http://www.moneyhouseindia.com/img/SliderImages/Confused%20carrer.jpg

ನೀವು ಯಾರನ್ನಾದ್ರೂ , ಒಂದ್ವಿಷ್ಯಾನ ಹೇಗ್ ನೆನೆಪಿಟ್ಕೋಬೇಕು ಅಂತ ಕೇಳಿದ್ರೆ ಸಾಮಾನ್ಯವಾಗಿ ಸಿಗೋ ಉತ್ತರ , "ಮತ್ತೆ ಮತ್ತೆ ಮಾಡೋದ್ರಿಂದ" ಅಂತ.  ಅವರೆಲ್ಲಾ ಹೀಗೆ ಹೇಳಕ್ಕೆ ಕಾರಣಾನೂ ಇದೆ ಅಂತಿಟ್ಕೊಳಿ… ಸ್ಕೂಲ್ಗೆ ಹೋಗ್ತಿದ್ದಾಗ ಅಲ್ಲಿ ಇದನ್ನೇ ಕಲ್ತಿದ್ದು, ಅದ್ರಿಂದಾನೆ ನೆನಪಿರ್ತಿತ್ತು ಅಂತಾನೆ ಎಲ್ರೂ ಅನ್ಕೊಂಡಿರೋದು. ಆದ್ರೆ ನೆನಪಿಟ್ಕೋಳೋದು ಒಂದು ಕಲೆ. ಒಂದ್ಸಲ ನಿಮಗೆ ಇದ್ರಮೇಲೆ ಹಿಡಿತ ಸಿಕ್ಕಿದ್ರೆ ಸಾಕು, ತುಂಬಾ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ವಿಷಯಗಳನ್ನ ನೀವು ನೆನಪಿಟ್ಕೋಬೋದು.

ಕೆಲವರು ವಿಷಯಗಳನ್ನ ಕೇಳಿ ನೆನಪಲ್ಲಿ ಇಟ್ಕೊಂಡ್ರೆ, ಕೆಲವರು ನೋಡೋದ್ರಿಂದ ನೆನಪಿಟ್ಕೋತಾರೆ. ಆದ್ರೆ ಸ್ವಲ್ಪ ಜನಕ್ಕೆ ಅದನ್ನ ಸ್ವತಃ ತಾವೇ ಮಾಡಿ, ಅನುಭವಿಸಿ, ಕಲಿಯೋದ್ರಿಂದ ನೆನಪಲ್ಲಿರುತ್ತೆ. ಇದ್ರಲ್ಲಿ ನಿಮಗೆ ಯಾವತರದ್ದು ಹೆಚ್ಚಾಗಿ ನೆನಪಿರುತ್ತೆ? ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲರಿಗೂ ಇದ್ರಲ್ಲಿ ಯಾವುದಾದ್ರೂ ಎರಡು ಒಟ್ಟಿಗೆ ಇದ್ದಾಗ ಚೆನ್ನಾಗಿ ನೆನಪಿರುತ್ತೆ. 

ಒಟ್ನಲ್ಲಿ, ಈ ನೆನಪಿಟ್ಕೊಳೋ ಕಲೇನ ಕರಗತ ಮಾಡ್ಕೊಳಕ್ಕೆ ಸಾಕಷ್ಟು ದಾರಿ ಇದೆ. ಸಾಮಾನ್ಯವಾಗಿ ಪ್ರಪಂಚದಲ್ಲಿ ಎಲ್ಲರೂ ಉಪಯೋಗಿಸೋ ಕೆಲವು ವಿಧಾನಗಳನ್ನ ನಾವೀಗ ನೋಡೋಣ.

