https://ourunseenhope.files.wordpress.com/2015/01/trapped.png

ಜೀವನದಲ್ಲಿ ಕಷ್ಟ ಯಾರ್ಗೆ, ಯಾವಾಗ್ ಬೇಕಾದ್ರೂ ಬರ್ಬಹುದು. ಕೆಲಸ, ಹಣ ಕಾಸಿನ ವಿಚಾರ, ಆರೋಗ್ಯ, ಸಂಬಂಧ ಹೀಗೆ. ಕಷ್ಟ ಬಂದಾಗ ನಾವು ಹೇಗೆ ಜೀವನ ನಡಡೀಬೇಕು ಅನ್ಕೋತಿವೋ ಹಾಗೆ ನಡಿಯಲ್ಲ. ಆಗ ನಮ್ಮೇಲೆ ನಾವೇ ನಂಬಿಕೆ ಕಳ್ಕೋತೀವಿ, ನಮ್ಗೇ ಯಾಕ್ ಈ ರೀತಿ ಅನ್ನೋ ಪ್ರಶ್ನೇನೂ ಹುಟ್ಕೊಳೋದ್ ಸಹಜ. ಆ ಸಮಯದಲ್ಲಿ ಈ ವಿಷಯಗಳನ್ನ ನೆನಪಿಟ್ಕೊಳಿ.

1. ಗುರಿ ಕಡೆ ಗಮನ ಇಟ್ಕೊಬೇಕು

ಅಕಸ್ಮಾತ್ ಏನೋ ಕಷ್ಟ ಬಂದ್ರೆ ನಿಮ್ಮ ಗುರಿಯಿಂದ ನಿಮ್ಮ ಗಮನ ಬೇರೆ ಕಡೆಗೆ ಹೋಗುತ್ತೆ. ಆದ್ರೆ ಹಾಗೆ ಆಗ್ದಿರೋ  ಹಾಗೆ ನೋಡ್ಕೊಳಿ. ನಿಮ್ಮ ಗಮನ ನಿಮ್ಮ ಗುರಿ, ಉದ್ದೇಶ, ಆಸೆ ಆಕಾಂಕ್ಷೆಗಳ ಮೇಲೆ ಇರ್ಲಿ. ನಿಮ್ಮೊಳಗೆ ಅಥವಾ ಹೊರಗಿರೋ  ಯಾವುದೇ ಗೊಂದಲಗಳಿಂದ ನಿಮ್ಮ ಗಮನ ಬೇರೆ ಕಡೆ ಹೋಗ್ಬಹುದು, ಆದ್ರೆ ಅದನ್ನೆಲ್ಲಾ ಬಿಟ್ಟು ನಿಮ್ಮ ಉದ್ದೇಶ ಪೂರೈಸೋ ಹಾಗೆ ನಡ್ಕೊಳೋದು ತುಂಬಾ ಮುಖ್ಯ. ಈ ಗೊಂದಲಗಳು ಒಂದು… ನಿಮ್ಮ ಗುರಿ ಮುಟ್ಟಕ್ಕೆ ಸಹಾಯ ಮಾಡುತ್ತೆ ಅಥವಾ, ಗುರಿಯಿಂದ ನಿಮ್ಮನ್ನ ತುಂಬಾ ದೂರ ಕರ್ಕೊಂಡು ಹೋಗುತ್ತೆ. ನಿಮ್ಮ ಗುರಿ, ಕಣ್ಣಿಂದ ತಪ್ದಿರೋ ಹಾಗೆ ನೋಡ್ಕೋಬೇಕಾಗಿರೋದು ನೀವೇ.

