ದಿನಾ ಎದ್ದಕೂಡಲೇ ತಪ್ಪದೇ ಹಲ್ಲುಜ್ತಿವಿ. ನಮ್ ಹಿಂದಿನೋರು ಹಲ್ಲು ನಾಲಿಗೆ ಎಲ್ಲಾ ಒಂದೇ ಬೇವಿನ್ ಕಡ್ಡಿನಲ್ಲಿ ಮುಗುಸ್ತಿದ್ರು. ನಾವು ಈಗಿನ್ ಕಾಲದೋರಲ್ವ, ಪಕ್ಕಾ ಶಿಸ್ತುಗಾರ ಪುಟ್ಸಾಮಿ ಥರ ಉದ್ದ ಕೈಹಿಡಿ ಇರೋ ಬ್ರಶ್ಶು, ಪೇಸ್ಟು ಹಾಕ್ಕೊಂಡು ಹಲ್ಲನ್ನ ಗಮ್ ಕಿತ್ತೋಗೋವರ್ಗೂ ಉಜ್ತೀವಿ. ವಿಷ್ಯ ಅದಲ್ಲ. ಇವತ್ತು ನಮ್ ಅನುಕೂಲಕ್ಕೆ ತಕ್ಕಹಾಗೆ ಟೂತ್ ಬ್ರಶ್ ಅನ್ನೋ ಮಂತ್ರದಂಡ ಕಂಡುಹಿಡಿದಿದ್ದು ಯಾರು ಅನ್ನೋದು. ಅದರ ಹಿಡಿ ಇಷ್ಟೇ ಉದ್ದ ಇರ್ಬೇಕು, ಒಂದು ಕೊನೇಲಿ ಇಷ್ಟೇ ಬ್ರಶ್ಶು ಇರ್ಬೇಕು ಅನ್ನೋ ಡಿಸೈನು ಹೊಳೆದಿದ್ದು ಯಾವ್ ಐನಾತಿ ತಲೆಗೆ ಅನ್ನೋದು. ಇರೋ ಮೂವತ್ತೆರಡು ಹಲ್ಲನ್ನ ಫಳ ಫಳಾನ್ಸಕ್ಕೆ, ಕೈ ಬೆರಳಿಂದ ಹಿಡಿದು ಇಂದಿನ ಎಲಕ್ಟ್ರಾನಿಕ್ ಟೂತ್ ಬ್ರಶ್ ವರೆಗೂ ಇದರ ರೂಪಾಂತರ ಆಗ್ತಾ ಬಂದಿದೆ.

ಪ್ರಪಂಚದಲ್ಲೇ ಮೊಟ್ಟಮೊದಲ ಟೂತ್ ಬ್ರಶ್ ಅಂದ್ರೆ ನಮ್ಮ ತೋರುಬೆರಳು. ಹಲ್ಪುಡಿ ಹಾಕ್ಕೊಂಡು ಉಜ್ತಿದ್ರು. ಇವತ್ತಿಗೂ ಎಲ್ಲಾದ್ರೂ ಟೂತ್ ಬ್ರಶ್ ಮರೆತು ಟ್ರಿಪ್ ಹೋದಾಗ, ಅನಿವಾರ್ಯವಾಗಿ ಇನ್ನೊಬ್ರು ಮನೇಲಿ ಉಳ್ಕೊಳೋ ಸಂದರ್ಭ ಬಂದಾಗ ತೋರುಬೆರಳೇ ಬ್ರಶ್ಶು. ಅದು ಬಿಟ್ರೆ, ಜೂನ್ 26, 1498ನೇ ಇಸವಿನಲ್ಲಿ ಚೀನೀ ದೊರೆ ಮೊದಲ ಟೂತ್ ಬ್ರಶ್ ಡಿಸೈನ್ ಮಾಡಿದ್ದ. ಬ್ರಶ್ಶನ್ನ ಹಂದಿ ಬೆನ್ನಿನ ಕೂದಲಿಂದ ಮಾಡಲಾಗಿತ್ತು. ಹಾಗಾಗಿ ತುಂಬಾ ಒರಟಾಗಿತ್ತು ಆ ಬ್ರಶ್ಶು. ಅದಕ್ಕೆ ಮೂಳೆ ಅಥ್ವ ಬಿದಿರಿನ ಕೈಹಿಡಿ ಇತ್ತು.

