http://images.indianexpress.com/2014/10/breakup-main.jpg

ಜೀವನದಲ್ಲಿ ನಿಮಗೆ ಪ್ರೇರಣೆ ಕೊಡೊ ಅಂತ ಹಲವಾರು ಪುಸ್ತಕಗಳನ್ನ ನೀವು ಓದಿರಬಹುದು, ಸಿನಿಮಾ ನೋಡಿರಬಹುದು, ಕೇಳೇ ತಿಳ್ಕೊಂಡಿರಬಹುದು, ಇದ್ರಿಂದ ನಿಮಗೆ ಲೋಕಜ್ಞಾನನೂ ಹಚ್ಚಿರಬಹುದು. ಆದ್ರೆ ಇದೆಲ್ಲದ್ರಿಂದ ನೀವು ಎಷ್ಟು ವಿವೇಕ ಕಲ್ತಿದ್ದೀರಿ? ಇದನ್ನೆಲ್ಲಾ ಒಂದು ಕ್ಷಣ ಮರೆತು ನಿಮ್ಮ ಜೀವನದಲ್ಲಿ ಇವತ್ತು ನೀವು ಏನಾದ್ರು ಸಾಧನೆ ಮಾಡಿ, ನಿಮ್ಮನ್ನ ಎಲ್ಲರು ಗುರುತಿಸೋತರ ಇದ್ದೀರಾ ಅಂದ್ರೆ ನೀವು ಈ ಮಟ್ಟಕ್ಕೆ ಬೇಕೇಯಕ್ಕೆ ಯಾರ್ಯಾರು ಎಷ್ಟು ಕಷ್ಟ ಪಟ್ಟಿದ್ದಾರೆ? ನಿಮಗೆ ಬೇಕಾದ್ದನ್ನೆಲ್ಲ ಕೊಡಕ್ಕೆ ಯಾರು ಪ್ರಪಂಚಾನೇ ತಲೆ ಕೆಳಗೆ ಮಾಡಿದ್ದಾರೆ ಅನ್ನೋದನ್ನ ಒಂದ್ಸಲ ಯೋಚಿಸಿ.

ನಿಮ್ಮ ಪ್ರೀತಿಪಾತ್ರರಿಂದ ಯಾವುದೋ ಕಾರಣಕ್ಕೆ ನೀವು ಬೇರೆ ಆಗಿರ್ಬಹುದು ಆದ್ರೆ ನಿಮ್ಮ, ಅವರ ಸಂಭಂದಗಳ ಪಾತ್ರ ಏನು ಆನೋದನ್ನ ತಿಳ್ಕೊಳಿ. ಅವರ ಮೇಲಿನ ಗೌರವ-ಪ್ರೀತಿಗೆ, ಭಾವನೆಗಳಿಗಳಿಗೆ, ಸಂಬಂಧಕ್ಕೆ ಬೆಲೆ ಕೊಡಿ… ನಿಮ್ಮನ್ನು ಹೀಗೆ ಬೇರೆ ಮಾಡಿದ ಜೀವನದ ಆ ಕ್ಷಣಗಳಿಂದ ಕಲಿತ ಪಾಠ ನೆನಪು ಮಾಡ್ಕೊಳಿ.

