ಇದೇ ತಿಂಗಳ 27ರ ಮಧ್ಯರಾತ್ರಿ ಜರುಗ್ತಾ ಇರೋ ಚಂದ್ರಗ್ರಹಣನ್ನ ನೋಡ್ಬೇಕು ಅಂತಾ ಜನ ಯಾಕೆ ಕ್ಷಣಗಣನೆ ಮಾಡ್ತಾ ಇದ್ದಾರೆ ಅಂತೀರಾ? ಅವತ್ತಿನ ಗ್ರಹಣಕ್ಕೆ ತನ್ನದೇ ಆದ ಕೆಲ್ವು ವಿಶೇಷತೆ ಇದೆ, ಆದ್ರಿಂದ ಈ ತವಕ. ಅವತ್ತು ಅಂಥದ್ದೇನು ವಿಶೇಷ ಜರಗತ್ತೆ? ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ಯಾಕೆ ಕೆಂಪಗೆ ಕಾಣ್ತಾನೆ?  ಇದಕ್ಕೆಲ್ಲ ಉತ್ತರ ಇಲ್ಲಿದೆ, ನೋಡಿ. ಗ್ರಹಣನ್ನಂತೂ ಮರೀದೇ ನೋಡಿ. ಜೊತೆಗೆ, ಮೋಡ ನಮ್ಗೆ ಅವತ್ತಿನ ರಾತ್ರಿ ತೊಂದ್ರೆ ಕೊಡ್ದೇ ಇರಲಿ ಅಂತ ಮೊರೆ ಇಡಿ!

1) ಭೂಮಿ ನೆರಳೊಳ್ಗೆ ಚಂದ್ರ ನುಸಿಯೋದೇ ಚಂದ್ರಗ್ರಹಣ

ಸೂರ್ಯನ ಬೆಳಕನ್ನ ತಡೆ ಹಿಡ್ಯೋ ಭೂಮಿ ತನ್ನ ನೆಳ್ಳನ್ನ ಲಕ್ಷಾಂತ್ರ ಮೈಲು ಚಾಚಿರತ್ತೆ. ಅದೊಂದು ಐಸ್ಕ್ರೀಮ್ ಕೋನ್ ಥರಾ ಆಕಾಶದಲ್ಲಿ ಭೂಮಿಯಿಂದಾಚೆಗೆ ಬಿದ್ದಿರತ್ತೆ. ಭೂಮಿನ ಸುಮಾರು 27 ದಿನಕ್ಕೊಂದ್ಸಾರಿ ಸುತ್ತಿ ಬರೋ ಚಂದ್ರ, ನಮ್ಗೆ ಬೆನ್ನು ತೋರಿಸ್ದೇ, ನಮ್ಮನ್ನ ಎಡಕ್ಕೆ ಬಿಟ್ಕೊಂಡು ಸುತ್ತಾನೆ. ಭೂಮಿಯ ನೆಳ್ಳೊಳ್ಗೆ ಅವ್ನು ನುಸುಳ್ದಾಗ ಚಂದ್ರಗ್ರಹಣ ಆಗತ್ತೆ. ಅದಕ್ಕೆ ಚಂದ್ರ ನುಸುಳೋ ಜಾಗ್ದಲ್ಲಿ ನೆರಳು ಚಂದ್ರನ ಅಗಲಕ್ಕಿಂತ ದೊಡ್ದಾಗಿರ್ಬೇಕು ಅಷ್ಟೇ. ಇದಾಗೋವಾಗ ಚಂದ್ರ ಮತ್ತೆ ಸೂರ್ಯನ ಮಧ್ಯೆ ಭೂಮಿ ಬರೋದ್ರಿಂದ ಹುಣ್ಣಿಮೆ ದಿನಾನೇ ಚಂದ್ರಗ್ರಹಣ ಆಗಕ್ಕೆ ಸಾಧ್ಯ.

2) ಪ್ರತಿ ಹುಣ್ಣಿಮೇಗೂ ಒಂದ್ಸಾರಿ ಚಂದ್ರಗ್ರಹಣ ಯಾಕಾಗಲ್ಲ?

