http://www.letsintern.com/blog/wp-content/uploads/2017/02/banner2.jpg

ಕೆಲವೊಂದು ಸಲ ಎಷ್ಟೇ ಪ್ರಯತ್ನ ಪಟ್ರು ನಮಗೆ ಬೇರೆಯವರ ಗಮನ ಸೆಳೆಯಕ್ಕೆ, ಅವರನ್ನ ಮೆಚ್ಚಿಸೋದಕ್ಕೆ, ಅವರು ನಿಮ್ಮನ್ನ ಇಷ್ಟ ಪಡೋಹಾಗೆ ಮಾಡಕ್ಕೆ ಆಗಿರಲ್ಲ. ಎಲ್ರಿಗೂ ನಿಮ್ಮ ವ್ಯಕ್ತಿತ್ವ ಇಷ್ಟ ಆಗ್ಬೇಕು ಅಂದ್ರೆ ಏನು ಮಾಡಬೇಕು? ಅದೇ ಇವತ್ತು ನಾವು ನಿಮಗೆ ಹೇಳ್ತಿರೋದು. ಈ 10  ತಪ್ಪನ್ನ ಮಾಡದೇ ಇದ್ರೆ ನಿಮ್ಮ ವ್ಯಕ್ತಿತ್ವ ಎಲ್ಲರಿಗೂ  ಹಿಡಿಸೋದು ಗ್ಯಾರಂಟಿ.

10. ನಿಮ್ಮ ಪರಿಚಯ ಸರಿಯಾಗಿ ಮಾಡಿಕೊಡದೆ ಇರ್ಬೇಡಿ

ಎಲ್ಲರ… ಅದ್ರಲ್ಲೂ ಹೊಸಬರ ಮುಂದೆ ನಮ್ಮ ಪರಿಚಯ ನಾವೇ ಮಾಡ್ಕೊಡ್ಬೇಕು ಅಂದಾಗ ಸ್ವಲ್ಪ ಮುಜುಗರ ಆಗುತ್ತೆ. ಅದಕ್ಕೇ ತುಂಬಾ ಸಲ ಈ ಸಂದರ್ಭದಲ್ಲಿ ಸುಮ್ನೆ ಒಂದ್ಸಲ ಕೈ ಎತ್ತಿ ಅವರಕಡೆ ಬೀಸಿ ಒಂದು ಮೂಲೇಲಿ ಕೂತ್ಕೋತೀವಿ. ಈ ತರ ಮಾಡೋದು ನಿಮಗೆ ಬೇರೆ ಯಾರ ಜೊತೆನೂ ಬೆರೀಬೇಕೂ ಅನ್ನೋ ಆಸಕ್ತಿ ಇಲ್ಲ ಅಂತ ತೋರ್ಸುತ್ತೆ. ನಿಮ್ಮ ಹತ್ತಿರ ಯಾರೂ ಬರೋದು ನಿಮಗೆ ಅಷ್ಟಾಗಿ ಇಷ್ಟ ಆಗಲ್ಲ, ತುಂಬಾ ಸಂಕೋಚದ ಸ್ವಭಾವ ನಿಮ್ಮದು ಅಂತ ಬೇರೆಯವರಿಗೆ ಅನ್ಸುತ್ತೆ.

ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರ್ಬೇಕು ಅಂದ್ರೆ ನಮಸ್ಕಾರ, ಹಾಯ್, ಹಲೋ ಅಂತ ಹೇಳಿ, ನಿಮ್ಮ ಹೆಸರು ಹೇಳಿ ಸಾಧ್ಯವಾದರೆ ಒಂದು ಹ್ಯಾಂಡ್ ಶೇಕ್ ಕೊಡಿ, ಹೀಗೆ ಪರಿಚಯ ಮಾಡ್ಕೊಳ್ವಾಗ ನಿಮ್ಮ ನೋಟ ಅವರಕಡೆನೇ ಇರ್ಬೇಕು ಅನ್ನೋದನ್ನ ಮರೀಬೇಡಿ.

