http://antekante.com

ಸಾಮಾನ್ಯ ಎಲ್ರಿಗೂ ಊಟ, ತಿಂಡಿ ಜೊತೆ ಕಾಫಿ, ಟೀ, ಹಾಲು ಕುಡಿಯೊ ಅಭ್ಯಾಸ ಇರತ್ತೆ. ಈ ಟೀ ಇದ್ಯಲ್ಲ, ಬರಿ ಬಾಯಿಚಪಲಕ್ಕೆ ಕುಡಿಯೋದಲ್ಲ. ಇದ್ರಿಂದ ಊಹೆಗೂ ಮೀರಿದ್ ಎಷ್ಟೊಂದ್ ಉಪಯೋಗಗಳಿವೆ. ಅದನ್ನ ನಿಮ್ಗೋಸ್ಕರ ಇಲ್ಲಿ ಕೊಟ್ಟಿದಿವಿ ನೋಡಿ. ಅದ್ರಲ್ಲಿ ನಿಮ್ಗೆ ಯಾವ್ಯಾವ್ದು ಬೇಕು ಅನ್ಸತ್ತೋ ಅದನ್ನೆಲ್ಲಾ ಪ್ರಯೋಗ ಮಾಡಿ, ಪ್ರಯೋಜ್ನ ಪಡ್ಕೊಳಿ.

ಟೀ ಇಂದ ಆಗೋ ಉಪಯೋಗಗಳು

ನಿಮ್ ಅಡುಗೆಮನೇಲಿ ಹಳೇ, ಕೆಟ್ಟೊಗಿರೋ ಟೀ ಪುಡಿ ಅಥವ ಟೀ ಎಲೆ ಸ್ಟಾಕಿದೆ. ಆದ್ರೆ ಟೀ ಮಾಡ್ಕೊಂಡ್ ಕುಡಿಯೋ ಸ್ಥಿತಿಲಿ ಅದಿಲ್ಲ. ಇಷ್ಟರ್ ಮಧ್ಯ ನಿಮ್ಗೆ ಅದನ್ನ ಎಸಿಯೋಕೂ ಮನ್ಸಿಲ್ಲ. ಹೀಗಿರುವಾಗ, ಅದನ್ನ ದಂಡ ಮಾಡದೆ ಮನೆನ ಚೆನ್ನಾಗಿಟ್ಕೊಳೋ ಉಪಾಯದ್ ಪಟ್ಟಿ ನಮ್ ಹತ್ರ ಇದೆ. ಹಾಗೆನೆ, ಟೀ ಅಂದ್ರೆ ಪ್ರಾಣ ರಿ ನಮ್ಗೆ ಅನ್ನೋರಿಗೆ ಕಣ್ಣು ಇಷ್ಟಗಲ ಆಗೋ ಖತರ್ನಾಕ್ ಐಡಿಯಾಗಳೂ ಇದೆ. ಅಂಥಾ ಉಪ್ಯೋಗಕ್ ಬರೋ, ಕ್ರಿಯೇಟಿವ್ ಅನ್ಸೋ ಒಂದಷ್ಟು ಸಲಹೆನ ಇಲ್ಲಿ ಕೊಟ್ಟಿದಿವಿ. ಖಂಡಿತಾ ಪ್ರಯೋಜ್ನಕ್ಕ್ ಬರತ್ತೆ. ಓದಿ, ಮನೇಲಿ ಪ್ರಯೋಗ ಮಾಡಿ. ನೀವ್ ಪ್ರಾಣ ಬಿಡೋ ಟೀ ಲೋಟದಿಂದಾಚೆಗೂ ಎಂಥಾ ಚಮತ್ಕಾರ ಮಾಡತ್ತೆ ಅಂತ ನೀವೇ ನೋಡಿ.

ಮೂಲ

1. ಕ್ಲೀನ್ ಮಾಡಕ್ಕೆ

ವರ್ಷಗಟ್ಟಳೆಯಿಂದ ಒಂದೇ ಕಪ್ಪಲ್ಲಿ ಟೀ ಕುಡ್ದೂ ಕುಡ್ದೂ, ಆ ಕಪ್ಪು ಕರೆಗಟ್ಟಿರೋದ್ ನೋಡಿರೋರ್ಗೆ, ಟೀಯಿಂದ ಮನೇನ ಸ್ವಚ್ಚ ಮಾಡ್ಬೋದು ಅಂದ್ರೆ ಹುಬ್ಬೇರಿಸೋ ಹಾಗ್ ಆಗತ್ತೆ. ಆದ್ರೆ ನಿಜ. ಈ ಗ್ರೀಸ್, ಎಣ್ಣೆ ಜಿಡ್ಡು ಮತ್ತೆ ಧೂಳು ತೆಗಿಯಕ್ಕೆ. ಹಾಗೆನೆ ಫರ್ನೀಚರ್ನೂ ಥಳ ಥಳ ಅಂತ ಹೊಳಿಯೋ ಹಾಗ್ ಮಾಡತ್ತೆ ಟೀ ಪುಡಿ.

ಮರದ್ ನೆಲ ಮತ್ತೆ ಫರ್ನೀಚರ್

ಮೊದ್ಲು ಸ್ಟ್ರಾಂಗಾಗಿ ಟೀ ಡಿಕಾಕ್ಷನ್ ಮಾಡ್ಕೊಂಡು, ಅದು ತಣ್ಣಗಾದ್ಮೇಲೆ ಒಂದ್ ಮೆತ್ತಗಿರೋ ಒರೆಸೋ ಬಟ್ಟೆನಲ್ಲಿ ಅದ್ದ್ಕೊಂಡು, ಮರದ್ ನೆಲ, ಫರ್ನೀಚರ್ನ ಒರೆಸಿದ್ರೆ, ಮರದ್ ಬಣ್ಣಕ್ಕೂ ಹೊಂದ್ಕೊಂಡು, ಒಳ್ಳೆ ಪಾಲಿಷ್ ಹಾಕಿರೋ ಥರ ಹೊಸ ಲುಕ್ ಬರತ್ತೆ. ಇಲ್ಲಿ ಒಂದ್ ಸೂಚನೆ ಏನಪ್ಪ ಅಂದ್ರೆ, ಮರದ್ ಬಣ್ಣ ತಿಳಿಯಾಗಿದ್ರೆ ವೈಟ್ ಅಥವ ಗ್ರೀನ್ ಟೀ ಬಳಸಿ. ಬಣ್ಣ ಗಾಢವಾಗಿದ್ರೆ ಊಲಾಂಗ್ ಅಥವ ಬ್ಲ್ಯಾಕ್ ಟೀ ಬಳಸಿ.

ಕನ್ನಡಿ ಮತ್ತೆ ಕಿಟಕಿ

ತಣ್ಣಗಿರೋ ಟೀ ಡಿಕಾಕ್ಷನ್ನ ಒಂದ್ ಸ್ಪ್ರೇ ಬಾಟಲ್ಗೆ ತುಂಬಿ, ಕನ್ನಡಿ ಮತ್ತೆ ಕಿಟಕಿ ಗೆ ಸ್ಪ್ರೇ ಹೊಡ್ದು ಒರೆಸಿ. ಎಷ್ಟ ಚೆನ್ನಾಗ್ ಕ್ಲೀನಾಗತ್ತೆ ಅಂದ್ರೆ, ಆಗ್ತಾನೇ ಕನ್ನಡಿನ ಅಂಗಡಿಯಿಂದ ತಂದಂಗಿರತ್ತೆ. ಹಾಗೆ ಕಿಟಕಿನೂ ಮಿರ ಮಿರ ಅಂತಿರತ್ತೆ.

ಟಾಯಿಲೆಟ್

ಒಂದೆರಡ್ ಟೀ ಬ್ಯಾಗ್ನ ಟಾಯಿಲೆಟ್ ಒಳಗೆ ಹಾಕಿ, ಚೆನ್ನಾಗ್ ರಸ ಬಿಟ್ಕೊಳೋವರ್ಗೂ ಕಾದು, ಅಂದ್ರೆ ಸುಮಾರು ಒಂದ್ ಗಂಟೆಕಾಲ ಆಗತ್ತೆ. ಆಮೇಲಿಂದ ಟೀ ಬ್ಯಾಗ್ನ ತೆಗೆದೆಸೆದು, ಟಯಿಲೆಟ್ ಉಜ್ಜಿ, ಫ್ಲಶ್ ಮಾಡಿ. ಇದ್ರಿಂದ ಟಾಯಿಲೆಟ್ ಬೇಸನ್ನು ಚೆನ್ನಾಗ್ ಕ್ಲೀನಾಗತ್ತೆ ಜೊತೆಗೆ ದುರ್ಗಂಧ ಇದ್ರೆ, ಅದೂ ಕಮ್ಮಿಯಾಗತ್ತೆ.

