http://wdy.h-cdn.co/assets/16/38/980x490/landscape-1474489841-gettyimages-170617907.jpg

ಒಂದು ದೆವ್ವದ ಸಿನಿಮಾನೋ, ಥ್ರಿಲ್ಲರ್ ಸಿನಿಮಾನೋ ನೋಡ್ವಾಗ ಉಗುರು ಕಚ್ಚಿದ್ರೆ ಪರ್ವಾಗಿಲ್ಲ. ಟೆನ್ಶನ್ ಆದಾಗ ಉಗುರು ಕಚ್ಚೋದು ಸಾಮಾನ್ಯ. ಆದರೆ ನಿಮಗೆ ಯಾವಾಗ್ಲೂ ಉಗುರು ಕಚ್ಚೋ ಅಭ್ಯಾಸ ಇದ್ಯಾ? ಇಡೀ ದಿವಸ ಆಗಾಗ ಉಗುರು ಕಚ್ತಾ ಇರ್ತೀರಾ? ಹಾಗಿದ್ರೆ ನಿಮಗೆ ಕಂಪೆನಿ ಕೊಡೋಕೆ ತುಂಬಾ ಜನ ಇದ್ದಾರೆ. ಮೂರು ಜನ್ರಲ್ಲಿ ಒಬ್ರಿಗೆ ಈ ಅಭ್ಯಾಸ ಇದೆ ಅಂತ ಅಂದಾಜಿದೆ.

ಸದಾ ಉಗುರು ಕಚ್ತಾ ಇರೋಕೆ ಟೆನ್ಷನ್, ಆತಂಕ ಕಾರಣ ಅಂತ ನೀವಂದ್ಕೊಂಡಿರ್ತೀರ. ಮೇಲ್ನೋಟಕ್ಕೆ ಇದು ನಿಜ ಅಂತ ಅನ್ಸಿದ್ರೂ, ಒಂದು ರಿಸರ್ಚಿನ ಪ್ರಕಾರ,  ಉಗುರು ಕಚ್ಚೋರಿಗೆ ಅವರು ಎಲ್ಲಾದ್ರಲ್ಲೂ ಪರ್ಫೆಕ್ಟ್ ಆಗಿರ್ಬೇಕು ಅನ್ನೋ ಗೀಳಿರತ್ತಂತೆ… ಆ ಟೆನ್ಶನ್ನಲ್ಲೇ ಈ ಚಟ ಹಿಡಿಸ್ಕೋತಾರಂತೆ!

ಉಗುರು ಕಚ್ಚೋ ಅಭ್ಯಾಸ ಇರೋರ ವ್ಯಕ್ತಿತ್ವ ಹೇಗಿರತ್ತೆ?

ಉಗುರು ಕಚ್ಚೋದೊಂದೇ ಅಲ್ಲ… ಕಾರಣ ಇಲ್ಲದೆ ಮೈ ಪರಚ್ಕೊಳ್ಳೋದು, ಸುಮ್ಸುಮ್ನೆ ಕೂದಲು ಎಳ್ಕೊಳ್ಳೋದು – ಇಂಥ ಪ್ರಯೋಜನ ಇಲ್ಲದ ಕೆಲಸಗಳನ್ನ ಮಾಡೋದು ಕೆಲವ್ರಿಗೆ ಅಭ್ಯಾಸ ಆಗ್ಬಿಟ್ಟಿರುತ್ತೆ. ಇದರಿಂದ ಅವರಿಗೆ ನೋವಾಗ್ತಿದ್ರೂ ಈ ಅಭ್ಯಾಸದಿಂದ ಹೊರಗೆ ಬರೋಕೆ ಆಗ್ತಿರಲ್ಲ.

ಈ ಅಭ್ಯಾಸ ಸ್ಟ್ರೆಸ್, ಟೆನ್ಷನ್ನಿಂದಾಗಿ ಬರೋದಲ್ಲ, ಇದಕ್ಕೆ ಕಾರಣ ಇರೋದು ತಾನು ಎಲ್ಲಾನೂ ಪರ್ಫೆಕ್ಟ್ ಆಗಿ ಮಾಡ್ಬೇಕು ಅನ್ನೋ ಮನೋಭಾವ. ಈ ರೀತಿ ಮನೋಭಾವ ಇರೋರಿಗೆ ಸುಮ್ನೆ ಕೂರೋಕೆ ಆಗೊಲ್ಲ. ಸುಮ್ನೆ ಕೂರೋ ಬದಲು ಏನಾದ್ರೂ ಮಾಡ್ಬೇಕು ಅನ್ನಿಸ್ತಿರತ್ತೆ. ಏನ್ ಮಾಡೋದು ಅಂತ ಗೊತ್ತಾಗ್ದೆ ಉಗುರು ಕಚ್ಚೋಕೆ ಶುರು ಮಾಡ್ತಾರೆ. ಸುಮ್ನಿರೋದ್ಕಿಂತ ಏನೋ ಮಾಡೋದು ಒಳ್ಳೇದು ಅಂತ. ಉಗುರು ಕಚ್ತಿರೋದನ್ನೂ ಏನೋ ಮಹಾ ಘನಂದಾರಿ ಕೆಲಸ ಅಂದ್ಕೊಂಡು ಅವರ ಮನಸ್ಸು ಮೋಸ ಹೋಗುತ್ತೆ. ಉಗುರು ಕಚ್ಚುವಾಗ ಮೊದಲಿಗೆ ನೆಮ್ಮದಿ ಸಿಗುತ್ತೆ. ಸ್ವಲ್ಪ ಹೊತ್ತು ಆದ್ಮೇಲೆ ಅದು ತಪ್ಪು ಅಂತ ಗೊತ್ತಾಗಿ ಬೇಸರ, ಸಿಟ್ಟು ಬರುತ್ತೆ.