ಮೂಲ

2. ನಮ್ಮ ಖುಷಿ ನಮ್ಮ ಕೈಲಿದೆ ಅಂತ ತಿಳ್ಕೊಬೇಕು

ಬೇರೆ ಯಾರಿಂದಾನೋ ನಮಗೆ ಸಂತೋಷ ಸಿಗುತ್ತೆ ಅಂತ ಕೊರ್ಬಾರ್ದು. ನಮ್ಮ ಖುಷಿ ಹಾಳಾದ್ರೆ ಅದಕ್ಕೆ ಬೇರೆ ಯಾರೋ ಕಾರಣ ಅಂತ ಹೇಳೋ ಅಗತ್ಯಾನೂ ಇಲ್ಲ. ಇದಕ್ಕೆ ನಾವೇ ಜವಾಬ್ದಾರರು. ಎಷ್ಟೋ ಸಲ ಬೇರೆಯವರ ಒಳ್ಳೆ ಉದ್ದೇಶದಿಂದ ನಮಗೆ ಸಂತೋಷ ಸಿಗ್ತಿದ್ರೂ, ನಾವು ಖುಷಿಯಾಗಿರಕ್ಕೆ  ಏನ್ ಮಾಡ್ಬೇಕು? ಯಾವ ಕೆಲಸ ಮಾಡಿದ್ರೆ ಯಾವಾಗ್ಲೂ ಖುಷಿಯಾಗಿರಬಹುದು ಅನ್ನೋ ನಿರ್ಧಾರ ನಾವೇ ಮಾಡ್ಬೇಕು. ನಮ್ಮ ಖುಷಿ ನಮ್ಮ  ಕೈಯಲ್ಲೇ ಇದೆ.

3. ಹಿಂದೆ ಮಾಡಿರೋ ತಪ್ಪುಗಳನ್ನ ಮರೀಬೇಕು

ಕಷ್ಟ ಎಲ್ಲರಿಗೂ ಬರುತ್ತೆ. ತಪ್ಪ್ಪು ಎಲ್ಲರೂ ಮಾಡ್ತಾರೆ, ಒಬ್ಬೊಬ್ರು ಸಣ್ಣ ಪುಟ್ಟ ತಪ್ಪು ಮಾಡಿದ್ರೆ, ಸ್ವಲ್ಪ ಜನ ತುಂಬಾ ದೊಡ್ಡ ತಪ್ಪನ್ನೇ ಮಾಡ್ತಾರೆ. ಎಷ್ಟೋ ಜನ ಜೀವನದಲ್ಲಿ ಅದಕ್ಕೆ ಕ್ಷಮೇನೇ ಇಲ್ಲ ಅನ್ನೋತರದ  ತಪ್ಪನ್ನೂ ಮಾಡ್ತಾರೆ.  ತಪ್ಪನ್ನ ಮಾಡಿದ್ಮೇಲೆ ಯಾವಾಗ ನಮ್ಮನ್ನ ನಾವು ಕ್ಷಮಿಸಕೊಳಕ್ಕಾಗಲ್ವೋ, ಆಗ ಜೀವನದಲ್ಲಿ ನಾವು ಏನಾಗ್ಬೇಕು ಅನ್ಕೊಂಡಿರ್ತ್ತೀವೋ ಹಾಗೆ ಅಗಕ್ಕಾಗಲ್ಲ.

ಎಂಥಾ ತಪ್ಪೇ ಮಾಡಿದ್ರೂ ನಿಮ್ಮನ್ನ ನೀವು ಕ್ಷಮಿಸಕೊಳ್ಳಿ. ಆದ್ರೆ ಆ ತಪ್ಪಿಂದ ಪಾಠ ಕಲ್ತು ಮುಂದೆ ಮತ್ತೆ ಆ ತರ ಆಗ್ದೇ ಇರೋ ಹಾಗೆ ನೋಡ್ಕೊಳಿ.

