http://www.wonderslist.com/wp-content/uploads/2016/07/Successful-People-with-Disabilties-Sudha-Chandran.jpg

"ಡಿಸ್ ಎಬಿಲಿಟಿ ಇಸ್ ಅ ಸ್ಟೇಟ್ ಆಫ್ ಮೈಂಡ್" ಅನ್ನೋ ಇಂಗ್ಲೀಷ್ ಗಾದೆಯ ಪ್ರಕಾರ ಅಂಗ ವೈಕಲ್ಯ ಅನ್ನೋದು ಮನಸ್ಸಿನ ಸ್ಥಿತಿ ಅಷ್ಟೇ. 

ಈ 17 ಮಂದಿ ಭಾರತೀಯರ ಬಗ್ಗೆ ತಿಳ್ಕೊಂಡರೆ ಜೀವನದಲ್ಲಿ ಸಾಧನೆ ಮಾಡೋಕೆ ವೈಕಲ್ಯ ಒಂದು ಅಡ್ಡಿ ಅಲ್ಲವೇ ಅಲ್ಲ ಅನ್ಸೋದ್ರಲ್ಲಿ ಆಶ್ಚರ್ಯಾನೇ ಇಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರೋ ಇವರುಗಳಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅಂದರೆ ತಪ್ಪಾಗಲ್ಲ.

1. ದೀಪಾ ಮಲ್ಲಿಕ್, ಪ್ಯಾರ ಅಥ್ಲೀಟ್

ಭಾರತದ ಪ್ರಪ್ರಥಮ ಮಹಿಳೆಯಾಗಿ ಪ್ಯಾರ ಒಲಂಪಿಕ್ಸ್ ನಲ್ಲಿ ಪದಕ ಗಳಿಸಿದ ಇವರು, 2016 ರ ಸಮ್ಮರ್ ಪ್ಯಾರಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ರು. ಎಷ್ಟೋ ಅಡ್ವೆಂಚರ್ ಸ್ಪೋರ್ಟ್ಸಲ್ಲಿ ಭಾಗವಹಿಸಿದ್ದಾರೆ. ಹಿಮಾಲಯನ್ ಮೋಟರ್ ಸ್ಪೋರ್ಟ್ಸ್ ಅಸ್ಸೋಸಿಯೇಷನ್ ಹಾಗು ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡಿದ್ದಾರೆ.

 

2.  ರವೀಂದ್ರ ಜೈನ್, ಸಂಗೀತ ನಿರ್ದೇಶಕ

70 ರ ದಶಕದ ಮ್ಯೂಸಿಕ್ ಮಾಂತ್ರಿಕ ರವೀಂದ್ರ ಜೈನ್ ಅವರ ಸಂಗೀತ ನೆನಪಿದೇ ತಾನೆ? ಅವರ ಬಗ್ಗೆ ತಿಳಿದರೆ ನಿಜಕ್ಕೂ ಖುಷಿ ಆಗುತ್ತೆ. ಹುಟ್ಟು ಕುರುಡರಾಗಿದ್ದರೂ ತನ್ನ ಸಂಗೀತದ ಆಸಕ್ತಿಯಿಂದ ಭಾರತೀಯ ಚಿತ್ರರಂಗದ ಒಬ್ಬ ಪ್ರಖ್ಯಾತೆ ಸಂಗೀತ ನಿರ್ದೇಶಕರು. ಒಂದಿನ ಸಿನಿಮಾ ರೆಕಾರ್ಡಿಂಗ್ ಮಾಡೋ ಸಮಯದಲ್ಲಿ ತನ್ನ ತಂದೆಯ ಸಾವಿನ ಸುದ್ಧಿ ತಿಳಿದರೂ ಕೆಲಸ ಪೂರ್ತಿ ಮಾಡೋವರೆಗೂ ಅಲ್ಲಿಂದ ಕದಲಿರಲಿಲ್ವಂತೆ. ಇದು ಅವರ ವೃತ್ತಿ ಪ್ರತೀ ಅವರಿಗಿದ್ದ ಬದ್ಧತೆಗೆ ಒಂದು ಉದಾಹರಣೆ.