ಬೋರ್ ಆದಾಗ, ಕಿರಿಕಿರಿ ಅನ್ನಿಸ್ದಾಗ್ಲೂ ಹೀಗೆನೇ – ಪ್ರಯೋಜನಕ್ಕೆ ಬರೋ ಅಂಥದ್ದು ಏನಾದ್ರೂ ಮಾಡೋ ಬದಲು ಉಗುರು ಕಚ್ಚೋಕೆ ಶುರು ಮಾಡ್ತಾರೆ.

ಮೂಲ

ಇದರ ಬಗ್ಗೆ ಏನು ಸಂಶೋಧನೆ ನಡೀತು?

47 ಜನರನ್ನ ಇಟ್ಕೊಂಡು ರಿಸರ್ಚ್ ಮಾಡಿದ್ರು. ಅದರಲ್ಲಿ 24 ಜನ ಉಗುರು ಕಚ್ಚೋದು, ಮೈ ಪರಚ್ಕೊಳ್ಳೋದು… ಈ ರೀತಿ ಅಭ್ಯಾಸ ಇರೋರು. ಉಳಿದೋರು ಈ ಅಭ್ಯಾಸ ಇಲ್ದಿರೋರು.

ಇವ್ರಿಗೆಲ್ಲ ನಾಲ್ಕು ಥರದ ಭಾವನೆ ಹುಟ್ಟಿಸಿ ಅವರು ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ ನೋಡಿದ್ರು.  ಸ್ಟ್ರೆಸ್ ಹುಟ್ಸೋಕೆ ಏರೋಪ್ಲೇನ್ ಕ್ರ್ಯಾಶ್ ಆಗೋ ದೃಶ್ಯವನ್ನ ತೋರ್ಸಿದ್ರು, ರಿಲ್ಯಾಕ್ಸ್ ಆಗಿರೋ ಭಾವ ಹುಟ್ಸೋಕೆ ಸಮುದ್ರದ ಅಲೆಗಳ ದೃಶ್ಯ ತೋರ್ಸಿದ್ರು, ಕಿರಿಕಿರಿ ಹುಟ್ಸೋಕೆ ಒಂದು ಕಷ್ಟದ ಒಗಟನ್ನ ತುಂಬಾ ಸುಲಭ ಅಂತ ಹೇಳಿ ಒಗಟು ಬಿಡಿಸೋಕೆ ಕೊಟ್ರು, ಬೋರ್ ಆದಾಗ ಅವರ ಪ್ರತಿಕ್ರಿಯೆ ನೋಡೋಕೆ ಒಬ್ರನ್ನೇ ಒಂದು ಕೋಣೆ ಒಳಗೆ ಐದಾರು ನಿಮಿಷ ಬಿಟ್ರು.

ಉಗುರು ಕಚ್ಕೊಳ್ಳೋರು ಸ್ಟ್ರೆಸಿಂದ ಹಾಗೆ ಮಾಡೋದಾಗಿದ್ರೆ ಪ್ಲೇನ್ ಕ್ರ್ಯಾಶ್ ದೃಶ್ಯ ಬಂದಾಗ ಮಾತ್ರ ಅವರು ಉಗುರು ಕಚ್ಕೋಬೇಕಿತ್ತಲ್ವ? ಆದರೆ ಹಾಗಾಗ್ಲಿಲ್ಲ. ರಿಲ್ಯಾಕ್ಸ್ ಆಗಿರೋವಾಗ ಸ್ವಲ್ಪ ಕಡಿಮೆ ಅನ್ನೋದು ಬಿಟ್ರೆ ಇವರು ಉಗುರು ಕಚ್ತಾನೇ ಇದ್ರು. ಅಂದ್ರೆ ಸ್ಟ್ರೆಸ್ ಒಂದೇ ಅಲ್ಲ, ಕಿರಿಕಿರಿ ಆದಾಗ, ಬೋರ್ ಆದಾಗ್ಲೂ ಉಗುರು ಕಚ್ಚಿದ್ರು.