ಮೂಲ

9. ನೀವು ಯಾರ್ಜೊತೆನಾದ್ರೂ ಮಾತಾಡ್ತಿದ್ರೆ ಅವರಿಗೆ ನಿಮ್ಮ ಜೊತೇಲಿರೋರನ್ನ ಪರಿಚಯ ಮಾಡಿಸದೇ ಇರ್ಬೇಡಿ

ನೀವು ನಿಮ್ಮ ಸ್ನೇಹಿತರ ಜೊತೆ ಮಾತಾಡ್ಕೊಂಡು ಹೋಗ್ತಿರ್ತೀರಿ. ಆಗ ಎದುರುಗಡೆ ಅವರಿಗೆ ಪರಿಚಯದವರು ಏನಾದ್ರು ಸಿಕ್ಕಿದ್ರೆ, ನೀವು ಅವರ ಪಕ್ಕದಲ್ಲಿದ್ರು ನಿಮ್ಮ ಪರಿಚಯ ಮಾಡಿಸದೇ ಅವರಿಬ್ಬರೇ ಮಾತಾಡಿ ಸುಮ್ನಾದ್ರೆ ನಿಮಗೆ ಏನು ಅನ್ಸುತ್ತೆ? ನಿಮ್ಮ ಸ್ನೇಹಿತ ಹೀಗೆ ಯಾಕೆ ನಡ್ಕೊಂಡಿರಬಹುದು? ಅವರರಿಗೆ ಮುಜುಗರವಾಗಿರಬಹುದು, ನೀವು ಅವರ ಜೊತೆ ಇರೋದನ್ನ ಅವರ ಪರಿಚಯದವರು ನೋಡಿದ್ರಲ್ಲಾ ಅನ್ನೋ ಆತಂಕನೂ ಇರಬಹುದು.

ಏನೇ ಆಗ್ಲಿ ಹಾಗೆ ಎದುರಿಗೆ ಸಿಕ್ಕಾಗ ಪರಿಚಯ ಮಾಡಿಸಿದ್ರೆ ಒಳ್ಳೇದು. ತುಂಬಾ ಸುಲಭವಾದ ಕೆಲಸ, ಇದು ಅವರೂ ನಿಮ್ಮ ಗುಂಪಲ್ಲಿ ಒಬ್ಬರಾಗಕ್ಕೆ ಸುಲಭವಾಗಿ ಬೇರೆಯೋದಕ್ಕೆ ಸಹಾಯ ಆಗುತ್ತೆ.

8. ಯಾವುದೇ ಕಾರಣಕ್ಕೂ ಹೆಸರನ್ನ ಮರೀಬೇಡಿ

ನೀವು ನಮಗೆ ಅಷ್ಟೊಂದು ನೆನಪಿಲ್ಲ ಅಂತ ಹೇಳ್ಬಹುದು, ಆದ್ರೆ ಖಂಡಿತ ಇದೊಂದು ಕುಂಟ ನೆಪ ಅಷ್ಟೇ, ನಿಮಗೆ ಅಹಂಕಾರ, ಜಂಬ ಜಾಸ್ತಿ ಅಂತಾನೆ ಬೇರೆಯವರು ತಿಳ್ಕೊಳೋದು.

ನಿಮಗೆ ಯಾರದಾದ್ರೂ ಹೆಸರು ನೆನಪಿಟ್ಕೋಳೋದು ಕಷ್ಟ ಅಂತ ಅನ್ಸಿದ್ರೆ ಇಲ್ಲೊಂದು ಸುಲಭ ಉಪಾಯ ಇದೆ, ಅವರು ನಿಮಗೆ ಮೊದಲ ಸಲ ಪರಿಚಯವಾಗಿ  ತಮ್ಮ ಹೆಸರು ಹೇಳಿದ ಮೇಲೆ ಅವರ ಜೊತೆ ಮಾತುಕತೆ ಆಡ್ತಿರೋವಾಗ ಪದೇ ಪದೇ ಅವರ ಹೆಸರನ್ನ ಹೇಳ್ತಿರಿ. ಆಗ ಸುಲಭವಾಗಿ ನೆನಪಿರುತ್ತೆ.ನಿಮ್ಮ ಮೇಲೆ ತಪ್ಪು ಅಭಿಪ್ರಾಯಾನೂ ಇರಲ್ಲ.

