http://yourbucketlistdreams.com/wp-content/uploads/2016/08/19-How-to-make-Pongal-from-Fox-Tail-Millet.jpg

ನವಣೆ ಒಂದು ಸತ್ವಯುತ ಕಿರುಧಾನ್ಯ. ನವಣ್ಯಾಗ ಇರೋ ಪೌಷ್ಠಿಕಾಂಶಗಳು ಎಲ್ಲಾನೂ ಮೀರಿಸಿದ್ದು.. ನವಣೆ ಭಾರತದ ಭಾಳ ಹಳೇಯ ಸಿರಿಧಾನ್ಯಗಳೊಳಗ ಒಂದಾಗೆತಿ. ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಐತಿ ನವಣೆಗೆ, ಇವತ್ತಿಗೂ ವಿಧವಿಧವಾದ ರೀತಿಯೋಳಗ ಇದನ್ನ ಬಳಸ್ತಾರ.. ಭಾರತದೊಳಗ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತ ಬಿಹಾರ ರಾಜ್ಯಗಳಲ್ಲಿ ನವಣೆ ಬೆಳೀತಾರ. ನಮ್ಮಲ್ಲಿ ಸಿಗೋ ತಳಿ ಅಂದ್ರ ಕರಿ ನವಣೆ, ಕೆಂಪು ನವಣೆ, ಜಡೆ ನವಣೆ, ಹುಲ್ಲು ನವಣೆ, ಹಾಲು ನವಣೆ ಇನ್ನೂ ಹಲವಾರು. ಒಂದೊಂದ ತಳಿಗೂ ಒಂದೊಂದು ವಿಶೇಷ ಗುಣ ಐತಿ. ಇಂಗ್ಲೀಷ್ನಲ್ಲಿ ಫಾಕ್ಸ್ಟೈಲ್ ಮಿಲ್ಲೆಟ್ ಅಂತಾರ ಇದಕ್ಕ.

ನವಣೆ ಪ್ರೋಟೀನ್, ಸೂಕ್ಷ್ಮ ಪೋಷಕಾಂಶಗಳು ಮತ್ತ ನಾರಿನಾಂಶದಿಂದ ತುಂಬಿಕೊಂಡತಿ. ಇದು ಕೇವಲ ತೂಕ ಕಡಿಮೆ ಮಾಡೊರಿಗಷ್ಟ ಅಲ್ಲ ಡಯಾಬಿಟೀಸ್ನಿಂದ ಕಷ್ಟಪಡೊರಿಗೂ ಕೂಡ ಇದು ಒಳ್ಳೇಯ ಆಹಾರ. ತೆಳು ಹಳದಿ ಬಣ್ಣದ ನವಣೆ ಅಕ್ಕಿ ದೇಹದ ನರನಾಡಿಗಳಿಗೆ ಹುರುಪು ಕೊಡತೈತಿ.

ನವಣೆ ಬಳಸಿ ಏನೇಲ್ಲಾ ತಿಂಡಿ, ಅಡುಗೆ ಮಾಡ್ಬಹುದು ಅಂತಾ ನಿಮ್ಗೋಸ್ಕರ ಇಲ್ಲೆ ಕೊಟ್ಟವಿ…ಓದ್ರಿ, ಹಂಗ ನೀವು ಮಾಡಿ ನೋಡ್ರಿ. ನಿಮ್ಮ ಅರೋಗ್ಯ ನಿಮ್ಮ ಕೈಯಾಗ ಇಟ್ಕೊರ್ರಿ:-)

1. ನವಣೆ ತಂಬಿಟ್ಟು

ಬೇಕಾದ ಪದಾರ್ಥಗಳು…

ನವಣಕ್ಕಿ – 1/2 ಕೆ.ಜಿ, ಬೆಲ್ಲ – 1/2 ಕೆ.ಜಿ, ಒಣಕೊಬ್ಬರಿ – ಒಂದು ಬಟ್ಟಲು, ಏಲಕ್ಕಿ ಪುಡಿ – 1/2 ಟೀ ಚಮಚ, ಗಸಗಸೆ – ಒಂದು ಟೀ ಚಮಚ, ತುಪ್ಪ – 4 ಟೀ ಚಮಚ, ಒಣದ್ರಾಕ್ಷಿ, ಗೋಡಂಬಿ – 10 ಚೂರು

