗೋಗತ್ತೆ. ಹಾಗಾಗಿ ಅಂಥೋರ್ ಯಾರಾದ್ರೂ ಸಿಕ್ಕಿದ್ರೆ, ಅವ್ರ ಬಗ್ಗೆ ನಿಮ್ಗೇನಾದ್ರು ಒಳ್ಳೆ ವಿಚಾರ್ಗಳು ಗೊತ್ತಿದ್ರೆ, ಅದನ್ನ ಅವ್ರಿಗೆ ನೆನಪು ಮಾಡಿ. ಸ್ವಲ್ಪ ಧಾರಾಳವಾಗೇ ಹೊಗಳಿ ತಪ್ಪಿಲ್ಲ. ಆಗ ತಮ್ಮ ಬಗ್ಗೆ  ಅವ್ರಿಗೆ ಹೆಮ್ಮೆ ಅನ್ಸತ್ತೆ. ಅದೇ ಮುಂದುವರೆದ್ರೆ, ಕ್ರಮೇಣ ಬಾಯಿಗ್ ಬಂದಿದ್ ಹರಟೋ ಚಟ ಕೂಡ ಬಿಟ್ಟೋಗತ್ತೆ.

3. ಸಂಸ್ಕೃತಿ, ನಾಡು-ನುಡಿ ಬಗ್ಗೆ ಗಾಸಿಪ್ ಮಾಡ್ತಿದ್ರೆ ನಿಮಗೆ ಗೊತ್ತಿರೋ ಸಾಮ್ಯತೆ, ವ್ಯತ್ಯಾಸಗಳನ್ನ ತಿಳಿಸ್ಕೊಡಿ…

