http://f1.pepst.com/c/FD99ED/521093/ssc3/home/098/a-------------------------------timepass/albums/305694_218054304965943_1007109829_n.jpg_480_480_0_64000_0_1_0.jpg

ಶಾಲೆಗೆ ಚಕ್ಕರ್ ಹೊಡಿಯೋದು ಅನಾದಿ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ. ಹುಡುಗರು ಅದನ್ನ ಪಾಲಿಸ್ಲೇಬೇಕು, ಇಲ್ದಿದ್ರೆ ಅಪಚಾರ ಆಗುತ್ತೆ. ಮನೆಯವ್ರು ಕ್ಲಾಸಿಗೆ ಹೋಗ್ಲೇಬೇಕು ಅಂತ ಎಷ್ಟು ಹೇಳಿದ್ರೂ ಕೂಡ, ಅವ್ರ ಮಾತು ಕೇಳ್ಬಾರ್ದು. ಈ ಪದ್ಧತೀನ ಮುಂದುವರೆಸ್ಕೊಂಡು ಹೋಗೋಕೆ ಸಹಾಯ ಆಗ್ಲಿ ಅಂತ ಚಕ್ಕರ್ ಹೊಡಿಯೋಕೆ ಕೆಲವು ಕಾರಣಗಳ್ನ ಹುಡುಕಿದ್ದೀವಿ ನೋಡಿ.

1. ಶೀತ, ಜ್ವರ, ಹೊಟ್ಟೆನೋವು, ತಲೆನೋವು ಇತ್ಯಾದಿ ಡೇಂಜರಸ್ ಖಾಯಿಲೆಗಳು

ಇದು ಒಂದು ಪುರಾತನ ನೆಪ. ಆದ್ರೂ ಕೆಲಸ ಮಾಡುತ್ತೆ. ನೀವು ಜೋರಾಗಿ ಕೆಮ್ಮಬೇಕಾಗುತ್ತೆ, ಹೊಟ್ಟೆ ಹಿಸುಕ್ಕೊಂಡು ನೋವಿದೆ ಅಂತ ತೋರಿಸ್ಬೇಕಾಗುತ್ತೆ. ಇಂಥ ಅದ್ಭುತ ಆಕ್ಟರ್ ನೀವಾಗಿದ್ರೆ ಈ ನೆಪ ನಿಮ್ಗೆ ಉಪ್ಯೋಗಕ್ಕೆ ಬರುತ್ತೆ.

2. ಊರಿಂದ ಅಪ್ಪ-ಅಮ್ಮ ಬಂದಿದ್ದಾರೆ/ನೆಂಟ್ರು ಬಂದಿದ್ದಾರೆ ಅನ್ನೋ ಕರುಳಬಳ್ಳಿಯ ಕಥೆಗಳು

ನೀವು ದೂರದ ಊರಲ್ಲಿ ಹಾಸ್ಟೆಲಲ್ಲಿ ಓದ್ತಿರೋರಾದ್ರೆ ಅಪ್ಪ-ಅಮ್ಮ ನಿಮ್ಮನ್ನ ನೋಡೋಕೆ ಬಂದಿದಾರೆ ಅಂತ ಸುಳ್ಳು ಹೇಳ್ಬಹುದು. ಮನೆಯಿಂದ್ಲೇ ಕಾಲೇಜಿಗೆ ಬರೋರಾದ್ರೆ ಫಾರಿನ್ನಿಂದ ನೆಂಟ್ರು ಬಂದಿದಾರೆ, ಅವ್ರ ಜೊತೆ ಇರ್ಬೇಕು ಅಂತ ಹೇಳಿ. ಫ್ಯಾಮಿಲಿ ಸೆಂಟಿಮೆಂಟ್ ಕೆಲ್ಸ ಮಾಡುತ್ತೆ, ಯಾಕಂದ್ರೆ ನಿಮ್ ಲೆಕ್ಚರರಿಗೂ ಫ್ಯಾಮಿಲಿ ಇರುತ್ತಲ್ಲ? ಅವ್ರಿಗೆ ಫ್ಯಾಮಿಲಿಗೆ ಬೆಲೆ ಕೊಡದ ಕಟುಕ ಅನ್ನಿಸ್ಕೊಳ್ಳೋದು ಇಷ್ಟ ಇರೊಲ್ಲ. 'ಆಯ್ತು ಹೋಗು. ನಾನೇನು ಮಾಡೋಕಾಗುತ್ತೆ.', ಅಂತ ಕೈ ಚೆಲ್ತಾರೆ.

