http://texasisa.org/wp-content/uploads/2016/08/12670303_1033504876708817_2116674551401760425_n.jpg

'ಒಗ್ಗಟ್ಟಿನಲ್ಲಿ ಬಲವಿದೆ' ಅನ್ನೋ ಮಾತು ಕೇಳೇ ಇರ್ತಿರಿ ಅಲ್ವ. ಎಷ್ಟೋ ಸಲ ನಾವು ಅಂದ್ಕೊಂಡಿದ್ ಸಾಧಿಸಕ್ಕೆ, ನಮ್ದೇ ಆದ ಐಡೆಂಟಿಟಿ ಮೂಡ್ಸಕ್ಕೆ ಗುಂಪಲ್ಲಿ ಗುರುತುಸ್ಕೊಬೇಕಾಗತ್ತೆ. ಅಲ್ಲಿ ನಿಮ್ ಥರನೇ ಯೋಚನೆ ಮಾಡೋರು, ಗುರಿ ಇಟ್ಕೊಂಡಿರೋರ್ನ ಮೀಟ್ ಮಾಡ್ಬೋದು. ಅದೆಲ್ಲಾ ಸರಿ ಆದ್ರೆ ಒಂದು ಗುಂಪು, ಬಳಗ ಅಂತ ಬಂದಾಗ, ನಮ್ ನಡವಳಿಕೆ, ಬಟ್ಟೆಬರೆ, ಮಾತು ಕಥೆ ಇದೆಲ್ಲಾ ಹೇಗಿರ್ಬೇಕು ಅನ್ನೋದೂ ಮುