https://images.idgesg.net/images/article/2017/07/android-storage-tips_primary-resized-100730341-large.jpg

ಜೀವನ್ದಲ್ಲಿ ಏನೆಲ್ಲಾ ವಿಷ್ಯಗಳು ಕಿರಿಕಿರಿ ಮಾಡತ್ತೋ ದೇವ್ರೇ ಬಲ್ಲ. ಈಗಂತೂ ದೊಡ್ಡೋರು, ಚಿಕ್ಕೋರು, ಚಿಲ್ಟೂ ಪಿಲ್ಟೂ ಎಲ್ರೂ ಕೈಲೂ ಸ್ಮಾರ್ಟ್ ಫೋನು, ಆಂಡ್ರಾಯಿಡ್ ಫೋನು ಕಾಣೋದು ಮಾಮೂಲು. ಜೊತೆಗೆ ಬೇಕೋ ಬೇಡ್ವೋ ಸಿಕ್ಕಸಿಕ್ಕ ಆಪ್, ಗೇಮ್ಸ್ ಡೌನ್ಲೋಡ್ ಮಾಡ್ಕೊಳದು. ಫೋನ್ಗೂ ವಾಂತಿ ಬರೋವಷ್ಟು ಅದರ ಹೊಟ್ಟೆ ತುಂಬ್ಸೋದು ಆಮೇಲಿಂದ ಹೊಸದಾಗಿ ಏನೂ ಹಾಕ್ಕೊಳ್ಳಕ್ಕೆ ಆಗ್ತಿಲ್ಲ ಅಂತ ಬಾಯಿ ಬಡ್ಕೊಳದು. ಇದಕ್ಕೆಲ್ಲಾ ಪರಿಹಾರ ಅಂದ್ರೆ ಆಗಿದಾಂಗ್ಗೇ ಫೋನ್ ಮೆಮೋರಿನ ಖಾಲಿ ಮಾಡಿ, ಡೇಟಾ ಬ್ಯಾಕ್ ಅಪ್ ತೊಗೊಳೋದು. ಡೇಟಾ ಬ್ಯಾಕ್ ಅಪ್ ಅಂದ್ರೆ ಸುಮಾರು ಜನ ಅಯ್ಯೋ ಗಂಟೆಗಟ್ಲೆ ತೊಗೊಳೋ ಕೆಲ್ಸ ಅಲ್ವ ಅಂದ್ಕೊತಾರೆ. ಆದ್ರೆ ಇತ್ತೀಚಿನ ಟೆಕ್ನಾಲಜಿ ಬಳುಸ್ಕೊಂಡು ಸುರಕ್ಷಿತವಾಗಿ ನಮ್ ಫೋಟೋ, ವೀಡಿಯೋ ಹೀಗೆ ಎಲ್ಲಾ ಡೇಟಾನೂ ಬ್ಯಾಕ್ ಅಪ್ ಮಾಡ್ಕೊಂಡು ಫೋನ್ ಮೆಮೋರಿ ಯಾವತ್ತೂ ತುಂಬದೇ ಇರೋ ಹಾಗೆ ನೋಡ್ಕೊಬೋದು. ಅಂಥ ಒಂದಷ್ಟು ಐಡಿಯಾಗಳ್ನ ಅಂತೆಕಂತೆ ನಿಮ್ಗೋಸ್ಕರ ಇಲ್ಲಿ ಹೇಳ್ತಿದೆ. ಓದ್ಕೊಂಡು ಉಪಾಯನ ಬಳುಸ್ಕೊಳಿ. ಫೋನ್ ಕೈಯ್ಯಲ್ಲಿ ಯಾವತ್ತೂ 'ಮೆಮೋರಿ ಫುಲ್', 'ಲೆಸ್ ಸ್ಟೋರೇಜ್ ಸ್ಪೇಸ್' ಅಂತ ಬೈಸ್ಕೊಬೇಡಿ.