 

3. ಪರೀಕ್ಷೆಗೆ ಓದ್ಕೋಬೇಕು ಅನ್ನೋ ಮಾಸ್ಟರ್ ಸ್ಟ್ರೋಕ್

ಇದು ಕೆಲಸ ಮಾಡ್ಬೇಕಿದ್ರೆ ನೀವು ಸ್ವಲ್ಪ ಕುಡುಮಿ ಥರ ಅಂದ್ರೆ ಪುಸ್ತಕದ್ ಹುಳು ಥರ ಅಥ್ವಾ ಭಯಂಕರ ಸ್ಟೂಡಿಯಸ್ ವಿದ್ಯಾರ್ಥಿ ಥರ ಪೋಸ್ ಕೊಡ್ಬೇಕು. ಸ್ವಲ್ಪ ಕಷ್ಟ ಆದ್ರೂ ಕೂಡ, 'ಪಾಪ ಒಳ್ಳೆ ಹುಡುಗ.', ಅಂತ ನಿಮ್ ಲೆಕ್ಚರರಿಗೆ ಮನಸು ಕರಗಿ ನಿಮಗೆ ಓದೋದಿಕ್ಕೆ ಅಂದ್ರೆ ಮಜಾ ಮಾಡೋದಿಕ್ಕೆ ಪರ್ಮಿಶನ್ ಕೊಡ್ಬಹುದು.

4. ಕಾಲೇಜು ಫೆಸ್ಟು, ಸ್ಪೋರ್ಟ್ಸ್ ಮೀಟುಗಳೆಂಬ ಸೀರಿಯಸ್ ಜವಾಬ್ದಾರಿಗಳು

ಎಕ್ಸ್ಟ್ರಾ ಕರಿಕುಲರ್ ಚಟುವಟಿಕೆಗಳಲ್ಲಿ ನೀವು ಸ್ವಲ್ಪ ಜಾಸ್ತೀನೇ ಭಾಗವಹಿಸೋರಾದ್ರೆ ಇದು ನಿಮಗೆ ಚೆನ್ನಾಗಿ ಕೆಲ್ಸ ಮಾಡುತ್ತೆ. ಒಬ್ರು ಲೆಕ್ಚರರ್ ಕೂಡ ಇದ್ರಲ್ಲೆಲ್ಲ ಇನ್ವಾಲ್ವ್ ಆಗ್ತಾರೆ, ಹಾಗಾಗಿ ಯಾರೂ ನಿಮ್ ಕಡೆ ಬೆರಳು ತೋರ್ಸೋ ಹಾಗಿರೊಲ್ಲ ನೋಡಿ. ಯಾರೂ ಏನೂ ಹೇಳೋಕಾಗೊಲ್ಲ.

 

5. ಪ್ರಾಕ್ಸಿ ಹಾಕಿಸೋ ಬ್ರಹ್ಮಾಸ್ತ್ರ

ಫ್ರೆಂಡ್ಸ್ ಇರೋದು ಯಾಕೆ? ಇಂಥದ್ರಲ್ಲಿ ಯಾರು ಸಹಾಯ ಮಾಡೊಲ್ಲ ಹೇಳಿ? ತಲೆನೇ ಕೆಡಿಸ್ಕೊಳ್ದೇ ನೀವು ಚಕ್ಕರ್ ಹಾಕಿ, ನಿಮ್ ಗೆಳೆಯನ ಹತ್ರ ನಿಮ್ಗೆ ಪ್ರಾಕ್ಸಿ ಅಟೆಂಡೆನ್ಸ್ ಹಾಕ್ಸಿ. ಲೆಕ್ಚರರ್ ನಿಮ್ ಹೆಸ್ರು ಕೂಗ್ವಾಗ ಅವ್ರಿಗೆ ಡೌಟ್ ಬರ್ದಿರೋ ಥರ 'ಪ್ರೆಸೆಂಟ್ ಸಾ/ಮ್ಯಾಮ್' ಅಂದ್ರೆ ಮುಗೀತು.

6. ಆಕ್ಸಿಡೆಂಟಾಗೋಗಿದೆ, ಅರ್ಜೆಂಟ್ ರಜ ಬೇಕಾಗಿದೆ

ಕೈಗೋ ಕಾಲಿಗೋ ನಕಲಿ ಬ್ಯಾಂಡೇಜ್ ಹಾಕಿಸ್ಕೊಂಡು ಕುಂಟ್ಕೊಂಡು ಕಾಲೇಜಿಗೆ ಹೋಗಿ, ಎರಡೇ ನಿಮಿಷದಲ್ಲಿ ಪರ್ಮಿಶನ್ ತೆಗೊಂಡು ಆರಾಮಾಗಿ ವಾಪಾಸು ಹೋಗಿ. ಸ್ವಲ್ಪ ಆಕ್ಟಿಂಗ್ ಕಲ್ತಿರ್ಬೇಕು ಅಷ್ಟೇ. ಓವರ್ ಮಾಡೋಕೂ ಹೋಗ್ಬೇಡಿ. ಅಂದ್ರೆ ಶಂಕರ್-ನಾಗ್ ಸ್ಟೈಲ್ ಮಾಡಿ, ರಜನೀಕಾಂತ್ ಥರ ಮಾಡೋಕೆ ಹೋಗ್ಬೇಡಿ.