ಕಾರ್ಪೊರೇಟ್ ಆಫೀಸು, ಕಾಲೇಜು ಇಂಥ ಕಡೇಲೆಲ್ಲಾ ಕಲ್ಚರಲ್ ಡಿಫ್ರೆನ್ಸ್ ಬಗ್ಗೆ ಮಾತು ಕಥೆ ಸರ್ವೇ ಸಾಮಾನ್ಯ. ಒಬ್ರದ್ದು ಕಂಡ್ರೆ ಇನ್ನೊಬ್ರುಗೆ ಆಗಲ್ಲ ಅಂತೆಲ್ಲಾ ಏನಲ್ಲ. ಆದ್ರೆ ಗುಂಪಲ್ಲಿ ಹರಟುವಾಗ ಹಿಂದೆ ಮುಂದೆ ನೋಡ್ದೆ, ತಮ್ ಸಂಸ್ಕೃತಿನೇ ಹೆಚ್ಚು, ಅದೇ ದೊಡ್ಡದು ಅಂತ ಕೊಚ್ತಿರ್ತಾರೆ. ಜೊತೆಗೆ ಆಫೀಸ್ಗೆ, ಕಾಲೇಜ್ಗೆ ಬರೋ ಸಂಪ್ರದಾಯಸ್ಥ ಹುಡುಗ್ರು, ಹುಡುಗೀರ್ನ ಇದೇ ವಿಷ್ಯವಾಗಿ ಚುಡಾಯಿಸೋದು, ಆಡ್ಕೊಳದು ಮಾಡ್ಬೋದು. ಆಗ ಕೇಳ್ತಿರೋರೂ ವಾದಕ್ಕೆ ನಿಂತ್ರೆ ಹೇಗೆ? ಗುಂಪಲ್ಲಿ ಮಿಂಚ್ಬೇಕು ಅಂತ ಗಾಸಿಪ್ ಮಾಡೋರೂ ಇರ್ತಾರೆ ಹಾಗೇನೇ ಬೇರೆ ಬೇರೆ ಸಂಸ್ಕೃತಿ, ಸಂಪ್ರದಾಯದ್ ಬಗ್ಗೆ ಗೊತ್ತಿಲ್ದೇ ಮಾತಾಡೋರೂ ಇರ್ತಾರೆ. ಸುಮ್ನೆ ನೆಗೆಟಿವಾಗಿ ಮಾತಾಡ್ತ ಮಾತು ಎಲ್ಲಿಂದ ಎಲ್ಲಿಗೋ ಹೋಗ್ಬೋದು. ಸಂಸ್ಕೃತಿ, ನಾಡು ನುಡಿ ವಿಷ್ಯ ನೋಡಿ, ಬರೀ ಗಾಸಿಪ್ಪಾಗಿ ಶುರುವಾಗಿದ್ದು, ಜನಾಂಗೀಯ ನಿಂದನೆ ಅಂತೆಲ್ಲಾ ಸೀರಿಯಸ್ ಆಗ್ಬೋದು. ಆಗೆಲ್ಲಾ ಹುಷಾರಾಗಿ ನಿಭಾಯಿಸ್ಬೇಕು. ಗಾಸಿಪ್ ಮಾಡ್ತಿರೋರ್ ಆಚಾರ ವಿಚಾರಕ್ಕೂ, ಇಲ್ಲಿಗೂ ಇರೋ ಸಾಮ್ಯತೆ, ವ್ಯತ್ಯಾಸನೆಲ್ಲಾ ಕೂಲಾಗಿ ತಿಳ್ಸಿ ಹೇಳ್ಬೇಕು. ಎರಡೂ ಸಂಸ್ಕೃತಿನಲ್ಲಿರೋ ಒಳ್ಳೇ ವಿಷ್ಯಗಳ್ನ ಮಾತ್ರ ಹೇಳಿ. ಅಷ್ಟೇ ಅಲ್ಲ ಕಣ್ರಿ, ನಾವಿರೋ ಪ್ರಪಂಚ್ದಲ್ಲಿ ಇನ್ನೂ ಎಷ್ಟೆಲ್ಲಾ ವಿಭಿನ್ನವಾಗಿರೋ ಆಚಾರಗಳಿವೆ, ಅವೆಲ್ಲಾ ಎಷ್ಟ್ ಸುಂದರ್ವಾಗಿದೆ, ಒಂದೊಂದ್ ದಿಕ್ಕಿಗೂ ನೂರಾರು ಸಂಸ್ಕೃತಿ ಇದ್ರೂ ಎಷ್ಟು ಹೊಂದಾವಣಿಕೆ ಇದೆ ಅಂತ ಮನದಟ್ಟು ಮಾಡಿಸ್ಬೇಕು. ಅಲ್ರಿ, ಹಬ್ಬದ ದಿನ ಬಾಯಿ ಚಪ್ಪರುಸ್ಕೊಂಡು ಒಬ್ಬಟ್ಟು ತಿನ್ನೋರೇ ವೀಕೆಂಡಲ್ಲಿ ಪಿಜ್ಜಾ ಬರ್ಗರ್ ತಿನ್ನಲ್ವ? ಸೀರೆ, ಸಲ್ವಾರ್ ಸಿಗೋ ಅಂಗಡಿನಲ್ಲೇ ಶಾರ್ಟ್ಸ್, ಜೀನ್ಸೂ ಸಿಕ್ಕಲ್ವ? ಅಷ್ಟೇ ಸಿಂಪಲ್ಲು.

4. ಅತಿರೇಕಕ್ಕೆ ಹೋದಾಗ ತಿದ್ದೋ ಪ್ರಯತ್ನ ಮಾಡಿ…

ಇದೂವರ್ಗೂ ಗಾಸಿಪ್ ವಿಷ್ಯದಲ್ಲಿ ಯಾವ್ ರಿಸರ್ಚೂ ಸರಿಯಾಗಿ ಆಗಿಲ್ವಂತೆ ಗೊತ್ತಾ?  ಈ ವಿಷಯ ಅಷ್ಟು ಕಷ್ಟ ಕಣ್ರಿ. ಒಬ್ಬೊಬ್ರು ಒಂದೊಂದು ದೃಷ್ಟಿಕೋನದಲ್ಲಿ ಮಾತಾಡ್ತಾರೆ. ಒಬ್ರ ಪ್ರಕಾರ ಅದು ನಿಜ ಆದ್ರೆ, ಇನ್ನೊಬ್ರ ದೃಷ್ಟಿನಲ್ಲಿ ಅದು ಸುಳ್ಳು. ಕೂತ್ಕೊಂಡು ಕೇಳುಸ್ಕೊಳೋರುಗ್ ಮಾತ್ರ ತಲೆ ಬುಡ ಅರ್ಥ ಆಗ್ದೇ ತೆಲೆಕೆಟ್ಟೋಗತ್ತೆ. ಬೇಕೋ ಬೇಡ್ವೋ ಸುಮ್ನೆ ಹರಟೆ ಕೊಚ್ಚೋದೇ ಕೆಲ್ಸ ಮಾಡ್ಕೊಂಡಿರೋರ್ ಮುಂದೆ ಮುಲಾಜಿಲ್ದೇ, ಹೀಗೆಲ್ಲಾ ಮಾತಾಡಿದ್ರೆ ಖಂಡಿತಾ ನಂಗೆ ಇಷ್ಟ ಆಗಲ್ಲ ಅಂತನೋ, ಬೇರೆಯೋರ್ ಬಗ್ಗೆ ಇಷ್ಟು ಚೀಪಾಗಿ ಮಾತಾಡೋ ನಿಮ್ ಜೊತೆ ನಂಗೆ ಸ್ನೇಹ ಬೇಡ ಅಂತಾನೋ ಅಥ್ವ ನಿಜ ನಿಮ್ಗೇನಾದ್ರೂ ಗೊತ್ತಿದ್ರೆ, ಹಾಗಲ್ಲ ಹೀಗೆ ಅಂತ ಬಿಡಿಸಿ ಹೇಳೋ ಪ್ರಯತ್ನ ಮಾಡಿ. ಗಾಸಿಪ್ ಮಾಡೋದೇ ಚಟ ಆಗಿರೋರ್ ಜೊತೆ ಯಾವ ವ್ಯವಹಾರನೂ ಬೇಡ. ಇಂಥದ್ದನ್ನೆಲ್ಲಾ ಹೇಗಪ್ಪಾ ಹೇಳೋದು ಅಂತ ಮೀನ ಮೇಷ ಏಣಿಸೋ ಅವಶ್ಯಕತೆ ಇಲ್ಲ. ತೀರ ಅತಿರೇಕಕ್ಕೆ ಹೋದ್ರೆ ನೇರವಾಗಿ ಕಡ್ಡಿ ಮುರಿದ ಹಾಗೆ ಹೇಳುದ್ರೂ ತಪ್ಪಿಲ್ಲ. ಒಂದ್ವೇಳೆ ಆ ಮಾತು ಕಥೆ ನಿಮಗ್ ಸಂಬಂಧ ಪಟ್ಟಿದ್ರೆ, ಆ ಕಾರಣಕ್ಕೆ ಕೂತು ಕೇಳೂಸ್ಕೊತಿದೀನಿ ಅಂತ ಮುಕ್ತವಾಗಿ ಹೇಳ್ಬಿಡಿ. ಇಲ್ಲ ಅಂದ್ರೆ ನಿಮ್ ವ್ಯಕ್ತಿತ್ವದ ಬಗ್ಗೆ ಬೇರೆಯೋರು ತಪ್ಪು ತಿಳ್ಕೊಂಡು, ನಿಮ್ಗೂ ಗಾಸಿಪ್ ಬಗ್ಗೆ ಆಸಕ್ತಿ ಇದೆ ಅಂತ ಇನ್ನೊಂದ್ ಹೊಸ ಗಾಸಿಪ್ ಸೃಷ್ಟಿ ಮಾಡ್ಬೋದು!