1. ಮುಗಿದುಹೋಗಿರೋದ್ರ ಬಗ್ಗೆ ಚಿಂತಿಸಿ ಏನೂ ಫಲವಿಲ್ಲ

ನಿಮ್ಮ ಸಂಬಂಧ ಈಗತಾನೇ ಮುರಿದಿದೆ…. ನೀವು ಯಾರನ್ನ ನಿಮ್ಮ ಪ್ರಪಂಚ ಅಂತ ಇಷ್ಟು ದಿನ ಅನ್ಕೊಂಡಿದ್ರೋ, ನಿಮ್ಮ ನೋವುಗಳಿಗೆ ಯಾರು ಸ್ಪಂದಿಸುತ್ತಿದ್ದರೋ, ನಿಮ್ಮ ತಲೆಗೆ ಹೆಗಲು ಕೊಡ್ತಿದ್ರೋ, ನಿಮ್ಮನ್ನ ಪ್ರೀತಿಸಿ, ಮುದ್ದಿಸಿ, ನಿಮ್ಮ ದುಃಖಾನ ಮರೆಯೋ ಹಾಗೆ, ನೀವು ಸಂತೋಷದಿಂದ ಇರೋ ಹಾಗೆ ನೋಡ್ಕೊತಿದ್ರೋ, ಅವರು ಇಂದು ನಿಮ್ಮನ್ನ ಒಂಟಿಯಾಗಿ ಬಿಟ್ಟು ನಿಮ್ಮ ಜೀವನದಿಂದ ದೂರ ಹೋಗಿದ್ದಾರೆ. ಯಾರೇ ಆದರೂ ಇಂತ ಸಮಯದಲ್ಲಿ ಹಿಂಗ್ಯಾಕಾಯ್ತು ಅಂತ ಯೋಚ್ನೆ ಮಾಡೇ ಮಾಡ್ತಾರೆ. ನಿಮ್ಮ ಸಂಬಂಧ ಹೀಗೆ ಹಾಳಗಕ್ಕೆ ಆಗಿರಬಹುದಾದ ಸಣ್ಣ ಪುಟ್ಟ ಕಾರಣಗಳು, ಘಟನೆಗಳೆಲ್ಲ ನಿಮ್ ಕಣ್ಮುಂದೆ ಬರುತ್ತೆ. ನೀವು ಎಲ್ಲಿ ಎಡವಿದ್ದು? ಹೇಗೆ ಸರಿ ಮಾಡ್ಕೊಬಹುದಿತ್ತು ಅಂತ ತಲೆಕೆಡಿಸ್ಕೊತೀರಿ….

ಆದ್ರೆ ಇಷ್ಟೆಲ್ಲಾ ಆದ್ಮೇಲೆ ಕೊನೆಗೆ ಇದು ಯಾವುದೂ ನನ್ನ ಕೈಯಲ್ಲಿರಲಿಲ್ಲ … ಏನು ಆಗ್ಬೇಕು ಅಂತ ಇತ್ತೋ ಅದೇ ಆಗಿದೆ ಅಂತ ಸುಮ್ನಾಗ್ತೀರಿ.

2. ನಿಮ್ಮ ಬಗ್ಗೆ ನಿಮಗೇ ಪ್ರೀತಿ- ಗೌರವ ಇಲ್ಲ ಅಂದ್ರೆ ಬೇರೆಯವ್ರಿಗೂ ಬರಲ್ಲ

ನಮ್ಮ ಸಂಭಂದಗಳು ಹಾಳಾಗಬಾರದು, ತುಂಬಾ ದಿನ ಚೆನ್ನಾಗಿರಬೇಕು ಅಂತ ನಾವು ಎಷ್ಟೆಲ್ಲಾ ಸರ್ಕಸ್ ಮಾಡ್ತೀವಿ. ನಾವು ಅವರನ್ನ ಎಷ್ಟು ಗೌರವಿಸ್ತೀವಿ, ಎಷ್ಟು ಪ್ರೀತಿ ಮಾಡ್ತೀವಿ ಅಂತ ಅವರಿಗೆ ಅರ್ಥ ಮಾಡಿಸೋದ್ರಲ್ಲಿ ನಮ್ಮ ಬೆಲೆ ಏನು ಅನ್ನೋದನ್ನೇ ಮರ್ತಿರ್ತೀವಿ. ನಮ್ಮ ಜೀವನದಲ್ಲಿರೋದು ಇದೊಂದೇ ಸಂಭಂದ ಅಲ್ಲ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ನಮ್ಮ ಮೇಲಿನ ಪ್ರೀತಿ, ವಿಶ್ವಾಸಾನೇ ಕಳ್ಕೊಂಡಿರ್ತೀವಿ. ಇಷ್ಟೆಲ್ಲಾ ಕಷ್ಟಪಟ್ರು, ಯಾವಾಗ ನಮ್ಮ ಮಧ್ಯೆ ಬಿರುಕು ಬಿಡುತ್ತೋ… ಆಗ ನಮ್ಮ ನೈತಿಕತೆಗೆ, ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳೋದ್ ಗ್ಯಾರಂಟಿ. ನಂಬಗ್ಗೆ ನಮಗೆ ಪ್ರೀತಿ ಗೌರವ ಇದ್ರೆ ಮಾತ್ರ ಬೇರೆಯವರು ನಮಗೆ ಪ್ರೀತಿ ತೋರ್ಸೋದು, ಗೌರವ ಕೊಡೋದು ಅನ್ನೋ ಪಾಠ ಇದು ಕಲ್ಸುತ್ತೆ.

