“ತೆಂಗು ಗರಿಗಳ ಮೇಲೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳೂ ಹಾಲ ಕರೆಯುವಂದು” ಎಂದು ಬಣ್ಣಿಸೋ ಮೋಹಕ ಪದ್ಯದ ಚೆಲುವ ಚಂದಿರನ ಮೇಲೆ ವಿಜ್ಞಾನ ಬೀರುವ ನೋಟ ಅದೆಷ್ಟು ವಿಲಕ್ಷಣ ಅಂತ ಗೊತ್ಮಾಡ್ಕೋಬೇಕಾದ್ರೆ ಇದನ್ನೊಮ್ಮೆ ನೋಡಿ.

1. ಚಂದ್ರನ್ಮೇಲಿಂದ ಭೂಮಿ ಹೇಗ್ ಕಾಣ್ಸತ್ತೆ?

ಚಂದ್ರನ್ಮೇಲೆನಾದ್ರೂ ನಾವಿದ್ರೆ ನಮ್ಗೆ ಭೂಮಿ ಹುಟ್ಟೋದಾಗ್ಲೀ, ಮುಳ್ಗೋದಾಗ್ಲೀ ಇರೋದಿಲ್ಲ. ಭೂಮಿ ಇದ್ದಲ್ಲೇ ಇದ್ದು ತನ್ನ ಪೂರ್ಣಬಿಂಬ ಹಾಗು ಬಿಂಬರಹಿತ ನಡುವಿನ ಬಿಂಬಾವಸ್ಥೆಗಳ್ನ ತೋರಿಸ್ತಾ ಇರತ್ತೆ. ಆಕಾಶ್ದ ಬೇರೆ ಭಾಗ್ದಲ್ಲಿ ಭೂಮಿನ ನೋಡ್ಬೇಕು ಅಂತ ಅನ್ಸಿದ್ರೆ, ಚಂದ್ರನ ಬೇರೆ ಭಾಗಕ್ಕೆ ಹೋಗ್ದೇ ವಿಧೀನೇ ಇಲ್ಲ. ಆದ್ರಿಂದ ಚಂದ್ರನ್ಮೇಲೆ ಒಂದೇ ಕಡೆ ನಿಂತ್ಕೊಂಡು ಭೂಮಿ ಹುಟ್ಟೋದು, ಮುಳ್ಗೋದು ನೋಡ್ದೆ ಅಂದ್ರೆ ಅವ್ರು ಬುರಡೆ ಬಿಡ್ತಿದ್ದಾರೆ ಅನ್ನೋದಂತೂ ಖಾತ್ರಿ.

2. ಚಂದ್ರ ನಮ್ಗೆ ಯಾಕ್ ಒಂದೇ ಮುಖ ತೋರಿಸ್ತಾನೆ?

ಚಂದ್ರ ಭೂಮೀನ ಒಂದ್ಸಾರಿ ಸುತ್ತಿ ಬರೋ ಹೊತ್ತಿಗೆ ತನ್ನ ಸುತ್ತ ತಾನು ಒಂದ್ಸಾರಿ ಮಾತ್ರ ಸುತ್ತಿರ್ತಾನೆ. ಹೀಗೆ ಸುತ್ಬೇಕು ಅಂದ್ರೆ ಅವ್ನು ತನ್ನ ಮುಖನ್ನ ನಮ್ಕಡೇಗೆ ಇಟ್ಕೊಂಡು ತಿರುಗ್ಬೇಕು. ಇದ್ರಿಂದ ನಮ್ಗೆ ಚಂದ್ರನ ಬೆನ್ನು ಭೂಮಿಯಿಂದ ಕಾಣ್ಸೋದೇ ಇಲ್ಲ. ಈ ಕಾರಣಕ್ಕೆ ನಾವು ಕಾಣೋ ಚಂದ್ರನ ಮುಖದಲ್ಲಿರೋ ಕಲೆಗಳು ಬದ್ಲಾಗೋದೇ ಇಲ್ಲ. ಬಹಳ ಹಿಂದೆ ಚಂದ್ರ ಇನ್ನೂ ವೇಗವಾಗಿ ತನ್ಸುತ್ತ ಸುತ್ತುತ್ತಾ ಇದ್ದಿರಬೇಕು. ಆದ್ರೆ ಭೂಮಿಯ ಗುರುತ್ವಾಕರ್ಷಣವು ಈ ಭ್ರಮಣೆಯ ಕಾಲವನ್ನು ಜಾಸ್ತಿ ಮಾಡ್ತಾ ಬಂದು ಅದೀಗ ಪರಿಭ್ರಮಣೆಯ ಕಾಲಕ್ಕೆ ಸಮನಾಗಿದೆ. ನಮ್ಮ ಸೌರವ್ಯೂಹ್ದಲ್ಲಿ ಈ ರೀತಿ ವರ್ತಿಸೋ ಗ್ರಹ, ಉಪಗ್ರಹಗಳು ಸುಮಾರಿವೆ.

