http://s1.dmcdn.net/UT0Sx/1280x720-c06.jpg

ಪ್ರೀತಿ ಪ್ರೇಮದ್ ವಿಚಾರ್ದಲ್ಲಿ ಇತ್ತೀಚೆಗಂತೂ ಸುಮಾರು ಜನಕ್ಕೆ ಕಹಿ ಅನುಭವಗಳಾಗ್ತಿದೆ. ಆದ್ರೆ ಎಡವೋದು ಎಲ್ಲಿ ಗೊತ್ತಾ? ಪ್ರೀತಿಯಲ್ಲಿ ಮೋಸ ಹೋದಾಗಲ್ಲ, ನಿಜವಾಗ್ಲೂ ಪ್ರೀತ್ಸೋರು ಸಿಕ್ಕಾಗ ಅವ್ರನ್ನ ತಪ್ಪಾಗಿ ಅಂದಾಜು ಮಾಡ್ದಾಗ. ಒಂದ್ಸಲ ಯಾರೋ ಕೈ ಕೊಟ್ರು ಅಂತ ಪ್ರಪಂಚದ್ ಎಲ್ಲಾ ಹುಡುಗ್ರು, ಹುಡುಗೀರೂ ಒಂದೇ ಅನ್ನೋ ನಿರ್ಧಾರ ಮಾಡಕ್ಕಾಗಲ್ಲ. ಇನ್ನು, ಹೊಸದಾಗಿ ಪ್ರೀತಿ ಆದಾಗ, ಅದನ್ನ ಅರ್ಧ ಭಯ, ಅರ್ಧ ಅನುಮಾನದಲ್ಲೇ ಕಳ್ಕೊಳೋ ಸಾಧ್ಯತೆನೂ ಇರತ್ತೆ. ಹಾಗೆ ಆತಂಕ ಪಡೋದು, ಜಾಗರೂಕತೆ ವಹಿಸೋದು ತಪ್ಪಲ್ಲ. ಆದ್ರೆ ಎಲ್ಲಿ ಹಿಂದೆ ಆದಂಗೇ ಈಗ್ಲೂ ಆಗೋಗತ್ತೋ ಅನ್ನೋ ನೆಗೆಟಿವ್ ಆಲೋಚನೆಗಳು ಬೇಡ. ಇಷ್ಟಕ್ಕೂ ನಮ್ಮನ್ನ ನಿಜವಾಗ್ಲೂ ಪ್ರೀತ್ಸೋರು ಸಿಕ್ಕಾಗ, ಪ್ರೀತಿ ಪ್ರೇಮದ್ ಬಗ್ಗೆ ನಮಗಿರೋ ತಪ್ಪು ಕಲ್ಪನೆಗಳ್ನ ಕಿತ್ತು ಬಿಸಾಕ್ತಾರೆ. ನಾವು ಪ್ರತೀ ಸಲ ಅವ್ರಿಂದ ನೆಗೆಟಿವ್ ಉತ್ತರ ಎದುರು ನೋಡ್ತಿದ್ರೂ, ಅದನ್ನ ಸುಳ್ಳು ಮಾಡಿ, ಜೀವನದಲ್ಲಿ ಪಾಸಿಟಿವ್ ಶಕ್ತಿ ತುಂಬ್ತಾರೆ. ಅಂಥ ಸಂದರ್ಭಗಳು ಯಾವ್ಯಾವ್ದು ಅಂತ ಅಂತೆಕಂತೆ ನಿಮ್ಗೋಸ್ಕರ ತಿಳುಸ್ಕೊಡ್ತಿದೆ. ಓದಿ, ಸಿಕ್ಕಿರೋ ಎರಡನೇ ಅವಕಾಶನ ಯಾವ್ ಕಾರಣಕ್ಕೂ ಮಿಸ್ ಮಾಡ್ಕೊಬೇಡಿ.

