Mysterious Forest in the Pacific Northwest

ಕೆಲವು ನಿಗೂಢ ಸಂಗತಿಗಳನ್ನ ನಾವು ಪ್ರಶ್ನೆ ಮಾಡ್ದೇನೆ ಒಪ್ಕೋತೀವಿ. ಬಹುಶಃ, ಪ್ರಶ್ನೆ ಮಾಡಿದ್ರೆ ಉತ್ತರ ಸಿಗಲ್ಲ ಅಂತ ಗೊತ್ತು, ಅದಕ್ಕೆ. ಇಲ್ಲಿ ನಿಮ್ಗಾಗಿ 9 ಅಂಥಾ ಗುಟ್ಟು ಬಿಟ್ಕೊಡ್ದೇ ಇರೋ ವಿಷ್ಯಗಳ್ನ ಇಡ್ತಿದ್ದೀವಿ. ಒಂದ್ಸಾರಿ ಒದ್ಕೊಳ್ಳಿ.

1) ನಾವು ನಿದ್ದೆಹೋದಾಗ ಎಚ್ಚರವಾಗಿರೋದು ಏನು?

ನಿದ್ದೆ ಬಗ್ಗೆ ಮನುಷ್ಯ ತುಂಬಾ ತಲೆಕೆಡಿಸ್ಕೊಂಡಿದ್ದಾನೆ. ವಿಜ್ಞಾನ ನಿದ್ದೆ ಯಾಕೆ ಬೇಕು ಅಂತ ಹೇಳತ್ಯೇ ವಿನಾ ನಿದ್ದೇಲಿ ಏನಾಗತ್ತೆ ಅನ್ನೋದ್ರ ಬಗ್ಗೆ ಅರ್ಥ ಆಗೋ ಥರಾ ಬಾಯ್ಬಿಟ್ರೆ ಕೇಳಿ. ಮನುಷ್ಯರು ಮಾತ್ರ ಅಲ್ಲ ನಿದ್ದೆ ಮಾಡೋದು—ಎಲ್ಲ ಕಶೇರುಕಗಳೂ, ಮೀನೂ ಸೇರಿದಂತೆ, ನಿದ್ದೆಹೋಗ್ತವೆ. ಕಂಪ್ಯೂಟರ್ ಗಳು ಕೂಡ. ನಿದ್ದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳಕ್ಕೆ ನಾವು ನಿದ್ದೆಹೋದಾಗ ಬರೀ ದೇಹ ಮಾತ್ರ ನಿದ್ದೆ ಹೊಗತ್ಯೋ, ಬೇರೇನೋ ಎಚ್ಚರವಾಗಿ ಇರತ್ಯೋ ಅನ್ನೋದು ಗೊತ್ತಾಗ್ಬೇಕು. ಎಷ್ಟೋ ಸಾರಿ ಎಚ್ಚರವಾಗಿ ಇರೋವಾಗ ಇರೋ ನಿಯಂತ್ರಣ ನಿದ್ದೇಲಿ ಇರೋದೇ ಇಲ್ಲ. ಇನ್ನು ನಿದ್ದೆಹೋದಾಗ ನಮ್ಮ ಬ್ಯಾಟರಿ ಹೇಗೆ ಚಾರ್ಜ್ ಆಗತ್ತೆ ಅನ್ನೋ ವಿಷ್ಯ ಅಂತೂ ಬಿಡಿಸಲಾಗದ ಒಗಟೇ ಸರಿ.

