ಸರಿಯಾಗಿ 49 ವರ್ಷಗಳ ಹಿಂದೆ “ಮಾನವಂಗೆ ಇದೊಂದು ಪುಟ್ಹೆಜ್ಜೆ, ಆದ್ರೆ ಮಾನವತೆಗೆ ಒಂದು ದೈತ್ಯ ಜಿಗಿತ” ಅಂತ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ಹೆಮ್ಮೆಯಿಂದ ಬೀಗ್ತಾ ಕೊಟ್ಟ ಹೇಳಿಕೇನ ಪ್ರಪಂಚ ಬೆಕ್ಕಸ ಬೆರಗಾಗಿ ಅಂದಿನ ಕಪ್ಪು ಬಿಳಿ ಟಿವಿ ಸ್ಕ್ರೀನ್ ಮೇಲೆ ಲೈವ್ ಆಗಿ ನೋಡ್ತು. ಯಾರೂ ಅವತ್ತು ಅಮೇರಿಕಾ ಇತಿಹಾಸ್ದಲ್ಲೇ ಇದೊಂದು ದೊಡ್ಡ ಹಗರಣ ಅಗತ್ತೆ ಅಂದ್ಕೊಂಡಿರ್ಲಿಲ್ಲ. ಇವತ್ತು ನೀಲ್ ಆರ್ಮ್ ಸ್ಟ್ರಾಂಗ್ ಇಲ್ಲ, ಆದ್ರೆ, ಅವ್ನು ಚಂದ್ರನ್ಮೇಲೆ ಇಟ್ಟ ಹೆಜ್ಜೆ ಸುಳ್ಳು ಅನ್ನೋ ಸುದ್ದೀನ ನಂಬೋ ಅಮೇರಿಕನ್ನರೇ ಜಾಸ್ತಿ ಇದ್ದಾರೆ ಅಂದ್ರೆ ಸುಳ್ಳಲ್ಲ. ಯಾಕೆ ಅಂತ ಇದನ್ನ ಒದಿದ್ರೆ ನಿಮ್ಗೇ ಅರ್ಥವಾಗತ್ತೆ.

1) ವ್ಯಾನ್ ಅಲನ್ ವಿಕಿರಣ ಪಟ್ಟಿ

ಭೂಮಿ ಒಳ್ಗಿರೋ ಅಯಸ್ಕಾಂತದ ಬಲ ಜಾಸ್ತಿ ಇಲ್ದಿದ್ರೂ, ಸೂರ್ಯನಿಂದ ಹೊರಬರುವ ಅಪಾಯಕಾರಿ ವಿಕಿರಣಗಳು ಭೂಮಿ ತಲುಪ್ದೇ ಇರೋ ಥರಾ ಅವುಗಳ್ನ ದೂರತಳ್ಳೋ ಶಕ್ತಿ ಇರೋದ್ರಿಂದ ಭೂಮಿ ಮೇಲೆ ಜೀವಿಗಳು ಇವತ್ತು ಇರಕ್ಕೆ ಆಗಿದೆ. ಭೂಮಿ ಬಿಟ್ಟು 1000 ಕಿ,ಮೀ. ಹೋಗ್ತಾ ಇದ್ದಂಗೆ ಈ ವಿಕಿರಣಗಳ ದಾರಿ ತಪ್ಸೋ ಬಲ ಇಲ್ದೇ ಜೀವಂತ-ಭಸ್ಮ ಆಗೋದು ಖಾತ್ರಿ. ಈ ಪಟ್ಟೀನ ದಾಟ್ದೇ ಮೂರುವರೆ ಲಕ್ಷ ಕಿ.ಮೀ. ದೂರದಲ್ಲಿರೋ ಚಂದ್ರನ ಮೇಲೆ ಕಾಲಿಡಕ್ಕೆ ಆಗಲ್ಲ. ಇದನ್ನ ಹೇಗೆ ನಿಭಾಯ್ಸಿದ್ರಿ, ನಿಮ್ಗೇನೂ ತೊಂದ್ರೆ ಆಗ್ಲಿಲ್ವಾ ಅಂತ ಸಂದರ್ಶಕ್ರು ಕೇಳಿದ್ದಕ್ಕೆ, ನೀಲ್ ಆರ್ಮ್ ಸ್ಟ್ರಾಂಗ, ಇಲ್ಲ ಚಂದ್ರಂಗೆ ಹೋಗ್ಬಂದ್ರೂ ನಮ್ಗೇನೂ ಅದು ಗೊತ್ತಾಗ್ಲೆ ಇಲ್ಲ ಅಂತ ಬಂಡಲ್ ಬಿಟ್ಟಾಗ್ಲೇ ಇಲ್ಲೇನೋ ಎಡ್ವಟ್ಟಾಗಿದೆ ಅಂತ ಜನಕ್ಕೆ ಗೊತ್ತಾಗಿತ್ತು.