1. ಸರಿಯಾದ ಜಾಗ ಹುಡ್ಕೊತಾರೆ

ಈ ನೆನನಿಪಿಟ್ಕೊಳ್ಳೋ ಕೆಲಸ ಸರಿಯಾಗ್ ಆಗ್ಬೇಕು ಅಂದ್ರೆ, ನೀವು  ಮೊದಲು ನಿಮಗೆ ಸರಿಹೊಂದೋ ಒಂದು ಜಾಗ ನಿರ್ಧಾರ ಮಾಡಬೇಕು. ಕೆಲವರಿಗೆ ಏಕಾಂತ ಇಷ್ಟ ಆದ್ರೆ, ಕೆಲವರಿಗೆ ಸ್ವಲ್ಪ ಆಕಡೆ ಈಕಡೆ ಗಮನ ಹೋಗೋ ಜಾಗ ಬೇಕು ಅನ್ಸುತ್ತೆ. ಇನ್ನೂ ಸ್ವಲ್ಪ ಜನಕ್ಕೆ ಸ್ವಚ್ಛ್ಹಂದವಾಗಿ ಮನೆಯಿಂದ ಹೊರಗೆ ಕೂತು ಅಭ್ಯಾಸ ಮಾಡಿದ್ರೆ ಚೆನ್ನ್ನಾಗಿ ನೆನಪಿರುತ್ತೆ. ನಿಮಗೆ ಯಾವುದು ಸರಿ ಹೋಗುತ್ತೆ? ಅದನ್ನ ತಿಳ್ಕೊಂಡು ಆ ಜಾಗ ನೋಡಿಟ್ಕೊಳಿ. ಅಲ್ಲಿಂದಲೇ ನಿಮ್ಮ ಅಭ್ಯಾಸ ಶುರು ಮಾಡಿ.

ಕೆಲವು ಅಧ್ಯಯನಗಳಿಂದ ಏನು ತಿಳಿದು ಬಂದಿದೆ ಅಂದ್ರೆ, ಟೀನಲ್ಲಿ ಅದ್ರಲ್ಲೂ ಗ್ರೀನ್ ಟೀನಲ್ಲಿ ನೆನಪಿನ ಶಕ್ತಿ ಹೆಚ್ಚಿಸೋ ಅಂಶಗಳು ಇದ್ಯಂತೆ. ನಾವು ಏನೇ ನೆನಪು ಮಾಡ್ಕೋಬೇಕು ಅಂದ್ರೂ ನಮ್ಮ ಮೆದುಳಿಂದ  ನಮಗೆ ಸಂದೇಶ ಕೊಡೊ ನರಗಳು ಶಕ್ತಿಯುತವಾಗಿರ್ಬೇಕು. ಈ ನರಗಳಿಗೆ ಸಂಬಂಧಿಸಿದ ವ್ಯಾಯಾಮ ಮಾಡೋದ್ರಿಂದ ಅದು ಬಲಿಷ್ಠವಾಗಿದ್ದು ನೆನಪಿನ ಶಕ್ತೀನೂ ಚೆನ್ನಾಗಿರುತ್ತೆ.

ಹೆಚ್ಚು ವಯಸ್ಸಾಗ್ತಿದ್ದಂಗೆ, ನರಗಳ ಶಕ್ತಿ ಕುಗ್ಗುತ್ತೆ . ಇದ್ರಿಂದ ನೆನಪಿನ ಶಕ್ತಿ ಕಮ್ಮಿಯಾಗಿ ಆಲ್ಝೈಮರ್ ಕೂಡ ಬರ್ಬೋದು. ಗ್ರೀನ್ ಟೀ ಕುಡುಯಕ್ಕೆ ಶುರು ಮಾಡಿ, ಅದ್ರಲ್ಲಿರೋ ನೈಸರ್ಗಿಕ ಗುಣಗಳು ಈ ನರಗಳು ದುರ್ಬಲವಾಗ್ದೇ ಇರೋ ಹಾಗೆ ನೋಡ್ಕೊಂಡು, ನೆನಪಿನಶಕ್ತಿ ಹೆಚ್ಚಾಗಕ್ಕೆ ಸಹಾಯ ಮಾಡುತ್ತೆ.