3. ಸೂರ್ಯಗ್ರಹಣನ್ನ ಚಂದ್ರನ್ಮೇಲಿಂದ ನೋಡಿದ್ರೆ ಹೇಗ್ಕಾಣ್ಸತ್ತೆ?

ಚಂದ್ರ ಭೂಮಿಗಿಂತ ಸುಮಾರು ನಾಲ್ಕು ಪಟ್ಟು ಸಣ್ಣದಾಗಿರೋದ್ರಿಂದ ನಮ್ಗೆ ಸೂರ್ಯಗ್ರಹಣ ಆಗೋವಾಗ ಚಂದ್ರನ ಮೇಲೆ ರಾತ್ರಿ ಆಗಿರೋ ಭಾಗ್ದಿಂದ ನಿಂತು ನೋಡಿದ್ರೆ ನೀಲೀ ಭೂಮಿ ಮೇಲೆ ಗಂಟೆಗೆ ಸುಮಾರು ಎರಡೂವರೆ ಸಾವಿರ ಕಿ. ಮೀ. ವೇಗ್ದಲ್ಲಿ ಚಂದ್ರನ್ನೆಳ್ಳು ಕಪ್ಪು ಬಿಂದು ಥರಾ ಓಡೋದನ್ನ ನೋಡ್ಬೋದು.

4. ಚಂದಿರ ಬುವೀನ ಸುತ್ತಾನೋ, ಇಲ್ಲ ರವೀನ ಸುತ್ತಾನೋ?

ನಾವೇನಾದ್ರೂ ಸೂರ್ಯನ್ಮೇಲಿಂದ ಚಂದ್ರನ್ನೋಡಿದ್ರೆ ಅವ್ನ ಪಥ ಜಹಂಗೀರ್ ಸ್ವೀಟ್ ಥರಾ ಇರತ್ತೆ ಅಂತ ಅನ್ಕೊಂಡ್ರೆ ತಪ್ಪಾಗತ್ತೆ. ಇದನ್ನ ಹೀಗೆ ಹೇಳ್ಬೋದು.  ಒಂದು ವರ್ತುಲಾಕಾರದ ರಸ್ತೇಲಿ ಭೂಮಿ ಅನ್ನೋ ಬೈಕ್ ಒಂದೇ ಜವದಲ್ಲಿ ಸುತ್ತಿ ಬರ್ತಿದೆ ಅಂತಿಟ್ಕೊಳ್ಳೋಣ. ಪಕ್ಕದಲ್ಲೇ ಚಂದ್ರ ಅನ್ನೋ ಇನ್ನೊಂದು ಬೈಕ್ ಭೂಮಿ ಹಿಂದಿಂದ ಬಂದು ಬಲ ಪಕ್ಕದಿಂದ ಜವ ಹೆಚ್ಚಿಸ್ಕೊಂಡು ಭೂಮಿನ ಹಿಂದೆ ಹಾಕಿ ಮುಂದೆ ಎಡಕ್ಕೆ ಸರಿದು ಜವ ಕಮ್ಮಿ ಮಾಡ್ಕೊಳ್ಳತ್ತೆ. ಆಗ ಒಂದೇ ಜವದಲ್ಲಿ ಓಡ್ತಾ ಇರೋ ಭೂಮಿ ಚಂದ್ರನ್ನ ಬಲದಿಂದ ಹಿಂದೆಹಾಕಿ ಮುಂದೆ ಸಾಗತ್ತೆ. ಇದೇ ಆಟನ್ನೇ ಸೂರ್ಯನಿಂದ ನಮ್ಮ ಭೂಮಿ, ಚಂದ್ರ ಆಡೋದ್ನ ನಾವು ನೋಡ್ಬೋದು.ಹುಣ್ಣಿಮೇ ದಿನ ಚಂದ್ರ ಭೂಮಿನ ಹಿಂದೆ ಹಾಕ್ತಾನೆ. ಅಮಾವಾಸ್ಯೆ ದಿನ ಭೂಮಿ ಚಂದ್ರನ್ನ ಹಿಂದೆ ಹಾಕತ್ತೆ.

5. ಚಂದ್ರನ್ಮೇಲಿಂದ ಭೂಮಿ, ಸೂರ್ಯ, ಆಕಾಶ, ನಕ್ಷತ್ರಗಳು ಹೇಗ್ ಕಾಣ್ಸತ್ತೆ?