2) ಚಂದ್ರನ ಮೇಲೆ ಅಪೋಲೋ ಹೈಕಳು ಬಿಟ್ಟ ನೆಳ್ಳು

ಸೂರ್ಯ ಚಂದ್ರಂಗಿಂತ ನಾನೂರು ಪಟ್ಟು ದೂರ ಇರೋದ್ರಿಂದ ನಮ್ಗೆ ತಲ್ಪೋ ಕಿರಣಗಳು ಹೆಚ್ಚು-ಕಮ್ಮಿ ಸಮಾನಾಂತರವಾಗಿರತ್ತೆ. ಅಂದ್ರೆ, ಭೂಮಿ ಅಥ್ವಾ ಚಂದ್ರನ್ಮೇಲೆ ಅಕ್ಕಪಕ್ಕದಲ್ಲಿ ನಿಂತಿರೋರ ನೆಳ್ಳು ಸಮಾನಾಂತರವಾಗಿ ಬಿದ್ದಿರತ್ತೆ. ಆದ್ರೆ ಅಪೋಲೋ 11ರ ಯಾತ್ರಿಕರು ತೆಗ್ದ  ಈ ಫೋಟೋಲಿರೋ ನೆಳ್ಳು ನೋಡಿದ್ರೆ ಇದು ಭೂಮಿ ಮೇಲೆ ಯಾವ್ದೋ ಮರುಭೂಮಿಲಿ “ಸ್ಟಾರ್ ವಾರ್ಸ್” ಥರದ ಶೂಟಿಂಗ್ ಟ್ರಿಕ್ ಅಂತ ಅನ್ನಿಸ್ದೇ ಇರಲ್ಲ.

3) ಕುಳಿಯನ್ನೆ ಮಾಡದೇ ಚಂದ್ರನ ಮೇಲಿಳ್ದ ಬಾಹ್ಯಾಕಾಶ ನೌಕೆ

ಚಂದ್ರನ ಮೇಲ್ಮೈ ಧೂಳಿನ ಪದರದಿಂದ ಆಗಿದೆ. ಖಗೋಲ ಯಾತ್ರಿಗಳು ಅದ್ರ ಮೇಲೆ ಕಾಲಿಟ್ಟಾಗ ಆಗಿರೋ ಗುರ್ತು ನೋಡಿದ್ರೆ, ಒಂದು ದೊಡ್ಡ ಬಾಹ್ಯಾಕಾಶ ನೌಕೆ ಅದ್ರ ಮೇಲೆ ಇಳೀತು ಅಂದ್ರೆ, ಅದ್ರ ಭಾರಕ್ಕೆ, ಮತ್ತು ಅದು ಹೊರಹಾಕೋ ಅನಿಲಗಳ ರಭಸಕ್ಕೆ ಕೆಳ್ಗೆ ಒಂದು ಕುಳಿ ಖಂಡಿತ್ವಾಗೂ ಕಾಣ್ಬೇಕಿತ್ತು. ಆದ್ರೆ ಈ ಫೋಟೋಲಿ ನಮ್ಗೆ ಈ ನೌಕೇನ ಯಾರೋ ಅನಾಮತ್ತಾಗಿ ಎತ್ಕೊಂಡು ಹೋಗಿ ಜೋಪಾನ್ವಾಗಿ ಇಳ್ಸಿರೋ ಥರ ಕಾಣೋದಂತೂ ಸುಳ್ಳಲ್ಲ.