2. ಬೇಕಾದಾಗ ಕೇಳಿಸಿಕೊಳ್ಲಕ್ಕೆ ರೆಕಾರ್ಡ್ ಮಾಡ್ಕೊತಾರೆ

ನೀವು ಯಾವ್ದೋ ಪಾಠ, ಪ್ರವಚನ, ಭಾಷಣ ಕೇಳುವಾಗ ನಿಮಗೆ ಬೇಕಾದ ಹಲವಾರು ವಿಷಯಗಳು ಅದ್ರಲ್ಲಿ ಇರುತ್ತೆ. ಅಲ್ಲಿಂದ ಹೊರಗೆ ಬಂದ್ಮೇಲೆ ನೆನಪು ಮಾಡ್ಕೊಳ್ಳೋದು ಕಷ್ಟ ಆಗುತ್ತೆ. ಇಂಥಾ ಸಮಯದಲ್ಲಿ ಈ ಉಪಯುಕ್ತ ವಿಷಯಗಳನ್ನ ಮತ್ತೆ ಮತ್ತೆ ಕೇಳಿ ನೆನಪಲ್ಲಿರೋ ಹಾಗೆ ಮಾಡ್ಕೊಳಕ್ಕೆ ಅದನ್ನ ರೆಕಾರ್ಡ್ ಮಾಡ್ಕೊಳಿ.. ಈಗ ಸಾಮಾನ್ಯವಾಗಿ ಮೊಬೈಲುಗಳಲ್ಲೂ ಈ ರೆಕಾರ್ಡ್ ಮಾಡ್ಕೊಳೋ ಸೌಲಭ್ಯ ಇದೆ. ಅದ್ರಲ್ಲಿ ರೆಕಾರ್ಡ್ ಮಾಡ್ಕೊಂಡು ಮೇಲಿಂದ್ಮೇಲೆ ಕೇಳ್ತಾ ಇದ್ರೆ ನಿಮ್ಮ ನೆನಪಲ್ಲಿರುತ್ತೆ.

ನೀವೇ ಏನಾದ್ರೂ ಭಾಷಣ ಮಾಡ್ತಿದ್ರೆ, ಬರ್ಕೊಂಡಿರೋ ಭಾಷಣಾನ ಜೋರಾಗಿ ಓದ್ತಾ ರೆಕಾರ್ಡ್ ಮಾಡ್ಕೊಂಡು ಆಮೇಲೆ ನೀವೇ ಕೇಳಿಸ್ಕೊಳಿ. ಇದು ಬರ್ದಿರೋದನ್ನ ಹತ್ತು ಸಲ ಓದಿ ನೆನಪು ಮಾಡ್ಕೊಳೋಕ್ಕಿಂತಾ ಸುಲಭ.

ಮೂಲ

3. ನಾಲ್ಕಾರು ಸಲ ಬರೀತಾರೆ

ನಿಮಗೆ ಬೇಕಾಗಿರೋ ವಿಷಯಾನ ನಾಲ್ಕಾರು ಸಲ ಬರೆಯೋದ್ರಿಂದ, ಅದು ನಿಮಗೆ ನೆನಪಲ್ಲಿರತ್ತೆ. ನೀವು ಟೀವಿ ನೋಡೊವಾಗ್ಲೋ, ಹಾಡು ಕೇಳೋವಾಗ್ಲೋ, ನೀವು ನೆನಪಿಟ್ಕೋಬೇಕಾದ ಕೆಲಸ, ವಿಷಯಾನ ಈ ರೀತಿ ಬರೀತಿದ್ರೆ ಅದು ನಿಮ್ಮ ಮನಸ್ಸಲ್ಲಿ ಬೇರೂರತ್ತೆ. ಸುಲಭವಾಗಿ ನೆನಪು ಮಾಡ್ಕೊಬಹುದು. ಅನುಭವಿಸಿ , ಒಂದೆರಡು ಸಲ ಮಾಡಿ-ನೋಡಿ ಕಲಿಯೋ ಅಭ್ಯಾಸ ಇರೋವ್ರಿಗೆ ಇದು ತುಂಬಾ ಸಹಾಯ ಆಗತ್ತೆ.

