https://cdn.shutterstock.com/shutterstock/videos/2991304/thumb/1.jpg

ನಾವು ಕೆಲವು ಸಲ ಅವಶ್ಯಕತೆನೇ ಇಲ್ದೆ, ಕೈಯ್ಯಾರೆ ನೋವು ತಂದ್ಕೊತಿವಿ. ಅದ್ರಲ್ಲಿ ಒಂದ್ ವಿಷ್ಯ, ಇನ್ನೊಬ್ರಿಂದ ಅಗತ್ಯಕ್ಕೂ ಮೀರಿದ್ ನಿರೀಕ್ಷೆ ಇಟ್ಕೊಳೊದು. ಮತ್ತೆ ಹೆಜ್ಜೆ ಹೆಜ್ಜೆನೂ ಅವ್ರನ್ನ ಗಮನಿಸ್ತಿರೋದು. ನಿಜ, ಸಂಬಂಧದಲ್ಲಿ ಮಿನಿಮಮ್ ವಿಷ್ಯಗಳ್ನ ನಿರೀಕ್ಷೆ ಮಾಡೋದ್ರಲ್ಲಿ ಯಾವ ತಪ್ಪೂ ಇಲ್ಲ. ಉದಾಹರಣೆಗೆ ಪರಸ್ಪರ ಗೌರವ ಕೊಡೋದು ಹೀಗೆ ಇನ್ನೂ ಕೆಲವು. ಆದ್ರೆ ಅದಕ್ಕೂ ಮೀರಿದ್ ನಿರೀಕ್ಷೆ ಮಾಡಿದ್ರೆ, ನಿರಾಸೆ ಆಗೋದು ಗ್ಯಾರೆಂಟಿ.

ನಮ್ ಸುತ್ತಾ ಇರೋ ಜನರಲ್ಲಿ, ಒಬ್ಬೊಬ್ರೂ ತಮ್ ಜೀವನದ್ ಬೇರೆ ಬೇರೆ ಹಂತದಲ್ಲಿರ್ತಾರೆ. ಹಾಗಾಗಿ ಅವ್ರು ಮಾಡೋ ಕಲ್ಸ, ಆಡೋ ಮಾತು, ಇದೆಲ್ಲಾ ಅವ್ರಿರೋ ವಾತಾವರಣ, ಪರಿಸ್ಥಿತಿ ಮೇಲೆ ಡಿಪೆಂಡ್ ಆಗಿರತ್ತೆ. ಇಲ್ಲಪ್ಪ ಹಾಗ್ ಆಗ್ಬಾರ್ದು, ಸುಂದರವಾಗಿರೋ, ಖುಷಿ ಖುಷಿಯಿಂದ ಇರ್ಬೇಕು ನಮ್ ಹತ್ತಿರದೋರ್ ಜೊತೆ ಅಂತ ಆಸೆ ಪಡ್ತಿದ್ರೆ, ಮೊದ್ಲು ಕೆಳಗಿನ 10 ನಿರೀಕ್ಷೆ ಬಿಟ್ಟುಬಿಡಿ.

