http://yourdost-blog-images.s3-ap-southeast-1.amazonaws.com/wp-content/uploads/2016/03/27102932/083588acac61371d7418155e9f0c8f34.jpg

ಅಪ್ಪ ಮಗಳ ಬಾಂಧವ್ಯ ಭಾಳ ಸುಂದರವಾಗಿದ್ದು, ಅದನ್ನ ವರ್ಣಿಸಾಕ ಪದಗಳ ಸಾಲಂಗಿಲ್ಲ. ಹೆಣ್ಣ ಮಕ್ಕಳು ಅಮ್ಮನಿಗಿಂತಾನೂ ಅಪ್ಪನ ಹೆಚ್ಚು ಹಚ್ಕೊಂಡಿರ್ತಾರ. ಯಾಕ ಅಂದ್ರ ಅಪ್ಪಾನೂ ಕೂಡಾ ಮಗಳನ್ನ ಅಷ್ಟ ಚಲೋತ್ತಂಗ ಅರ್ಥ ಮಾಡ್ಕೊಂಡಿರ್ತಾರ. ಮಗಳಿಗೆ ಬೇಕಾದ ಸ್ವಾತಂತ್ರ್ಯಾನ ಅಮ್ಮನಿಂತ ಅಪ್ಪನ ಹೆಚ್ಚ  ಕೊಡ್ತಿರ್ತಾರ. ಈ ಕಾರಣಕ್ಕ ಹೆಣ್ಣ ಮಕ್ಕಳು ಅಪ್ಪನ ಮ್ಯಾಗ ಜೀವಾನ ಇಟ್ಕೊಂಡಿರ್ತಾರ, ಹಂಗ ಅಪ್ಪನೂ….. ಮಗಳಿಗೊಸ್ಕರಾ ಪ್ರಾಣಾನ ಕೊಡಾಕ ತಯಾರಿರ್ತಾರ. ಈ ಸಂಬಂಧ ಯಾಕ ಹಿಂಗ ಅನ್ನೊದು ನಿಮಗ ಗೊತ್ತಾಗ್ಬೇಕಾ? ನಿವೂ ನಿಮ್ಮ ಅಪ್ಪನ ಜತಿಗೆ ಹಿಂಗ ಅದಿರಾ? ನಿಮ್ಮ ಬಾಂಧವ್ಯದ ಬಗ್ಗೆ ನಮಗೂ ಹೇಳ್ರಿ ನಾವು ನಿಮ್ಮ ಸಂತೋಷದಾಗ ಭಾಗಿಯಾಕ್ಕವಿ. ಈದ ಗುಂಗನ್ಯಾಗ ಓದನ್ನ ಮುಂದವರೆಸೋದ ಮರಿಬ್ಯಾಡ್ರಿ!!!!

1. ಹೆಣ್ಣಮಕ್ಕಳು ತಮ್ಮ ಜೀವನದಾಗ ಬ್ಯಾರೆ ಗಂಡಮಕ್ಕಳಿಗೆ ಹತ್ರಾಗಾಕೂ ಮೊದಲು ತಮ್ಮ ಅಪ್ಪಗ ಭಾಳ ಹತ್ರಾಗಿರ್ತಾರ

ಯಾವುದಾದ್ರೂ ಹುಡುಗನ್ನ ಹತ್ರದಿಂದ ನೋಡಾಕು ಮೊದಲು ನಾವು ನಮ್ಮ ಅಪ್ಪನ್ನ ನೋಡಿರ್ತವಿ. ಅಪ್ಮ.. ಅಮ್ಮನ ಜತಿಗೆ, ನಮ್ಮ ಜತಿಗೆ ಹೇಂಗಿರ್ತಾರ, ನಮ್ಮನ್ನ ಹ್ಯಾಂಗ ನೋಡ್ಕೊಂತಾರ, ನಮ್ಮ ಸಲವಾಗಿ ಯಾವ ಯಾವ ಕಷ್ಟಗಳನ್ನ ಅನುಭವಿಸ್ತಾರ, ಇದೆಲ್ಲಾನೂ ನೋಡ್ಕೊಂತ ದೊಡ್ಡೊರಾಕ್ಕವಿ. ಇವೆಲ್ಲಾ ನಮ್ಮ ಮ್ಯಾಲೆ ತಮ್ಮ ಪ್ರಭಾವ ಬೀರ್ಕೊಂತ ಹೊಕ್ಕಾವು.

ಮೂಲ

2. ಅಮ್ಮ ಪ್ರೀತಿ ಮಾಡಿದ್ರ ಅಪ್ಪ ನಮ್ಮನ್ನ ರಕ್ಷಣೆ ಮಾಡ್ತಾರ.