ಮೂಲ

7. ಯಾರಿಗೂ ಆಸಕ್ತಿ ಇಲ್ಲದೆ ಇರೋ ವಿಷಯದ ಬಗ್ಗೆ ವಿವರವಾಗಿ ಮಾತಾಡಕ್ಕೆ ಹೋಗ್ಬೇಡಿ

ನೀವು ನಿಮ್ಮ ಸ್ನೇಹಿತರ ಜೊತೆ ಸೇರಿದ್ದಾಗ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಇರ್ರೋವು ಇರೋದು ನಿಜ. ಯಾವಾಗ ಎಲ್ಲರಲ್ಲೂ ಒಂದೇ ತರದ ವಿಷ್ಯದಲ್ಲಿ ಆಸಕ್ತಿ, ರುಚಿ ಇರಲ್ವೋ ಆಗ ನೀವು ಯಾವುದೊ ಒಂದು ವಿಷಯ ಇಟ್ಕೊಂಡು ಅದ್ರ ಬಗ್ಗೆ ವಿವರವಾಗಿ ಮಾತಾಡೋದು ಒಳ್ಳೇದಲ್ಲ. ಒಂದು ವೇಳೆ ನೀವು ಮಾತಾಡಕ್ಕೆ ಶುರು ಮಾಡಿದ್ರೆ ಯಪ್ಪಾ ಇವ್ನು ಬಿಡೋದೇ ಇಲ್ಲ ಕೊರೀತಾನೆ ಅನ್ನೋದು, ಮುಖ ಸಿಂಡರಿಸೋದು ಗ್ಯಾರಂಟಿ. ಅಷ್ಟೇ ಅಲ್ಲ ಸಾಧ್ಯವಾದಷ್ಟೂ ನಿಮ್ಮಿಂದ ದೂರ ಇರೋ ಪ್ರಯತ್ನಾನೂ ಮಾಡ್ತಾರೆ.

ಹೀಗೆ ಗುಂಪಲ್ಲಿರೋವಾಗ ಹೆಚ್ಚು ಜನರಿಗೆ ಯಾವ ವಿಷಯ ಇಷ್ಟಾನೋ ಅದರ ಬಗ್ಗೆ ಮಾತಾಡ್ಬೇಕು ಅನ್ನೋದು ನಿಮ್ಮ ಗಮನದಲ್ಲಿರಲಿ. ಬರಿ ನೀವು ಒಬ್ಬರೇ ಮಾತಾಡ್ಬೇಡಿ. ಎಲ್ಲರೂ ಸಂಭಾಷಣೆ, ಚರ್ಚೆ ಮಾಡೋ ಅವಕಾಶ ಇರ್ಲಿ.ಎಲ್ಲರೂ ಸುಮ್ಮನೆ ನಿಮ್ಮ ಮಾತನ್ನ ಕೇಳಿಸ್ಕೊಂಡು ಸುಮ್ನಿದ್ರೆ ಏನೂ ಪ್ರಶ್ನೆ ಕೇಳ್ದಿದ್ರೆ , ಏನೂ ಹೇಳ್ಕೊಂಡು ಹೋಗ್ಲಿ, ಯಾಕೆ ಬೇಜಾರ್ ಮಾಡಬೇಕು ಅಂತ ಸುಮ್ನಿರಬಹುದು ಕೂಡ. ಚೆನ್ನಾಗಿ ಯೋಚನೆ ಮಾಡಿ ವಿಷಯ ತೊಗೊಂಡು ಮಾತಾಡಕ್ಕೆ ಮರೀಬೇಡಿ.

6. ಬರಿ ನಿಮ್ಮ ಬಗ್ಗೇನೇ ಹೇಳ್ತಾ ಇರ್ಬೇಡಿ

ನಿಮ್ಮ  ಸ್ನೇಹಿತರು ಸಿಕ್ಕಿದಾಗ ಬರಿ ನಿಮ್ಮ ಕತೇನೇ ಹೇಳ್ತಾ ಇರ್ಬೇಡಿ. ನಾವು ಹಂಗೆ ಮಾಡಿದೆ, ಹಿಂಗೆ ಮಾಡಿದೆ, ನಮ್ಮ ಅತ್ತೆ ಜೊತೆ ಹೀಗೆ ಜಗಳ ಆಯಿತು, ಗಂಡನ ಜೊತೆ ಹಾಗಾಯ್ತು ಅಂತ. ಅಕಸ್ಮಾತ್ ನೀವು ಹೇಳಿದ್ರೆ ನಿಮ್ಮ ಮಾತು ಮುಗಿದ ತಕ್ಷಣ ಅವ್ರೂ ಇದೆ ತರದ ಕತೆ ಹೇಳಕ್ಕೆ ಶುರು ಮಾಡ್ತಾರೆ. ಅಷ್ಟೇ ಅಲ್ಲ ಅವರು ನಿಮಗೆ ತುಂಬಾ ಅಹಂಕಾರ ಇದೆ, ನೀವು ಜಗಳ ಗಂಟರು, ಕಿರುಕುಳ ಕೊಡೋವ್ರು ಅಂತ ತಿಳ್ಕೊಂಡ್ರೂ ಆಶ್ಚರ್ಯ ಇಲ್ಲ.

