ನಾವು ಉಪ್ಪನ್ನ ದಿನಾ ಬಳಸ್ತೀವಿ. ಆದ್ರೆ ಉಪ್ಪಿನ ಮಹತ್ವ ಬರೀ ಅಡಿಗೆಗೆ ನಿಲ್ಲೋದಿಲ್ಲ. ನಮ್ಮ ದೇಹದ ಒಳಗೆ ವಿಚಿತ್ರ ಪರಿಣಾಮಗಳಿಂದ ಹಿಡಿದು ನಕ್ಷತ್ರಗಳ ಮೇಲೆ ಪರಿಣಾಮ ಬೀರೋವರೆಗೂ ಇದೆ!

ಉಪ್ಪಿನಿಂದ ನಾವು ಬಾಹ್ಯಾಕಾಶದ ಬಗ್ಗೆ ತಿಳ್ಕೊಬಹುದು, ಭೂಮಿ ಬಗ್ಗೆ ಕೂಡ ತಿಳ್ಕೊಬಹುದು. ವಿಚಿತ್ರ ಅಂದ್ರೆ, ಉಪ್ಪು ಒಂದು ಕಡೆ ಹಲವಾರು ಜನರಿಗೆ ಆರೋಗ್ಯ ಕೆಡ್ಸಿದ್ರೆ ಇನ್ನೊಂದು ಕಡೆ ಎಷ್ಟೋ ರೋಗಗಳನ್ನ ತಡೆಯೋಕೇ ಕೂಡ ಸಹಾಯ ಮಾಡುತ್ತೆ.

1 . ಉಪ್ಪು ಸೋಪಿಗಿಂತ ಒಳ್ಳೇದು

ಎಷ್ಟೋ ಸಲ ಆಸ್ಪತ್ರೆಗಳಿಗೆ ಹೋದ ತಕ್ಷಣ ಗಾಯಗಳಿಂದ ಸೋಂಕು ಆಗ್ದೇ ಇರ್ಲಿ ಅಂತ ಗಾಯಗಳನ್ನ ತೊಳೀತಾರೆ. ಆದ್ರೆ ಇದು ಸಾಕಾಗಲ್ಲ.

2015ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ 2400 ಜನರ ಗಾಯಗಳನ್ನ ತೊಳೆಯೋಕೆ ಸೋಪ್ ಅಥವಾ ಉಪ್ಪಿನ ನೀರನ್ನ ಬಳಸಿದ್ರು. ಒಂದು ವರ್ಷದ ಕಾಲ ಅವರಿಗೆ ಯಾವ್ದಾದ್ರು ಸೋಂಕು ಆಗುತ್ತಾ ಅಂತ ಗಮನಿಸ್ತಾ ಇದ್ರು. ಸೋಪ್ ಬಳಸಿ ಗಾಯ ತೊಳೆದ ಜನರು ಮತ್ತೆ ಮತ್ತೆ ಸೋಂಕು ತಗುಲಿ ಚಿಕಿತ್ಸೆಗೆ ಬಂದ್ರು. ಉಪ್ಪಿನ ನೀರು ಬಳಸಿದ ಜನರ ಗಾಯ ಬೇಗ ವಾಸಿ ಆಗಿತ್ತು.

ಡಾಕ್ಟರ್ ಗಳು ಗಾಯಗಳು ತೊಳೆಯೋಕೆ ಉಪ್ಪನ್ನ ಬಳಸಿದ್ರೆ ಖರ್ಚು ತುಂಬಾ ಕಮ್ಮಿ ಆಗುತ್ತೆ. ನಮ್ಮ ದೇಶಕ್ಕೆ ಇದು ಎಂಥ ವರ ಆಗ್ಬಹುದು ಅಲ್ವಾ?

2. ಉಪ್ಪಿನಿಂದ ಮೆದುಳಿಗೆ ತೊಂದ್ರೆ ಆಗ್ಬಹುದು

2018 ರಲ್ಲಿ ಕೆಲವು ಸಂಶೋಧಕರು ಇಲಿಗಳಿಗೆ ತುಂಬಾ ಉಪ್ಪು ಇರೋ ಊಟ ಕೊಟ್ಟು ಅದರ ಪರಿಣಾಮ ನೋಡೋಕೆ ಪ್ರಯತ್ನ ಮಾಡಿದ್ರು. ಇಲಿಗಳು ಸಾಮಾನ್ಯವಾಗಿ ಚೆನ್ನಾಗೇ ಮಾಡೋ ಕೆಲಸಗಳನ್ನ ಮಾಡೋಕಾಗ್ಲಿಲ್ಲ.