ಮೂಲ

2. ದುರ್ಗಂಧ ಹೋಗ್ಸಕ್ಕೆ

ಟೀ ಎಲೆಗೆ ಒಂದ್ ಅಧ್ಭುತವಾದ್ ಗುಣ ಇದೆ ಕಣ್ರಿ. ಅದರ್ ಜೊತೆ ಯಾವ್ದೇ ವಸ್ತು ಕಾಂಟ್ಯಾಕ್ಟ್ಗೆ ಬರ್ಲಿ ಅಥವ ಹತ್ತಿರ್ದಲ್ಲೇ ಇರ್ಲಿ, ಗಬಕ್ಕಂತ ಅದರ ವಾಸನೆನ ಹೀರ್ಕೊಂಡ್ಬಿಡತ್ತೆ. ಅದಕ್ಕೇನೇ ಸಾಮಾನ್ಯ ಬೇರೆ ತಿಂಡಿ ತೀರ್ಥದ್ ಜೊತೆ ಉದಾಹರಣೆಗೆ ಕಾಫಿ, ಮಸಾಲೆ ಪದಾರ್ಥ, ಇವುಗಳ್ ಜೊತೆ ಟೀ ಇಡ್ಬೇಡಿ ಅನ್ನೋದು. ಆದ್ರೆ ಮನೇಲಿ ಮೂಗ್ ಮುಚ್ಚೊಂಡ್ ಓಡಾಡೋ ಸಂದರ್ಭ ಏನಾದ್ರು ಬಂದ್ರೆ, ಖಂಡಿತಾ ಟೀನೇ ಆಪತ್ಬಾಂಧವ.

ನೆಲಹಾಸು

ಅದ್ಯಾವಯಾವ ಕಾಲಲ್ಲಿ ಈ ನೆಲಹಾಸು ಅಥವ ಕಾರ್ಪೆಟ್ ಮೇಲೆ ಓಡಾಡಿರ್ತಿವೋ. ಒದ್ದೆ ಕಾಲಂತ ಇಲ್ಲ, ಕೊಳೆ ಕಾಲಂತ ಇಲ್ಲ. ಹೀಗ್ ಮಾಡ್ದಾಗ, ಕಾರ್ಪೆಟ್ಟಿಂದ ವಾಸನೆ ಬರಕ್ಕೆ ಶುರುವಾಗತ್ತೆ. ಆಗ ಮಾಡ್ಬೇಕಿರೋದ್ ಇಷ್ಟೇ. ಒಣಗಿರೋ ತಾಜಾ ಟೀ ಎಲೆ ಅಥವ ಉಪಯೋಗಿಸಿದ್ಮೇಲೆ ಒಣಗಿಸಿಟ್ಟೀರೋ ಟೀ ಎಲೆನ ಕಾರ್ಪೆಟ್ ಮೇಲೆ ಉದುರ್ಸಿ ಒಂದಿಪ್ಪತ್ ನಿಮಿಷ ಬಿಡಿ. ಆಮೇಲಿಂದ ಅದನ್ನ ನೀಟಾಗಿ ಗುಡಿಸಿಹಾಕಿದ್ರೆ ಮುಗಿತು. ಯಾವ್ ವಾಸನೆನೂ ಇಲ್ಲ, ಮುಗ್ಗುಲೂ ಇಲ್ಲ. ನೀವೇನಾದ್ರು ಸುವಾಸನೆ ಇರೋ ಟೀ ಎಲೆ ಅಂದ್ರೆ ಈ ನಿಂಬೆ ಟೀ, ಏಲಕ್ಕಿ ಟೀ ಇಂಥ ಪುಡಿನ ಬಳಸಿದ್ರೆ, ವಾಸನೆ ಹೋಗೋದ್ರು ಜೊತೆ ಘಮ ಘಮ ಅನ್ನೋ ಪರಿಮಳನೂ ಬರತ್ತೆ.

ಬೆಕ್ಕಿನ ಕಸ

ನೀವ್ ಬೆಕ್ಕನ್ನ ಸಾಕಿ, ಅದ್ರಿಂದ ಹರಡೋ ಕಸ, ಕೂದ್ಲು, ಕೊಳೆ ಇಂದ ಬರೋ ವಾಸನೆನ ಹೋಗ್ಸಕ್ಕೆ ಸಿಕ್ಸಿಕ್ಕಿದ್ದೆಲ್ಲಾ ಪ್ರಯೋಗ ಮಾಡಿದಿರಾ? ಇಲ್ಲಿದೆ ಪರಿಹಾರ ಕೇಳಿ. ಬೆಕ್ಕಿನ ಗೂಡಿಗೆ ಒಣಗಿರೋ ಟೀ ಎಲೆ/ ಪುಡಿನ ಉದುರಿಸಿ. ಅಮೇಲೆ ಮಾಮೂಲಿ ಥರ ಗೂಡು ಕ್ಲೀನ್ ಮಾಡೂವಾಗ ಅದನ್ನೂ ತೆಗೆದುಹಾಕಿ. ಮತ್ತೆ ಹೊಸದಾಗಿ ಒಂದಷ್ಟ್ ಉದುರ್ಸಿ. ಇದ್ರಿಂದ ಬೆಕ್ಕಿಗೆ ಏನೂ ತೊಂದ್ರೆ ಆಗಲ್ಲ. ಹಾಗೆನೆ ಅದು ಹರಡೋ ಕಸದಿಂದ ಯಾವ್ ವಾಸನೆನೂ ಬರಲ್ಲ.

ಫ್ರಿಡ್ಜ್

 ನಮ್ಗೆ ಅಂತ ತರೋ ಹೊಟ್ಟೆ ಸಾಮಾನಲ್ಲಿ, ಮುಕ್ಕಾಲು ಪಾಲು ಫ್ರಿಡ್ಜ್ ಹೊಟ್ಟೆಗ್ ತುಂಬ್ತಿವಿ. ಆ ಎಲ್ಲಾ ಪದಾರ್ಥದ್ ವಾಸ್ನೆನೂ ಸೇರ್ಕೊಡು, ಸರಿಯಾಗ್ ಗಾಳಿಯಾಡ್ದೆ ಫ್ರಿಡ್ಜ್ ಒಳಗೆ ಒಂಥರ ಕೆಟ್ಟ ವಾಸನೆ ಬರತ್ತೆ. ಆಗ ಫ್ರಿಡ್ಜ್ ಕ್ಲೀನ್ ಮಾಡಕ್ಕೆ ಅಂಗಡಿಯಿಂದ ಬೇಕಿಂಗ್ ಸೋಡ ತರ್ತಿವಿ. ಆದ್ರೆ ಸಾಮಾನ್ಯ ಮನೆಲೇ ಇರೋ ಈ ಟೀ ಪುಡಿ, ಬೇಕಿಂಗ್ ಸೋಡ ಮಾಡೋ ಕೆಲ್ಸನೇ ಮಾಡಿ ಅದನ್ನ ಹೋಗ್ಸತ್ತೆ. ಮಾಡ್ಬೇಕಿರೋದ್ ಇಷ್ಟೇ ಕಣ್ರಿ. ಒಣಗಿರೋ ಟೀ ಎಲೆಗಳ್ನ ಒಂದ್ ಬಟ್ಟಲಲ್ಲಿ ಹಾಕಿ, ಫ್ರಿಡ್ಜ್ ಒಳಗೆ ಇಟ್ಬಿಡಿ. ಒಂದೆರಡ್ ದಿನದಲ್ಲಿ ಅದು ಎಲ್ಲಾ ವಸನೇನೂ ಹೀರ್ಕೊಂಡಿರತ್ತೆ. ಆದ್ರೆ ಇಲ್ಲಿ ಒಂದ್ ಕಿವಿಮಾತು ಏನಂದ್ರೆ, ನೀವು ಕುಡೀಯಕ್ಕೆ ಅಂತ ಇಟ್ಕೊಂಡಿರೋ ಟೀ ಎಲೆನ ಮಾತ್ರ ಫ್ರಿಡ್ಜ್ಜಲ್ಲಿ ಇಡ್ಬೇಡಿ. ಅಲ್ಲಿರೋ ಪದಾರ್ಥದ್ ವಾಸನೇನೆಲ್ಲಾ ಹೀರ್ಕೊಂಡ್ ಹೀರ್ಕೊಂಡ್ ಬೇಗ ಕೆಟ್ಟೋಗತ್ತೆ.