1.  ನೀವು ಅವರ ನಡೆ ನುಡಿನ ಪ್ರಶ್ನೆ ಮಾಡ್ತಿರ ಆದ್ರೆ ಮನಸ್ಸಿಗೆ ಅದು ಬೇಕಿರಲ್ಲ

ಈ ಹಿಂದೆ ಆಗಿರೋ ಕೆಟ್ಟ ಅನುಭವದಿಂದ, ಎಲ್ಲಾರೂ ಒಂದೇ ಅನ್ನೋ ಭಾವನೆ ಬೆಳುಸ್ಕೊಂಡು, ನನ್ನನ್ನ ಗೆಲ್ಲೋಕೆ ಸುಳ್ಳು ಹೇಳ್ತಿರ್ಬೋದು, ಮೋಸ ಮಾಡ್ತಿರ್ಬೋದು ಅಂತ ಅನುಮಾನ ಪಡ್ತೀರ. ಮನಸ್ಸು ಎಷ್ಟೇ ಬೇಡ ಬೇಡ ಅಂದ್ರೂ ಬುದ್ಧಿ ಮಾತು ಕೇಳಿ ಅವರನ್ನ ಪ್ರಶ್ನೆ ಮಾಡ್ತೀರ. ಆದ್ರೆ ಕಡೇಗೆ ನೀವು ಅಂದುಕೊಂಡಿರೋ ಥರ ಅಲ್ಲ ಅವರು ಅನ್ನೋದು ಮನದಟ್ಟಾಗತ್ತೆ.

2.  ಅವರು ನಿಮ್ಮನ್ನ ನಿರಾಶೆ ಮಾಡ್ಬೋದು ಅಂತ ಕಾಯ್ತಿರ್ತೀರ ಆದ್ರೆ ಅಂಥ ಸಂದರ್ಭ ಬರೋದೇ ಇಲ್ಲ

ಈ ಹಿಂದೆ ನಿಮ್ಗೆ ಹುಡುಗನಿಂದ ಬರೀ ನಿರಾಶೆ ಆಗಿರ್ಬೋದು. ಛೆ ಯಾವ್ದಕ್ಕೂ ಆಸೆ ಪಡಬಾರ್ದಪ್ಪ. ಯಾರಿಂದನೂ ಯಾವುದೇ ಥರದ್ ನಿರೀಕ್ಷೆ ಇಟ್ಕೊಬಾರ್ದು. ನನ್ ಹಣೆಬರಹ ಚೆನ್ನಾಗಿಲ್ಲ. ಸುಮ್ನೆ ನಿರಾಶೆ ಆಗತ್ತೆ ಅನ್ನೋದು ನಿಮ್ ತಲೆನಲ್ಲಿ ಕೂತುಬಿಟ್ಟಿರತ್ತೆ. ಹಾಗಾಗಿ ನಿಜ್ವಾಗ್ಲೂ ಪ್ರೀತ್ಸೋ ಹುಡುಗ ಸಿಕ್ಕಾಗ್ಲೂ ಆತನಿಂದ ಯಾವ್ ಖುಷಿನೂ ಎದುರು ನೋಡಲ್ಲ. ಆದ್ರೆ ನೀವು ಅಂದ್ಕೊಂಡಂಗೆ ಆಗಲ್ಲ. ಯಾಕಂದ್ರೆ ಈ ಸಲ ಮನಸ್ಸು ಮುದುರೋ ಅಂಥ ಯಾವ್ ಘಟನೆನೂ ಆಗಲ್ಲ. ಅಷ್ಟಕ್ಕೂ ನೀವು ಬಯಸಿದ್ದಕ್ಕಿಂತನೂ ಹೆಚ್ಚಾಗೇ ಪ್ರೀತಿ, ವಿಶ್ವಾಸ ಸಿಗತ್ತೆ.