1. ನಿಮಗ್ ಸರಿ ಅನ್ಸಿದ್ದೇ ಅವ್ರಿಗೂ ಸರಿ ಅನ್ನಿಸಬೇಕು ಅನ್ನೋ‌ ನಿರೀಕ್ಷೆ

ಎಲ್ರಿಗೂ ಅವ್ರದ್ದೇ ಆದ ನಂಬಿಕೆ, ಧ್ಯೇಯ, ನೀತಿ, ಧೋರಣೆ ಇರತ್ತೆ. ಅವ್ರು ಬೆಳೆದ್ ಬಂದಿರೋ ಪರಿಸರ, ಸಂಸ್ಕಾರ, ಮನೆತನದ್ ನಂಬಿಕೆಗಳು ಇದಕ್ಕೆ ಕಾರಣ. ಉದಾಹರಣೆಗೆ, ಎಷ್ಟೊಂದ್ ದೇಶದಲ್ಲಿ ಕೆಲವು ಪ್ರಾಣಿಗಳ್ನ ತಿನ್ನೋದು ನಿಶಿದ್ಧ. ಅದೇ ಇನ್ನು ಕೆಲವು ಕಡೆ ಆ ಪ್ರಾಣಿಗಳೇ ಮುಖ್ಯ ಆಹಾರ. ಹೀಗಿರುವಾಗ, ಈ ಎರಡೂ ದೇಶದ್ ಜನ ವಿರುದ್ಧ ದೇಶಕ್ಕೆ ಹೋದಾಗ, ಆ ಪದ್ಧತಿನ ವಿರೋಧಿಸಕ್ಕೆ ಆಗತ್ತ? ತಪ್ಪು ಅಂತ ಹೇಳಕ್ಕಾಗತ್ತ? ಖಂಡಿತ ಇಲ್ಲ. ಅದೆಲ್ಲಾ ಅವರವರ ಸಂಸ್ಕೃತಿ, ಆಚಾರ,ವಿಚಾರಕ್ಕೆ ಬಿಟ್ಟಿದ್ದು. ಸರಿ ಯಾವ್ದು, ತಪ್ಪು ಯಾವ್ದು ಅನ್ನಕ್ಕೆ ಬೇರೆ ಬೇರೆ ಸಂದರ್ಭದಲ್ಲಿ, ಜಾಗದಲ್ಲಿ ಬೇರೆ ಬೇರೆ ಅರ್ಥ ಇದೆ. ಅದಕ್ಕೇನೆ ಈ ಇಂಗ್ಲಿಷ್ ಮಾತಿರೋದು " ಬಿ ಅ ರೋಮನ್ ಇನ್ ರೋಮ್" ಅಂತ. ಅವರ ಪದ್ಧತಿನ ಅನುಕರಿಸೋ ಅವಶ್ಯಕತೆ ಇಲ್ಲ. ಆದ್ರೆ ಅದನ್ನ ಹೀಯಾಳೀಸೋ ಅಥವ ವಿರೋಧಿಸೋ ಹಕ್ಕು ನಮಗಿರಲ್ಲ. ಅಲ್ಲೂ ನಮ್ದೇ ನಡೀಬೇಕು ಅಂದ್ರೆ ಹತಾಶೆ, ನಿರಾಸೆ ಬಿಟ್ರೆ ಇನ್ನೇನೂ ಸಿಗಲ್ಲ.

2. ಅವರು ಮಾಡೋ ಕೆಲಸ ನೂರಕ್ಕೆ ನೂರರಷ್ಟು ಸರಿಯಾಗಿರಬೇಕು ಅನ್ನೋ ನಿರೀಕ್ಷೆ

ನಿಮ್ಮೋರಲ್ಲಿ ಇರೋ ಲೋಪದೋಷಗಳ್ನೇ ಪರ್ಫೆಕ್ಟ್ ಅನ್ನೋ ದೃಷ್ಟಿಯಿಂದ ನೋಡಿ. ನಿಮ್ಗೆ ಯಾವ್ ನಿರಾಸೆನೂ ಆಗಲ್ಲ. ಎಷ್ಟೊಂದ್ ಜನ, ತಮ್ಮೋರಿಂದ ಆಗೋ ಎಡವಟ್ಟುಗಳ್ನ, ತಪ್ಪುಗಳ್ನ ಎತ್ತಿ ಆಡಿ, ಅವರ ಮನೋಸ್ಥೈರ್ಯ ಕುಗ್ಗೋಹಾಗ್ ಮಾಡ್ಬಿಡ್ತಾರೆ. ಇದು ಸಂಬಂಧ ಹಾಳ್ಮಾಡಕ್ಕೆ ಒಂದು ಮುಖ್ಯವಾದ್ ಕಾರಣ. ಅಷ್ಟೇ ಅಲ್ಲ, ಎಲ್ಲಾ ವಿಷ್ಯದಲ್ಲೂ ಪರಿಪೂರ್ಣತೆ ಇರ್ಬೇಕು, ಪರ್ಫೆಕ್ಟಾಗಿರ್ಬೇಕು ಅಂತ ನೀವು ನಿರೀಕ್ಷೆ ಮಾಡಿದ್ರೆ, ಅದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರತ್ತೆ. ಖಿನ್ನತೆ, ಮನೋರೋಗ ಮತ್ತೆ ಆತ್ಮಹತ್ಯೆ ಮಾಡ್ಕೊಳೋ ವರ್ಗೂ ಅದು ಅತಿಯಾಗ್ಬೋದು ಅಂತ ಒಂದ್ ಸ್ಟಡಿ ಹೇಳತ್ತೆ. ಅದು ಅಪಾಯಕಾರಿ ಅಲ್ವ?