ಅಡುಗೆ ಮಾಡಿದ್ ಕೈ

ಮೀನು, ಈರುಳ್ಳಿ, ಬೆಳ್ಳುಳ್ಳಿ ಇಂಥ ತುಂಬಾ ಗಾಢವಾಗಿ ವಾಸನೆ ಬರೋ ಪದಾರ್ಥನ ಕೈಯಿಂದ ಮುಟ್ಟಿ ಅಡುಗೆ ಮಾಡಿದ್ರೆ, ನಮಗ್ ಮಾತ್ರ ಅಲ್ಲ, ಪಕ್ಕದಲ್ಲಿರೋರ್ಗೂ ನಾವ್ ಏನ್ ಮಾಡಿದಿವಿ ಅಂತ ಗೊತಾಗೋವಷ್ಟು ವಾಸನೆ ಬರ್ತಿರತ್ತೆ. ಇದಕ್ಕೆ ಪರಿಹಾರ ಅಂದ್ರೆ ಡಿಕಾಕ್ಷನ್ಗೆ ಬಳಸಿರೊ ಟೀ ಎಲೆನ ಎಸಿಯೊ ಮೊದ್ಲು ಅದನ್ನ ಅಂಗೈಗೆ ಹಾಕ್ಕೊಂಡ್ ಚೆನ್ನಾಗ್ ಉಜ್ಜ್ಕೊಳಿ. ಅದ್ರಿಂದ ವಾಸನೆ ಹೋಗತ್ತೆ. ಈ ಉಪಾಯನ ನೀವು ತರಕಾರಿ ಹೆಚ್ಚೋ ಮಣೆಮೇಲೂ ಪ್ರಯೋಗ ಮಾಡ್ಬೋದು.

ಶೂ

ಹಳೇದಾಗಿರೋ, ಗಬ್ಬುನಾತ ಹೊಡಿತಿರೊ ಶೂಗಳ್ನ ಎಸಿಯೋ ಮೊದ್ಲು, ಟೀ ಬ್ಯಾಗ್ ಅಥವ ಒಣಗಿರೋ ಟೀ ಎಲೆನ ಶೂ ಒಳಗ್ ಹಾಕಿ, ವಾಸನೆ ಚೆನ್ನಾಗ್ ಹೋಗೋವರ್ಗೂ ಇಡಿ. ಹೀಗ್ ಮಾಡೋದ್ರಿಂದ ಇವತ್ತು ಎಸಿಬೇಕು ಅನ್ನೋದ್ ಬಿಟ್ಟು, ಇನ್ನೊಂದ್ ಸ್ವಲ್ಪ ದಿನ ಬಾಳಿಕೆ ಬರೋ ಹಾಗಾಗತ್ತೆ.

ಮೂಲ

3. ಪರಿಮಳ ತರ್ಸೋಕೆ

ಟೀ ಗುಣನೇ ಹಾಗಲ್ವ. ಎಂಥಾ ವಾಸನೇ ಆದ್ರೂ ಚೆನ್ನಾಗ್ ಹೀರ್ಕೊಳತ್ತೆ. ಹಾಗಾಗಿ ಅವುಕ್ಕೆ ಪರಿಮಳ ಬೆರೆಸೋದೂ ಕೂಡ ತುಂಬಾ ಸುಲಭ. ಎಷ್ಟೊಂದ್ ಟೀ ಕಂಪನಿಯೋರು ಕೃತಕ ಅಥವ ನೈಸರ್ಗಿಕ ಪರಿಮಳನ ಟೀ ಎಲೆಗೆ ಹಾಕ್ತರೆ. ಉದಾಹರಣೆಗೆ ಏಲಕ್ಕಿ, ನಿಂಬೆ, ಪುದಿನ, ದಾಳಿಂಬೆ ಹೀಗೆ ಇನ್ನೂ ಸಾಕಷ್ಟು. ಬರಿ ನಾಲಿಗೆಗೆ ಮಾತ್ರ ಅಲ್ಲ ಈ ಫ್ಲೇವರ್ಗಳು ಒಳ್ಳೆ ಸುವಾಸನೆನೂ ಕೊಡತ್ತೆ. ಈ ವಿಷ್ಯ ಗೊತ್ತಿದ್ರೆ ಸಾಕು ಮನೇಲಿ ಕೂಡ ಸುವಾಸನೆ ತರ್ಬೋದು. ಹೇಗೆ ಅಂತಿರ. ನಿಮಗಿಷ್ಟವಾದ್ ಫ್ಲೇವರ್ ಟೀ ಎಲೆನ ಒಂದ್ ಬಟ್ಟಲಿಗೆ ಅಥವ ಡಬ್ಬಿಗೆ ಹಾಕಿ, ಹಾಲಲ್ಲಿ, ರೂಮಲ್ಲಿ, ಡ್ರಾಯಿಂಗ್ ರೂಮಲ್ಲಿ, ವರಾಂಡದಲ್ಲಿ ಹೀಗೆ ಎಲ್ಲಿ ಜನ ಜಾಸ್ತಿ ಇರ್ತರೋ ಅಂಥ ಜಾಗದಲ್ಲಿ, ಯಾವ್ದಾದ್ರು ಮೂಲೇಲಿ ಇಡಿ. ಯಾವ್ ಸ್ಪ್ರೇ ಮಾಡದೇ, ರಾಸಾಯನಿಕ ಬಳಸ್ದೆ ಒಳ್ಳೆ ಪರಿಮಳ ಬರುಸ್ಬೋದು. ನೀವು ಇನ್ನೂ ಒಂದ್ ಹೆಜ್ಜೆ ಮುಂದೆ ಹೋಗಿ ನಿಮಗಿಷ್ಟವಾದ್ ಸುವಾಸನೇನೂ ಬರುಸ್ಕೊಬೋದು. ಹೇಗೆ ಗೊತ್ತ? ಅದೇ ಟೀ ಪುಡಿ ಅಥವ ಎಲೆಗೆ ಒಂದೆರಡ್ ಹನಿ, ನಿಮಗಿಷ್ಟವಾಗಿರೊ ಫ್ಲೇವರ್ನ ಸೇರಿಸಿ. ಪೆಪ್ಪರ್ಮಿಂಟ್, ಕಿತ್ತಳೆ, ನಿಂಬೆ, ಗುಲಾಬಿ, ರೋಸ್ ಮೇರಿ, ಹೀಗೆ ಎಷ್ಟೊಂದ್ ರೀತಿ ಫ್ಲೇವರ್ ಸಿಗತ್ತೆ ಅಂಗಡಿನಲ್ಲಿ. ಅದನ್ನ ಪ್ರಯೋಗ ಮಾಡಿ, ನಿಮ್ ಮನೇಲಿ ನೈಸರ್ಗಿಕವಾಗಿ ಸುವಾಸನೆ ಹರಡಿ.

ಹೂದಾನಿ ಒಳಗೆ

ಒಣಗಿರೋ, ಪರಿಮಳ ಬೀರೋ ಟೀ ಎಲೆನ, ಚೂರೇ ಚೂರು ಹೂದಾನಿ ಒಳಗೆ, ಅಲಂಕಾರಕ್ಕೆ ಅಂತ ಇಟ್ಟಿರೋ ಬಟ್ಟಲೊಳಗೆ ಹಾಕಿ. ಮನೆಯೆಲ್ಲಾ ಘಂ ಅಂತಿರತ್ತೆ.