ಭೂಮಿ ನಾವು ನೋಡೋ ಹುಣ್ಣಿಮೇ ಚಂದ್ರಗಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಾಗಿ ಕಾಣ್ಸತ್ತೆ. ಆದ್ರೆ ಅದು ಇರೋ ಜಾಗ್ದಿಂದ ಎಲ್ಲೂ ಸರಿಯಲ್ಲ. ಸೂರ್ಯ ನಾವು ನೋಡೋ ಸೂರ್ಯನ ಥರಾನೆ ಕಾಣಿಸ್ತಾನೆ, ಬದ್ಲಾವಣೆ ಇರಲ್ಲ. ಚಂದ್ರನ್ಮೇಲೆ ಗಾಳಿ ಇಲ್ದೇ ಇರೋದ್ರಿಂದ ಆಕಾಶ ಮಾತ್ರ ಬೆಳಿಗ್ಗೆ ಹೊತ್ತೂ ಕಪ್ಪಗೇ ಇರತ್ತೆ. ಅಂದ್ರೆ ಬೆಳಗ್ಗೆ ಹೊತ್ತೂ ನಕ್ಷತ್ರಗಳು ಕಾಣಿಸ್ತವೆ. ಅದೇ ಕಾರಣಕ್ಕೆ ಈ ನಕ್ಷತ್ರಗಳು ಕಣ್ಣು ಚಿವುಟ್ಡೇ ನಮ್ಮನ್ನೆ ಎವೆ ಇಕ್ದೇ ನೋಡೋ ಥರಾ ಇರತ್ತೆ.

6. ಚಂದ್ರಗ್ರಹಣದ ಸಮಯದಲ್ಲಿ ಚಂದ್ರನಿಂದ ಭೂಮಿ ಕಾಣ್ಸೋದು ಹೇಗೆ?

ಭೂಮಿ ಮೇಲಿರೋ ನಮ್ಗೆ ಪೂರ್ಣ ಚಂದ್ರಗ್ರಹಣ ಆಗೋವಾಗ ಚಂದ್ರನ್ಮೇಲಿಂದ ಏನಾರೂ ಹಗಲಿರೋ ಭಾಗ್ದಲ್ಲಿ ನಿಂತು ನೋಡ್ತು ಅಂದ್ರೆ ಕಪ್ಗಿರೋ ಭೂಮೀನ ಕೆಂಪು ಪ್ರಭಾವಳಿ ಸುತ್ತುವರಿದಿರೋದ್ನ ನೋಡ್ಬೋದು (ಭೂಮಿ ಮೇಲೇನಾದ್ರೂ ಗಾಳಿ ಇಲ್ದಿದ್ರೆ ಈ ಪ್ರಭಾವಳಿ ಕಾಣಿಸ್ತಿರ್ಲಿಲ್ಲ). ಅಂದ್ರೆ ಅಲ್ಲಿ ಅವತ್ತು ಪೂರ್ಣ ಸೂರ್ಯಗ್ರಹಣ ಆಗಿರತ್ತೆ! ಆದ್ರೆ ಒಂದು ವ್ಯತ್ಯಾಸ. ನಮ್ಗೆ ಭೂಮಿ ಮೇಲೆ ಪೂರ್ಣ ಸೂರ್ಯಗ್ರಹಣ ಆದಾಗ ಹಗಲಲ್ಲಿ ಇರೋ ಎಲ್ರಿಗೂ ಅದು ಕಾಣೋದೇ ಇಲ್ಲ. ಆದ್ರೆ ಈ ಚಂದ್ರವಾಸಿಗಳು ಪುಣ್ಯವಂತ್ರು.ಚಂದ್ರನ್ ಮೇಲೆ ಹಗಲಲ್ಲಿ ಇರೋ ಎಲ್ರಿಗೂ ಈ ನೋಟ ಲಭ್ಯ.

7. ಅಮಾಸೆ ದಿನ ಚಂದ್ರನ ಮೇಲಿರೋರ್ಗೆ ಭೂ-ಹುಣ್ಣಿಮೆ ಆಗತ್ತ? ಹುಣ್ಣಿಮೆ ದಿನ ಚಂದ್ರನ ಮೇಲಿಂದ ಭೂಮ್ಯಮಾಸೆ ಆಗತ್ತ?

