https://ak3.picdn.net/shutterstock/videos/9892820/thumb/1.jpg

ಯಾವಾಗರ ನಿಮಗೂ ಹಿಂಗ ಆಗಿರ್ ಬೌದು. ಪರಚೆ ಇಲ್ಲದೌರ ಯಾರನ್ನೋ ನೋಡಿರ್ತೀರಿ ಆದರೂ ಔರ್ ನಿಮಗ ಗೊತ್ತದಾರಾ, ಮದಲ್ ಯಾವಾಗೋ ಬೆಟ್ಯಾಗೆವಿ, ಮಾತಾಡ್ಸೇವಿ ಅನಸತಿರ್ತದ. ಆದರ ಎಷ್ಟ ನೆನಪ ಮಾಡಕೊಂಡ್ರೂ ಔರ್ ಯಾರಂತ ನೆನಪಾಗಂಗಿಲ್ಲಾ. ಔರ ನೋಡ್ರಿ ನಿಂ ಜನ್ಮಾಂತರ ಸಂಭಂದಿ. ಅಂದರ ನಿಮ್ಮ ಮನಸನ್ಯಾಗ ಕುಂತು ನಿಮ್ಮನ್ನ ಕದ್ದಕೊಂಡ ಹೋಗೋ ಚೋರಾ ಚಿತ್ತ ಚೋರಾ.

ಹಂಗಂತ ಯಾರ ಎದರಿಗ ಬಂದರೂ “ಇವರಿಗೂ ನನಗೂ  ಏನರ ಸಂಭಂದ ಇರಬೌದ” ಅಂತ ತಿಳಕೊಳೋದಲ್ಲಾ. ಖರೇನ ಹಂಗ ಸಂಭಂದ ಇದ್ದೋರ ಎದರಿಗ ಬಂದರ, ನಿಂ ಆತ್ಮಾ ಔರ ಆತ್ಮಾ ಮದಲ ಬೆಟ್ಯಾಗಿದ್ವಂದರ, ಅಂತಾ ಮನಷ್ಯಾರಿಗ  ನೋಡಿದ ಕೂಡಲೆ ನಿಮಗ ಅನಿಸಿಬಿಡತದ ಇವರಿಗೂ ನನಗೂ ಏನೋ ಸಂಭಂದ ಅದ ಅಂತ. ಹೋದಜನ್ಮದ್ ಬಗ್ಗೆ ನಿಮಗ ನಂಬಿಕಿಲ್ಲಂದರೂ ನಿಮಗ ಅಂತೌರನ್ನ ನೋಡಿದ ಕೂಡಲೆ ಹಿಂಗ ಅನಸೇ ಅನಸ್ತದ.

ಹಂಗೇನರ ನಿಂ ಕನಸಿನ – ಮನಸಿನ ನಂಟಿದ್ದವ ನಿಮ್ಮೆದರಿಗೆ ಬಂದರ ಹೆಂಗ ಗೊತ್ತ ಹಿಡಿಬೇಕು ಅನ್ನೊದರ ಬಗೆಗ ನಾವೊಂದ ಏಳು ಪೊಯಿಂಟ ಮಾಡೆವಿ. ಓದ್ಕೊಂಡ ಬಿಡ್ರಿ ಯಾರಿಗ್ ಗೊತ್ತು ಯಾವಾಗ ಯಾರ ಎದರಿಗ ಬರತಾರಂತ.

1. ನೀವ್ ಔರ್ ಕಣ್ಣಾಗ ನೋಡಿದ್ರಿ ಅಂದರ ನೀವ್ ಔರ್ ಮನಸಿನ್ ಗೂಡನ್ಯಾಗ ಅದೀರೇನೋ ಅನಸ್ತದ

ನನ್ನೂ ಅರ್ಥಾ ಮಾಡಕೊಳ್ಳೊರ್ ಅದಾರಾ ಅಂತ ನಿಮಗ ಅನಸ್ತದ. ಅವರ ನಿಂ ಹತ್ತರ ಇದ್ದರಂದರ ನಿಮಗ ಚೊಲೊ ಅನಸ್ತದ. ಅವರ ಕಣ್ಣಾಗ ನೋಡಿದರ ನಿಂ ನೀವ ನೋಡಕೊಳಾಕತ್ತೀರೆನೋ ಅನಸ್ತದ. ಅವರು ನೀವು ಬ್ಯಾರ – ಬ್ಯಾರೆ ಅಲ್ಲ  ಇಬ್ರೂ  ಒಂದ, ಔರ್ ಜೋಡಿ ನಿಂ ಮನಸಿನ ಬೆಸಿಗ್ಯದ  ಅನಸತಿರ್ತದ. ಔರಿಗೂ ಹಂಗ ಅನಸತಿರ್ತದ.