ಐ ಪಿಲ್ಲೊ / ಕಣ್ಣಿನ ದಿಂಬು

ಕಣ್ಣಿಗೆ ಎಷ್ಟ್ ಆರೈಕೆ ಮಾಡಿದ್ರೂ ಸಾಲಲ್ಲ. ಅಂಥಾ ಸೂಕ್ಷ್ಮವಾದ್ ಅಂಗ ಅದು. ಚೆನ್ನಾಗ್ ರೆಸ್ಟೂ ಕೊಡ್ಬೇಕು. ಹಾಗಾಗಿ, ಮನೇಲೇ ಕಣ್ಣಿಗೆ ಆರಾಮ್ ಅನ್ಸೋ ದಿಂಬು ಅಥವ ಐ ಪಿಲ್ಲೊನ ತಯಾರ್ ಮಾಡ್ಕೊಳಿ. ಒಣಗಿರೊ ಟೀ ಎಲೆ ಒಂದಷ್ಟ್ ತೊಗೊಂಡು ಅದಕ್ಕೆ ಅದಕ್ಕೆ ಕಣ್ಣಿಗ್ ತಂಪು ಮಾಡೋ ಫ್ಲೇವರ್ ಅಂದ್ರೆ ಗುಲಾಬಿನೋ, ಲ್ಯಾವೆಂಡರೋ ಒಂದೆರಡ್ ಹನಿ ಹಾಕಿ, ಈ ಸೌತೆಕಾಯಿ, ಆಲೂಗೆಡ್ಡೆ ಇಟ್ಕೊತಿವಲ್ಲ ಹಾಗೇ ಇಟ್ಕೊಂಡ್ರೆ, ಚೆನ್ನಾಗ್ ರೆಲ್ಯಾಕ್ಸ್ ಆಗತ್ತೆ. ಕಣ್ಣಿನ ದಣಿವೂ ಕಮ್ಮಿಯಾಗತ್ತೆ. ಒಂಥರ ಫ್ರೇಶ್ ಅನ್ಸತ್ತೆ.

ವಾರ್ಡ್ರೋಬ್ ಡ್ರಾಯರ್ ಒಳಗೆ

ಒಣಗಿರೊ ಟೀ ಬ್ಯಾಗ್ ಅಥವ ಮಲ್ಲ್ ಬಟ್ಟೆನಲ್ಲಿ ಪ್ಯಾಕ್ ಮಾಡಿರೋ ಟೀ ಎಲೆನ ಕಾಲುಚೀಲ, ಒಳಉಡುಪು ಇಡೋ ಡ್ರಾಯರ್ ನಲ್ಲಿ ಇಟ್ರೆ, ಸಾಮಾನ್ಯವಾಗ್ ಅಲ್ಲಿ ಬರೋ ಮುಗ್ಗುಲು ವಾಸನೆನ ಅದು ಹೀರ್ಕೊಳತ್ತೆ.

ಕಾರಿನ ಸುಗಂಧದ್ರವ್ಯ

ಕಾರಲ್ಲಿ ಇಡೋದಕ್ಕೆ ಈಗಂತೂ ಸಿಕ್ಕಾಪಟ್ಟೆ ರೀತಿ ಸೆಂಟ್ಗಳು ಬಂದಿವೆ. ಆದ್ರೆ ನೈಸರ್ಗಿಕವಾಗಿ, ಕಮ್ಮಿ ಖರ್ಚಿನಲ್ಲಿ ಒಳ್ಳೆ ಪರಿಮಳ ಬೇಕು ಕಾರೊಳಗೆ ಅಂದ್ರೆ, ಸುಮ್ನೆ ಒಂದೆರಡ್ ಟೀ ಬ್ಯಾಗ್ನ ಕನ್ನಡಿಗೆ ನೇತಾಕಿ. ಇಲ್ಲಾಂದ್ರೆ, ಮಲ್ ಬಟ್ಟೆ ಒಳಗೆ ಸುವಾಸನೆ ಬೀರೊ ಟೀ ಎಲೆ ಒಂದಷ್ಟು ಹಾಕಿ ಪ್ಯಾಕ್ ಮಾಡಿ, ಏಸಿ ಹತ್ರ, ಮೂಲೆಗಳಲ್ಲಿ ಇಡಿ. 

ಮೂಲ

4. ಬಣ್ಣ ಬರಕ್ಕೆ / ಡೈಯಿಂಗ್ ಮಾಡಕ್ಕೆ

ಎಷ್ಟೊಂದ್ ಥರದ್ ಟೀ ಸೊಪ್ಪು ಸಿಗತ್ತೆ. ಅದಕ್ಕೆ ಅನುಗುಣವಾಗಿ ಡಿಕಾಕ್ಷನ್ ಮಾಡಿದಾಗ ಕೆಂಪು, ಕಂದು, ಆಂಬರ್, ಹಳದಿ ಅಥವ ಹಸಿರು ಹೀಗೆ ಬೇರೆ ಬೇರೆ ಬಣ್ಣ ಬರತ್ತೆ. ಈ ಬಣ್ಣನ ಬಳಸಿ ನಮಗ್ ಬೇಕಾದ್ ವಸ್ತುಗೆ ಹೊಸ ಬಣ್ಣ ಕೊಡಕ್ ಉಪ್ಯೋಗುಸ್ಬೋದು. ಇದು ಒಂಥರಾ ನೈಸರ್ಗಿಕವಾಗಿ ಡೈಯಿಂಗ್ ಕೆಲ್ಸ ಮಾಡತ್ತೆ. ಟೀ ಸೊಪ್ಪನ್ನ ಹೇಗ್ ಪ್ರೋಸಸ್ ಮಾಡಿರ್ತರೆ ಅನ್ನೋದೂ ಇಲ್ಲಿ ಮುಖ್ಯ ಆಗತ್ತೆ. ಉದಾಹರಣೆಗೆ ಹಸಿರು ಮತ್ತೆ ಕಪ್ಪು ಬಣ್ಣ. ಇವುಗಳಲ್ಲಿ ಬೇರೆ ಬೇರೆ ಶೇಡೂ ಇರತ್ತೆ. ಹಾಗಾಗಿ ನಮಗ್ ಪ್ರಯೋಗ ಮಾಡಕ್ಕೆ ಸುಲಭ. ಇವೆರಡನ್ನ ಬಿಟ್ರೆ, ದಾಸವಾಳದ್ ಫ್ಲೇವರ್ ಆಗಿದ್ರೆ ಗಾಢವಾಗಿರೋ ಕೆಂಪು, ರೋಯ್ಬೋಸ್ ರೆಡ್ ಟೀ ಆದ್ರೆ, ಗುಲಾಬಿ ಕೆಂಪು, ಇನ್ನು ವಿಶೇಷವಾಗಿ ಪುಡಿಮಾಡಿರೋ ಗ್ರೀನ್ ಟೀ ಇದ್ಯಲ್ಲ ಇದ್ರಿಂದ ಗಾಡವಾದ್ ಹಸಿರು ಬಣ್ಣ ಬರತ್ತೆ.

ಕೂದಲಿಗೆ

ದಿನಾ ತೆಲೆಗ್ ಸ್ನಾನ ಮಾಡೋರು, ಟೀ ಡಿಕಾಕ್ಷನ್ನ ಕೂದಲು ವಾಶ್ ಮಾಡಕ್ಕೆ ಉಪ್ಯೋಗ್ಸುದ್ರೆ, ಕೂದ್ಲು ಒಳ್ಳೆ ಬಣ್ಣ ಹಾಕ್ಸಿರೋ ಥರನೇ ಬಣ್ಣ ಬರತ್ತೆ. ಜೊತೆಗೆ ಮಿರ ಮಿರ ಅಂತ ಮಿಂಚತ್ತೆ.