ಮಾಡುವ ವಿಧಾನ…

ನವಣಕ್ಕಿನ  ಚೊಲೊತ್ತಂತ ತೋಳದು ಒಂದು ದಿನ ನೆರಳನ್ಯಾಗ ಒಣಗಿಸ್ರಿ. ಆಮ್ಯಾಲ ಅದನ್ನ ಹಿಟ್ಟು ಮಾಡ್ಕೊರ್ರಿ. ಮಾಡಿರೋ ಹಿಟ್ಟಿಗೆ ಸ್ವಲ್ಪ ತುಪ್ಪ ಹಾಕಿ ಘಮ್ ಅಂತ ವಾಸನಿ ಬರಹಂಗ ಹುರೀರಿ. ಹಿಟ್ಟು ತಣ್ಣಗ ಆಗೋತನಕ ಬಿಟ್ಟು, ನಂತರ ಬೆಲ್ಲಾನ ಸಣ್ಣಗ ತುರ್ಕೊಂಡು ಅದಕ್ಕ ಹಾಕಿ ಚೊಲೊತ್ತಂಗ ಕಲಸಿ ನಾದ್ರಿ, ಏಲಕ್ಕಿ ಪುಡಿ , ಹುರಿದ ಗಸಗಸೆ ಮತ್ತು ತುಪ್ಪದಾಗ ಹುರಿದ ದ್ರಾಕ್ಷಿ, ಗೋಡಂಬಿ, ಒಣಕೊಬ್ಬ್ರಿ ಹಾಕಿ ಕೈಯಿಂದ ಚೊಲೊತ್ತಂಗ ನಾದಿ ಉಂಡಿ ಕಟ್ರಿ.

ಇದು ತಿಂಗಳಾನ ಗಟ್ಟೆಲೆ ಕೆಡಂಗಿಲ್ಲ. ಉತತ್ತರ ಕರ್ನಾಟಕದಾಗ ನಾಗರ ಪಂಚಮಿ ದಿನ ಈ ಉಂಡಿನ ಮಾಡ್ತಾರ.

2. ನವಣೆ ಹೋಳಿಗೆ

ಬೇಕಾದ ಪದಾರ್ಥಗಳು…

ನವಣೆ ಹಿಟ್ಟು – 1 ಲೋಟ, ಬೆಲ್ಲ – 1 ಲೋಟ, ಪುಟಾಣಿ ಹಿಟ್ಟು – 1/2 ಲೋಟ, ಏಲಕ್ಕಿ ಪುಡಿ – 1/2 ಟೀ ಚಮಚ, ಗಸಗಸೆ – ಒಂದು ಟೀ ಚಮಚ, ಕರಿಯಾಕ ಎಣ್ಣೆ, ಕಣಕ ಮಾಡಾಕ ಗೋಧಿ ಹಿಟ್ಟು – 1/2 ಲೋಟ, ಮೈದಾ ಹಿಟ್ಟು –  1/2 ಲೋಟ

ಮಾಡುವ ವಿಧಾನ…

ನವಣಕ್ಕಿನ ಹುರಿದು ಹಿಟ್ಟು ಮಾಡ್ರಿ. ಬಾಳಗಿಯೊಳಗ ಬೆಲ್ಲ ಮತ್ತ ನೀರನ್ಯಾಗ ಹಾಕಿ ಎಳೆ ಪಾಕ ಬರಲ್ಲಿ ತನಕ ಕುದಿಸಿ. ನಂತರ ಬಾಳ್ಳಿ ಕೆಳಗಿಳಿಸಿ ಪಾಕಕ್ಕ ಏಲಕ್ಕಿ, ಗಸಗಸೆ, ನವಣೆ ಹಿಟ್ಟು, ಪುಟಾಣಿ ಹಿಟ್ಟು ಹಾಕ್ಕೊಂಡು ಮಿಕ್ಸ್ ಮಾಡ್ರಿ.

ಇದಕ್ಕಿಂತ ಮೊದಲು ಗೋಧಿ ಮತ್ತು ಮೈದಾ ಹಿಟ್ಟನ್ನ ಕಲಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ಮೆತ್ತಗೆ ಕಲಿಸಿ ರೆಡಿ ಇಟ್ಕೊಂಡಿರ್ರಿ. ಸಣ್ಣ ಉಂಡೆ ಮಾಡಿ ಆ ಉಂಡೆನಾ ವೃತ್ತಾಕಾರವಾಗಿ ಲಟ್ಟಿಸಿ ಅದ್ರಾಗ ನವಣೆ ಉಂಡೆನ ತುಂಬಿ ಪೂರಿ ಅಕಾರದಲ್ಲಿ ಲಟ್ಟಿಸಿ. ಬಾಳ್ಳಿಯೊಳಗ ಎಣ್ಣೆ ಕಾಸ್ಕೊಂಡು. ಅದಕ್ಕ ಲಟ್ಟಿಸಿದ ಪೂರಿನ ಹಾಕಿ ಕರಿದ್ರ ಗರಿ ಗರಿ ನವಣಕ್ಕಿ ಹೋಳಿಗೆ ತಯಾರು.

