https://antekante.com/sites/default/files/images/window-tracks_0.jpg

ನಾವ ಹೆಣ್ಣಮಕ್ಕಳಿಗೆ ಮನಿ ಸ್ವಚ್ಛ ಮಾಡೋದ ಒಂದ ದೋಡ್ಡ ಕೆಲಸಾ. ಅದರಾಗೂ ಕೆಲಸಕ್ಕ ಹೋಗೋರ ಇದ್ದರಂತೂ ಬಾನವಾರ ರಜಾದ ಮಜಾ ಎಲ್ಲಾ ಮನಿ ಸ್ವಚ್ಛ ಮಾಡೋದರಾಗ ಸಜಾ ಆಗಿಹೋಗತದ.

ಅದಕ್ಕ ನಂ ಹೆಣ್ಣಮಕ್ಕಳಿಗೆ ಉಪಯೋಗ ಆಗಲಿ ಅಂತ ಕೆಲವು ಸಾಮಾನಗೋಳನ್ನ ಸಲ್ಪ ಟೈಂದಾಗ ಸ್ವಚ್ಛ ಮಾಡೋದ ಹ್ಯಂಗ ಅಂತ ಈ ಲೇಖನದಾಗ ಹೇಳೊರದೇವಿ. ದುಬಾರಿ ಸಾಮಾನ ಲ್ಲದ, ಕಮ್ಮಿ ಟಾಯಂದಾಗ, ಅಗದೀ ಸ್ವಚ್ಛ ಆಗತದ ನಿಂ ಮನಿ. ಬರ್ರಿ.. ನೀವು ಇದರ ಉಪಯೋಗಾ ಪಡೀರಿ.

1. ಹಿಂಗ ಮಾಡಿದರ ವಾಷಿಂಗ್ ಮಿಶನ್ ಸ್ವಚ್ಛ ಆಗತದ

  • ಒಂದ ಲೋಟಾ ವಿನಿಗರ್ ನ ಮಿಶನ್ದಾಗ ಸೋಪಿನಪುಡಿ ಹಾಕೋ ಡಬ್ಯಾಗ ಹಾಕಿ ಮಿಶನ ಚಾಲೂ ಮಾಡಿಬಿಟ್ಟರ ಆತು. ಮಿಶನ ಬಂದ್ ಆದಾಗ ನೋಡ್ರಿ ಹ್ಯಂಗ ಹೊಳಿತಿರತದ ಅಂತ.
  • ಇನ್ನ ಬಟ್ಟಿ ಸ್ವಚ್ಛ ಆಗಬೇಕಂದರ ಅದರಾಗೂ ಬಣ್ಣದ ಬಟ್ಟಿ ಸ್ವಚ್ಛ ಆಗಬೇಕಂದರ ಸೋಪಿನ ಪುಡಿ ಜೋಡಿ 1/3 ಭಾಗ ವಿನಿಗರ ಹಾಕಿ ಒಗಿರಿ. ಬಟ್ಟಿ ಪಳಪಳ ಅಂತಾವು.
  • ಮನಿಯಾಗ ಬೆಕ್ಕು, ನಾಯಿಗೋಳ ಇದ್ದರಂತೂ ಅವುದರ ತುಪ್ಪಳಾ ಬಟ್ಟಿಗೆಲ್ಲಾ ಮೆತಗೊಂಡಿರತಾವು. ಅವು ಹೋಗಬೇಕು ಮತ್ತ ಮೆತಗೋಬಾರದು ಅಂದರ ಬಿಳೆವಿನಿಗರ ಹಾಕಿ ಆ ಬಟ್ಟಿ ಒಗಿರಿ.

ಮೂಲ

 2. ಜಳಕಾ ಮಾಡೋ ಟಬ್ ಸ್ವಚ್ಛ ಮಾಡಬೇಕಂದರ ಹಿಂಗ ಮಾಡರಿ

ಜಳಕಾ ಮಾಡೋ ಟಬ್ ಸ್ವಚ್ಛ ಮಾಡೋದು ಬಾಳ ಕಷ್ಟದ ಕೆಲಸಾ, ಸ್ವಚ್ಛ ಇಡಲಿಲ್ಲಾ ಅಂದರ ಹೇಸಗಿನೂ ಬರತದ. ಮೊದಲ ಮೈಕ್ರೋವೇವ್ ದಾಗ ಸಲ್ಪ ವಿನೆಗರ್ ಬಿಸಿಮಾಡರಿ. ಬಿಸಿ ಅಂದರ ಗುರ ಬೆಚ್ಚಗ. ಈಗ ಈ ವಿನಿಗರನ ಒಂದು ಸ್ಪ್ರೇ ಸೊಲೂಷನ್ ಇರೋ ಬಾಟಲಿದಾಗ ಹಾಕಿ ಮೆಲ್ಲಕ ಎರಡೂ ಮಿಶ್ರಣ ಕೂಡಸಿ ಟಬ್ ತುಂಬಾ ಸ್ಪ್ರೇ ಮಾಡಿ ಅರ್ಧಾ ಗಂಟೆ ಬಿಟ್ಟು ಮೆತ್ತನ ಬಟ್ಟಿಯಿಂದಾ ಟಬ್ ಒರಸಿ ಬಿಟ್ಟರ ಆತು.

3. ಕಿಡಕಿ ಸಂದಿಗೋಳನ್ನ ಹಿಂಗ ಸ್ವಚ್ಛ ಮಾಡರಿ

ಕಿಡಕಿ ಸಂದಿಗೋಳನ್ನ ಸ್ವಚ್ಛ ಮಾಡೋದು ಭಾಳ ಟಾಯಂ ಹಿಡಿಯೋ ಕೆಲಸಾ. ಅದಕ್ಕ ಇಲ್ಲೆ ಒಂದ ಸರಳ ಉಪಾಯ ಅದ. ಕೈಗೆ ನಿಲಕಲಾರದ ಸಂದಿ ಒಳಗ ಸಲ್ಪ ಅಡಗಿ ಸೋಡಾ ಉಗ್ಗರಿ. ಮ್ಯಾಲೆ ಒಂಚೂರ ವಿನಿಗರ ಹಾಕಿದರ ಅದು ಬುರುಗ ಬರಾಕತ್ತತದ. 10-15 ನಿಮಿಷ ಹಂಗ ಬಿಟ್ಟರ ಹೊಲಸೆಲ್ಲಾ ಕಿತಗೊಂಡ ಬುರುಗಿನ ಜೋಡಿ ಹೊರಗ ಬರತದ. ಈಗ ಬಟ್ಟಿಯಿಂದ ಒರಸಿಬಿಡ್ರಿ.

ಮೂಲ

4. ಹುಡಗೂರ ಆಟಸಾಮಾನ ಸ್ವಚ್ಛ ಮಾಡಬೇಕಾ ಹಿಂಗ ಮಾಡರಿ

ತಲಿನೂವು ತರಸೋ ವಿಷಯಾ ಅಂದರ ಈ ಆಟಸಾಮಾನು. ಹುಡಗೂರ ಆಡತಾರ ಎಲ್ಲಿ ಬೇಕಲ್ಲೇ ಒಗಿತಾರ ಹೋಗತಾರ. ಮತ್ತ ಬರತಾರ ಅದನ್ನ ಬಾಯಾಗ ಇಟಗೋತಾರ. ಅವನ್ನ ಸ್ವಚ್ಛ ಇರೋಹಂಗ ನೋಡಕೋಬೇಕಾದೋರ ನಾವು. ಎಲ್ಲಾ ಆಟಸಾಮಾನ್ನೂ ಜಾಲರೀ ಅಂತಾ ಚೀಲದಾಗ ಹಾಕಿ ವಾಷಿಂಗ ಮಿಶನದಾಗ ಹಾಕಿ ಒಂದನಾಕ ಸುತ್ತ ತಿರಗಿಸಿದರ ಆತು. ಆಟಸಾಮಾನ ಚಕಾಚಕ್.

ಮೂಲ

5. ಹಿಂಗ ಮಾಡಿದರ ನಿಂ ನೆಲ,ಗ್ವಾಡಿ ಮ್ಯಾಗಿನ ಮಾರ್ಕರ ಪೆನ್,ಕ್ರೆಯೋನ್ ಕಲಿ ಹೊಗತಾವು.