ಯಾರದಾದ್ರೂ ಜೊತೆ ಮಾತಾಡೋವಾಗ ಬೇರೆ ವಿಷಯಕ್ಕಿಂತ  ನಮ್ಮ ಬಗ್ಗೆ ಹೇಳ್ಕೋ ಬೇಕು ಅನ್ಸೋದು ಸಹಜ. ಅದಕ್ಕೆ ಅಂತಾನೆ ಒಂದು ಅಧ್ಯಯನ ಮಾಡಿ, ಅವರು ತಮ್ಮ ವಿಷಯ ಬಿಟ್ಟು ಬೇರೆದರ ಬಗ್ಗೆ ಮಾತಾಡಿದ್ರೆ ದುಡ್ಡು ಕೊಡ್ತೀವಿ ಅಂತಾನೂ ಹೇಳಿದ್ರಂತೆ. ಆದ್ರೆ ಯಾರೂ ತಮ್ಮ ಬಗ್ಗೆ ಹೇಳ್ಕೊಳ್ದೆ ಇರ್ಲಿಲ್ವಂತೆ. ನಮಗೆ ಅವರ ಬಗ್ಗೆ ಆಸಕ್ತಿ ಇದೆ ಅಂತ ಗೊತ್ತಾದ್ರೆ ಸಾಕು ಅವರೂ ನಿಮ್ಮಕಡೆ ಗಮನ ಕೊಡ್ತಾರೆ ಅಷ್ಟೇ ಅಲ್ಲ ನಿಮ್ಮ ಬಗ್ಗೆನೂ ಹೇಳ್ಕೋಬಹುದು.

ಮೂಲ

5. ನಿಮ್ಮ ಬಗ್ಗೆ ನೀವೇ ಬೇಜಾರು ಮಾಡ್ಕೊಂಡು ಗೋಳಾಡಬೇಡಿ

ನಿಮ್ಮ ಬಗ್ಗೆ ನಿಮಗೆ ಬೇಜಾರಾದ್ರೆ ಜೀವನದಲ್ಲಿ ಏನನ್ನೂ ಮಾಡೋದಕ್ಕೆ ನಿಮಗೆ ಆಸಕ್ತಿ ಇರಲ್ಲ, ಅಷ್ಟೇ ಅಲ್ಲ ಯಾರದೇ ಮಾತನ್ನೂ ನೀವು ಕೇಳೋ ಸ್ಥಿತಿಲಿರಲ್ಲ. ನಿಮಗೆ ಏನೇ ಸಮಸ್ಯೆ ಇದ್ರೂ ಅದನ್ನ ಹೊರಕ್ಕೆ ಹಾಕಲು ಭಯಪಡಬೇಡಿ.ನಿಮ್ಮ ಸ್ನೇಹಿತರ ಮುಂದೆ ನಿಮ್ಮ ಸಮಸ್ಯೆ ಹೇಳ್ಕೊಂಡ್ರೆ ಖಂಡಿತವಾಗಿ ನಿಮಗೆ ಸಹಾಯ ಮಾಡಕ್ಕೆ ಅವರಿಗೆ ತುಂಬಾ ಖುಷಿ ಆಗುತ್ತೆ. ಆದ್ರೆ ಮೇಲೆ ಮೇಲೆ ಅವರು ನಿಮ್ಮ ಮೇಲೆ ಅನುಕಂಪ ತೋರ್ಸೋ ತರ ಮಾಡ್ಕೊಬೇಡಿ.