ಅದಕ್ಕೇ ಹೇಳದು. ನಿಮ್ ಸುತ್ತಾ ಇರೋರು, ಅಂದ್ರೆ ನಿಮ್ ಕೆಳಗೆ ಕೆಲಸ ಮಾಡೋರೇ ಆಗಿರ್ಬೋದು, ಮಕ್ಕಳೇ ಆಗಿರ್ಬೋದು, ಅವ್ರಿಗೆ ತಪ್ಪು ಮಾಡಕ್ಕೆ ಬಿಡಿ. ಜಗತ್ತಲ್ಲಿ ಎಲ್ಲಾ ಸರಿಯಾಗ್ ನಡ್ಕೊಂಡ್ ಹೋಗ್ಬಿಟ್ರೆ ಎಷ್ಟು ಬೋರಿಂಗಾಗಿರತ್ತೆ ಅಲ್ವ. ಆಗ ನಮ್ ಸುತ್ತಾ ಮುತ್ತಾ ಜನ ಅಲ್ಲ, ಪರ್ಫೆಕ್ಟಾಗಿ ಕೆಲ್ಸ ಮಾಡೋ ರೋಬೋಗಳು ಇರತ್ವೆ. ಆ ಥರದ್ ವಾತಾವರಣ ಯಾರಿಗೂ ಇಷ್ಟ ಆಗಲ್ಲ.

ಮೂಲ

3. ನೀವ್ ಹೇಳೋ ಎಲ್ಲಾ ಮಾತಿಗೂ ಅವರು ಹೌದು ಅನ್ನಬೇಕು ಅನ್ನೋ ನಿರೀಕ್ಷೆ

ಚಡ್ಡಿ ದೋಸ್ತ್ಗಳೇ ಎಷ್ಟೊಂದ್ ಸಲ ನಾವ್ ಹೇಳೋ ಮಾತಿಗೆ, ನಮ್ ಅಭಿಪ್ರಾಯಕ್ಕೆ ಒಪ್ಪಲ್ಲ, ಚಾಲೆಂಜ್ ಮಾಡಿ ಮಾತಾಡ್ತರೆ ಅಥವ ತಮ್ಮದೇ ಆದ ಬೇರೆ ಅಭಿಪ್ರಾಯ ಹೇಳ್ತರೆ. ಅದಕ್ಕೆಲ್ಲಾ ಬೇಜಾರ್ ಮಾಡ್ಕೊಬಾರ್ದು. ಮಾಡ್ಕೊಂಡ್ರೆ, ಆರ್ಗ್ಯುಮೆಂಟಲ್ಲಿ ಏನೂ ಮಜ ಇರಲ್ಲ ಕಣ್ರಿ. ಇದನ್ನ ಮನಸ್ಸಿಗೆ ನೋವ್ ಮಾಡೊ ವಿಷ್ಯ ಅನ್ಕೊಳೋ ಬದ್ಲು, ಉಪಯೋಗಕ್ಕೆ ಬರೋ ಕೆಲ್ಸ ಅಂತ ಯಾಕ್ ಅನ್ಕೊಬಾರ್ದು? ಭಿನ್ನ ಭಿನ್ನ ಅಭಿಪ್ರಾಯ, ಅಲೋಚನೆಗಳೀದ್ರೆ ತಾನೇ ಭೂಮಿ ಮೇಲೆ ನಿರಂತರವಾಗಿ ಅನ್ವೇಷಣೆಗಳು, ಆವಿಷ್ಕಾರಗಳು ನಡಿಯಕ್ಕೆ ಸಾಧ್ಯ.