ಮುಂದೆ ಇದನ್ನೇ ಮಾದರಿಯಾಗಿ ಇಟ್ಕೊಂಡು ಒಂದಷ್ಟು ಜನ ಟೂತ್ ಬ್ರಶ್ಶನ್ನ ಡಿಸೈನ್ ಮಾಡಿದ್ರು. ಯಾರ್ಯಾರು ಮತ್ತೆ ಯಾವಾಗ ಅಂದ್ರೆ, ಅಂತೆಕಂತೆ ಕೆಳಗ್ ಕೊಟ್ಟಿರೋ ಪಟ್ಟಿ ನೋಡಿ.

1780 ನೇ ಇಸವಿ – ಮೊದಲ ಬಾರಿಗೆ ಟೂತ್ ಬ್ರಶ್ಶನ್ನ ಜಾಸ್ತಿ ಸಂಖ್ಯೆನಲ್ಲಿ ಉತ್ಪಾದನೆ ಮಾಡೋಕ್ಕೆ ಶುರುವಾಯ್ತು. ಇದನ್ನ ಇಂಗ್ಲೆಂಡಿನ ವಿಲಿಯಂ ಆಡಿಸ್ ಅನ್ನೋ ವ್ಯಕ್ತಿ ಕ್ಲರ್ಕೆನ್ವಾಲ್ಡ್ ನಲ್ಲಿ ಪ್ರಾರಂಭ ಮಾಡಿದ.

1857 ನೇ ಇಸವಿ – ಎಚ್. ಎನ್. ವರ್ಡ್ಸ್ ವರ್ಥ್ ಅನ್ನೋರು, ತಾವು ತಯಾರು ಮಾಡಿರೊ ಟೂತ್ ಬ್ರಶ್ ಡಿಸೈನ್ಗೆ, ತಮ್ ಹೆಸ್ರಲ್ಲಿ 18,653ನೇ ಸಂಖ್ಯೆಗೆ ಅಮೆರಿಕಾದಲ್ಲಿ ಪೇಟೆಂಟ್ ಮಾಡಿಸ್ತಾರೆ.

1885ನೇ ಇಸವಿ – ಅಮೆರಿಕಾದಲ್ಲಿ ಟೂತ್ ಬ್ರಶ್ಶಿನ ಸಾಮೂಹಿಕ ಉತ್ಪಾದನೆ ಶುರುವಾಗತ್ತೆ.

1960 ನೇ ಇಸವಿ – ಸಿಕ್ಕಪಟ್ಟೆ ಮುಂದುವರೆದ ಟೂತ್ ಬ್ರಶ್ಶಿನ ಡಿಸೈನ್ ಅಂದ್ರೆ ಎಲೆಕ್ಟ್ರಾನಿಕ್ ಟೂತ್ ಬ್ರಶ್ ಅಮೆರಿಕಾದ ಮಾರ್ಕೆಟ್ಟಲ್ಲಿ ಭಾರಿ ಸದ್ದುಮಾಡತ್ತೆ. ಇದಕ್ಕೆ ಫುಲ್ಲು ಡಿಮ್ಯಾಂಡಪ್ಪೋ ಡಿಮ್ಯಾಂಡು. ಇದನ್ನ ‘ಸ್ಕಿಬ್’ ಅನ್ನೋ ಸಂಸ್ಥೆಯೋರು, ಬ್ರೋಕ್ಸೋಡೆಂಟ್ ಹೆಸರಲ್ಲಿ ಮಾರಾಟ ಮಾಡಿದ್ರು.

ಹೀಗೆ ಬೆಳೆದು ಬಂತು ಟೂತ್ ಬ್ರಶ್. ಇವತ್ತು ಮಾರ್ಕೆಟ್ಟಲ್ಲಿ ತಲೆತಿರುಗೋವಷ್ಟು ಡಿಸೈನುಗಳ, ಬಣ್ಣಗಳ ಬ್ರಶ್ಶುಗಳು ಸಿಗತ್ತೆ. ನಾವೇ ಕೈಯ್ಯಲ್ಲಿ ಹಿಡಿದು ಗಸಗಸಾಂತ ಉಜ್ಜೋದು, ಸ್ಟೈಲಾಗಿ ಬ್ಯಾಟ್ರಿ ಹಾಕಿ ನಾಜೂಕಾಗಿ ಹಲ್ಲಿನ್ ಮುಂದೆ ಹಿಡಿದು ಉಜ್ಜ್ಕೊಳೋದು ಹೀಗೆ ಎರಡೂ ಥರದ್ ಟೂತ್ ಬ್ರಶ್ಶೂ ಬೇಡಿಕೆನಲ್ಲಿದೆ. ಇವಕ್ಕೆ ಸಾಮಾನ್ಯವಾಗಿ ನೈಲಾನ್ ಬ್ರಶ್ಶು ಮತ್ತೆ ಪ್ಲಾಸ್ಟಿಕ್ ಕೈಹಿಡಿ ಇರತ್ತೆ.

