https://d28dwf34zswvrl.cloudfront.net/wp-content/uploads/2017/08/Parle-G-02.png

ನಮ್ಮಲ್ಲಿ ಪಾರ್ಲೇ ಜಿ ಬಿಸ್ಕೆಟ್ ತಿಂದೇ ಇರೋ ಮನುಷ್ಯಾನೇ ಇಲ್ಲ ಬಿಡಿ… ಚಿಕ್ಕೋರಿಂದ ದೊಡ್ಡೋರ್ವರ್ಗೂ ಪಾರ್ಲೇ ಜಿ ನಮ್ಗೆಲ್ಲಾ ಫೇವರೆಟ್ ಬಿಸ್ಕೆಟ್. ಕೆಲವು ಮನೆಗಳಲ್ಲಂತೂ ಅದಿಲ್ದೇ ಟೀ, ಕಾಫೀನೇ ಇಲ್ಲ! ಇನ್ನು, ಈ ಬರ, ಪ್ರವಾಹ… ಇಂತಾ ಟೈಮಲ್ಲೆಲ್ಲಾ ಪಾರ್ಲೇ ಜಿ ಎಷ್ಟೋ ಜೀವಗಳನ್ನ ಉಳಿಸ್ಬಿಟ್ಟಿದೆ! ಹೀಗೆ ಈ ಪಾರ್ಲೇ ಜಿ ಬಿಸ್ಕತ್ತು ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ ಅಂತ ಅಂದ್ರೆ ಖಂಡಿತ ತಪ್ಪಾಗಲ್ಲ. 1 ರೂಪಾಯಿಂದ ಹಿಡಿದು, 100 ರೂಪಾಯಿವರ್ಗೂ ಸಿಗೋ ಈ ಬಿಸ್ಕತ್ತು ಮತ್ತು ಒಟ್ಟಾರೆ ಪಾರ್ಲೆ ಅನ್ನೋ ಬ್ರಾಂಡ್, ಬಿಸ್ಕೆಟ್ ಮತ್ತು ಕನ್ಫೆಕ್ಷನರಿ ಇಂಡಸ್ಟೀಲೇ ಅತೀ ದೊಡ್ಡ ಹೆಸ್ರು. ಆದ್ರೆ ಈ ಯಶಸ್ಸು, ನಮ್ ಜನಗಳ ಮನಸ್ಸಲ್ಲಿ ಒಂದು ಶಾಶ್ವತವಾದ ಸ್ಥಾನ ಪಡ್ಕೊಳೋದು… ಎಲ್ಲಾ ಹೇಗ್ ಸಾಧ್ಯ ಆಯ್ತು ಅಂತ ಗೊತ್ತಾ? ಆ ಸ್ವಾರಸ್ಯಕರವಾದ ಕಥೇನ ನಾವಿವತ್ತು ನಿಮಗೆ ಹೇಳ್ತೀವಿ ಕೇಳಿ.

ಸ್ವದೇಶಿ ಚಳುವಳಿಯ ಕೂಸು

ಈ ಪಾರ್ಲೇ ಅನ್ನೋ ಬ್ರಾಂಡ್ ಶುರು ಆಗೋದಕ್ಕೆ ಸ್ವದೇಶಿ ಚಳುವಳೀನೇ ಒಂದ್ರೀತಿ ಕಾರಣ. ಪಾರ್ಲೇ ಹುಟ್ಟುಹಾಕಿದ ಚೌಹಾನ್ ಕುಟುಂಬದೋರು ಮೂಲತಃ ಬಟ್ಟೆ ವ್ಯಾಪಾರಿಗಳು. ಸ್ವಾತಂತ್ರ್ಯ ಸಿಗೋ ಮುಂದೆ ರೇಷ್ಮೆ ಬಹುತೇಕವಾಗಿ ಯೂರೋಪಿಂದಾನೇ ಬರ್ತಾ ಇದ್ದಿಂದ್ರಿಂದ ಅದಕ್ಕೆ ಬಹಿಷ್ಕಾರ ಹಾಕಿ, ಸ್ವದೇಶಿ ಚಳವಳಿಗೆ ಬೆಂಬಲ ಕೊಡ್ಬೇಕು ಅಂತ ನಿರ್ಧಾರ ಮಾಡಿ ಈ ಕುಟುಂಬದೋರು ಬಟ್ಟೆ ವ್ಯಾಪಾರ ಬಿಟ್ಟು ಚಾಕ್ಲೇಟು, ಮಿಠಾಯಿ ವ್ಯಾಪಾರ ಶುರು ಮಾಡ್ಕೋತಾರೆ.

