ಕರ್ನಾಟಕ, ಕರುನಾಡು… ಹೀಗೆ ಎಷ್ಟು ಬಗೆಬಗೆಯಾಗಿ ಕರುದ್ರೂ ನಾಲಿಗೆ ಚಪಲ ತೀರಲ್ಲ. ಅಷ್ಟು ಪ್ರೀತಿ, ಮುದ್ದು ನಮ್ ನೆಲದ್ ಬಗ್ಗೆ ನಮ್ಗೆ. ದಕ್ಷಿಣ ಭಾರತಾನ ಒಂದ್ ರೌಂಡ್ ಹಾಕ್ಬೇಕು ಅನ್ನೋರ್ಗೆ, ಸಖತ್ತಾಗಿ ಟ್ರೆಕ್ಕಿಂಗ್ ಮಜಾ ಸವಿಬೇಕು ಅನ್ನೋರ್ಗೆ, ಹಾಗೇನೇ ಏನಾದ್ರೂ ಭಯಂಕರ್ವಾಗಿ ಸಾಹಸ ಮಾಡ್ಬೇಕು ಅನ್ನೋ ಪ್ಲ್ಯಾನ್ ಇರೋರ್ಗೆ ನಮ್ ಕರ್ನಾಟಕ ಹೇಳ್ ಮಾಡ್ಸಿದ್ ಜಾಗ. ಅದ್ರಲ್ಲೂ ಈ ಪಶ್ಚಿಮ ಘಟ್ಟದ ಸೌಂದರ್ಯ ಇದ್ಯಲ್ಲಾ… ಬ್ರಹ್ಮ ಅದೆಷ್ಟ್ ಒಳ್ಳೆ ಮೂಡಲ್ಲಿದ್ದಾಗ ಸೃಷ್ಟಿ ಮಾಡಿದ್ನೋ ಅನ್ನೋಹಾಗ್ ಇದೆ. ಇನ್ನು ಅಲ್ಲೇ ಸುತ್ತಾ ಮುತ್ತಾ ಇರೋ ಊರಿನ್ ಜನಕ್ಕಂತೂ ಇದು ಸ್ವರ್ಗಾನೇ. ಯಾಕೆ ಅಂತೀರಾ? ಎಂಥಾ ಭುವನ ಸುಂದ್ರೀನೂ ನಾಚೋ, ಧುಮುಕಿ ಬಳುಕಿ, ಹರಿಯೋ ವೈಯ್ಯಾರೀರು ಇಲ್ಲಿದಾರೆ. ಅರ್ರೆ.. ಯಾರ್ರಿ ಅಂತ ಕನ್ ಫ್ಯೂಸ್ ಆಗ್ತಿದ್ಯಾ? ಅದೇ… ಅಲ್ಲಿರೋ ಸುಂದರ್ವಾದ್ ಜಲಪಾತಗಳು ಕಣ್ರೀ. ಮಳಗಾಲಾನೂ ಶುರುವಾಗಿದೆ, ಇದೇ ಸರಿಯಾದ್ ಸಮಯ… ತುಂಬಿ ಹರಿಯೋ ಈ ಜಲಪಾತಗಳ್ನ ನೋಡಿ ಆನಂದ ಪಡಕ್ಕೆ. ಅಂಥ 10 ಜಲಪಾತಗಳ ಪಟ್ಟೀನ ಇಲ್ಲಿ ನಿಮ್ಗೋಸ್ಕರ ಕೊಟ್ಟಿದೀವಿ ನೋಡಿ.

1. ಅಬ್ಬೆ

ಅಬ್ಬೆ ಜಲಪಾತ ಮಂಗಳೂರಿಂದ ಸುಮಾರು 90 ಕಿಲೋ ಮೀಟರ್ ದೂರ ಇದೆ. ಹತ್ರದ್ ಊರು ಅಂದ್ರೆ ಮಡಿಕೇರಿ. ಇಲ್ಲಿಂದ ಜಸ್ಟ್ 10 ಕಿಲೋ ಮೀಟರ್ ಅಷ್ಟೇ. ಈ ಜಲಪಾತಕ್ಕೆ ಹೋಗೋ ದಾರೀನೇ ಸೂಪರ್ ಕಣ್ರಿ. ಕಾಫಿ ತೋಟದ್ ಮಧ್ಯ ಸ್ವಲ್ಪ ದೂರ ನಡ್ಕೊಂಡ್ ಹೋದ್ರೆ, ಒಂದ್ ಸೇತುವೆ ಕಾಣತ್ತೆ. ಆ ಸೇತುವೆ ಎದುರಿಗೇ ಧುಮ್ಮಿಕ್ಕೋ ಅಬ್ಬೆ ಜಲಪಾತದ ನೋಟ ಅದ್ಭುತ! ಬೇರೆ ಬೇರೆ ನೀರಿನ ಝರಿಗಳು ಹರ್ಕೊಂಡ್ ಬಂದು ಒಂದ್ ಕಡೆ ಸೇರಿ, ಕಾಫಿ ಎಸ್ಟೇಟ್ ಒಳಗೆಲ್ಲಾ ಜಲಪಾತವಾಗಿ ಹರಿಯತ್ತೆ. ಇನ್ನು ಇದು ಹರಿದು ಬರೋ ದಾರೀನೂ ತುಂಬಾ ಕಡಿದಾಗಿದೆ. ಸೇತುವೆಯಿಂದ ಕೆಳಗೆ ಇಳಿಯಕ್ಕೆ ಮತ್ತೆ ಜಲಪಾತದ್ ಪಕ್ಕ ಇರೋ ಬಂಡೆ ಕಲ್ಲನ್ನ ಹತ್ತಕ್ಕೆಲ್ಲಾ ಅನುಮತಿ ಇಲ್ಲ. ಬೋರ್ಡೂ ಹಾಕಿದಾರೆ… ಹಾಗಾಗಿ ಅಂಥಾ ಸಾಹಸ ಎಲ್ಲಾ ಮಾದ್ದೇಯಿರೋದೇ ಒಳ್ಳೇದು.

ಮೂಲ

2. ಹೆಬ್ಬೆ

ಚಿಕ್ಕಮಗಳೂರು ಜಿಲ್ಲೆ ಅಂದ್ರೇನೇ ಪ್ರಕೃತಿ ಸೌಂದರ್ಯಕ್ ಫೇಮಸ್ಸು. ಅಲ್ಲಿರೋ ಮನಮೋಹಕವಾದ ಜಲಪಾತಾನೇ ಈ ಹೆಬ್ಬೆ. ಕೆಮ್ಮಣ್ಣುಗುಂಡಿ ಇಂದ ಬರೀ 8 ಕಿಲೋ ಮೀಟರ್ ಅಷ್ಟೇ. ಈ ಜಲಪಾತ ಎಷ್ಟು ಚನ್ನಾಗಿದ್ಯೋ, ಇಲ್ಲಿಗ್ ಹೋಗೋ ದಾರೀನೂ ಅಷ್ಟೇ ಚನ್ನಾಗಿದೆ. ಒಂದು ಟೈಗರ್ ರಿಸರ್ವ್ ಮಧ್ಯ ಟ್ರೆಕ್ ಮಾಡ್ಕೊಂಡ್ ಹೋಗ್ಬೇಕು. ಹಚ್ಚ ಹಸುರಾದ ಕಾಡು, ಮಧ್ಯ ಮಧ್ಯ ಸಿಗೋ ನೀರಿನ್ ಝರಿಗಳು, ಅಪರೂಪದ ಹೂವಿನ್ ಗಿಡಗಳು, ಇಳಿಜಾರಲ್ಲಿ ಹುಷಾರಾಗಿ ಕೋಲ್ ಹಿಡ್ಕೊಂಡ್ ಮಂಗನ್ ಥರ ನಾಲಕ್ ಕಾಲಲ್ಲಿ ನಡಿಯೋದು… ಅಬ್ಬಬ್ಬಾ ಆ ಮಜಾನ ಅನುಭವಿಸ್ಲೇ ಬೇಕು. ಇಷ್ಟೆಲ್ಲಾ ಸಾಹಸ ಮಾಡ್ಕೊಂಡ್ ಹೋದ್ಮೇಲೆ, ಎರಡು ಹಂತದಲ್ಲಿ ಧುಮುಕೋ ಹೆಬ್ಬೆ ಜಲಪಾತ ನೋಡಿದ್ ತಕ್ಷಣ ಎಲ್ಲಾ ಆಯಾಸಾನೂ ಮರೆತುಹೋಗತ್ತೆ. ಇನ್ನು ಈ ಜಲಪಾತದ್ ಮೊದಲ್ನೇ ಹಂತಾನ ದೊಡ್ಡ ಹೆಬ್ಬೆ ಅಂತ ಕರುದ್ರೆ, ಎರಡ್ನೇ, ಅಂದ್ರೆ ನಾವು ಆರಾಮಾಗಿ ನೀರಿಗಿಳಿದು, ಬಂಡೆಕಲ್ಲು ಹತ್ತಿ ಆಟಾಡಬಹುದಾಗಿರೋ ಹಂತಾನ ಚಿಕ್ಕ ಹೆಬ್ಬೆ ಅಂತ ಕರೀತಾರೆ. ಇಲ್ಲಿಗ್ ಹೋಗಕ್ಕೆ ಚಳಿಗಾಲ ಒಳ್ಳೆ ಟಮು.

ಮೂಲ

3. ಜೋಗ್

‘ ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ’ ಅಂತ ಅಣ್ಣಾವ್ರು ಜೀವನ ಚೈತ್ರ ಸಿನೆಮಾದಲ್ಲಿ ಹಾಡಿರೋ ಹಾಡು ಅಕ್ಷರಶಃ ಸತ್ಯ. ಶರಾವತಿ ನದಿ ನೀರಿಂದ ಹುಟ್ಟೋ ಈ ಜೋಗ ಜಲಪಾತ, ಪ್ರಪಂಚದಲ್ಲೇ ತುಂಬಾ ಫೇಮಸ್ಸು. ಬರೋಬ್ಬರಿ 830 ಅಡಿ ಎತ್ತರದಿಂದ ಧುಮುಕೋ ಈ ಜಲಪಾತ ನಮ್ ದೇಶದಲ್ಲೇ ಎರಡ್ನೇ ಎತ್ತರದ ಜಲಪಾತ. ಹೆಮ್ಮೆ ಪಡೋ ವಿಷ್ಯ ತಾನೇ? ಇಲ್ಲಿ ನಾಲ್ಕು ನೀರಿನ್ ತೊರೆ ಹರಿಯತ್ತೆ. ಅವುಗಳು ಹರಿಯೋ ರೀತಿಯಿಂದಾನೇ ಹೆಸರನ್ನ ಇಟ್ಟಿದಾರೆ. ರಾಜ ಗಾಂಭೀರ್ಯದಿಂದ ಹರಿಯೋ ತೊರೆಗೆ ರಾಜ ಅಂತ ಹೆಸರಿದ್ರೆ, ಗಾಳಿಗೆ ಬಳುಕಿ, ಚದುರಿಕೊಂಡು ವೈಯ್ಯಾರವಾಗಿ ಹರಿಯೋ ತೊರೆಗೆ ರಾಣಿ ಅಂತ ಹೆಸರಿಟ್ಟಿದಾರೆ. ಇನ್ನು ಭರ್ರ್ ಅಂತ ಬಾಣ ಬಿಟ್ಟಂಗೆ ಹರಿಯೋ ತೊರೆಗೆ ರಾಕೆಟ್ ಅಂತ ಹೆಸರಿದ್ರೆ, ಭೋರ್ಗರೆದು ಸಿಂಹದ ಥರ ಘರ್ಜನೆ ಮಾಡ್ಕೊಂಡು ಹರಿಯೋ ತೊರೆಗೆ ರೋರರ್ ಅನ್ನೋ ಹೆಸರಿದೆ. ಮುಂದಿನ ಸಲ ಜೋಗಕ್ಕೆ ಹೋದಾಗ ಮರೀದೆ ಈ ಶಬ್ದಗಳ ಮಧ್ಯ ಇರೋ ವ್ಯತ್ಯಾಸಾನ ಗುರುತು ಹಿಡಿದು ಯಾವ್ ಯಾವ್ ತೊರೆಗೆ ಯಾವ್ ಯಾವ್ ಹೆಸರು ಅಂತ ನೀವೇ ಕಂಡುಹಿಡೀರಿ. ಓಕೇನಾ?