ಉತ್ತರ ಕರ್ನಾಟಕದಾಗ ಎಳ್ಳು ಅಮಾವಾಸ್ಯೆ ದಿನ ಇದನ್ನ ಮಾಡ್ತಾರ.

ಮೂಲ

3. ನವಣಕ್ಕಿ ಮಸಾಲೆ ದೋಸೆ

ಬೇಕಾದ ಪದಾರ್ಥಗಳು…

ಉದ್ದಿನ ಕಾಳು – 1 ಲೋಟ, ನವಣೆ – 3 ಕಪ್, ಅಕ್ಕಿ – 1 ಕಪ್, ಜೀರಿಗೆ, ಮೆಂತ್ಯೆ – ಒಂದು 1.4 ಚಮಚ, ಟೊಮೆಟೊ – 1, ಸೌತೆಕಾಯಿ ತುರಿ – 1/2 ಕಪ್, ಈರುಳ್ಳಿ – 1, ಹಸಿಮೆಣಸಿನಕಾಯಿ – 3, ಹಸಿ ಶುಂಠಿ ಪೇಸ್ಟ್ – ಸ್ವಲ್ಪ, ಕೊತ್ತಂಬ್ರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ…

ನವಣೆ, ಬಿಳಿ/ಕೆಂಪು ಅಕ್ಕಿ, ಉದ್ದು, ಮೆಂತ್ಯೆ, ಜೀರಿಗೆ ಇನೆಲ್ಲಾನು ನಾಲ್ಕು ತಾಸು ನೆನಸಿಡ್ರಿ, ರಾತ್ರಿ ದೋಸೆ ಹಿಟ್ಟಿನ ಹದಕ್ಕ ರುಬ್ಬಿ ಇಡ್ರಿ. ಮುಂಜೆಲೆ ದೋಸೆ ಮಾಡೊಕು ಮೊದಲು ಏನರ ತರಕಾರಿ ಬೇಕಾದ್ರ ತುರಿದು ಇಲ್ಲಾ ರುಬ್ಬಿ ಹಿಟ್ಟಿಗೆ ಸೇಸ್ಕೊರ್ರಿ. ಹಂಚ ಮ್ಯಾಲೆ ಈ ಹಿಟ್ಟನ್ನ ಹಾಕಿದ್ರ ಕೆಂಪಗ ಗರಿ ಗರಿಯಾಗಿ ದೋಸೆ ಏಳ್ತಾವು. ತಿನ್ನಾಕ ಭಾಳ ರುಚಿ ಇರತತಿ.

ಮೂಲ

4. ನವಣೆ ನುಚ್ಚಿನುಂಡೆ

ಬೇಕಾದ ಪದಾರ್ಥಗಳು…

ನವಣೆ, ಉದ್ದಿನಬೇಳೆ, ಕಡಲೆಬೇಳೆ, ಹೆಸ್ರುಬೇಳೇ, ತೊಗರಿಬೇಳೆ – ಎಲ್ಲಾ ಒಂದು ಬಟ್ಟಲು,

ಹಸಿ ಮೆಣಸಿನಕಾಯಿ – 5-6, ಜೀರಿಗೆ – 1 ಚಮಚ, ಕೊತ್ತಂಬ್ರಿ ಸೊಪ್ಪು – 1 ಬಟ್ಲು, ತೆಂಗಿನ ತುರಿ – 1 ಬಟ್ಲು, ರುಚಿಗೆ ತಕ್ಕಷ್ಟು ಉಪ್ಪು ಮತ್ತ ಪ್ಲೇಟಿಗೆ ಹಚ್ಚಾಕ ಸ್ವಲ್ಪ ಎಣ್ಣೆ