ಒಂದ್ ಕ್ಷಣ ಯೋಚ್ನೆ ಮಾಡಿ. ನಾವೆಲ್ಲಾ, ಫಾಸಿಲ್ ಇಂಧನನ ಉಪಯೋಗ್ಸದು ಮುಂದುವರ್ಸಣ, ಭವಿಷ್ಯದಲ್ಲಿ ಏನಾಗತ್ತೋ ಆಮೇಲ್ ನೋಡ್ಕೊಳಣ ಅಂತ ಒಬ್ರು ತೊಗೊಂಡಿದ್ ನಿರ್ಧಾರನ ಯಾರೂ ಪ್ರಶ್ನೆ ಮಾಡ್ದೇ ಒಪ್ಕೊಂಡಿದ್ರೆ, ಹೇಗಿರ್ತಿತ್ತು ಪ್ರಪಂಚ ಅಂತ. ಆಗ ಇವತ್ತಿನ್ ದಿನ ಇರೋ ಸೌರ ವಿದ್ಯುತ್, ವಿದ್ಯುತ್ ಚಾಲಿತ ಕಾರ್ ಇವಲ್ಲಾ ಆವಿಷ್ಕಾರ ಆಗ್ತನೂ ಇರ್ಲಿಲ್ಲ, ಇಂಧನ ಉಳ್ಸೋ ಪ್ರಯತ್ನನೂ ನಾವ್ ಮಾಡ್ತಿರ್ಲಿಲ್ಲ.

4. ನಿಮ್ಮ ಮನಸ್ಸನ್ನ ಅವರು ಅರ್ಥ ಮಾಡ್ಕೋಬೇಕು ಅನ್ನೋ ನಿರೀಕ್ಷೆ

ಕೆಲವರಿಗೆ, ಒಂದ್ ಒಳ ಮಾತು ಅಂತ ಇರತ್ತೆ. ಅವ್ರು ಸುಲಭವಾಗಿ, ತಮ್ ಎದುರ್ಗಿರೋರ್ ಮನಸ್ಸಲ್ಲಿ ಏನ್ ಓಡ್ತಿದೆ ಅಂತ ಕಂಡು ಹಿಡಿದ್ಬಿಡ್ತರೆ. ಹೀಗಾದ್ರೆ, ಮುಂದೇನಾಗತ್ತೆ ಅಂತ ಊಹೆ ಮಾಡ್ತರೆ. ಆದ್ರೆ ಇನ್ನು ಕೆಲವ್ರಿಗೆ ಅದು ಆಗಲ್ಲ. ಆಗ್ಬೇಕು ಅಂತನೂ ಏನಿಲ್ಲ ಅಲ್ವ. ನಿಮ್ಗೆ ಆ ಕಲೆ ಗೊತ್ತಿದೆ, ಎದುರ್ಗಿರೋರ್ಗೆ ಯಾವ್ ಥರ ಫೀಲ್ ಆಗತ್ತೆ, ಏನ್ ಮಾತಾಡಿದ್ರೆ ಸರಿ, ಏನು ತಪ್ಪು ಅಂತ ಅಂದಾಜು ಮಾಡಕ್ಕೆ ಬರತ್ತೆ ಅಂತ ಎಲ್ರೂ ಹಾಗೇ ಇರಕ್ಕೆ ಆಗಲ್ವಲ್ಲ. ಎಲ್ಲಾ ಅವರವರ ಶಕ್ತಿಗೆ ಬಿಟ್ಟಿದ್ದು. ಇನ್ನು ಅಂಥವ್ರಿಂದ ಯಾವ್ ಎಡವಟ್ಟೂ ಆಗ್ಬಾರ್ದು ಅನ್ನೋದಾದ್ರೆ, ನಿಮ್ ಮನಸ್ಸಲ್ಲಿರೋದ್ನ ಬಾಯಿ ಬಿಟ್ಟು ಹೇಳಿ. ಇಲ್ಲ ಅಂದ್ರೆ ಊಹೆ ಮಾಡಕ್ಕೋಗಿ, ಉಲ್ಟಾ ಹೊಡಿಯತ್ತೆ. ಇಷ್ಟಕ್ಕೂ ಪ್ರಾಮಾಣಿಕವಾಗಿ, ಓಪನ್ನಾಗಿ ನಿಮ್ ಭಾವನೆಗಳ್ನ ಹಂಚ್ಕೊಳದು, ಸಂಬಂಧ ಗಟ್ಟಿಯಾಗಕ್ಕೆ ಮತ್ತೆ ಎಲ್ಲಾ ದೃಷ್ಟಿಯಿಂದನೂ ಒಳ್ಳೆದು.