 

 3. ಗಿರೀಶ್ ಶರ್ಮ, ಬ್ಯಾಡ್ಮಿಂಟನ್ ಆಟಗಾರ

ತನ್ನ ಚಿಕ್ಕ ವಯಸ್ಸಿನಲ್ಲೇ ಟ್ರೈನ್ ಆಕ್ಸಿಡೆಂಟಲ್ಲಿ  ಕಾಲು ಕಳ್ಕೊಂಡ್ರೂ, ಎಲ್ಲಾ ಮಕ್ಕಳ ಜೊತೆ ಸಾಮಾನ್ಯವಾಗೇ ಆಟ ಆಡ್ತಾ ಮುಂದುವರೆದು, ಇವತ್ತು ಒಂದೇ ಕಾಲಿನಲ್ಲಿ ಇಡೀ ಕೋರ್ಟ್ ಓಡಾಡ್ತಾ  ಟೆನಿಸ್ ಆಡೋ ಧೀರ. ಇವರನ್ನು ನೋಡಿದ್ರೆ, ನಾವೂ ಭಾರತೀಯರಾಗಿರೋದಕ್ಕೆ ಖಂಡಿತಾ ಹೆಮ್ಮೆಯಾಗತ್ತೆ.

 

4. ಶೇಖರ್ ನಾಯಕ್, ಕ್ರಿಕೆಟ್ ಆಟಗಾರ

ಕುರುಡರಾದರೂ ಕ್ರಿಕೆಟ್ ಮೇಲಿರೋ ಆಸೆ ಕಿಂಚಿತ್ತೂ ಕಮ್ಮಿ ಆಗ್ಲಿಲ್ಲ. ಇವರು ಟಿ 20 ಬ್ಲೈಂಡ್ ವರ್ಲ್ಡ್ ಚ್ಯಾಂಪಿಯನ್ ಟೀಮಲ್ಲಿದ್ರು. ಇವರ ಹೆಸರಲ್ಲಿ 32 ಸೆಂಚುರಿಗಳಿವೆ. ಸಾಕಷ್ಟು ದುಡ್ಡು ಮತ್ತು ಸಾಮಾಜಿಕ ತೊಂದರೆಗಳನ್ನ ಮೀರಿ ಮೇಲೆ ಬಂದಿದ್ದಾರೆ ಈ ನಮ್ಮ ಶಿವಮೊಗ್ಗದ ಹುಡುಗ.

 

5. ಹೆಚ್ ರಾಮಕೃಷ್ಣ, ಪತ್ರಕರ್ತ

ಎರಡೂವರೆ ವರ್ಷಕ್ಕೇ ಪೋಲಿಯೋದಿಂದ ಎರಡೂ ಕಾಲು ಕಳ್ಕೊಂಡು, ಶಾಲೇಲಿ ಓದೋಕ್ಕಾಗದೇ,ಕೆಲಸ ಹುಡುಕೋಕೂ ಕಷ್ಟ ಆಗಿ ಕೊನೆಗೆ 40 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿರೋ ಇವರು, ಈಗೊಂದು ದೊಡ್ಡ ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾಗಿ ಕೆಲಸ ಮಾಡ್ತಿದ್ದಾರೆ. ಅಲ್ಲದೇ ವಿಕಲ ಚೇತನರ ಸಹಾಯಕ್ಕಾಗಿ ಕೃಪ ಅನ್ನೋ ಸಂಸ್ಥೆ ಕೂಡಾ ನಡೆಸ್ತಿದ್ದಾರೆ.

 

6. ಪ್ರೀತಿ ಶ್ರೀನಿವಾಸನ್, ಕ್ರಿಕೆಟ್ ಆಟಗಾರ್ತಿ

ತಮಿಳುನಾಡಿನ ಅಂಡರ್ 19  ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದ ಪ್ರೀತಿ ಶ್ರೀನಿವಾಸನ್, ಒಂದು ಸ್ವಿಮ್ಮಿಂಗ್ ಆಕ್ಸಿಡೆಂಟಲ್ಲಿ ಕುತ್ತಿಗೆಯ ಕೆಳಭಾಗದ ಸ್ವಾಧೀನ ಕಳ್ಕೊಂಡರೂ ಮಿಕ್ಕ ವಿಕಲಚೇತನ ಹೆಣ್ಣುಮಕ್ಕಳಿಗೆ ಸಹಾಯ ಮಾಡಕ್ಕೆ ಸೋಲ್ ಫ್ರೀ ಅನ್ನೋ ಸಂಸ್ಥೆ  ತೆಗೆದ್ರು. ಇದರ ಮೂಲಕ ಅವರನ್ನ ಹುರಿದುಂಬಸಿ, ಸ್ವತಂತ್ರವಾಗಿ ಜೀವನ ನಡೆಸೋ ಥರ ತಯಾರು ಮಾಡೋ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದಾರೆ.

