https://s3.scoopwhoop.com/anj/sareemast/112424631.jpg

ಹೆಣ್ಣಮಕ್ಕಳಿಗೆ ಸೀರಿ ಎಷ್ಟ ಇದ್ರೂ ಕಮ್ಮಿನ. ಅದಕ್ಕ ತಕ್ಕಂಗ ನಮ್ಮ ದೇಶದಾಗ ಎಂತೆಂಥಾ ಸೀರಿ ಸಿಗ್ತಾವು ನೋಡ್ರಿ!

ನಮ್ಮ ರಾಜ್ಯದೊಳಗ ತಯಾರಾಗಂತ ಮೈಸೂರು, ಮೊಳಕಾಲ್ಮೂರು, ಇಳಕಲ್ ರೇಶ್ಮೆ ಸೀರೆಗಳ ಬಗ್ಗೆ  ನಿಮಗೆಲ್ಲಾ ಗೊತ್ತ ಐತಿ. ಅವೆಲ್ಲಾ ಎಷ್ಟ ಹೆಸರುವಾಸಿ ಅಂತ ನಿಮಗ ವಿವರಿಸ್ಬೇಕಾಗಿಲ್ಲ. ನಮ್ಮ ದೇಶದಾಗೂ ಇಂಥಾವ ಬ್ಯಾರೆಬ್ಯಾರೆ ರೇಶ್ಮೆ, ಕಾಟನ್ ಸೀರಿ ಸಿಗ್ತಾವು. ಸೀರಿ ಅಂದ್ರ ಸಾಮಾನ್ಯವಾಗಿ ಎಲ್ಲಾರಿಗೂ ಮೊದಲು ನೆನಪಾಗೋದು ಅಮ್ಮ. ಈಗ ಎಂಥಾವೆಲ್ಲ ಬಟ್ಟೆಗಳು ಬಂದಾವು ಆದ್ರ ಅವೆಲ್ಲಾ ಸೀರಿ ಮುಂದ ಯಾವ ಲೆಕ್ಕಕ್ಕು ಇಲ್ಲ.  ಕರ್ನಾಟಕದಾಚೆ ಸಿಗಂತ ಅಂದವಾದ  15 ರೀತಿಯ ಸೀರೆಗಳ ಬಗ್ಗೆ ಒಂದ ಸ್ವಲ್ಪ ವಿಷಯಗಳನ್ನ ಹಂಚ್ಕೊಳ್ಳಾಕತ್ತವಿ. ನಿಮ್ಮ ಓದನ್ನ ಮುಂದವರೆಸಿಮಾಹಿತಿ:-)

1. ಪಶ್ಚಿಮ ಬಂಗಾಳ – ತಂತ್ ಸೀರೆ

ಇದು ರೇಶ್ಮಿ ಸೀರ್ಯಲ್ಲ ಕಾಟನ್ ಸೀರಿ. ಪಶ್ಚಿಮ ಬಂಗಾಳದ ಹೆಣ್ಣಮಕ್ಕಳು ದಿವಸಾ ಉಳ್ಕೊಳಂತ ಸೀರಿ ಇದು. ಇದರ ವಿಶೇಷತೆ ಏನಪಾ ಅಂದ್ರ ಇದು ಭಾಳ ಹಗುರಿರ್ತೈತಿ, ದಡಿ ದೊಡ್ಡದಿರ್ತತಿ. ಇದನ್ನ ಉಟ್ಕೊಳ್ಳೊದು ಭಾಳ ಸುಲಭ. ಸೀರಿ ಮ್ಯಾಲಿನ ಬಣ್ಣಬಣ್ಣದ ಪ್ರಿಂಟುಗಳನ್ನ ನೋಡ್ತಿದ್ರ ಸಾಕು ಹೆಣ್ಣಮಕ್ಕಳು ಇದನ್ನ ತೊಗೊಳ್ಳದಂಗ ಇರಂಗೇಲ್ಲ!