ಚಂದ್ರ ಭೂಮಿನ ಸುತ್ತಿ ಬರ್ತಾ ಇದ್ರೂ, ಪ್ರತಿ ಹುಣ್ಣೀಮೇಗೂ ಅದು ಭೂಮಿಯ ನೆರಳ ಕೋನ್ ಮೇಲೆ ಅಥವಾ ಕೆಳಗೆ ಹಾದು ಹೋಗೋದ್ರಿಂದ ಪ್ರತಿ ಹುಣ್ಣಿಮೇಗೂ ಗ್ರಹಣ ಆಗೋದಿಲ್ಲ. ಆದ್ರೆ, ಅದು ಸುತ್ತೋ ಹಾದಿ ನೆರಳ ಮೇಲೆ ಅಥ್ವಾ ಕೆಳ್ಗೆ ಆಗೋದ್ರಿಂದ, ವರ್ಷಕ್ಕೆ ಕಮ್ಮೀ ಅಂದ್ರೂ ಎರಡು ಸಾರಿ ನೆರಳ ಒಳಗೆ ನುಸಿಲೇಬೇಕು. ಭೂಮಿ ಸೂರ್ಯನ್ನ  ಸುತ್ತೋ ಸಮತಲಕ್ಕೆ ಚಂದ್ರ ಬರೋದನ್ನೆ ನಮ್ಮ ಹಿಂದಿನೋರು ರಾಹು-ಕೇತು ಅಂತ ಕರೆದಿದ್ದು. ಆದ್ರೆ ರಾಹು ಅಥ್ವಾ ಕೇತು ಭೂಮಿಯ ನೆರಳ ಕೋನ್ ಹತ್ರ ಕಾಯ್ತಾ ಇದ್ರೆ ಮುಗೀತು, ಚಂದ್ರನ್ನ ಮುಕ್ಕದೇ ಇರಲ್ಲ.

3) ಯಾರಿಗೆ ಚಂದ್ರಗ್ರಹಣ ಕಾಣ್ಸತ್ತೆ?

ಯಾರಿಗೆ ಗ್ರಹಣದ ಸಮಯದಲ್ಲಿ ಚಂದ್ರ ಕಾಣಿಸ್ತಾನೋ ಅವ್ರಿಗೆಲ್ಲ ಚಂದ್ರಗ್ರಹಣ ಕಾಣ್ಸತ್ತೆ. ಮೋಡ ಮುಸುಕಿದ ವಾತಾವರಣ ಇರ್ಬಾರ್ದು ಅಷ್ಟೇ. ನಮ್ಗೆ ಈ ಸಾರಿ 27ರ ರಾತ್ರಿ 23:54ಕ್ಕೆ ಶುರು ಆಗತ್ತೆ. ಹೆಚ್ಚು ಕಮ್ಮಿ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಿಗೆ ಈ ಗ್ರಹಣ ಕಾಣ್ಸತ್ತೆ.

4) ಈ ಬಾರಿ ಚಂದ್ರಗ್ರಹಣದ ವಿಶೇಷತೆ ಏನು?

ಚಂದ್ರನ ಪೂರ್ತಿ ಬಿಂಬ ಭೂಮಿಯ ನೆರಳೋಳ್ಗೆ ನುಸೀದಿದ್ರೆ ಭಾಗಶಃ ಗ್ರಹಣ ಆಗತ್ತೆ. ಆದ್ರೆ ನಮ್ಗೆ ಈ ಸಾರಿ ಕಾಣ್ಸೋದು ಪೂರ್ಣಗ್ರಹಣ. ಜೊತೆಗೆ ಅವತ್ತು ಕೆಂಪು ಚಂದ್ರನ ಆಸುಪಾಸಲ್ಲೆ ಹೊಳೆಯೋ ಕೆಂಪುಗ್ರಹ ಮಂಗಳ ಕೂಡಾ ಕಾಣ್ಸತ್ತೆ. ಅವತ್ತು ಮಂಗಳ ಸೂರ್ಯ ಮತ್ತೆ ಭೂಮಿ ಒಂದೇ ರೇಖೇಲಿ ಬರತ್ವೆ. ಅಂದ್ರೆ, ಮಂಗಳ, ಚಂದ್ರ ಎರಡೂ ಸೂರ್ಯ ಮುಳ್ಗೋವಾಗ ಹುಟ್ಟಿ ಮಧ್ಯರಾತ್ರಿಗೆ ನೆತ್ತಿ ಮೇಲೆ ಬಂದಿರತ್ವೆ. ಮಂಗಳನ್ನ ಈ ರೀತಿ ನೋಡಕ್ಕೆ ಇನ್ನೂ ಎರಡು ವರ್ಷ, ಎರಡು ತಿಂಗ್ಳು ಕಾಯ್ಬೇಕು.

