http://images.catchnews.com/uploads/images/2015/07/09/indian-football.jpg

ನೀವು ಫುಟ್ಬಾಲ್ ನೋಡ್ತೀರಾ? ಆಡ್ತೀರಾ? ಎರಡೂ ಗಂಭೀರವಾಗಿ ಮಾಡೋದಾದ್ರೆ ನಿಮಗೆ ಇಲ್ಲಿ ಹೊಸದೇನೂ ಇಲ್ಲ. ಆದರೆ ಸಾಮಾನ್ಯವಾಗಿ ಕನ್ನಡಿಗರಿಗೆ ಇರೋ ತರಹ ನಿಮಗೂ ಫುಟ್ಬಾಲ್ಗೂ ದೂರ ಅನ್ನೋದಾದ್ರೆ ಇಲ್ಲಿ ನೀವು ಕಲಿಯೋದು ಬಹಳ ಇದೆ. ಯಾಕಂದ್ರೆ ಫುಟ್ಬಾಲು ಇಡೀ ಜೀವನದ ಬಗ್ಗೆ ಬಹಳ ಮುಖ್ಯವಾದ ಪಾಠಗಳ್ನ ಕಲಿಸುತ್ತೆ. ಯಾವ ಯಾವ ಪಾಠ ಅಂತೀರಾ? ಓದ್ತಾ ಹೋಗಿ…

1. ಜೀವನದಲ್ಲಿ ಸೋಲು ಒಪ್ಕೊಳ್ಳೋಕೆ ರೆಡಿ ಇರ್ಬೇಕು

ಸಾಕರ್ ಯಾವಾಗ್ಲೂ ನಿಮ್ಮ ಕಂಟ್ರೋಲ್ ನಲ್ಲಿ ಇದೆ ಅಂತ ಹೇಳಕ್ಕಾಗಲ್ಲ. ಒಂದೊಂದ್ಸಲ ಹ್ಯಾಟ್ರಿಕ್  ಹೊಡೆದ್ರೂ ಇನ್ನೊಂದು ಟೀಂ 4 ಗೋಲ್ ಹೊಡ್ದು ಗೆದ್ಬಿಡೋದು. ಟೀಂ ಅಲ್ಲಿರೋರೆಲ್ಲಾ ಚೆನ್ನಾಗಿ ಆಡಿ, ಯಾರೋ ಒಬ್ರು ಆಟ ಕೆಡ್ಸಿ ಸೆಲ್ಫ್ ಗೋಲ್ ಹೊಡೆದ್ರೆ, 1-0 ನಲ್ಲಿ ಆಟ ಸೋತಂಗೇ ಮತ್ತೆ!

2. ನಾವು ಜೀವನ ನಡೆಸಬೇಕು, ಜೀವನ ನಮ್ನಲ್ಲ

ಬಾಲ್ ಎಲ್ಲಿಗೆ ಬೇಕಾದರೂ ಹೋಗತ್ತೆ, ಅದ್ನ ಗೋಲ್ ಕಡೆ ಕಳ್ಸೋದು ಹೇಗೆ ಅಂತ ಪ್ಲಾನ್ ಮಾಡಿ ಅದಕ್ಕೆ ಸರ್ಯಾಗಿ ಆಡ್ಬೇಕು. ಬಾಲ್ ನಮ್ನ ಆಟ ಆಡಿಸಬಾರದು; ನಾವು ಬಾಲ್ನ ಆಡಿಸಬೇಕು. ಜೀವನ್ದಲ್ಲೂ ಅಷ್ಟೇ, ನಾವು ಅದನ್ನ ನಡೆಸಬೇಕೇ ಹೊರತು ಅದು ನಮ್ನಲ್ಲ.