3. ಬೇರೆಯವರನ್ನು ಬೈದಾಡೋದ್ರಲ್ಲಿ ಏನೂ ಅರ್ಥ ಇಲ್ಲ

ಅನಿಷ್ಟಕ್ಕೆಲ್ಲ ಶನೀಶ್ವರಾನೇ ಕಾರಣ ಅಂತಾರಲ್ಲ, ಹಾಗೆ ಇದೆಲ್ಲ ಆಗಿದ್ದು ಅವರಿಂದಾನೆ ಅಂತ ಹೇಳೋದ್ರಲ್ಲಿ ಅರ್ಥ ಇಲ್ಲ. ನಿಮ್ಮ ಇವತ್ತಿನ ಪರಿಸ್ಥಿತಿಗೆ ನೀವಿಬ್ರೂ  ಕಾರಣಾನೇ…  ಯಾರೋ ಒಬ್ರಲ್ಲ. ನಿಮ್ಮಲ್ಲಿ ಒಡಕು ಮೂಡಿರೋದು ಯಾವುದೊ ಒಂದೋ ಎರಡೂ ಗಂಟೆಯಲ್ಲೋ ಅಥವಾ ಒಂದೆರಡು ವಿಷಯಕ್ಕೋ ತೊಗೊಂಡಿರೋ ನಿರ್ಧಾರ ಅಲ್ಲ. ಮೊದಲನೇ ದಿನದಿಂದಾನೇ ನೀವಿಬ್ರೂ ತಪ್ಪು ಮಾಡಿ ಮಾಡ್ಕೊಂಡಿರೋ ಎಡವಟ್ಟು. ಒಬ್ಬರು ಇನ್ನೊಬ್ಬರನ್ನ ದೂಷಿಸೋದು ಬೇಕಿಲ್ಲ. ಒಬ್ಬರಮೇಲೊಬ್ಬರು ಗೂಬೆ ಕೂರಿಸೋದು ಬಿಟ್ಟು ನಿಮ್ಮ ಸಂಬಂಧ ಈ ತರ ಕೊನೆಯಾಗ್ತಿರೋದಕ್ಕೆ ನೀವಿಬ್ಬರೇ ಕಾರಣ ಅನ್ನೋದನ್ನ ಒಪ್ಪಿಕೊಳ್ಳಿ.

4. ನಿಮ್ಮ ಮುಂದಿನ ದಾರಿ ಸುಲಭ ಇರಲ್ಲ

ಈಗಷ್ಟೇ ನಿಮ್ಮ ಮನಸ್ಸು ಮುರಿದಿದೆ, ನಿಮ್ಮ ಜೀವನದ ಅತಿ ಮುಖ್ಯ ವ್ಯಕ್ತಿ ಈಗ ನಿಮ್ ಜೊತೇಲಿಲ್ಲ. ನೀವು ಇದನ್ನ ಒಂದು ದಿನದಲ್ಲೋ, ವಾರದಲ್ಲೋ ಅಥವಾ ತಿಂಗಳಲ್ಲೋ ಮರೀಬಹುದು. ಆದ್ರೆ ಇದು ಯಾವುದೊ ಕ್ಷುಲ್ಲಕ ವಿಷಯ ಅಲ್ಲ. ನಾವು ಹೀಗೆ ಮಾಡಿದ್ದೆ ಸರಿಯಾಗಿತ್ತು ಅಂತ ಯಾವತ್ತೋ ಒಂದು ದಿನ ಅನ್ನಿಸಬಹುದು. ಆದ್ರೆ ಮರುಕ್ಷಣಾನೇ ನಿಮ್ಮನ್ನ ಒಂಟಿತನ, ದುಃಖ ಕಾಡದೇ ಬಿಡಲ್ಲ. ಆದ್ರೆ ಒಂದು ವಿಷ್ಯ ತಿಳ್ಕೊಳಿ, ಜೀವನದಲ್ಲಿ ಮುಂದೆ ಹೋಗಕ್ಕೆ ಈತರದ ಅನುಭವಗಳು ಬೇಕು.

