https://previews.123rf.com/images/ra3rn/ra3rn1201/ra3rn120100025/11934634-Four-variety-of-raisins-on-cutting-board-Stock-Photo-raisins.jpg

ಸುಮಾರು ೫೦೦೦ ವರ್ಷಕ್ಕಿಂತಾ  ಹಿಂದಿನಿಂದಲೂ ಒಣದ್ರಾಕ್ಷೀನ ಮನುಕುಲ ಉಪಯೋಗಿಸ್ತಾ ಇದೆ. ಗ್ರೀಕರು ಇದನ್ನ ಸಿಹಿ ತಿಂಡಿಗಳಲ್ಲಿ, ಉಪಹಾರಗಳ್ಳಲಿ ಬಳಸ್ತಾ ಇದ್ರಂತೆ. ನಮ್ಮ ಆಯುರ್ವೇದದಲ್ಲಿ ಇದ್ರ ಔಷಧೀಯ ಗುಣಗಳ ಬಗ್ಗೆ ಹೇಳಿದ್ದಾರೆ. ಒಣದ್ರಾಕ್ಷಿ ರುಚಿಯೂ ಸಿಹಿ, ಆರೋಗ್ಯಕ್ಕೂ ತುಂಬಾನೇ ಒಳ್ಳೇದು. ದ್ರಾಕ್ಷಿ ಹಣ್ಣನ್ನು ಬಿಸಿಲಲ್ಲಿ ಒಣಗಿಸಿ ಇದನ್ನು ತಯಾರಿಸ್ತಾರೆ. ಸಾಮಾನ್ಯವಾಗಿ ಇದು ಹೊಂಬಣ್ಣ ಅಥವಾ ಕಂದು ಬಣ್ಣದಲ್ಲಿರತ್ತೆ. ಆದರೆ ಇಂದು ಕಪ್ಪು ದ್ರಾಕ್ಷಿಯ ಒಣದ್ರಾಕ್ಷಿಯೂ ಸಿಗುತ್ತೆ. ದ್ರಾಕ್ಷಿಗಳ ತಳಿಯನ್ನು ಆಧರಿಸಿ ಕಪ್ಪು, ಕಂದು, ಚಿನ್ನದ ಹಳದಿ ಮೊದಲಾದ ಬಣ್ಣಗಲ್ಲೋ ಸಿಗುತ್ತೆ. ಒಣ ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಾಕ್ಟೇರಿಯಲ್ ಗುಣಗಳು, ಕಬ್ಬಿಣ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್ಗಳು ಹೆಚ್ಚಾಗೇ ಇದೆ. ಇನ್ನೂ ಸ್ವಲ್ಪ ಒಣದ್ರಾಕ್ಷಿ ಬಗ್ಗೆ ತಿಳ್ಕೋತೀರಂತೆ ಬನ್ನಿ.

1. ಕಣ್ಣಿನ ದೃಷ್ಟಿ ಕಾಪಾಡತ್ತೆ

ಸಾಮಾನ್ಯಾಗಿ ಕಣ್ಣಿನ ಆರೋಗ್ಯದ ಬಗ್ಗೆ ಯಾರೂ ಅಷ್ಟಾಗಿ ತಲೆ ಕೆಡಿಸ್ಕೊಳಲ್ಲ. ಆದ್ರೆ ವಯಸ್ಸಿಗೆ ತಕ್ಕ ಹಾಗೆ ನಮ್ಮ ದೃಷ್ಟಿ ಸ್ವಲ್ಪ ಸ್ವಲ್ಪಾನೆ ಮಂದ ಆಗ್ಬಹುದು, ದೃಷ್ಟಿ ದೋಷ ಶುರು ಆಗ್ಬಹುದು. ಆದ್ರೆ ಒಣದ್ರಾಕ್ಷಿ ತಿನ್ನೋದ್ರಿಂದ ಅದ್ರಲ್ಲಿರೋ ಆಂಟಿ ಆಕ್ಸಿಡೆಂಟ್ ಗುಣಗಳು ಅಷ್ಟು ಬೇಗ ನಮ್ಮ ದೃಷ್ಟಿ ಹಾಳಾಗದೆ ಇರೋ ಹಾಗೆ ಮಾಡುತ್ತೆ. ಇದ್ರಲ್ಲಿರೋ ಕೆರೆಟೊನೊಯ್ಡ್ ಹಾಗು ವಿಟಮಿನ್ ಎ ಸಹ  ಕಣ್ಣಿಗೆ ಸಂಭಂದಿಸಿದ ಕಾಯಿಲೆಗಳಾದ ಗ್ಲುಕೋಮಾ, ಕಣ್ಣಿನ ಪೊರೆಯಿಂದ ರಕ್ಷಿಸುತ್ತೆ.