ಹೆಚ್ಚು ಉಪ್ಪು ತಿನ್ನೋದ್ರಿಂದ ಬಿ.ಪಿ ಹೆಚ್ಚಾಗುತ್ತೆ ಅಂತ ನಮ್ಗೆಲ್ರಿಗೂ ಗೊತ್ತು. ಆದ್ರೆ ಹೆಚ್ಚು ಉಪ್ಪು ತಿನ್ನೋದ್ರಿಂದ ನಿಮ್ಮ ಮೆದುಳಿನ ಮೇಲೇನೆ ನೇರವಾಗಿ ಪರಿಣಾಮ ಆಗ್ಬಹುದು.

3.ಉಪ್ಪು ಜಾಸ್ತಿ ತಿನ್ನೋದು ಒಂದು ಚಟ ಆಗ್ಬಹುದು

ಕೆಲವರಿಗೆ ಜಾಸ್ತಿ ಸಿಹಿ ತಿನ್ನೋ ಅಭ್ಯಾಸ ಇರತ್ತೆ. ಇದೆ ಥರ ಉಪ್ಪು ಜಾಸ್ಟ್ ತಿನ್ನೋದು ಕೂಡ ಒಂದು ಚಟ ಆಗ್ಬಹುದು.

2016 ರಲ್ಲಿ 400 ಜನರ ಜೊತೆ ಒಂದು ಸಂಶೋಧನೆ ಮಾಡಿದಾಗ TAS2R48 ಅನ್ನೋ ಜೀನ್ ಇದ್ದವರು ಬೇರೆಯವರಿಗಿಂತ ಎರಡು ಪಟ್ಟು ಉಪ್ಪು ತಿಂತಾರೆ ಅಂತ ಗೊತ್ತಾಯ್ತು.

4. ಗ್ಲೋಬಲ್ ವಾರ್ಮಿಂಗ್ ತಡೆಯೋಕೆ ಉಪ್ಪು ಸಹಾಯ ಮಾಡೊ ಸಾಧ್ಯತೆ ಇದೆ

ನಮ್ಮ ಭೂಮಿಯ ತಾಪಮಾನ ಜಾಸ್ತಿ ಆಗ್ತಾ ಇರೋದು ನಮಗೆ ಹೊಸ ವಿಷ್ಯ ಏನಲ್ಲ. ಅದನ್ನ ನಿಯಂತ್ರಣ ಮಾಡೋಕೆ ಉಪ್ಪಿನಿಂದ ಸಾಧ್ಯನಾ ಅಂತ ಕೆಲವು ವಿಜ್ಞಾನಿಗಳು ಯೋಚ್ನೆ ಮಾಡ್ತಿದಾರೆ. ಭೂಮಿಯಿಂದ ಹೊರಗೆ ಗಾಳಿಯಲ್ಲಿ ಉಪ್ಪನ್ನ ಬಿಡುಗಡೆ ಮಾಡೋದ್ರಿಂದ ಭೂಮಿಯನ್ನ ತಂಪು ಮಾಡ್ಬಹುಹು ಅನ್ನೋದು ವಿಜ್ಞಾನಿಗಳ ಯೋಚನೆ.

ಆದ್ರೆ ಇದು ಇನ್ನೂ ಬೆಳವಣಿಗೆ ಆಗ್ಬೇಕಾಗಿರೋ ಯೋಜನೆ. ಉಪ್ಪಲ್ಲಿ ಕ್ಲೋರಿನ್ ಇರೋದ್ರಿಂದ ಅದರಿಂದ ದುಷ್ಪರಿಣಾಮಗಳು ಕೂಡ ಆಗ್ಬಹುದು.

5. ಬಾಹ್ಯಾಕಾಶದಲ್ಲಿ ಜೀವ ಇದೆಯಾ ಅಂತ ತಿಳ್ಕೊಬಹುದು

ಕೆನಡಾದ ಡೆವನ್ ಐಸ್ ಕ್ಯಾಪ್ ಗಿಂತ 2000 ಅಡಿ ಕೆಳಗೆ ಎರಡು ಉಪ್ಪು ನೀರಿನ ಕೆರೆಗಳು ಇವೆ ಅಂತ ತಿಳಿದುಬಂದಿದೆ. ಇಲ್ಲಿನ ನೀರಲ್ಲಿ ಸಮುದ್ರದಲ್ಲಿ ಇರೋದಕ್ಕಿಂತ ಐದು ಪಟ್ಟು ಜಾಸ್ತಿ ಉಪ್ಪು ಇದೆಯಂತೆ. ಈ ಕೆರೆಗಳಲ್ಲಿ ನಮಗೆ ಇನ್ನೂ ಗೊತ್ತಿಲ್ಲದೇ ಇರೋ ಎಷ್ಟೋ ಜೀವಿಗಳು ಬದುಕಿವೆಯಂತೆ.