5. ನೀವು ಬಿಟ್ಟಿರೋವ್ರ ಜೊತೆ ವಾಪಾಸ್ ಹೋಗ್ಬೇಕು ಅಂತ ಅನ್ನಿಸ್ದೆ ಇರಲ್ಲ

ನೀವಿಬ್ರೂ ಜೊತೇಲಿದ್ದಾಗ ಯಾವತ್ತೂ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರ್ತೀರಿ. ನೀವಿಬ್ರು ಬೇರೆಯಾದ್ಮೇಲೆ ಇವತ್ತು ಅವರ ಹುಟ್ಟು ಹಬ್ಬ ಅಂತ ಗೊತ್ತಾದಾಗ ಅವರಿಗೆ ವಿಶ್ ಮಾಡ್ದೆ ನಿಮಗೆ ಇರಕ್ಕಾಗಲ್ಲ. ಮೊದ್ಲು ಒಂದು ವಿಶ್ ಮಾಡಕ್ಕೆ ಮೆಸೇಜ್, ಇನ್ನೊಂದು ದಿನ ಹೇಗಿದ್ದಾರೆ ಅಂತ ತಿಳ್ಕೊಳಕ್ಕೆ, ಮುಂದೊಂದು ದಿನ ನೀವು ಜೊತೆಯಲ್ಲಿ ಕಳೆದ ಮಧುರವಾದ ಕ್ಷಣಗಳ ನೆನಪು, ಒಂದ್ಸಲ ಮೀಟ್ ಮಾಡಿ ನೋಡೋಣ ಅಂತ ನಿಮಗೆ ಅನ್ನಿಸಿದ್ರೆ ಆಶ್ಚರ್ಯ ಇಲ್ಲ.

ನಿಮ್ಮ ಈ ಭೇಟಿ ತುಂಬಾನೇ ಚೆನ್ನಾಗಿರುತ್ತ, ಆದ್ರೆ ಯಾವಾಗ ನೀವು ಹೀಗೆ ಯಾಕೆ ಬೇರೆ ಆದ್ರಿ, ನಿಮ್ಮಲ್ಲಿ ಜಗಳ ಯಾಕೆ ಆಗ್ತಿತ್ತು, ನೀವು ಮಾಡಿದ್ದ ನಿರ್ಧಾರ ಸರಿಯಾಗಿತ್ತಾ ? ಈ ಎಲ್ಲಾ ಯೋಚನೆಗಳು ನಿಮ್ಮ ಮನಸ್ಸಿಗೆ ಬರೋವರ್ಗು ಮಾತ್ರ. ಆಮೇಲೆ ಇದ್ರಲ್ಲಿ ನಿಮ್ತಪ್ಪೂ ಇತ್ತು ಅನ್ಸಿ ನಿಂಬಗ್ಗೆ ನಿಮಗೇ ಒಂಥರಾ ಅಸಹ್ಯ ಅನ್ಸುತ್ತೆ. ಆದ್ರೆ ಇಲ್ಲಿ ಏನು ಮರ್ತಿರ್ತೀರ ಅಂದ್ರೆ… ಯಾವ ಕೆಟ್ಟ ಘಳಿಗೆ, ಕಾರಣದಿಂದ ನೀವು ಬೇರೆಯಾಗೋ ನಿರ್ಧಾರ ಮಾಡಿ ಈಗ ಮುಂದೆ ಬಂದಿದ್ದೀರೋ, ಅದು ಸರಿಯಾಗೇ ಇತ್ತು ಅನ್ನೋದು.

6. ನೀವು ಮಾಡಿರೋ ಯಾವುದೋ ಒಂದು ತಪ್ಪಿನಿಂದ ನೀವು ಮಾಡಿದ್ದ ಎಲ್ಲಾ ಒಳ್ಳೆ ಕೆಲ್ಸಾನೂ ತೆಗದುಹಾಕಕ್ಕಾಗಲ್ಲ