ಅಂತಾ ಮನಷ್ಯಾ ಬಂದರ ನಂ ಮಖದ್ ಮ್ಯಾಲ ನಗು ತಾನ ಬರತದ. ನಿಂ ಮನಿಯವರನ್ನ ಕಂಡಷ್ಟು ಸಮಾಧಾನ ಆಗ್ತದ. ಔರ ಜೋಡಿ ತಾಸಗಂಟಲೆ ಹರಟಿ ಹೊಡದ್ರೂ ಕಮ್ಮಿನ ಅನಸ್ತದ. ನೀವ್ ನೀವಾಗಿರಂಗಿಲ್ಲ. ಔರ ನಿಮ್ಮನ್ನ ಆವರಿಕೊಂಡ ಬಿಟ್ಟಿರತಾರ.ಇಂತವರ ಜೊಡಿ ಸಂಭಂದ ಬೆಳಸೋದು ಹಾಲಕುಡದಷ್ಟು ಸುಲಭ ಅಷ್ಟ ಅಲ್ಲ, ಹಾಲನಷ್ಟ ಸವಿನೂ ಇರ್ತದ ನೋಡ್ರಿ.

2. ಬೆಟ್ಯಾದ ಕೂಡಲೆ ಮನಸನ್ಯಾಗ ಸಾವ್ರ ಭಾವನೆಗಳ ಏಳತಾವ

ಆ ಮನಷ್ಯಾನ ನೋಡಿದ ಕೂಡಲೆ ನಿಂ ಮನಸು ನಿಂ ಕೈ ಬಿಡಸಿಕೊಂಡು ಅವನ ಹಿಂದ ಹೊಂಟ ಬಿಡತೆತಿ. ಅಂದರ ಸಂತೋಷದ್ದು, ಉತ್ಸಾಹದ್ದು,ಖುಷಿಲೆ ಕುಣದಾಡೋ ಅಂತಾ ಸಾವ್ರ ಭಾವನೆಗಳು ಏಳಾಕ ಸುರು ಮಾಡತಾವು. ಇವು ನಿಂ ಜೀವನಾನ ಬದಲಾಯಿಸೊ ಅಂತಾ ಭಾವನೆಗಳು. ನೀವು,”ನಾ ಇವನ ಅಥವಾ ಇಂಥಾ ಮನಷ್ಯಾನ ಇಲ್ಲಿ ತನಕಾ ಕಂಡೆ ಇಲ್ಲಲ್ಲ ಅನಕೊಳ್ಳೊ ಅಷ್ಟರೊಳಗ ಅವ  ನಿಮ್ಮನ್ನ ಹಾದ ಹೋಗಿರತಾನ ನಿಮ್ಮೆಲ್ಲಾ ಭಾವನೆಗಳನ್ನ ಕೆರಳಿಸಿ.

ಇಷ್ಟಾದ ಮ್ಯಾಲೆ ಇನ್ನೇನು ಮತ್ತ ಅವನ ಬೆಟ್ಯಾಗಾಕ ಹಾತೊರಿತಿರತೀರಿ. ಅಂತಾ ಯಾವ ಅವಕಾಶಾನೂ ಕಳಕೊಳ್ಳೊದಿಲ್ಲ. ಅವನ ಸುತ್ತಾನ ಇರಬೇಕಂತೀರಿ. ನಿಂ ಮನಸನ್ಯಾಗಿನ ಭಾವನೆಗಳನ್ನ ಮುಚ್ಚಿಟ್ಟಕೊಳ್ಳಾಕ ಆಗಂಗಿಲ್ಲ ಅದಕ್ಕ ಅವ ಕಂಡ ಕೂಡಲೆ ನಗದು, ಅಳದು , ಅಪ್ಪಿಕೊಳಾಕ ಹೋಗೋದು ಮಾಡತೀರಿ. ನಿಮಗ ನಿಂ ಮನಸ್ಸಿಗಿ ಇವಾ ಅಂದ್ರ ಅತೀ ಹೆಚ್ಚ. ವಾರಕ್ಕೊಮ್ಮೆ ತಿಂಗಳಿಗೊಮ್ಮೆರ ಅವನ್ನ ಬೆಟ್ಯಾಗಾಕ ಹಾತೊರಿತಿರತೀರಿ.

3. ಔರ್ ಜೊಡಿ ಭಾಳ ನೆನೆಪು ಹಂಚಕೊತೀರಿ

ಯಾಕ ಹೆಂಗ ಏನು ಗೊತ್ತಿಲ್ಲ. ಆದರ ನೀವಿಬ್ರೂ ನಿಂ ಹಿಂದಿನ ಜೀವನದ ನೆನೆಪ ಹಂಚಕೊತಿರತೀರಿ. ನೀವಿಬ್ಬರೂ ಕೂಡಿ ಇದ್ದಿದ ಜಾಗಾ, ಮಾಡಿದ ನೌಕರಿ, ಅಡ್ಯಾಡಿದ ಊರು – ಕೇರಿ, ದೇಶ – ವಿದೇಶ…… ಹಿಂಗ ನಿಮಗ ತಿಳೀದಂಗ ಮಾತ ಮುಂದವರದಿರತಾವು.

