ಇವತ್ತಿನ್ ದಿವ್ಸದ ಜಾಗತಿಕ ಸಂಪರ್ಕ ಜಾಲ ನೋಡಿದ್ರೆ ಭೂಮಿ ಮೇಲಿರೋ ಎಲ್ಲಾ ಜಾಗ್ಗಳ್ನೂ ಜನ ನೋಡ್ಮುಗ್ಸಾಗಿದೆ ಅನ್ಸೋದು ನಿಜ. ಅದ್ರೆ ಇನ್ನೂ ಕೆಲ್ವು ಜಾಗ್ಗಳು ತಮ್ಮ ನಿಗೂಢತೆ ಕಾಯ್ಕೋತೀವೆ. ಅದ್ಕೆ ಕಾರಣ, ಈ ಜಾಗ್ಗಳ್ನ ಪ್ರವಾಸಿಗರು ಅನ್ನೋ ಆಧುನಿಕ ಚೆಂಗಿಸ್ ಖಾನ್ನ ದಾಳಿಯಿಂದ ಕಾಪಾಡೋದೇ ಇರ್ಬೋದು, ಅಥ್ವಾ ಇನ್ಯಾವ್ದೇ ಇರ್ಬೋದು, ಅದ್ರೆ ಅಂಥ ಜಾಗ್ಗಳು ಇರೋದಂತೂ ಖರೆ. ಆದ್ರೂನು, ಇವತ್ತು ನಾವು ಹೋಗಿ ನೋಡ್ದೇ ಇರಕ್ಕೆ ಸಾಧ್ಯಾನೇ ಇಲ್ಲಾ ಅನ್ನೋ ಜಗತ್ತಲ್ಲಿ ನಾವು ನೋಡಕ್ಕಾಗ್ದೆ ಇರೋ ಜಾಗ ಇದೆ ಅನ್ನೋದೇ ಚೋಜಿಗ, ಏನಂತೀರ?

1) ಬ್ರಾಝಿಲ್ ದೇಶದ ಹಾವಿನ ದ್ವೀಪ

ಬ್ರಾಝಿಲ್ ದೇಶದ ಸಾಂವೋ ಪೌಲೋ ಇಂದ 150 ಕಿ.ಮೀ. ದೂರದ  ಹಾವಿನ ದ್ವೀಪ. ಸಂಶೋಧಕ್ರು ಇಲ್ಲಿ ಪ್ರತಿ ಚದುರಕ್ಕೆ  5 ಹಾವುಗಳು ಇವೆ ಅಂತ ಅಂದಾಜು ಮಾಡ್ತಾರಂತೆ. ಇವೆಲ್ವೂ ವಿಷ ಇರೋ ಹಾವುಗಳು. ಕಚ್ಚಿಸ್ಕೊಂಡ ಭಾಗ್ದ ಮಾಂಸಖಂಡಗಳು ಕೊಳ್ಯಕ್ಕೆ ಶುರು ಆಗೋದು ಗ್ಯಾರಂಟಿ. ಇಲ್ಲಿಗೆ ಜನ್ರನ್ನ ಬಿಡ್ದೇ ಇರೋದೇ ಒಳ್ಳೇದು ಅಂತೀರಾ?