ಮೂಲ

5. ನೀವ್ ಸೋತಾಗೆಲ್ಲಾ ಅವರು ನಿಮ್ಮನ್ನ ಮೇಲೆತ್ಬೇಕು ಅನ್ನೋ ನಿರೀಕ್ಷೆ

ಒಪ್ಕೊಳಣ. ಒಳ್ಳೆ ಫ್ರೆಂಡ್ಸ್ ಮತ್ತೆ ಕುಟುಂಬದೋರು, ನಾವ್ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರ್ತರೆ. ಆದ್ರೆ ಪ್ರತಿಸಲ ನೀವ್ ಸೋತಾಗ್ಲೂ ಹೆಗಲ್ ಕೊಡಕ್ಕೆ ಅವ್ರೂ ಬಿಡುವಾಗಿರ್ಬೇಕಲ್ಲ. ಎಲ್ರಿಗೂ ಒಂದೊಂದ್ ಹಂತದಲ್ಲಿ ಒಂದೊಂದ್ ಪ್ರಯಾರಿಟಿ ಇರತ್ತೆ. ಯಾವಾಗ್ಲೂ ನಿಮ್ಮನ್ನ ಉದ್ಧಾರ ಮಾಡಕ್ಕೆ ತಯಾರಾಗಿರಕ್ಕಾಗಲ್ಲ ಅಲ್ವ? ಅವ್ರಿಗೂ ಇಪ್ಪತ್ತೆಂಟು ತೊಂದ್ರೆ ತಾಪತ್ರಯಗಳಿರತ್ತೆ ಹಾಗಾಗಿ ಎರಡೆರಡು ಜವಾಬ್ದಾರಿನ ಹೊತ್ಕೊಳಕ್ಕೆ ಆಗಲ್ಲ ಕಣ್ರಿ. ಅವ್ರ ಕಷ್ಟನೂ ಅರ್ಥ ಮಾಡ್ಕೊಬೇಕು. ಬರಿ ನಮ್ ಕಷ್ಟಕ್ಕೆ ಆಗ್ಲಿಲ್ಲ ಅಂತ ಅವ್ರನ್ನ ದೂರ್ಬಾರ್ದು. ಸಹಾಯ ಮಾಡ್ಬೇಕು ಅಂತ ಅವ್ರಿಗೂ ಮನಸ್ಸಲ್ಲಿ ಇರ್ಬೊದು ಆದ್ರೆ ಪರಿಸ್ಥಿತಿ ಕೈಮೀರಿರತ್ತೆ. ಹಾಗಂತ, ಅವ್ರಿಗೆ ನಿಮ್ ಬಗ್ಗೆ ಕಾಳಜಿ ಇಲ್ಲ ಅಂತಲ್ಲ. ಅವ್ರ ಸಂದರ್ಭನ ಅರ್ಥ ಮಾಡ್ಕೊಂಡು, ನೀವೇ ಗಟ್ಟಿಗರಾಗಿ ಹೋರಾಡಿ ಅಂತ.

6. ಎಲ್ರೂ ನಿಮ್ಮನ್ನ ಅರ್ಥ ಮಾಡ್ಕೊಬೇಕು ಅನ್ನೋ ನಿರೀಕ್ಷೆ

ಇನ್ನೊಬ್ರು, ನಿಮ್ಮನ್ನ, ನಿಮ್ ದಾರಿನ ಅರ್ಥ ಮಾಡ್ಕೊಬೇಕು ಅನ್ನೋ ನಿರೀಕ್ಷೆನೇ ಬಾಲಿಶವಾಗಿದೆ. ಇಷ್ಟಕ್ಕೂ ಇದು ನಿಮ್ ಜೀವನ. ನೀವ್ ನಡಿಯೋ ದಾರಿ ನಿಮ್ಗೆ ಚೆನ್ನಾಗ್ ಗೊತ್ತಿಬೇಕೋ ಇಲ್ಲಾ ಅವ್ರಿಗೋ? ನಿಮ್ಮ ಬಾಗೆ ನೀವ್ ಸರಿಯಾಗ್ ಅರ್ಥ ಮಾಡ್ಕೊಂಡ್ರೆ ಸಾಕು. ಇನ್ಯಾರೋ ನಮ್ಗೆ ಆಸರೆ ಆಗ್ಬೇಕು ಅಂತ ಅನ್ಸಲ್ಲ. ಆಗ ನೋಡಿ. ಇನ್ನೊಬ್ರು ನಿಮ್ಮನ್ನ ಅರ್ಥ ಮಾಡ್ಕೊಳ್ಳಿಲ್ಲ ಅನ್ನೊ ನೋವು ಕಾಡದೇ ಇಲ್ಲ.