4. ಬರ್ದಿರೋ ಟಿಪ್ಪಣಿಗಳನ್ನ ಬೇರ್ಬೇರೆ ಮಾಡ್ಕೊತಾರೆ

ನೀವು ಬೇರೆ ಬೇರೆ ವಿಷಯಗಳ ಬಗ್ಗೆ ಬರ್ದಿದ್ರೆ , ಅದರ ಪ್ರಕಾರ ಬರ್ದಿರೋ ಚೀಟಿಗಳನ್ನ ಬೇರೆ ಬೇರೆ ವಿಭಾಗ ಮಾಡಿ ಇಟ್ಕೊಳಿ. ಅದ್ರಲ್ಲೂ ಬರಿಯೋವಾಗ ನೀವು ಬೇರೆ ಬೇರೆ ಬಣ್ಣದ ಕಾಗದ, ಇಂಕ್ ಬಳಸಿ ಬರ್ದಿದ್ರೆ, ಸೆಪರೇಟ್ ಮಾಡಿಟ್ಕೊಂಡು, ನೆನಪು ಮಾಡ್ಕೊಳಕ್ಕೆ ತುಂಬಾ ಸುಲಭ ಆಗುತ್ತೆ. ಮುಂಚೇನೇ ಹೇಳ್ದಾಗೆ, ಕೆಲವರಿಗೆ ಅವರು ನೋಡಿದ ಬಣ್ಣ, ಆಕಾರ, ದೃಶ್ಯ ಇವುಗಳ ಆಧಾರದ ಮೇಲೆ ಸುಲಭವಾಗಿ ನೆನಪಿಟ್ಕೋಳೋ ಶಕ್ತಿ ಇರುತ್ತೆ. ಇದು ನಿಮಗೂ ಸಹಾಯ ಆಗ್ಬಹುದು.

ಮೂಲ

5. ಪೂರ್ತಿ ಬರೋವರ್ಗೂ ರಿಪೀಟ್ ಮಾಡ್ತಾರೆ

ನೀವು ಬರೆದಿಟ್ಕೊಂಡಿರೋ ಟಿಪ್ಪಣಿಗಳನ್ನ ನೋಡಿ ಅದ್ರಲ್ಲಿರೋ ಪ್ರತಿಯೊಂದು ವಿಷಯಾನೂ ನೆನಪಾಗಬೇಕು ಅಂದ್ರೆ, ಪದೇ ಪದೇ ನೀವು ಬರ್ದಿರೋದನ್ನ ನೋಡಿ, ಮನಸ್ಸಲ್ಲೇ ಓದಿ. ಮುಂದಿನ ಸಾಲಿಗೆ ಹೋದಾಗ ಹಿಂದಿನ ಸಾಲಲ್ಲಿ ಕಲ್ತಿರೋದನ್ನ ಮೊದಲು ನೆನಪಿಸ್ಕೊಂಡು ಹೇಳಿ, ಆಮೇಲೆ ಹೊಸದಾಗಿ ಓದಿದ್ದನ್ನ ನೆನಪು ಮಾಡ್ಕೊಳಿ. ಮಧ್ಯದಲ್ಲಿ ಎಲ್ಲಾದ್ರೂ ಮರೆತ್ರೆ ಮತ್ತೆ ಮೊದಲಿಂದ ಹೇಳ್ಕೊಳಿ. ಹೀಗೆ ನಿಮಗೆ ಪೂರ್ತಿ ವಿಷಯ ನನಪಾಗೋವರ್ಗೂ ಮಾಡ್ತಾ ಇರಿ. ನೋಡಿದ್ದನ್ನ ಮಾಡಿ ಕಲಿಯೋದು ಇದೇ ರೀತಿ. 

6. ನೆನಪು ಮಾಡ್ಕೊಂಡು ಮತ್ತೆ ಬರೀತಾರೆ

ಈಗ ರಿವೈಸ್ ಮಾಡಿ ಕಲ್ತಿರೋದನ್ನ ಚೆನ್ನಾಗಿ ನೆನಪು ಮಾಡ್ಕೊಂಡು ಪೂರ್ತಿಯಾಗಿ ಒಂದ್ಸಲ ಬರೀರಿ. ಇದು ಪ್ರಾಯೋಗಿಕವಾಗಿ ನೀವು ಕಲ್ತಿರೋದೆಲ್ಲಾ ನಿಮ್ಮ ನೆನಪಲ್ಲಿ ಚೆನ್ನಾಗಿ ಬೇರೂರೋಹಾಗೆ ಮಾಡುತ್ತೆ.