footage.framepool.com

3.  ಆತನ ಮಾತಿನ ಮೇಲೆ ನಿಮಗೆ ನಂಬಿಕೆ ಬರಲ್ಲ. ಆದ್ರೆ ಆತ ಯಾವತ್ತೂ ಮಾತು ತಪ್ಪಲ್ಲ

ಮಾತು ಕೊಡೋದೇ ಮುರಿಯಕ್ಕೆ ಅನ್ನೋ ವ್ಯಕ್ತಿ ಜೊತೆ ಆದ ಅನುಭವದಿಂದ ಬೇಸತ್ತು, ಹುಡುಗರೆಲ್ಲಾ ಹೀಗೇನೇ. ಸುಮ್ನೆ ಬಿಲ್ಡಪ್ ತೊಗೊಳಕ್ಕೆ, ಬುಟ್ಟಿಗ್ ಹಾಕ್ಕೊಳಕ್ಕೆ ಮಾತು ಕೊಡೋದು, ಆಣೆ ಪ್ರಮಾಣ ಹಾಕೋದು ಇವೆಲ್ಲಾ ಮಾಡ್ತಾರೆ ಅನ್ಸತ್ತೆ. ಆದ್ರೆ ಯಾವತ್ತೂ ಆ ಕ್ಷಣ ಬರಲ್ಲ. ಈ ಹುಡುಗ ನಿಮಗೆ ಕೊಟ್ಟ ಮಾತು ಉಳುಸ್ಕೊಳಕ್ಕೆ ಯಾವ್ ತ್ಯಾಗಕ್ಕೆ ಬೇಕಾದ್ರೂ ಸಿದ್ದವಾಗಿರ್ತಾನೆ.

4.  ಪ್ರೀತಿ ಮೇಲೆ ನಂಬಿಕೆ ಕಳ್ಕೊಂಡಿರೋ ನಿಮ್ಗೆ ಆತ ಟೈಂ ಪಾಸ್ ಆಗಿರ್ಬೊದು ಆದ್ರೆ ಆತನಿಗೆ ನೀವಲ್ಲ

ಯಾರನ್ನಾದ್ರೂ ತುಂಬಾ ಗಾಢವಾಗಿ, ಪ್ರಾಮಾಣಿಕವಾಗಿ ಪ್ರೀತ್ಸಿ ಮೋಸ ಹೋದಾಗ, ಸೇಡಿನ ಭಾವ ತಂತಾನೇ ಮನಸ್ಸಲ್ಲಿ ತುಂಬತ್ತೆ. ಇನ್ಮೇಲೆ ಯಾವ್ ಪ್ರೀತಿ ಗೀತಿನೂ ಬೇಡ. ಸಿಕ್ಕ ಸಿಕ್ಕ ಹುಡುಗರ ಜೊತೇಗೆಲ್ಲಾ ಆಟ ಆಡ್ಬೇಕು, ಟೈಂ ಪಾಸ್ ಮಾಡ್ಬೇಕು ಅನ್ನೋ ನೆಗೆಟಿವ್ ಆಲೋಚನೆ ಬರತ್ತೆ. ಇದು ತಪ್ಪು. ಆ ಉದ್ದೇಶದಿಂದನೇ ಹೊಸ ಪ್ರೀತಿಯನ್ನ ನೀವು ಒಪ್ಕೊಂಡಿದ್ರೂ, ಈ ಹುಡುಗ ಮಾತ್ರ ನಿಮ್ ಬಗ್ಗೆ ಫುಲ್ ಸೀರಿಯಸ್ಸಾಗಿರ್ತಾನೆ. ಜೊತೆಗೆ ಪಾಪ ನೀವು ಆತನ ಜೊತೆ ಆಟ ಆಡ್ತಿದಿರ ಅನ್ನೋದನ್ನೂ ಗಮನಿಸದೇ ಇರೋವಷ್ಟು ಮುಗ್ಧನಾಗಿರ್ತಾನೆ.

ak2.picdn.net

5.  ನಿಮ್ಮ ಹಿಂದಿನ ಕೆಟ್ಟ ಅನುಭವದ ಸತ್ಯ ತಿಳ್ಕೊಳೋವಷ್ಟು ಈತ ಒಳ್ಳೆಯೋನು, ನಿಮ್ಮನ್ನ ನೋಯಿಸೋ ಉದ್ದೇಶ ಇರಲ್ಲ