ಮೂಲ

7. ನೀವು ಅವ್ರನ್ನ ನೋಡ್ಕೊಳೋ ಹಾಗೇ ಅವ್ರೂ ನಿಮ್ಮನ್ನ ನೋಡ್ಕೊಬೇಕು ಅನ್ನೋ ನಿರೀಕ್ಷೆ

ನೀವಿಷ್ಟ ಪಟ್ಟೋರ್ನ ನೀವು, ಚೆನ್ನಾಗ್ ಟ್ರೀಟ್ ಮಾಡ್ಬೋದು. ಆದ್ರೆ ಅವ್ರೂ ನಿಮ್ಮನ್ನ ಹಾಗೇ ನೋಡ್ಕೊಬೇಕು ಅಂತ ಏನಿಲ್ಲ. ನೀವು ಅವ್ರನ್ನ ಹಚ್ಚ್ಕೊಂಡಷ್ಟು ಅವ್ರು ನಿಮ್ಮನ್ನ ಹಚ್ಚ್ಕೊಬೇಕು, ಪ್ರಾಮುಖ್ಯತೆ ಕೊಡ್ಬೇಕು ಅಂತ ಎಕ್ಸ್ಪೆಕ್ಟ್ ಮಾಡದು ಸರಿಯಲ್ಲ. ಇದೆಲ್ಲ ಮನಸ್ಸಿನಂದ ಬರ್ಬೇಕಾಗಿರೋ ಭಾವನೆಗಳು. ನಾನ್ ನೀನ್ನನ್ನ ನೋಡೊ ಹಾಗೆ ನೀನೂ ನನ್ನ ನೋಡು ಅಂದ್ರೆ ಅದು ಬರಿ ವ್ಯವಹಾರ ಆಗತ್ತೆ ಹೊರತು. ಮನಸ್ಪೂರ್ತಿಯಾಗಿ ಬರಲ್ಲ. ಇದಕ್ಕೆಲ್ಲಾ ರೂಲ್ಸೂ ಮಾಡಕ್ಕಾಗಲ್ಲ. ಒಂದ್ ವೇಳೆ, ನೀವ್ ಮರ್ಯಾದೆ ಕೊಟ್ರೂ, ಅವ್ರು ನಿಮಗೆ ಕೊಡ್ಬೇಕಾಗಿರೋ ಸ್ಥಾನ ಮಾನ ಕೊಟ್ಟಿಲ್ಲ ಅಂದ್ರೆ, ಅದ್ರಲ್ಲಿ ಯಾರ್ ತಪ್ಪೂ ಇಲ್ಲ. ಆದ್ರೂ ಬೇಜಾರಾಗತ್ತೆ. ನಿರೀಕ್ಷೆ ಇರ್ಬಾರ್ದು ಅಂತ ಇದಕ್ಕೇ ಹೇಳೋದು. ಇನ್ನು ಕೆಲವರ ಸ್ವಭಾವನೇ ಹಾಗಿರತ್ತೆ. ತಮಗೆ ಎಲ್ಲಾ ಕಡೆ ಗೌರವ ಸಿಗ್ಬೇಕು ಅಂತ ಅಪೇಕ್ಷೆ ಪಡ್ತರೆ ಆದ್ರೆ ಅವ್ರಿಂದ ಅದನ್ನ ನಿರೀಕ್ಷೆ ಮಾಡೋವಷ್ಟು ಸಂಸ್ಕಾರ ಅವ್ರಲ್ಲಿ ಇರಲ್ಲ. ಆಗ ಅವ್ರ ಬಗ್ಗೆ ಅನುಕಂಪ ತೋರ್ಸಿ ಸುಮ್ನಾಗೋದು ವಾಸಿ.