2) ಆಕಳಿಸೋದ್ರ ಹಿಂದಿನ ಮರ್ಮ

ಆಕಳಿಕೆ ನಿದ್ದೆ ಬರೋದ್ರ ಅಥವಾ ನಿದ್ದೆ ಕಮ್ಮಿ ಆಗಿರೋದ್ರ ಸಂಕೇತ ಅಂತಾರೆ. ಆದ್ರೆ ಜನ ಜಾಸ್ತಿ ಆಕಳಿಸೋದು ಅವರಿಗೆ ಬೋರ್ ಆಗ್ತಾ ಇರ್ಬೇಕಾದ್ರೆ ಅಥವಾ ಹೊಟ್ಟೆ ಹಸಿತಾ ಇರ್ಬೇಕಾದ್ರೆ. ಕೆಲವು ಸಂಶೋಧಕರ ಪ್ರಕಾರ ಆಕಳಿಕೆ ಅನ್ನೋದು ನಮ್ಮ ಗಮನ ಎಲ್ಲಿರ್ಬೇಕೋ ಅಲ್ಲಿಲ್ಲ ಅಂತ ಎಚ್ಚರಿಸೋ ಗಂಟೆ. ಗಾಡಿ ಓಡಿಸ್ಬೇಕಾದ್ರೆ ಆಕಳಿಕೆ ಶುರು ಆಯ್ತು ಅಂದ್ರೆ, ಗಾಡಿ ನಿಲ್ಸಿ ಸ್ವಲ್ಪ ಬ್ರೇಕ್ ತೊಗೊಳ್ಳಿ ಅನ್ನೋದ್ರ ಸೂಚನೆ. ಆಕಳಿಕೆ ವಿಚಾರದಲ್ಲಿ ಇನ್ನೊಂದು ಅಚ್ಚರಿ ತರೋ ವಿಚಾರ ಅಂದ್ರೆ, ಒಬ್ಬರು ಆಕಳ್ಸದನ್ನ ನೋಡಿ ಉಳಿದೋರು ಆಕಳ್ಸೋದು—ಅದೊಂದು ಸಾಂಕ್ರಾಮಿಕ ರೋಗದ ಥರಾ. ಇದ್ರಲ್ಲೂ ನಮ್ಮ ಮನೆಮಂದಿನೇ ಈ ಆಕಳಿಕೆ ಸೋಂಕನ್ನ ದಾಟ್ಸೋದು ಜಾಸ್ತಿ ಅಂತೆ. ಮೈಕ್ ಕೈಗೆ ಸಿಗ್ತು ಅಂತ ಮೊಳೆ ಕುಟ್ತಾ ಇರೋ ಸಭೇಲಿ ಜನ ಆಕಳಿಸೋದ್ನ ನೋಡಿದ್ರೆ ಇದೇನೂ ನಂಬೋ ವಿಚಾರ ಅಲ್ಲ ಅನ್ಸತ್ತೆ.

3) ಮಂಜಿನ ಮೇಲ್ಮೈ ಜಾರೋದು ಯಾಕೆ?

ಮಂಜುಗೆಡ್ಡೆಯ ಮೇಲೆ ಯಾಕೆ ಜಾರತ್ತೆ ಅಂದ್ರೆ ಅದರ ಮೇಲೈ ಮೇಲಿರೋ ಮಂಜಿನಕಣಗಳು ಬೇಗ ದ್ರವೀಕರಿಸಿ ನೀರಾಗೋದ್ರಿಂದ ಮಂಜುಗೆಡ್ಡೆ ಮೇಲೈ ತುಂಬಾ ಜಾರತ್ತೆ ಅನ್ನೋ ನಂಬಿಕೆ. ಆದ್ರೆ, ಮನೇಲಿ ಟೈಲ್ಸ್ ಮೇಲೆ ನೀರು ಚೆಲ್ಲಿದ್ರೆ ಎಷ್ಟು ಜಾರತ್ತೋ ಅದಕ್ಕಿಂತ ಹೆಚ್ಚಾಗಿ ಮಂಜುಗೆಡ್ಡೆ ಮೇಲೆ ಜಾರತ್ತಲ್ಲಾ ಅಂದ್ರೆ, ಕಾರಣ ಇದು: ಮಂಜುಗೆಡ್ಡೆಯ ಮೇಲೆ ಎಲ್ಲಾ ಕಡೆ ಸಡಿಲವಾಗಿ ಉರುಳುವ ನೀರಿನ ಅಣುಗಳು ಇರೋದ್ರಿಂದ ಜಾರುವಿಕೆ ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಅಂದ್ರೆ, ಮನೇಲಿ ನೆಲದ ಮೇಲೆಲ್ಲಾ ಗೋಲಿ ಚೆಲ್ಲಿ ಅವುಗಳ ಮೇಲೆ ಓಡಾಡ್ದಂತೆ.

4) ಮರ-ಗಿಡಗಳೂ ಮಾತಾಡ್ಕೊಳ್ಳತ್ವ?