ಒಳ್ಳೆ ವ್ಯಕ್ತಿಯ ಬೆಲೆ ನಮಗೆ ಗೊತ್ತಾಗೋಕ್ಕೆ ಒಂದು ವಿಧಾನ ಅಂದ್ರೆ ಈಗಾಗ್ಲೇ ಕೆಟ್ಟ ವ್ಯಕ್ತಿ ಜೊತೆ ಆಗಿರೋ ಅನುಭವ. ಈ ಹೊಸ ಹುಡುಗ, ಹೆಜ್ಜೆ ಹೆಜ್ಜೆಗೂ ಆತನಿಗೆ ನಿಮ್ಮ ಬಗ್ಗೆ ಇರೋ ಪ್ರೀತಿ, ಕಾಳಜಿ ಮನವರಿಕೆ ಮಾಡ್ಕೊಡ್ತನೇ ಇರ್ತಾನೆ. ಯಾವತ್ತೂ ಕೆಟ್ಟ ವಿಚಾರಕ್ಕೆ ಕಣ್ಣೀರು ಹಾಕ್ಸಲ್ಲ. ಇಂಥದ್ದೆಲ್ಲಾ ನೋಡ್ದಾಗ ಯಾವ್ ಕಾರಣಕ್ಕೂ ಈತನ್ನ ಕಳ್ಕೊಬಾರ್ದು ಅಂತ ಸಂಕಲ್ಪ ಮಾಡ್ತಿರ. ಹಿಂದೆ ನಿಮ್ಮನ್ನ ತೃಣವಾಗಿ ನಡೆಸಿಕೊಂಡೋನ ಜೊತೆ ಹೋಲಿಕೆ ಮಾಡಿ, ಈತನ ಬಗ್ಗೆ ಗೌರವ ಭಾವನೆ ಇಟ್ಕೊತಿರ. ಜೊತೆಗೆ ಎಲ್ಲಾ ಹುಡುಗರೂ ಒಂದೇ ಅಲ್ಲ ಅನ್ನೋ ಸತ್ಯನೂ ತಿಳ್ಕೊತಿರ.

6.  ನೀವು ಎದುರು ನೋಡ್ದೇ ಇದ್ರೂ ತಾನಾಗೇ ಕ್ಷಮೆ ಕೇಳ್ತಾನೆ, ಯಾವತ್ತೂ ಸಣ್ಣತನ ತೋರ್ಸಲ್ಲ

ಈ ಹಿಂದೆ ನಿಮ್ ಜೀವನದಲ್ಲಿ ಬಂದು ಹೋಗಿರೋ ಹುಡುಗ, ಕ್ಷಮೆ ಕೇಳೋದು ಅಂದ್ರೆ ಮರ್ಯಾದೆ ಹೋಗೋ ಹಾಗೆ ಅಂದ್ಕೊಂಡು, ನಿಮ್ಮನ್ನ ನೋಯಿಸಿದ ಯಾವ್ ಸಂದರ್ಭದಲ್ಲೂ ಕ್ಷಮೆ ಕೇಳಿರಲ್ಲ. ಕ್ಷಮೆ ಬಿಟ್ಟಾಕಿ, ತನ್ನ ತಪ್ಪು ಒಪ್ಕೊಂಡು ಸಮಾದಾನನೂ ಮಾಡಿರಲ್ಲ. ಆದ್ರೆ ಈ ಹುಡುಗ ಹಾಗಲ್ಲ. ತನ್ನಿಂದ ತಪ್ಪಾಗಿದೆ ಅಂತ ಗೊತ್ತಾದ್ರೆ ಯಾವ್ ಬಿಗುಮಾನನೂ ಇಲ್ದೇ ಕ್ಷಮೆ ಕೇಳಿ ದೊಡ್ಡತನ ತೋರುಸ್ತಾನೆ. ಆಗ ಆತನಿಂದಾದ ನೋವೆಲ್ಲಾ ಚಿಟಿಕೆ ಹೊಡೆದಷ್ಟೇ ಬೇಗ ಮಾಯ ಆಗೋಗತ್ತೆ. ಅದ್ರಲ್ಲೂ ನೀವು ಎದುರು ನೋಡ್ದೇ ಇದ್ದಾಗ ಕ್ಷಮೆ ಕೇಳಿದ್ರೆ ಆತನ ಮೇಲೆ ಇನ್ನೂ ನಂಬಿಕೆ ಜಾಸ್ತಿಯಾಗತ್ತೆ.