 

ಆಪ್ ಬಳಸಿದಾಗ ಬರೋ ಕೇಚ್ ಡೇಟಾ ಕ್ಲಿಯರ್ ಮಾಡಿ


ಯಾವ್ದಾದ್ರೂ ಆಪ್ ಡೌನ್ಲೋಡ್ ಮಾಡ್ಕೊಂಡು ಬಳಸುವಾಗ, ಪ್ರತೀಸಲ ಅದರ ಕೇಚ್ ಮೆಮೋರಿನಲ್ಲಿ ಬೇಡದೇ ಇರೋ ಒಂದಷ್ಟು ಡೇಟಾ ಬಂದು ಕೂತಿರತ್ತೆ. ಯಾವ್ ಉಪ್ಯೋಗನೂ ಇಲ್ಲ. ಆದ್ರೆ ಇದು ಫೋನ್ ಮೆಮೋರಿ ತಿಂತಿದೆ ಅಂತ ಎಷ್ಟೋಂದ್ ಸಲ ಗೊತ್ತಾಗಲ್ಲ. ಆಗಾಗ ಇದನ್ನ ಕ್ಲಿಯರ್ ಮಾಡ್ತಾ ಇದ್ರೆ, ಖಂಡಿತಾ ಕೆಲವು ಕಿಲೋಬೈಟ್, ಅಥ್ವ ಒಂದಷ್ಟು ಮೆಗಾ ಬೈಟ್ ಜಾಗ ಖಾಲಿ ಆಗತ್ತೆ. ಇದನ್ನ ಕ್ಲಿಯರ್ ಮಾಡೋ ವಿಧಾನ, ಸೆಟ್ಟಿಂಗ್ಸ್ -> ಸ್ಟೋರೇಜ್ -> ಕೇಚ್ಡ್ ಡೇಟಾ ಮೇಲೆ ಗಟ್ಟಿಯಾಗಿ ಒತ್ತಿ, ಡಿಲೀಟ್ ಆಪ್ಷನ್ ಕೇಳಿದಾಗ, ಓಕೆ. ಕೊಡಿ. ಒಂದೇ ಸಲ ಅಷ್ಟೂ ಡೇಟಾ ಕ್ಲಿಯರ್ ಆಗತ್ತೆ.