ಮನಿಯಾಗ ಹುಡಗೂರ ಇದ್ದರಂದರ ಮುಗೀತು. ಮನಿ ಅನ್ನೋದು ಚಿತ್ರಗೋಳ ಎಕ್ಸಿಮೆಷನ್ ಆಗಿರತದ. ಅವನ್ನ ಸ್ವಚ್ಛ ಮಾಡೋ ಚಪರಾಸಿ ಕೆಲಸ ನಮ್ಮದು. ಅದಕ್ಕ ಹಿಂಗ ಮಾಡರಿ ಸುಲಭದಾಗ ಕಲಿ ಹೋಗತಾವ.

  • ಒಂದ ಒರಟ  ಬಟ್ಟಿಮ್ಯಾಲೆ ಹಲ್ಲತಿಕ್ಕೋ ಪೇಸ್ಟ ಹಾಕ್ಕೋಂಡ ಕಲಿ ಇದ್ದಲ್ಲಿ ತಿಕ್ಕರಿ.
  • ಅಥವಾ ಹೇರಸ್ಪ್ರೇ,ಡ್ಯೂಡರೇಂಟನ್ನೂ ಕಲಿ ಇದ್ದಲ್ಲಿ ಸಿಂಪಡಿಸಿ ಒರಸಬೌದು.
  • ಅಡಗಿ ಸೋಡಾನ ಬಟ್ಟಿಮ್ಯಾಲ ಹಾಕ್ಕೋಂಡು ಕಲಿ ಇದ್ದಲ್ಲಿ ತಿಕ್ಕಿ ಆಮೇಲೆ ನೀರಿಂದಾ ಒರಸಿದರೂ ಪೆನ್ನಿನ ಕಲಿಗುಳು ಹಾಗತಾವ.

 6. ಉಗುರುಬಣ್ಣದ ಕಲಿ ತಗಿಬೇಕಂದರ ಹಿಂಗ ಮಾಡಬೌದು

ನೇಲಪಾಲೀಷ ಬಾಟಲಿ ಬಿದ್ದ ಪಾಲೀಷ ಚಲ್ಲಿದರೂ, ಹಚ್ಚಕೊಳ್ಳಾಕ ಹೋಗಿ ಪಾಲೀಷಚಲ್ಲಿದರೂ ಎದರ ಮ್ಯಾಲ ಚಲ್ಲಿರತದೋ ಅದು ಅಂತೂ ಹಾಳಾದಂಗ. ಅದಕ್ಕ ನೇಲಪಾಲೀಷಿನ ಕಲಿ ಹ್ಯೆಂಗ ತಗಿಯೋದು ಅಂತ ಹೇಳಾಕತ್ತೇನಿ

  • ಚಲ್ಲಿದ್ದ ಪಾಲೀಷ ಒಣಗದಕ್ಕಿಂತಾ ಮುಂಚೆ ಆದರ ನೇಲ ಪಾಲೀಷ ರಿಮೂವರ ಹಚ್ಚಿ ಸಲ್ಪ ಹೊತ್ತ ಬಿಟ್ಟ ರಸಿದರ ಹೋಗತದ. ಪಾಲೀಷ ಒಣಗಿತ್ತಂದರ ಅದರ ಮ್ಯಾಲೆ ಹೇರಸ್ಪ್ರೇ ಹಾಕಿ ಸಲ್ಪ ಹೊತ್ತ ಬಿಟ್ಟ ಒರಸರಿ ಹೋಗತದ.
  • ಅದ  ಕಾರ್ಪೆಟ ಮ್ಯಾಲೆ ಚಲ್ಲಿತ್ತಂದರ ಚೂರ ಸ್ಟೇನ್ ರಿಮೂವರ ಹಾಕಿ ಹಸಿ ಬಟ್ಟಿಯಿಂದ ಒರಸಿಬಿಡ್ರಿ.