ನಮ್ಗೆ ಮನುಷ್ಯರಿಗೆ ಒಂದು ದೊಡ್ಡ ಅಹಂಕಾರ ಏನಂದ್ರೆ ನಮ್ಗೆ ಮಾತ್ರ ಬೇರೆಯೋರ ಜೊತೆ ಸಂವಹನ ಸಾಧ್ಯ ಅನ್ನೋದು. ಬೇರೆ ಪ್ರಾಣಿವರ್ಗ ಅಥ್ವಾ ಸಸ್ಯವರ್ಗ ಇದ್ನ ಮಾಡತ್ತೆ ಅಂದ್ರೆ, ಅದ್ನ ನಂಬದಿರಲಿ, ಕೇಳಿ ಮೂಗು ಮುರಿಯೋರೆ ಜಾಸ್ತಿ ಮಾರಯ್ರೆ. ತಮ್ಮ ಜೀವರಸಕ್ಕೆ ಧಾಳಿ ಇಡೋ ಕೀಟಗಳ ಕಾಟ್ದಿಂದ ತಪ್ಸಿಕೊಳ್ಳಕ್ಕೆ ಗಿಡಗಳು ತಮ್ಮಲ್ಲಿರೋ ರಾಸಾಯನಿಕ ಕೋಟೇನ ಭದ್ರ ಪಡಿಸಿಕೊಳ್ಳತ್ವಂತೆ. ಇನ್ನೊಂದು ಅಧ್ಯಯನದ ಪ್ರಕಾರ ಮರಗಳು ತಮ್ಮ ಬೆಳವಣಿಗೆ ಇಂದ ಅಕ್ಕಪಕ್ಕದಲ್ಲಿರೋ ಮರಗಿಡಗಳ್ಗೆ ತೊಂದ್ರೆ ಆಗ್ತಿದೆ ಅಂದಾಗ ತಮ್ಮ ಬೆಳವಣ್ಗೇಗೆ ಕಡಿವಾಣ ಹಾಕ್ಕೊಳ್ಳತ್ವಂತೆ  (ನಮ್ಮ ಥರಾ ?). ಪರಸ್ಪರ ಮಾತಾಡ್ಕೊಂಡು, ಒಂದಕ್ಕೊಂದು ಪೂರಕವಾಗಿ ಬೆಳೆಯತ್ವಂತೆ. ಮನುಷ್ಯರು ಮರಗಿ-ಡಗಳ ಜೋತೆ ಮಾತಾಡೊ ಸಂಗತಿಗಳು ಆಗಾಗ ಕೇಳಿ ಬರ್ತಾನೆ ಇರತ್ತೆ. ಇದ್ರ ಬಗ್ಗೆ ಪುಸ್ತಕಗಳೇ ಇವೆ. “ಟಾಕಿಂಗ್ ವಿತ್ ನೇಚರ್” ಅಂಥದೊಂದ್ದು.

5) ಮಿಂಚುಹುಳುಗಳ ಗಮ್ಮತ್ತು

ಮಿಂಚುಹುಳ್ಗಳು ಇವತ್ತು ನೋಡ್ಬೇಕು ಅಂದ್ರೂ ಸಿಗೋದೇ ಕಷ್ಟ ಆಗಿದೆ. ಅವೂ ಅನೇಕ ಪ್ರಾಣಿಗಳ ಥರಾ ವಿನಾಶದ ಅಂಚಿನಲ್ಲಿವೆ. ಗುಂಪು-ಗುಂಪಾಗೆ ಅವು ಬೆಳ್ಕನ್ನ ಹೊಮ್ಮಿಸೋಕೆ ಕಾರಣ ಹುಡ್ಕೋ ಸಂಶೋಧಕರು ಹೇಳೋದಂದ್ರೆ, ಹೆಣ್ಣು ಹುಳುಗಳ್ನ ಸೆಳ್ಯಕ್ಕೆ ಮತ್ತೆ ತಮ್ಮ ಹಗೆಗಳ್ನ ದೂರ ಇಡೋಕೆ ಅಂತ ಈ ರೀತಿ ಮಾಡತ್ವಂತೆ. ಇದ್ರಿಂದ ಅವು ಒಟ್ಗೆ ಮಿಂಚಕ್ಕೆ ಹೇಗೆ ತಿಳ್ಕೊಳತ್ವೆ ಅಂತ ಗೊತ್ತಾಯ್ತಾ?