2) ಪ್ರಾನ್ಸ್ ದೇಶದ ಲಾಸ್ಕೋ ಗುಹೆಗಳು

ಪ್ರಾನ್ಸ್ ದೇಶದ ಲಾಸ್ಕೋ ಗುಹೆಗಳು ಪ್ಯಾಲಿಯೋಲಿಥಿಕ್ ಯುಗದ ಚಿತ್ರಕಲೆಗಳ ಗಣಿ. ಇದನ್ನ ಬಿಡಿಸ್ದೋರು ಸುಮಾರು 20,000 ವರ್ಷದ ಹಿಂದೆ ಬದ್ಕಿದ್ದಿರ್ಬೇಕು ಅಂತ ಅಂದಾಜು ಮಾಡ್ತಾರೆ. ತುಂಬಾ ಜೀವಂತಿಕೆ ಮೆರೆಯೋ ಜಿಂಕೆ, ಬೆಕ್ಕು, ಕಾಟಿ ಎಲ್ವೂ ಇಲ್ಲಿವೆ. ಕಾಡೆಮ್ಮೆಗಳ ಗೋಡೆ ಚಿತ್ರ ಇಲ್ಲಿನ ವಿಶೇಷ. ಅದ್ರಲ್ಲಿ ಒಂದಂತೂ 17 ಅಡಿ ಉದ್ದ ಇದ್ಯಂತೆ. 1960ರಿಂದ ಸಾರ್ವಜನಿಕರ್ಗೆ ಪ್ರವೇಶ ಬಂದ್ ಆಗಿದೆ ಅನ್ನೋದೆ ಬೇಜಾರಿನ ಸಂಗತಿ. ಮನುಷ್ಯರು ಈ ಗುಹೆಗೆ ಲಗ್ಗೆ ಹಾಕಿದ್ರೆ ಈ ಚಿತ್ರಗಳ್ಗೆ ಉಳಿಗಾಲ ಇಲ್ಲ ಅಂತಾನೆ ಬಿಡಲ್ಲ. ಜೊತೆಗೆ, ಇಲ್ಲಿ ಹರಡಿಕೊಂಡಿರೋ ಬೂಷ್ಟೆ ಮನುಷ್ಯರ ಆರೋಗ್ಯನ್ನ ಹಾಳ್ಗೆಡ್ವತ್ತಂತೆ.

3) ಅಂಡಮಾನ್ ದ್ವೀಪಸಮೂಹದ ಉತ್ತರ ಸೆಂಟಿನೆಲ್ ದ್ವೀಪ

ಬಂಗಾಳ ಕೊಲ್ಲಿಯ ಅಂಡಮಾನ್ ದ್ವೀಪಸಮೂಹದ ಉತ್ತರ ಸೆಂಟಿನೆಲ್ ದ್ವೀಪ. ಇಲ್ಲಿಗೆ ಅಪ್ಪಿತಪ್ಪಿ ಕಾಲಿಟ್ಟೀರಿ, ಜೋಕೆ! ಇಲ್ಲಿನ ಆದಿವಾಸಿಗಳು ಯಾರನ್ನೂ ಹತ್ರಕ್ಕೆ ಬಿಟ್ಟುಕೊಳಲ್ಲ. 2004ರ ಸುನಾಮಿ ಬಳಿಕ ಇಲ್ಲಿನ ಜಾಗನ್ನ ಪರಿಶೀಲಿಸ್ಬೇಕು ಅಂತ ಹಾರಾಡ್ತಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆ ಹೆಲಿಕಾಪ್ಟರ್ ಮೇಲೆ ಬಾಣದ ಮಳೆಗರೆದು ಅದು ಇಳೀದ ಹಾಗೆ ನೋಡ್ಕೊಂಡ್ರು ಇಲ್ಲಿನ ಬುಡಕಟ್ಟು ಹಮ್ಮೀರ್ರು. ಸುಮಾರು 60,000 ವರ್ಷಗಳಿಂದ ಇದ್ದಾರೆ ಅನ್ನೋ ಈ ಆದಿವಾಸಿಗಳ ದ್ವೀಪಕ್ಕೆ ಯಾರೂ ಹೋಗೋ ಹಾಗಿಲ್ಲ ಅಂತ ಭಾರತ ಸರ್ಕಾರಾನೇ ತಾಕೀತು ಮಾಡಿದೆ.  ಮಾನವಶಾಸ್ತ್ರವಾದಿಗಳಾಗ್ಲಿ, ಅಧಿಕಾರಿಗಳಾಗ್ಲೀ, ಪ್ರವಾಸಿಗಳಾಗ್ಲೀ—ಯಾರಂದ್ರೆ ಯಾರೂ ಇಲ್ಲ.