4. ಆ ಮನಷ್ಯಾ ನಿಮ್ಮನ್ನ ಹೊತ್ತಿಗಿ(ಪುಸ್ತಕ) ಓದ್ದ ಹಂಗ ಓದಿಬಿಡಬೌದು

ನೀವ ಏನೂ ಹೇಳಲಿಲ್ಲಾ  ಅಂದರೂ ಅವನಿಗೆಲ್ಲಾ ತಿಳೀತದ. ನಿಮ್ಮ ಮನಸನ ಅವ ಹೊತ್ತಿಗಿ ಓದಿದಂಗ ಓದತಾನ. ನಿಂ ಖುಷಿ,ತ್ರಾಸ ಎಲ್ಲಾ ಅವನಿಗ ತಿಳಿತದ. ಅಂಥವನ ಜೋಡಿ ಸಂಭಂದ ಸುಖಾ ಅನಸ್ತದ. ನಿಮಗೂ ಅವನ ಬಗ್ಗೆ ಎಲ್ಲಾ ಇಷ್ಟ ಸುಲಭವಾಗಿ ತಿಳಿತದ ಅಂತಿಟ್ಟಕೊರಿ. ಆವಾಗ ಜೀವನ ಎಷ್ಟ ಚಂದಲ್ಲಾ…

5. ಸಂಭಂದ ಇಷ್ಟ ಚಂದ ಇತ್ತ ಅಂದರ ಕಾಲದ ಬಗ್ಗೆ ಯಾರ ತಲಿ ಕೆಡಸ್ಕೊತಾರೀ

ನಿನ್ ಜೋಡಿ ಮಾತಾಡಾಕತ್ತರ ಟೈಂ ಹೊಗಿದ್ದ ಗೊತ್ತಾಗಂಗಿಲ್ಲಾ ಅಂತಾರಲ್ಲಾ ಅಂತಾ ಸಂಭಂದ ಇದು. ಅಂಥಾ ಜೀವದ ಗೆಳೆಯಾರಿಬ್ಬರೂ ಮಾತಾಡಕೋತ ಕುಂತರ ತಂ ಸುತ್ತಲದೆಲ್ಲಾ ಮರತಬಿಡತಾರ್ರೀ. ಎಲ್ಲಿ ಕುಂತೆವಿ, ಎದಕ್ಕ ಬಂದಿದ್ವಿ, ಏನ ನಡಿಯಾಕತ್ತೇತಿ…… ಊಹುಂ ಒಂದು ಲಕ್ಷ ಇರಂಗಿಲ್ಲಾ. ಒಬ್ಬರ ಒಳಗ ಒಬ್ಬರ ಬೆರತ ಬಿಟ್ಟಿರತಾರಾ.

6. ಶರೀರ ದೂರದೂರ ಇದ್ದರೂ ಮನಸನ್ಯಾಗ ಇಬ್ರೂ ಹತ್ತರ ಇರತಾರ

ವಟ್ಟ ಮಾತಾಡಿಲ್ಲಾ ಅಂದ್ರೂ ಮದ್ಲ ಮಾತಾಡೆವಿ ಅನಸತಿರತದ. ಒಮ್ಮೆ ಬೆಟ್ಯಾದಾ ಅಂದರ ಸಾಕ ಮನಸ ಅವನ ಸುತ್ತ ಗಿರಕಿ ಹೊಡಕೋತ ನಿಮ್ಮನ್ನ ಅವನ ಹತ್ತರ ಇರೋಹಂಗ ಮಾಡತದ. ನಿಮಗ ಏನ ಮಾಡಬೇಕಾರೂ ಅವದ ಧ್ಯಾನಾ. ಅದಕ್ಕ ಹೇಳೊದು ನೀವಿಬ್ಬರೂ ದೂರ ಇದ್ದರೂ ಹತ್ತರ ಇರತೀರಿ ಅಂತ.

7. ಲೊಗೂನ ಹಚ್ಚಕೊಂಡ ಬಿಡತೀರಿ

ಜೀವನದಾಗ ನಿಮಗ್ಯಾರೂ ಇಲ್ಲ ಅಂತ ಅನ್ನ ಕೊಂಡಿದ್ದರ ಇವರನ್ನ ಕಂಡ ಕೂಡಲೆ ಆ ಭಾವನೆ ಮಂಗಮಾಯ ಆಗ್ತದ ನೋಡರಿ. ಇವರೊಬ್ಬರಿದ್ದರ ಸಾಕು ಮತ್ಯಾರು ಬ್ಯಾಡಾ ಅನಸ್ತದ. ಇವರನ್ನಂತು ನೀವ ಭಾಳ ಲೊಗೂ ಹಚ್ಚಕೊತೀರಿ. ಬಿಟ್ಟಿರಾಕ ಆಗಲಾರದಷ್ಟು.

ಗೊತ್ತಾತಲ್ಲಾ ಇನ್ನ ಮುಂದ ನಿಂ ಜೊಡಿ ಹುಡಕ ಬೇಕಾರ ಇವನ್ನೂ ಮನಸ್ಸದಾಗ ಇಟ್ಟಕೋರಿ.