ಮಾಡುವ ವಿಧಾನ…

ನವಣೇನಾ 10 ತಾಸ ನೆನಸಿಡ್ರಿ. ಉಳಿದ ಬೇಳೆಗಳನ್ನ 4 ತಾಸ ನೆನೆಸಿಟ್ರ ಸಾಕು. ನೀರ ಎಲ್ಲಾ ತೆಗದು ತರಿತರಿಯಾಗಿ ರುಬ್ಬಿಕೊರ್ರಿ. ಹಸಿಮೆಣಸಿನ ಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ ತುರಿನು ಸಹ ತರಿ ತರಿಯಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲನೂ ಸೇರಿಸಿ ಚಲೋತ್ತಂಗ ಕೈಯಾಡಿಸಿ. ಬೇಕಾದ ಅಕಾರದಾಗ ಉಂಡೆ ಮಾಡಿ ಇಡ್ಲಿ ಬೇಯಿಸಂಗ ಒಂದೊಂದ ಉಂಡೆ ಇಟ್ಟು ಬೇಯಿಸ್ಕೊರ್ರಿ. ಒಂದು 15-20 ನಿಮಿಷ ಬೇಯಿಸಿ ಕಾಯಿ ಚಟ್ನಿ ಜತಿಗೆ ತಿನ್ನಕ್ಕ ಕೊಡ್ರಿ. ಬೆಳಗ್ಗೆ ತಿಂಡಿಗೆ ಇದನ್ನ ತಿಂದ್ರ ಸಾಯಂಕಾಲದ ವರೆಗೂ ಹಸಿವೆ ಆಗಲ್ಲಂಥ ಸಾಲಿಡಾಗಿ ಹೊಟ್ಟೇಲಿ ಕೂತ್ಕೊಂಡ ಬಿಡ್ತತಿ. ದೇಹಕ್ಕೂ ಚೊಲೋ.

ಮೂಲ

5. ನವಣೆ ಮಸಾಲೆ ಅನ್ನ

ಬೇಕಾದ ಪದಾರ್ಥಗಳು…

ನವಣಕ್ಕಿ – 1 ಕಪ್, ಹೆಸರು ಬೇಳೆ – 1 ಕಪ್, ಈರುಳ್ಳಿ – 2, ಬೆಳುಳ್ಳಿ ಬೇಕಾದ್ರ ಒಂದು ಎಸಳು ಹಾಕೊಳ್ಳಿ, ಹಸಿಮೆಣಸಿನಕಾಯಿ – 6, ಹುಣಸೆಹಣ್ಣಿನ ರಸ – 1/4 ಕಪ್, ಹಸಿ ಶುಂಠಿ, ಮಸಾಲೆ ಪುಡಿ, ಉಪ್ಪು, ಅರಿಶಿನ ಪುಡಿ, ಸ್ವಲ್ಪ ಬೆಲ್ಪ

ಮತ್ತೆ ಒಗ್ಗರಣೆಗೆ – ಸಾಸಿವೆ, ಜೀರಿಗೆ, ಕರಬೇವು, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ…

ಕುಕ್ಕರನ್ಯಾಗ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಹಸಿ ಶುಂಠಿ, ಈರುಳ್ಳಿ, ಕರಬೇವು ಮತ್ತ ಸಣ್ಣಗ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. ಆಮ್ಯಾಲೆ ನವಣಕ್ಕಿ ಜೊತೆ ಹೆಸರು ಬೇಳೇನಾ ತೊಳ್ಕೊಂಡು ಹಾಕ್ರಿ. ಮಸಾಲೆ ಪುಡಿ, ಅರಿಶಿನ ಮತ್ತ ಉಪ್ಪು ಹಾಕಿ ಮಿಕ್ಸ್ ಮಾಡ್ರಿ. ಅದಕ್ಕೆ 4 ಕಪ್ ನೀರು, ಹುಣಸೆಹಣ್ಣಿನ ರಸ, ಬೆಲ್ಲ, ಕೊತ್ತಂಬರಿ ಸೊಪ್ಪು ಹಾಕಿ ಕುಕ್ಕರನ್ಯಾಗ 3 ಸಿಟಿ ಹೊಡಸ್ರಿ. ಇಷ್ಟ ಮಾಡಿದ್ರ ಸಾಕು ತಿನ್ನೊದಕ್ಕೆ ರಡಿ ಆಕ್ಕತಿ. .