ಡೌನ್ಲೋಡ್ ಫೋಲ್ಡರ್ ಕ್ಲಿಯರ್ ಮಾಡಿ


ಎಷ್ಟೊಂದ್ ಸಲ ನಯಾಪೈಸ ಕೆಲ್ಸಕ್ ಬರ್ದೇಯಿರೋದ್ನೆಲ್ಲಾ ಬಿಟ್ಟಿಯಾಗ್ ಕೊಟ್ಟಿದರೆ ಅಂತ ಡೌನ್ಲೋಡ್ ಮಾಡ್ಕೊತಿವಿ. ಅಥ್ವ, ಯಾವ್ದೋ ಹಾಡಿನ ಎಮ್ ಪಿ ತ್ರಿ ಫೈಲ್ ಡೌನ್ಲೋಡ್ ಮಾಡಕ್ಕೆ ಹೋಗಿ ಅದ್ರ ಎಚ್ ಟಿ ಎಮ್ ಎಲ್ ಫೈಲ್ ಡೌನ್ಲೋಡ್ ಮಾಡಿರ್ತೀವಿ. ಇಂಥ ಕೆಲ್ಸಗಳಿಂದ ಡೌನ್ಲೋಡ್ ಫೋಲ್ಡರಲ್ಲಿ ಕಸಕಡ್ಡಿನೇ ತುಂಬಿರತ್ತೆ. ಅದನ್ನೆಲ್ಲಾ ಆಗಾಗ ಮರೀದೆ ಕ್ಲಿಯರ್ ಮಾಡ್ಬೇಕು. ಡೌನ್ಲೋಡ್ ಫೋಲ್ಡರ್ಗೆ ಹೋಗಿ, ಮೇಲೆ ಬಲತಿದಿನಲ್ಲಿ ಕೊಟ್ಟಿರೋ ಮೂರು ಚುಕ್ಕೆ ಇರೋ ಮೆನು ಮೇಲಿ ಕ್ಲಿಕ್ ಮಾಡಿ, ಇರೋ ಎಲ್ಲಾ ಫೈಲನ್ನೂ ಅದರ ಸೈಝ್ ಪ್ರಕಾರ ಪಟ್ಟಿ ಮಾಡೋ ಮಾಡೋ ಆಪ್ಷನ್ ಆರುಸ್ಕೊಳಿ. ಆ ಪಟ್ಟಿ ನೋಡ್ತಾ ಹೋದ್ರೆ ಗೊತ್ತಾಗತ್ತೆ. ಯಾವ್ ಫೈಲ್ ತುಂಬಾ ಜಾಗ ಆಕ್ರಮಿಸ್ಕೊಂಡಿದೆ ಅಂತ ಅವುಗಳಲ್ಲಿ ಬೇಡದೇಯಿರೋದು ಇದ್ರೆ, ಅದರ ಮೇಲೆ ಗಟ್ಟಿಯಾಗಿ ಒತ್ತಿ ಹಿಡ್ಕೊಂಡು ತ್ರ್ಯಾಶ್ ಗೆ ತಳ್ಳಿ.

ಬ್ಯಾಕ್ ಅಪ್ ಆಗಿರೋ ಫೋಟೋಗಳ್ನ ಅಳಿಸಿಹಾಕಿ


ಫೋಟೋಗಳ್ನ ಸ್ಟೋರ್ ಮಾಡಕ್ಕೆ, ಗೂಗಲ್ ಅವರ ಹೊಸ ಫೋಟೋ ಆಪ್ ತುಂಬಾ ಸಹಕಾರಿ. ಫೋಟೋ ಲೈಬ್ರರಿನ ಪೂರ್ತಿಯಾಗಿ, ಸುರಕ್ಷಿತವಾಗಿನಮ್ ಆನ್ಲೈನ್ ಗೂಗಲ್ ಅಕೌಂಟ್ಗೆ ವರ್ಗಾಯಿಸತ್ತೆ. ಇದಾದಮೇಲೆ ಫೋನಲ್ಲಿರೋ ಫೋಟೋಗಳ್ನ ಏನ್ ಇಟ್ಕೊಂಡ್ ಉಪ್ಪಿನಕಾಯಿ ಹಾಕ್ಬೇಕಾ? ಅಳಿಸಿಹಾಕ್ಬೇಕು. ಫೋಟೋ ಆಪ್ಗೆ ಹೋಗಿ, ಮೇಲೆ ಎಡತುದಿನಲ್ಲಿ ಇರೋ ಮೂರು ಚುಕ್ಕೆಗಳ ಮೆನುನ ಕ್ಲಿಕ್ ಮಾಡಿ, ಫ್ರೀ ಅಪ್ ಡಿವೈಸ್ ಸ್ಟೋರೇಜ್ ಅನ್ನೋ ಆಪ್ಷನ್ ಆರುಸ್ಕೊಂಡ್ರೆ, ಎಷ್ಟು ಫೋಟೋ ಇದೆ ಫೋನಲ್ಲಿ ಅಂತ ತೋರ್ಸತ್ತೆ. ಬೇಕಾದ್ದನ್ನ ಇಟ್ಕೊಂಡು, ಬ್ಯಾಕ್ ಅಪ್ ಆಗಿರೋದ್ರಿಂದ ಲೋಕಲ್ ಸ್ಟೋರೇಜಿಂದ ಡಿಲೀಟ್ ಮಾಡ್ಬೋದು.

