http://4.bp.blogspot.com/_ukp8Uwzy04E/TNgIhkmJuOI/AAAAAAAABEg/He9wVeaAPC0/s1600/DSC07405.JPG

ಭಾರತದಲ್ಲಿ ಬಹಳ ವೈವಿಧ್ಯತೆ ಇದೆ. ನಮ್ಮ ಹಬ್ಬಗಳನ್ನು ನೋಡ್ತಾ ಹೋದ್ರೂ‌ ಸಾಕು, ಇದು ಗೊತ್ತಾಗಿ ಹೋಗುತ್ತೆ. ಕೆಲವು ಹಬ್ಬಗಳು ಮೇಲುಮೇಲಕ್ಕೆ ಭಾರತದಲ್ಲೆಲ್ಲ ಒಂದೇ ಅನ್ನಿಸುತ್ತೆ. ಮಾರುಕಟ್ಟೆಯಲ್ಲಿ ಬೇಳೆ ಬೇಯಿಸಿಕೊಳ್ಳೋರಿಗಂತೂ ಹಂಗಿದ್ದರೇ ಒಳ್ಳೇದು. ಆದರೆ ಇದು ವೈವಿಧ್ಯತೆಯನ್ನ ಮುಚ್ಚಿ ಹಾಕುತ್ತೆ, ಅಷ್ಟೇ. ಉದಾಹರಣೆಗೆ ದೀಪಾವಳಿ ತೊಗೊಳ್ಳಿ… ನಮ್ಮ ಕಡೆ ಅದನ್ನ ‘ದಿವಾಲಿ’ ಅಂತ ಕರೆಯಲ್ಲ. ಆಷ್ಟೇ ಅಲ್ಲ, ನಮ್ಮ ದೀಪಾವಳಿಗೂ ಉತ್ತರಭಾರತದ ದಿವಾಲಿಗೂ ಬಹಳ ವ್ಯತ್ಯಾಸಗಳಿವೆ. ಕೆಳಗೆ ಅಂಥ 20 ವ್ಯತ್ಯಾಸಗಳ್ನ ಕೊಟ್ಟಿದೀವಿ, ನೋಡಿ…

1) ಉತ್ತರ ಭಾರತದಲ್ಲಿ ‘ದಿವಾಲಿ’ ಅನ್ನೋದು ಒಂದು ಹಬ್ಬದ ಹೆಸರು; ದಕ್ಷಿಣ ಭಾರತದಲ್ಲಿ ಅದೊಂದು ಹಬ್ಬದ ಹೆಸರೂ ಅಲ್ಲ, ಆ ಪದಕ್ಕೆ ಅರ್ಥವೂ ಇಲ್ಲ.

1-deepavali-celebrations-0311.jpg

2) ‘ದಿವಾಲಿ’ ಅನ್ನೋ ಉತ್ತರ ಭಾರತೀಯ ಪದಕ್ಕೆ ನಮ್ಮಲ್ಲಿ ಅತಿ ಹತ್ತಿರವಾದ ಪದ ‘ದಿವಾಳಿ’. ಈ ಳ-ಕಾರ ಇರೋ ಪದ ಉತ್ತರದ ಭಾಷೆಗಳಲ್ಲಿ ಇಲ್ಲ; ಅವರ ಭಾಷೆಗಳಲ್ಲಿ ಳ-ಕಾರ ಇಲ್ಲ.

3-diwali-greetings.jpg

3) ನಮಗೆ ‘ದಿವಾಲಿ’ಗೆ ಅತ್ಯಂತ ಹತ್ತಿರವಾದ ಪದ ‘ದಿವಾಳಿ’. ‘ದಿವಾಳಿಯಾಗೋದು’ ಅಂದ್ರೆ ಇದ್ದ ಬದ್ದ ದುಡ್ಡು, ಆಸ್ತಿ ಎಲ್ಲಾ ಕಳ್ಕೊಂಡು ತಲೆ ಮೇಲೆ ಕೈ ಇಟ್ಕೊಂಡು ಕೂತ್ಕೊಳೋದು ಅಂತರ್ಥ.

lo.jpg

4) ಆದ್ದರಿಂದ ಉತ್ತರ ಭಾರತದಲ್ಲಿ ‘ದಿವಾಲಿ’ ಅನ್ನೋದು ಸಂತೋಷದ ಸಂಕೇತ; ನಮ್ಮ ಕಡೆ ದುಃಖದ ಸಂಕೇತ.

woman-crying-landslide.jpg

5) ನಮ್ಮ ದೀಪಾವಳಿ ಶುರು ಆಗೋದು ಚತುರ್ದಶಿ ದಿನ. ಅವರ ದಿವಾಲಿ ಶುರು ಆಗೋದು ಅಮಾವಾಸ್ಯೆ ದಿನ.