6. ಹುರಿದ ನವಣೆ ಹಿಟ್ಟಿನ ಪಾನಕ

ಬೇಕಾಗುವ ಪದಾರ್ಥಗಳು…

ನವಣೆ ಹುರಿದ ಹಿಟ್ಟು – 4 ಚಮಚ, ಬೆಲ್ಲದ ಪುಡಿ – 1 1/2 ಅಚ್ಚು, ಹುಣಸೆಹಣ್ಣು – ನಿಂಬೆ ಗಾತ್ರದ್ದು, ಜೀರಿಗೆ ಪುಡಿ – 1/2 ಚಮಚ, ನೀರು – ಅರ್ಧ ಲೀಟರ್,

ಮಾಡುವ ವಿಧಾನ…

ನವಣೇನಾ ಒಂದು ದಿನ ನೀರನ್ಯಾಗ ನೆನೆಸಿ ಚಲೊತ್ತಂಗ ತೊಳೀರಿ. ಅದು ಒಣಗಿದ ಮ್ಯಾಲೆ ಸ್ವಲ್ಪ ಸ್ವಲ್ಪವೇ ಕಾದ ಬಾಣಲೆಗೆ ಹಾಕಿ ಹುರೀರಿ. ನಂತರ ಮಿಕ್ಸರ್ನನ್ಯಾಗ ಪುಡಿ ಮಾಡಿ ಗಾಳಿ ಆಡದಿರೋ ಡಬ್ಯಾಗ ಹಾಕಿಡ್ರಿ. ಇದು ಹುರಿದ ಹಿಟ್ಟು ಆತು.

ಪಾನಕಾ ಮಾಡಾಕ…ನೀರನ್ಯಾಗ ಪುಡಿ ಬೆಲ್ಲ ಹಾಕಿ ಕರಗಿಸಿ. ಆಮ್ಯಾಲ ಹುಣಸೆಹಣ್ಣಿನ ನೀರನ್ನ ಕೂಡಸ್ರಿ, ಅದಕ್ಕ ಜೀರಿಗಿ ಪುಡಿ, ಹುರಿದ ನವಣೆ ಹಿಟ್ಟು ಹಾಕಿ ಗಂಟ ಇಲ್ಲದಂಗ ಕಲಸಿದ್ರ ಪೌಷ್ಟಿಕವಾದ ನವಣೇ ಪಾನಕ ರೆಡಿ.

ಬ್ಯಾಸಗ್ಯಾಗ ಬಾಯಾರಿಕೆ ಭಾಳ. ಅಂಥ ಸಮಯದಾಗ ಈ ಆರೋಗ್ಯಕರ ಪಾನಕ ಕುಡಿದ್ರ ತುಂಬಾ ಹಿತವಾಗಿರ್ತತಿ.

7. ನವಣೆ ವಡೆ

ಬೇಕಾಗುವ ಪದಾರ್ಥಗಳು…

ನವಣೆ ಹಿಟ್ಟು – 1 ಪಾವು (ತೊಳೆದು ಆರಿಸಿ ಹಿಟ್ಟು ಮಾಡಿದ್ದು), ಸೀಮೆ ಅಕ್ಕಿ / ಸಬ್ಬಕ್ಕಿ – 1/4 ಪಾವು (ಆರು ಗಂಟೆ ನೀರಲ್ಲಿ ನೆನೆಸಿದ್ದು),

ಬೇಯಿಸಿದ ಆಲೂಗೆಡ್ಡೆ – 2, ಜೀರಿಗೆ – 1 ಚಮಚ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 4, ಸಣ್ಣಗೆ ಹೆಚ್ಚಿದ ಕರಿಬೇವು ಮತ್ತ ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ ಮತ್ತ ಸ್ವಲ್ಪ ಉಪ್ಪು

ಮಾಡುವ ವಿಧಾನ…

ನವಣೆ ಹಿಟ್ಟು, ಸೀಮೆ ಅಕ್ಕಿ ಒಂದು ಪಾತ್ರೇಲಿ ಹಾಕಿ. ಮಿಕ್ಕ ಎಲ್ಲಾ ಪದಾರ್ಥಗಳನ್ನು ಕೂಡಿಸಿ ಹಿಟ್ಟು ಮಾಡ್ಕೊರ್ರಿ, ಭಾಳ ನೀರ ಮಾಡ್ಕೊಬ್ಯಾಡ್ರಿ. ವಡೆ ಆಕಾರದಾಗ ತಟ್ಟಿ ಎಣ್ಯಾಗ ಕರೀರಿ.

ಸಾಯಂಕಾಲ ತಿಂಡಿಗೆ ಇದನ್ನ ಮಾಡ್ಬಹುದು.