5. ಗುಂಪಲ್ಲಿ ಹರಟುವಾಗ, ಹೇಗಾದ್ರೂ ಮಾಡಿ ಗಾಸಿಪ್ ತಡೀರಿ

ನಿಮ್ಗೆ ಜನ್ರ ಜೊತೆ ಯಾವಾಗ್ಲೂ ಹರಟೆ ಹೊಡ್ಕೊಂಡು ಕಾಲ ಕಳಿಯೋದು ತುಂಬಾ ಇಷ್ಟವಾದ್ ಕೆಲ್ಸಾನ? ಅದ್ರಲ್ಲೇನ್ ತಪ್ಪಿಲ್ಲ ಬಿಡಿ. ಹರಟೆ ಹೊಡಿಯಕ್ಕೆ ಪ್ರಪಂಚ್ದಲ್ಲಿ ಬೇಕಾದಷ್ಟು ವಿಷ್ಯಗಳಿವೆ. ಅದೆಲ್ಲಾ ಬಿಟ್ಟು ಯಾರ್ದೋ ವಿಷ್ಯ ಮಾತಾಡ್ಕೊಂಡು ಯಾಕ್ ಕಿವಿ ಕಚ್ಚುಸ್ಕೊಬೇಕು? ಗಾಸಿಪ್ ಮಾಡೋದ್ನೇ ಹರಟೆ ಅಂತ ಅಂದ್ಕೊಂಡಿರೋರ್ನ ದೂರ ಇಡೋದೇ ಇದಕ್ಕೆ ಪರಿಹಾರ. ಅಂಥಾ ಹರಟೆಯಿಂದ ಒಳ್ಳೆ ಫ್ರೆಂಡ್ಸ್ ಖಂಡಿತಾ ಸಿಗಲ್ಲ. ಅಂಥೋರ್ನ ದೂರ ಇಟ್ರೆ, ನಮ್ ಮನಸ್ಸೂ ತಿಳಿಯಾಗಿರತ್ತೆ, ಜೊತೆಗೆ ಅವ್ರಿಗೂ ಹೇಳ್ಕೊಳಕ್ಕೆ ಒಂದ್ ಕಿವಿ ಕಮ್ಮಿಯಾಗಿ, ಚಟ ಬಿಟ್ರೂ ಬಿಡ್ಬೋದು.

6. ಧೈರ್ಯವಾಗಿ ಎದುರಿಸಿ

ಏನೋ ಮಾತಾಡ್ತಿರ್ತಿವಿ ಕಣ್ರಿ. ಅದೆಂಗ್ ಮಾತು ಇನ್ನೊಬ್ರು ಬಗ್ಗೆ ತಿರುಗುತ್ತೋ ಗೊತ್ತೇ ಆಗಲ್ಲ ಅಂತ ಕೆಲವ್ರು ಅಂದ್ರೆ ಇನ್ನು ಕೆಲವ್ರು ಬಾಯಿ ಚಪಲ ತೀರೋವರ್ಗೂ ಮಾತಾಡ್ಬಿಟ್ಟು ಅಯ್ಯೋ ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅನ್ನೋ ಹಾಗೆ ನಮಗ್ಯಾಕೆ ಬಿಡಿ ಅಂತ ಡೈಲಾಗ್ ಹೊಡಿತಾರೆ. ನಿಜ ಹೇಳ್ಬೇಕು ಅಂದ್ರೆ ಇಂಥೋರ್ನ ನಿಭಾಯಿಸೋದು ಅಂಥಾ ಕಷ್ಟ ಏನಲ್ಲ. ಆ ಥರದ್ ಮಾತು ಕಥೆ ಶುರುವಾದ್ರೆ ಮುಖದ್ ಮೇಲೆ ಹೊಡ್ದಂಗೆ, 'ಯಾಕೋ ಮಾತು ನನ್ ಬಗ್ಗೆನೇ ಅನ್ನಿಸ್ತಿದೆ! ಬೇರೆ ಏನಾದ್ರೂ ಮಾತಾಡೋಣ್ವ' ಅಂತಾನೋ ಅಥ್ವ 'ಇಂಥ ಗಾಸಿಪ್ಪಲ್ಲೆಲ್ಲಾ ನಂಗೆ ಆಸಕ್ತಿ ಇಲ್ಲಪ್ಪ, ಇನ್ನೇನಾದ್ರು ಮಾತಾಡಣ್ವ' ಅಂತ ಹೇಳ್ಬಿಡಿ. ಆಗ ಆ ಮಾತು ಅಲ್ಲಿಗೇ ನಿಲ್ಲತ್ತೆ.