ಬಟ್ಟೆಗೆ

ಈ ಲೇಸ್, ಕಾಟನ್, ಮಸ್ಲಿನ್ ಅಥವ ಬೇರೆ ಸ್ವಲ್ಪ ತರಿಯಾಗಿರೊ ಬಟ್ಟೆಗೆ ಟೀ ಡಿಕಾಕ್ಷನ್ನಿಂದ ಹೊಸ ಬಣ್ಣ ಕೊಡ್ಬೋದು. ಒಂಥರ ವಿಂಟೇಜ್ ಲುಕ್ ಬರತ್ತೆ. ಜಾಸ್ತಿ ಏನೂ ಪ್ರಲಾಪ ಇಲ್ಲ ಕಣ್ರಿ. ನಿಮಗ್ ಬೇಕಾಗಿರೋ ಬಣ್ಣದ್ ಟೀ ಡಿಕಾಕ್ಷನ್ ರೆಡಿ ಮಾಡ್ಕೊಂಡು, ತಣ್ಣಗಾಗೋವರ್ಗೂ ಕಾಯಿರಿ. ಆಮೇಲೇ ಬಟ್ಟೆನ ಅದ್ರಲ್ಲಿ ಅದ್ದಿ ನೆನೆಸಿ. ಇಲ್ಲಿ ಒಂದು ವಿಷ್ಯ ಹೇಳಲೇಬೇಕು. ಟೀಯಿಂದ ಬಣ್ಣಕಟ್ಟಿದ್ರೆ ಅದು ತಾತ್ಕಾಲಿಕ ಮಾತ್ರ. ಬಟ್ಟೆನ ಒಗೆದಾಗ ಬಣ್ಣ ಮಾಸ್ತಾ ಬರತ್ತೆ. ಹಾಗಾಹಿ ಒನ್ ಟೈಮ್ ಯೂಸ್ ಅನ್ಕೋಬೋದು.

ಕಾಗದಕ್ಕೆ

ಕ್ರಿಯೇಟಿವಾಗಿ ಗ್ರೀಟಿಂಗ್ ಕಾರ್ಡ್ ಮಾಡಕ್ಕೆ, ಹಳೇ ಪತ್ರಿಕೆ ಲುಕ್ ಕೊಡಕ್ಕೆ, ಕಾಗದಕ್ಕೂ ಟೀ ಡೈ ಬಳಸ್ಬೋದು. ತಣ್ಣಗಿರೋ ಟೀ ಡಿಕಾಕ್ಷನ್ನಲ್ಲಿ ಮಂದವಾಗಿರೋ ಕಾಗದನ ಅದ್ದಿ ತೆಗೆದು, ಒಣಗಕ್ಕೆ ಬಿಡಿ. ಗಾಢವಾದ್ ಬಣ್ಣ ಬೇಕು ಅಂದ್ರೆ, ಇದನ್ನ ಇನ್ನೂ ಒಂದಷ್ಟ್ಸಲ ಮಾಡಿ. ಇನ್ನೂ ಒಂದ್ ವಿಧಾನ ಇದೆ. ರೆಡಿ ಮಾಡ್ಕೊಂದಿರೋ ಟೀ ಡಿಕಾಕ್ಷನ್ನ ಪೇಯಿಂಟ್ ಮಾಡೋ ಬ್ರಶ್ಶಲ್ಲಿ ಬಣ್ಣ ಹಚ್ಚೋ ಥರ ಕಾಗದದ್ ಮೇಲೆ ಹಚ್ಚಿ. ಇಲ್ಲ ಅಂದ್ರೆ, ಟೀ ಬ್ಯಾಗ್ನ ನೀರಲ್ಲಿ ಅದ್ದಿ, ಬಣ್ಣ ಬಿಟ್ಕೊಳತ್ತೆ ಅನ್ನುವಾಗ, ಕಾಗದದ್ ಮೇಲೆ ಉಜ್ಜಿ.

ಮೊಟ್ಟೆಗಳಿಗೆ

ಮೊಟ್ಟೆ ಸಾಮಾನ್ಯ ಬಿಳೀ ಬಣ್ಣ ಇರತ್ತೆ. ಆದ್ರೆ ಈ ಬಾತು ಕೋಳಿ ಮೊಟ್ಟೆ, ಇನ್ನೂ ಬೇರೆ ಹಕ್ಕಿಗಳ್ ಮೊಟ್ಟೆ ಕಂದು ಬಣ್ಣಕ್ಕಿರತ್ತೆ. ನಿಮ್ಗೆ ಒಳಗೆ ಕೋಳಿಮೊಟ್ಟೆನೇ ಬೇಕು ಆದ್ರೆ ನೋಡಕ್ ಮಾತ್ರ ಡಿಫರೆಂಟಾಗಿರೋ ಲುಕ್ ಬೇಕು ಅಂದ್ರೆ, ಹಿಗ್ ಮಾಡಿ. ಗಟ್ಟಿಯಾಗ್ ಬೆಯಿಸ್ಕೊಂಡಿರೋ ಮೊಟ್ಟೆನ ಟೀ ಡಿಕಾಕ್ಶನ್ ಇರೋ ಬಟ್ಟಲಲ್ಲಿ ಅದ್ದಿಡಿ. ಇದರ ಮೇಲೆ ಸ್ವಲ್ಪ ವಿನೆಗರ್ ಚಿಮುಕಿಸಿ. ಮೊಟ್ಟೆ ಪೂರ್ತಿಯಾಗ್ ಬಣ್ಣಕಟ್ಟಬೇಕು ಅಷ್ಟ್ ದೊಡ್ಡ್ ಪಾತ್ರೆ ತೊಗೊಳಿ. ಮೊಟ್ಟೆ ಬಣ್ಣ ಹಿಡಿಯಕ್ಕೆ ಸುಮಾರ್ ಒಂದುಗಂಟೆ ಕಾಲ ಬೇಕಾಗತ್ತೆ. ಒಂದೇ ಮೊಟ್ಟೆಗೆ ಒಂದಕ್ಕಿಂತ ಜಾಸ್ತಿ ಶೇಡ್, ಬಣ್ಣ ಬೇಕು ಅಂದ್ರೆ, ಬೇರ್ ಬೇರೆ ಬಣ್ಣ ಬಿಡೋ ಡಿಕಾಕ್ಷನ್ನ್ ಬೇರೆ ಬೇರೆ ಪಾತ್ರೆನಲ್ಲಿ ಇಟ್ಟು, ಮೊಟ್ಟೆ ಅರ್ಧಭಾಗ ಒಂದ್ ಪಾತ್ರೇಲಿ ಅದ್ದಿ, ಸ್ವಲ್ಪ ಹೊತ್ತಾದ್ ಮೇಲೆ ಇನ್ನೊಂದ್ ಪಾತ್ರೆಲಿ ಅದ್ದಿಡಿ.

ಕಲೆಗೆ

 ನಿಮಗಿಷ್ಟವಾಗಿರೋ ಬಣ್ಣದ್ ಡಿಕಾಕ್ಷನ್ ರೆಡಿ ಮಾಡ್ಕೊಂಡು, ಪೇಯಿಂಟ್ ಬ್ರಶ್, ಸ್ಪ್ರೇ ಬಾಟಲ್, ಅಥವ ನೆನೆದಿರೊ ಟೀ ಬ್ಯಾಗ್ನ, ನೀವ್ ತಯಾರ್ಮಾಡೋ ಕ್ರಾಫ್ಟ್ ವಸ್ತುಗೆ ಬಣ್ಣ ಹಾಕಕ್ಕೆ, ಚಿಮುಕಿಸಕ್ಕೆ, ಅದ್ದಿ ಅದ್ದಿ ಹೊಸ ಪ್ಯಾಟರ್ನ್ ತರ್ಸಕ್ಕೆ ಉಪ್ಯೋಗುಸ್ಬೋದು.

ಮೂಲ

5. ಅಲಂಕಾರಕ್ಕೆ

ಉಪ್ಯೋಗ್ಸಿರೋ ಟೀಸೊಪ್ಪನ್ನ ಎಸಿಬೇಡ್ರಿ. ಅದ್ರಿಂದ ಮಾಡ್ಬೋದಾಗಿರೊ ಒಳ್ಳೆ ಅಲಂಕಾರಿಕ, ಮಜ ಅನ್ಸೋವಂಥ ವಸ್ತುನ ಹೇಳ್ಕೊಡ್ತಿವಿ. ನಿಮ್ಮನೇಲಿ ಮುಂದಿನ್ ಫಂಕ್ಷನ್ನು, ಪಾರ್ಟಿಗೆ ಟೀ ಸೊಪ್ಪಿಂದ ಮಾಡಿರೋ ವಸ್ತುನೇ ಅಲಂಕಾರಕ್ಕೆ ಬಳಸಿ ನೋಡಿ. ಹೇಗಿರತ್ತೆ ಬಂದೋರ್ ರಿಯಾಕ್ಷನ್ ಅಂತ. ಅದ್ರಲ್ಲೂ ಈ ಹೂದಾನಿಲೆಲ್ಲಾ ಇದನ್ನ ಜೋಡಿಸಿಟ್ಟು, ನಿಮ್ ಥೀಮ್ಗೆ ಹೊಂದೋಹಾಗ್ ಅಲಂಕಾರ ಮಾಡಿದ್ರೆ, ಮನೆ ಲುಕ್ಕೇ ಬೇರೆ.

