ಕೃತಕ ಉಪಗ್ರಹ್ದ ಬೆನ್ನೇರಿ ಕೂತು, ಬಾಹ್ಯಾಕಾಶದಲ್ಲಿ ನಡ್ಯೋ ಅನಾಹುತಗಳ್ನ, ತಾರೆಗಳ ಘನಘೋರ ಸೂಪರ್ ನೋವಾ ಸ್ಫೋಟಗಳ್ನ ತನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡ್ದು, ತಾರೆಗಳ ಸಾವಿನ ನರಳಾಟದ ನಂತರದ ವಿಚಿತ್ರ ವಿದ್ಯಮಾನ ಕಪ್ಪುಕುಳಿ. ಇದರ ಇರುವಿನ ಸೂಚನೆಗಳ ಬೆನ್ಹತ್ತಿ, ಪಹರೆಕಾಯ್ತ ತಿರುಗ್ತಾ ಇರೋ ಚಂದ್ರ (ನಾಸಾ ಉಡಾಯಿಸಿರೋ) ಉಪಗ್ರಹ ನಮ್ಗೆ ರವಾನ್ಸಿರೋ ರೋಚಕ ಮಾಹಿತೀನ ಕಲೆಹಾಕಿ, ಸಂಶೋಧ್ನೆ ಮಾಡ್ದಾಗ ಪತ್ತೆಯಾಗಿರೋ ಅದ್ಭುತ ಸತ್ಯಗಳ್ನ ನಿಮ್ಮೆದ್ರು ಬಿಚ್ಚೀಡ್ತೇವೆ, ಓದ್ಕೊಳ್ಳಿ.

1. ಕಪ್ಪುಕುಳಿ ಅಂದ್ರೇನು?

ಅದೊಂದು ಬಾಹ್ಯಾಕಾಶದಲ್ಲಿನ ಜಾಗ. ಅಲ್ಲಿ ಎಲ್ಲವೂ ಎಷ್ಟು ವಿಚಿತ್ರ. ಅಂದ್ರೆ, ಆ ಜಾಗದ ಗುರುತ್ವದ ಸೆಳೆತದಿಂದ ಯಾವ್ದೂ ತಪ್ಪಿಸಿಕೊಳ್ಳಕ್ಕೆ ಆಗಲ್ಲ – ಬೆಳಕು ಕೂಡ. ಯಾವ್ದಾದ್ರೂ ವಸ್ತು ಅದ್ರಲ್ಲಿ ಸಿಕ್ಕೋತು ಅಂದ್ರೆ ಆ ವಸ್ತು ನಮ್ಮ ವಿಶ್ವದಿಂದ ಶಾಶ್ವತ್ವಾಗಿ ಕಣ್ಮರೆ ಆಯ್ತು ಅಂತಾನೆ ಅರ್ಥ. ಅದ್ರೊಳಕ್ಕೆ ಬೆಳಕಿನ ವೇಗಕ್ಕಿಂತ್ಲೂ ವೇಗ್ವಾಗಿ ಆಕಾಶ ಬೀಳ್ತಾ ಇರತ್ತೆ. ಇಂಥವು ಇರಬಹುದು ಅಂತ ಐನ್ ಸ್ಟೈನ್ ನ  ಸಮೀಕರಣ ಸುಳಿವು ಕೊಟ್ಟಿದ್ರೂ, ನಮ್ಮ ವಿಶ್ವದಲ್ಲಿ ಅವು ಇದ್ಯಾ ಅನ್ನೋ ಪ್ರಶ್ನೆ ಇದ್ದೇ ಇತ್ತು. ಈಗ ಇಂಥ ವಿಚಿತ್ರ ಕುಳಿಗಳು ಇರೋದು ದಿಟ ಅಂತ ಗೊತ್ತಾಗಿದೆ.

2. ನಮ್ಮ ಹಾಲುಹಾದಿಯ ಮಧ್ಯದಲ್ಲಿ ಒಂದು ದೈತ್ಯ ಕಪ್ಪುಕುಳಿಯಿದ್ಯಾ?