4) ತಾರೆಗಳೇ ಇಲ್ಲದ ಕಪ್ಪು ಆಕಾಶ

ಮೊದಲ ಚಂದ್ರ-ಯಾತ್ರಿಕರು ತೆಗೆದ್ರು ಅಂತ ಹೇಳೋ ಫೋಟೋಗಳಲ್ಲಿ ನೀಲಿ ಭೂಮಿ ಬಿಟ್ಟು, ನೋಡ್ಬೇಕೂ ಅಂದ್ರೂ, ಒಂದೇ ಒಂದೂ ನಕ್ಷತ್ರ ಕಾಣ್ದೇ ಇರೋದ್ರಿಂದ ನಮ್ಮನ್ನ ಯಾರೋ ಏಮಾರ್ಸಿದಾರೆ ಅನ್ಸಕ್ಕೆ ಶುರು ಆಗತ್ತೆ. ಯಾಕಂದ್ರೆ, ಚಂದ್ರಯಾನ ಸರ್ಕಾರದ ದೊಡ್ಡ ಪಿತೂರಿ ಅನ್ನೋ ವಾದ ನಂಬೋದಾದ್ರೆ, ಅಮೇರಿಕಾದ ನೆವಾಡ ಮರುಭೂಮೀಲಿ ಚಂದ್ರಯಾನದ ಚಿತ್ರೀಕರಣ ಮಾಡಿದ್ದು ನಿಜಾನೇ ಆಗಿದ್ರೆ, ಪಿತೂರಿಕಾರರಿಗೆ ಚಿತ್ರೀಕರಣ್ದಲ್ಲಿ ಕಾಣೋ ನಕ್ಷತ್ರಗಳ್ನ ಅಳ್ಸಿ ಹಾಕೋದೆ ಒಳ್ಳೇದು ಅನ್ಸಿರತ್ತೆ. ಯಾಕಂದ್ರೆ, ಯಾವ ನಕ್ಷತ್ರ ಎಲ್ಲಿದೆ ಅಂತ ಗೊತ್ತಾದ್ರೆ ಅದು ಭೂಮಿ ಮೇಲಿನ ಆಕಾಶನೇ ಹೊರತು ಚಂದ್ರನ ಮೇಲಿಂದ ಕಾಣೋ ಆಕಾಶ ಅಲ್ಲ ಅಂತ ಆಕಾಶವೀಕ್ಷಣೆ ಮಾಡೋರು ಮುಗಿಬೀಳ್ತಾರೆ ಅನ್ನೊ ಹೆದ್ರಿಕೆ ಕಾಡಿರಬೇಕು.

5) ಅಮೇರಿಕಾ-ರಷ್ಯಾ ನಡುವೆ ನಡೀತಿದ್ದ ಶೀತಲ-ಸಮರ

ನಾ ಮೇಲು, ತಾ ಮೇಲು ಅನ್ನೋ ಪೈಪೋಟಿ ಏನೆಲ್ಲ ಮಾಡ್ಸತ್ತೆ ಅನ್ನಕ್ಕೆ ಇದೊಳ್ಳೆ ನಿದರ್ಶನ. ರಷ್ಯನ್ನರು ಹಾರಿಬಿಟ್ಟ ಸ್ಪುಟ್ನಿಕ್ ಉಪಗ್ರಹ ಭೂಮಿ ಸುತ್ತಾ ಸುತ್ತಿ ಬಂದಿತ್ತು. ಜೊತೆಗೆ ಲೈಕಾ ಅನ್ನೋ ನಾಯಿನ ಕೂಡ ಬಾಹ್ಯಾಕಾಶಕ್ಕೆ ಕಳ್ಸಿ ಮೆರೀತಿತ್ತು ಸೋವಿಯತ್ ಒಕ್ಕೂಟ. ಇದ್ರ ಬಿಸಿ ಅಮೇರಿಕ ಸರ್ಕಾರಕ್ಕೆ ಸರಿಯಾಗೆ ತಟ್ಟಿತ್ತು. ಹತ್ತೇ ವರ್ಷಗಳಲ್ಲಿ ಯಾರು ಮಾಡ್ದೇ ಇರೋದನ್ನ ನಾವು ಮಾಡಿ ತೋರಿಸ್ತೀವಿ ಅಂತ ತೊಡೆತಟ್ಟಿ ಹೇಳೇ ಬಿಟ್ಟ ಅಂದಿನ ಅಧ್ಯಕ್ಷ ಕೆನಡಿ. ಹೇಳಿದ್ದನ್ನ ಮಾಡಕ್ಕಾಗ್ದೇ ಇದ್ರೆ ಏನ್ಮಾಡ್ಬೇಕ್ ಹೇಳಿ, ಜನ್ರ ಕಣ್ಗೆ ಮಣ್ಣೆರಚಬೇಕು, ಅಷ್ಟೇ. ಅದನ್ನೇ ಈ ಅಪೋಲೋ ಸಾಹಸ ಮಾಡಿದ್ದು ಅಂತಾರೆ ಪಿತೂರಿ ವಾದಿಗಳು

