ನಾವೆಲ್ಲರೂ ಜೀವನದಲ್ಲಿ ನೋವು, ಕಷ್ಟಗಳನ್ನ ಎದುರಿಸಿರ್ತೀವಿ. ಅವುಗಳ ಬಲೆಯಲ್ಲೇ ಸಿಕ್ಕಿಹಾಕಿಕೊಂಡ್ರೆ ನೋವಿನಿಂದ ಕುಸಿದು ನಮ್ಮ ಜೀವನವನ್ನ ಆನಂದಿಸೋದು ಅಸಾಧ್ಯ ಆಗೋಗತ್ತೆ. ಆದ್ರೆ, ನೋವನ್ನ ಬಿಟ್ಟು ಮುಂದೆ ಹೋಗಲು ಸಾಧ್ಯ. ಕ್ಷಮಿಸೋದ್ರಿಂದ ನೀವು ಮತ್ತೆ ಖುಷಿಯಾಗಿ ಬಾಳೋದು ಸಾಧ್ಯ. ನಿಮ್ಮನ್ನು ನೋಯಿಸಿದವ್ರನ್ನ ಕ್ಷಮಿಸೋದಕ್ಕೆ ಕ್ರಮಬದ್ಧವಾಗಿ ಏನೇನು ಮಾಡಬೇಕು- ಇಲ್ಲಿದೆ ನೋಡಿ.

ಕ್ಷಮಿಸೋದು ಯಾಕೆ ಕಷ್ಟ ಅನ್ನಿಸುತ್ತೆ?

ತುಂಬಾ ಜನ ನೋವು ಅನುಭವಿಸಿದವರು ಕ್ಷಮಿಸೋದಕ್ಕೆ ಕಷ್ಟ ಪಡ್ತಾರೆ. ಯಾಕಂದ್ರೆ, ಕ್ಷಮಿಸಿಬಿಟ್ರೆ ತಾವು ಅನುಭವಿಸಿರೋ ನೋವು ಆಗೇ ಇಲ್ಲ ಅಥವಾ ಆ ನೋವು ಏನೂ ಅಲ್ಲ ಅಂತ ಅವರಿಗೆ ಅನ್ನಿಸುತ್ತೆ. ತಪ್ಪು ಮಾಡಿದವರು ತಪ್ಪಿಸಿಕೋಬಾರದು ಅನ್ನೋ ನಂಬಿಕೆ ಇರುತ್ತೆ. ಆದ್ರೆ ಅದು ನಿಜ ಅಲ್ಲ. ಕ್ಷಮಿಸಿದ ಮೇಲೆ ಏನೂ ಆಗೇ ಇಲ್ಲ ಅನ್ನೋ ರೀತಿ ವರ್ತಿಸಬೇಕಿಲ್ಲ. ಕ್ಷಮಿಸೋದು ಬೇರೆಯವರಿಗಾಗಿ ಅಲ್ಲ, ನಮಗೋಸ್ಕರ. ಆ ನೋವನ್ನ ಮೀರಿ ಮುಂದೆ ಸಾಗೋಕೆ.