narakachaturdashi.jpg

6) ನರಕ ಚತುರ್ದಶೀನ ಉತ್ತರ ಭಾರತದಲ್ಲಿ ಕೆಲವರು “ಛೋಟೀ ದಿವಾಲಿ” (ಅಂದ್ರೆ ಚಿಕ್ಕ ದಿವಾಲಿ) ಅಂತ ಕರಿಯೋದುಂಟು. ನಮಗೆ ಅದೇ ದೊಡ್ಡದು.

choti-diwali-naraka-chaturdashi.jpg

7) ಲಕ್ಷ್ಮೀ ಪೂಜೆ ದಿನ ಅವರಿಗೆ ಬಹಳ ಮುಖ್ಯ. ಅದನ್ನೇ ಅವರು ‘ದಿವಾಲಿ’ ದಿನ ಅನ್ನೋದು. ನಮಗೆ ಅದೂ ಒಂದು ಹಬ್ಬ, ಅಷ್ಟೇ.

305741.jpg

8) ನಮ್ಮ ದೀಪಾವಳಿ ಸಾಮಾನ್ಯವಾಗಿ ಅವರ ದಿವಾಲಿಗಿಂತ ಒಂದ್ ದಿನ ಹಿಂದೇನೇ ಶುರು ಆಗಿರುತ್ತೆ. ಯಾವಾಗ್ಲಾರೂ ಒಂದ್ಸಲ ಚತುರ್ದಶಿ ಮತ್ತೆ ಅಮಾವಾಸ್ಯೆ ಎರಡೂ ಒಂದೇ ದಿನಾಂಕ ಬಿದ್ದಾಗ ಮಾತ್ರ ಎರಡೂ ಒಂದೇ ದಿನ ಬರೋದು.

deepavali-subhashayagalu.jpg

9) ದೀಪಾವಳಿ ಬಂತೂಂದ್ರೆ ನಮಗೆ 3 ಅಥವಾ 4 ದಿನ ಹಬ್ಬ. ದಿವಾಲಿ ಬಂತೂಂದ್ರೆ ಅವರಿಗೆ 5 ದಿನ ಹಬ್ಬ.

diwali-celebrations-in-karnataka.jpg

10) ದೀಪಾವಳೀಗೂ ರಾಮಂಗೂ ಯಾವ ಸಂಬಂಧಾನೂ ಇಲ್ಲ. ಅವರ ದಿವಾಲಿಗೆ ರಾಮಾನೇ ಮುಖ್ಯ. ರಾಮ ವನವಾಸದಿಂದ ಅಯೋಧ್ಯೆಗೆ ವಾಪಸ್ ಬಂದಿದ್ದರ ನೆನಪಲ್ಲೇ ಅವರು ದಿವಾಲಿ ಮಾಡೋದು.

diwali-wallpapers-of-lord-rama.jpg

11) ದೀಪಾವಳೀಲಿ ನಾವು ಮಹಾಬಲಿ ಪಾತಾಳದಿಂದ ಭೂಮಿಗೆ ವಾಪಸ್ ಬರೋದನ್ನ ಸಂತೋಷದಿಂದ ನೆನಪಿಸಿಕೊಳ್ತೀವಿ. ದಿವಾಲಿಗೂ ಮಹಾಬಲಿಗೂ ಯಾವ ಸಂಬಂಧವೂ ಇಲ್ಲ.

vamanaa.jpg

12) ದೀಪಾವಳಿಯಲ್ಲಿ ವಾಮನಾವತಾರವನ್ನ ನೆನಪಿಸಿಕೊಳ್ತೀವಿ. ಅವರ ದಿವಾಲಿಗೂ ವಾಮನಂಗೂ ಯಾವ ಸಂಬಂಧವೂ ಇಲ್ಲ.

vishnuvarma.jpg

13) ದೀಪಾವಳಿಯಲ್ಲಿ ನಾವು ಒಬ್ಬ ದೈತ್ಯಕುಲದ ವ್ಯಕ್ತೀನ ನೆನಪಿಸಿಕೊಳ್ತೀವಿ (ಬಲಿ ಚಕ್ರವರ್ತಿ), ಕೊಂಡಾಡ್ತೀವಿ. ದಿವಾಲಿಯಲ್ಲಿ ಅವರು ಹಾಗೆ ಮಾಡಲ್ಲ.

033-vamana.jpg

14) ದಿವಾಲಿ ಸಮಯದಲ್ಲಿ (ಅದರಲ್ಲೂ ಧನ್ತೇರಸ್ ದಿನ) ಚಿನ್ನ ಕೊಂಡ್ಕೊಳೋದು ಒಳ್ಳೇದು ಅನ್ನೋ ನಂಬಿಕೆ ಅವರಲ್ಲಿದೆ. ನಾವು ಧನ್ತೇರಸ್ಸೂ ಮಾಡಲ್ಲ, ನಮ್ಮ ದೀಪಾವಳಿಗೂ ಚಿನ್ನ ಕೊಂಡ್ಕೊಳೋದಕ್ಕೂ ಯಾವ ವಿಶೇಷವಾದ ಸಂಬಂಧಾನೂ ಇಲ್ಲ.