images.indianexpress.com

7.  ನಿಮಗಿಷ್ಟವಾದ ಕೆಲಸಾನೇ ಮಾಡು ಅಂತಾರೆ, ತಾಳ್ಮೆ ಕಳ್ಕೊಳಲ್ಲ

ಯಾವತ್ತೂ ಅದು ಮಾಡು, ಇದು ಮಾಡು ಅಂತ, ನೀನ್ ಹೀಗೇ ಇರ್ಬೇಕು, ಹಾಗೇ ಇರ್ಬೇಕು ಅಂತ ತನ್ನ ಇಷ್ಟ ಕಷ್ಟಗಳ್ನ ನಿಮ್ಮ ಮೇಲೆ ಹೇರಲ್ಲ. ಬದಲಿಗೆ ನಿಮ್ಮ ಇಷ್ಟದ ಕೆಲ್ಸದ ಕಡೆ ಜಾಸ್ತಿ ಗಮನ ಕೊಡ್ತಾರೆ. ನಿಮ್ಮ ಮನಸ್ಸಿಗೆ ಕಷ್ಟ ಅನ್ಸೋ ಕೆಲ್ಸನ ಬಿಲ್ಕುಲ್ ಮಾಡ್ಸಲ್ಲ. ಜೊತೆಗೆ ಸಾಧ್ಯವಾದಷ್ಟೂ ತಾಳ್ಮೆಯಿಂದ ಇರ್ತಾರೆ. ನಿಮ್ಮ ಮಾತನ್ನ, ಬೇಕು ಬೇಡಗಳ್ನ ತಾಳ್ಮೆಯಿಂದ ಕೇಳುಸ್ಕೊಂಡು ಅದನ್ನ ನೆರವೇರಿಸಕ್ಕೆ ಪ್ರಯತ್ನ ಪಡ್ತಾರೆ. ಇಂಥ ಗುಣ ಈ ಹಿಂದೆ ನಿಮ್ಮ ಅನುಭವಕ್ಕೆ ಯಾವತ್ತೂ ಬಂದಿರಲ್ಲ. ಬರೀ ಇನ್ಯಾರದೋ ಇಷ್ಟದ ಪ್ರಕಾರನೇ ಬದುಕಿರ್ತೀರ. ಈಗ ನಿಮ್ಮ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡೋ ಸಂಗಾತಿ ಸಿಕ್ಕಿರ್ತಾರೆ. 

8.  ಎಷ್ಟೇ ದೊಡ್ಡ ಜಗಳ ಆಡಿದ್ರೂ ನಿಮ್ ಹುಡುಗ ಇತ್ಯರ್ಥ ಮಾಡ್ದೇ ಬಿಡಲ್ಲ

ಪ್ರೀತಿ ಪ್ರೇಮದ್ ವಿಚಾರ್ದಲ್ಲಿ ಆಗೋ ಎಲ್ಲಾ ಜಗಳ, ಮನಸ್ತಾಪಕ್ಕೂ ಸಾಕ್ಷಿಯಾಗೋದು ತಲೆ ದಿಂಬು. ಜಗಳ ಆದಮೇಲೆ ಓಡ್ ಬಂದು, ರೂಂ ಬಾಗಿಲು ಹಾಕ್ಕೊಂಡು, ಹಾಸಿಗೆ ಮೇಲ್ ಬಿದ್ಕೊಂಡು, ಗಳಗಳ ಅಂತ ಅಳೋದು ಸಾಮಾನ್ಯ. ಅಲ್ಲಿಗೆ ಆ ದಿನಾ ಪೂರ್ತಿ ಢಂ. ಮೂಡು ಹಾಳು. ಇದು ಈ ಮುಂಚೆ ಇದ್ದ ಸಂಬಂಧದಲ್ಲಿ ಆಗಿರೋ ಅನುಭವ ಇರ್ಬೋದು ಕಣ್ರಿ. ಆದ್ರೆ ಈಗ ಕಥೆ ಬೇರೆ. ನಿಜವಾಗ್ಲೂ ಪ್ರೀತ್ಸೋ ಜೋಡಿ ಜಗಳ ಮಾಡಲ್ಲ ಅಂತಲ್ಲ. ಆದ್ರೆ ಅದೇ ಗುಂಗಲ್ಲಿ ತುಂಬಾ ಹೊತ್ತು ಇರಲ್ಲ. ಎಷ್ಟೇ ಭಯಂಕರವಾಗಿ ಜಗಳ ಮಾಡಿದ್ರೂ ಮಲಗೋ ಮೊದ್ಲು ಈ ಹುಡುಗ ಎಲ್ಲಾ ವಿಷ್ಯ ಬಗೆಹರಿಸ್ತಾನೆ. ಆಗ ನಿರಾಳವಾಗಿ ನಿದ್ದೆ ಹತ್ತತ್ತೆ.