ಕ್ಷಮಿಸೋದು ಕಷ್ಟ ಅನ್ನಿಸೋಕೆ ಇನ್ನೊಂದು ಕಾರಣ ಅಂದ್ರೆ ಕ್ಷಮಿಸೋ ಮೂಲಕ ನಮಗೆ ನಾವೇ ಮೋಸ ಮಾಡಿಕೊಳ್ತೀವಿ ಅನ್ನೋ ನಂಬಿಕೆ ಅಥವಾ ಕ್ಷಮಿಸಿಬಿಟ್ಟರೆ ಮತ್ತೊಮ್ಮೆ ನಮಗೆ ನೋವು ಮಾಡೋಕೆ ದಾರಿ ಮಾಡಿ ಕೊಡ್ತೀವಿ ಅನ್ನೋ ಭಯ ಕೂಡ ಇರಬಹುದು. ನೋವು ನಮ್ಮ ಮನಸ್ಸಲ್ಲಿ ಕೋಪ, ಹತಾಶೆಗಳಂಥ ನಕಾರಾತ್ಮಕ ಭಾವನೆಗಳನ್ನ ವರ್ಷಗಟ್ಟಲೆ ಉಳಿಸಿಬಿಡಬಹುದು. ನಾವು ಬಲಿಪಶುಗಳಾಗಿಬಿಟ್ಟಿದ್ದೇವೆ ಅನ್ನೋ ಮಟ್ಟಕ್ಕೆ ಹೋಗ್ಬೋದು. ಈ ರೀತಿಯ ಭಾವನೆಗಳು ನಮ್ಮನ್ನ ಕಾಪಾಡೋಲ್ಲ, ಬದಲಿಗೆ ಮತ್ತಷ್ಟು ಹಾನಿ ಮಾಡ್ತವೆ. ನೋವಿನಲ್ಲೇ ಭಾವನಾತ್ಮಕ ಜೈಲೊಂದನ್ನ ನಾವೇ ಸೃಷ್ಟಿ ಮಾಡಿಕೊಂಡು ಅದರಲ್ಲಿ ಬಂಧಿಗಳಾಗಿಬಿಡ್ತೀವಿ. ಅಂತ ಜಾಗದಲ್ಲಿ ನಾವು ಖುಷಿಯಾಗಿ ಬದುಕೋದು ಹೇಗೆ ಸಾಧ್ಯ ಹೇಳಿ!?

ಕ್ಷಮಿಸೋದು ಯಾಕೆ ಮುಖ್ಯ?

ಕ್ಷಮಿಸೋದಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧ ಇದೆ ಅಂತ ಎಷ್ಟೋ ವೈದ್ಯಕೀಯ ಸಂಶೋಧನೆಗಳಲ್ಲಿ ಸಾಬೀತಾಗಿದೆ. ನೋವು-ಹತಾಶೆಗಳು ನಿಮ್ಮ ದೇಹದ ಮೇಲೆ ಒತ್ತಡ ಹೇರುತ್ತೆ. ಪದೇ ಪದೇ ಕೋಪ ಮಾಡ್ಕೊಳೋದ್ರಿಂದ ನಿಮ್ಮ ರಕ್ತದೊತ್ತಡ ಮತ್ತು ಹೃದಯದ ಮೇಲಿನ ಒತ್ತಡ ಜಾಸ್ತಿ ಆಗುತ್ತೆ. ಈ ಬದಲಾವಣೆಗಳು ಖಿನ್ನತೆ, ಹೃದಯರೋಗ, ಮಧುಮೇಹದಂಥ ಖಾಯಿಲೆಗಳಿಗೆ ದಾರಿ ಮಾಡಿಕೊಡ್ಬಹುದು.

ಕ್ಷಮಿಸೋದ್ರಿಂದ ನಿಮ್ಮ ಒತ್ತಡ ಕಡಿಮೆ ಆಗುತ್ತೆ, ಖಿನ್ನತೆ ಇರೋದಿಲ್ಲ, ಸಂಬಂಧಗಳು ಚೆನ್ನಾಗಿರುತ್ತೆ, ಹೃದಯ ಆರೋಗ್ಯವಾಗಿರುತ್ತೆ, ಒಳ್ಳೆ ನಿದ್ರೆ ಬರುತ್ತೆ, ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಷಮಿಸೋದ್ರಿಂದ ನೀವು ಒಳಗಿಂದಲೂ ಹೊರಗಿಂದಲೂ ಗುಣಮುಖರಾಗ್ತೀರಿ. ಕ್ಷಮಿಸಲಿಲ್ಲ ಅಂದ್ರೆ ನಷ್ಟ ನಮಗೇ. ಒಳಗೆ ಇಟ್ಟುಕೊಂಡ ಭಾವನೆಗಳು ನಮ್ಮವರ ಜೊತೆ ಬೆರೆತು ಒಳ್ಳೆ ಸಂಬಂಧ ಬೆಳೆಸಿಕೊಳ್ಳೋಕೂ ಬಿಡೋದಿಲ್ಲ. ಕ್ಷಮಿಸಿದ್ರೆ ನೋವು, ಕೋಪ ಇದೆಲ್ಲ ಬಿಟ್ಟು ಈ ಕ್ಷಣದಲ್ಲಿ ಬದುಕೋಕೆ ಸಾಧ್ಯ ಆಗುತ್ತೆ.

