http://zeenews.india.com/bengali/nation/lord-hanuman-is-property-tax-defaulter-in-bihar-gets-notice_139993.html

ಅತಿಮಾನುಷ ಆದಂತಾ, ಕೆಟ್ಟ ಶಕ್ತಿ ಐತ್ಯೋ ಇಲ್ಲೋ ಗೊತ್ತಿಲ್ಲ, ಆದರ ನಮ್ಮ ದೇಶದ ಕೆಲವ ಗುಡಿ ಒಳಗ ಆ ಟೈಪಿನ ಶಕ್ತಿಗುಳನ ಓಡಿಸೋ ಹಂಗ ಪೂಜಿ ಪುನಸ್ಕಾರ ಆಚರಣಿ ನಡೀತಾನ ಇರ್ತಾವು. ದೆವ್ವ, ಭೂತ ಬಿಡಸೋ ಅಂತಾ ಭಾಳಸ್ಟ ಗುಡಿ ಅದಾವು. ಆ ಟೈಪಿನ ಆಚರಣೇಕ ಈ ಗುಡಿಗುಳು ಫೇಮಸ್ ಅದಾವು. ಇದನ್ನ ನಂಬದು, ಬಿಡದು ಅವರವರಿಗೆ ಬಿಟ್ಟ ವಿಚಾರ.

1. ಮಹೇಂದಿಪುರದ ಬಾಲಾಜಿ ಗುಡಿ – ರಾಜಸ್ತಾನ

ರಾಜಸ್ತಾನದ ದೌಸಾ ಜಿಲ್ಲೆ ಒಳಗ ಈ ಗುಡಿ ಐತಿ. ಕೆಲವಂದ ವಿಚಿತ್ರ ಆಚರಣೆ ಮಾಡದರಿಂದ ಈ ಗುಡಿ ಕುಖ್ಯಾತಿ ಪಡಕಂಡತಿ. ಇಲ್ಲಿ ಇವತ್ತಿಗೂ ದೆವ್ವ ಭೂತಾ ಬಿಡಸೋ ಆಚರಣಿ ನಡೀತೇತಿ. ಸಾವಿರಾರ ಜನಾ ತಮ್ಮ ಕಷ್ಟಾ ಪರಿಹರಿಗೆಳ್ಳಾಕ ಇಲ್ಲಿಗೆ ಬರತಾರ. ಇಲ್ಲಿ ಬರೋರ ಕೊತಕೊತಾ ಕುದಿಯ ನೀರನ ಮೈಮ್ಯಾಲ ಸುರಕೊಂತಾರ, ಸರಪಳಿ ತಗಂಡ ತಮ್ಮನ ತಾವ ಕಟಿಗೆಂತಾರ, ಈ ಜಗಾದ ಸುತ್ತಲೂ ಕೆಲವಂದ ಕೆಟ್ಟ ಶಕ್ತಿ ಅದಾವು ಅಂತ ಜನಾ ನಂಬ್ಯಾರ.

2. ಹಜರತ್ ಸೈಯೀದ ಅಲಿ ಮಿರಾ ದತಾರ್ ದರ್ಗಾ – ಗುಜರಾತ

ಇಲ್ಲಿ ಮೆಂಟಲ್ ಸಮಸ್ಯೆಗಳಿಂದ ಬಳಲಾಕತ್ತಿರ ಹೆಂಗಸೂರನ ಕರಕೊಂಡ ಬರತಾರ. ಗುಜರಾತಿನ ಉನಿವಾ ಹಳ್ಳಿ ಹಂತೇಲೆ ಈ ಗುಡಿ ಐತಿ. ಜನಕ್ಕ ದೆವ್ವ ಭೂತಾ ಮೆಟಗಂಡತಿ ಅಂತ ಹೇಳಿ ಅವನ್ನ ಬಿಡಸಾಕ ಇಲ್ಲಿಗೆ ಬರತಾರ. ಇಲ್ಲಿ ಎಲ್ಲಾ ಜಾತಿ ಧರ್ಮಗಳ ಜನಾನೂ ಬರೋದು ವಿಶೇಷ. ದೆವ್ವ, ಭೂತಾ ಬಿಡಸಾಕ ಚೈನಿನ್ಯಾಗ ಗ್ವಾಡೀಗೆ ಕಟ್ಟಿ ಹಾಕ್ಕಾರ.