8. ನವಣೆ ಪೊಂಗಲ್

ಬೇಕಾದ ಪದಾರ್ಥಗಳು…

ಹೆಸರುಬೇಳೆ – 1/4 ಕಪ್, ನವಣೆ- 1/4 ಕಪ್, ಅಕ್ಕಿ- 2 ಚಮಚ, ನೀರು – 1 1/2 ಕಪ್, ಸ್ವಲ್ಪ ಕರಿಮೆಣಸು, ಗೋಡಂಬಿ – 10, ಜೀರಿಗೆ: 0.25 ಟೀ ಚಮಚ, ಹಸಿಮೆಣಸಿನಕಾಯಿ: 1 ಸೀಳಿರುವುದು, ಕರಿಬೇವು: 1 ಕಡ್ಡಿ, ಶುಂಠಿ – 1/4 ಇಂಚು, ಇಂಗು – 1 ಚಿಟಿಕೆ, ತುಪ್ಪ – 1 ಟೀ ಚಮಚ, ಸ್ವಲ್ಪ ಉಪ್ಪು

ಮಾಡುವ ವಿಧಾನ…

ಹೆಸರುಬೇಳೆ ಮತ್ತ ನವಣಕ್ಕಿನ ನೀರನ್ಯಾಗ ಚಲೊತ್ತಂಗ ತೊಳೀರಿ. ಸುಮಾರು 2 ತಾಸಿನ ತನಕ ನೀರನ್ಯಾಗ ನೆನಸಿಡ್ರಿ. ಇವೆರಡನ್ನು 5 ಕಪ್ಪಿನಷ್ಟು ನೀರನ್ಯಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುಕ್ಕರನ್ಯಾಗ ಬೇಯಿಸ್ರಿ. ಒಂದು ಸಣ್ಣ ಪಾತ್ರೆ ತೊಗೊಂಡು ತುಪ್ಪ ಕಾಯಿಸಿ ಅದಕ್ಕ ಜೀರಿಗೆ ಮತ್ತ ಇಂಗು ಹಾಕಿ. ನಂತರ ಮೆಣಸು, ಶುಂಠಿ, ಹಸಿಮೆಣಸಿನಕಾಯಿ, ಗೋಡಂಬಿ ಮತ್ತ ಕರಬೇವ ಹಾಕಿ ಒಂದು ನಿಮಿಷ ಫ್ರೈ ಮಾಡಿ. ಇದನ್ನು ಬೇಯಿಸಿದ ಪೊಂಗಲ್ ಮ್ಯಾಲ ಹಾಕಿ ಅಲಂಕಾರ ಮಾಡ್ರಿ. ಈ ನವಣೆ ಪೊಂಗಲ್ನ ಚಟ್ನಿ ಅಥವಾ ರಾಯ್ತದ ಜೊತೆಗೆ ಬೆಳಿಗ್ಗೆ ತಿಂಡಿ ಅಥವಾ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟಕ್ಕೆ ತಿನ್ಬಹುದು.

9. ನವಣೆ ಜಾಮೂನು

ಬೇಕಾದ ಪದಾರ್ಥಗಳು…

ನವಣೆ ಹಿಟ್ಟು 100 ಗ್ರಾಂ, ಸಪ್ಪನ ಕೋವಾ 50 ಗ್ರಾಂ, ಸಿಹಿ ಕೋವಾ 100 ಗ್ರಾಂ, ಸ್ವಲ್ಪ ಏಲಕ್ಕಿ, ಪಾಕಕ್ಕ ಸಕ್ಕರೆ

ಮಾಡುವ ವಿಧಾನ…

ಮೊದಲು ಸಕ್ಕರೆ ಪಾಕನ ತಯಾರ ಮಾಡ್ಕೊರಿ. ಆಮ್ಯಾಲೆ ನವಣೆ ಹಿಟ್ಟು, ಕೋವಾ ಮತ್ತ ಏಲಕ್ಕಿನ ಮಿಕ್ಸ್ ಮಾಡಿ ಉಂಡಿ ಮಾಡ್ಕೊರ್ರಿ, ಆ ಉಂಡೆಗಳನ್ನ ಎಣ್ಣೆ ಅಥವಾ ತುಪ್ಪದಾಗ ಕರೀರಿ. ಸ್ವಲ್ಪ ತಣ್ಣಗಾದ ನಂತರ ಸಕ್ಕರೆ ಪಾಕಕ್ಕ ಹಾಕಿ. 3-4 ಗಂಟೆ ಬಿಟ್ಟು ನವಣೆ ಜಾಮೂನು ತಿನ್ರಿ.