ಮೂಲ

4. ಸಾಥೋಡಿ

ಯಲ್ಲಾಪುರದಿಂದ ಸುಮಾರು 32 ಕಿಲೋ ಮೀಟರ್ ದೂರದಲ್ಲಿರೋ ಈ ಸಥೋಡಿ ಜಲಪಾತದ ಸುತ್ತಾ ಮುತ್ತಾ ಎಲ್ಲೆಲ್ಲಿ ನೋಡುದ್ರೂ ಹಸ್ರೋ ಹಸ್ರು. ದಟ್ಟವಾದ ಕಾಡಿನ್ ಪ್ರದೇಶದ ಮಧ್ಯದಲ್ಲಿರೋ ಈ ಜಲಪಾತ ಒಳ್ಳೆ ಪಿಕ್ನಿಕ್ ಸ್ಪಾಟ್. ಬೇರೆ ಬೇರೆ ಜಾಗಗಳಿಂದ ಹರಿದು ಬರೋ ನೀರಿನ್ ತೊರೆಗಳು, ಕಲ್ಲರಮನೆ ಘಾಟ್ ಅನ್ನೋ ಜಾಗದಲ್ಲಿ ಸೇರ್ಕೊಂಡು, ಸುಮಾರು 15 ಮೀಟರ್ ಎತ್ತರದಿಂದ ಧುಮುಕತ್ತೆ. ಅದೇ ಸಥೋಡಿ ಜಲಪಾತ. ಈ ಜಲಪಾತ ಹರಿದು ಮುಂದೆ ಕೊಡಸಲ್ಲಿ ಅಣೆಕಟ್ಟಿನ ಹಿನ್ನೀರನ್ನ ಸೇರತ್ತೆ. ಆಗತಾನೇ ಮಳೆಗಾಲ ಮುಗಿದು ಚಳಿ ಶುರುವಾಗಿರ್ಬೇಕು, ಆ ಸಮಯದಲ್ಲಿ ಈ ಸಥೋಡಿ ಜಲಪಾತಕ್ಕೆ ಹೋದ್ರೆ, ನೋಡಕ್ಕೆ ಎರಡು ಕಣ್ಣೂ ಸಾಲಲ್ಲ!

ಮೂಲ

5. ಉಂಚಳ್ಳಿ

ಸಿರ್ಸಿ ಇಂದ ಬರೀ 25 ಕಿಲೋ ಮೀಟರ್ ದೂರದಲ್ಲಿರೋ ಈ ಉಂಚಳ್ಳಿ ಜಲಪಾತ ಎಷ್ಟು ಅಡಿಯಿಂದ ಧುಮುಕತ್ತೆ ಅಂತ ಕೇಳುದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ. ಹೆಚ್ಚು ಕಮ್ಮಿ 116 ಅಡಿ! ಹಾಗೇ ಧುಮುಕಿ, ಕೆಳಗಿರೋ ಅಘನಾಶಿನಿ ನದೀನ ಸೇರ್ಕೊಂಡು ಇನ್ನೂ ದೊಡ್ಡದಾಗತ್ತೆ. ಆ ದೊಡ್ಡ ತೊರೆ, ಪಶ್ಚಿಮ ಘಟ್ಟದ ಸಹ್ಯಾದ್ರಿ ಬೆಟ್ಟದ ಮಧ್ಯ ಹರ್ಕೊಂಡ್ ಹೋಗತ್ತೆ. ಕಣ್ಣಿಗ್ ಹಬ್ಬ ಕೊಡೋ ದೃಶ್ಯ ಇದು. ಮಳೆಗಾಲ್ದಲ್ಲಂತೂ ಕೇಳದೇ ಬೇಡ ಈ ಜಲಪಾತದ್ ವೈಭೋಗ! ಇನ್ನು ಬ್ರಿಟಿಷರು, ಇದನ್ನ ಲಶಿಂಗ್ಟನ್ ಫಾಲ್ಸ್ ಅಂತಾನೂ ಕರೀತಿದ್ರಂತೆ. ಯಾಕಂದ್ರೆ ಕಾಡಿನ್ ಮಧ್ಯ ಬಚ್ಚಿಟ್ಟುಕೊಂಡಿದ್ದ ಈ ಉಂಚಳ್ಳಿ ಜಲಪಾತಾನ ಮೊದ್ಲು ಕಂಡು ಹಿಡಿದಿದ್ದು ಈ ಹೆಸ್ರಿನ್ ಬ್ರಿಟಿಷ್ ಅಧಿಕಾರಿನೇ.