8. ಜನ ಮೊದಲಿದ್ದಂಗೇ ಈಗ್ಲೂ ಇರ್ಬೇಕು ಅನ್ನೋ ನಿರೀಕ್ಷೆ

ಕಾಲ ಕಳೀತಿದ್ದ ಹಾಗೆ ಜನರ ಸ್ವಭಾವ್ದಲ್ಲಿ, ನಡವಳಿಕೆನಲ್ಲಿ ಬದಲಾವಣೆಯಾಗೋದು ಸಹಜ. ಎಷ್ಟೋ ವರ್ಷಗಳಾದ್ಮೇಲೆ ನಿಮ್ ಫ್ರೆಂಡನ್ನ ನೋಡುವಾಗ, ಅವ್ರಲ್ಲಿ ಆಗಿರೋ ಬದಲಾವಣೆಗಳ್ನ ಒಪ್ಕೊಳೀ. ಅಯ್ಯೋ ಮೊದ್ಲು ನೀನು ಹೀಗಿರ್ಲಿಲ್ಲ, ಹೀಗ್ ಮಾತಾಡ್ತಿರ್ಲಿಲ್ಲ, ಒಟ್ನಲ್ಲಿ ಆ ಹಳೇ ಗೆಳೆಯ ಅಲ್ವೇ ಅಲ್ಲ ಅಂತ ಅಂದ್ರೆ, ಅದಕ್ಕೆ ಯಾರೂ ಹೊಣೆಯಲ್ಲ. ಜೀವ್ನ ಒಬ್ಬೊಬ್ರಿಗೆ ಒಂದೊಂದ್ ಥರದ್ ಪಾಠ ಕಲ್ಸತ್ತೆ. ಅದ್ರಿಂದ ಅವ್ರು ಪಾಠ ಕಲ್ತು ತುಂಬಾ ದೂರ ಬಂದಿರ್ತರೆ. ಹಾಗಾಗಿ, ಅವ್ರು ಸಿಕ್ಕಿದಾಗ ಜೊತೆಲಿ ಚೆನ್ನಾಗಿ ಕಾಲ ಕಳೀರಿ. ಅದು ಬಿಟ್ಟು ಅವ್ರನ್ನ ಜಡ್ಜ್ ಮಾಡಕ್ಕೆ ಹೋಗ್ಬೇಡಿ. ಅವ್ರು ಇವತ್ತಿನ್ ದಿನ ಏನೇ ಆಗಿದ್ರೂ ಅದರ ಹಿಂದೆ ಕಾರಣ ಇರತ್ತೆ. ಅದನ್ನ ಮನಸ್ಪೂರ್ತಿಯಾಗಿ ಒಪ್ಕೊಳಿ.