2. ಕೇರಳ – ಕಸುವು ಸೀರೆ

ಕೇರಳದ ಹೆಸರಾದ ಸೀರಿ ಇದು. ಅವರು ಉಟ್ಕೊಳ್ಳೊ ಶೈಲಿ, ಅದಕ್ಕ ಹೊಂದೊ ಜಂಪರ ಹಾಕ್ಕೊಂಡ್ರ ಸಾಕು ಎಂಥಾ ಹೆಣ್ಣಮಕ್ಕಳನ್ನಾದ್ರೂ ಹತ್ರ ಸೇಳಿತೈತಿ.  ಈ ಸೀರೆಗಳ  ಸೇಳೆತ ಅಡಿಕ್ಕೊಂಡಿದ್ದು ಸೀರ್ಯಾಗಿನ ಗೋಲ್ಡನ್ ಬಾರ್ಡರನ್ಯಾಗ. ಈ ಬಾರ್ಡರಗೆ ಖರೆನ ಬಂಗಾರ ಉಪಯೋಗಿಸ್ತಾರಂತ. ಈತ್ತಿಚೆಗೆ ಕೃತಕವಾಗಿರೋ ನೂಲು ಬಳಸಾಕತ್ತಾರ. ಕಾಲ ಬದಲಾದಂಗ ಈ ಸೀರೆಗಳ ಡಿಸೈನೂ ಬದಲಾಕ್ಕೊಂತ ಬಂದತಿ.

3. ತಮಿಳುನಾಡು – ಕಾಂಜೀವರಂ ಸೀರೆ

ಸೀರೆಗಳ ರಾಣಿ ಇದ್ದಂಗ ಈ ಸೀರಿ. ಕಾಂಜಿವರಂನ್ಯಾಗ ಭಾಳ ವರ್ಷಗಳಿಂದ ಈ ಸೀರಿನ ನೇಯ್ಕೊಂತ ಬಂದಾರ. ಕಣ್ಮನ ಸೇಳಿಯೋ ಬಣ್ಣಗಳು, ಮೇಲ್ಮೈ  ಹೊಳಪಿನಿಂದ ಈ ಸೀರಿ ಹೆಣ್ಣಮಕ್ಕಳನ್ನ ಸೇಳಿತತಿ. ಭಾಳ ನಯವಾದಂತ ಒಂದೇ ಹೊದಿಕೆಯೊಳಗ ತಯಾರ ಮಾಡಿರ್ತಾರ.

4. ಒಡಿಶಾ – ಬೊಮ್ಕಾಯ್ ಸೀರೆ

ಒಂಬತ್ತು ಗಜ ಇರೋ ಸೀರೆ ಇದು. ಈ ವಿಶೇಷ ಅಂದ್ರ ಕಸೂತಿ, ಸೀರೆ ಮ್ಯಾಗಿನ ಕುಸುರಿ, ದಾರದ ವರ್ಕ್. ಸಿಲ್ಕ್ ಮತ್ತ ಕಾಟನ್ ಎರಡ್ರಾಗೂ ತಯಾರಾಕ್ಕತಿ ಇದು.. ಹಬ್ಬಹರಿ ದಿನದಾಗ ಉಟ್ಕೊಳ್ಳಂತ ಸೀರಿ ಇದು.

5. ಒಡಿಶಾ – ಸಂಬಾಲ್ಪುರಿ ಸೀರೆ

ಕೈಯಾಗ ನೇಯ್ದಿರೋ ಸಾಂಪ್ರದಾಯಕವಾದ ಸೀರಿ ಇದು. ಬ್ಯಾರಬ್ಯಾರೆ ರೀತಿಯ ತಂತ್ರಗಳನ್ನ ಬಳಸ್ಕೊಂಡು ಈ ಸೀರಿನ ತಯಾರ ಮಾಡ್ತಾರ. ನೇಯೋದಕ್ಕಿಂತ ಮೊದಲು ನೂಲಿಗೆ ಬಣ್ಣ ಹಾಕಿ ತಯಾರ ಮಾಡೊದ್ರಿಂದ ಈ ಸೀರೆ ಬಣ್ಣ ಹೋಗಂಗಿಲ್ಲ.

6. ಮಹಾರಾಷ್ಟ್ರ – ಪೈಠಾಣಿ ಸೀರೆ

ಔರಂಗಾಬಾದನ್ಯಾಗ ಈ ಸೀರಿನ ತಯಾರ ಮಾಡ್ತಾರ. ಭಾಳ ಗ್ರ್ಯಾಂಡಾಗಿ ಕಾಣ್ತತಿ. ಜರಿ ದಡಿ, ನವಿಲಿನ ಚಿತ್ರನ ಈ ಸೀರೆ ವಿಶೇಷತೆ.