ಇದಕ್ಕೋಸ್ಕರ 1929ರಲ್ಲಿ ಬಾಂಬೇಲಿ ಮಾರಾಟಕ್ಕಿದ್ದ ಒಂದು ಹಳೆ ಫ್ಯಾಕ್ಟರೀನ 75,000 ರೂಪಾಯಿ ಕೊಟ್ಟು ಖರೀದಿ ಮಾಡಿ, ಚೌಹಾನ್ ಕುಟುಂಬದ ಹಿರಿ ತಲೆ ನರೋತ್ತಮ್ ಮೋಹನ್ ಲಾಲ್ ಚೌಹಾನ್ ಜರ್ಮನಿಗೆ ಹೋಗಿ, ಈ ಚಾಕ್ಲೇಟ್, ಬಿಸ್ಕೆಟ್ ಮಾಡೋ ಕೆಲಸ ಕಲ್ತ್ಕೊಂಡು, ಅದಕ್ಕೆ ಬೇಕಾಗಿರೋ ಮಷೀನನ್ನೂ 60,000 ಕ್ಕೆ ಖರೀದಿ ಮಾಡಿ ಭಾರತಕ್ಕೆ ವಾಪಸ್ಸಾದ್ರು.

ಕಷ್ಟದ ಕೆಲವು ದಿನಗಳು

ತಮ್ಮ ಹಳ್ಳಿಯಿಂದ 12 ಜನ್ರನ್ನ ಕರ್ಕೊಂಡು, ಚೌಹಾನ್ ಅಣ್ಣ ತಮ್ಮಂದಿರು ಫ್ಯಾಕ್ಟರಿ ಎಲ್ಲಾ ಕೆಲ್ಸಾನೂ ನೋಡ್ಕೋತಿದ್ರು. ಇಂಜಿನಿಯರ್, ಮೆಕ್ಯಾನಿಕ್, ಬೇಕರ್ಸ್… ಎಲ್ಲಾ ಅವ್ರೇ. ಈ ಭರಾಟೇಲಿ ಅವ್ರ ಫ್ಯಾಕ್ಟರೀಗೆ ಹೆಸ್ರಿಡೋದೂ ಅವ್ರಿಗೆ ಹೊಳೀಲಿಲ್ಲ. ಆಮೇಲೆ, ಆ ಫ್ಯಾಕ್ಟರಿ ಇದ್ದ ಜಾಗಾನೇ ದೇಶದ ಅತೀ ದೊಡ್ಡ ಬಿಸ್ಕೆಟ್ ಬ್ರಾಂಡ್ಗೆ ಹೆಸ್ರಾಯ್ತು! (ವಿಲೇ ಪಾರ್ಲೇಲಿರೋ ಪಾರ್ಲೆ ಬಿಸ್ಕೆಟ್ ಕಂಪನಿ)