ಕಿವಿಮಾತು : ನೀವು ಫೋಟೋನ ಹೈ ಡೆಫನಿಷನ್ ಸೆಟ್ಟಿಂಗ್ನಲ್ಲಿ ತೆಗೆದಿದ್ರೆ, ಆಗ ಹಿಂದೆಮುಂದೆ ನೋಡದೇ ಡಿಲೀಟ್ ಮಾಡಂಗಿಲ್ಲ. ಹಾಗೇನಾದ್ರೂ ಮಾಡಿದ್ರೆ, ಫೋಟೋ ಒರಿಜಿನಲ್ ಸೆಟ್ಟಿಂಗ್ ಸೇವ್ ಆಗಿರಲ್ಲ, ಪರ್ಮನೆಂಟಾಗಿ ಆ ಫೋಟೋ ಗುಣಮಟ್ಟ ಹೋಗಿಬಿಡತ್ತೆ. ಹಾಗಾಗಿ ಅಂಥ ಫೋಟೋಗಳ್ನ ಬೇರೆಯಾಗಿ ಬ್ಯಾಕ್ ಅಪ್ ತೊಗೊಂಡು ಆಮೇಲೆ ಡಿಲೀಟ್ ಮಾಡ್ಬೇಕು.

ಡೌನ್ಲೋಡ್ ಮಾಡಿರೋ ಹಾಡಿನ ಪಾಡ್ಕಾಸ್ಟ್, ಹಾಡುಗಳ್ನ ಸರಿಯಾಗಿ ನಿರ್ವಹಣೆ ಮಾಡಿ


ಗೂಗಲ್ನ 'ಪ್ಲೇ ಮ್ಯೂಸಿಕ್' ಅನ್ನೋ ಆಪ್, ಹಾಡುಗಳ್ನ ಸ್ಟೋರ್ ಮಾಡೊದಕ್ಕೆ ಇರೋ ತೊಂದ್ರೆ ನಿವಾರ್ಸತ್ತೆ. ಇದು ಎರಡು ಆಪ್ಷನ್ ಕೊಡತ್ತೆ. ಒಂದು, ಗೂಗಲ್ ಪ್ಲೇ ಸಾಂಗ್ಸ್ ಪಟ್ಟಿನಲ್ಲಿ ಇರೋ ನಿಮಗಿಷ್ಟವಾದ ಹಾಡುಗಳ್ನ ಡೌನ್ಲೋಡ್ ಮಾಡ್ಕೊಳದು ಅಥ್ವ ಆಪ್ ಸ್ವತಃ ನಿಮ್ಗೋಸ್ಕರ ತಾನೇ ಹಾಡುಗಳ್ನ ಆರಿಸಿ ಪ್ಲೇ ಮಾಡೋದು. ಈ ಎರಡೂ ಆಯ್ಕೆನಲ್ಲಿ ಫೋನ್ ಮೆಮೋರಿ ತುಂಬಾ ಉಳಿಯತ್ತೆ. ಇನ್ನು ಪಾಡ್ಕಾಸ್ಟ್ ವಿಷ್ಯದಲ್ಲೂ ಹಾಗೇನೇ. ಪ್ಲೇ ಮ್ಯೂಸಿಕ್ನಲ್ಲಿ ಡೀಫಾಲ್ಟ್ ಆಯ್ಕೆ ಒಂದಿದೆ. ಇತ್ತೀಚೆಗೆ ಚಂದಾದಾರರಾಗಿರೋ ಮೂರು ಹಾಡುಗಳ್ನ ತಂತಾನೇ ಡೌನ್ಲೋಡ್ ಮಾಡ್ಕೊಳದು. ಇದನ್ನ ಸೆಟ್ಟಿಂಗ್ಸ್ನಲ್ಲಿ ಸೆಟ್ ಮಾಡಿ ಬಿಟ್ರೆ ಸಾಕು. ಅದೇ ಹಾಡುಗಳ್ನ ನಿರ್ವಹನೆ ಮಾಡತ್ತೆ. ನೀವೇನಾದ್ರೂ ಜಾಸ್ತಿ ಹಾಡುಗಳ್ನ ಆಯ್ಕೆ ಮಾಡ್ಕೊಂಡಿದ್ರೆ, ಫೋನಲ್ಲಿ ಅದಕ್ಕೋಸ್ಕರ ಜಾಸ್ತಿ ಜಾಗ ಮಾಡ್ಕೊಡಕ್ಕೂ ಸಹಾಯ ಮಾಡತ್ತೆ. ಈಗಾಗ್ಲೇ ಎಷ್ಟು ಮೆಮೋರಿ ಇದಕ್ಕೋಸ್ಕರ ಮೀಸಲಾಗಿದೆ ಅಂತ ತಿಳ್ಕೊಂಡು ಅದನ್ನ ಸರಿಯಾಗಿ ನಿರ್ವಹಣೆ ಮಾಡಕ್ಕೆ ಈ ಉಪಾಯ ಬಳಸ್ಬೊದು.ಪ್ಲೇ ಮ್ಯೂಸಿಕ್ ಆಪ್ಗೆ ಹೋಗಿ, ಮೆಲೆ ಎಡತುದಿನಲ್ಲಿರೋ ಮೂರು ಚುಕ್ಕೆ ಮೆನು ಕ್ಲಿಕ್ ಮಾಡಿ -> ಸೆಟ್ಟೀಂಗ್ಸ್-> ಮ್ಯಾನೇಜ್ ಡೌನ್ಲೋಡ್ಸ್ ಆಯ್ಕೆ ಮಾಡಿ.ಅಲ್ಲಿ ಯಾವ್ದಾದ್ರೂ ಹಾಡು ಅಳಿಸಿಹಾಕಬೇಕು ಅಂದ್ರೆ, ಹೆಸರಿನ ಪಕ್ಕದಲ್ಲೇ ಇರೋ ಆರೆಂಜ್ ಬಣ್ಣದ ಡೌನ್ಲೋಡ್ ಬಟನ್ ಮೇಲೆ ಒತ್ತಿ, ನಿಮ್ ಎಡಕ್ಕೆ ಸ್ವೈಪ್ ಮಾಡಿದ್ರೆ ಲೋಕಲ್ ಫೋನ್ ಸ್ಟೋರೇಜ್ ಇಂದ ಅಳಿಸಿಹೋಗತ್ತೆ.

ಕಿವಿಮಾತು : ಇದೇ ಉಪಾಯನ 'ಪ್ಲೇ ಮೂವೀಸ್' ಮತ್ತೆ 'ಟಿವಿ' ಆಪ್ಗೂ ಬಳಸ್ಬೊದು.

ಗೂಗಲ್ ಮ್ಯಾಪಲ್ಲಿರೋ ಆಫ್ಲೈನ್ ಏರಿಯಾಗಳ್ನ ಅಳಿಸಿಹಾಕಿ

 