ಮೂಲ

4. ಇನ್ನೊಬ್ರಿಗೋಸ್ಕರ ನಿಮ್ಮತನವನ್ನ ಬಿಡ್ಬಾರ್ದು

ಸಾಮಾನ್ಯವಾಗಿ ಎಲ್ರೂ ಬೇರೆಯವರಿಂದ ಪ್ರೀತಿ, ಗೌರವ ಸಿಗ್ಬೇಕು ಅಂತ ಆಸೆ ಪಡ್ತಾರೆ. ಅದಕ್ಕೆ ನನ್ ಬಗ್ಗೆ ಅವರು ಏನನ್ಕೋತಾರೋ? ನನ್ ಬಗ್ಗೆ ಏನು ಅನ್ಕೋಳಲ್ವೋ? ಅಂತ ಪ್ರತೀ ವಿಷಯಕ್ಕೂ ತುಂಬಾ ತಲೆ ಕೆಡಿಸ್ಕೊತೀವಿ. ನಿಜ ಏನು ಅಂದ್ರೆ, ಎಲ್ಲಾ ಜನರೂ ಒಂದೇ ತರ ಇರಲ್ಲ. ಎಲ್ರಿಗೂ ಬೇರೆ ಬೇರೆ ತರದ ವ್ಯಕ್ತಿತ್ವ ಇರುತ್ತೆ. ಕೆಲವರು ತುಂಬಾ ಮಾತಾಡಿದ್ರೆ ಕೆಲವರು ಮೌನ ಇಷ್ಟ ಪಡ್ತಾರೆ. ಕೆಲವರು ಏಕಾಂತ ಇಷ್ಟ ಪಟ್ರೆ ಇನ್ನು ಕೆಲವರು ಯಾವಾಗ್ಲೂ ಯಾರದಾದ್ರೂ ಜೊತೆ ಇರಕ್ಕೆ ಇಷ್ಟ ಪಡ್ತಾರೆ.

ಏನೇ ಆಗ್ಲಿ, ನೀವು ನಿಮ್ಮತನ ಬಿಡದೆ, ಹೇಗೆ ಇರ್ಬೇಕು ಅನ್ಕೊಂಡಿದ್ದೀರೋ ಹಾಗೇ ಇರಿ.

5. ಬಿಡುವಿದ್ದಾಗ ಸಂತೋಷ ಕೊಡೊ ಒಂದು ಕೆಲಸನಾದ್ರೂ ಮಾಡ್ಬೇಕು

ಪ್ರತಿಯೊಬ್ಬರಿಗೂ ಅವರು ತುಂಬಾ ಇಷ್ಟ ಪಡೋ ಒಂದು ಕೆಲಸ ಇದ್ದೇ ಇರುತ್ತೆ. ಸ್ವಲ್ಪ ಜನ ಪುಣ್ಯವಂತ್ರು, ಆ ಕೆಲ್ಸಾನೆ ಮಾಡ್ತಾರೆ. ಆದ್ರೆ ಹೆಚ್ಚು ಜನ ಯಾವುದೋ ಕಾರಣಕ್ಕಾಗಿ ಬೇರೆ ಯಾವ್ದೋ ಕೆಲಸ ಮಾಡ್ತಿರ್ತಾರೆ. ಈಗ ಕೆಲಸ ಬದಲಾಯಿಸೋದು ಕಷ್ಟ, ನನ್ನ ಸಂಬಳದಲ್ಲೇ ಎಲ್ಲಾ ನಡೀಬೇಕು ಅನ್ನೋ ಅಂಜಿಕೆಯಿಂದ ಅವರು ತಮ್ಮ ಇಷ್ಟದ ಕೆಲಸ ಬಿಟ್ಟು ಬೇರೇದ್ ಮಾಡ್ತಾರೆ. ಆದ್ರೆ ನೀವು ನಿಮ್ಮ ಇಷ್ಟದ ಕೆಲಸ ಮಾಡಕ್ಕೆ ಪ್ರಯತ್ನ ಮಾಡಲೇಬಾರದು ಅಂತ ಅಲ್ಲ.

ನಿಮಗೆ ತುಂಬಾ ಇಷ್ಟವಾದ, ಸಂತೋಷ ಕೊಡೊ ಕೆಲಸ ಮಾಡು ಅಂತ ಕೂಗಿ ಹೇಳ್ತ ಇದ್ರೆ, ಕಡೇ ಪಕ್ಷ ನಿಮ್ಮ ಬಿಡುವಿನ ಸಮಯದಲ್ಲಾದ್ರೂ ಮಾಡಿ .