ಮೂಲ

9. ಎಲ್ರೂ ನಿಮ್ ಲೆವೆಲ್ಗೇ ಜೀವ್ನ ನಡುಸ್ಬೇಕು ಅನ್ನೋ ನಿರೀಕ್ಷೆ

ಜೀವ್ನ ಎಲ್ಲಾರ್ ಜೀವನ್ದಲ್ಲೂ ಗೂಗ್ಲಿ ಹಾಕ್ತಿರತ್ತೆ. ಒಬ್ಬೊಬ್ರಿಗೆ ಒಂದೊಂದ್ ಟೈಮಲ್ಲಿ, ವಿಷ್ಯದಲ್ಲಿ. ಅದರ ಮಧ್ಯ ಒದ್ದಾಡ್ಕೊಂಡು ಮನುಷ್ಯ ಜೀವ್ನ ರೂಪುಸ್ಕೊಬೇಕು. ಅಂಥವರ ಬಗ್ಗೆ ಕನಿಕರ ಜೊತೆಗೆ ಹೋರಾಟ ಮಾಡೋ ಮನೋಭಾವದೋರು ನನ್ ಪರಿಚಯಸ್ತರು ಅನ್ನೋ ಹೆಮ್ಮೆ ಇರ್ಬೇಕು. ಯಾಕಂದ್ರೆ ನೀವ್ ಮಾತ್ರ ಅಲ್ಲ. ಎಲ್ರೂ ಒಳ್ಳೆ ಜೀವ್ನ ಬೇಕು ಅನ್ನೋ ಕಾರಣಕ್ಕೆ ತಮ್ ಶಕ್ತಿ ಮೀರಿ ದುಡೀತಿರ್ತರೆ. ನಿಮ್ಮಿಂದಾರೆ ಅವ್ರಿಗೆ ಸಹಾಯ ಮಾಡಿ, ಲೆವೆಲ್ಗಿಂತ ಸಂಬಂಧ ದೊಡ್ಡದು ಅಂತ ತೋರ್ಸಿ. ಇಲ್ವಾ, ಹೇಗೋ ಹೋರಾಟ ಮಾಡ್ಕೊಂಡ್ ಬದುಕ್ತಿದಾನೆ, ಒಳ್ಳೆದಾಗ್ಲಿ ಅಂತ ಸುಮ್ನಿದ್ಬಿಡಿ. ಅದು ಬಿಟ್ಟು ಅವ್ರನ್ನ ಹೀಯಾಳ್ಸೋದು, ತಡೀಯೋದು, ನನ್ ಲೆವೆಲ್ಗಿಲ್ಲ ಅಂತ ಕೀಳಾಗಿ ಕಾಣೋದು ಮಾಡಿದ್ರೆ, ನಿಮ್ ವ್ಯಕ್ತಿತ್ವಕ್ಕೇ ಮಸಿ ಅಂಟೋದು.

10. ನಿಮ್ನ ನೀವೇ ಇಷ್ಟ ಪಡದೆ ಹೋದರೂ ಅವರು ಇಷ್ಟ ಪಡಬೇಕು ಅನ್ನೋ ನಿರೀಕ್ಷೆ

ಒಂದ್ ಸಂಬಂಧ ಹುಟ್ಟೋದು, ಕೊನೆಯಾಗೋದು ನಿಮ್ಮಲ್ಲೇ. ಹೀಗೆ ನಿಮ್ಮಲ್ಲಿ ಹುಟ್ಟೋ ಪ್ರೀತಿ, ತಿರುಗಿ ನಿಮ್ಮ ಹತ್ರನೇ ಬರ್ಬೇಕು ಅಂದ್ರೆ , ಮೊದ್ಲು ನಿಮ್ಮನ್ನ ನೀವು ಪ್ರೀತಿಸ್ಕೋಳಿ. ಇನ್ನೊಬ್ರು ನಿಮ್ಮನ್ನ ಪ್ರೀತಿಸ್ಬೇಕು ಅನ್ನೋ ಕಾರಣಕ್ಕೆ ಅವರ ಅನುಕಂಪ ಗಿಟ್ಟುಸ್ಕೊಳಕ್ಕೆ, ನಿಮ್ಮನ್ನ ನೀವೇ ನೆಗ್ಲೆಕ್ಟ್ ಮಾಡದು, ದ್ವೇಷ ಮಾಡದು, ಇದೆಲ್ಲಾ ಮಾಡಿದ್ರೆ, ಆ ಸಂಬಂಧದಲ್ಲಿ ಪ್ರಾಮಾಣಿಕತೆ ಇರಲ್ಲ. ಬದ್ಲಿಗೆ, ಬೇಸರ ಹುಟ್ಟಿಸೋ, ಅಪ್ರಾಮಾಣಿಕವಾಗಿರತ್ತೆ. ಯಾವ್ ಪುರುಷಾರ್ಥಕ್ಕೆ ಹೇಳಿ? ಅದೆಲ್ಲಾ ಬಿಟ್ಟು, ನಿಮ್ಮನ್ನ ನೀವು ಬೇರೆ ಎಲ್ಲಕ್ಕಿಂತ, ಎಲ್ರಿಗಿಂತ ಹೆಚ್ಚಾಗಿ ಪ್ರೀತ್ಸಿ. ಆಗ್ ನೋಡಿ, ಹೇಗೆ ಒಳ್ಳೆ ಸಂಬಂಧಗಳು, ಗೆಳೆತನ ನಿಮ್ಮನ್ನ ಹುಡುಕ್ಕೊಂಡ್ ಬರತ್ತೆ ಅಂತ.

ಮೂಲ