ಕ್ಷಮೆಯಿಂದಾಗಿ ನಾವು ಸ್ವತಂತ್ರರಾಗ್ತೀವಿ. ಕ್ಷಮಿಸೋದಕ್ಕೆ ಧೈರ್ಯ ಬೇಕು. ಆದ್ರೆ ಧೈರ್ಯ ಮಾಡಿ ಕ್ಷಮಿಸಿಬಿಟ್ರೆ ಮನಸ್ಸಿಗೆ ಭಾವನಾತ್ಮಕ ಜೈಲಿನಿಂದ ಬಿಡುಗಡೆ ಸಿಕ್ಕತ್ತೆ, ಬದುಕಿನ ಹೊಸ ದಾರಿ ಹಿಡಿಯೋದು ಸಾಧ್ಯ ಆಗುತ್ತೆ.

ನಿಮ್ಮನ್ನು ನೋಯಿಸಿದವರನ್ನ ಕ್ಷಮಿಸೋದು ಹೇಗೆ?

1. ನಿಮ್ಮ ಭಾವನೆಗಳನ್ನ ಗುರುತಿಸಿ


ನೀವು ಈ ಕ್ಷಣ ಇಟ್ಟುಕೊಂಡಿರೋ ಭಾವನೆಗಳನ್ನ ಗುರುತಿಸಿ. ಯಾರನ್ನೂ ದೂಷಿಸಬೇಡಿ. ನಿಮ್ಮ ಭಾವನೆಗಳನ್ನ ಒಂದು ಕಡೆ ಬರೆಯೋದ್ರಿಂದ ನಿಮ್ಮ ಅನಿಸಿಕೆಗಳು ನಿಮ್ಗೆ ಸ್ಪಷ್ಟವಾಗಿ ಅರ್ಥ ಆಗುತ್ತೆ. ಮುಂದೆ, ಈ ಭಾವನೆಗಳನ್ನ ಹೊರಗೆ ಹಾಕೋಕೆ ಏನು ಮಾಡಬಹುದು ಅಂತ ಕೇಳ್ಕೊಳ್ಳಿ. ಒಂದು ವಾಕ್ ಹೋಗೋದು, ಪ್ರಕೃತಿಯಲ್ಲಿ ಕಾಲ ಕಳೆಯೋದು, ಸೃಜನಾತ್ಮಕ ಕೆಲಸ ಮಾಡೋದು (ಸಂಗೀತ, ನೃತ್ಯ, ಚಿತ್ರಕಲೆ ಮುಂತಾದವು), ಕ್ಷಮಿಸಿದ್ದೀರಿ ಅಂತ ಒಂದು ಪತ್ರ ಬರೆಯೋದು ಅಥವಾ ಆಪ್ತ ಸಲಹೆಗಾರರ ಹತ್ರ ಸಹಾಯ ಪಡೆಯೋದು.