4) ಜಪಾನಿನ ಇಸೇ ಜಿಂಗು ದೇವಾಲಯ

ಜಪಾನ್ನಲ್ಲಿ ಸುಮಾರು 80,000 ದೇವಾಲಯಗಳು ಇವ್ಯಂತೆ. ಇದ್ರೂ, ಇಸೇ ಜಿಂಗು ದೇವಾಲಯಕ್ಕೆ ಇರೋ ಪ್ರತಿಷ್ಠೆ ಬೇರೆ ಯಾವ್ದೇ ದೇವಾಲಯಕ್ಕೂ ಇಲ್ಲ ಅಂತಾರೆ. ಇದ್ರಲ್ಲಿರೋ ಕೆತ್ನೆಗಳಿಂದ ಇದೊಂದು ಅತಿ ದುಬಾರಿ ದೇವಾಲಯ ಅನ್ಸಿದೆ. ಶಿಂಟೋ ಪರಂಪರೆಗೆ ಹೊಂದ್ಕೊಳ್ಳೊ ಹಾಗೆ ಪ್ರತಿ 20 ವರ್ಷಕ್ಕೊಂದ್ಸಾರಿ ಹೊಸ್ದಾಗಿ ಕಟ್ತಾರೆ. ಇದು ಸಾವು ಮತ್ತು ಪ್ರಕೃತಿಯ ಪುನಶ್ಚೇತನದ ಚಿಹ್ನೆ ಅಂತೆ. ಈಗೀರೋ ಥರಾ 2013ರಲ್ಲಿ ಕಟ್ಟಿದ್ರು. ನೀವೇನಾರ ಜಪಾನಿನ ಸಮ್ರಾಟರ ಮನೆತನಕ್ಕೆ ಸೇರಿರ್ದಿದ್ರೆ ಈ ಜಪಾನೀ ಸಂಸ್ಕೃತಿಯ ಪ್ರಾಚೀನ ದೇವಾಲಯದ ಒಳ್ಗೋಗೋ ಕನಸನ್ನ ಬಿಟ್ಟಾಕಿ.

5) ಇಟಲಿಯ ಪ್ರಸಿದ್ಧ ವೆನಿಸ್ ಹಾಗು ಲಿಡೋ ನಡುವಿನ ಪೊವೆಲ್ಯಾ ದ್ವೀಪ

ಇಷ್ಟು ಸುಂದರವಾಗಿ ಕಾಣೋ ದ್ವೀಪದ ಇತಿಹಾಸ ಮಾತ್ರ ಬೆಚ್ಚಿಬೀಳ್ಸೋ ಅಂಥದ್ದು. ಶತಮಾನಗಳ ವರೆಗೆ ಜನ ಇದ್ನ  ರುದ್ರಭೂಮಿಯಾಗಿ ಬಳಸ್ತಾ ಇದ್ರು. ಪ್ಲೇಗ್ ಪೀಡಿತರಿಗೆ ಇದು 14ನೇ ಶತಮಾನ್ದಲ್ಲಿ ಕಾಲೊನಿ ಆಗಿತ್ತು. 19ನೇ ಶತಮಾನ್ದಲ್ಲಿ ಸುತ್ತಮುತ್ತಲಿನ ಮನೋರೋಗಿಗಳ ಆಶ್ರಯ ತಾಣ ಆಯ್ತು. ಆಗ ತಲೆಕೆಟ್ಟ ವೈದ್ಯನೊಬ್ಬ ಅಲ್ಲಿ ಈ ರೋಗಿಗಳ ಮೇಲೆ ಅಮಾನುಷ ಪ್ರಯೋಗಗಳ್ನ ಮಾಡ್ತಿದ್ದು, ಕೊನೆಗೆ ಆತ್ಮಹತ್ಯೆಗೆ ಶರಣಾದ ಅನ್ನೋ ಗುಸುಗುಸು ಕೂಡ ಇದೆ. ಇವತ್ತು ಯಾರೂ ಆ ಕಡೆ ತಲೆ ಹಾಕಲ್ಲ. ಯಾಕಂದ್ರೆ ಅಲ್ಲಿ ನರಳಿ ಪ್ರಾಣಬಿಟ್ಟೋರ ಪ್ರೇತಗಳ್ಗೇ ಜಾಗ ಸಾಕಾಗ್ತಿಲ್ವಂತೆ. ಪ್ರವಾಸಿಗ್ರೂ ಅಲ್ಲಿಗೆ ಕುತೂಹಲ ತಡ್ಕೊಳ್ದೇ ಹೋಗೋ ಪ್ರಯತ್ನ ಏನಾರ ಮಾಡಿದ್ರೆ ಕಂಬಿ ಎಣಿಸ್ಬೇಕಾಗತ್ತೆ. ಇಟಲಿಯ ಜನ ಇದಕ್ಕಿಂತ ದೆವ್ವದ ವಾಸಸ್ಥಾನ ಬೇರೆ ಎಲ್ಲೂ ಇಲ್ಲ ಅಂತ ಹೇಳೋದ್ರಿಂದ ನೋ ಎಂಟ್ರಿ ನಮ್ಮ ಒಳ್ಳೇದಕ್ಕೇ ಇರಬೇಕು.