ಮೂಲ

6. ನಕಾರಾತ್ಮಕ ಭಾವನೆಗಳನ್ನ ಆದಷ್ಟು ತಡೀಬೇಕು

ಕುಟುಂಬ, ಬಂಧು ಬಳಗ… ಹಾಗೇ ಸ್ನೇಹಿತರ ಕಡೆ ಗಮನ ಕೊಟ್ಟು ನೋಡಿ. ಇವರಲ್ಲಿ ಯಾರಾದ್ರೂ ನಿಮ್ಮಲ್ಲಿ ನಕಾರಾತ್ಮಕ ಭಾವನೆ ಬರೋಹಾಗೆ ಮಾಡ್ತಿದ್ದಾರಾ ಗಮನ್ಸಿ. ನೀವು ಕೆಲಸ ಮಾಡ್ತಿರೋ ಜಾಗದಲ್ಲಿ ನಿಮ್ಮ ಬಗ್ಗೆ ಆಗಾಗ ದೂರು ಕೊಡೋದು, ಚಾಡಿ ಹೇಳೋದು ಮಾಡಿ ನೀವು ಮಾಡೋ ಕೆಲಸ ಕಷ್ಟ ಆಗೋ ಹಾಗೆ ಮಾಡ್ತಿದ್ದಾರಾ?, ನಿಮ್ಮ ಏಳಿಗೆ ನೋಡಿ ಹೊಟ್ಟೆಕಿಚ್ಚ್ಚು ಪಡೋವ್ರು ಇಂತವರೇ. ನಿಮ್ಮಲ್ಲಿ “ನಂಗೆ ಮಾಡಕ್ಕಾಗಲ್ಲ, ಇದು ಕಷ್ಟ.. ನಾನು ಮಾಡಲ್ಲ” ಅನ್ನೋ ಭಾವನೆಗಳು ಬಾರೋ ಹಾಗೆ ಮಾಡ್ತಾರೆ. ಅಂತೋರ ಬಗ್ಗೆ ನಿಮಗೆ ಕನಿಕರ, ಸಕಾರಾತ್ಮಕ ಭಾವನೆ ಇದ್ರೂ ಅವರು ಹೇಳಿದ್ರು ಅಂತ ನಕಾರಾತ್ಮ ಭಾವನೆಗಳನ್ನ ನೀವು ಒಪ್ಕೋಬೇಕಾಗಿಲ್ಲ.

ಅಗತ್ಯ ಇದ್ರೆ ಅವರ ಜೊತೆ ನೇರವಾಗಿ ಮಾತಾಡಿ. ಅವರು ಮಾತಾಡೋದ್ರಿಂದ ನಿಮಗೆ ಕಷ್ಟ ಆಗ್ತಿದೆ ಅನ್ನೋದ್ನ ಅರ್ಥ ಆಗೋ ಹಾಗೆ ಹೇಳಿ. ಇಂತ ನಕಾರಾತ್ಮಕ ಭಾವನೆಗಳು, ಟೀಕೆ ಟಿಪ್ಪಣಿಗಳು ಬರೋದನ್ನ ತಪ್ಪಿಸಿ.

7. ಇಲ್ಲಿವರೆಗೂ ಏನ್ ಸಿಕ್ಕಿದ್ಯೋ ಅದಕ್ಕೆ ತೃಪ್ತಿ ಇರ್ಬೇಕು

ಕಷ್ಟ ಎಷ್ಟೇ ಬಂದಿದ್ರೂ, ನಿಮಗೆ ಜೀವನದಲ್ಲಿ  ನಿಮ್ಮನ್ನ ಪ್ರೀತಿಸೋ ಕುಟುಂಬ, ಊಟ ತಿಂಡಿ, ಕೆಲಸ, ಇರಕ್ಕೆ ಮನೆ… ಇದೆಲ್ಲಾ ಸಿಕ್ಕಿರೋದಕ್ಕೆ ನೀವು ಕೃತಜ್ಞರಾಗಿರ್ಲೇಬೇಕು. ಜೀವನದಲ್ಲಿ, ನಮಗೆ ಊಹೆ ಮಾಡಕ್ಕಾಗದೆ ಇರುವಷ್ಟು ಕಷ್ಟ ಪಡ್ತಿರೋ ಎಷ್ಟೋ ಜನ ಇದ್ದಾರೆ. ಆದ್ರಿಂದ ಜೀವನದಲ್ಲಿ ನಿಮಗೆ ಸಿಗದೇ ಇರೋದನ್ನ ಬಿಟ್ಟು, ನಿಮಗೆ ಸಿಕ್ಕಿರೋದನ್ನೆಲ್ಲಾ ಪಟ್ಟಿ ಮಾಡಿ. ನಿಮಗೆ ಎಷ್ಟೊಂದು ಒಳ್ಳೇದಾಗಿದೆ ಅಂತ ನೋಡಿ ಖುಷಿಯಾಗಿರಿ.