7. ಗುಜರಾತ್ – ಬಾಂಧನಿ ಸೀರೆ

ಬಂಧನ್ ಪದದಿಂದ ಈ ಸೀರೆಗೆ ಹೆಸರ ಬಂದಿತಿ. ಬಂಧನ್ ಅಂದ್ರ ಸಂಬಂಧ ಅಂತರ್ಥ. ಇದಕ್ಕ ಬಳಸೋ ಬಣ್ಣಗಳು ಸೀರಿ ಜತಿಗೆ ಥಳುಕು ಹಾಕ್ಕೊಂಡಿರೋದ್ರಿಂದ ಈ ಹೆಸರು ಬಂದಿತಿ. ಗುಜರಾತ್ ಮತ್ತ ರಾಜಸ್ತಾನದಾಗ ಈ ಸೀರಿ ಭಾಳ ಖ್ಯಾತಿ ಪಡ್ಕೊಂಡತಿ. ಗುಜರಾತಿನ ಖತ್ರಿ ಸಮುದಾಯ ಈ ಸೀರೆಗಳನ್ನ ನೇಯತೈತಿ.

8. ಅಸ್ಸಾಂ – ಮುಗ ಸೀರೆ

ರೇಶ್ಮಿಯ ಒಂದು ಭಾಗವಾಗಿರೋ ಮುಗ ಸಿಲ್ಕಿಂದ ಇದನ್ನ ತಯಾರ ಮಾಡ್ತಾರ. ಮುಗ ಸಿಲ್ಕ್ ಅಂದ್ರ ಅತ್ಯುತ್ತಮವಾದಂತಾದ್ದು. ಇಂಥಾ ರೇಶ್ಮಿ ಉಪಯೋಗಿಸೋದ್ರಿಂದ ಸೀರಿ  ಫಳಫಳ ಅಂತ ಹೊಳೀತಿರ್ತಾವು. ಭಾಳ ಚೊಲೋ ತಾಳಕಿನೂ ಬರ್ತತಿ. ರೇಶ್ಮಿ ಎಳಿಗಳು ಚಿನ್ನದ ಹಂಗ ಕಾಣ್ತಿರ್ತೈತಿ.

9. ವಾರಾಣಸಿ – ಬನಾರಸ್ ರೇಶ್ಮೆ ಸೀರೆ

ಬೆಳ್ಳಿ ಮತ್ತ ಬಂಗಾರದ ಜರಿಗೆ ಹೆಸರಾದ ಸೀರೆ ಇದು. ಪ್ರತಿ ಸೀರಿನೂ ಚಿನ್ನ ಮತ್ತ ಬೆಳ್ಳಿ ಬಳಸಿ ತಯಾರಿಸ್ತಾರ. ಒಂದು ಸೀರಿ ನೇಯ್ಬೇಕಾದ್ರ ಒಂದು ವರ್ಷ ಹಿಡಿತೈತಂತ. ಅಲ್ಲಿಗ ಇದು ಎಂಥಾ ಅದ್ಭುತವಾದ ಸೀರೆ ಅಂತ ಯೋಚನೆ ಮಾಡ್ರಿ. ಈವತ್ತ ಬ್ಯಾರೆ ಬ್ಯಾರೆ ರೀತಿಯ ಸೀರಿ ಬಂದಾವು.

10. ತೆಲಂಗಾಣ – ಪೋಚಂಪಲ್ಲಿ ಸೀರೆ

ತೆಲಂಗಾಣ ರಾಜ್ಯದ ಭೂದಾನ್  ಪ್ರದೇಶದೊಳಗ ಇದನ್ನ ತಯಾರ ಮಾಡ್ತಾರ. ರೇಶ್ಮಿ ಮತ್ತ ಕಾಟನ್ನಿಂದ ತಯಾರಾಕ್ಕತಿ. ಬಣ್ಣಗಳು, ಸೀರಿ ಮ್ಯಾಗಿನ ಡಿಸೈನಗಳು ಆಕರ್ಷಿಸ್ತಾವು. ಭಾಳ ಶ್ರೀಮಂತವಾಗಿ ಕಾಣಿಸೋ ಸೀರೆಗಳಿವು.

11. ಮಧ್ಯಪ್ರದೇಶ – ಚಾಂದೇರಿ ಸೀರೆ

ಹೂ ಇನ್ನೂ ವಜ್ಯಾತು ಅದಕ್ಕಿಂತಾನೂ ಹಗುರಾಗಿರೋ ಸೀರಿ ಇದಾಗೇತಿ. ಹತ್ತಿ, ರೇಶ್ಮೆ, ಜರಿ ಉಪಯೋಗಿಸಿ ಇದನ್ನ ತಯಾರ ಮಾಡ್ತಾರ. ನೋಡಾಕ ಭಾಳ ಸುಂದರವಾಗಿ ಕಾಣ್ತೈತಿ. ಉಟ್ಕೊಳ್ಳೊದು ಭಾಳ ಸುಲಭ