6) ಚೀನಾ ದೇಶದ ಶಿಯಾನ್ ಎಂಬ ಹಳೇ ಊರು

ಈ ಟೆರ್ರಾಕೋಟ ಆಕೃತಿಗಳ್ಗೆ ಮನೆ ಈ ಊರು. ಚೀನಾದ ಮೊಟ್ಟಮೊದ್ಲ ಸಮ್ರಾಟ್ ಚೀ ಶೀ ವಾಂಗ್ ನ ಸಮಾಧಿ ಇರುವ ನೆಲಮಾಳ್ಗೇಲಿ ಈ ಜೀವಂತವಾಗಿ ಕಾಣೋ ಸೈನಿಕ್ರ ಪ್ರತಿಮೆ ಇದೆ. ಇವುಗಳಲ್ಲಿ ಒಂದೊಂದೂ ಒಂದೊಂದು ಥರಾ ಇದೆ. ಈ ನೆಲಮಾಳ್ಗೆ ಒಳ್ಗೆ ಯಾರನ್ನೂ ಬಿಡಲ್ಲ. ಯಾಕೆ ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿ ಪಾದರಸದ ದಾಸ್ತಾನು ಎಷ್ಟಿದೆ ಅಂದ್ರೆ, ಯಾರಾದ್ರೂ ಸರಿಯಾಗಿ ರಕ್ಷಣೆ ತೊಗೊಳ್ದೇ ಒಳ್ಗೆ ಹೋದ್ರೆ, ಗೊಟಕ್ ಅಂದಹಾಗೆನೇ. ನೆಲಮಾಳಿಗೆ ಮೇಲೆ 2000 ಪ್ರತಿಮೆಗಳಿದ್ರೆ, ಅದ್ರೊಳ್ಗೆ ಇನ್ನೂ 6000 ಇವ್ಯಂತೆ. ಜೊತೆಗೆ ಕಂಡು ಕೇಳರಿಯದ ಸಂಪತ್ತು ಹುದ್ಗಿದ್ಯಂತೆ.

7) ಹವಾಯ್ ದ್ವೀಪಸಮೂಹದ ನಯೆಹೊ ದ್ವೀಪ

ಅಮೇರಿಕನ್ನರ ಆಡುಂಬೊಲ ಹವಾಯ್ ದ್ವೀಪಗಳು. ಪ್ರವಾಸಿಗಳ್ಗೂ ಏನೂ ಕಡಿಮೆ ಇಲ್ಲ. ನೀವೇನಾದ್ರೂ ಅಲ್ಲಿನ ಎಲ್ಲ ದ್ವೀಪಗಳ್ನ ನೋಡಿ ಮುಗ್ಸಿದೀವಿ ಅಂದ್ಕೊಂಡ್ರೆ ಇಲ್ಲಿನ ನಯೆಹೊ ದ್ವೀಪನ್ನೊಂದ್ಸಾರಿ ನೆನೆಸ್ಕೊಳ್ಳಿ. ಇದಕ್ಕೆ ನಿಷಿದ್ಧ ದ್ವೀಪ ಅಂತಾನೇ ಹೆಸ್ರಾಗಿದೆ. ಈ ದ್ವೀಪನ್ನ ಒಂದೇ ಕುಟುಂಬ ಕಳ್ದ 150 ವರ್ಷಗಳಿಂದ ತನ್ನ ಸ್ವಾಧೀನ್ದಲ್ಲಿ ಇಟ್ಕೊಂಡಿದೆ. ಈ ದ್ವೀಪದ ಸೌಂದರ್ಯ ಈ ಕುಟುಂಬದ ಸದಸ್ಯರಿಗೆ ಮಾತ್ರ ಸೀಮಿತ.