 

7. ಡಾ. ಸತೇಂದರ್ ಸಿಂಗ್, ವಿಕಲಚೇನರಿಗಾಗಿ ಕೆಲಸ ಮಾಡೋ ವಿಕಲಚೇತನ ವೈದ್ಯ

ಒಂಬತ್ತನೇ ತಿಂಗಳಲ್ಲೇ ಪೋಲಿಯೋ ಅಟ್ಯಾಕ್ ಆದ ಇವರು, ತನ್ನ ಥರದ ಹಲವರಿಗೆ ಜೀವನ ಸುಲಭ ಆಗಲಿ ಅಂತ ಹೊರಾಟ ಮಾಡ್ತಾರೆ. ಏ.ಟಿ.ಎಮ್ ಗಳಲ್ಲಿ ರಾಂಪ್ಗಳು ಬರೋಕೆ ಇವರೇ ಕಾರಣ.ಅಲ್ಲದೇ ಪೋಸ್ಟ್ ಆಫೀಸ್ ಮತ್ತೆ ಮೆಡಿಕಲ್ ಸೆಂಟರ್ಗಳಲ್ಲೂ ಈಗ ರಾಂಪ್ಸ್ ಇರೋ ಹಾಗೆ ಮಾಡಿದ್ದಾರೆ. ಇನ್ನು ವಿಕಲಚೇತನರಿಗೋಸ್ಕರ ಇವರು ಇನ್ಫೈನೈಟ್ ಎಬಿಲಿಟಿ ಅನ್ನೋ ಸಂಸ್ಥೆ ಕೂಡ ನಡೆಸ್ತಿದ್ದಾರೆ.

 

8. ಹೆಚ್. ಬೋನಿಫೇಸ್ ಪ್ರಭು, ಟೆನ್ನಿಸ್ ಆಟಗಾರ

ಡಾಕ್ಟರ್ಗಳ ಬೇಜವಾಬ್ದಾರಿಯಿಂದ ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಪೈನಲ್ ಕಾರ್ಡ್ ತೊಂದರೆಯಾಗಿ, ಎರಡೂ ಕಾಲುಗಳಲ್ಲಿ ಸ್ವಾಧೀನ ಕಳ್ಕೊಂಡ್ರೂ, ಪ್ರಭು ನಮ್ಮೆಲ್ಲರ ಥರಾನೇ ನಾರ್ಮಲ್ ಸ್ಕೂಲಲ್ಲೇ ಓದು ಮುಂದುವರ್ಸಿದ್ರು. ಸತತವಾಗಿ ಕಷ್ಟಪಟ್ಟು ಜಗತ್ತಿನ ಒಬ್ಬ ಶ್ರೇಷ್ಠ ವೀಲ್ ಚೇರ್ ಟೆನ್ನಿಸ್ ಪಟು ಆದ್ರು. 1998 ವರ್ಲ್ಡ್ ಚಾಂಪಿಯನ್ಶಿಪ್ಪಲ್ಲಿ ಮೆಡಲ್ ಗೆದ್ದ ಇವರು, 2014ರಲ್ಲಿ ಪದ್ಮಶ್ರೀನೂ ಪಡ್ಕೊಂಡ್ರು.

 

9. ಸಾಯಿ ಪ್ರಸಾದ್ ವಿಶ್ವನಾಥ್, ಸ್ಕೈ ಡೈವರ್

ಮಗುವಾಗಿದ್ದಾಗ ತನ್ನ ದೇಹದ ಕೆಳಭಾಗದ ಸ್ವಾಧೀನ ಕಳೆದುಕೊಂಡರೂ, ಸಾಯಿ ಪ್ರಸಾದ್ ಆತ್ಮಸ್ಥೈರ್ಯ ಮಾತ್ರ ಯಾವತ್ತೂ ಕಮ್ಮಿ ಆಗ್ಲಿಲ್ಲ. 14,000 ಅಡಿ ಮೇಲಿಂದ ಸ್ಕೈ ಡೈವಿಂಗ್ ಮಾಡಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆ ಇವರದ್ದು.  ಈ ಸಾಧನೆಯಿಂದ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಜಾಗ ಪಡ್ಕೊಂಡಿದ್ದಾರೆ. ಬುದ್ದಿವಂತ ಬಡ ಮಕ್ಕಳ ಓದಿಗೆ ಆರ್ಥಿಕ ಸಹಾಯ ನೀಡೋ ಸಲುವಾಗಿ ಸಹಸ್ರ ಅನ್ನೋ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ. ಈಗ ಒಂದು MNCಲಿ ದೊಡ್ಡ ಹುದ್ದೇಲಿದ್ದಾರೆ.