ಅಲಂಕಾರಿಕ ಮೇಣದ ಬತ್ತಿ

ಟೀ ಟೇಬಲ್ ಪರಿಸರ ಸೃಷ್ಟಿಮಾಡ್ಬೇಕು ಅಂದ್ರೆ, ಟೇಬಲ್ ಮೇಲೆ ಚಿಕ್ಕ ಚಿಕ್ಕ ಗಾಜಿನ್ ಲೋಟದಲ್ಲಿ ಒಣಗಿರೊ ಟೀ ಸೊಪ್ಪನ್ನ ತುಂಬಿ, ಅಲ್ಲಲ್ಲಿ ಜಾಗ ನೋಡಿ ಇಡಿ. ಅದರ ಮೇಲೆ ಮೇಣದ್ ಬತ್ತಿ ಹಚ್ಚಿಡಿ.

ಹೂದಾನಿ

ಒಂದು ಪರಿಪೂರ್ಣವಾದ್ ಟೀ ಪಾರ್ಟಿ ಲುಕ್ ಬರ್ಬೇಕು ಅಂದ್ರೆ, ಒಂದ್ ಗಾಜಿನ ಹೂದಾನಿಗೆ ಮುಕ್ಕಾಲು ಭಾಗ ಒಣಗಿರೋ ಟೀ ಸೊಪ್ಪು ತುಂಬಿ, ರೇಷ್ಮೆ ಹೂಗಳ್ನ ಇಟ್ಟು ಜೋಡ್ಸಿ. ಇನ್ನೊಂದ್ ರೀತಿ ಅಲಂಕಾರ ಅಂದ್ರೆ, ಟ್ರಾನ್ಸ್ಪರೆಂಟ್ ಲೋಟಕ್ಕೆ ಕಾಲು ಭಾಗ ಒಣಗಿರೊ ಟೀ ಸೊಪ್ಪು ತುಂಬಿ, ಮಾಮೂಲಿ ನೀರ್ ಹಾಕಿ, ಅದ್ರಲ್ಲಿ ಹೋಗಳ್ನ ಜೋಡ್ಸಿ. ಇದನ್ನ ಗಮನಿಸಿ ನೋಡ್ದಾಗ ಎಷ್ಟ್ ಚೆನ್ನಾಗಿರತ್ತೆ ಗೊತ್ತ? ಟೀ ಸೊಪ್ಪಿನ್ ಬಣ್ಣ ಬಿಟ್ಕೊಳಕ್ಕೆ ಶುರುವಾಗ್ತಿದ್ದಾಗೇ, ಸೊಪ್ಪು ನಿಧಾನಕ್ಕೆ ಅರಲತ್ತೆ. ಹಾಗೇನೆ ನೀರಿನ್ ಬಣ್ಣ ಬದಲಾಗ್ತಾ ಹೋಗತ್ತೆ. ಆದ್ರೆ ಹುಶಾರು. ಇದನ್ನ ಒಂದ್ ದಿನಕ್ಕಿಂತ ಜಾಸ್ತಿ ಇಡ್ಬೇಡಿ. ಆಮೇಲೆ ಟೀ ಸೊಪ್ಪು ಕೊಳಿಯಕ್ ಶುರುವಾಗಿ, ಮನೇಲೆಲ್ಲಾ ಪರಿಮಳ ಬರೋ ಬದ್ಲು ಕೆಟ್ಟ ವಾಸನೆ ಬರತ್ತೆ.

ಮೂಲ

6. ಕೈತೋಟಕ್ಕೆ

ಟೀ ಸೊಪ್ಪಲ್ಲಿ ಸಾಕಷ್ಟು ಪೋಷಕಾಂಶ ಇರತ್ತೆ ಜೊತೆಗೆ ಅಸಿಡಿಕ್ ಗುಣ ಹೆಚ್ಚಾಗಿರತ್ತೆ. ಇದ್ರಿಂದ ಗಿಡ ಸೊಂಪಾಗ್ ಬೆಳಿಯತ್ತೆ. ನೀವು ಫ್ರೆಶ್ಶಾಗಿರೋ ಟೀ ಸೊಪ್ಪು ಹಾಕ್ಬೇಕಿಲ್ಲ. ಟೀ ಮಾಡಾದಮೇಲೆ ಉಳಿಯೋ ಗಷ್ಟ ಇರತ್ತಲ್ಲ, ಅದನ್ನ ಸುಮ್ನೆ ಗಿಡದ್ ಬುಡಕ್ಕೆ ಹಾಕಿದ್ರೆ ಆಯ್ತು. ನೋಡಿ, ನಿಮ್ ಕೈತೊಟದಲ್ಲಿ ಅಥವ ಮನೆ ಸುತ್ತ ಮುತ್ತ ಇದರ ಅವಷ್ಯಕತೆ ಇರೋ ಗಿಡ ಮರ ಇರ್ಬೋದೇನೋ.

ಗೊಬ್ಬರ

ಟೀ ಮಾಡಾದ್ಮೇಲೆ ಉಳಿಯೋ ಅದರ ಗಷ್ಟದಲ್ಲ್ಇ ಮತ್ತೆ ಟೀ ಮಾಡಿ ಕುಡಿಯಕ್ಕಾಗಲ್ಲ ನಿಜ. ಆದ್ರೆ ಇನ್ನೂ ಸತ್ವ ಇರತ್ತೆ. ಹಾಗಾಗಿ ಎಸೆದು ದಂಡ ಮಾಡೋ ಬದ್ಲು, ಬೆರಕೆ ಗೊಬ್ಬರಕ್ಕೆ ಹಾಕಿ. ಅಂದ್ರೆ ಈ ಹಣ್ಣು ತರಕಾರಿ ಸಿಪ್ಪೆ ಹಾಕ್ರಿರಲ್ಲ ಅದೇ ಗೊಬ್ಬರಕ್ಕೆ. ಇದ್ರಿಂದ ನಿಮ್ ಕೈತೋಟದಲ್ಲಿರೋ ಎಲ್ಲಾ ಗಿಡಗಳ್ಗೂ ಟೀ ಸೊಪ್ಪಲ್ಲಿರೋ ಅಂಶ ಸೇರತ್ತೆ. ಬರಿ ಟೀ ಸೊಪ್ಪಲ್ಲ ಕಣ್ರಿ, ನೀವ್ ಉಪ್ಯೋಗ್ಸೊ ಟೀ ಬ್ಯಾಗ್ ಏನಾದ್ರು ಜೈವಿಕ ವಸ್ತಿಯಿಂದ ಮಾಡಿದ್ರೆ, ಅದನ್ನೂ ಬಳಸಾದ್ಮೇಲೆ ಬೆರೆಕೆ ಗೊಬ್ಬರಕ್ಕೆ ಸೇರುಸ್ಬೋದು.