7. ಈ ಗಾಸಿಪ್ ಚಟ ಬಿಡಕ್ಕೆ ಹುರಿದುಂಬಿಸಿ

ಯಾರಾದ್ರೂ ಬಂದು ನಿಮ್ ಹತ್ರ ಅವ್ರು ಹಾಗಂತೆ, ಇವ್ರು ಹೀಗಂತೆ ಅಂತೆಲ್ಲಾ ಸುಮ್ನೆ ಹರಟ್ತಾ ಇದ್ರೆ, ಜಾಣತನದಿಂದ ಅವರ ಮಾತನ್ನ ಅವ್ರಿಗೇ ತಿರುಗ್ಸಿ. ತುಂಬಾ ಸುಲಭ! ಅಯ್ಯೋ ಅದೆಷ್ಟ್ ಕಾಳಜಿ ನಿಮ್ಗೆ ಅವ್ರನ್ನ ಕಂಡ್ರೆ! ಏನಾದ್ರೂ ಸಹಾಯ ಮಾಡ್ಬೇಕು ಅಂತಿದಿರಾ ಹೇಗೆ ಅಂತ ಒಂದ್ ಬಾಣ ಬಿಡಿ. ಅಲ್ಲಿಗೆ ಬಾಯಿ ಬಂದಾಗತ್ತೆ. ಯಾರಿಗ್ ಗೊತ್ತು? ನಿಮ್ಮನ್ನ ಮೆಚ್ಚಿಸಕ್ಕೆ ಅಂತಾನೆ ಸಹಾಯ ಮಾಡ್ಬಹುದು. ಮೊದ್ಲು ಮೊದ್ಲು ಮಾತಿಗೆ ಕಟ್ಟು ಬಿದ್ದು ಬಲವಂತದಿಂದ ಶುರುವಾದ್ ಅಭ್ಯಾಸ ಕ್ರಮೇಣ ಒಳ್ಳೆ ಅಭ್ಯಾಸಕ್ಕೆ ತಿರುಗಬಹುದು. ಹೀಗೆ ಗಾಸಿಪ್ ಮಾಡೋ ಚಟಾನ, ಮಾಡೋರಿಗೇ ಗೊತ್ತಾಗದ ಹಾಗೆ ಒಂದ್ ಮಟ್ಟಕ್ಕೆ ಬಿಡುಸ್ಬೊದು.

ಗಾಸಿಪ್ಪಿಂದ ಜೀವಕ್ಕೆಲ್ಲಾ ಅಪಾಯ ಆಗಿರೋ ಉದಾಹರಣೆಗಳಿವೆ ಕಣ್ರಿ! ಇನ್ನೊಬ್ರು ಮನಸ್ಸು ನೋಯ್ಸೋ ಕೆಲ್ಸ ಯಾಕ್ ಬೇಕು ಹೇಳಿ? ಇದೆಲ್ಲಾದ್ರು ಜೊತೆ ನೆನಪಿಟ್ಕೋಬೇಕಾಗಿರೋ ಇನ್ನೊಂದು ಮುಖ್ಯವಾದ ವಿಷ್ಯ ಏನಪ್ಪ ಅಂದ್ರೆ, ಇನ್ನೊಬ್ರು ಬಗ್ಗೆ ಹೀನಾಯವಾಗಿ ಮಾತಾಡ್ದಾಗ ಸಣ್ಣೋರಾಗೋದು ಅವ್ರಲ್ಲ, ಹಾಗೆ ಮಾತಾಡೋರು!