ಜಾಹೀರಾತು ಅಂದ್ರೆ ಮುಖ ಮುರಿಯೋ ಹಾಗಿರುತ್ತೆ ತಾನೆ? ಹೀಗಿರುವಾಗ ಕನ್ನಡದಲ್ಲಿ ಕೊನೆಗೂ ಒಂದು ಒಳ್ಳೇ ಜಾಹೀರಾತು ಬಂದಿದೆ.

ಆಶ್ಚರ್ಯ ಏನೂಂದ್ರೆ ಇದನ್ನ ಕರ್ನಾಟಕ ಸರ್ಕಾರ ತನ್ನ ‘ಹೊಸಬೆಳಕು’ LED ಬಲ್ಬ್ ಯೋಜನೆಗೋಸ್ಕರ ಮಾಡಿರೋದು. ಈಗಾಗಲೆ ನೋಡಿದ್ದರೂ ಒಂದ್ಸಲ ನೋಡಿಬಿಡಿ:

ಇದು ಕನ್ನಡಿಗರ ಮನಸ್ಸಿನ ಮೇಲೆ ಎಂಥಾ ಪ್ರಭಾವ ಬೀರಿದೆ ಅಂದ್ರೆ ಹೇಳಕ್ಕಾಗಲ್ಲ. ಇದನ್ನ ನೂರಾರು ಸಲ ನೋಡಿದರೂ ಇನ್ನೂ ನೋಡೋ ಆಸೆ ಜನಕ್ಕೆ! ಹೀಗೆ ಯಾಕೆ? ನಾವು ನೋಡಿ ನೋಡಿ ಕೆಳಗಿನ 16 ಕಾರಣ ಪತ್ತೆ ಹಚ್ಚಿದೀವಿ, ಓದಿ:

1. ಇದನ್ನ ಕನ್ನಡದಲ್ಲೇ ತೆಗ್ದಿದಾರೆ, ಬೇರೆ ಭಾಷೆಯಲ್ಲಿ ತೆಗೆದು ಕಡೇ ನಿಮಿಷದಲ್ಲಿ ಕನ್ನಡಕ್ಕೆ ತರೋ ಪ್ರಯತ್ನ ಮಾಡಿಲ್ಲ

ಕನ್ನಡದ ಜಾಹೀರಾತು ಕನ್ನಡದಲ್ಲಿ ಮಾಡೋದೇ ಇಲ್ಲ ಅಂದ್ರೆ ತಪ್ಪಾಗಲಾರದು. ಮೊದಲು ಹಿಂದಿಯಲ್ಲೋ ಇಂಗ್ಲಿಷಲ್ಲೋ ಮಾಡಿ ಆಮೇಲೆ ಅದನ್ನ ಕನ್ನಡಕ್ಕೆ ಆದಷ್ಟು ಅಗ್ಗವಾಗಿ (ಪದಕ್ಕೆ ಇಷ್ಟು ಅಂತ ಕೊಟ್ಟು) ಅನುವಾದ ಮಾಡಿಸಿ ಕನ್ನಡಿಗರ ಮುಖದ ಮೇಲೆ ಎಸೆಯೋದೇ ಇವತ್ತಿನ ಜಾಹೀರಾತು ಪ್ರಪಂಚ ಅಳವಡಿಸಿಕೊಂದಿರೋ ಪದ್ದತಿ. ಇಂಥದ್ದರಲ್ಲಿ ಕನ್ನಡದಲ್ಲೇ, ಕನ್ನಡಿಗರ ಮನಸ್ಸಿಗೆ ನಾಟುವ ಹಾಗೇನೇ ಒಂದು ಅದ್ಭುತವಾದ ಜಾಹೀರಾತ್ನ ನಮ್ಮ ಸರ್ಕಾರ ಹೊರತಂದಿದೆ.