ಮೂಲ

2. ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡಿಯತ್ತೆ

ಕ್ಯಾನ್ಸರ್ ಗೆ ಇದೆ ಸರಿಯಾದ ಔಷಧ ಅಂತ ಎಲ್ಲೂ ಹೇಳಿಲ್ಲ, ಆದ್ರೆ ಒಣ ದ್ರಾಕ್ಷಿಲಿರೋ ಆಂಟಿ ಆಕ್ಸಿಡೆಂಟ್ ಗುಣಗಳು ನಮ್ಮ ದೇಹದಲ್ಲಿ ಗಡ್ಡೆಗಳು ಬೆಳೆಯದಂತೆ ನೋಡಿಕೊಳ್ಳೋ ಮೂಲಕ ಕ್ಯಾನ್ಸರ್ ಬರದಂತೆ ನಮ್ಮ ದೇಹಕ್ಕೆ ರಕ್ಷಣೆ ಕೊಡತ್ತೆ. ಅಕಸ್ಮಾತ್ ಕ್ಯಾನ್ಸರ್ ಇದ್ರೂ ಅದು ಹೆಚ್ಚಾಗದಂತೆ ತಡೆಯುತ್ತೆ. ಅದ್ರಲ್ಲೂ ಮುಖ್ಯವಾಗಿ ಗ್ಯಾಸ್ಟ್ರಿಕ್ ಇಂದ ಬರೋ ಕ್ಯಾನ್ಸರ್ ಸೆಲ್ ಬೆಳಯದಂತೆ ನೊಡ್ಕೊಳತ್ತೆ.

3. ಮಲಬದ್ಧತೆ ಹೊಡೆದೋಡಿಸುತ್ತೆ 

ಸರಿಯಾಗಿ ಮಲ ವಿಸರ್ಜನೆ ಆಗೋದು ಆರೋಗ್ಯದ ದೃಷ್ಟಿಯಿಂದ ತುಂಬಾ ಮುಖ್ಯ. ಸಾಮಾನ್ಯವಾಗಿ ನಾರಿನಂಶ ಇರ್ರೋ ಪದಾರ್ಥ ತಿಂದ್ರೆ ಚೆನ್ನಾಗಿ ಜೀರ್ಣ ಆಗುತ್ತೆ ಅನ್ನೋದು ಗೊತ್ತೇ ಇದೆ. ಹಾಗೆ ಒಣ ದ್ರಾಕ್ಷಿನೂ ನಾವು ತಿನ್ನೋ ಆಹಾರ ಪದಾರ್ಥ ಸರಾಗವಾಗಿ ಪಚನ ಆಗೋ ಹಾಗೆ ಮಾಡತ್ತೆ. ಅಷ್ಟೇ ಅಲ್ಲ. ಕರುಳಿನ ಕ್ಯಾನ್ಸರ್ಗೆ ಕಾರಣವಾದ ವಿಷಕಾರಿ ಪಿತ್ತರಸ ದ್ರವಗಳನ್ನೂ ಕಡಿಮೆ ಮಾಡುತ್ತೆ.

4. ರಕ್ತಹೀನತೆಯಿಂದ ರಕ್ಷಿಸುತ್ತೆ

ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಹಾಗೂ ವಿಟಮಿನ್ ಬಿ ಸ್ವಲ್ಪ ಹೆಚ್ಚಾಗೇ ಇರುತ್ತೆ. ಇದನ್ನ ತಿನ್ನೋದ್ರಿಂದ ಅದ್ರಲ್ಲೂ ನೆನೆಸಿಟ್ಟು ತಿನ್ನೋದ್ರಿಂದ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗುತ್ತೆ. ನಮ್ಮ ರಕ್ತದಲ್ಲಿರೋ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಿಸಿ, ನಮಗೆ ಅನಿಮಿಯಾ ಬರದಂತೆ ನೋಡಿಕೊಳ್ಳುತ್ತೆ, ರೋಗ ನಿರೋಧಕ ಶಕ್ತೀನೂ ಹೆಚ್ಚುತ್ತೆ.

5. ಮೂಳೆ ಗಟ್ಟಿ ಮಾಡತ್ತೆ

ಇದ್ರಲ್ಲಿ ಕ್ಯಾಲ್ಸಿಯಂ ತುಂಬಾನೇ ಇದೆ. ಇದ್ರಲ್ಲಿರೋ ಇನ್ನೂ ಹಲವು ಸೂಕ್ಷ್ಮ ಪೋಷಕಾಂಶಗಳು ಈ ಕ್ಯಾಲ್ಸಿಯಂನ ಮೂಳೆಗಳು ಹೀರ್ಕೊಳಕ್ಕೆ ನೆರವಾಗೋ ಮೂಲಕ ಮೂಳೆಗಳು ಆರೋಗ್ಯಕರ ಮತ್ತು ಗಟ್ಟಿ ಆಗೋ ಹಾಗೆ ಮಾಡತ್ತೆ. ಇವಿಷ್ಟೇ ಅಲ್ಲ, ಮಹಿಳೆಯರಿಗೆ ಅದ್ರಲ್ಲೂ ಮುಟ್ಟು ನಿಂತಾಗ ಆಗುವ ಖನಿಜಗಳ ಹಾಗು ಕ್ಯಾಲ್ಸಿಯಂ ಕೊರತೆನೂ ಆಗದ ಹಾಗೆ ತಡೆಯುತ್ತೆ.

ಮೂಲ

6. ಹಲ್ಲು ಹುಳುಕಾಗ್ದಿರೋ ಹಾಗೆ ನೋಡ್ಕೊಳತ್ತೆ

ದ್ರಾಕ್ಷಿಲಿರೋ ಒಲಿಯೋನೊಲಿಕ್ ಆಸಿಡ್ಗೆ ರೋಗನಿರೋಧಕ ಶಕ್ತಿ ಇದೆ. ಇದು ಹುಳುಕು ಹಲ್ಲು ಉಂಟುಮಾಡೋ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತೆ. ಇನ್ಮೇಲೆ ಈ ದ್ರಾಕ್ಷಿ ತಿನ್ನೋವಾಗ ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನಿ. ಇದ್ರಿಂದ ನಿಮ್ಮ ಬಾಯಿ ಶುದ್ಧವಾಗಿರುತ್ತೆ.