2. ಹಳೇದನ್ನ ಹಿಂದೆ ಬಿಡಿ

https://images.fineartamerica.com/images/artworkimages/mediumlarge/1/dandelion-bess-hamiti.jpg
ಜೀವನದಲ್ಲಿ ಮುಂದುವರೆಯೋಕೆ ಹಳೇದೆಲ್ಲಾ ಮರೆತು ಈ ಕ್ಷಣದಲ್ಲಿ ಬದುಕಲೇಬೇಕು. ಆದರೆ ನಾವು ಹಳೇದೆಲ್ಲಾ ನಮ್ಮ ಜೊತೆಗೇ ಇಟ್ಟುಕೊಂಡಿರ್ತೀವಿ. ಆಗಾಗ ಹಳೇದೆಲ್ಲಾ ಬಿಟ್ಟು ಮುಂದುವರೆಯೋ ಅಭ್ಯಾಸ ಇಲ್ದೆ ಹೋದ್ರೆ ಭಾವನೆಗಳೆಲ್ಲ ಕಸದ ಥರ ಮನ್ಸಲ್ಲೇ ಉಳಿದುಬಿಡುತ್ತೆ. ಇದು ನಮ್ಮ ದೃಷ್ಟಿ ಮಂಕು ಮಾಡಿ ಖುಷಿಯಾಗಿ ಬದುಕೋಕೆ ಬಿಡೋದಿಲ್ಲ. ಸುಮ್ಮನೆ ಮೌನವಾಗಿ ಕೂತು ನಿಮ್ಮ ಉಸಿರಾಟ ಗಮನಿಸ್ತಾ ಅಥವಾ ಸುಮ್ಮನೆ ಹೊರಗೆ ಹೋಗಿ ಸುತ್ತಮುತ್ತಲಿನ ಸೌಂದರ್ಯ ಸವೀತಾ ಈ ಕ್ಷಣದಲ್ಲಿ ಬದುಕೋದನ್ನ ರೂಢಿಸ್ಕೊಳ್ಳಿ. ಈ ಕೋಪ ಇಲ್ಲದೆ ಹೋಗಿದ್ರೆ ನಾನು ಏನಾಗಿರ್ತಿದ್ದೆ? ನನ್ನ ಜೀವನ ಹೇಗೆ ಭಿನ್ನವಾಗಿರ್ತಿತ್ತು ಅಂತ ಯೋಚಿಸಿ.

3. ನಿಮ್ಮ ಶಕ್ತಿಯನ್ನು ಹಿಂಪಡೆಯಿರಿ


ನೀವು ಬಲಿಪಶು ಆಗಿರಬೇಕಿಲ್ಲ. ಕ್ಷಮಿಸೋದು ಒಂದು ಸಲದ ಅನುಭವ ಅಲ್ಲ. ಕ್ಷಮೆಯನ್ನ ನೀವು ಮತ್ತೆ ಮತ್ತೆ ಆರಿಸ್ಕೊಬೇಕು. ನಿಮ್ಮ ಒಪ್ಪಿಗೆ ಇಲ್ದೆ ಯಾರೂ ನಿಮ್ಮನ್ನ ನೋಯಿಸೋಕೆ ಆಗಲ್ಲ. ಕೋಪ ವಾಪಸ್ ಬಂದ್ರೆ “ನೀವು ಕ್ಷಮೆಯನ್ನ ಆರಿಸುತ್ತೀರಿ, ಪ್ರೀತಿಯನ್ನ ಆರಿಸುತ್ತೀರಿ, ನಿಮ್ಮ ಶಕ್ತಿಯನ್ನ ಹಿಂಪಡೆಯುತ್ತೀರಿ” ಅಂತ ನೆನಪಿಸಿಕೊಳ್ಳಿ. ಬದಲಾಗ್ಬೇಕು ಅನ್ನೋ ಆಸೆ ಒಳಗಿಂದ ಬರ್ಬೇಕು. ಪ್ರೀತಿ, ಸಂತಸ ತುಂಬಿದ ಒಳ್ಳೆ ಸಂಬಂಧಗಳಿಂದ ಕೂಡಿದ ಬದುಕು ನಿಮ್ಮ ಹಕ್ಕು ಅಂತ ನಂಬಿದಾಗ ಆ ಆಸೆ ಹುಟ್ಟುತ್ತೆ.