2. ಇದರಲ್ಲಿ ಬೇರೆ ಭಾಷೆ ಪದಗಳ ಪಳೆಯುಳಿಕೆ ಇಲ್ಲ

ಹಿಂದಿ ಅಥವಾ ಇಂಗ್ಲಿಷ್ನಿಂದ ಅನುವಾದ ಮಾಡಿರೋ ಜಾಹೀರಾತುಗಳಲ್ಲಿ ಕೆಲವು ಆಯಾ ಭಾಷೆಯ ಪದಗಳ್ನ ಅಲ್ಲಿ-ಇಲ್ಲಿ ಉಳಿಸಿಕೊಂಡಿರ್ತಾರೆ – ಯಾಕಂದ್ರೆ ಅದನ್ನ ಅನುವಾದ ಮಾಡುವ ಯೋಗ್ಯತೆ ಇರುವಂಥವರಿಗೆ ಅನುವಾದಕ್ಕೆ ಕೊಡಲ್ಲ ಅವರು, ಅದಕ್ಕೆ. ಅಷ್ಟೇ ಅಲ್ಲ, ಎಷ್ಟೋ ಪದಗಳ್ನ ಮತ್ತೆ ಕಲ್ಪನೆಗಳ್ನ ಭಾಷೆಯಿಂದ ಭಾಷೆಗೆ ಅನುವಾದ ಮಾಡಕ್ಕೇ ಆಗಲ್ಲ. ಆದರೆ ಈ ಜಾಹೀರಾತು ಮೊದಲಿಂದ ಕೊನೆ ವರೆಗೂ ನೂರಕ್ಕೆ ನೂರು ಕನ್ನಡದಲ್ಲಿದೆ – ಬರೀ ಭಾಷೆಯಷ್ಟೇ ಅಲ್ಲ, ಪದಗಳಷ್ಟೇ ಅಲ್ಲ, ಕಲ್ಪನೆಗಳು, ಹಾಡು, ಭಾವನೆಗಳು – ಎಲ್ಲವೂ ಕನ್ನಡಮಯವಾಗಿವೆ. ಆದ್ದರಿಂದ ಕನ್ನಡಿಗರ ಮನಸ್ಸಿಗೆ ಬೇಗನೆ ನಾಟುತ್ತೆ.

hosabelaku2.gif

3. ನಮಗೆ ತುಂಬ ಹತ್ತಿರವಾದ ಕನ್ನಡಿಗ ಕಲಾವಿದರು ಇದರಲ್ಲಿ ಮಾಡಿದಾರೆ

ಸಾಮಾನ್ಯವಾಗಿ ಜಾಹೀರಾತುಗಳಲ್ಲಿ ಬೀದಿಯಲ್ಲಿ ಹೋಗೋ ಬಾಲಿವುಡ್ ನಟ-ನಟೀರ್ನೇ ತೋರ್ಸೋದು. ಸಾಮಾನ್ಯ ಜನರನ್ನ ತೋರಿಸಿದರೂ ಅವರು ಕನ್ನಡಿಗರಾಗಿರೋದಿಲ್ಲ. ಅವರು ಕನ್ನಡ ಮಾತಾಡ್ತಿರಲ್ಲ ಅನ್ನೋದೂ ಸ್ಪಷ್ಟವಾಗಿರುತ್ತೆ. ಆದರೆ ಈ ಜಾಹೀರಾತಲ್ಲಿ ಕನ್ನಡಿಗರ ಮನಸ್ಸನ್ನು ಮೊದಲೇ ಗಿದ್ದಿರೋ ಪುನೀತ್ ಮತ್ತೆ ರಮ್ಯ ಮಾಡಿದಾರೆ. ಅವರ ಒಂದು ಕಣ್ಣು ಸನ್ನೆ ಸಾಕು ಕನ್ನಡಿಗರ ಮನಸ್ಸು ಗೆಲ್ಲಕ್ಕೆ!

hosabelaku3.gif

4. ಇದರಲ್ಲಿ ಮಾರ್ತಾ ಇರೋ ‘ಸಾಮಾನಿ’ಗೆ ಒಂದು ಅಚ್ಚಕನ್ನಡದ ಹೆಸರಿಟ್ಟಿದ್ದಾರೆ – ‘ಹೊಸಬೆಳಕು’ ಅಂತ

ಬೇರೆ ಜಾಹೀರಾತುಗಳಲ್ಲಿ ಇಲ್ಲ ಇಂಗ್ಲಿಷಲ್ಲಿರತ್ತೆ ಇಲ್ಲಾ ಹಿಂದೀಲಿರತ್ತೆ. ‘ಹೊಸಬೆಳಕು’ ಬದಲು ಹಿಂದೀಲಿ ‘ನವದೀಪ್’ ಅಂತ ಹೆಸರಿಟ್ಟಿದ್ದರೆ ಕನ್ನಡಿಗರ ಮೇಲೆ ಈ ಜಾಹೀರಾತಿನಷ್ಟು ಮೋಡಿ ಮಾಡಕ್ಕೆ ಆಗ್ತಿರಲಿಲ್ಲ.