ವಿದೇಶೀ ಚಾಕ್ಲೆಟ್ ಮಿಠಾಯಿಗಳ ಜೊತೆ ಸ್ಪರ್ಧೆ ಭಾರೀ ಜೋರಾಗೇ ಇತ್ತು. ಆದ್ರೆ ಚೌಹಾನ್ ಸಹೋದರರು ಸೋಲೊಪ್ಕೊಳಕ್ಕೆ ತಯಾರಿರ್ಲಿಲ್ಲ. ಪ್ರತೀ ಮನೆ ಮತ್ತು ಅಂಗಡಿ ಬಾಗಿಲಿಗೆ ಹೋಗಿ ತಮ್ಮ ಆರೆಂಜ್ ಕ್ಯಾಂಡಿ ಮತ್ತು ಟಾಫಿ ಮಾರ್ತಿದ್ರು. ಆ ಕಾಲಕ್ಕೆ ವರ್ಷಕ್ಕೆ 40 ಟನ್ ಟಾಫಿ ಮಾಡಿ 50,000 ರುಪಾಯಿ ಟರ್ನೋವರ್ ಮಾಡ್ತಿತ್ತು. ಮುಂದೆ ಸಕ್ಕರೆ ಬೆಲೆ ಜಾಸ್ತಿಯಾಗಿದ್ರಿಂದ ಲಾಸ್ ಆಗತ್ತೆ ಅನ್ನೋ ಕಾರಣಕ್ಕೆ ಫ್ಯಾಕ್ಟರೀನ ಮಾರೋ ನಿರ್ಧಾರ ತಗೊಂಡ್ರು.ಆದ್ರೂ ಆ ಟೈಮಲ್ಲೂ ಪಾರ್ಲೆ 3,000 ರುಪಾಯಿ ಲಾಭ ಮಾಡಿದ್ರಿಂದಾ ಫ್ಯಾಕ್ಟರಿ ಮಾರೋ ಐಡಿಯಾ ಕೈ ಬಿಟ್ರು. ಅದೇ ಟೈಮಲ್ಲಿ ಚೌಹಾನ್ ಕುಟುಂಬಕ್ಕೆ ಮಾರ್ಕೆಟ್ಟಲ್ಲಿ ಬಿಸ್ಕೆಟ್ ಅಗತ್ಯ ಎಷ್ಟಿದೆ ಅನ್ನೋದು ಗೊತ್ತಾಗಿ, ನಮ್ಮೆಲ್ಲರ ಮೆಚ್ಚಿನ ಬಿಸ್ಕೆಟ್ ಹುಟ್ಕೊಳಕ್ಕೆ ಕಾರಣ ಆಯ್ತು.

ನಮ್ ಫೇವರೆಟ್ ಪಾರ್ಲೇ ಜಿ ಹುಟ್ಕೊಂಡಿದ್ದು

ಅದೇ ಕಥೆ ಪುನಃ ರಿಪೀಟ್ ಆಯ್ತು. 1939ರಲ್ಲಿ ಒಂದು ಬಿಸ್ಕೆಟ್ ಫ್ಯಾಕ್ಟರಿ ಕೊಂಡ್ಕೊಂಡು, ನರೋತ್ತಮ್ ಇಂಗ್ಲೆಂಡಿಗೋಗಿ ಬಿಸ್ಕೆಟ್ ಮಾಡೋ ತರಬೇತಿ ತಗೊಂಡ್ರು. ಅಲ್ಲಿಂದ ಬರೋವಾಗ 1,50,000 ರುಪಾಯಿನ್ ಮಷೀನೂ ತಂದ್ರು. 50 ಫೀಟ್ ಉದ್ದ ಇರೋ ಮಷೀನು ಮೊಟ್ಟ ಮೊದಲ್ನೇ ಸಲ ಬಿಸ್ಕೆಟ್ ತಯಾರ್ ಮಾಡ್ತು. ದಿನ ಕಳೀತಿದ್ದಂಗೆ, ಬಿಸ್ಕೆಟ್ ಬ್ಯುಸಿನೆಸ್ ಚನ್ನಾಗ್ ಬೆಳೆದು ಅವ್ರಿಗೆ ಯಶಸ್ಸು ತಂದುಕೊಡ್ತು. ಇದೇ ಬಿಸ್ಕೆಟ್ಟೇ ಈಗ ನಾವೆಲ್ಲಾ ನಾಲಿಗೆ ಚಪ್ಪರಿಸಿ ತಿನ್ನೋ ಪಾರ್ಲೇ ಜಿ!