10. ನವಣೆ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು…

ನವಣಕ್ಕಿ – 1 ಕಪ್, ಕ್ಯಾರೆಟ್, ಆಲೂಗೆಡ್ಡೆ, ಈರುಳ್ಳಿ, ಎಲೆಕೋಸು – 1 ಕಪ್, ಹಸಿಮೆಣಸಿನಕಾಯಿ – 6, ಗರಂ ಮಸಾಲೆ ಪುಡಿ

ಮತ್ತ ಒಗ್ಗರಣೆಗೆ – ಸಾಸಿವೆ, ಜೀರಿಗೆ, ಕರ್ಬೇವು, ಕೊತ್ತಂಬ್ರಿ ಸೊಪ್ಪು

ಮಾಡುವ ವಿಧಾನ…

ನವಣೇನಾ ನೀರನ್ಯಾಗ ತೊಳೀರಿ. ಇನ್ನೋಂದ ಪಾತ್ರ್ಯಾಗ ಎರಡು ಲೋಟದಷ್ಟ ನೀರು ಹಾಕಿ ಒಲಿ ಮ್ಯಾಗಿಡ್ರಿ, ಒಂದ ಕುದಿ ಬಂದ ಕೂಡ್ಲೆ ತೊಳೆದಿಟ್ಟ ನವಣೆ ಮತ್ತ ಸ್ವಲ್ಪ ಉಪ್ಪು ಹಾಕಿ ತಾಟ ಮುಚ್ಚರಿ, ಉರಿ ಸಣ್ಣಗಿರ್ಲಿ. 15-20 ನಿಮಿಷ ನಿಧಾನವಾಗಿ ನೀರು ಬತ್ತಿ ಹೋಗತನಕ ಬೇಯಿಸಿಕೊಂಡು ನಂತರ ತಾಡನ್ಯಾಗ ಹರಡ್ರಿ. ಉಪ್ಪಿಟ್ಟನ್ನ ತಯಾರಿಸೋ ರೀತ್ಯಾಗ ಒಗ್ಗರಣೆ ಹಾಕಿ. ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಕರಬೇವು, ಮೆಣಸಿನಕಾಯಿ ಮತ್ತು ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಕೋಸನ್ನ ಒಂದಾದ ಮ್ಯಾಲ ಒಂದ ಹಾಕಿ, ನಂತರ ಬೇಯಿಸಿದ ಕ್ಯಾರೆಟ್ ಮತ್ತು ಆಲೂಗಡ್ಡೆ ಹಾಕಿ. ಕೊನಗೆ ಸ್ವಲ್ಪ ಗರಂ ಮಸಾಲ ಪುಡಿ ಮತ್ತ ನವಣೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಚೊಲೊತ್ತಂಗ ಕೈಯ್ಯಾಡ್ಸಿ. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದ್ರ ಸವಿಯಲು ಸಿದ್ಧ.

ನವಣೇನ ಈ ಮೂಲಕ ನಿಮ್ಮ ದೇಹದೊಳಗ ಸೇರ್ಸ್ಕೊಂಡು ನಿಮ್ಮ ಆರೋಗ್ಯಾನಾ ನಿಮ್ಮ ಕೈಯಾಗ ಇಟ್ಕೊರಿ.

11. ನವಣೆ ಬರ್ಗರ್

ಬೇಕಾಗುವ ಪದಾರ್ಥಗಳು…

ನವಣಕ್ಕಿ-1 ಕಪ್, ಅಕ್ಕಿ ಹಿಟ್ಟು-1/2 ಕಪ್, ಮೊಳಕೆ ಬಂದ ಕಡ್ಲೆಕಾಳು, ಹೆಸರುಕಾಳು -1/2 ಕಪ್, ಟೊಮೆಟೋ-1 ಕ್ಯಾರೆಟ್-1