ಈ ಕೆರೆಗಳು ಯಾಕೆ ವಿಶೇಷ ಅಂದ್ರೆ ಬೇರೆ ಗ್ರಹಗಳಲ್ಲೂ ಈ ರೀತಿಯ ಕೆರೆಗಳಿವೆ. ಇಲ್ಲಿ ಜೀವಿಗಳಿದ್ರೆ, ಅಲ್ಲಿಯೂ ಇರಬಹುದು ಅನ್ನೋದು ವಿಜ್ಞಾನಿಗಳ ಯೋಚನೆ.

6. ಬರ ಬರೋಕೆ ಕಾರಣ ಆಗ್ಬಹುದು

2017 ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಇತಿಹಾಸದಲ್ಲಿ ಬಂದಿದ್ದ ಎರಡು ಅತಿ ದೊಡ್ಡ ಬರಗಳಿಗೆ ಉಪ್ಪು ಕಾರಣ ಅಂತ ಗೊತ್ತಾಯ್ತು. 10000 ವರ್ಷಗಳ ಮುಂಚೆ ಒಂದು ಸಲ ಮತ್ತು 120000 ವರ್ಷಗಳ ಮುಂಚೆ ಇನ್ನೊಂದು ಬರ ಬಂದಿತ್ತು. ಈ ಎರಡೂ ಬರಗಳು ವರ್ಷಗಟ್ಟಲೆ ಜನರಿಗೆ ಕಷ್ಟ ಕೊಟ್ಟಿದ್ವು. ಈ ಎರಡೂ ಬರಗಳಿಗೆ ಕಾರಣ ಉಪ್ಪು ಅನ್ನೋದು ಆಶ್ಚರ್ಯ.

7. ಆಕ್ಸಿಜನ್ ಉತ್ಪತ್ತಿಗೆ ಉಪ್ಪು ಕಾರಣ

ಭೂಮಿಯಲ್ಲಿ ಮೊದಲ ಬಾರಿಗೆ ಆಕ್ಸಿಜನ್ ಅಥವಾ ಆಮ್ಲಜನಕ ಯಾವಾಗ ಉತ್ಪತ್ತಿ ಯಾವಾಗ ಆಯ್ತು ಅಂತ ಇತ್ತೀಚಿನವರೆಗೂ ಗೊತ್ತೇ ಇರಲಿಲ್ಲ. ಆದ್ರೆ 2018 ರಲ್ಲಿ ಮೊದಲ ಬಾರಿಗೆ ಆಕ್ಸಿಜನ್ ಉತ್ಪತ್ತಿ ಆಗಿದ್ದು 2 ಬಿಲಿಯನ್ ವರ್ಷಗಳ ಹಿಂದೆ ಅಂತ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಥರ ಮೊದಲನೇ ಸಲ ಆಕ್ಸಿಜನ್ ಉತ್ಪತ್ತಿ ಆಗೋಕೆ ಕಾರಣ ಉಪ್ಪು ಅಂತ ಕೂಡ ಗೊತ್ತಾಗಿದೆ.

8. ಮುಂದೆ ಉಪ್ಪಿನ ಮೇಲೆ ಸರ್ಕಾರ ನಿಯಂತ್ರಣ ಹೇರಬಹುದು

ಅಗತ್ಯಕ್ಕಿಂತ ಜಾಸ್ತಿ ಉಪ್ಪು ತಿಂದ್ರೆ ಎಷ್ಟೋ ಖಾಯಿಲೆಗಳು ಬರುತ್ತೆ. 2012 ರಲ್ಲಿ ನಡೆದ ವರ್ಲ್ಡ್ ನ್ಯೂಟ್ರಿಷನ್ ಮೀಟಿಂಗ್ ನಲ್ಲಿ ಸಂಶೋಧಕರು ಉಪ್ಪನ್ನ ಸರ್ಕಾರಗಳು ನಿಯಂತ್ರಣ ಮಾಡ್ಬೇಕು ಅಂತ ಹೇಳಿದಾರೆ. ಯಾಕಂದ್ರೆ ನಾವು ನಮಗೆ ಬೇಕಾದ ಪ್ರಮಾಣಕ್ಕಿಂತ 10 ಪಟ್ಟು ಜಾಸ್ತಿ ಉಪ್ಪು ತಿಂತಿದ್ದೀವಿ. ಹೀಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಮುಂದೆ ಸರ್ಕಾರಗಳು ನಿಯಂತ್ರಣ ಮಾಡಬಹುದು.