6) ಹಕ್ಕಿಗಳ ವಲಸೆ ಹಿಂದಿರೋ ರಹಸ್ಯ

ಹಕ್ಕಿಗಳ ವಲಸೆ ಬಗ್ಗೆ ಸುಮಾರು ಓದಿರ್ತೀರ. ನಮ್ಮ ನಡ್ವೆ ಇರೋ ಪಕ್ಷಿಪ್ರಿಯರು ಎಲ್ರನ್ನೂ ಪಕ್ಷಿವೀಕ್ಷಣೆಗೆ ಸೆಳ್ಯಕ್ಕೆ ಶುರು ಮಾಡ್ದಾಗಿಂದ ಹಕ್ಕಿಗಳ್ಗೆ ವೈಯಕ್ತಿಕ ಬದ್ಕೇ ಇಲ್ವಾಗಿದೆ! ಕೆಲ್ವು ಹಕ್ಕಿಗಳು ವರ್ಷದಲ್ಲಿ ಕೇಳಿದ್ರೆ ದಿಗ್ಭ್ರಮೆ ಆಗೋ ಅಷ್ಟು ದೂರ ವಲ್ಸೆ ಹೋಗತ್ವಂತೆ. ಅಷ್ಟು ದೂರ ಹೋಗಿದ್ದಕ್ಕೆ ವಾಪ್ಸು ಬರಕ್ಕೆ ಯಾರು ದಿಕ್ತೋರಿಸ್ತಾರೆ ಅಂತ ಯೋಚಿಸ್ತೀರ? ಈಗಿನ ಸಿದ್ಧಾಂತದ ಪ್ರಕಾರ ಅವುಗಳ ಕಣ್ಣಲ್ಲಿರೋ ಯಾವುದೋ ಪ್ರೋಟೀನ್ ಅಂಶ ಅವುಗಳ್ಗೆ ಭೂಮಿಯ ಅಯಸ್ಕಾಂತ ಕ್ಷೇತ್ರ ಕಾಣ್ಸೋ ಥರಾ ಮಾಡತ್ತಂತೆ. ಅಂದ್ರೆ, ಅವು ಉತ್ತರ ದಿಕ್ಕು ಯಾವ್ದು ಅಂತ ಯಾವ್ದೇ ಕಂಪಾಸ್ ಇಲ್ದೇ ನೋಡ್ಬೋದು.

7) ತಮ್ಮ ಮೂಲ ಕಂಡ್ಕೊಳ್ಳೋ ಸಾಲಮನ್ ಮೀನುಗಳು

ಸಮುದ್ರಲ್ಲಿರೋ ಸಾಲಮನ್ ಮೀನುಗಳು ಮೊಟ್ಟೆ ಇಡೋ ಸಮಯದಲ್ಲಿ ತಾವು ಹುಟ್ಟಿದ ನದೀ ಜಾಡನ್ನ ಕಂಡುಕೊಂಡು ಆ ನದೀ ಹರಿಯೋ ದಿಕ್ಕಿಗೆ ವಿರುದ್ಧ ಈಜ್ತಾ ವಾಸನೆ ಮೂಲಕ ತಾವು ಹುಟ್ಟಿದ ಜಾಗ ಕಂಡ್ಕೊಂಡು, ಅಲ್ಗೇ  ಹೋಗಿ ಮೊಟ್ಟೆ ಇಡತ್ವಂತೆ. ಸಂಶೋಧಕರು ಇದ್ರ ಬಗ್ಗೆ ತಲೆ ಕೆಡಿಸ್ಕೊಂಡ್ರೂ ಇನ್ನೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಸೂರ್ಯನ ಬೆಳಕು ಬೀಳೋ ಕೋನ, ನೀರಲ್ಲಿರೋ ಉಪ್ಪಿನಂಶ ಹಾಗು ತಾಪದ ವ್ಯತ್ಯಾಸ ಇದಕ್ಕೆ ಕಾರಣ ಇರ್ಬೋದಂತೆ. ಕೊನೆಗೆ, ಎಲ್ಲ ನಿಗೂಢತೆಯ ವಿವರಣೆಗೂ ರೆಡಿಯಾಗಿ ಎಟುಕೋ ಭೂಮಿಯ ಅಯಸ್ಕಾಂತ ಗುಣದ ಕಾರಣಾನೂ ಸೇರಿಸ್ಬೋದು.