4. ತುಂಬಾ ಜೋರು ಧ್ವನಿಯಲ್ಲಿ ಮಾತಾಡ್ಬೇಡಿ

ಹಾಗೆ ಮಾಡಿದ್ರೆ ನೀವು ಮಾತಾಡ್ತಿರೋ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲ, ನಿಮಗೆ ವಿಶ್ವಾಸ ಇಲ್ಲ ಅನ್ಸುತ್ತೆ. ತುಂಬಾನೇ ಮೆಲು ಧ್ವನಿಯಲ್ಲಿ ಮಾತಾಡಿದ್ರೆ ನೀವು ಏನು ಹೇಳ್ತಿದ್ದೀರಾ ಅಂತಾನೆ ಗೊತ್ತಾಗಲ್ಲ. ಅಷ್ಟೇ ಅಲ್ಲ ನಿಮಗೆ ಆ ವಿಷಯದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಅಂತ ಅಂದುಕೊಳ್ಳೋದಷ್ಟೇ ಅಲ್ಲ ನೀವು ಹೇಳ್ತಿರೋ ವಿಷಯದ ಬಗ್ಗೆ ಗಮನಾನೂ ಕೊಡಲ್ಲ. ನೀವು ಮಾತಾಡ್ತಿರೋದು ಏನೇ ಇರ್ಲಿ. ಕಥೇನೋ, ಒಂದು ಪ್ರಶ್ನೆನೋ ಅಥವಾ ಒಂದು ಥ್ಯಾಂಕ್ಸ್ ಹೇಳೋದೋ, ಯಾವುದೇ ಇರ್ಲಿ ನೀವು ಯಾರಿಗೆ ಹೇಳ್ತಿದ್ದೀರೋ ಅವರಕಡೆ ಗಮನ ಕೊಡಿ, ಅಷ್ಟೇ ಅಲ್ಲ ಸ್ಪಷ್ಟವಾಗಿ, ನಯವಾಗಿ ಮಾತಾಡಿ. 

ಮೂಲ

3. ಬರೀ ಒಂದೆರಡು ಪದಗಳಲ್ಲಿ ಉತ್ತರ ಕೊಡ್ಬೇಡಿ

ಯಾರಾದ್ರೂ ಏನಾದ್ರೂ ಕೇಳಿದ್ರೆ ಸುಮ್ನೆ ಒಂದೆರಡು ಮಾತಲ್ಲಿ ಉತ್ತರ ಕೊಟ್ರೆ, ಅದು ಖಂಡಿತ ಒಳ್ಳೇದಲ್ಲ. ಹಾಗೆ ಮಾಡಿದ್ರೆ ಅದು ನಿಮ್ಮದು ಸಂಕೋಚದ ಸ್ವಭಾವ ಅಥವಾ ನಿಮಗೆ ಅವರ ಹತ್ರ ಮಾತಾಡಕ್ಕೆ ಇಷ್ಟ ಇಲ್ಲ ಅನ್ನೋದನ್ನ ತೋರ್ಸುತ್ತೆ. ಅಷ್ಟೇ ಅಲ್ಲ ಇದ್ರಿಂದ ಒಳ್ಳೆ ಅಭಿಪ್ರಾಯನೂ ಬರಲ್ಲ.

ಒಂದು ಸಲ ಮಾತು ಶುರು ಆದ್ರೆ, ಅದು ಮಾತುಕತೆ ಮೂಲಕ ಸ್ವಲ್ಪ ಮುಂದುವರಿಯೋದಕ್ಕೆ ಅವಕಾಶ ಮಾಡ್ಕೊಡಿ. ಯಾರಾದ್ರೂ ನಿಮ್ಮ ಬಗ್ಗೆ ಕೇಳಿದ್ರೆ ನಿಮ್ಮ ಹೆಸರು ಹೇಳಿ, ನಾನು ಕೆಲಸ ಮಾಡ್ತಿರೋದು ಬೆಂಗಳೂರಲ್ಲಿ ಆದ್ರೆ ನಮ್ಮ ಊರು ಮಂಗಳೂರು .. ಹೀಗೆ ಮಾತಾಡಿದಾಗ ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯನೂ ಬರುತ್ತೆ, ನಿಮ್ಮ ಜೊತೆ ಮಾತಾಡಕ್ಕೆ ಅವರೂ ಇಷ್ಟಪಡ್ತಾರೆ.