 

10. ಅಕ್ಬರ್ ಖಾನ್, ಸಂಗೀತಗಾರ

ರಾಜಸ್ಥಾನದ ಯಾವ್ದೋ ಮೂಲೇಲಿ ಹುಟ್ತಾನೇ ಅಕ್ಬರ್ ಖಾನ್ ಕಣ್ಣು ಕಳ್ಕೊಂಡ್ರು. ಬಾಲ್ಯ ಕೂಡ ಕಷ್ಟದಲ್ಲೇ ಕಳೀತು. ಇವರು ಕುರುಡರಾಗಿದ್ದ ತನ್ನ ಅಣ್ಣನ ಸಹಾಯದಿಂದ ಓದಿನಲ್ಲಿ ಮುಂದುವರೆದವರು. ಸಂಗೀತದಲ್ಲಿ ತಮಗಿದ್ದ ಆಸಕ್ತಿಯಿಂದ ಹಲವಾರು ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ರು. ಇವರ ಸಂಗೀತ ಜ್ಞಾನ ನೋಡಿ ಹಲವು ಕಾರ್ಯಕ್ರಮಗಳಲ್ಲಿ ಇವರನ್ನ ತೀರ್ಪುಗಾರರಾಗಿ ಕೂಡ ಕರಿಯಕ್ಕೆ ಶುರು ಮಾಡಿದ್ರು. ಇವರಿಗೆ 1989ರಲ್ಲಿ ನ್ಯಾಷನಲ್ ಅವಾರ್ಡ್ ಫಾರ್ ವೆಲ್ಫೇರ್ ಆಫ್ ಡಿಸ್ಅಬಿಲಿಟೀಸ್ ಅನ್ನೋ ಪುರಸ್ಕಾರ ಸಿಕ್ತು. 

 

11. ಅರುಣಿಮಾ ಸಿನ್ಹಾ, ಮೌಂಟ್ ಎವೆರೆಸ್ಟ್ ಚಾರಣೆ

ದುರದೃಷ್ಟವಶಾತ್ ಒಂದ್ಸರ್ತಿ ಒಂದಷ್ಟು ಜನ ಕಳ್ಳರು ಟ್ರೈನಿಂದ ಹೊರ ನೂಕಿದ್ರಿಂದ ಅರುಣಿಮಾ ಕಾಲೇ ಹೋಯ್ತು. ಆದ್ರೆ, ಯಾರ ಕಣ್ಣಲ್ಲೂ ತನಗೋಸ್ಕರ ಅನುಕಂಪ ನೋಡಕ್ಕೆ ಇಷ್ಟ ಇಲ್ಲದ ಅರುಣಿಮಾ, ಈ ದುರಂತ ಆದ ಎರಡೇ ವರ್ಷದಲ್ಲಿ ಕೃತಕ ಕಾಲಿನಿಂದಲೇ ಮೌಂಟ್ ಎವೆರೆಸ್ಟ್ ಹತ್ತಿದರು.

 