ಮೂಲ

6. ಇರುಪ್ಪು

ಮಡಿಕೇರಿಯಿಂದ ಇರುಪ್ಪು ಜಲಪಾತ 50 ಕಿಲೋ ಮೀಟರ್ ದೂರದಲ್ಲಿದೆ. ಅಯ್ಯೋ ಹೋಗ್ರಿ… ಅಷ್ಟೊಂದ್ ದೂರಾನಾ ಅಂತ ಬೈಕೊತಿದೀರಾ? ಹಾಗಿದ್ರೆ ಇನ್ನೊಂದ್ ಸಖತ್ತಾಗಿರೋ ಜಾಗದಿಂದ ಹೇಳ್ತಿವಿ ಕೇಳಿ. ನಾಗರಹೊಳೆ ಅಭಯಾರಣ್ಯದಿಂದ ಇಲ್ಲಿಗೆ ಜಸ್ಟ್ 20 ಕಿಲೋ ಮೀಟರ್ ಅಷ್ಟೇ! ಬ್ರಹ್ಮಗಿರಿ ತುತ್ತ ತುದೀನಲ್ಲಿ ಹುಟ್ಟೋ ಈ ಜಲಪಾತ, ಬರೋಬ್ಬರಿ 170 ಅಡಿಯಿಂದ ಕೆಳಕ್ಕೆ ಧುಮುಕಿ, ಎರಡು ಬೇರೆ ಬೇರೆ ತೊರೆಗಳಾಗಿ ಹರಿಯತ್ತೆ.

ಮೂಲ

7. ಚುಂಚನಕಟ್ಟೆ

ಮೈಸೂರ್ ಹತ್ರ ಇರೋ ಚುಂಚನಕಟ್ಟೆ ಅನ್ನೋ ಹಳ್ಳಿನಲ್ಲಿ ಈ ಜಲಪಾತ ಹುಟ್ಟತ್ತೆ. ಅದೂ ಯಾವ್ ನದಿಯಿಂದ ಅಂತೀರ, ನಮ್ಮ ಜೀವನದಿ ಕಾವೇರಿ ಇಂದ ಕಣ್ರಿ. ಕಾವೇರಿ ನದಿಯಿಂದ ಹುಟ್ಟೋ ಈ ತೊರೆ, ಮುಂದೆ ಪಶ್ಚಿಮ ಘಟ್ಟದಲ್ಲಿ ಪುಟಾಣಿ ಜಲಪಾತವಾಗಿ ಹರಿಯತ್ತೆ. ಪುಟಾಣಿ ಅಂತ ಯಾಕ್ ಹೇಳ್ತಿದಿವಿ ಅಂದ್ರೆ ಇದು ಧುಮುಕೋದು ಜಸ್ಟ್ 20 ಮೀಟರ್ ಎತ್ತರದಿಂದ. ಅದೂ ಎರಡು ಹಂತದಲ್ಲಿ. ಅದೆಷ್ಟು ಸಿನಿಮಾ ಶೂಟಿಂಗ್ ಇಲ್ಲಿ ನಡೆದಿದ್ಯೋ… ಲೆಕ್ಕಾನೇ ಇಲ್ಲ. ಇನ್ನು ಕಾವೇರೀಲಿ ಹುಟ್ಟೋ ಈ ಪುಟ್ಟ ಜಲಪಾತ, ಮುಂದೆ ವಿಶಾಲವಾದ ಕಾವೇರಿನೇ ಸೇರ್ಕೊಂಡು ಹರಿಯತ್ತೆ.

ಮೂಲ

8. ಗೊಡ್ಚಿನಮಲ್ಕಿ

ಇದಿರೋದು ಬೆಳಗಾವಿ ಜಿಲ್ಲೆಯ ಹಚ್ಚ ಹಸುರಿನ ಕಣಿವೇನಲ್ಲಿ. ಇನ್ನು ಈ ಜಲಪಾತ ಎರಡು ಭಾಗವಾಗಿ ಹರಿಯತ್ತೆ. ಮೊದುಲ್ನೇದು, ಮಾರ್ಕಂಡೇಯ ನದಿ ಸುಮಾರು 25 ಮೀಟರ್ ಅಡಿಯಿಂದ ಧುಮುಕಿ, ಮುಂದೆ ಒರಟಾಗಿರೋ ಒಂದು ಕಣಿವೆ ಕಡೆ ಹರಿಯತ್ತೆ. ಅಲ್ಲಿಂದ ಮತ್ತೆ ಸುಮಾರು 20 ಮೀಟರ್ ಧುಮುಕಿ, ಪುಟ್ಟ ಜಲಪಾತ ಸೃಷ್ಟಿ ಮಾಡತ್ತೆ.