workship-with-gold-coin-.jpg

15) ದಿವಾಲಿ ಸಮಯದಲ್ಲಿ (ಧನ್ತೇರಸ್ ದಿನ) ಅವರು ಆಯುರ್ವೇದದ ಪಿತಾಮಹ ಧನ್ವಂತರೀನ ನೆನಪಿಸಿಕೊಳ್ತಾರೆ. ನಮ್ಮ ದೀಪಾವಳಿಗೂ ಧನ್ವಂತರಿಗೂ ಯಾವ ಸಂಬಂಧಾನೂ ಇಲ್ಲ.

dhanvantari.jpg

16) ದೀಪಾವಳೀಲಿ ಕೃಷ್ಣನ ಪೂಜೆ 1 ದಿನ ನಡೆಯುತ್ತೆ (ನರಕಚತುರ್ದಶಿ ದಿವಸ). ಅವರು 2 ದಿನ ಮಾಡ್ತಾರೆ (ನರಕಚತುರ್ದಶಿ + ಗೋವರ್ಧನ ಪೂಜೆ).

1413732734_krishna_killed_narakasur_antim.jpg

17) ಅವರು ಗೋವರ್ಧನ ಪೂಜೆ ಮಾಡೋ ದಿನ ನಾವು ಬಲಿಪಾಡ್ಯಮಿ ಮಾಡ್ತೀವಿ; ನಮ್ಮಲ್ಲಿ ಗೋವರ್ಧನ ಪೂಜೆ ಅಂತ ಏನೂ ಮಾಡಲ್ಲ.

govardhan-puja.jpg

18) ದಿವಾಲಿ ಕೊನೆ ದಿನ ಅವರು ಭಾಯಿ ದೂಜ್ ಅಂತ ಮಾಡ್ತಾರೆ, ನಮ್ಮಲ್ಲಿ ಭಾವ ಬಿದಿಗೆ ಅಂತ ಮಾಡ್ತೀವಿ. ಎರಡೂ ಒಂದೆ, ಆದ್ರೆ ಇದು ಕರ್ನಾಟಕದ ದಕ್ಷಿಣದ ಜಿಲ್ಲೆಗಳಲ್ಲಿ ಮಾಡಲ್ಲ.

bhai-dooj-pic.jpg

19) ದೀಪಾವಳಿಗೂ ಸ್ವೀಟ್ಸ್ ತಿನ್ನೋದಕ್ಕೂ ಯಾವ ವಿಶೇಷವಾದ ಸಂಬಂಧವೂ ಇಲ್ಲ; ಬೇರೆ ಹಬ್ಬಗಳಲ್ಲಿ ಎಷ್ಟೋ ಅಷ್ಟೇ. ಅವರ ಕಡೆ ದಿವಾಲಿ ಬಂತೂಂದ್ರೆ ಸ್ವೀಟ್ಸ್ ತಿನ್ನೋದು, ಹಂಚೋದು ಇವೆಲ್ಲ ತೀರಾ ಜಾಸ್ತಿ.

2762617710_985baa91db_z.jpg

20) ಕೆಲಸಕ್ಕೆ, ಓದಕ್ಕೆಲ್ಲ ಮನೆಯಿಂದ ದೂರ ಹೋಗಿರೋರು ದಿವಾಲಿಗೆ ವಾಪಸ್ ಬರಕ್ಕೆ ಆಗದೆ ಹೋದ್ರೆ ತೀರಾ ಬೇಜಾರ್ ಮಾಡ್ಕೋತಾರೆ (ಕ್ರಿಶ್ಚಿಯನ್ಸು ಕ್ರಿಸ್ಮಸ್ ದಿನ ವಾಪಸ್ ಬರಕ್ಕೆ ಆಗದೆ ಹೋದ್ರೆ ಮಾಡ್ಕೋತಾರಲ್ಲ, ಆ ತರಹ). ನಮ್ಮಲ್ಲಿ ದೀಪಾವಳಿ ಅಂದ್ರೆ ಅಷ್ಟೆಲ್ಲ ಸೆಂಟಿ ಆಗಲ್ಲ ಜನ. ಅದೂ ಒಂದು ಹಬ್ಬ, ಅಷ್ಟೇ. ಇದೇ ಅತಿ ಮುಖ್ಯವಾದ ಹಬ್ಬ ಅನ್ನಕ್ಕಾಗಲ್ಲ. ಅವರಿಗೆ ಇಡೀ ವರ್ಷದಲ್ಲಿ ದಿವಾಲೀನೇ ತೀರ ಮುಖ್ಯವಾದ ಹಬ್ಬ.

deepavali-yt.jpg

ಇದೆಲ್ಲ ಕೇಳಿದ ಮೇಲೆ ಯಾರಾದರೂ ‘Happy Diwali’ ಅಂದ್ರೆ ಅವರಿಗೆ ಸ್ವಲ್ಪ ವಿವರಿಸಿ ಹೇಳಿದರೆ ಒಳ್ಳೇದು… ಅಲ್ವಾ?