ಹುರುಳಿಕಾಯಿ-100 ಗ್ರಾಂ, ಗರಂ ಮಸಾಲ-1 ಚಮಚ, ಅಚ್ಚ ಮೆಣಸಿನಕಾಯಿ ಪುಡಿ -ಸ್ವಲ್ಪ

ಕರಿಮೆಣಸು ಪುಡಿ-1 ಚಮಚ, ಎಣ್ಣೆ ಅಥವಾ ಬೆಣ್ಣೆ-1 ಚಮಚ, ಉಪ್ಪು, ಬರ್ಗರ್‌ ಬನ್-2

ಮಾಡುವ ವಿಧಾನ…

ಮೊದಲು ನವಣೆ ತೊಳ್ಕೊರಿ. ತರಕಾರಿಗಳನ್ನ ಹೆಚ್ಚಿಟ್ಕೊರಿ. ಮೊಳಕೆ ಕಾಳುಗಳ ಜೊತಿಗೆ ಸ್ವಲ್ಪ ರುಚಿಗೆ ಉಪ್ಪು ಸೇರಿಸಿ ಕುಕ್ಕನ್ಯಾಗ ಬೇಯಿಸ್ಕೊರಿ. ನಂತರ ಅದಕ್ಕ ಸ್ವಲ್ಪ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ, ಗರಂ ಮಸಾಲ, ಖಾರದ ಪುಡಿ ಹಾಕಿ ಚೆನ್ನಾಗಿ ಕಲಿಸಿ ಟೊಮೇಟೋ ಪ್ಯೂರಿ ಸೇರಿಸಿ ಕಟ್ಲೆಟ್ ಹಿಟ್ಟಿನ ಹದಕ್ಕ ಮಾಡ್ಕೊರಿ. ಸಣ್ಣ ಉಂಡೆ ಮಾಡಿ ಕಟ್ಲೆಟ್‌ ಹಂಗ ಕಾದ ಹಂಚಿನ ಮ್ಯಾಲೆ ಬೆಣ್ಣೆ ಹಚ್ಚಿ ಎರಡೂ ಕಡೆ ಬೇಯಿಸ್ಕೊರಿ. ನಂತರ ಬರ್ಗರ್ ಬನ್ನಿನ ನಡುವ ಇಟ್ಟು ಟೊಮೇಟೋ ಸ್ಲೈಸ್, ಎಲೆಕೋಸು ಎಲ್ಲಾ ಇಟ್ಟು ತಿನ್ನಾಕ ಕೊಡ್ರಿ. ಮಕ್ಕಳಿಗೆ ಇದು ಭಾಳ ಇಷ್ಟ ಆಕ್ಕತಿ.

12. ನವಣೆ ಪಾಯಸ

ಬೇಕಾಗುವ ಪದಾರ್ಥಗಳು…

ನವಣಕ್ಕಿ – 1/4 ಕೆಜಿ, ಸಾಕಷ್ಟು ಬೆಲ್ಲ, ಗಸಗಸೆ, ತೆಂಗಿನಕಾಯಿ ತುರಿ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ತುಪ್ಪ, ಹಾಲು – 1/2 ಲೀಟರ್

ಮಾಡುವ ವಿಧಾನ…

ಮೊದಲು ಗಸಗಸೆನಾ ಸ್ವಲ್ಪ ಹೊತ್ತು ನೆನಸಿ ತೆಂಗಿನ ಕಾಯಿ ತುರಿ ಜೊತೆ ರುಬ್ಬಿಕೊಳ್ಳಿ. 4-5 ಚಮಚ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದಿಟ್ಕೊರಿ.

ಕುಕ್ಕನ್ಯಾಗ ನವಣಕ್ಕಿ, ಸ್ವಲ್ಪ ಬೆಲ್ಲ, ಸ್ವಲ್ಪ ಕಾಯಿತುರಿ, ಅರ್ಧ ಲೀಟರ್‌ ಹಾಲು ಹಾಕಿ ಹದವಾಗಿ ಬೇಯಿಸ್ಕೊರಿ. ಪ್ರೆಶರ್ ಕಡಿಮೆ ಆದ ಮೇಲೆ ಮುಚ್ಚಳ ತೆಗೆದು ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿದ್ರ ಪಾಯಸ ರೆಡಿ!

ನವಣೆ ತಿನ್ನಾಕ ಡಾಕ್ಟರ್ಸ ಇತ್ತಿಚೆಗೆ ಭಾಳ ಹೇಳಾಕತ್ತಾರ. ಅಕ್ಕಿ, ಗೋಧಿ ತಿನ್ನೋದ ಬಿಟ್ಟು ನವಣೆ ಸಾವಿರ ಪಾಲು ಉತ್ತಮ ಅಂತಾರ. ಆದ್ರ ನವಣೆಯಿಂದ ರುಚಿರುಚಿಯಾಗಿ ಅಡುಗೆ ಮಾಡ್ಬಹುದು ಅಂತ ಸಾಮಾನ್ಯವಾಗಿ ಗೊತ್ತಿರಂಗಿಲ್ಲ. ಈಗ ಗೊತ್ತಾತಿಲ್ಲ? ಮತ್ಯಾಕ್ರಿ ತಡಾ?