6) ಇವತ್ತಿನ ತನಕ ಕಾರಣ ಕೊಟ್ಕೊಂಡ್ಬಂದಿರೋ ನಾಸಾ

ಈ ಸಾಧನೆ ಮಾಡಿ 50 ವರ್ಷನೇ ಆಯ್ತು ಅಂತ ಬೆನ್ನು ತಟ್ಕೊಳ್ಳೋ ಬದ್ಲು, ನಾಸಾ ಇದೊಂದು ಪಿತೂರಿ ಅಂತ ಹೇಳೋ ಮಂದೀಗೆಲ್ಲ ಸಮಜಾಯಿಷಿ ಕೊಡ್ತಾ ಬರೋ ದರ್ದಾದ್ರೂ ನಾಸಾಗೆ ಏನಿದೆ ಅನ್ನೋ ಗುಮಾನಿ ಕಾಡೋದು ಸಹಜ. ನಾಸಾ ಯಾಕೆ 1970ರ ದಶಕದ ಕೊನೆ ಅಪೋಲೋ ಮಿಷನ್ ಆದ್ಮೇಲೆ ಯಾವ್ದೇ ಚಂದ್ರಯಾನದ ಸಾಹಸ ಮಾಡಿಲ್ಲ? ಇವತ್ತು ಅಲ್ಲಿ ಲೇಔಟ್ ಮಾಡಿ ರಿಯಲ್ ಎಸ್ಟೇಟ್ ಡೆವಲಪರ್ ಅಲ್ಲೇ ಜಾಂಡ ಹೂಡ್ಡು ಕೂರ್ಬೇಕಿತ್ತಲ್ವ? ಇದಕ್ಕೆ ಸಮಾಧಾನ ಹೇಳೋರ್ಯಾರು?

7) ಚಂದ್ರನ ಮೇಲಿಂದ ಅಪೋಲೋ ಯಾತ್ರಿಗಳು ತಂದ ಶಿಲೆಗಳು, ಫೋಟೋಗಳು

ನಾಸಾ ಪ್ರದರ್ಶನಕ್ಕೆ ಅಂತ ಇಟ್ಟಿರೋ ಈ ಶಿಲೆಗಳ ಫೋಟೋ ಮೇಲೆ “C” ಆಕಾರದ ಗುರ್ತು ಕಾಣ್ಸತ್ತೆ, ನೋಡಿ. ಏನ್ ಸ್ವಾಮಿ ಇದೆಲ್ಲಿಂದ ಬಂತು ಅಂದ್ರೆ, ಇವು ಅಲ್ಲಿಂದ ಬಂದ ನೆಗೆಟವ್ ಮೇಲೆ ಕೂದ್ಲು ಕೂತಿದ್ದ್ರಿಂದ ಈ ರೀತಿ ಕಾಣ್ಸತ್ತೆ ಅಷ್ಟೇ ಅಂತ ಬೇಜವಾಬ್ದಾರಿ ಉತ್ತರ ಕೊಡೋ ನಾಸಾನ ನಂಬೋದಾದ್ರೂ ಹೇಗೆ ಅಂತ ಪಿತೂರಿ ವಾದ ನಂಬೋರು ಕೇಳ್ತಾರೆ. ಅದೂ ಅಲ್ದೇ ಈ ಶಿಲೆಗಳ್ನ ನಾಸಾ ಲ್ಯಾಬ್ನಲ್ಲಿ ಕೃತಕವಾಗಿ ಸೃಷ್ಟಿ ಮಾಡಿದ್ದಾರೆ ಅಂತನೂ ಹೇಳ್ತಾರೆ.

8) ಪಟ-ಪಟ ಅಂತ ಹೊಡ್ದಾಡೋ ಅಮೇರಿಕಾ ಬಾವುಟ

ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲೂರಿದಾಗ ಆ ನೆನಪಿಗಾಗಿ ನೆಟ್ಟ ಬಾವುಟ ಇಲ್ಲಿನ ಬಾವುಟಗಳ ಥರಾ ಪಟಪಟ ಹೊಡ್ಕೊಳೋದ್ನ ಟೀವಿ ಸ್ಕ್ರೀನ್ ಮೇಲೆ ನೋಡ್ದಾಗ, ಗಾಳೀನೇ ಇಲ್ದೇ ಇರೋ ಚಂದ್ರನ ಮೇಲೆ ಇಂಥಾ ಗಮ್ಮತ್ತು ಹೇಗೆ ಸಾಧ್ಯ ಅಂತ ಹುಬ್ಬೇರಿಸ್ದೋರು ಬಹಳ ಮಂದಿ.