4. ಅನುಭವದಿಂದ ಪಾಠ ಕಲೀರಿ


ಎಲ್ಲ ಅನುಭವನೂ ಒಂದು ಕಲಿಕೆ. ಒಂದೊಂದು ಸಲ ನಾವು ಕಷ್ಟ ಎದುರಿಸ್ತೀವಿ. ಆದರೆ ಅದು ನಮ್ಮನ್ನ ಶಕ್ತಿವಂತರಾಗಿ ಮಾಡುತ್ತೆ. ನಮಗೆ ಅನ್ಯಾಯ ಆಗಿದೆ ಅಂತ ಅನ್ಸಿದ್ರೂ, ಅದು ನಮ್ಮ ಆಧ್ಯಾತ್ಮಿಕ ಬೆಳವಣಿಗೆಯ ಭಾಗ. ಕಷ್ಟಕಾಲ ನಮ್ಮನ್ನ ಬದಲಾಯಿಸಿ ಹೊಸ ದೃಷ್ಟಿಕೋನದಲ್ಲಿ ನೋಡೋಕೆ ಸಾಧ್ಯ ಆಗುತ್ತೆ. ಕಷ್ಟ ಅನುಭವಿಸಿ ಅದನ್ನೇ ಹೊಸ ಬದುಕು ಕಟ್ಟಿಕೊಳ್ಳೊಕೆ ಬಳಸಿಕೊಂಡವರ ಎಷ್ಟೋ ಉದಾಹರಣೆಗಳಿವೆ.

5. ಪ್ರೀತಿಸಿ


ಮೇಲಿನ ಕ್ರಮ ಎಲ್ಲ ಪಾಲಿಸಿದ ಮೇಲೆ ನಿಮ್ಮನ್ನು ನೋಯಿಸಿದವರನ್ನು ಪ್ರೀತಿಸಲು ಸಾಧ್ಯ ಆಗುತ್ತೆ. ಮೊದಮೊದಲು ಸ್ವಲ್ಪ ಕಷ್ಟ ಅನ್ಸುತ್ತೆ. ಆದರೆ ಇದು ತುಂಬಾ ಮುಖ್ಯ. ನಿಮ್ಮನ್ನು ನೋಯಿಸಿದವ್ರಿಗೆ ಕೇಡು ಬಯಸೋ ಬದಲು ಪ್ರೀತಿ ಕೊಡಿ. ಹೀಗೆ ಮಾಡಿದ್ರೆ ನಿಮ್ಮ ಮಧ್ಯ ಭಾವನಾತ್ಮಕ ಕಂದಕ ಇರೋದಿಲ್ಲ. ನಿಮ್ಮ ಸ್ವಾತಂತ್ರವನ್ನ ಸ್ವಚ್ಛಂದವಾಗಿ ಆಚರಿಸಬಹುದು. ಕ್ಷಮೆ ಅಂದರೆ ನಿಮ್ಮನ್ನೂ ನೀವು ಕ್ಷಮಿಸಿಕೊಬೇಕು..

ಆದರೆ, ಕ್ಷಮಿಸುವಾಗ ಆಗಿಹೋದದ್ದು ಮರಿಬೇಕು. ಆಗಿರೋದನ್ನ ಬದಲಿಸೋಕೆ ಆಗಲ್ಲ. ಬದಲಿಗೆ ಆಗಿದ್ದರಿಂದ ನಾವು ಕಲಿತ ಪಾಠ ಏನು ಅಂತ ಯೋಚನೆ ಮಾಡಬೇಕು. ಆ ಸ್ಪಷ್ಟತೆ ಬಂದಾಗ ನಾವು ಹಳೇದರಿಂದ ಬಿಡಿಸಿಕೊಂಡು ಮುಂದೆ ನೋಡೋಕೆ ಶುರು ಮಾಡ್ತೀವಿ.

ಈಗಲೇ ಕ್ಷಮಿಸಿ

ನಾವು ಕ್ಷಮೆಯನ್ನ ರೂಢಿಸಿಕೊಂಡಾಗ ನೆಮ್ಮದಿ, ಆಶಾಭಾವ, ಪ್ರೀತಿ, ಕೃತಜ್ಞತೆ, ಸಂತೋಷ- ಎಲ್ಲಾ ಜೊತೆಗೇ ಬರುತ್ತೆ. ನಾವು ಕ್ಷಮಿಸಿದಾಗ ನಮ್ಮ ಜೀವನದ ಮೇಲಿನ ಹಿಡಿತ ಹಿಂದಿರುಗುತ್ತದೆ. ಈ ಕ್ರಮಗಳನ್ನ ಪಾಲಿಸಿ, ಆನಂದದ ಜೀವನ ಸಾಗಿಸಿ.