ಮೂಲ

8. ನೆನ್ನೆ ನೆನ್ನೆಗೆ, ನಾಳೆ ನಾಳೆಗೆ ಅನ್ನೋದ್ನ ಮರೀಬಾರ್ದು

ಎಲ್ಲಾ ದಿನಾನೂ ಒಂದೇ ತರ ಅಲ್ಲ, ದಿನಾಲೂ ಒಳ್ಳೇದೇ ಆಗ್ತಾ ಇರ್ಬೇಕು ಅಂತ ಏನಿಲ್ಲ. ನೆನ್ನೆ ಆಗಿದ್ದನ್ನ ಏನೂ ಬದಲಾಯಿಸಕ್ಕಾಗಲ್ಲ. ನಾಳೆ ಏನು ಬರುತ್ತೆ ಅಂತ ಊಹೆ ಮಾಡಕ್ಕಾಗಲ್ಲ, ಪ್ರತಿ ದಿನ ಹೊಸದೇನೇ. ನಾಳೆ ಏನೋ ಅದ್ಭುತವಾದುದ್ದೆ ಬರ್ಬಹುದು, ಇಲ್ವಾ ಮತ್ತೆ “ನಾಳೆ ” ಬಂದೆ ಬರುತ್ತೆ.

ನೆನ್ನೆ ನೆನ್ನೆಗೆ, ನಾಳೆ ನಾಳೆಗೆ  ಹಾಡು ಕೇಳಿದ್ದೀರಾ ಅಲ್ವ… ಹಾಗೆ ನೆನ್ನೆ, ನಾಳೆ ಅನ್ನೋ ಚಿಂತೆ ಬಿಟ್ಟು ಆರಾಮಾಗಿರಿ.

9. ನಾಳೆ ಏನಾಗುತ್ತೋ ಅನ್ನೋ ಚಿಂತೆ ಮಾಡ್ಬಾರ್ದು

ನಿಮ್ಮ ಜೀವನದ ಪ್ರತೀ ಕ್ಷಣಾನೂ ಸಂತೋಷದಿಂದ ಕಳೀರಿ. ಜೀವನ ತುಂಬಾ ಚಿಕ್ದು. ಕಷ್ಟಗಳ ಬೆಗ್ಗೆ ತಲೆ ಕೆಡಿಸ್ಕೊಳೋದು, ನಾಳೆ ಏನಾಗುತ್ತೋ ಅನ್ನೋ ಚಿಂತೆ ಮಾಡ್ತಾ ಕೂರಕ್ಕೆ ಟೈಮ್ ಇರಲ್ಲ. ನಿಮಗೆ ಎಲ್ಲಿ, ಯಾವಾಗ ಯಾರ್ ಜೊತೆ ಸಂತೋಷವಾಗಿ ಟೈಮ್ ಕಳಿಬಹುದು ಅನ್ಸುತ್ತೋ ಅವರ ಜೊತೆ ಹೋಗಿ. ಫ್ರೆಂಡ್ಸ್, ಮನೆಯವರ ಜೋತಿಲಿ ಇರೋದು, ಪ್ರವಾಸ ಹೋಗೋದು… ಯಾವುದು ಸಂತೋಷ ಕೊಡುತ್ತೋ ಅದನ್ನ ಮಾಡಿ.