ಅಮ್ಮನ ಪ್ರೀತಿಗೆ ಸಾಟಿನ ಇಲ್ಲ. ಅಮ್ಮ ಪ್ರೀತಿ ಮಾಡಂಗ ಬ್ಯಾರೆ ಯಾರೂ ನಮ್ಮನ್ನ ಪ್ರೀತ್ಸಾಕ ಸಾಧ್ಯನ ಇಲ್ಲ. ಆದ್ರ ಈ ಪ್ರೀತಿಗಿಂತ ಹೆಚ್ಚು ನಮಗ ನಮ್ಮನ್ನ ಕಾಪಾಡೋರು ಬೇಕು ಹೌದಲ್ಲ? ಮದವಿ ಆದಮ್ಯಾಗ ಗಂಡ ನಮ್ಮನ್ನ ಕಾಪಾಡ್ತಾನ. ಆದ್ರ ಹುಟ್ಟಾದಿಂದಾ ನಮ್ಮ ಮದಿವ್ಯಾಗೋ ತನಕ ಅಪ್ಪನ ಆ ಕೆಲಸ ಮಾಡೋದು. ಹೀಂಗಾಗಿ ಅಪ್ಪ ನಮ್ಮ ಹೀರೊ ಆಗಿರ್ತಾರ.

3. ಅಪ್ಪಗ ಮಗಳ ಮ್ಯಾಗ ಎಲ್ಲಾರಿಗಿಂತಾನೂ ಹೆಚ್ಚು ಕಾಳಜಿ ಇರ್ತೈತಿ

ಮನ್ಯಾಗ ಮಗಳ ಹುಟ್ಟಿದ ಕೂಡ್ಲೆ ಹೆಚ್ಚು ಸಂತೋಷಾಗೊದು ಅಪ್ಪಗ. ಇದೊಂದ ಥರಾ ಸೈಂಟಿಫಿಕ್ಕಾಗಿ ಪ್ರೂವ್ ಆಗ್ಬಿಟ್ಟತಿ. ಯಾಕಂದ್ರ ತಂದಿಗೆ ಮಗಳು ಹುಟ್ಯಾಳಂದ್ರ ಸಿಕ್ಕಾಪಟ್ಟೆ ಖುಷಿ. ಅವರಿಗೆ ಯಾವುದೋ ಒಂದು ಹೊಸ ಪ್ರಪಂಚಾನ ಸಿಕ್ಕತೇನೋ ಅನ್ನಷ್ಟು ಸಂಭ್ರಮಾ ಪಡ್ತಿರ್ತಾರ. ಹೀಂಗಾಗಿ ತನ್ನ ಪ್ರಪಂಚದ ಮ್ಯಾಗ ತಾನ ಭಾಳ ಕಾಳಜಿ ತಗೋಬೇಕು ಅನ್ನೊ ಮನಸ್ಥಿತಿ ಅಪ್ಪಂದಾಗಿರ್ತತಿ. ಅದಕ್ಕ ಅಪ್ಪಗ ಎಲ್ಲಾರಿಗಿಂತ ಹೆಚ್ಚು ಮಗಳ ಬಗ್ಗೆನ ಕಾಳಜಿ ಇರ್ತತಿ.

ಮೂಲ

4. ಅಪ್ಪ ಗಂಡಮಕ್ಕಳಿಗಿಂತಾನೂ ಹೆಚ್ಚು ಹೆಣ್ಣಮಕ್ಕಳನ್ನ ಭಾಳ ಪ್ರೀತಿ ಮಾಡ್ತಿರ್ತಾರ

ಮನ್ಯಾಗ ಗಂಡಮಕ್ಕಳಿದ್ರ ಅವರು ಬೆಳಿತಾ ಬೆಳಿತಾ ಅಪ್ಪನ್ನ ಪ್ರಶ್ನೆ ಮಾಡಾಕ ಶುರು ಮಾಡ್ತಾರ. ಅಪ್ಪ ಹಂಗ್ಯಾಕ ಮಾಡಿದ್ರಿ? ಹಿಂಗ್ಯಾಕ ಮಾಡಿದ್ರಿ? ಹಂಗ ಮಾಡ್ಬಾದಿತ್ತು, ಅದು ತಪ್ಪು, ಇದು ತಪ್ಪು ಅಂತ ಅಪ್ಪನ ಕೂಟಾಗ ವಾದಾವಿವಾದಗಳು ಶುರು ಆಗ್ಬಿಡ್ತಾವು. ಆದರ ಹೆಣ್ಣಮಕ್ಕಳ ಹಂಗ ಮಾಡಲ್ಲ. ಅವರಿಗೆ ಅಪ್ಪನ ದೇವರು, ಹೀರೊ, ಎಲ್ಲಾನೂ ಆಗಿರ್ತಾರ. ಹಿಂಗಾಗಿ ಹಿಂದಕ್ಕ ತಿರುಗಿ ವಾದಸ್ದೆ ಇರೋ ಹೆಣ್ಣಮಕ್ಕಳಂದ್ರ ಅಪ್ಪಂದಿರಿಗೆ ಭಾಳ ಇಷ್ಟಾ.