ಮನಸ್ಸು ಒಡೆದಾಗ ನೀವು ಆಡಿರೋ ಕೆಟ್ಟ ಮಾತುಗಳು, ಜಗಳಗಳು… ಇದೆಲ್ಲಾ ನೆನಪಿಗೆ ಬಂದೇ ಬರುತ್ತೆ. ಆದ್ರೆ ಒಂದು ಕ್ಷಣ ನೀವು ಕಳೆದ ಒಳ್ಳೆ  ಕ್ಷಣಗಳು, ನಿಮ್ಮಲ್ಲಿ ಒಬ್ಬರಿಗೊಬ್ಬರಿಗೆ ಇದ್ದ ಪ್ರೀತಿ, ಪ್ರೇಮ, ಗೌರವ, ಕಾಳಜಿ, ನಿಮ್ಮ ಮುಖದ ಮೇಲೆ ನಗು ತರಿಸಬೇಕು ಅಂತ ಮಾಡಿದ್ದ ಪ್ರಯತ್ನ, ನೀವಿಬ್ರು ಜೊತೆಯಾಗಿ ಮಾಡಿರೋ ಒಳ್ಳೆ ಕೆಲಸಗಳು ಇವನ್ನೆಲ್ಲ ನೆನಪು ಮಾಡ್ಕೊಳ್ರಿ.

ನೀವು ಯಾವಾಗ ಒಟ್ಟಿಗೆ ಕಳೆದಿರೋ “ಸಿಹಿ-ಕಹಿ” ಎರಡೂ ಕ್ಷಣಗಳನ್ನ ಜ್ಞಾಪಿಸ್ಕೊಳ್ತಿರೋ, ಅವತ್ತು ನೀವು ನಿಜ್ವಾಗ್ಲೂ ಸರಿಯಾದ ನಿರ್ಧಾರ ಮಾಡಿ ಮುಂದೆ ಬಂದಿದ್ದೀರಾ ಅಂತ ಅರ್ಥ ಆಗತ್ತೆ

7. ನಿಮ್ಮ ನೆಮ್ಮದಿಗೋಸ್ಕರನಾದ್ರೂ ಅವರನ್ನ ಕ್ಷಮಿಸದೇ ಬೇರೆ ದಾರಿಯಿಲ್ಲ

ನೀವು ಎಷ್ಟು ವರ್ಷ ಜೊತೆಯಲ್ಲಿ ಕಳದ್ರೂ, ನಿಮಗೆ ಸಿಗಬೇಕಾದ ಸ್ಥಾನ ಮಾನ  ಸಿಕ್ಕಿಲ್ದೆ ಇರಬಹುದು, ನಿಮ್ಮಿಂದ ವಿಷಯಗಳನ್ನ ಮುಚ್ಚಿಟ್ಟಿರಬಹುದು, ನಿಮಗೆ ಮೋಸ ಮಾಡಿರಬಹುದು. ಈ ಎಲ್ಲಾ ಕಾರಣಗಳಿಂದ ನಿಮ್ಮ ಮನಸ್ಸಿಗೆ ಗಾಯವಾಗಿ , ಅದಕ್ಕೆ ಪರಿಹಾರ ಅನ್ನೋತರ ಇವತ್ತು ನೀವು ಬೇರೆ ಆಗಿರ್ಬಹುದು.

ಹಸಿ ಮಡಕೆಗೆ ನೀರು ಹಾಕಿದಾಗ ಆಗೋ ಪರಿಸ್ಥಿತಿ ಈಗ ನಿಮಗೆ ಬಂದಿರೋದು. ಆಗಿದ್ದನ್ನೆಲ್ಲ ಖಂಡಿತ ಸರಿ ಮಾಡಕ್ಕಾಗಲ್ಲ. ನೀವು ಸುರಿಸಿರೋ ಕಣ್ಣೀರನ್ನೆಲ್ಲಾ ಈಗ ಒರಸೋಕ್ಕಾಗಲ್ಲ. ಆಗಿದ್ದು ಆಗಿ ಹೋಯ್ತು. ಇನ್ನು ಮುಂದೆ ನೀವು ನೆಮ್ಮದಿಯಿಂದ, ಮನಶಾಂತಿಯಿಂದ ಇರ್ಬೇಕು ಅಂದ್ರೆ, ಆಗಿದ್ದನ್ನೆಲ್ಲ ಮರೆತು ಅವರನ್ನು ಕ್ಷಮಿಸಿ. ಇದು ಅವರು  ಕ್ಷಮೆಗೆ ಅರ್ಹರು ಅಂತ ಅಲ್ಲ…  ಆದ್ರೆ ನಿಮ್ಮ ನೆಮ್ಮದಿಗೋಸ್ಕರ ಹೀಗೆ ಮಾಡೋದೇ ಒಳ್ಳೇದು.