1.5 ಲಕ್ಷದಿಂದ ಶುರು ಆದ ಬ್ಯುಸಿನೆಸ್ಸು ಈಗ 5,000 ಕೋಟಿ ಬೆಲೆ ಬಾಳತ್ತೆ!

ಈಗ ಒಂದಿನಕ್ಕೆ 400 ಮಿಲಿಯನ್ ಪಾರ್ಲೇ ಜಿ ಬಿಸ್ಕೆಟ್ಗಳು ತಯಾರಾಗುತ್ವಂತೆ! ಬೇರೆ ಬೇರೆ ಸೈಜು, ಪ್ಯಾಕೆಟ್ಗಳಲ್ಲಿ ಬರೋ ಈ ಪಾರ್ಲೇಜಿ, ವರ್ಷಕ್ಕೆ 14, 600 ಕೋಟಿ ಪೀಸ್ ಮಾರಾಟ ಆಗುತ್ತೆ! ಸ್ವಾತಂತ್ರ ಬಂದ್ಮೇಲೆ ಈ ’ಕೋಟಾ ರಾಜ್’ ಕಾಯ್ದೆ, ಅದು ಇದು ಅಂತ ಎಷ್ಟೋ ತಾಪತ್ರಯಗಳು ಬಂದ್ರೂ ಪಾರ್ಲೇ ಜಿ ಸೋಲೊಪ್ಪಿಲ್ಲ!

ಗ್ಲೂಕೋಸ್ ಬ್ಯುಸ್ಕೆಟ್ಟಿಂದ ಶುರುವಾದ ಕಂಪನಿ ಮುಂದೆ ಸಾಲ್ಟ್ ಬಿಸ್ಕೆಟ್, ಮ್ಯಾಂಗೋ ಬೈಟ್, ಕಿಸ್ಮಿ ಚಾಕ್ಲೇಟ್, ಪಾಪಿನ್ಸ್, ಹೈಡ್ ಅಂಡ್ ಸೀಕ್… ಇತ್ತೀಚೆಗೆ ಬಂದ ಕಚ್ಚಾ ಮ್ಯಾಂಗೋ ಬೈಟ್, ಮೆಲೋಡಿ ತರದ ಎಷ್ಟೋ ಸ್ವಾದಿಷ್ಟ ಚಾಕ್ಲೆಟ್ ಬಿಸ್ಕೆಟ್ಟುಗಳನ್ನ ನಮ್ಗೆ ಕೊಟ್ಟಿದೆ.

 ಸ್ವತಂತ್ರ ಪೂರ್ವದಿಂದ ಬ್ಯುಸಿನೆಸ್ಸಲ್ಲಿದ್ರೂ ಪ್ರತೀ ದಿನ ಅಣಬೆ ತರ ಹುಟ್ಕೋತಾನೇ ಇರೋ ಹೊಸ ಹೊಸ ಬ್ರಾಂಡ್ಗಳ ಜೊತೆ ಸೆಣಸಾಟ ಇದ್ದಿದ್ದೇ.

 

ಎಷ್ಟೇ ಹೊಸ ಹೊಸ ಚಾಕ್ಲೆಟ್ ಬಿಸ್ಕೆಟ್ ಕಂಪನಿಗಳು ಬಂದು ಹೋಗ್ಲಿ, ಇಷ್ಟ್ ವರ್ಷದಿಂದ ನಮ್ ನಾಲ್ಗೇಗೆ ರುಚಿ ಕೊಡೋದ್ರ ಜೊತೆ ನಮ್ಮ ಮನಸ್ಸಿಗೂ ಮುದ ಕೊಡೋ ಎಷ್ಟೋ ನೆನಪುಗಳನ್ನ ಪಾರ್ಲೇ ನಮಗೆ ಕೊಟ್ಟಿದೆ ಅಂದ್ರೆ ತಪ್ಪಾಗಲ್ಲ! ಏನಂತೀರಾ?