ಒಂದ್ ಜಾಗನ ಹುಡುಕಕ್ಕೆ ಮತ್ತೆ ದಿಕ್ಕು ತೋರ್ಸಕ್ಕೆ, ಗೂಗಲ್ ಮ್ಯಾಪ್ ಅವರ ಹೊಸ ವರ್ಷನಲ್ಲಿ ಬಿಟ್ಟಿರೋ ಫೀಚರ್ ಚೆನ್ನಾಗಿದೆ. ಆನ್ಲೈನಲ್ಲಿ ಮ್ಯಾಪ್ ಡೌನ್ಲೋಡ್ ಮಾಡ್ಕೊಂಡು, ಆಫ್ಲೈನಲ್ಲೂ ಬಳಸ್ಬೋದು. ಆದ್ರೆ ಇದು ಬಕಾಸುರ. ಫೋನ್ ಮೆಮೋರಿನ ಎದ್ವಾ ತದ್ವಾ ತಿಂದುಹಾಕತ್ತೆ. ಏರಿಯಾ ಸೈಝ್ಗೆ ತಕ್ಕ ಹಾಗೆ, ಗೀಗಾಬೈಟ್ಗೂ ಮೀರಿ ಸ್ಟೋರೇಜ್ ದಂಡ ಆಗತ್ತೆ. ಪರಿಹಾರ ಅಂದ್ರೆ, ಮ್ಯಾಪ್ ಬಳಸಿ ಆದಮೇಲೆ, ಗೂಗಲ್ ಮ್ಯಾಪ್ ಆಪ್ಗೆ ಹೋಗಿ, ಮೇಲೆ ಎಡತುದಿನಲ್ಲಿರೋ ಮೂರುಚುಕ್ಕೆ ಮೆನುನ ಕ್ಲಿಕ್ ಮಾಡಿ, ಆಫ್ಲೈನ್ ಮಾಡಿ. ಆಗ ಪ್ರತೀಸಲ ಮ್ಯಾಪ್ ಡೌನ್ಲೋಡ್ ಮಾಡಿದಾಗಲೂ ಎಷ್ಟು ಸ್ಟೋರೇಜ್ ಬಳುಸ್ಕೊಂಡಿದೆ ಅಂತ ಗೊತ್ತಾಗತ್ತೆ. ಬೇಡದೇ ಇರೋ ಮ್ಯಾಪ್ ಮೇಲೆ ಗಟ್ಟಿಯಾಗಿ ಕ್ಲಿಕ್ ಮಾಡಿ ಅದನ್ನ ಡೀಲೀಟ್ ಮಾಡಿ.

ಕಮ್ಮಿ ಬಳಸೋ ಆಪ್ ಅನ್ಲೋಡ್ ಮಾಡಿ

ಎಷ್ಟೋ ಸಲ, ಯಾವ್ದೋ ಆಪ್ ಡೌನ್ಲೋಡ್ ಮಾಡುವಾಗ, ಜೊತೆಗೆ ಬಾಲಂಗೋಚಿ ಥರ ಇನ್ನೊಂದಿಷ್ಟು ಆಪ್ಗಳು ಬಂದಿರತ್ತೆ. ಗಡಿಬಿಡಿನಲ್ಲಿ ಗಮನಿಸಿರಲ್ಲ. ಇನ್ನೂ ಕೆಲವು ಸಲ ಯಾವ್ದೋ ಒಂದೇ ಒಂದು ಉಪ್ಯೋಗಕ್ಕೆ ಆಪ್ ಡೌನ್ಲೋಡ್ ಮಾಡಿರ್ತೀವಿ. ಆದ್ರೆ ಯಾವತ್ತೂ ಅದನ್ನ ಬಳಸಿರಲ್ಲ. ಅಂಥವೆಲ್ಲಾ ಗುಡ್ಡೆಯಾಗಿ, ಫೋನ್ ಮೆಮೋರಿ ತುಂಬಿರತ್ತೆ. ತಕ್ಷಣ ಡಿಲೀಟ್ ಮಾಡ್ಕೊಂಡ್ರೆ ಒಳ್ಳೇದು. ಪ್ಲೇ ಸ್ಟೋರ್ ಆಪ್ ತೆಗೆದು, ಮೇಲೆ ಬಲತುದಿನಲ್ಲಿರೋ ಮೂರು ಚುಕ್ಕೆ ಮೆನು ಮೇಲೆ ಕ್ಲಿಕ್ ಮಾಡಿ, 'ಮೈ ಆಪ್ಸ್ ಅಂಡ್ ಗೇಮ್ಸ್' ಆಯ್ಕೆ ಮಾಡ್ಕೊಳೀ. ನಂತರ ಅದರಲ್ಲಿ ಇರೋ ಇನ್ಸ್ಟಾಲ್ಡ್ ಆಪ್ಷನ್ ಆರುಸ್ಕೊಳಿ. ಆಗ ನಿಮ್ ಫೋನಲ್ಲಿ ಇನ್ಸ್ಟಾಲ್ ಆಗಿರೋ ಎಲ್ಲಾ ಆಪ್ಗಳ ಪಟ್ಟಿ ಬರತ್ತೆ. ಮತ್ತೆ ಮೇಲೆ ಬಲತುದಿನಲ್ಲಿರೋ ಮೂರುಚುಕ್ಕೆ ಮೆನುಗೆ ಹೋಗಿ, 'ಲಾಸ್ಟ್ ಯೂಸ್ಡ್' ಆಪ್ಷನ್ ಪ್ರಕಾರ ಸಾರ್ಟ್ ಮಾಡಿ. ಈಗ ಅದೇ ಪಟ್ಟಿ, ತುಂಬಾ ಬಳಕೆ ಮಾಡೋ ಆಪ್ನಿಂದ, ಅಪರೂಪಕ್ಕೆ ಬಳಸೋ ಆಪ್ ಆರ್ಡರ್ನಲ್ಲಿ, ಮೇಲಿಂದ ಕೆಳಕ್ಕೆ ಬರತ್ತೆ. ಪಟ್ಟಿಯ ಕೆಳಕ್ಕೆ ಹೋಗಿ, ಯಾವೆಲ್ಲಾ ಆಪ್ಗಳು ಬೇಡ್ವೋ ಅದನ್ನ 'ಅನ್ ಇನ್ಸ್ಟಾಲ್' ಮಾದ್ತಾ ಬನ್ನಿ. ಮೆಮೋರಿ ಕ್ಲಿಯರ್ ಆಗತ್ತೆ.