3. ಶ್ರೀ ಕಷ್ಟಭಂಜನ್ ದೇವ ಹನುಮಾನ್ ಜಿ ಗುಡಿ – ಗುಜರಾತ

ಇಲ್ಲೆ ಹನುಮಂತಗ ಪೂಜೆ ಮಾಡಾಕ, ಪ್ರಾರ್ಥನಾ ಮಾಡಾಕ ಬರತಾರ. ಜತೀಗೆ ದೆವ್ವ ಭೂತಾನೂ ಇಲ್ಲಿ ಬಿಡಸತಾರ. ಈ ಗುಡಿಗೆ ಬಂದರ ಎಂಥಾ ದೆವ್ವ, ಪಿಶಾಚಿ ಆದ್ರೂ ಓಡಿ ಹೊಕ್ಕತಿ ಅನ್ನ ನಂಬಿಕಿ ಜನರ್ದು.

4. ದೇವ್ಜಿ ಮಹರಾಜ್ ಮಂದಿರ – ಮಧ್ಯಪ್ರದೇಶ

ಹುಣಿವಿ ದಿನಾ ಈ ಗುಡಿಗೆ ಜನಾ ಜಾತ್ರೀಗೆ ಬಂದಂಗ ಬಂದ ವಿಶೇಷ ಪೂಜೆ ಮಾಡತಾರ. ಕೆಟ್ಟ ಶಕ್ತಿಗುಳು ದುಷ್ಟ ಶಕ್ತಿಗಳು ಮೆಟಿಗೆಂಡಿದ್ರ ಓಡಿ ಹೋಗಲಿ ಅಂತ ಪೂಜೆ ಮಾಡತಾರ. ಪವಿತ್ರ ಆಗಿರ ಕಸಬರಿಗೀಲೇ ಇಲ್ಲಿ ಜಾಡಿಸತಾರ. ಬರೇಗೈಯ್ಯಾಗ ಕರ್ಪೂರದ ದೀಪಾ ಹಚಿಗೆಂಡ ಬೆಳಗೋ ಭಕ್ತರನೂ ಇಲ್ಲಿ ನೋಡಬೋದು. ಆ ಥರಾ ಮಾಡಿದ್ರ ದುಷ್ಟ ಶಕ್ತಿಗುಳ ಬರಲ್ಲ ಅನ್ನ ನಂಬಿಕಿ ಅವರ್ದು. ಪ್ರತಿ ವರ್ಷ ಇಲ್ಲೆ ಭೂತ ಮೇಳಾ ಸೈತ ನಡೀತೈತಿ.

5. ದತ್ತಾತ್ರೇಯ ಮಂದಿರ – ಗಂಗಾಪುರ್

ಮಧ್ಯಪ್ರದೇಶದ ಬೇತುಲ್ ಜಿಲ್ಲೆ ಒಳಗೈತಿ. ಅಮಾಸಿ ಮತ್ತ ಹುಣಿವಿ ದಿನ ಇಲ್ಲಿಗೆ ಸಾವಿರಾರ ಜನಾ ಬರತಾರ. ಎಲ್ಲಾರೂ ಬಂದ ಮ್ಯಾಲ ಬೆಳಿಗ್ಗೆ 11.30 ಕ್ಕ ಮಹಾ ಮಂಗಳಾರತಿ ಸ್ಟಾರ್ಟಾಗತಿದ್ದಂಗ ಇದ್ದಕ್ಕಿದ್ದಂಗ ಜನ ವಿಚಿತ್ರ ವಿಚಿತ್ರ ಮಾಡಾಕತ್ತಿಬಿಡತಾರ. ಒದರದು, ಚೀರೋದು, ದೇವರನ ಬೈಯ್ಯದು ನಡೀತೈತಿ. ಕೆಲವರಂತೂ ಕಂಬಾ ಗ್ವಾಡಿ ಹತ್ತಾಕ ಟ್ರಾಯ್ ಮಾಡತಾರ. ಆ ಟಾಯಮಿನ್ಯಾಗ ಅವರಿಗೆ ಮೆಟಗೆಂಡಿರ ದೆವ್ವಾ, ಭೂತಗುಳ ಹೊರಗ ಬರತಾವ ಅನ್ನ ನಂಬಿಕಿ ಇಲ್ಲೈತಿ.