ನಮ್ಮ ಸೌರವ್ಯೂಹ ಇರೋ ನಕ್ಷತ್ರಪುಂಜನ್ನ ಹಾಲುಹಾದಿ ಅಂತೀವಿ. ಅದ್ರ ಮಧ್ಯದಲ್ಲಿರೋ ಧನುರ್ ರಾಶಿಯಲ್ಲಿ ಹಾಲುಹಾದಿಯ ಕೇಂದ್ರ ಇದೆ. ಅದು ನಮ್ಮಿಂದ ಸುಮಾರು 26,000 ಜ್ಯೋತಿರ್ವಷಗಳಷ್ಟು ದೂರದಲ್ಲಿದೆ. ಅಂದ್ರೆ, ಒಂದು ಸೆಕೆಂಡಿಗೆ ಭೂಮಿನ ಏಳು ಸಾರಿ ಸುತ್ತಿಬರೋ ವೇಗ ಇರೋ ಬೆಳಕಿನ ಕಿರಣಕ್ಕೆ ಈ ಕೇಂದ್ರದಿಂದ ನಮ್ಮನ್ನ ತಲುಪಕ್ಕೆ 26,000 ವರ್ಷ ಬೇಕು. ಅಂದ್ರೆ ನಾವೀಗ ಅಲ್ಲಿರೋ ಯಾವ್ದೋ ನಕ್ಷತ್ರನ್ನ ನೋಡ್ತಾ ಇದ್ದೇವೆ ಅಂದ್ರೆ, ಅದು 26,000 ವರ್ಷಗಳ ಹಿಂದೆ ಹೇಗಿತ್ತೊ ಹಾಗೆ ನೋಡ್ತಾ ಇದ್ದೇವೆ ಅಂತ ಅರ್ಥ!

3. ಕಾಣ್ದೇ ಇರೋ ಈ ದೈತ್ಯ ಪತ್ತೆಯಾಗಿದ್ದಾದ್ರೂ ಹೇಗೆ ಅಂತೀರ?

ಈ ಕೇಂದ್ರದಲ್ಲಿರೋ ಕೆಲ್ವು ನಕ್ಷತ್ರಗಳು ವರ್ತಿಸೋ ರೀತೀನ ಗಮನಿಸ್ತಾ ಇದ್ದ ವಿಜ್ಞಾನಿಗಳು ಅವು ಗಂಟೆಗೆ ಅನೇಕ ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಈ ಕೇಂದ್ರನ್ನ ಗಿರ್ಕಿ ಹೊಡಿತಾ ಇವೆ. ಅದೂ ಅಂಡಾಕಾರದ ನಿರ್ದಿಷ್ಟ ಕಕ್ಷೆಗಳಲ್ಲಿ. ಆದ್ರೆ ಆ ಕೇಂದ್ರ ಎಂಥದು ಅಂತ ನೋಡಕ್ಕೆ ಹೋದ್ರೆ ಅಲ್ಲೇನೂ ಇಲ್ವೇ ಇಲ್ಲ! ಈ ನಕ್ಷತ್ರಗಳು ಕೇಂದ್ರದ ಹತ್ರ ಬಂದಾಗ ಎಷ್ಟು ವೇಗವಾಗಿ ಯೂಟರ್ನ್ ಮಾಡತ್ವೆ, ಎಷ್ಟು ಸಮಯದಲ್ಲಿ ಕಾಣದ ಕೇಂದ್ರನ್ನ ಗಿರಕಿ ಹೊಡೆಯತ್ವೆ ಅಂತೆಲ್ಲ ಗಣನೆ ಮಾಡಿ ಇಲ್ಲೊಂದು ದೈತ್ಯ ಕಪ್ಪುಕುಳಿ ಇರಲೇಬೇಕು, ಅನ್ನೋ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

4. ಈ ದೈತ್ಯ ಎಷ್ಟು ದೊಡ್ಡಿದೆ? ಅದೆಷ್ಟು ಹೊಟ್ಟೆಬಾಕ?