ಮೂಲ

10. ಜೀವನದಲ್ಲಿ ಏನೇ ಬಂದ್ರು ಧೈರ್ಯವಾಗಿ ಎದುರಿಸ್ಬೇಕು

ಜೀವನದಲ್ಲಿ ಕಷ್ಟ ಸುಖ ಏನೇ ಬಂದ್ರು ಧೈರ್ಯವಾಗಿ ಎದುರಿಸಿ. ನಿಮ್ಮ ಮನಸ್ಸಿನ ಮೇಲೆ ನಿಮಗೆ ಹಿಡಿತ ಇರ್ಲಿ. ಸರಿಯಾಗಿ ನೋಡಿದ್ರೆ ಈ ಕಷ್ಟ ಎಲ್ಲಾ ನಿಮ್ಮ್ ತಲೆಲೇ ಹುಟ್ಕೊಂಡಿರೋದು. ಜೊತೆಗೆ ನಿಮ್ಮ ಕೆಲಸದ ಒತ್ತಡ, ಮನೇಲಿ ನಡೆದಿರೋ ಯಾವುದೊ ಘಟನೆ, ಇವುಗಳೂ ಸೇರ್ಕೊಂಡಿರ್ಬಹುದು.

ಈಗ ಏನಾಗ್ಬೇಕೋ ಅದಕ್ಕೆ ಗಮನ ಕೊಡಿ. ಜೀವನದ ಏರಿಳಿತಾನ ಯಾವಾಗ್ಲೂ ಒಂದೇ ತರ ನೋಡಿ. ಇದರ ಪರಿಣಾಮ ಏನಾಗುತ್ತೋ ಅನ್ನೋ ಚಿಂತೆ ಬೇಡ, ಮನೇಲಿದ್ದಾಗ ಆಫೀಸ್ ಕೆಲಸದ ಬಗ್ಗೆ, ಆಫೀಸಲ್ಲಿದ್ದಾಗ ಮನೆ ಕೆಲಸದ ಬಗ್ಗೆ ತಲೆ ಕೆಡಿಸ್ಕೊಬೇಡಿ.

11. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವು ಇರ್ಬೇಕು

ಕಷ್ಟ ಬಂದಾಗ ನಾವು ಧೈರ್ಯ ಕಳ್ಕೊಂಡು ನಾವು ದುರ್ಬಲರು ಅಂದ್ಕೋತೀವಿ. ಆದ್ರೆ ನಮಗೆ ಕಷ್ಟ ಎದುರಿಸೋ ಶಕ್ತಿ ಇರೋದು ಗೊತ್ತಾಗಲ್ಲ. ಏನೇ ಕಷ್ಟ ಬಂದ್ರು ವಿಶ್ವಾಸ ಕಳ್ಕೊಳ್ದೆ ಇದ್ರೆ, ನಮ್ಮ ಸಾಮರ್ಥ್ಯ ತಾನಾಗೇ ಹೆಚ್ಚಾಗುತ್ತೆ. ಕಷ್ಟ ಬಂದಾಗ ಎದುರಿಸಿ ಗೆದ್ದು ಬಂದಿರೋ ಎಷ್ಟೋ ಜನರ ಇತಿಹಾಸ ಇದೆ. ಅದನ್ನ ಒಂದ್ಸಲ ನೆನಪು ಮಾಡ್ಕೊಳಿ, ಅದ್ರಿಂದ ಸ್ಫೂರ್ತಿ ಪಡೆದು ಕಷ್ಟವನ್ನ ಧೈರ್ಯವಾಗಿ ಎದುರಿಸಿ ಕಷ್ಟದಿಂದ ಹೊರಗೆ ಬರೋ ಪ್ರಯತ್ನ ಮಾಡಿ.

ಮೂಲ

ಕಷ್ಟಗಳಿಂದ ದೂರ ಓಡಕ್ಕಾಗಲ್ಲ ಸರಿ, ಆದ್ರೆ ಧೈರ್ಯವಾಗಿ ಎದುರಿಸಿ ಕಷ್ಟಾನ ಒದ್ದು ಓಡಿಸ್ಬೋದು ಅಲ್ವಾ?