5. ನಮ್ಮ ಅಪ್ಪ ನಮಗ ಎಲ್ಲಾರು ಎಲ್ಲಾ ವಿಷಯದಾಗೂ ಬಲಿಷ್ಟರಾಗಿರ್ಬೇಕು ಅಂತೇನಿಲ್ಲ ಅನ್ನೊದನ್ನ ಕಲಸ್ತಾರ

ಹೆಣ್ಣಮಕ್ಕಳೇ ಸ್ಟ್ರಾಂಗು ಗುರು ಅಂತ ಎಲ್ಲಾರು ಹೇಳತಿರ್ತಾರ. ಆದರ ಒಂದೊಂದ ಸರ್ತಿ ಹಿಂಗ ಸ್ಟ್ರಾಂಗಾಗಿರೋರ ಭಾಳ ದುರ್ಬಲರಾಗ್ಬಿಡ್ತಾರ.. ನರ್ವಸಾಗೋ ಸಂಭವನೂ ಇರ್ತೈತಿ. ಅಪ್ಪ ಅಂಥಾ ಸಂಧರ್ಭದಾಗ ಜತಿಗೆ ನಿಂತ್ಕೊತಾರ. ಒಂದೋಂದ ಸರ್ತಿ ಹಿಂಗಾಗೊದು ಸಾಮಾನ್ಯ ಇದಕ್ಕೆಲ್ಲಾ ಹೆದರಬಾರ್ದು ಅಂತ ನಮ್ಮೊಳಗ ಧೈರ್ಯ ತುಂಬತಾರ.

ಮೂಲ

6. ನಾವು ಎಂಥಾ ಗಂಡನ್ನ ಆರಿಸ್ಕೋಬೇಕು ಅನ್ನೊ ವಿಷಯದಾಗ ನಮ್ಮ ಅಪ್ಪನ ನಮಗ ಮಾದರಿ ಆಗಿರ್ತಾರ

ನಮ್ಮ ಅಪ್ಪ ಹೆಂಗಿರ್ತಾರ, ಅವರು ಸಂಸಾರಾನ ಎಷ್ಟ ಚಲೋತ್ತಂಗ ತೂಗಿಸ್ಕೊಂಡ ಹೋಕ್ಕಾರ, ಅವರಿಗೆ ನಮ್ಮ ಮ್ಯಾಗಿರೋ ಪ್ರೀತಿ-ವಾತ್ಸಲ್ಯ, ಅವರು ತಮ್ಮ ಜವಾಬ್ದಾರಿಯನ್ನ ಸಂಬಾಳಿಸೋ ಬಗೆ, ಇದೆಲ್ಲಾನೂ ನಾವು ನೋಡ್ಕೊಂತಾನ ದೊಡ್ಡೊರಾಕ್ಕವಿ. ಇದನ್ನ ನೋಡಿದ ನಮಗ ಮುಂದ ನಮ್ಮನ್ನ ಮದಿವಿಯಾಗೋ ಹುಡುಗಾ ಹೆಂಗ ಇರ್ಬೇಕು ಅಂನ್ನೊ ವಿಷಯದಾಗ ನಮ್ಮ ಅಪ್ಪನ್ನ ಮಾದರಿಯಾಗಿಟ್ಕೊಂತವಿ.

ಮೂಲ

7.ನಾವೆಷ್ಟ ದೊಡ್ಡೊರಾಗಿದ್ರೂ ನಮ್ಮಪ್ಪ ನಮ್ಮನ್ನ ಸಣ್ಣ ಹುಡುಗಿ ಹಂಗ ನೋಡ್ಕೊಂತಿರ್ತಾರ

ನಮಗ ಮದಿವ್ಯಾಗಿ, ಮಕ್ಕಳಾಗಿ, ಮೊಮ್ಮಕ್ಕಳ ಹುಟ್ಟಿದ್ರೂ ನಮ್ಮ ಅಪ್ಪ ನಮ್ಮನ್ನ ಸಣ್ಣ ಮಕ್ಕಳ ಗತಿನ ನೋಡ್ತಿರ್ತಾರ. ಯಾವಾಗಲೂ ನಾವು ಅವರಿಗೆ ಸಣ್ಣ ಕೂಸ ಆಗಿರ್ತವಿ, ಹಂಗ ನೋಡ್ಕೊಂತಿರ್ತಾರ.

ಇಷ್ಟ ಅಲ್ಲ… ಇನ್ನೂ ಸುಮಾರು ಕಾರಣಗಳದಾವು, ಅಪ್ಪನ ಕೂಟಾಗ ಕಳಿಯೋ ಸಮಯದಾಗ ಮನಸಿನ್ಯಾಗುಳಿಯೋ ಅಳಿಸಲಾರಗ ಸಾವಿರಾರು ಕ್ಷಣಗಳಿಂದ ಹೆಣ್ಣಮಕ್ಕಳು ಅಪ್ಪಂದಿರಿಗೆ ಭಾಳ ಹತ್ರಾಕ್ಕಾರ.