ಟೂತ್ ಬ್ರಶ್ ಬಗ್ಗೆ ಹುಬ್ಬೇರಿಸೋ ಇನ್ನೂ ಒಂದಷ್ಟು ವಿಶ್ಯಗಳ್ನ ಇಲ್ಲಿ ಅಂತೆಕಂತೆ ನಿಮ್ಗೋಸ್ಕರ ಕೊಡ್ತಿದೆ

1. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಸುಮಾರು 21,024 ನಿಮಿಷಗಳ್ನ ಹಲ್ಲುಜ್ಜೋದ್ರಲ್ಲೇ ಕಳಿತಾನಂತೆ.

2. ಪ್ರಪಂಚದಲ್ಲಿ ತುಂಬಾ ಜನ ನೀಲಿ ಬಣ್ಣದ್ ಟೂತ್ ಬ್ರಶ್ಶನ್ನೇ ಕೊಂಡುಕೋತಾರಂತೆ.

3. ಸುಮಾರ್ ಜನ ಟೂತ್ ಬ್ರಶ್ಗೆ ಕ್ಯಾಪ್ ಹಾಕಿ ಇಡ್ತಾರೆ.ಆದ್ರೆ ಅದು ತುಂಬಾ ಅಪಾಯಕಾರಿ ಅಭ್ಯಾಸ ಕಣ್ರಿ.

ರಾತ್ರಿ ಹೊತ್ತು ಜಿರಳೆ, ಹಲ್ಲಿ ಇದ್ಯಾವ್ದೂ ಬ್ರಶ್ಶನ್ನ ನೆಕ್ಬಾರ್ದು, ಹಿಕ್ಕೆ ಹಾಕ್ಬಾರ್ದು ಅಂತ. ಅವೆಲ್ಲಾ ಬಂದು ಒಂದುರೌಂಡ್ ತಮ್ ಹಲ್ಲುಜ್ಕೊಂದ್ ಹೋದ್ರೂ ಪರ್ವಾಗಿಲ್ಲ. ಆದ್ರೆ ಕ್ಯಾಪ್ ಹಾಕೋದ್ರಿಂದ ಬ್ರಶ್ಶಲ್ಲಿರೋ ತೇವಾಂಶ ಅಲ್ಲೇ ಉಳ್ಕೊಂಡು ಅದರಮೇಲೆ ಬ್ಯಾಕ್ಟೀರಿಯ ಬೆಳಿಯತ್ತೆ.

4. ಪ್ರಪಂಚದಲ್ಲಿ ಸುಮಾರು 4 ಬಿಲಿಯನ್ ಜನ ಎಲಕ್ಟ್ರಾನಿಕ್ ಟೂಟ್ ಬ್ರಶ್ ಬಳಸಿದ್ರೆ, 3.5 ಮಿಲಿಯನ್ ಜನ ಕೈಯ್ಯಲ್ಲಿ ಉಜ್ಜೋ ಟೂತ್ ಬ್ರಶ್ ಬಳಸ್ತಾರಂತೆ.

5. 2003ನೇ ಇಸವಿನಲ್ಲಿ ಮಾಡಿರೋ ಒಂದು ಸರ್ವೇ ಪ್ರಕಾರ, ನಮ್ ಜನ ಮೊಬೈಲ್ ಫೋನು ಮತ್ತೆ ಕಾರು, ಬೈಕು ಬಿಟ್ರೆ, ಟೂತ್ ಬ್ರಶ್ ಅನ್ನ ಬಿಟ್ಟು ಬದುಕಕ್ಕೆ ಆಗಲ್ಲ ಅಂತ ಒಪ್ಕೊಂಡಿದಾರಂತೆ.

ಹಾಗಾಗಿ ಅದೂ ಕೂಡ ಜಗತ್ತಿನಲ್ಲಿ ನಂಬರ್ ಒನ್ ಆವಿಷ್ಕಾರ ಅಂತ ಪಟ್ಟಿಯಾಗಿದೆ.

ನೋಡಿದ್ರಲ್ಲ, ದಿನಾ ನಮ್ ಹಲ್ಲಿನ ಸೇವೆ ಮಾಡೋ ಪುಟಾಣಿ ಟೂತ್ ಬ್ರಶ್ಶಿಗೆ ಎಂಥಾ ಇತಿಹಾಸ ಇದೆ ಅಂತ.