12. ತಮಿಳುನಾಡು – ಕೊನ್ರಾಡ್ ಸೀರೆ

ಟೆಂಪಲ್ ಸ್ಯಾರಿ ಅಂತಾನೇ ಹೆಸರುವಾಸಿ. ದೇವಸ್ಥಾನದ ಆಚಾರವಿಚಾರಗಳನ್ನ ಮಾಡಾಕ ಉಟ್ಕೊಳಂತ ಸೀರಿ ಇದು. ಈ ಕಾರಣಕ್ಕ ಇದಕ್ಕ ಆ ಹೆಸರ ಬಂದಿದ್ದು. ಭಾಲ ಅಗಲವಾದ ದಡಿ, ಪಟ್ಟೆ, ಚೌಕಾಕೃತಿ ಡಿಸೈನುಗಳಿಂದ ಇದು ತಯಾರಾಗಿರ್ತೈತಿ.

13. ರಾಜಸ್ತಾನ – ಲೆಹರಿಯಾ ಸೀರೆ

ಬಾಂಧನಿ ಸೀರೆ ಅಂಥಾದ ಇದು. ಆದರ ಇದನ್ನ ತಯಾರ ಮಾಡೋದು, ಇದಕ್ಕ ಬಳಸೋ ಬಣ್ಣಗಳಷ್ಟ ಬ್ಯಾರೆ ಇರ್ತಾವು. ಈ ಸೀರಿಯ ವಿಶೇಷತೆ ಅಂದ್ರ ಕಣ್ಮನ ಸೇಳಿಯೊ ಬಣ್ಣಗಳು.

14. ಪಂಜಾಬ್ – ಫೂಲ್ಕರಿ ಸೀರೆ

ಹೂವಿನ ಚಿತ್ರಗಳಿಂದ ಕೂಡಿದಂತ ಸೀರೆಗಳಿವು. ಪೂಲ್ಕರಿ ಅಂದ್ರ ಹೂವಿನ ಚಿತ್ತಾರ ಅಂತರ್ಥ. ಬಣ್ಣಬಣ್ಣದ ಹೂಗಳ ಚಿತ್ತಾರ ಈ ಸೀರೆಯ ಅಂದಾನ ಹೆಚ್ಚ ಮಾಡ್ತತಿ ಇದ ಇದರ ವಿಶೇಷ ಗುಣ. ಬಾಲಿವುಡ್ ಸಿನಿಮಾಗಳಲ್ಲಿ ಇದನ್ನ ಉಪಯೋಗ ಮಾಡಿದ ಮ್ಯಾಲೆ ಸಿಕ್ಕಾಪಟ್ಟೆ ಜನಪ್ರಿಯ ಆತು. ಖಾದಿ ಅಥವಾ ಕಾಟನ್ ಬಳಸಿ ಈ ಸೀರಿನ ತಯಾರಿ ಮಾಡ್ತಾರ.

15. ಲಕ್ನೋ – ಚಿಕನ್-ಕರಿ ಸೀರೆ

ಹೆಸರ ಒಂಥರಾ ವಿಚಿತ್ರ ಅನಸ್ತೈತಿ ಅಲ್ಲಾ? ಮಸ್ಲಿನ್ ಬಟ್ಟೆ ಉಪಯೋಗಿಸಿ ಈ ಸೀರಿನ ತಯಾರ ಮಾಡ್ತಾರ. ಈ ಸೀರಿ ಬಗ್ಗೆ ತಿಳ್ಕೊಂಡಿದ್ರ ಅಷ್ಟ ಇದನ್ನ ಕೊಂಡ್ಕೊಬೇಕು, ಇಲ್ಲಾಂದ್ರ ಟೋಪಿ ಹಾಕಿಸ್ಕೋಂತೀರ.

ನೀವ ಹೇಳ್ರಿ ಇದೆಲ್ಲಾನು ನೋಡಿ ಯಾವ ಹುಡುಗೀಗೆ / ಹೆಣ್ಣಮಕ್ಕಳಿಗೆ ತಾನೆ ಹಿಂದ ತೊಗೊಂಡಿರೋ ಸೀರೆಗಳೆಲ್ಲ ಒಂದೊಂದಾಗಿ ನೆನಪಾಕ್ಕಾವು? ಎಲ್ಲರೂ ಹೇಳೋದುನಾ ಸೀರೀನ ತೊಗೊಂಡಿಲ್ಲ‘, ‘ನಂಗೆ ಸೀರೀನೇ ಕೊಡ್ಸಿಲ್ಲಅಂತ. ಹೌದಲ್ಲ? 🙂 ತಕ್ಷಣ ನೆನಪ ಹಾರ್ತಾರ!