ಇದು ಆಕ್ರಮಿಸ್ಕೊಂಡಿರೋ ಜಾಗ ನಮ್ಮ ಸೂರ್ಯಂಗಿಂತ ಹತ್ತರಷ್ಟು ದೊಡ್ದಾಗಿದ್ದು, ನಮ್ಮ ಸೂರ್ಯಂಗಿಂತ ಮುವ್ವತ್ತು ಲಕ್ಷ ಪಟ್ಟು ಹೆಚ್ಚಿನ ದ್ರವ್ಯರಾಶಿಯ ಶಕ್ತಿಯಿಂದ ಆಗಿದೆ! ನಮ್ಮ ಪುಣ್ಯಕ್ಕೆ ಇಂಥ ಕೇಡಿಗ ಕಪ್ಪುಕುಳಿ ಇನ್ನೂ ಉಪ್ವಾಸ ಮಾಡ್ತಾ ಇದ್ಯಂತೆ. ಅದ್ರ ಹೊಟ್ಟೆಬಾಕತನ ಶುರು ಆಯ್ತು ಅಂದ್ರೆ ಅದು ಗುಳುಂ ಮಾಡಕ್ಕೆ ಸೆಳ್ಯೋ ದ್ರವ್ಯರಾಶಿಯಿಂದ ಹೊರಬರೋ ವಿಕಿರಣಗಳು ನಮ್ಮ ಹಾಲುಹಾದೀಲಿ ಬಹಳಷ್ಟನ್ನ ಏರುಪೇರು ಮಾಡೋದಂತೂ ದಿಟ.

5. ಅದು ತನ್ನ ಹೊಟ್ಟೇಲಿ ಬಚ್ಚಿಟ್ಟುಕೊಂಡಿರೋ ಗುಟ್ಟೇನು?

ಇದ್ರ ಹೊಟ್ಟೇಲಿ ನಮ್ಮ ಬ್ರಹ್ಮಾಂಡದ ಹುಟ್ಟು-ಸಾವಿನ ರಹಸ್ಯಾನೆ ಇದೆ ಅಂತ ಹೇಳಲಾಗ್ತಿದೆ. ಆದ್ರೆ ಇದ್ರ ಹೊಟ್ಟೇ ಒಳ್ಗೆ ಏನಿದೆ ಅಂತ ತಿಳ್ಕೊಳ್ಳೋದಾದ್ರೂ ಹೇಗೆ? ಅದು ಬಿಡ್ದೇ ಇಟ್ಕೊಂಡಿರೋ ವಸ್ತುಗಳೆಲ್ಲ ಶಕ್ತಿ ರೂಪದಲ್ಲಿ ಅದ್ರ ಗೂಢ ಗರ್ಭದಲ್ಲಿ ಅಡ್ಗಿದೆ. ಆದ್ರೆ ನಾವೇನಾದ್ರೂ ಕುಳಿಯ ಒಳ್ಗೆ ಹೋಗಕ್ಕೆ ನೋಡಿದ್ದೇ ಆದ್ರೆ, ದಿನಾ ಬೆಳ್ಗೆ ಹಲ್ಲುಜ್ಜಕ್ಕೆ ಹಾಕ್ಕೊಳೋ ಟೂತ್ ಪೇಸ್ಟ ಅಥವಾ ಒತ್ತು ಶಾವ್ಗೆ ಥರಾ ಆದರ ನಿಗೂಢ ಗರ್ಭಕ್ಕೆ ಸೇರಿ ಶಾಶ್ವತ್ವಾಗಿ ಕಣ್ಮರೆಯಾಗಿ ಹೋಗ್ತೀವಿ, ಜೋಕೆ!

6. ನಮ್ಮ ಸೌರವ್ಯೂಹಕ್ಕೂ ಈ ದೈತ್ಯನ ಹೊಟ್ಟೇಬಾಕತನ್ದ ಬಿಸಿ ತಟ್ಟತ್ತ?