ಮೂಲ

7. ಬೇರೆಯವ್ರಿಗೆ ಹೇಳ್ಕೊಡ್ತಾರೆ

ಇದು ಹೆಚ್ಚಾಗಿ ಶಾಲೆ ಕಾಲೇಜುಗಳಲ್ಲಿ ಓದೋ ಮಕ್ಕಳಿಗೆ ತುಂಬಾ ಸಹಾಯ ಆಗುತ್ತೆ. ನೀವು ಓದಿರೋದು ನಿಮ್ಮ ತಲೇಲಿ ಉಳಿಬೇಕು ಅಂದ್ರೆ ಬೇರೆಯವರಿಗೆ ಅದನ್ನ ಹೇಳ್ಕೊಡಿ. ಅದ್ರಲ್ಲೂ ಅವರು ನಿಮ್ಮ ಜೊತೆಯವರೇ ಆದ್ರೆ ತುಂಬಾನೇ ಒಳ್ಳೇದು . ಇದ್ರಿಂದ ಅವರೂ ಕಲೀತಾರೆ, ನಿಮಗೂ ನೆನಪಿರುತ್ತೆ. ನೀವೇ ಬೇರೆ ಬೇರೆ ರೀತಿಯ ಹತ್ತಾರು ಪ್ರಶ್ನೆಗಳನ್ನ ಬರೆದು ಅವರನ್ನ ಉತ್ತರ ಕೇಳಿ. ನೀವು ಕಲ್ತಿರೋದಕ್ಕಿಂತ ಭಿನ್ನವಾದ ಉತ್ತರಗಳು ಬಂದು ನಿಮ್ಮ ಅಭ್ಯಾಸ ಚೆನ್ನಾಗಾಗುತ್ತೆ, ಹೆಚ್ಚಿಗೆ ವಿಷಯಾನೂ ತಿಳಿಯುತ್ತೆ. ಅನುಭವಿಸಿ ಕಲಿಯೋ ವಿಧಾನ ಇದು. ನೀವೇ ಅನುಭವಿಸೋದ್ರಿಂದ ತುಂಬಾ ದಿನ ನೆನಪಲ್ಲಿರುತ್ತೆ.

ಮೂಲ

8. ಪದೇ ಪದೇ ರೆಕಾರ್ಡ್ ಮಾಡಿರೋದ್ನ ಕೇಳ್ತಾ ಇರ್ತಾರೆ

ನೀವು ರೆಕಾರ್ಡ್ ಮಾಡಿರೋದನ್ನ ಒಂದೇ ಸಲ ಗಮನ ಇಟ್ಟು ಕೇಳ್ಬೇಕು ಅಂತ ಏನಿಲ್ಲ. ನೀವು ಯಾವ್ದೋ ಕೆಲಸ ಮಾಡುವಾಗ, ಸುಮ್ಮನೆ ಕೂತಿದ್ದಾಗ, ವಾಕಿಂಗ್ ಮಾಡೋವಾಗ… ಹೀಗೆ, ಸಮಯ ಸಿಕ್ಕಾಗೆಲ್ಲಾ ಮೇಲಿಂದ ಮೇಲೆ ಕೇಳ್ತಾ ಇರಿ. ಸುಲಭವಾಗಿ ನೆನಪಾಗುತ್ತೆ. ಇದು ಕೇಳಿ ಕಲಿತು ನೆನಪಿಟ್ಕೊಳೋ ರೀತಿ.

ಇಷ್ಟೆಲ್ಲಾ ಕಲ್ತಿರ್ತೀರಲ್ಲ… ಈಗ ಸ್ವಲ ರೆಸ್ಟ್ ತೊಗೊಳಿ, ಹೊರಗೆ ಓಡಾಡ್ಕೊಂಡು ಬನ್ನಿ. ಸ್ವಲ್ಪ ರಿಲ್ಯಾಕ್ಸ್ ಆಗಿ ಬಂದ್ಮೇಲೆ ನೀವು ಕಲ್ತಿರೋದನ್ನ ನೆನಪು ಮಾಡ್ಕೊಳೋ ಪ್ರಯತ್ನ ಮಾಡಿ, ಖಂಡಿತ ನಿಮಗೆ ಸಾಕಷ್ಟು ವಿಷಯಗಳು ನೆನಪಿಗೆ ಬರುತ್ತೆ. ಯಾವುದೋ ಒಂದೆರಡು ವಿಷಯ ನೆನೆಪಾಗ್ಲಿಲ್ಲ ಅಂದ್ರೆ, ತಿರ್ಗಾ ಗಮನ ಇಟ್ಟು ನೋಡ್ಕೊಳಿ. ಏನ್ ತಲೆಕೆಡಿಸ್ಕೊಳೋ ಅವಶ್ಯಕತೆ ಇಲ್ಲ. ಸರೀನಾ?