2. ಬೇರೆಯವರ ಬಗ್ಗೆ ಅಥವಾ ನಿಮ್ಮಿಬ್ಬರಿಗೂ ಇರೋ ಕಾಮನ್ ಫ್ರೆಂಡ್ಸ್ ಬಗ್ಗೆ ಕೆಟ್ಟದಾಗಿ ಮಾತಾಡ್ಬೇಡಿ

ಇಬ್ರು ಸೇರಿದಾಗ ಮತ್ತೊಬ್ಬರ ಬಗ್ಗೆ ಮಾತುಗಳು ಬರೋದು ಸಹಜ. ಅವರನ್ನ ಆಡ್ಕೊಳ್ಳೋದು, ನಗೋದು ಇವೆಲ್ಲ ಮಾಮೂಲು. ಆದ್ರೆ ನೀವು ಒಂದು ಮಾತು ತಿಳ್ಕೊಳಿ ಇವತ್ತು ನಿಮ್ಮ ಜೊತೆ ಇದ್ದು ಬೇರೆಯವರನ್ನ ಆಡ್ಕೊಳ್ಳೋದು, ಅವರ ಬಗ್ಗೆ ಕೆಟ್ಟದಾಗಿ ಮಾತಾಡೋವ್ರು ನಾಳೆ ಬೇರೆಯವರ ಜೊತೆ ಇದ್ದಾಗ ನಿಮ್ಮ ಬಗ್ಗೆನೂ ಈ ತರ ಮಾತಾಡಬಹುದು ಅಲ್ವ?

ಹೀಗೆ ಸೇರಿದಾಗ ಯಾರ ಬಗ್ಗೆನಾದ್ರೂ ಮಾತಾಡ್ಬೇಕಾದ್ರೆ ಅವರ ಬಗ್ಗೆ ಕೆಟ್ಟದಾಗಿ ಮಾತಡೋ ಬದ್ಲು ಅವರಲ್ಲಿರೋ ಒಳ್ಳೆ ಗುಣ, ಅವರು ಮಾಡಿರೋ ಒಳ್ಳೆ ಕೆಲಸದ ಬಗ್ಗೆ ಮಾತಾಡಿ.

ಮೂಲ

1. ನಿಮ್ಮ ನಿಯಮಗಳನ್ನ ನೀವೇ ಮುರೀಬೇಡಿ

ಸ್ವಂತ ಅಭಿಪ್ರಾಯಗಳಿಲ್ಲದೆ ಇದ್ರೆ ನಿಮ್ಮ ನೆನಪು ಬೇರೆಯವರಲ್ಲಿ ಉಳಿಯೋ ತರ ನೀವು ಏನೂ ಮಾಡಕ್ಕಾಗಲ್ಲ. ಈ ತರದವ್ರು ಹೇಳೋದೊಂದು ಮಾಡೋದೊಂದು. ತಾವು ಹೀಗೆ ಹಾಗೆ ಅಂತ ಕೊಚ್ಕೋತಾರೆ ಆದ್ರೆ ಏನನ್ನೂ ಪಾಲಿಸೋದಿಲ್ಲ. ಇಂತವರನ್ನ ಯಾರು ಗಂಭೀರವಾಗಿ ಪರಿಗಣಿಸಲ್ಲ. ಯಾರು ತಮ್ಮ ತತ್ವ, ನಿಯಮಗಳ ಬಗ್ಗೆ ಮಾತಾಡ್ತಾರೋ, ಅದನ್ನ ಪಾಲಿಸ್ತಾರೋ ಅವರು ಯಾವಾಗ್ಲೂ ಬೇರೆಯವರ ಮನಸ್ಸಲ್ಲಿ ಉಳ್ಕೋತಾರೆ. ಇಂತವರಿಗೆ ಗೌರವಾನೂ ತನಗೆ ಸಿಗುತ್ತೆ. ಸುಮ್ನೆ ಕೊಚ್ಕೊಳ್ಳೋದಕ್ಕಿಂತ ಮಾಡಿ ತೋರಿಸಿದ್ರೆ ನಿಮ್ಮನ್ನ ನಿಮ್ಮ ವ್ಯಕ್ತಿತ್ವಾನ ಎಲ್ರೂ ಮೆಚ್ಕೋತಾರೆ.

ಇದನ್ನೆಲ್ಲಾ ನೆನಪಿಟ್ಕೊಂಡು, ಇದರ ಪ್ರಕಾರ ನಡ್ಕೊಳಿ. ಎಲ್ಲರ ಮನಸ್ಸಿಗೂ ಹತ್ರ ಆಗ್ತೀರ.