ಇನ್ನೂ ಒಂದಷ್ಟು ಆಪ್ಗಳೇ ಇವೆ. ಅವು ಆಗಾಗ, ನಾವ್ ಯಾವ್ ಆಪ್ ತುಂಬಾ ಬಳಕೆ ಮಾಡ್ತಾ ಇದೀವಿ? ಯಾವ್ದು ಬಳಸ್ತಿಲ್ಲ. ಯಾವ್ದು ಉಪ್ಯೋಗಕ್ಕೆ ಬರತ್ತೆ? ಬರಲ್ಲ ಅಂತ ಸೂಚನೆ ಕೊಡ್ತಿರತ್ತೆ. ಅದರ ಆಧಾರದಮೇಲೂ ಆಪ್ ನಿರ್ವಹಣೆ ಮಾಡ್ಬೋದು. ಒಟ್ನಲ್ಲಿ. ಇದ್ದಕ್ಕಿದ್ದಂಗೇ ಯಾಕೋ ಫೋನು ನಿಧಾನ ಆಯ್ತು, ಫೋನೇ ಸರಿಯಿಲ್ಲ ಅಂತ ಬೈಕೊಳೋ ಬದ್ಲು, ತೀರಾ ಅವಶ್ಯಕ ಅನ್ನಿಸಿದಾಗ್ಲೇ ಮೆಮೋರಿ ಇಲ್ಲ, ಸ್ಟೋರೇಜ್ ಸ್ಪೇಸ್ ಕಮ್ಮಿ ಇದೆ ಅಂತ ಒದ್ದಾಡೋ ಬದ್ಲು, ಆಗಾಗಫೋನ್ ಮೆಮೋರಿ ಕ್ಲಿಯರ್ ಮಾಡಕ್ಕೆ ಅಂತನೇ ಸ್ವಲ್ಪ ಸಮಯನ ಮೀಸಲಿಟ್ರೆ, ಅದ್ಯಾಕ್ ಫೋನ್ ಚೆನ್ನಾಗಿ ಕೆಲ್ಸ ಮಾಡಲ್ವೋ ಹೇಳಿ.