ಭೂಮಿ ಮೇಲೆ ಅಮಾಸೆ ಕತ್ತಲ ರಾತ್ರಿ ಚಂದ್ರನ್ಮೇಲೆ ರಾತ್ರಿ ಆಗಿರೋ ಭಾಗ್ದಿಂದ ದುಂಡಾಗಿರೋ ಭೂಮಿಕಾಣ್ಸತ್ತೆ, ಅಂದ್ರೆ, ಭೂಹುಣ್ಣಿಮೆ ಆಗಿರತ್ತೆ. ನೀಲಿ ಭೂಮಿಯ ಪೂರ್ಣ ಬಿಂಬನ್ನ ಅವ್ರು ನೋಡ್ಬೋದು. ಅದೇ ನಾವು ಹುಣ್ಣಿಮೆ ಜೊನ್ನ ಸವಿದು ಆನಂದಿಸ್ತಾ ಇದ್ರೆ, ಚಂದ್ರನ ಮೇಲಿರೋ ಜನರಿಗೆ ಭೂಮ್ಯಮಾಸೆ ಆಗಿರತ್ತೆ, ಅಂದ್ರೆ ಭೂಮಿ ಅವ್ರ ಆಕಾಶದಿಂದ ಮರೆಯಾಗಿರತ್ತೆ.

8. ಚಂದ್ರನ ಮೇಲೆ ಹಗಲು, ರಾತ್ರಿ ಹೇಗಿರತ್ತೆ?

ಚಂದ್ರನ ಮೇಲಿನ ಹಗಲು-ರಾತ್ರಿಗಳೂ ವಿಚಿತ್ರ. ತಿಂಗಳಲ್ಲಿ 14 ದಿನ ಹಗಲು. ಆಗ ತಂಗದಿರನ ಆ ಭಾಗ್ದ ಗರಿಷ್ಠ ತಾಪಮಾನ ಕೇವಲ 130 ಡಿಗ್ರಿ ಸೆಂಟೀಗ್ರೇಡ್. ಹಾಗೇನೇ 14 ದಿನ ರಾತ್ರಿ ಇರೋವಾಗ ಕನಿಷ್ಠ ತಾಪಮಾನ ಕೊರೆಯೋ -170 ಡಿಗ್ರಿ ಸೆಂಟೀಗ್ರೇಡ್. ಇದು ಯಾವ ರಿಯಲ್ ಎಸ್ಟೇಟ್ ಏಜೆಂಟಿಗೆ ತಾನೆ ಖುಷಿ ಕಿ ಬಾತ್, ಹೇಳಿ?

9. ಇದನ್ನೆಲ್ಲಾ ಓದಿದ್ಮೇಲೂ ಒಂದ್ಸಾರಿ ಚಂದ್ರನ ಸುತ್ತಾ ಹೋಗಿ ಬರೋ ಆಸೆ ಆಗತ್ತಾ?

ನಿಮ್ಮಂಥೋರ ಆಸೆ ಪೂರೈಸಕ್ಕೆ ಅಂತಾನೇ ಸ್ಪೇಸ್- ಎಕ್ಸ್ ಅನ್ನೋ ಅಮೇರಿಕನ್ ಕಂಪೆನಿ ಚಂದ್ರನ ಸುತ್ತಾ  2023ರಲ್ಲಿ ಜಪಾನೀ ಫ್ಯಾಶನ್ ಉದ್ಯಮಿ ಹಾಗು ಬಿಲಿಯನೇರ್ ಎಸಾಕು ಮೆಝಾವಾನ ಅನ್ನೋ ಭಾರಿ ಕುಳನ್ನ ಕಳ್ಸಕ್ಕೆ ಮುಂದಾಗಿದ್ಯಂತೆ. ಅಯ್ಯೋ ನಮ್ಮ  ಛಾನ್ಸ್ ತಪ್ಪಿಹೋಯ್ತಲ್ಲಾ ಅಂತೇನೂ ಕೊರಗಬೇಕಾಗಿಲ್ಲ. ಇನ್ನೂ ಒಂದು ಸಿಹಿ ಸುದ್ದಿ ಇದೆ. ಅವ್ನು ತನ್ನ ಕಲೋಪಾಸಕತೆ ಮೆರೆಯಕ್ಕೆ ಅಂತ ತನ್ಜೊತೆ ಜಗತ್ತಿನ ಆರರಿಂದ ಎಂಟು ಜನ ಕಲಾವಿದರನ್ನ ಕರೆದುಕೊಂಡು ಹೋಗ್ತಾನಂತೆ. ಆದ್ರೆ ಸುಮ್ನೆ ಅಂತೂ ಅಲ್ಲ. ಅವ್ರೇನಾದ್ರೂ ಜೀವಸಹಿತ ವಾಪಸ್ಸಾದ್ರೆ, ಅವ್ರು ಅವನ್ಗಾಗಿ ತಮ್ಮ ಸೃಜನಶೀಲತೇನ ಮೆರೀಬೇಕಾಗತ್ತೆ, ಜೋಕೆ.