ಗಿಡಕ್ಕೆ ನೀರ್ ಹಾಕಕ್ಕೆ ಮತ್ತೆ ಪೋಷಣೆ ಮಾಡಕ್ಕೆ

ಹೂಕುಂಡದಲ್ಲಿ ಹೊಸದಾಗಿ ಗಿಡ ನೆಡುವಾಗ, ಮಣ್ಣು, ಗೊಬ್ಬರ ಇದೆಲ್ಲ ಒಂದೊಂದ್ ಪದರ ಹಾಕ್ತಿವಲ್ವ ಹಾಗೆನೆ, ತಳದಲ್ಲಿ ಅಂದ್ರೆ ಕೆಳಗಿಂದ ಮೊದಲ್ನೇ ಪದರದಲ್ಲಿ ಟೀ ಸೊಪ್ಪಿನ್ ಗಷ್ಟ, ಉಪ್ಯೋಗ್ಸಿರೋ ಟೀ ಬ್ಯಾಗ್ ಹಾಕ್ಬೋದು. ಗಿಡದ್ ಬೇರು, ಇದ್ರಿಂದನೂ ಸತ್ವ ಹೀರ್ಕೊಳತ್ತೆ. ಇನ್ನು ಜಾಸ್ತಿ ಡಿಕಾಕ್ಷನ್ ಮಾಡ್ಬಿಟ್ಟಿದಿರ. ಆದ್ರೆ ಉಪ್ಯೋಗ್ಸೋದ್ ಮರ್ತೋಗಿದೆ. ಕುಡಿಯಕ್ಕಾಗಲ್ಲ ಅಂದ್ರೆ ಸಿಂಕಲ್ಲಿ ಚೆಲ್ಲಿ ದಂಡ ಮಾಡೋ ಬದ್ಲು, ಗಿಡಕ್ಕೆ ನೀರ್ ಥರ ಹಾಕಿ.

ಮೂಲ

7. ಸೌಂದರ್ಯಕ್ಕೆ ಅಂದ ಚಂದಕ್ಕೆ

ಟೀ ಸೊಪ್ಪು ಮೂಡ್ ಫ್ರೆಶ್ ಮಾಡೋ, ಸ್ಕ್ರಬ್ ರೀತಿ ಕೆಲ್ಸ ಮಾಡೋ ಮತ್ತೆ ರಿಲ್ಯಾಕ್ಸ್ ಮಾಡೋ ಗುನ ಇದೆ. ಹಾಗಿರುವಾಗ ನಮ್ ದಿನನಿತ್ಯದ್ ಸೌಂದರ್ಯಕ್ಕೆ, ಮನೆ ಮದ್ದಿಗೆ ಯಾಕ್ ಉಪ್ಯೋಗಿಸ್ಬಾರ್ದು ಅಲ್ವ.

ಮೌತ್ ವಾಶ್

ಬಾಯಿ ವಾಸ್ನೆ ಬರ್ತಿದ್ರೆ, ಪುದಿನ, ನಿಂಬೆ ಹುಲ್ಲು, ಏಲಕ್ಕಿ ಇಂಥದ್ರಿಂದ ಮಾಡಿರೋ ಟೀ ಸೊಪ್ಪನ್ನ ಲೈಟಾಗಿ ಡಿಕಾಕ್ಷನ್ ಮಾಡಿ, ಅದ್ರಲ್ಲಿ ಬಾಯಿ ಮುಕ್ಕಳಿಸಿದ್ರೆ, ನಾಲಗೆಲಿರೋ ಟೆಸ್ಟ್ ಬಡ್ಸ್, ಆ ಫ್ಲೇವರ್ನ ಹೀರ್ಕೊಂಡು, ದುರ್ಗಂಧ ಹೋಗ್ಸತ್ತೆ.

ಸೋಪ್ ಮಾಡಕ್ಕೆ

ಒಣಗಿರೊ, ಚೆನ್ನಾಗ್ ಪುಡಿ ಮಾಡಿರೋ ಟೀ ಸೊಪ್ಪನ್ನ ಹ್ಯಾಂಡ್ ಮೇಡ್ ಸೋಪಲ್ಲಿ ನೈಸರ್ಗಿಕವಾಗಿ ಬಣ್ಣ ಬರಕ್ಕೆ, ಸ್ಕ್ರಬ್ ಥರ ಕೆಲ್ಸ ಮಾಡಕ್ಕೆ ಉಪ್ಯೋಗಿಸ್ತಾರೆ. ಟೀ ಸೊಪ್ಪಾಲ್ಲೇನಾದ್ರು ಫ್ಲೇವರ್ ಇದ್ರೆ, ಘಮ ಘಮಾನ್ನೊ ಸೋಪು ತಯಾರಾಗತ್ತೆ.

ಸ್ನಾನ ಮಾಡಕ್ಕೆ

ಟೀಯನ್ನ ನೀವ್ ಇಷ್ಟ ಪಟ್ಟು ಕುಡಿಯೊ ಕಾರಣ, ಚೆನ್ನಾಗ್ ರಿಲ್ಯಾಕ್ಸ್ ಆಗತ್ತೆ ಅಂತ ಅಲ್ವ. ಇನ್ನೂ ಒಂದ್ ವಿಧಾನ ಇದೆ ಕಣ್ರಿ. ಸ್ನಾನ ಮಾಡೋ ಮೊದ್ಲು ನೀರ್ ತುಂಬಿರೋ ಬಾತ್ ಟಬ್ಗೆ ಒಂದ್ ಎಂಟ್ ಹತ್ತು ಟೀ ಬ್ಯಾಗ್ನ ಹಾಕಿ. ಅಯ್ಯೋ ಪುಟ್ಟ ಪುಟ್ಟ ಟೀ ಬ್ಯಾಗ್, ಟಬ್ ತುಂಬಾ ಹರಡತ್ತೆ ಅಂತ ಯೋಚನೆ ಆದ್ರೆ, ಒಂದ್ ದೊಡ್ಡ ಬಟ್ಟೆ ಬ್ಯಾಗಿಗೆ ಸ್ವಲ್ಪ ಟೀ ಸೊಪ್ಪು ತುಂಬಿ, ಬಾತ್ ಟಬ್ಗೆ ನೀರ್ ತುಂಬಿಸೋ ನಲ್ಲಿ ನೆರಕ್ಕೆ ಸರಿಯಾಗ್ ನೇತಾಕಿ. ಈ ನೀರಲ್ಲಿ ಸ್ನಾನ ಮಾಡಿದ್ರೆ, ಟೀ ಕುಡಿದಷ್ಟೇ ತೃಪ್ತಿ ಸಿಗತ್ತೆ. ರಿಲ್ಯಾಕ್ಸ್ ಆಗತ್ತೆ.

ಮೂಲ

8. ಅಡುಗೆ ಮಾಡಕ್ಕೆ

ಸುವಾಸನೆ ಟೀ ಸೊಪ್ಪನ್ನ ಹಾಲಲ್ಲಿ, ಸಾರಲ್ಲಿ ಮತ್ತೆ ಬೇರೆ ಬೇರೆ ದ್ರವ ಪದಾರ್ಥಗಳಲ್ಲಿ ನೆನೆಸಿಟ್ರೆ, ಆ ಫ್ಲೇವರ್ ಮಾಡೋ ಅಡುಗೆಗೂ ಬರತ್ತೆ. ಒಳ್ಳೆ ಪ್ರಯೋಗ ಅಂದ್ರೆ, ಸೂಪ್ ಮಾಡಕ್ಕೆ ಬಳಸೋ ಟೊಮ್ಯಾಟೋ ಪ್ಯೂರಿ ಜೊತೆ ಟೀ ಸೊಪ್ಪು ನೆನೆಸಿಡಿ,

ಸ್ಟ್ರಾಂಗಾಗಿ ಮಾಡಿರೋ ಟೀ ಡಿಕಾಕ್ಷನ್ನಲ್ಲಿ ಮೀನು ಅದ್ದಿಡಿ, ವಿನೇಗರ್ ಮತ್ತೆ ಸಾಸ್ ನಲ್ಲೂ ಒಂದೆರಡ್ ಹನಿ ಡಿಕಾಕ್ಷನ್ ಬೆರೆಸಿ. ಇಷ್ಟೇ ಅಲ್ಲರಿ ಕ್ರೀಮ್, ತೆಂಗಿನ ಹಾಲು ಜ್ಯೂಸ್ ಜೊತೆಗೂ ಸೇರಿಸಬೋದು. ಐಸ್ಕ್ರಿಮ್ ನಂಥ ಡೆಸರ್ಟ್ಗು ಫ್ಲೇವರ್ ಬರ್ಲಿ ಅಂತ ಇದನ್ನ ಉಪ್ಯೋಗಿಸ್ಬೋದು.