ಮೂಲ

9. ಗೋಕಾಕ್

ಈ ಗೋಕಾಕ್ ಜಲಪಾತ ಇರೋದ್ ಕೂಡ ಬೆಳಗಾವಿ ಜಿಲ್ಲೆನಲ್ಲೇ. ಇದನ್ನ ಪುಟ್ಟ ನಯಾಗರ ಅಂತ ಕರೀಬೋದು. ಅಷ್ಟು ಸಾಮ್ಯತೆ ಇದೆ ಎರಡರ ಮಧ್ಯ. ಘಟಪ್ರಭ ನದಿ ವಿಶಾಲವಾಗಿ ಹರ್ಕೊಂಡ್ ಬಂದು, ಸ್ಫಟಿಕ ಶಿಲೆಯಿಂದ ನಿರ್ಮಾಣ ಆಗಿರೋ ದೊಡ್ಡ ಕಲ್ಲುಬಂಡೆಗಳ ಮೇಲಿಂದ ಒರಟಾಗಿರೋ ಕಣಿವೆಗೆ ಧುಮುಕತ್ತೆ. ಮೇಲೆ ನಿಂತು ಆ ದೃಶ್ಯ ನೋಡುದ್ರೆ ಯಪ್ಪಾ! ಒಂದ್ ಕ್ಷಣ ಹೃದಯ ನಿಂತು, ಮತ್ತೆ ಹೊಡ್ಕೊಳಕ್ಕೆ ಶುರುವಾಗತ್ತೇನೋ ಅನ್ಸತ್ತೆ. ಇನ್ನು, ಕೆಳಗೆ ಹರ್ಕೊಂಡ್ ಬಂದ್ಮೇಲೆ ಈ ಜಲಪಾತ ನೋಡಕ್ಕೆ ಕುದುರೆ ಲಾಳದ ಆಕಾರದಲ್ಲಿ ಕಾಣತ್ತೆ.

ಮೂಲ

10. ಕಲ್ಹಟ್ಟಿ

ಕಾಳಹಸ್ತಿ ಜಲಪಾತ ಅಂತಾನೂ ಕರುಸ್ಕೊಳೋ ಈ ಕಲ್ಹಟ್ಟಿ ಜಲಪಾತ ಇರೋದು ಚಿಕ್ಕಮಗಳೂರ್ ಜಿಲ್ಲೇನಲ್ಲಿ. ಇನ್ನು ಈ ಜಲಪಾತ ಹರಿದು ಬರೋ ದೃಶ್ಯ ಎಷ್ಟು ಮನೋಹರವಾಗಿರತ್ತೆ ಅಂದ್ರೆ ಮಾತಲ್ಲಿ ಖಂಡಿತಾ ಹೇಳಕ್ಕಾಗಲ್ಲ ಕಣ್ರಿ. ಚಂದ್ರದ್ರೋಣ ಪರ್ವತದಿಂದ ಬಳ್ಳಿ ಥರ ಕುಣಿದು ಕುಣಿದು ಹರಿದು ಬರೋ ಇದು, ಸುಮಾರು 400 ಅಡಿ ಎತ್ತರದಿಂದ ಧುಮುಕತ್ತೆ. ಇನ್ನು, ಜಲಪಾತದ್ ಕೆಳಗಡೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಕೂಡ ಇದೆ. ಅಲ್ಲಿಗೂ ಹೋಗ್ ಬರ್ಬೋದು.

ಮೂಲ

ಏನು? ಈ ಜಲಪಾತಗಳ ಬಗ್ಗೆ ಕೇಳಿ ಅಲ್ಲಿಗ್ ಒಂದ್ಸರ್ತಿ ಹೋಗ್ಬರ್ಬೇಕು ಅನ್ಸ್ತಿದ್ಯಾ? ಇನ್ಯಾಕ್ ತಡ… ಆದಷ್ಟ್ ಬೇಗ ಒಂದ್ ಟ್ರಿಪ್ ಹಾಕೇಬಿಡಿ!