hosabelaku4.gif

5. ಸಂಗೀತ ನಮ್ಮ ಎದೆಗೆ ನಾಟುತ್ತೆ

ಒಂದು ಹಳೇ ಕನ್ನಡದ ಹಾಡ್ನ ವಾದ್ಯಸಂಗೀತದಲ್ಲಿ ತುಂಬಾ ಚೆನ್ನಾಗಿ ಮಾಡಿದಾರೆ… ಅದೂ ಯಾವ ಹಾಡು?!….

hosabelaku5.gif

6. ‘ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ’ ಅನ್ನೋ ಅಣ್ಣೋರ ಹಾಡು ಇದಕ್ಕೆ ತುಂಬಾ ಚೆನ್ನಾಗಿ ಹೊಂದುತ್ತೆ

‘ಹೊಸಬೆಳಕು ಮೂಡುತಿದೆ’ ಅನ್ನೋ ಹಾಡ್ನೂ ತೊಗೋಬೋದಿತ್ತು, ಆದರೆ ಇದನ್ನ ತೊಗೊಂಡು ಇಡೀ ಕನ್ನಡ ನಾಡಿನ ಒಗ್ಗಟ್ಟು ಸೂಚಿಸುವ ರೀತಿಯಲ್ಲಿ ಮಾಡಿದಾರೆ. ತುಂಬಾ ಒಳ್ಳೇ ಎಫೆಕ್ಟ್ ಬಂದಿದೆ! ಮಾನವನಾಗಿ ಹುಟ್ಟಿದಮೇಲೆ ಇಂಥಾ ದೃಶ್ಯಗಳ್ನ ಕಂಡಿದೀರಾ ಅನ್ನೋ ಪ್ರಶ್ನೆ ನೋಡುಗನ ತಲೇಲಿ ಬಿತ್ತುತ್ತೆ ಈ ಜಾಹೀರಾತು:

hosabelaku6.gif

7. ಬೊಮ್ಮನಹಳ್ಳಿಯ ಕಿಂದರಜೋಗಿಯ ಥೀಂ ಎಲ್ಲ ಕನ್ನಡಿಗರ ಮನಸ್ಸು ಗೆಲ್ಲುತ್ತೆ

ಈ ಜಾಹೀರಾತಲ್ಲಿ ಕಿಂದರಜೋಗಿ ಪುನೀತ್, ಇಲಿಗಳು ಹಳೇ ಬಲ್ಬುಗಳು. ಹೇಗೆ ಅವನ ಹಿಂದೆ ಬರ್ತವೆ ನೋಡಿ… ಕನ್ನಡಿಗರ ಮನೆಮಾತಾಗಿರೋ ಈ ಕತೆ ಈ ಹೊಸದೊಂದು ರೀತಿಯಲ್ಲಿ ಮತ್ತೆ ಬಂದಿರೋದು ತುಂಬಾ ಒಳ್ಳೆಯ ಎಫೆಕ್ಟ್ ಕೊಡುತ್ತೆ.

hosabelaku7.gif

8. ಇಡೀ ಜಾಹೀರಾತು ಸ್ಲೋ-ಮೋಶನ್ನಲ್ಲಿರೋದು ಹಿತವಾಗಿದೆ

ಇತ್ತೀಚೆಗೆ ಜಾಹೀರಾತು, ಫಿಲಮ್ಮು – ಎಲ್ಲದರಲ್ಲೂ ಎಲ್ಲ ಬೇಗ ಬೇಗ ಆಗಬೇಕು ಅನ್ನೋದು ಜಾಸ್ತಿಯಾಗಿದೆ. ಮೊದಲೇ ಒತ್ತಡದಲ್ಲಿರೋ ಜನ ಅಂಥದ್ದನ್ನ ನೋಡಿದರೆ ಇನ್ನಷ್ಟು ಒತ್ತಡಕ್ಕೆ ಒಳಗಾಗೋ ಸಾಧ್ಯತೆ ಇದೆ. ಹೀಗಿರುವಾಗ್ ಈ ಜಾಹೀರಾತಲ್ಲಿ ಎಲ್ಲವೂ ನಿಧಾನವಾಗಿ, ನಯವಾಗಿ, ಸ್ಲೋ ಮೋಶನ್ನಲ್ಲಿ ಬರುತ್ತೆ. ಇದು ಎಷ್ಟು ಹಿತವಾಗಿದೆ ಅಂತ ವಿವಿರ್ಸಕ್ಕೆ ಕಷ್ಟ!