8) ನ್ಯೂಯಾರ್ಕಿನ ಸುಂದರ, ಭಯಾನಕ ನಾರ್ತ್ ಬ್ರದರ್ ದ್ವೀಪ

ನ್ಯೂಯಾರ್ಕ್ ಸಿಟಿ ಭಾಗ್ವಾದ ಈ ಸುಂದರ, ಭಯಾನಕ ನಾರ್ತ್ ಬ್ರದರ್ ದ್ವೀಪ ಒಂದು ಒಗಟು. ಇಲ್ಲಿ 19ನೇ ಶತಮಾನದಲ್ಲಿ ಕ್ಷಯರೋಗ, ಕಾಮಾಲೆ ಜ್ವರ, ಸಿಡುಬುಗಳಿಂದ ನರಳ್ತಾ ಇರೋರನ್ನ ಸೋಂಕು ಹರಡದ ಹಾಗೆ ಇಡ್ತಾ ಇದ್ದಿದ್ ದ್ವೀಪ ಇದಂತೆ. ಎರಡನೇ ಮಹಾಯುದ್ಧ ಆದ್ಮೇಲೆ ಹೆರಾಯಿನ್ ಚಟ ಹತ್ತಿಸ್ಕೊಂಡೊರನ್ನ ಇಲ್ಲಿಗೆ ಕರ್ಕೊಂಡ್ಬಂದು ಚಿಕಿತ್ಸೆ ಮಾಡ್ತಿದ್ರಂತೆ. ಆದ್ರೆ ಈಗ 60 ವರ್ಷದಿಂದ ಯಾರೂ ಆ ಕಡೆ ಸುಳೀದೆ, ಎಲ್ಲ ಕಟ್ಟಡ್ಗಳೂ ಗೋಳುಕರೀತಾ ಪಾಳುಬಿದ್ದಿವ್ಯಂತೆ. ಇವತ್ತು ಯಾರೂ ಅಲ್ಗೆ ಹೋಗೋ ಹಾಗಿಲ್ಲ.

ಈ ಎಲ್ಲದ್ರ ನಡ್ವೆ ನಮ್ಮ ಅಂಜಂತಾ ಗುಹೆಗ್ಳ ಫೋಟೋ ಯಾಕ್ ಸೇರಿದೆ ಅಂತ ತಲೆಕೆರ್ಕೋತ್ತಿದ್ರೆ, ಇಲ್ಕೇಳಿ. ಅಂಜಂತಾ ಗುಹೆಗಳ್ನ ಕಾಪಾಡಕ್ಕೆ ತುಂಬಾನೇ ಕಷ್ಟ ಆಗ್ತಿದ್ಯಂತೆ. ಆದ್ರಿಂದ ನಮ್ಮ ಸರ್ಕಾರನೂ ಇಷ್ಟ್ರಲ್ಲೆ ಅದನ್ನೂ ಈ ಮೇಲಿನ ಎಂಟ್ರ ಲಿಸ್ಟಿಗೆ ಸೇರಿಸೋ ಕಾಲ ದೂರ ಇಲ್ಲ ಅನ್ನೋ ಸುದ್ದಿ. ಅದಕ್ಮುಂಚೆ ತಪ್ದೇ ಅಜಂತಾಗೆ ಒಂದ್ಸಾರಿ ಹೋಗ್ಬನ್ನಿ.