3. ತೀರ್ಮಾನಗಳ್ನ ಸುಲಭವಾಗಿ ತೊಗೋಬೇಕಾದ್ರೆ ಮನಸು ಚುರುಕಾಗಿರಬೇಕು

ಸಾಕರ್ ಟೀಂ ಸೇರ್ಕೋಬೇಕು ಅಂದ್ರೆ ಮೊದ್ಲು ದಿನಕ್ಕೆ 5 ಮೈಲಿ ಓಡಿ ಅಂತಾರೆ. ಸರಿಯಾಗಿ ರೆಡಿ ಇದ್ರೆ ಮಾತ್ರ ಆಟ ಚೆನ್ನಾಗಾಗೋದು. ಬಾಲ್ ಯಾವಕಡೆ ಹೋಗತ್ತೆ, ಯಾವ ಕಡೆ ಬರತ್ತೆ, ಯಾರು ಯಾವ ಕಡೆ ಒದೀಬೋದು ಅಂತ ಮೊದ್ಲೇ ಅಂದಾಜು ಮಾಡೋ ಅಷ್ಟು ಚುರುಕಾಗಿರ್ಬೇಕು ನಾವು! ಲೈಫಲ್ಲೂ ಅಷ್ಟೇ, ಸರಿಯಾಗಿ ರೆಡಿ ಇದ್ದರೆ ತಾನೆ ಕೆಲಸಗಳು ಸುಲಭವಾಗಿ ಆಗೋದು?

4. ಏನೇ ಆದ್ರೂ ಏನೇ ಬಂದ್ರೂ ಎದುರಿಸಕ್ಕೆ ರೆಡಿ ಇರ್ಬೇಕು

ಫುಟ್ಬಾಲ್ ಆಡೋ ಆ 90 ನಿಮಿಷಗಳು ಜೀವನಾನೇ ಬದಲಾಯಿಸತ್ತೆ. 90 ನಿಮಿಷಗಳಲ್ಲಿ ಏನೇನಾಗಬಹ್ದು ಊಹೆ ಮಾಡಕ್ಕೂ ಆಗಲ್ಲ.

5. ಯಾವ್ದೇ ಕೆಲ್ಸಕ್ಕೂ ಅದರದೇ ಆದ ಘನತೆ, ಗೌರವ ಇರತ್ತೆ, ಅದನ್ನ ಗುರುತಿಕೊಳ್ಳಬೇಕು

ಫುಟ್ಬಾಲ್ ಅಂದ್ರೆ ಬರೀ ಬಾಲ್ನ ಒದೀತಿರೋದು ಅಂತ ಅದನ್ನ ಕಡೆಗಣಿಸಕ್ಕಾಗತ್ತಾ? ಬೇಕಾಬಿಟ್ಟಿ ಬಾಲು ಒದ್ದುಬಿಟ್ರೆ ಮ್ಯಾಚ್ ಗೆಲ್ಲಕ್ಕಾಗತ್ತಾ? ಅದಕ್ಕೇ ಹೇಳೋದು, ಯಾವ ಕೆಲಸ ಆದರೂ ಅದಕ್ಕೆ ಗೌರವ ಕೊಡಬೇಕು ಅಂತ.

6. ಸೋಲು ಗೆಲುವಿನ ಮುಂಚೆ ಇಡೋ ಹೆಜ್ಜೆ, ಅಷ್ಟೇ

ಒಂದೊಂದ್ಸಲ ಮ್ಯಾಚ್ಗೆ ಸೇರಿಸಿಕೊಳಲ್ಲ. ಆಗ ಅಯ್ಯೋ ಅಂತ ಬೇಜಾರ್ ಮಾಡ್ಕೋಬಾರ್ದು. ಸೇರ್ಕೊಳ್ಳೋ ವರೆಗೂ ಇನ್ನಷ್ಟು ಚೆನ್ನಾಗಿ ಅಭ್ಯಾಸ ಮಾಡಬೇಕು. ಆಗ ಸೇರಿಸಿಕೊಳ್ದೆ ಯಾಕಿರ್ತಾರೆ?