5) ಚಂದ್ರ ಎಷ್ಟೊತ್ತು ಕೆಂಪಗಿರ್ತಾನೆ?

ಪೂರ್ಣಗ್ರಹಣ ಶುರು ಆಗೋದು ಸರಿಯಾಗಿ ರಾತ್ರಿ 1 ಗಂಟೆಗೆ. ಅಲ್ಲಿಂದ ಸುಮಾರು 1 ಗಂಟೆ 43 ನಿಮಿಷ ಚಂದ್ರ ಕೆಂಪಗೆ ಕಾಣ್ತಾನೆ. ಇದು ಈ ಶತಮಾನದಲ್ಲೇ ಅತ್ಯಂತ ಹೆಚ್ಚು ಹೊತ್ತು ನಡೆಯೋ ಚಂದ್ರಗ್ರಹಣ. ಅತಿ ಜಾಸ್ತಿ ಅಂದ್ರೆ 1 ಗಂಟೆ 48 ನಿಮಿಷಗಳ ಕಾಲ ಪೂರ್ಣ ಚಂದ್ರಗ್ರಹಣ ಇರ್ಬೋದು. ಆದ್ರಿಂದ ಇದನ್ನ ನೋಡಕ್ಕೆ ಹಿಂದೇಟು ಹಾಕ್ಬೇಡಿ. ಅಲ್ಲಿಂದ ಮುಂದೆ 3:49ರವರೆಗೆ ನಿಧಾನವಾಗಿ ನೆರಳಿಂದ ಹೊರಬರೋದ್ರಿಂದ, ಕ್ರಮೇಣ ಬೆಳ್ಳಗೆ ಹೊಳ್ಯೋ ಭಾಗ ಹೆಚ್ಚಾಗ್ತಾ ಹೋಗತ್ತೆ. ಹೀಗೆ ಅತಿ ದೀರ್ಘ ಚಂದ್ರಗ್ರಹಣದ ಕಾಲ ಗೊತ್ತಾದ್ರೆ, ಹೈಸ್ಕೂಲ್ ಗಣಿತ ಉಪ್ಯೋಗ್ಸಿ ಭೂಮಿಯಿಂದ ಚಂದ್ರಂಗಿರೋ ದೂರನ್ನ ಲೆಕ್ಕಹಾಕ್ಬೋದು. ಇದನ್ನ 2,150 ವರ್ಷಗಳ ಹಿಂದೇನೆ, ಹಿಪ್ಪಾರ್ಕಸ್ ಅನ್ನೋ ಗ್ರೀಕ್ ಗಣಿತಜ್ಞ ಅಂದಾಜು ಮಾಡಿ, ಭೂಮಿಯಿಂದ ಸುಮಾರು 3,90,000 ಕಿಲೋಮೀಟರ್ ದೂರ ಇದೆ ಅಂತ ಹೇಳಿದ್ದ.

6) ಗ್ರಹಣದ ವೇಳೆ ಚಂದ್ರ ಕಾಣಿಸ್ಬಾರದು, ಆದ್ರೂ ಕೆಂಪಗೆ ಕಾಣೋದೇಕೆ?