hosabelaku8.gif

9. ಕೊನೇಲಿ ಹಳೇ ಬಲ್ಬುಗಳೆಲ್ಲ ಹೋಗಿ ನೀರಿಗೆ ಬೀಳೋದು ತುಂಬಾ ಚೆನ್ನಾಗಿದೆ

ನೀರಿಗೆ ಬಲ್ಬು ಹಾಕೋದು ಒಳ್ಳೇದಲ್ಲ, ನಿಜ, ಆದ್ರೆ ಇಲ್ಲಿ ಎಲ್ಲಾ ಕಥೆ… ನೀರಿನಿಂದಾನೇ ಇಡೀ ಸೃಷ್ಟಿ ಬಂದಿರೋದು ಅನ್ನೋದು ವೇದಗಳಲ್ಲಿರೋ ಮಾತು… ಹಳೇ ಬೆಳಕು ಕೊನೆಗೆ ಹೋಗಿ ನೀರಿನಲ್ಲಿ ಸೇರಿಕೊಳ್ಳೋದು ತುಂಬಾ ಚೆನ್ನಾಗಿದೆ. ಆ ಬಲ್ಬುಗಳು ಬಿದ್ದಾಗ ನೀರಲ್ಲಿ ಮುಳುಗೋ ಸದ್ದು ಕೂಡ ಕೇಳಿಸುತ್ತೆ…

hosabelaku9.gif

10. ‘ಹೊಸಬೆಳಕು… ಬದಲಾವಣೆಯ ಸಮಯ’ ಅನ್ನೋ ಒಗಟಿನ ಮಾತು ನಮ್ಮ ಎದೆಗೆ ನಾಟುತ್ತೆ

ಹಳೇದು ಹೋಗಬೇಕು, ಹೊಸದು ಬರಬೇಕು ಅನ್ನೋದನ್ನ ಎಷ್ಟು ಚೆನ್ನಾಗಿ ಹೇಳಿದಾರೆ ಅಂದ್ರೆ ನಂಬಕ್ಕಾಗಲ್ಲ ರೀ! ಬಲ್ಬ್ ಬದಲಾಯಿಸಿ ಅಂತ ಬಾಯಿಬಿಟ್ಟು ಹೇಳಲ್ಲ, ಎಲ್ಲಾ ಒಗಟು ಒಗಟಾಗಿ ನಮ್ಮ ಮನಸ್ಸಿಗೆ ನಾಟುತ್ತೆ.

hosabelaku10.gif

11. ‘ಕಿಂದರಜೋಗಿ’ ಏನ್ ಮಾಡ್ತಿದಾನೆ ಅಂತ ಗೊತ್ತಾದ ಮೇಲೆ ರಮ್ಯನ ಮುಖ ನೋಡಕ್ಕೆ ಎಷ್ಟು ಜನ್ಮ ತೊಗೊಂಡ್ ಬಂದ್ರೂ ಸಾಲದು

ಈ ಎಫೆಕ್ಟು ಯಾವ ಬಾಲಿವುಡ್/ಹಾಲಿವುಡ್ ನಟಿ ಮಾಡಿದ್ದರೂ ಸಿಗ್ತಾ ಇರಲಿಲ್ಲ. ಅವರು ನಮಗೆ ದೂರ ರೀ. ರಮ್ಯ ಹತ್ತಿರ.

hosabelaku16.gif

12. ಇಡೀ ಜಾಹೀರಾತಲ್ಲಿ ‘ಹೊಸಬೆಳಕು’ ಅನ್ನೋ ಪದ ಪಿಸುಮಾತಲ್ಲಿ ಮಾತ್ರ ಕೇಳಿಸೋದು

ಬಾಯಿಬಿಟ್ಟು ಹೇಳಿದ್ರೆ ಇಷ್ಟು ಚೆನ್ನಾಗಿರ್ತಾ ಇರಲಿಲ್ಲ. ಹಿನ್ನೆಲೆ ಸಂಗೀತದ ಜೊತೆ ಪಿಸುಮಾತಲ್ಲಿ ‘ಹೊಸಬೆಳಕು… ಹೊಸಬೆಳಕು’ ಅಂತ ಬರ್ತಾನೇ ಇರತ್ತಲ್ಲ, ಅದು ನಮ್ಮ ಕಿವಿಯಲ್ಲಿ ಯಾರೋ ಹೇಳಿದಂಗಿದೆ… ಏನ್ ಎಫೆಕ್ಟು!