7. ಜೀವನದಲ್ಲಿ ಯಾವುದೇ ಮುಖ್ಯ ಕೆಲಸ ಮಾಡಬೇಕದರೆ ಅದಕ್ಕೆ ನಾಲ್ಕು ಜನರ ಸಹಕಾರ ಬೇಕು

ನಿಂ ಟೀಂ ನವರ ಬಗ್ಗೆ ನಂಬ್ಕೆ, ವಿಶ್ವಾಸ ಇರ್ಬೇಕು. ನಿಮ್ಮ ಟೀಂ ನವರ ಬಗ್ಗೆ ನಂಬಿಕೆ ಇರ್ಬೇಕು. ಇಲ್ಲದೆ ಹೋದ್ರೆ ಫುಟ್ಬಾಲ್ ಆಡದೆ ಇರೋದೇ ವಾಸಿ.

8. ನಮ್ಮ ಸಾಮರ್ಥ್ಯಗಳೇನು, ಕುಂದು-ಕೊರತೆಗಳೇನು ಅಂತ ನಮ್ಗೆ ಗೊತ್ತಿರಬೇಕು

ಇಲ್ಲದೆ ಹೋದರೆ ಆಟದಲ್ಲಿ ಗೆಲ್ಲಕ್ಕಾಗತ್ತಾ? ನ್ಮ್ಲ್ಲಿ ಏನಾದ್ರೂ ತಪ್ಪಿದ್ರೆ ತಿದ್ಕೋಬೇಕು. ಏನು ತಪ್ಪಿದೆ ಅಂತ ಗುರುತಿಸ್ಬೇಕಷ್ಟೆ.

9. ಜೀವನದಲ್ಲಿ ಗುರುವಿನ ಪಾತ್ರ ದೊಡ್ಡದು

ಸರಿಯಾದ್ ಕೋಚ್ ಇರೋದು ಫುಟ್ಬಾಲ್ ಆಟಕ್ಕೆ ತುಂಬಾ ಮುಖ್ಯ. ಅವರು ಹೇಳ್ಕೊಡೋದ್ನ ಶ್ರದ್ಧೆಯಿಂದ ಪಾಲಿಸ್ಬೇಕು. ಕೋಚು ಇಡೀ ಆಟ, ಇಡೀ ತಂಡವನ್ನ ಪೂರ್ತಿಯಾಗಿ ಗಮನಿಸ್ತಾ ಇರ್ತಾನೆ, ಗೆಲ್ಲಕ್ಕೆ ಬೇಕಾದ್ದನ್ನೆಲ್ಲ ಲೆಕ್ಕ ಹಾಕ್ತಿರ್ತಾನೆ. ಜೀವನದಲ್ಲೂ ಅಂಥವರೊಬ್ಬರಿದ್ದರೆ ಬಹಳ ಒಳ್ಳೇದು.

10. ಜೀವನದಲ್ಲಿ ನಾವು ಹಮ್ಮಿಕೊಳೋ ಯೋಜನೆಗಳ್ನ ಮುಗಿಸೋದು ಅಥವಾ ಮುಂದುವರೆಸೋದು ನಮ್ಮ ಕೈಯಲ್ಲಿರುತ್ತೆ

ಈ ಆಟ 90 ನಿಮಿಷಕ್ಕೆ ಮುಗ್ಯತ್ತೆ ಅನ್ನೋದು ಸರಿ ಅಲ್ಲ. ಕಡೇ ಗಳಿಗೇಲಿ ಏನೋ ಒಂದು ಆಗ್ಬೋದು. ಒಂದು ಬಾಲ್ ನೆಟ್ ಕಡೆ ಹೋಗ್ತಾ ಇದ್ರೆ, ಅದು ನಿಲ್ಲೋ ತಂಕ ಕಾಯ್ಬೇಕಾಗತ್ತೆ. ಆದ್ರೂ ರೆಫರಿಗಳು ತುಂಬಾ ಹೊತ್ತು ಆಟ ಎಳೀದೇ ಇರೋ ತರ ನೋಡ್ಕೋತಾರೆ. ಕಡೇ ಕ್ಷಣದ ತಂಕಾನೂ ಕುತೂಹಲ ಉಳಿಸ್ಕೊಳೋ ಆಟ ಇದು.