ಭೂಮಿ ಮೇಲೆ ವಾತಾವರಣ ಇಲ್ದಿದ್ರೆ ಚಂದ್ರನ್ನ ಗ್ರಹಣದ ಸಮಯದಲ್ಲಿ ನೋಡಕ್ಕೇ ಆಗ್ತಿರ್ಲಿಲ್ಲ. ಆದ್ರೆ ಭೂಮಿ ಮೇಲಿನ ಗಾಳೀಲಿರೋ ಅಣುಗಳು, ಧೂಳಿನ ಕಣಗಳು ಸೂರ್ಯನಿಂದ ಬರೋ ಬೆಳಕಲ್ಲಿ ಹೆಚ್ಚಿನ ತರಂಗಾಂತರ ಹೊಂದಿರೋ ಕೆಂಪು ಬೆಳಕನ್ನ ಹೊರತು ಪಡಿಸಿ ಉಳಿದೆಲ್ಲ ಬೆಳಕನ್ನ ಚದುರಿಸೋದ್ರಿಂದ ಕೆಂಪು ಬಣ್ಣ ಮಾತ್ರ ವಕ್ರೀಭವನಗೊಂಡು ಚಂದ್ರನ ಮೇಲೆ ಬೀಳೋದ್ರಿಂದ ಅಂವ ಕೆಂಪಗೆ ಮೆರೀತಾನೆ.

7) ಗ್ರಹಣದ ವೇಳೆ ಯಾರಾದ್ರೂ ಚಂದ್ರನಿಂದ ಭೂಮಿನ ನೋಡಿದ್ರೆ ಭೂಮಿ ಹೇಗ್ ಕಾಣ್ಸತ್ತೆ?

ನಮ್ಗೆ ಬೆನ್ನು ಮಾಡಿರೋ ಭಾಗದಲ್ಲಿ ಅಲ್ದೇ ಬೇರೆ ಕಡೆ ಪೂರ್ಣಗ್ರಹಣದ ವೇಳೆ ಯಾರಾದ್ರೂ ಭೂಮೀನ ನೋಡಿದ್ರೆ ಅವ್ರಿಗೆ ಕಪ್ಪು ಭೂಮಿ (ನಮ್ಮ ನಗರಗಳ ಬೆಳಕನ್ನು ನಂದಿಸಿದರೆ ಮಾತ್ರ) ಸುತ್ತ ಒಂದು ಕೆಂಪು ಪ್ರಭಾವಳಿ ಕಾಣ್ಸತ್ತೆ. ಅಂದ್ರೆ, ಅವ್ರು ಭೂಮಿ ಮೇಲಾಗೋ ಎಲ್ಲ ಸೂರ್ಯೋದಯ, ಸೂರ್ಯಾಸ್ತಗಳ್ನ ಒಂದೇ ಸಲಕ್ಕೆ ನೋಡೋ ಹಾಗೆ ಇರತ್ತೆ, ಅಲ್ವಾ?

8) ಚಂದ್ರಗ್ರಹಣ, ಸೂರ್ಯಗ್ರಹಣ ಒಂದರ ಬೆನ್ನಲ್ಲಿ ಮತ್ತೊಂದು ಬರತ್ತಾ?

ಹೌದು. ಪೂರ್ಣಚಂದ್ರಗ್ರಹಣ ಆದ ನಂತರ ಎರಡು ವಾರಕ್ಕೆ ಸೂರ್ಯಗ್ರಹಣ ಆಗತ್ತೆ  ಅಥ್ವಾ ಆಗೋಕ್ಕೆ ಮುಂಚೆ ಎರಡು ವಾರಕ್ಕೆ ಸೂರ್ಯಗ್ರಹಣ ಆಗಿರತ್ತೆ. ಆದ್ರೆ ಅದು ಮಾತ್ರ ಬೆಳಗಾಗಿರೋ ಪ್ರಪಂಚದ ಭಾಗಕ್ಕೆಲ್ಲ ಕಾಣ್ಬೇಕು ಅಂತೇನಿಲ್ಲ. ಈ ತಿಂಗ್ಳ 13ನೇ ತಾರೀಖು ಭಾಗಶಃ ಸೂರ್ಯಗ್ರಹಣ ನಮ್ಗೆ ಹಗಲಾಗಿರೋವಾಗ್ಲೇ ಅಯ್ತು ಆದ್ರೆ ನಮ್ಗೆ ಕಾಣ್ಲಿಲ್ಲ. ಅದೇ ಥರಾ ಮುಂದಿನ ತಿಂಗಳು 11ಕ್ಕೆ ಇನ್ನೊಂದು ಭಾಗಶಃ ಸೂರ್ಯಗ್ರಹಣ ಆಗತ್ತೆ. ಅದೂ ನಮ್ಗೆ ಕಾಣೋದಿಲ್ಲ.