ಹಬೆನಲ್ಲಿ ಅಡುಗೆ ಮಾಡಕ್ಕೆ

ಒಣಗಿರೋ ಬ್ಲ್ಯಾಕ್ ಮತ್ತೆ ಗ್ರೀನ್ ಟೀ ಸೊಪ್ಪನ್ನ ಅನ್ನ ಬೇಯಿಸಕ್ಕೆ, ಮೀನು ಬೇಯಿಸಕ್ಕೆ ಹಬೆನಲ್ಲಿ ಬಳಸಿದ್ರೆ, ಒಳ್ಳೆ ಫ್ಲೇವರ್ ಬರತ್ತೆ.

ಮಾಂಸನ ಮ್ಯಾರಿನೇಟ್ ಮಾಡಕ್ಕೆ

ಟೀ ಸೊಪ್ಪಲ್ಲಿರೊ ಬಣ್ಣ ಕೊಡೋ ಅಂಶ ಇದ್ಯಲ್ಲ, ಅದು ಮ್ಯಾರಿನೇಟ್ ಮಾಡೊದಕ್ಕೆ ಹೇಳಿ ಮಾಡ್ಸಿದ್ ಭಾಗ. ಈ ವಿಧಾನ ಕೂಡ ತುಂಬ ಸರಳವಾಗಿದೆ. ಮಾಂಸನ ರೋಸ್ಟ್ ಅಥವ ಗ್ರಿಲ್ಲ್ ಮಾಡೋ ಮೊದ್ಲು, ಸ್ಟ್ರಾಂಗಾಗಿ ರೆಡಿ ಮಾಡ್ಕೊಂಡಿರೋ ಟೀ ಡಿಕಾಕ್ಷನ್ನಲ್ಲಿ ರಾತ್ರಿ ಪೂರ್ತಿ ಮ್ಯಾರಿನೇಟ್ ಮಾಡ್ಬೇಕು. ಇದೊಂಥರಾ ಭಿನ್ನವಾದ್ ಫ್ಲೇವರ್ ಕೊಡತ್ತೆ.

ಮಸಾಲೆ / ಫ್ಲೇವರ್

ನೆಂದಿರೋ ಟೀ ಸೊಪ್ಪು ಮತ್ತೆ ಒಣಗಿರೋ ಟೀ ಸೊಪ್ಪನ್ನ ಮಸಾಲೆ ಪದಾರ್ಥದ್ ಥರನೂ ಉಪ್ಯೋಗುಸ್ಬೋದು. ಇಲ್ಲಾಂದ್ರೆ ಸಿಹಿತಿಂಡಿಗೆ, ಡೆಸರ್ಟ್ಗೆ ಫ್ಲೇವರ್ ಥರ ಬಳಸ್ಬೋದು. ' ಪಲ್ಸ್ ಅರ್ಲ್ ಗ್ರೇ ಟೀ' ಸೊಪ್ಪಲ್ಲಿ ಇರೋ ಫ್ಲೇವರ್ನ ಬಿಸ್ಕತ್ ಮಾಡಕ್ಕೆ ಉಪ್ಯೋಗುಸ್ಕೊಂಡ್ರೆ, ಪುಡಿಮಾಡಿರೋ ಗ್ರೀನ್ ಟೀ ಸೊಪ್ಪನ್ನ ಕೇಕ್, ಪುಡ್ಡಿಂಗ್ ಮಾಡಕ್ಕೆ ಬಳಸ್ತರೆ. ಇನ್ನು ಊಲಾಂಗ್ ಅಥವ ಗ್ರೀನ್ ಟೀ ಸೊಪ್ಪನ್ನ ಹುರಿದು ಮಾಡೋ ಅಡುಗೆನಲ್ಲಿ, ಮಡಕೆನಲ್ಲಿ ಮಾಡೋ ಅಡುಗೆಗೆ ಮತ್ತೆ ಆಮ್ಲೆಟ್ ಮಾಡಕ್ಕೂ ಉಪ್ಯೋಗುಸ್ತಾರೆ. ಇಷ್ಟೆಲ್ಲಾ ಹೇಳಿದ್ ಮೇಲೆ ಒಂದ್ ಸಲ ಟ್ರೈ ಮಾಡಣ ಅನ್ನಿಸ್ತಿದ್ಯ? ಮಾಡಿ ರುಚಿ ನೋಡಿ ಆಮೇಲೆ ಹೇಳಿ.

ಮೂಲ

9. ವಿಶ್ರಾಂತಿ ತೊಗೊಳಕ್ಕೆ

ಜನ ಹರ್ಬಲ್ ಟೀ ಕುಡಿಯೋದಕ್ಕೆ ಮುಖ್ಯವಾದ್ ಕಾರಣ, ಅದು ಮನಸ್ಸನ್ನ ಚೆನ್ನಾಗಿ ರೆಲ್ಯಾಕ್ಸ್ ಮಾಡ್ಸತ್ತೆ ಅಂತ. ಅದ್ರಲ್ಲೂ ಕ್ಯಾಮೊಮೈಲ್ ಮತ್ತೆ ಪೆಪ್ಪರ್ಮಿಂಟ್ ಫ್ಲೇವರ್, ರೆಲ್ಯಾಕ್ಸ್ ಆಗಕ್ಕೆ, ಆರಾಮ ಪಡಿಯಕ್ಕೆ ಒಳ್ಳೆದು. ಎಷ್ಟೊಂದ್ ಪ್ರಸಿದ್ಧವಾದ್ ಟೀ ಕಂಪನಿನೋರು ಇದನ್ನ ಬಳಸ್ತಾರೆ. ಇನ್ನೂ ಬಹಳಷ್ಟು ವೆರೈಟಿನೂ ಇದೆ. ಮುಂದಿನ್ ಸಲ ಯಾವಾಗ್ಲಾದ್ರು ಮನಸ್ಸಿಗೆ ತುಂಬಾ ಒತ್ತಡ ಅನ್ಸಿದ್ರೆ, 'ಅಯ್ಯೋ ಸಾಕಪ್ಪ ಇನ್ನಾಗಲ್ಲ' ಅನ್ಸಿದ್ರೆ, ಒಂದ್ ಕಪ್ ಟೀ ಕುಡುದ್ ನೋಡಿ. ನಿಮ್ ಎಲ್ಲಾ ತಲೆಬಿಸಿನೂ ಮಾಯ ಆಗತ್ತೆ.

ಮೂಲ

10. ಆಫೀಸಿನೋರು, ಕುಟುಂಬದೋರು ಅಥವ ಗೆಳೆಯರ ಬಳಗ ಒಟ್ಟಾದಾಗ

ನಾವು ಎಷ್ಟೇ ಮುಂದುವರ್ದಿರೋ ಜಗತ್ತ್ನಲ್ಲಿ ಬದುಕ್ತಿರ್ಬೋದು. ಆದ್ರೆ ಆಗಾಗ ಕುಟುಂಬದೋರ್ನ, ಫ್ರೆಂಡ್ಸ್ನ ಮೀಟ್ ಮಾಡಿ ಮಾತಾಡ್ತಿರ್ತಿವಿ. ಆಗ ಯಾವ್ ದೊಡ್ಡ ಹೋಟೆಲ್ಗೂ ಹೋಗದ್ಬೇಡ, ಯಾವ್ ರುಚಿಯಾದ್ ತಿಂಡಿ ಮಾಡದೂ ಬೇಡ. ಟೀ ಇದ್ರೆ ಸಾಕು. ಟೇಬಲ್ ಮೇಲೆ ಟೀ ಇಟ್ಕೊಂಡು, ಸುತ್ತಾ ಎಲ್ರೂ ಕೂತು ಕಾಲ ಕಳೀತಿದ್ರೆ, ಆಹಾ ಅದರ ಮಜನೇ ಬೇರೆ ಕಣ್ರಿ. ತುಂಬಾ ಮುಖ್ಯವಾದ್ ಒಂದ್ ಕೆಲ್ಸದ್ ಬಗ್ಗೆ ಮಾತಾಡ್ತಿರ್ಲಿ ಅಥವ ಸುಮ್ನೆ ಹರಟೇನೇ ಹೊಡೀತಿರ್ಲಿ, ಟೀ ಜೊತೆಗಿದ್ರೆ ಸಾಕು. ಇನ್ಮುಂದೆ ನಿಮ್ ಮಾತಿನ್ ಮಧ್ಯೆ ಟೀ ಇರತ್ತಲ್ವ?