11. ಬೇಕಾದಾಗ ನಿಯಮಗಳ್ನ ಮೀರಬೇಕು

‘ಹ್ಯಾಂಡ್ ಬಾಲ್’ ಅರ್ಜೆಂಟೀನಾ ದೇಶ ವಿಶ್ವಕಪ್ ಗೆಲ್ಲೋ ಹಾಗೆ ಮಾಡ್ತು. ರೊನಾಲ್ಡೋ, ರಾಬ್ಬೆನ್, ನೈಮರ್ ಅಂತಾ ಮಹಾಮಹಾ ಆಟಗಾರರೇ ಒಂದೊಂದ್ಸಲ ಗೆಲ್ಲೋಕೆ ಒಂದಾದ್ರೂ ಅಡ್ಡಹೆಜ್ಜೆ ಇಡ್ತಾರೆ…ಒಂದೊಂದ್ಸಲ ನ್ಯಾಯವಾಗಿ ಆಡಿದ್ರೆ ಏನೂ ಗೆಲ್ಲಕ್ಕಾಗಲ್ಲ. ಫುಟ್ಬಾಲ್ ನಲ್ಲೂ ಅಷ್ಟೇ, ಜೀವನದಾಟದಲ್ಲೂ ಅಷ್ಟೇ, ಆಟಗಾರ ನೀರ್ ತರ ಹರ್ಕೊಂಡು ಹೋಗ್ತಾ ಇರ್ಬೇಕು. ನಿಲ್ಲಲೇ ಬಾರ್ದು.

12. ಕೆಲಸ ಮಾಡುವಾಗ ಮನಸ್ಸು ಒಂದೇ ಒಂದು ಕ್ಷಣನೂ ಎಚ್ಚರ ತಪ್ಪಬಾರದು

ಗೋಲ್ ಹೋಗ್ಲಿಲ್ಲ ಅಂತ ಕೋಪ ಮಾಡ್ಕೋಳೋದು, ಅಳೋದು, ತಾಳ್ಮೆ ಕಳ್ಕೊಳ್ಳೋದು ಮಾಡಿದ್ರೆ ಆಟದ ಮೇಲೆ ಗಮನ ಕಡ್ಮೆ ಆಗತ್ತೆ. ಮನಸ್ಸು ಒಂದೇ ಒಂದು ಕ್ಷಣ ಗಮನ ತಪ್ಪಿದ್ರೂ, ಹಳ್ಳಕ್ಕೆ ಬೀಳೋದು ಗ್ಯಾರೆಂಟಿ!  ಕೋಪ, ಅಳು, ಸಂತೋಷ ಯಾವ್ದೂ ಮುಖದಲ್ಲಿ ತೋರಿಸಿದಂಗೆ ಆಡ್ಬೇಕು

13. ಹೆದರಿಕೊಂಡ್ರೆ ಎಡವಟ್ಟು

ಹೆದರಿದ್ರೆ ಗಮನ ಬೇರೆ ಕಡೆ ಹೋಗತ್ತೆ. ನನ್ನಿಂದ ತಪ್ಪಾಗತ್ತೇನೋ ಅಂತ ಹೆದರ್ಕೊಂಡು ಆಡಿದ್ರೆ, ತಪ್ಪು ಆಗೇ ಆಗತ್ತೆ; ಬದ್ಲಿಗೆ ನನ್ನ ಕೆಲ್ಸ ನಾನು ಮಾಡ್ತೀನಿ. ಆಗೋದಾಗ್ಲಿ ಅಂತ ಧೈರ್ಯವಾಗಿ ಮುಂದೆ ನುಗ್ಗಿದ್ರೆ, ಗೆಲ್ವು ನಮ್ಮನ್ನೇ ಹುಡ್ಕೊಂಡು ಬರತ್ತೆ.