12. ಜಾವೇದ್ ಅಬೀದಿ, ಪತ್ರಕರ್ತ

ಹುಟ್ತಾನೇ ’ಸ್ಪೈನಾ ಬೈಫಿಡಾ’ಅನ್ನೋ ಖಾಯಿಲೆಯಿಂದ ನರಳಿದ ಇವರಿಗೆ 8 ವರ್ಷವಾದರೂ ಆಪರೇಶನ್ ಮಾಡ್ದೇ ಇದ್ದಿದ್ರಿಂದ ಜೀವನವಿಡೀ ವೀಲ್ ಚೇರ್ ಮೇಲೇ ಕೂರ್ಬೇಕಾಯ್ತು. ಇಷ್ಟಾದರೂ ತನ್ನ ವಿದ್ಯಾಭ್ಯಾಸ ಮುಂದುವರೆಸಿ ಪತ್ರಕರ್ತರಾದ ಇವರು, ಜೀವನ ಇಡೀ ವಿಕಲಚೇತನರ ಹಕ್ಕುಗಳಿಗೋಸ್ಕರ ದುಡಿದಿದ್ದಾರೆ. ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಶನ್ ಆಫ್ ಎಂಪ್ಲಾಯಿಮೆಂಟ್ ಆಫ್ ಡಿಸ್ ಏಬಲ್ಡ್ ಪೀಪಲ್ ನ ನಿರ್ದೇಶಕರಾಗಿರೋ ಇವರು ಡಿಸೆಬಿಲಿಟಿ ರೈಟ್ಸ್ ಗ್ರೂಪ್ಗಳನ್ನ ಕೂಡ ಹುಟ್ಟು ಹಾಕಿದ್ದಾರೆ.

 

13. ರಾಜೇಂದ್ರ ಸಿಂಗ್ ಸಹೇಲು, ವೇಯ್ಟ್ ಲಿಫ್ಟರ್

ಎಂಟು ತಿಂಗಳ ಮಗುವಾಗಿದ್ದಾಗ ಪೋಲಿಯೋನಿಂದ ಬಳಲಿದ ಇವರು ಹತ್ತನೇ ತರಗತಿಗೇ ತನ್ನ ಓದಿಗೆ ನಮಸ್ಕಾರ ಹೇಳ್ಬಿಟ್ರು. 1996ರಲ್ಲಿ ತನ್ನ ಸ್ನೇಹಿತರು ಕೊಟ್ಟ ಉತ್ತೇಜನದಿಂದ 75 ಕೆ.ಜಿಯಿಂದ ಭಾರ ಎತ್ತಕ್ಕೆ ಶುರು ಮಾಡಿ, ಆರೇ ತಿಂಗಳಲ್ಲಿ 115 ಕೆ.ಜಿ. ತೂಕ ಎತ್ತೋ ಅಷ್ಟಾದ್ರು. 2014 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು, ದೇಶಕ್ಕೆ ಹೆಸರು ತಂದ್ಕೊಟ್ರು! 

 

14. ಡಾ ಸುರೇಶ್ ಅಡ್ವಾಣಿ ,ಕ್ಯಾನ್ಸರ್ ತಜ್ಞರು

ಎಂಟನೇ ವಯಸ್ಸಿನಲ್ಲೇ ಪೋಲಿಯೋ ಪೀಡಿತರಾದ್ರೂ, ಎಷ್ಟೇ ಕಷ್ಟ ಆದ್ರೂ ವಿದ್ಯಾಭ್ಯಾಸ ಮುಂದುವರೆಸಿ ಡಾಕ್ಟರ್ ಆದ್ರು. ಭಾರತದಲ್ಲಿ ಮೊಟ್ಟ ಮೊದಲನೇ ಬಾರಿಗೆ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮಾಡಿದ ಹೆಗ್ಗಳಿಕೆ ಇವರದ್ದು. ಇವರು ಆಂಕಾಲಜಿ ಕ್ಷೇತ್ರದಲ್ಲಿ ಮಾಡಿರೋ ಸಾಧನೆ ಗುರುತಿಸಿ ಭಾರತ ಸರ್ಕಾರ 2002ರಲ್ಲಿ ಪದ್ಮಶ್ರೀ ಮತ್ತು 2012 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿದೆ.

 

15. ಸಾಧನಾ ಧಂಡ್, ಪೈಂಟರ್ ಮತ್ತು ಫೊಟೋಗ್ರಾಫರ್

ಬ್ರಿಟಲ್ ಬೋನ್ ಅನ್ನೋ ಮೂಳೆಗೆ ಸಂಬಂಧಿಸಿದ ಖಾಯಿಲೆಯಿಂದ ಬಳಲ್ತಿದ್ರಿಂದ 12ನೇ ವಯಸ್ಸುಗೇ ಕಿವುಡರಾದ್ರು.  3.3 ಅಡಿ ಎತ್ತರ ಇರೋ ಇವರು, ಯಾವತ್ತೂ ಧೈರ್ಯಗೆಡ್ಲಿಲ್ಲ. ಹಲವಾರು ರಾಜ್ಯ ಹಾಗು ರಾಷ್ಟ್ರಪ್ರಶಸ್ತಿಗಳನ್ನ ಚಿತ್ರಕಲೆ ಹಾಗು ಫೊಟೋಗ್ರಫಿಯಲ್ಲಿ ಪಡೆದಿದ್ದಾರೆ. ಇವತ್ಗೂ ತನ್ನ ಮನೆಯಲ್ಲಿ ಪೈಂಟಿಂಗ್ ಮತ್ತು ಫೋಟೋಗ್ರಫಿ ಕ್ಲಾಸಸ್ ಮಾಡೋ ಇವರು, ಹತ್ತಾರು ಸಂಘ ಸಂಸ್ಥೆಗಳಿಗೆ ಸಹಾಯ ಮಾಡುತ್ತಾರೆ.