 

7. ದೀಪಾವಳಿ, ದಸರಾ, ಸಂಕ್ರಾಂತಿ, ಗಣೇಶ ಚತುರ್ಥಿ ಅನ್ನೋ ಸಾಂಸ್ಕೃತಿಕ ನೆಪಗಳು

ಗಣೇಶ ಕೂರ್ಸೋ ನೆಪದಲ್ಲಿ ನೀವು ಚಕ್ಕರ್ ಹೊಡೆದು ಮಜಾ ಮಾಡಿದ್ರೆ ಗಣೇಶ ಬೇಜಾರು ಮಾಡ್ಕೊಳೊಲ್ಲ, ಕ್ಷಮಿಸಿಡ್ತಾನೆ. ಹೀಗೆ ಹಬ್ಬ ಬಂತು ಅಂದ್ರೆ ಮಾಸ್-ಬಂಕ್ ಮಾಡ್ಬಹುದು. ಲೆಕ್ಚರರ್ಗಳಿಗೂ ಒಪ್ಪಿಸ್ಬಹುದು, ಅವ್ರಿಗೂ ಹಬ್ಬಕ್ಕೆ ತಯಾರಾಗೋದಿರುತ್ತೆ ನೋಡಿ. ಹಬ್ಬ ಯಾವ್ದೂ ಇಲ್ದಿರೋ ಸಮಯದಲ್ಲಿ ನಿಮ್ಗೆ ಚಕ್ಕರ್ ಹೊಡೀಬೇಕಿದ್ರೆ ಮಂಗಳ್ವಾರ ಉಪ್ವಾಸ, ಗುರುವಾರ ಉಪ್ವಾಸ ಅಂತ ಏನೋ ಒಂದು ಶುರು ಮಾಡ್ಕೋಬೋದು. ಉಪ್ವಾಸ ಇದ್ದು ಸುಸ್ತಾಗಿದೆ ಅಂದ್ರೆ ಪರ್ಮಿಶನ್ ಸಿಗದೆ ಎಲ್ ಹೋಗುತ್ತೆ!

8. ಮನೆಯಲ್ಲೆಲ್ಲ ತಿರುಪತಿಗೆ ಹೋಗ್ತಿದ್ದೀವಿ

ವರ್ಷಕ್ಕೊಮ್ಮೆ ತೀರ್ಥಯಾತ್ರೆ ಹೋಗ್ತಾರಲ್ಲ, ನೀವು ಹೋಗ್ದೆ ಇದ್ರೂ ಹೋಗ್ತಿದ್ದೀವಿ ಅಂತ ಹೇಳಿ ಫ್ರೆಂಡ್ಸ್ ಜೊತೆ ಬೈಕ್ ಟ್ರಿಪ್ ಹೋದ್ರೆ ಯಾರಿಗೆ ಗೊತ್ತಾಗುತ್ತೆ?

 

9. ಒಂದಕ್ಕೆ ಹೋಗ್ಬೇಕು

ಒಮ್ಮೆ ಬಾತ್ರೂಮಿಗೆ ಹೋಗಿ ಬರ್ತೀನಿ, ಅರ್ಜೆಂಟಗಿದೆ ಅಂತ ಪರ್ಮಿಶನ್ ತೆಗೊಂಡು ಹಂಗೇ ಸುತ್ತಾಡ್ಕೊಂಡು ಬಂದು, ಯಾವಗ್ಲೋ ಅವ್ರು ಕೇಳಿದ್ರೆ, 'ಬಾತ್ರೂಮ್ ರಿಪೇರಿ ಮಾಡ್ತಿದ್ರು. ಕಾದು ಕಾದು ಸಾಕಾಯ್ತು.', ಅಂತ ಹೇಳಿ.

10. ರಾತ್ರಿಯೆಲ್ಲ ಓದಿ ಬೆಳಗ್ಗೆ ಮಲ್ಕೊಂಡೆ

ಚಕ್ಕರ್ ಹೊಡೆದು ಮತ್ತೆ ಹೋಗಿ ಲೆಕ್ಚರರ್ ಕಾಲಿಗೆ ಬಿದ್ದು, 'ರಾತ್ರಿಯೆಲ್ಲ ಓದ್ತಿದ್ದೆ, ಬೆಳಿಗ್ಗೆ ನಿದ್ದೆ ಬಂದ್ಬಿಡ್ತು, ಎಚ್ಚರ ಆಗ್ಲಿಲ್ಲ', ಅಂದ್ರೆ ಅವ್ರು ನಿಮ್ಮನ್ನ ಕ್ಷಮಿಸಿ ಬಿಡ್ತಾರೆ. ಟ್ರೈ ಮಾಡಿ ನೋಡಿ.

ವಿಶೇಷ ಸೂಚನೆ: ನಾವು ನಿಮ್ಗೆ ಸುಳ್ಳು ಹೇಳಿ ಅಂತ ಹೇಳ್ತಿರೋದಲ್ಲ. ಹುಡುಗ್ರು ಹೀಗೆಲ್ಲ ಮಾಡ್ತಾರೆ ಅನ್ನೋದನ್ನ ತಮಾಷೆಯಾಗಿ ಹೇಳಿರೋದಷ್ಟೆ. ಓದಿ ಮನಸಾರೆ ನಗಿ, ಇಂಪ್ಲಿಮೆಂಟ್ ಮಾಡೋಕೆ ಹೋಗ್ಬೇಡಿ 🙂