embedwistia-a.akamaihd.net

9.  ನೀವು ದುಡುಕಿ ನಡ್ಕೊಳೋ ರೀತಿಗಳಿಗೆ ಯಾವತ್ತೂ ತಿರುಗಿಸಿ ಉತ್ತರ ಕೊಡಲ್ಲ

ನಿಮ್ಗೂ ಗೊತ್ತಿರತ್ತೆ ಕೆಲವು ಸಲ ಸಿಲ್ಲಿ ಕಾರಣಗಳಿಗೆ ಈ ಹುಡುಗನ ಮನಸ್ಸು ನೋಯಿಸ್ತಿರ. ಆದ್ಮೇಲೆ ನೀವೇ ಕ್ಷಮೆ ಕೇಳ್ಬೇಕು. ಆತನನ್ನ ಸಮಾದಾನ ಮಾಡ್ಬೇಕು. ಆದ್ರೆ ಆಶ್ಚರ್ಯ ಅನ್ಸೋದು ಇಲ್ಲೇ. ಏನೂ ಆಗೇ ಇಲ್ಲ ಅನ್ನೋಹಾಗೆ ಆತ ನಿಮ್ ಜೊತೆ ಚೆನ್ನಾಗೇ ಇರ್ತಾನೆ. ನೀವ್ ಕೊಡೋ ಯಾವ ದುಖಃ, ನೋವು ಬೇಕೂಂತ ಮಾಡಿದ್ದಲ್ಲ ಅಂತ ಅರ್ಥ ಮಾಡ್ಕೊಳೋವಷ್ಟು ಪ್ರಬುದ್ದವಾಗಿ ಯೋಚ್ನೆ ಮಾಡ್ತಾನೆ. ಜೊತೆಗೆ ಅದನ್ನ ಮನಸ್ಸಿನಲ್ಲಿ ಇಟ್ಕೊಂಡು ಇನ್ಯಾವತ್ತೋ ಹಿಯಾಳಿಸಿ ಮಾತಾಡದು, ಅದನ್ನೇ ನೆಪ ಮಾಡ್ಕೊಂಡು ನಿಮ್ಮನ್ನ ಹಿಡಿತದಲ್ಲಿ ಇಟ್ಕೊಳಕ್ಕೆ ನೋಡದು ಇವೆಲ್ಲಾ ಮಾಡಲ್ಲ. ಒಟ್ಟಾರೆ ಎಷ್ಟೇ ರೇಗಾಡಿದ್ರೂ, ಬೈದರೂ ನಿಮ್ಮಿಂದ ದೂರ ಹೋಗಲ್ಲ.