hosabelaku11.gif

13. ಪುನೀತ್ ಒಂದು ಕಡೆ ಕಾಲಿಂದ ಹೀಗೆ ಎಲೆ ಒದೀತಾನೆ… ಆಗ ದುಡ್ಡು ಸುರಿದಂಗೆ ಸದ್ದು ಬರುತ್ತೆ…

ಬೆಳಕಿಗೋಸ್ಕರ ತುಂಬಾ ದುಡ್ಡು ಪೋಲು ಮಾಡೋದು ಬೇಡ ಅನ್ನೋ ಸಂದೇಶ ಇಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ಜಾಹೀರಾತಲ್ಲಿ ನಾಣ್ಯಗಳ ಸದ್ದು ಕೇಳಿ ಬರ್ತಾನೇ ಇರತ್ತೆ… ನೋಡುಗರಿಗೆ ನೆನಪಿಸಕ್ಕೆ – ನಿಮಗೆ ಎಲ್.ಇ.ಡಿ. ಬಲ್ಬಿಂದ ದುಡ್ಡು ಉಳಿಯುತ್ತೆ ಅಂತ!

hosabelaku15.gif

14. ಸೆಟಿಂಗ್ ತುಂಬ ಚೆನ್ನಾಗಿದೆ

ಆ ಮನೆಗಳು, ಆ ರಸ್ತೆಗಳು, ಆ ಕಾರು, ಆ ತೋಟ… ಎಲ್ಲಾ ಸೂಪರ್!

hosabelaku12.gif

15. ಪುನೀತ್ ಆ ಬಲ್ಬ್-ನ ರಮ್ಯಂಗೆ ಗುಲಾಬಿ ಹೂ ಕೊಟ್ಟಂಗ್ ಕೊಡ್ತಾನೆ…

ಹೊಸ ಬೆಳಕಿನಲ್ಲಿ ಹೊಸ ರೀತಿಯ ಪ್ರೇಮ! ಇಲ್ಲಿ ಸಂದೇಶ… ಪುನೀತ್ ನೋಡುಗನಿಗೂ ಇದನ್ನ ಕೊಡ್ತಿದಾನೆ ಅನ್ನೋದು… ಏನ್ ಚಿಂದಿ ಐಡಿಯ ರೀ!

hosabelaku13.gif

16. ಪುನೀತ್ ಮಾತು ಮೌನ ಎರಡೂ ಕನ್ನಡಿಗರ ಮನಸ್ಸು ಕದ್ದುಗೊಂಡು ಹೋಗುತ್ತೆ

ಇಡೀ ಜಾಹೀರಾತಲ್ಲಿ ಪುನೀತ್ ಮಾತಾಡೋದು ಮೂರೇ ಪದ: ‘ಹೊಸಬೆಳಕು… ಬದಲಾವಣೆಯ ಸಮಯ’. ಅಷ್ಟೇ. ಎಂಥಾ ಮೋಡಿ ಮಾಡುತ್ತೆ ನೋಡಿ!

hosabelaku14.gif

ಈಗ ಮೇಲಕ್ಕೆ ಹೋಗಿ ವೀಡಿಯೋ ನೋಡ್ತೀರಾ ಅಂತ ನಮಗೆ ಗೊತ್ತು. ನೋಡಿ, ನೋಡ್ತಾ ಇರಿ, ನಿಮ್ಮ ಸಂತೋಷ ಬೇರೆಯವರ ಜೊತೇನೂ ಹಂಚಿಕೊಳ್ಳಿ!

ಹೆಚ್ಚಿನ ಓದಿಗೆ:

  1. LED ಬಲ್ಬ್ ಕೊಂಡ್ಕೊಳೋ ಮುಂಚೆ ಇದನ್ನ ಓದಿದರೆ ಜಾಣರಾಗ್ತೀರಿ

  2. ರಾಜಕೀಯದಲ್ಲಿರೋ ಸಿನಿಮಾ ನಟೀರು ರಮ್ಯನ್ ಮೀರ್ಸೋದು ಈಗ ಇನ್ನಷ್ಟು ಕಷ್ಟ