 

16. ಮಾಲತಿ ಕೃಷ್ಣಮೂರ್ತಿ ಹೊಳ್ಳ, ಪ್ಯಾರ ಅಥ್ಲೀಟ್

ಒಂದು ವರ್ಷದ ಮಗುವಿದ್ದಾಗಲೇ ಜ್ವರ ಹೆಚ್ಚಾಗಿ ಕೈ-ಕಾಲುಗಳಲ್ಲಿ ಸ್ವಾದೀನ ಕಳೆದುಕೊಂಡ ಇವರಿಗೆ, ಚಿಕಿತ್ಸೆಯ ಪ್ರಭಾವದಿಂದ ಎರಡೂ ಕೈಗಳ ಸ್ವಾಧೀನ ತಿರ್ಗ ಬಂದ್ರೂ, ಕಾಲ್ಗಳು ಹಾಗೆ ಉಳ್ಕೊಂಡ್ವು. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲದಿಂದ ಕ್ರೀಡೆ ಆಯ್ಕೆಮಾಡಿಕೊಂಡು ಪ್ಯಾರ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಿದರು. 1989 ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್ ನಲ್ಲಿ ಶಾರ್ಟ್ ಪುಟ್, ಜವೆಲಿನ್ ತ್ರೋ, 200ಮೀ, ಡಿಸ್ಕಸ್ ತ್ರೋ ಎಲ್ಲದರಲ್ಲೂ ಚಿನ್ನದ ಪದಕ ಗೆದ್ರು. ಹೆಚ್ಚೂ ಕಮ್ಮಿ 300 ಮೆಡಲ್ಗಳು ಅವರ ಹೆಸರಲ್ಲಿದೆ. ಇದರ ಜೊತೆಗೆ ನಮ್ಮ ಸರ್ಕಾರದಿಂದ ಪದ್ಮಶ್ರೀ ಮತ್ತು ಅರ್ಜುನ ಅವಾರ್ಡ್ ಕೂಡ ಬಂದಿದೆ. ಹಳ್ಳಿಗಾಡಿನ ವಿಕಲಚೇತನ ಮಕ್ಕಳಿಗಾಗಿ ಮಾತೃ ಫೌಂಡೇಶನ್ ಕೂಡಾ ನಡೆಸ್ತಿದ್ದಾರೆ. ಇವ್ರು ನಮ್ಮ ಬೆಂಗ್ಳೂರಿನೋರೇ ಕಣ್ರಿ!

 

17. ಸುಧಾ ಚಂದ್ರನ್, ಭರತನಾಟ್ಯ ಕಲಾವಿದೆ

ಕೇರಳದಲ್ಲಿ ಹುಟ್ಟಿ ಭಾರತದ ಕೀರ್ತಿಯನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಅಪೂರ್ವ ಭರತನಾಟ್ಯ ಕಲಾವಿದೆ. 50ರ ಹರೆಯದ ಇವರು, ತಮ್ಮ 16ನೇ ವಯಸ್ಸಲ್ಲಿ ಅಪಘಾತದಲ್ಲಾದ ಸಣ್ಣ ಗಾಯಾನ ನೋಡದೇ ಬ್ಯಾಂಡೇಜ್ ಮಾಡಿದ ವೈದ್ಯನ ತಪ್ಪಿಂದ ತನ್ನ ಕಾಲನ್ನೇ ಕಳೆದುಕೊಂಡರೂ, ಕೃತಕ ಕಾಲಿನ ಸಹಾಯದಿಂದ ಜೀವನ ನಡೆಸಿ ಭರತ ನಾಟ್ಯದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನ ಪಡೆದಿದ್ದಾರೆ.