7. ತೂಕ ನಿರ್ವಹಣೆಗೂ ಸಹಾಯ ಮಾಡುತ್ತೆ

ನೀವು ತೂಕ ಹೆಚ್ಚಿಸ್ಕೊಳಕ್ಕೆ… ಕಡಿಮೆ ಮಾಡ್ಕೊಳಕ್ಕೆ…ಎರಡಕ್ಕೂ ಇದು ತುಂಬಾನೇ ಸಹಾಯಕಾರಿ. ನಿಮ್ಮ ತೂಕ ಹೆಚ್ಚಾಗಿದ್ರೆ, ಆಹಾರದ ಪಥ್ಯದಲ್ಲಿದ್ದೀರಿ ಅಂತ ದ್ರಾಕ್ಷಿ ತಿನ್ನೋದನ್ನ ಬಿಡ್ಬೇಕಾಗಿಲ್ಲ. ಅದು ಸಿಹಿಯಾಗಿದ್ರೂ ಅದ್ರಲ್ಲಿರೋ ನಾರಿನಂಶ ನಿಮಗೆ ಬೇಗ ಹಾಗು ಹೆಚ್ಚು ಹೊಟ್ಟೆ ಹಸಿ ಆಗ್ದೇ ಇರೋ ಹಾಗೆ ನೋಡ್ಕೊಳತ್ತೆ. ನೀವು ಮಾಡ್ಬೇಕಾಗಿರೋದು ಇಷ್ಟೇ … ನಿಮ್ಮ ಊಟದ ಮಧ್ಯದಲ್ಲಿ ತಿನ್ನೋ ಕೋಸಂಬ್ರಿ, ಕಾಳುಗಳು, ಹಸಿ ತರಕಾರಿಗಳು, ಇದರ ಜೊತೆ ಒಣದ್ರಾಕ್ಷಿನೂ ತಿನ್ಬೇಕು.

ತೂಕ ಹಚ್ಚಿಸ್ಕೊಬೇಕು ಅಂತ ನೋಡ್ತಿರೋವ್ರು ಸರಿಯಾದ ಪ್ರಮಾಣದಲ್ಲಿ ಇದನ್ನ ತಿನ್ಬೇಕು. ಇದ್ರಲ್ಲಿರೋ ಫ್ರುಕ್ಟೋಸ್, ಗ್ಲುಕೋಸ್ ಹಾಗು ಸಕ್ಕರೆ ಅಂಶಗಳು ನಿಮ್ಮ ತೂಕ ಹೆಚ್ಚಾಗಕ್ಕೆ ಖಂಡಿತ ಸಹಾಯ ಮಾಡುತ್ತೆ.

ಇದು ತೂಕ ಹೆಚ್ಚು ಮತ್ತು ಕಮ್ಮಿ ಮಾಡೋ ಎರಡೂ ಪ್ರಕ್ರಿಯೆಯಲ್ಲಿ ಎಷ್ಟು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತೆ ಅಂತ ಯಾವುದೇ ಪ್ರಯೋಗಳಿಂದ ದೃಢಪಟ್ಟಿಲ್ಲ. ಆದ್ರೆ ವೈದ್ಯರು ಇದ್ರಲ್ಲಿರೋ ಔಷದಿಯ ಗುಣಗಳಿಂದ ಇದನ್ನ ತಿನ್ನಕ್ಕೆ ಹೇಳ್ತಾರೆ. ಬೇಕಾದ್ರೆ ಒಂದ್ಸಲ ನಿಮ್ಮ ದಯೆಟೀಷಿಯನ್ ಕೇಳಿ ಆಮೇಲೆ ತಿನ್ನಕ್ಕೆ ಶುರು ಮಾಡಿ.

ಮೂಲ

8. ಬಿ ಪಿ ನಿಯಂತ್ರಣದಲ್ಲಿರ್ಸತ್ತೆ

ಹತ್ತಾರು ವರ್ಷಗಳ ಹಿಂದಕ್ಕೆ ಹೋಲಿಸಿದರೆ, ನಮ್ಮ ಜೀವನ ಶೈಲಿ ಈಗ ಸಾಕಷ್ಟು ಬದಲಾಗಿದೆ. ಈಗಿನ ಕಾಲದಲ್ಲಿ ನಾವೆಲ್ಲ ಮಾಡೋದು ಹೆಚ್ಚು ಕೂತು ಮಾಡುವಂತ ಕೆಲಸಗಳನ್ನೇ. ಮನೆಗೆ ಏನಾದ್ರು ಬೇಕಂದ್ರೂ ಇರೋ ಜಾಗಕ್ಕೆ ತಂದು ಕೊಡೊ ಹಾಗೆ ಆರ್ಡರ್ ಮಾಡ್ತೀವಿ. ಯಾವುದೇ ರೀತಿಯ ದೈಹಿಕ ಶ್ರಮವಾಗೋ ಕೆಲಸ ಮಾಡೋದೇ ಇಲ್ಲ. ಜೊತೆಗೆ ಸಾಕಷ್ಟು ಜಂಕ್ ಫುಡ್ ತಿಂತೀವಿ. ಇದ್ರಿಂದಾನೆ ನಮ್ಮಲ್ಲಿ ಬಹಳ ಜನಕ್ಕೆ ಜಾಸ್ತಿ ರಕ್ತದೊತ್ತಡ ಆಗೋದು.