ಸರಿ, ಇದರಿಂದ ಉಗುರು ಕಚ್ಚೋದಿಕ್ಕೂ ಪರ್ಫೆಕ್ಷನಿಸ್ಟ್ ಮನೋಭಾವಕ್ಕೂ ಏನು ಸಂಬಂಧ ಅಂತ ಕೇಳ್ತೀರಾ? ಬೇಗ ಬೋರ್ ಆಗೋದು, ಸುಮ್ಮನಿರೋಕೆ ಆಗದೇ ಚಡಪಡಿಸೋದು, ಅಂದ್ಕೊಂಡಿದ್ದು ಕೂಡ್ಲೇ ಮಾಡದಿದ್ರೆ ಕಿರಿಕಿರಿ ಅನುಭವಿಸೋದು – ಇದು ತಾವು ಎಲ್ಲಾದ್ರಲ್ಲೂ ಪರ್ಫೆಕ್ಟ್ ಆಗಿರ್ಬೇಕು ಅಂತ ಅಂದ್ಕೊಳ್ಳೋರ ಸ್ವಭಾವ. ಇದರಿಂದಾನೇ ಉಗುರು ಕಚ್ಚೋರು ಕೂಡ ಅದೇ ಮನೋಭಾವದವರು ಅನ್ನೋ ತೀರ್ಮಾನಕ್ಕೆ ಬಂದಿರೋದು.

ಮೂಲ

ಕಾರಣ ಏನೇ ಇದ್ರೂ ಉಗುರು ಕಚ್ಚೋದ್ರಿಂದ ಆರೋಗ್ಯದ ಮೇಲಾಗೋ ಈ ದುಷ್ಪರಿಣಾಮಗಳ ಬಗ್ಗೆ ತಿಳ್ಕೊಂಡಿರಿ…

1. ಉಗುರು ಮತ್ತು ಉಗುರಿನ ಸುತ್ತಲಿನ ಚರ್ಮ ಕೆಂಪಾಗಿ ಹುಣ್ಣಾಗುತ್ತೆ.

2. ಉಗುರಿನ ಸುತ್ತ ಚರ್ಮಕ್ಕೆ ಇನ್ಫೆಕ್ಶನ್ ಆಗಿ, ರಕ್ತ ಸುರಿಯತ್ತೆ.

3. ಬ್ಯಾಕ್ಟೀರಿಯಾ, ವೈರಸ್, ಇನ್ಫೆಕ್ಶನ್ ಕೈಯಿಂದ ಬಾಯಿಗೆ ಸುಲಭವಾಗಿ ಹಬ್ಬುತ್ತೆ. ಖಾಯಿಲೆ ಬೀಳೋ ಚಾನ್ಸ್ ಹೆಚ್ಚಾಗುತ್ತೆ.

4. ಹಲ್ಲಿನ ಎನಾಮಲ್ ಹೊರಟೋಗತ್ತೆ.

5. ಹಲ್ಲು ಶೇಪ್ ಕಳ್ಕೊಳ್ಳುತ್ತೆ.

ಇದೆಲ್ಲ ಅಲ್ಲದೆ ನೋಡೋರಿಗೂ ಕೂಡ ಉಗುರು ಕಚ್ಚೋರ್ ಬಗ್ಗೆ ಒಳ್ಳೆ ಅಭಿಪ್ರಾಯ ಬರೋಕೆ ಸಾಧ್ಯ ಇಲ್ಲ. ತೀರಾ ಅತಿಯಾದ್ರೆ Obsessive Compulsive Disorder (OCD) ಅನ್ನೋ ಮಾನಸಿಕ ಸಮಸ್ಯೆಯ ಲಕ್ಷಣ ಆಗೋ ಚಾನ್ಸ್ ಕೂಡ ಇದೆ!

ನಿಮಗೆ ಅಥವಾ ನಿಮ್ಮ ಪರಿಚಯದೋರ್ಗೆ ಈ ಅಭ್ಯಾಸ ಇದ್ರೆ, ಕೂಡಲೇ ಅಭ್ಯಾಸದಿಂದ ಹೊರಗೆ ಬರೋದು ದಾರಿ ಹುಡುಕಿ. ಅದು ಬಿಟ್ಟು, ಉಗುರು ಕಚ್ಚೋದ್ರಲ್ಲಿ ಇಷ್ಟೆಲ್ಲ ವಿಷಯ ಇದ್ಯಲ್ಲಾ ಅಂತ ಗಾಬರಿಯಾಗಿ ತಿರ್ಗಾ ಉಗುರು ಕಚ್ಕೊಂಡೂ ಕೂರ್ಬೇಡಿ!