8) ತಿಮಿಂಗಿಲದ ಹಾಡು

ತಿಮಿಂಗಿಲಗಳೂ ಹಾಡತ್ವೆ ಅಂದ್ರೆ ಅಚ್ಚರಿಯಾಗತ್ತೆ. ಅವುಗಳು ಅನೇಕ ಶಬ್ದಗಳ್ನ ಹೊರಡಿಸೋದೇ ಅಲ್ದೇ ಅವುಗ್ಳ ಆಲಾಪ ಸುಮಾರು ಏಳ್ರಿಂದ ಮುವ್ವತ್ತು ನಿಮಿಷ ಇರತ್ತಂತೆ. ಇದನ್ನೊಂದು ಭಾಷೆ ಅಂತಾನೆ ಹೇಳ್ಬೋದು ಅಂತಾರೆ, ತಿಳ್ದೋರು. ನಾವು ಈ ಭಾಷೇನ ಅರ್ಥಮಾಡ್ಕೋಬೋದು, ಇಲ್ಲ ಅನ್ನೋದು ಬೇರೇನೇ ವಿಚಾರ. ಗಂಡು ತಿಮಿಂಗ್ಲ ಮಾತ್ರ ಹಾಡತ್ತಂತೆ. ಹೆಣ್ಣನ್ನ ಸೆಳ್ಯಕ್ಕೆ ಹಾಡತ್ತೆ ಅನ್ನೋದು ನಾವು ಸುಲಭವಾಗಿ ಕಂಡ್ಕೊಳ್ಳೋ ಸಿದ್ಧಾಂತ.

9) ಸಂಗೀತದ ಪರಿಣಾಮ

ಸಂಗೀತ ಯಾತಕ್ಕೆ ನಮ್ಮೇಲೆ ಅಷ್ಟೊಂದು ಪರಿಣಾಮ ಬೀರತ್ತೆ ? ಇದ್ಕೆ ಉತ್ತರನ್ನ ಎಲ್ಲಿ ಕಂಡ್ಕೋಬೇಕೂ ಅಂತಾನೂ ನಮ್ಗೆ ಗೊತ್ತಿಲ್ಲ. ಅಂದ್ರೆ, ಎಲ್ಲಾನೂ ತರ್ಕಬದ್ಧವಾಗಿ ಹೇಳ್ಬೋದು ಅನ್ನೋದು ನಮ್ಮ ತಪ್ಪು ತರ್ಕ. ಮನುಷ್ಯರ ತರ್ಕಕ್ಕೆ ನಾವಂದ್ಕೊಳೋ ಅಷ್ಟು ಬೆಲೆ ಇಲ್ಲ ಅಂತ ಇಂದಿನ ವಿಜ್ಞಾನ ಸಾಬೀತು ಮಾಡಿದ್ರೂ ನಾವಿನ್ನೂ ಅದನ್ನೆ ಬಲವಾಗಿ ಯಾವಾಗ್ಲೂ ನಚ್ಚಿಕೋತೀವಿ. ಹಂಗೇನೆ ಸಂಗೀತದ ಬಗ್ಗೆನೂ ಒಂದು ಥಿಯರಿ ಕಟ್ಬೋದು. ಅದಂದ್ರೆ, ಲಯಬದ್ಧ ಶಬ್ದಗಲು ಕಿವಿ ಮೇಲೆ ಬೀಳ್ತಾ-ಬೀಳ್ತಾ ನಮ್ಸುತ್ತ ಇರೋ ಜನರ ಮನಸ್ಸಿನ ಪ್ರಕ್ರಿಯೆಗಳ ತಾಳಮೇಳ ಒಂದೇ ಆಗತ್ತಂತೆ. ಅಂದ್ರೆ ಮನುಷ್ಯ ಸಾಮಾಜಿಕ ಜೀವಿ ಆದ್ರಿಂದ ಸಂಗೀತ ಅವನ ಮೇಲೆ ಪರಿಣಾಮ ಬೀರತ್ತಂತೆ.