ಸ್ವಲ್ಪ ವ್ಯಾಯಾಮದ ಜೊತೆಗೆ ಉಪ್ಪು ಕಡಿಮೆ ತಿನ್ನೋದು ಖಂಡಿತ ಸಹಾಯ ಮಾಡುತ್ತೆ. ಆದ್ರೆ ಇವೆಲ್ಲದರ ಜೊತೆಗೆ ಒಣದ್ರಾಕ್ಷಿ ತಿನ್ನೋದ್ರಿಂದ ಅದ್ರಲ್ಲಿರೋ ಪೊಟ್ಯಾಶಿಯಂ, ಕಬ್ಬಿಣ, ವಿಟಮಿನ್ ಬಿ ಅಂಶಗಳು ಕೆಂಪು ರಕ್ತ ಕಣಗಳ ಸಂಖ್ಯೆ ಸರಿಯಾದ ಪ್ರಮಾಣದಲ್ಲಿ ಇರೋ ಹಾಗೆ ಕಾಪಾಡಿ ಜಾಸ್ತಿ ರಕ್ತದೊತ್ತಡ ಆಗ್ದೇ ಇರೋ ತರ ನೋಡ್ಕೊಳತ್ತೆ.

9. ಹೃದಯದ ತೊಂದರೆಗಳಿಂದ ಕಾಪಾಡತ್ತೆ

ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದಲ್ಲಿ ಸುಲಭವಾಗಿ ಕರಗುವ ನಾರು ಹಾಗು ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗೋದನ್ನ ತಡೆದು ಒಳ್ಳೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಕ್ಕೆ ನೆರವಾಗುತ್ತೆ. ಹೀಗೆ ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಣೆ ಕೊಡತ್ತೆ.

ಮೂಲ

10. ಮತ್ತಷ್ಟು ಉಪಯೋಗಗಳು

ವೈರಸ್ ಹಾಗೂ ಬಾಕ್ಟೇರಿಯಾಗಳ ಸೋಂಕಿಂದ ಬರೋ ಕೆಲವು ಜ್ವರಗಳಿಂದ ನಮ್ಮನ್ನ ರಕ್ಷಿಸುತ್ತೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಾಕ್ಟೇರಿಯಲ್ ಗುಣಗಳು ನಮ್ಮ ದೇಹಕ್ಕೆ ವೈರಸ್, ಬಾಕ್ಟೇರಿಯಾ ಸೋಂಕುಗಳಿಂದ ಬರೋ ಜ್ವರಗಳು ಬರದಂತೆ ನೋಡಿಕೊಳ್ಳುತ್ತವೆ.

ಹೊಳೆಯೋ ಆರೋಗ್ಯಕರ ಚರ್ಮ ನಿಮ್ಮದಾಗುತ್ತೆ

ಇದು ಚರ್ಮ ಸುಕ್ಕುಗಟ್ಟುವುದು, ಚರ್ಮಕ್ಕೆ ಹಾನಿ ಮಾಡೋ ರಾಡಿಕಲ್ಸ್ ವಿರುದ್ಧ ಹೋರಾಡಿ, ಚರ್ಮ ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತೆ.  