6. ನಿಜಾಮುದ್ದೀನ ದರ್ಗಾ – ದಿಲ್ಲಿ

ಇಲ್ಲಿನೂ ಅಸ್ಟ, ದೆವ್ವ ಭೂತ ಪಿಶಾಚಿಗುಳನ ಬಿಡಸ ಜಗಾ ಇದು. ಇಲ್ಲಿನ ಒಂದ ರೂಮಿನ್ಯಾಗ ಚೀರೋದು, ಒದರೋದು, ಅಳೋ ಅಂತಾ ಸೌಂಡ್ ಕೇಳಸ್ತಿರ್ತತಿ. ಯಾಕಂದರ ಇಲ್ಲಿ ದೆವ್ವ ಭೂತಾ ಬಿಡಸ ಆಚರಣಿ ನೆಡ್ಯಾಕತ್ತತಿ ಅಂತ ಅರ್ಥ.

7. ಚಂಡಿದೇವಿ ಗುಡಿ – ಹರಿದ್ವಾರ

ಈ ಗುಡ್ಯಾಗನೂ ದೆವ್ವ ಭೂತಾನ ಬಿಡಸ ಕೆಲಸಾ ನಡೀತೈತಿ. ದೇವೀದು ರೌದ್ರಾವತಾರನ ಚಂಡಿದೇವಿ. ನವರಾತ್ರಿ ಟಾಯಮಿನ್ಯಾಗ ದೇವಿಗೆ ಇಲ್ಲಿ ಹೆಚಿಗಿ ಶಕ್ತಿ ಇರತತಿ ಅಂತ ಅವಾಗ ಜನಾಜಾತ್ರಿನ ಇಲ್ಲಿ ಸೇರತತಿ.

8. ಹರ್ ಸುಬ್ರಮ್ ಗುಡಿ – ಬಿಹಾರ

ಬಿಹಾರ ಮತ್ತ ಉತ್ತರ ಪ್ರದೇಶದ ಗಡಿಯೊಳಗೈತಿ ಈ ಗುಡಿ. ಅತೃಪ್ತ ಬ್ರಾಹ್ಮಣ ಆತ್ಮಗುಳನ ಪೂಜೆ ಮಾಡ ಆಚರಣಿ ಇಲ್ಲಿ ನಡೀತೈತಿ. ದುಷ್ಟ ಶಕ್ತಿಗುಳನ ಓಡಿಸಾಕ, ದೆವ್ವಾ ಬಿಡಸಾಕ ಜನಾ ಇಲ್ಲಿಗೆ ಬರತಾರ.

9. ಸಂತ ಸಬೀರ್ ಶಾ ದರ್ಗಾ – ಚಿನಾಪುರ್

ಇಲ್ಲೆ ದೈವಶಕ್ತಿ ಐತಿ ಅಂತ ಜನಾ ನಂಬ್ಯಾರ. ಭಯಾ ಭಕ್ತಿಯಿಂದಾ ಜನಾ ಬಂದ ಬೇಡಿಕೆಂತಾರ. ಇಲ್ಲಿಗೆ ಬರೋ ಅಂತಾ ಹೆಂಗಸೂರು ಭಾವಸಮಾಧಿ ಅಂದರ ಸಮಾಧಿ ಸ್ಥಿತಿ ಒಳಗ ದೇವರ್ನ ಪೂಜಿ ಮಾಡತಾರ. ಅವರ ಪಾಳೆ ಬರೋ ತನಕಾನೂ ಬ್ಯಾರೇ ಬ್ಯಾರೇ ಸಮಸ್ಯೇದಿಂದಾ ಬಳಲಿಕೆಂತ ಇರೋ ಜನಾನ ಇಲ್ಲಿ ಸರಪಳಿ ಇಂದಾ ಕಟ್ಟಿ ಹಾಕಿರತಾರ.