ನಮ್ಮ ಹಾಲುಹಾದಿಯ ಹರಹು ಎಷ್ಟು ಅಂತ ಹೇಳ್ಬೇಕು ಅಂದ್ರೆ ಒಂದು ಹೋಲಿಕೆ ಕೊಡ್ಬೋದು: ನಮ್ಮ ಸೌರವ್ಯೂಹ ಸುಮಾರು ಒಂದು ಸೆಂಟೀಮೀಟರ್ ಜಾಗ ತೊಗೊಂಡ್ರೆ, ಹಾಲುಹಾದಿಯ ಹರಹು ನಮ್ಮ ಇಡೀ ದೇಶದಷ್ಟು!. ನಮ್ಮ ಸೂರ್ಯನಾದ್ರೋ ಈ ಹಾಲುಹಾದಿಯ ತಣ್ಣಗಿನ ಹೊರಗೇರಿಯಲ್ಲಿ  ನೆಲಸಿದ್ದಾನೆ ಎಂದು ಹೇಳಬಹುದು. ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಂದ್ರ ದೂರದರ್ಶಕ ಈ ದೈತ್ಯ ಕಪ್ಪುಕುಳಿಯಿಂದ ಹೊರಟ ಸ್ಫೋಟವನ್ನೆ ಮೊತ್ತಮೊದಲಿಗೆ ವರದಿ ಮಾಡಿದ್ದು. ಅನಂತರ ಶುರು ಆಯ್ತು ನೋಡಿ ಅದ್ರ ಜನ್ಮ ಜಾಲಾಡೋ ಶೋಧ. ಆದ್ರೆ, “ಚಂದ್ರ” ರವಾನ್ಸಿದ್ದು ನಿಜವಾಗ್ಲೂ ಒಂದು ಎಚ್ಚರಿಕೆ ಗಂಟೆ ಅಂತಾನೇ ಹೇಳ್ಬೇಕಾಗತ್ತೆ. ಅಂದ್ರೆ, ಈ ಕಪ್ಪುಕುಳಿ ತನ್ನ ಹತ್ತಿರದ ನಕ್ಷತ್ರಗಳ್ನ ಗುಳುಂ ಮಾಡಕ್ಕೆ ಶುರು ಆಗಿ ಇಪ್ಪಾತ್ತಾರು ಸಾವಿರ ವರ್ಷಗಳೇ ಆಗಿವೆ. ಆಮೇಲೆ ಅಲ್ಲಿ ಏನೇನಾಗಿದ್ಯೋ ಯಾರ್ ಬಲ್ಲರು?

7. ಎಲ್ಲ ನಕ್ಷತ್ರಪುಂಜಗಳ ಮಧ್ಯದಲ್ಲೂ ಕಪ್ಪುಕುಳಿಗಳು ಬೇಟೆಗಾಗಿ ಕಾದು ಕುಳಿತಿವ್ಯಾ?

ಹೌದು ಅಂತಾರೆ ವಿಜ್ಞಾನಿಗಳು. ಕಪ್ಪುಕುಳಿ ಇಲ್ದೇ ಇರೋ ನಕ್ಷತ್ರಪುಂಜ ವಿರಳ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಇದು ನಮ್ಮ ಬ್ರಹ್ಮಾಂಡದ ನಾಟಕರಂಗದಲ್ಲಿ ಒಂದು ಮುಖ್ಯಪಾತ್ರವನ್ನೆ ವಹಿಸ್ತಾ ಇದೆ. ನಮ್ಗೆ ಅತೀ ಸಮೀಪದ ಆಂಡ್ರೋಮೆಡ ಪುಂಜವು ನಮ್ಮ ಹಾಲುಹಾದಿಗೆ ಹತ್ತಿರ್ವಾಗ್ತಾ ಇದ್ದು, ಅದ್ರ ಮಧ್ಯದ ದೈತ್ಯ ಕಪ್ಪುಕುಳಿ ನಮ್ಮ ಹಾಲುಹಾದಿಯ ಕಪ್ಪುಕುಳಿಯನ್ನ ನುಂಗಿ ನೊಣೆಯಕ್ಕೆ ಹೊಂಚು ಹಾಕಿದ್ಯಂತೆ. ಈ ಎರಡು ಪುಂಜಗಳು ಒಂದಕ್ಕೊಂದು ಡಿಕ್ಕಿ ಕೊಟ್ಕೊಂಡು ಒಂದೇ ಪುಂಜವಾಗೋ ದಿನ ಬರತ್ತಂತೆ. ಆದ್ರೆ ಅದಕ್ಕಾಗೆ ಬರೇ ನಾನೂರು ಕೋಟಿ ವರ್ಷಗಳು ಕಾಯ್ಬೇಕು ಅಂತಾರೆ ಖಗೋಲ ಭವಿಷ್ಯವಾದಿಗಳು.