ಲೈಂಗಿಕ ಶಕ್ತಿ ಹೆಚ್ಚಿಸತ್ತೆ

ದ್ರಾಕ್ಷಿಯಲ್ಲಿ ಇರೋ ಆರ್ಜಿನೈನ್ ಅನ್ನೋ ಅಂಶ ಗಂಡಸರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುತ್ತಂತೆ. ಅದಕ್ಕೆ ಇರ್ಬೇಕು ನವ ದಂಪತಿಗಳಿಗೆ ಕೆಲವೊಂದು ಕಡೆ ಅದನ್ನ ಸಂಪ್ರದಾಯದಂತೆ ಕೊಡ್ತಾರೆ.

ಯಾರು ಒಣದ್ರಾಕ್ಷಿ ತಿನ್ಬಾರ್ದು?

ಸಕ್ಕರೆ ಕಾಯಿಲೆ ಇರೋವ್ರು! ಸಾಮಾನ್ಯವಾಗಿ ಎಲ್ಲರೂ ಇದನ್ನ ತಿನ್ನಬಹುದು, ದಿನಕ್ಕೆ ೮೦-೯೦ ರಷ್ಟು ದ್ರಾಕ್ಷಿ ತಿಂದ್ರೆ, ಒಂದು ದಿನದಲ್ಲಿ ಒಬ್ಬ ಮನುಷ್ಯನಿಗೆ ಎಷ್ಟು ಹಣ್ಣುಗಳ ಅಗತ್ಯ ಇದೆಯೋ ಅದರ ಅರ್ಧದಷ್ಟನ್ನ ಇದು ಪೂರೈಸುತ್ತೆ. ಅಗತ್ಯವಿದ್ದರೆ ನಿಮ್ಮ ವೈದ್ಯರನ್ನ ಕೇಳಿ ಆಮೇಲೆ ತಿನ್ನಬಹುದು.

ಡಿಹೈಡ್ರೇಷನ್ ಆಗಿರೋವ್ರು ಇದನ್ನ ತಿನ್ನದೇ ಇದ್ರೆ ಒಳ್ಳೇದು. ಆ ಸಮಯದಲ್ಲಿ ತಿನ್ನೋದ್ರಿಂದ ಭಾರೀ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮುಂತಾದ ತೊಂದರೆ ಉಂಟಾಗಬಹುದು.

ಒಣ ದ್ರಾಕ್ಷೀನ ನೀರಲ್ಲಿ ನೆನೆಸಿ ಬೆಳಗ್ಗೆ ತಿನ್ನೋದ್ರಿಂದ ಏನ್ ಉಪ್ಯೋಗ?

ರಾತ್ರಿಯೆಲ್ಲಾ ನೀರಲ್ಲಿ ದ್ರಾಕ್ಷಿ ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೇಲಿ ಈ ದ್ರಾಕ್ಷಿ, ಅದನ್ನ ನೆನೆಸಿದ ನೀರು… ಎರಡನ್ನೂ ಸೇವಿಸೋದ್ರಿಂದ ಕರುಳಿನ ಸರಾಗ ಚಲನೆ ಆಗಕ್ಕೆ, ನಿಮ್ಮ ದೇಹ ತಂಪಾಗಿ ಇರಕ್ಕೆ ಸಹಾಯ ಆಗತ್ತೆ.

ನೋಡಿದ್ರಲ್ಲಾ? ತುಂಬಾ ರುಚಿಯಾಗಿರೋ… ಹಾಗೇ, ಆರಾಮಾಗಿ ಸಿಗೋ ಒಣದ್ರಾಕ್ಷಿಯಿಂದ ಎಷ್ಟ್ ಉಪಯೋಗ ಇದೆ ಅಂತ? ಒಣದ್ರಾಕ್ಷಿ ತಿನ್ನೋ ಅಭ್ಯಾಸ ಇಲ್ಲ ಅಂದ್ರೆ ಶುರುಮಾಡ್ಕೊಳಿ ಮತ್ತೆ….