ಮೂಲ

7. ಮೈಕ್ರೋವೇವ ಸ್ವಚ್ಛ ಮಾಡೋದು ಹಿಂಗ

ಅರ್ಧ ನಿಂಬಿಹಣ್ಣ ಕೋಯ್ಯಿದು ಒಂದ ಲೋಟಾದಾಗ  ಅದನ್ನ ಮತ್ತ ಸಲ್ಪ ದಾಲ್ಚಿನ್ನಿ ಚೂರನ ಸೇರಿಸಿ ಮೈಕ್ರೋವೇವ್ ದಾಗ ಇಡರಿ.  ಅಗದೀ ಕಮ್ಮಿ ವಿದ್ಯುತ್ ಸೆಟ್ಟಿಂಗ್ ಮಾಡಿ 5-10 ನಿಮಿಷ ಮೈಕ್ರೋವೇವ್ ಚಾಲೂ ಇಟ್ಟರೆಂದರ ನಿಂ ಮೈಕ್ರೋವೇವ್  ಚಕಾಚಕ್. ನಿಂಬಿಹಣ್ಣ ಸ್ವಚ್ಛಮಾಡಿದರ ದಾಲ್ಚಿನ್ನಿ ವಾಸನನಿ ಹೋಗಸತದ.

8. ಇಡೀ ಅಡಗಿಮನೀನ 10 ನಿಮಿಷದಾಗ ಸ್ವಚ್ಛ ಮಾಡಬೌದು

ಅಡಿಗೀಮನಿ ಸ್ವಚ್ಛ ಮಾಡೋದಂದರ ಏನ ಸುಮ್ಮ ಅಂತೀರೇನು. ಆದರ ಅದನ್ನ 10 ನಿಮಿಷದಾಗ ಹ್ಯೆಂಗ ಸ್ವಚ್ಛ ಮಾಡೋದಂತ ಲ್ಲೆ ಹೇಳತೇವ ಕೇಳ್ರಿ. ಅಡಗೀ ಎಣ್ಣಿಗೆ ಸಲ್ಪ ಅಡಿಗೀ ಸೋಡಾ ಸೇರಿಸಿ ಪೇಸ್ಟ ಆಗೋ ಹಂಗ ಕಲಸರಿ. ಇದನ್ನ ತಿಕ್ಕಿದರೂ ಹೋಗಲಾರದ ಜಿಡ್ಡಿನ ಮ್ಯಾಲೆ ಸುರಿದು 5-10 ನಿಮಿಷ ಬಿಡರಿ ಆಮೇಲೆ ಸೋಪಿನ ನೀರಲೆ ಒರಸಿಬಿಡರಿ.

ಮೂಲ

9. ಹಗಲೆಲ್ಲ ಹಾರಿಬರೋ ದೂಳದಿಂದ ಮುಕ್ತಿ ಪಡೀರಿ

ಹಗಲೆಲ್ಲ ಹಾರಿಬರೋ ದೂಳದ ಸಲುವಾಗಿ ಯಾವಾಗಲೂ ಕೈಯಾಗ ಬಟ್ಟಿ ಹಿಡಕೊಂಡ ಇರಬೇಕು ಅಂತ ಗೊಣಗೋರ ಸಲುವಾಗಿ ಹುಡಕ್ಯಾರ ಈ ಉಪಾಯಾನ. ಪೇಪರ ತವೆಲ್ಲಿಗೆ ಒಂದನಾಕ ಹನಿ ಎಣ್ಣಿಹಾಕಿ ದೂಳಿದ್ದಿದ್ದ ಜಾಗಾ ಒರಸರಿ. ಆಮೆಲೆ ಚೊಲೋ ಬಟ್ಟಿಯಿಂದ ಒರಸಿದರಾತು. ಎಣ್ಣಿ ಪದರ ಒರಸಿದ್ದ ಜಾಗಾದಾಗ ಉಳದು ಆ ಜಾಗಾಕ್ಕ ಹೊಳಪಕೊಡತದ. ಇದನ್ನ ಕುರ್ಚೆ,ಮೇಜಗಳ ಮ್ಯಾಲೂ ಬಳಸಬೌದು.

ಹ್ಯೆಂಗ ಅದಾವ ಉಪಾಯಾ,

ಮಾಡಿ ನೋಡ್ರಿ ಉಳೀತದ ನಿಂ ಸಮಯಾ

ಮನಿಯಾನ ಹೊಲಸ ಆಗತದ ಮಾಯಾ.