10.  ಆತ ಸುಳ್ಳು ಹೇಳ್ಬೋದು ಅನ್ನೋ ಭಯ ನಿಮ್ಗೆ ಇರ್ಬೋದು ಆದ್ರೆ ಯಾವತ್ತೂ ಹಾಗಾಗಲ್ಲ

ಈ ಹಿಂದೆ ನಿಮ್ ಜೀವನ್ದಲ್ಲಿ ಬಂದಿರೋ ಹುಡುಗ, ಸುಮಾರು ಸಲ ಸುಳ್ಳು ಹೇಳಿ ನಿಮ್ಮಿಂದ ತನ್ ಕೆಲ್ಸ ಸಾಧಿಸಿಕೊಂಡಿರಬೋದು. ಅದಿನ್ನೂ ಮರೆತಿರಲ್ಲ ನೀವು. ಈಗ ಈ ಹುಡುಗನೂ ಹಾಗೇ ಮಾಡ್ಬೋದು ಅಂತ ಎದುರುನೋಡ್ತಿರ್ತೀರ. ಅದೃಷ್ಟ ಅಂದ್ರೆ ಇದು. ಈತ ಯಾವತ್ತೂ ಸುಳ್ಳು ಹೇಳಲ್ಲ. ಬದಲಿಗೆ ನಿಮ್ಮ ಮೇಲಿರೋ ಗೌರವದಿಂದ ಸತ್ಯ ಹೇಳಿ, ಬಂದಿದ್ದನ್ನ ಎದುರಿಸಕ್ಕೆ ಸಿದ್ದವಾಗಿರ್ತಾನೆ. ಎಂಥಾ ಸಂದರ್ಭದಲ್ಲೂ ಪ್ರಾಮಾಣಿಕತೆ ಬಿಟ್ಕೊಡಲ್ಲ.www.muslimmarriageadvice.com/

11.  ಇಂಥ ಹುಡುಗನಿಂದ ದೂರ ಆಗಕ್ಕೆ ನೀವು ಯಾವತ್ತೂ ತಯಾರಿರಲ್ಲ

ಈಗ ನಿಜವಾದ್ ಪ್ರೀತಿ ಅನುಭವ ನಿಮ್ಗೆ ಗೊತ್ತಾಗಿರತ್ತೆ. ಇಷ್ಟು ದಿನ ಬರೀ ಹುಡುಗಾಟ ಆಡಿರೋರ್ನ ಮಾತ್ರ ನೋಡಿರ್ತೀರ. ಅವ್ರಿಂದ ದೂರ ಆದಾಗ, ಮೋಸ ಹೋಗಿದ್ದಕ್ಕೆ ಬೇಜಾರಾಗಿರತ್ತೇ ಹೊರತು, ಅವರನ್ನ ಕಳ್ಕೊಂಡಿದ್ದಕ್ಕಲ್ಲ. ಆದ್ರೆ ಈ ಸಲ ಸಿಕ್ಕಿರೋ ಈ ಅಪರೂಪದ ಹುಡುಗನ್ನ ಬಿಟ್ಟು ಬದುಕೋ ಕಲ್ಪನೆನೇ ನಿಮ್ಗೆ ಭಯ ತರತ್ತೆ. ಯಾವ್ ಕಾರಣಕ್ಕೂ ಈತನನ್ನ ಕಳ್ಕೊಬಾರ್ದು ಅಂತ ಅನ್ಸಕ್ಕೆ ಶುರುವಾಗತ್ತೆ. ಹಾಗಾಗಿ ನೀವೂ ನಿಮ್ಮ ನಡವಳಿಕೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡ್ಕೊತೀರ. ಹಾಗೆ ತುಂಬಾ ಸೀರಿಯಸ್ಸಾಗಿ ಅನ್ನಿಸ್ತಿದೆ ಅಂದ್ರೆ ಅನುಮಾನನೇ ಬೇಡ, ಈತನೇ ನಿಮ್ ಜೀವನದ ಸಂಗಾತಿ ಆಗೋಕ್ಕೆ ತಕ್ಕವನು.

ಪ್ರೀತಿ ಯಾವ್ ವಯಸ್ಸಿನಲ್ಲಿ ಬೇಕಾದ್ರೂ ಆಗ್ಬೋದು. ಆದ್ರೆ ಆಗೋ ಎಲ್ಲಾ ಪ್ರೀತಿಲೂ ಪ್ರಾಮಾಣಿಕತೆ ಇರತ್ತೆ ಅಂತ ಹೇಳಕ್ಕಾಗಲ್ಲ ಕಣ್ರಿ. ಒಂದಷ್ಟು ನೋವಾಗ್ಬೋದು. ಆದ್ರೆ ನಿಜವಾದ್ ಪ್ರೀತಿ ಸಿಕ್ಕಾಗ ಅದನ್ನ ಕಡೆಗಣಿಸದೇ ಗಟ್ಟಿಯಾಗಿ ಹಿಡ್ಕೊಂಡ್ಬಿಟ್ರೆ, ನಿಮ್ಮಷ್ಟು ಅದೃಷ್ಟವಂತರು ಇನ್ಯಾರೂ ಇರಲ್ಲ.