8. ನಡೆದಿದ್ದನ್ನ ಒಪ್ಪಿಕೊಳ್ಳದೇ ದಾರಿಯಿಲ್ಲ

ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಹೀಗೆ ಒಂಟಿ ಮಾಡಿ ಹೋದಾಗ ನಿಮಗೆ ಭೂಮೀನೇ ಕುಸಿದಷ್ಟು ದುಃಖ, ನೋವು ಆಗಿರ್ಬಹುದು. ಇದ್ರಿಂದ ಹೊರಗೆ ಬರಕ್ಕೆ ಹಾಗ್ಮಾಡು, ಹೀಗ್ಮಾಡು ಅಂತ ತುಂಬಾ ಸುಲಭವಾಗೇ ಎಲ್ಲರು ಸಲಹೇನೂ ಕೊಟ್ಟಿರ್ಬೋದು. ದುಖಾನ ಮರಿಯಕ್ಕೆ ಯಾವುದೋ ಸಮಾರಂಭಗಳಿಗೆ, ಪಾರ್ಟಿಗೆ, ಹೋಗೋದು, ಆಗಿರೋ ನೋವನ್ನ ಮರೆಯೋದಕ್ಕೆ ಅಂತ ಮಾಡೋ ಕೆಲಸದಲ್ಲೇ ಯಾವಾಗ್ಲೂ  ಮುಳಿಗಿರೋದು, ಹವ್ಯಾಸಗಳಿಗೆ ಗಮನ ಕೊಡೋದು ಮಾಡ್ತೀವಿ. ಆದ್ರೆ ಸತ್ಯ ಏನು ಅಂದ್ರೆ, ಆಗಿರೋ ಗಾಯ  ಮಾಗಕ್ಕೆ ಟೈಮ್ ಬೇಕಾಗುತ್ತೆ. ನಾವು ಅಳಬೇಕು… ಆಗ್ಲೇ ಮನಸ್ಸು ಹಗುರ ಆಗೋದು. ಈಗಿರೋ ಪರಿಸ್ಥಿತಿನ ನಿಭಾಯಿಸಕ್ಕೆ ಕಲ್ತ್ಕೋಬೇಕು. ಆಗ್ಲೇ ಸಮಯ ಕಳೆದಂತೆ ಎಲ್ಲ ಮೊದಲಿನ ಹಾಗೆ ಆಗಕ್ಕೆ ಸಾಧ್ಯ.

ಇದೆಲ್ಲ ಏನೇ ಇರ್ಬಹುದು ಆದ್ರೆ ಒಂದು ವಿಷಯ ನೀವು ಒಪ್ಪಿಕೊಳ್ಳಲೇ ಬೇಕು. ನಿಮಗೆ ನೋವಾಗಿರೋದು ನಿಜ. ನಿಮ್ಮ ನೋವನ್ನ ಮರೆಮಾಚಕ್ಕೆ ನಿಮಗೆ ಏನೂ ಆಗೇ ಇಲ್ಲ ಅನ್ನೋತರ ಇರೋ ನಾಟಕ ಮಾಡ್ಬೇಡಿ. ಆಗಿಹೋಗಿರೋದೆಲ್ಲ ನಿಜಾನೆ ಅನ್ನೋದನ್ನ ಒಪ್ಪಿಕೊಳ್ಳಿ. ಯಾವತ್ತೂ ಇದನ್ನ ಒಪ್ಕೋತ್ತಿರೋ ,ಅವತ್ತು ನಿಜವಾಗಿ ಮುಂದೆ ಹೋಗಕ್ಕೆ ಸುಲಭ ಆಗತ್ತೆ

ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು….ಹಡಗೂ ನಿನ್ನದೇ ಕಡಲೂ ನಿನ್ನದೇ ಮುಳುಗದಿರಲಿ ಬದುಕು ಅನ್ನೋ ಹಾಡಿನ ತರ, ಜೀವನದಲ್ಲಿ ಏನೇ ಏರಿಳತಗಳು ಬಂದರೂ ಅದ್ರಿಂದ ಪಾಠ ಕಲಿತು ಮುನ್ನುಗ್ಗಿ  ಚೆನ್ನಾಗಿ ಬದುಕೋ ಪ್ರಯತ್ನ ಮಾಡಿ.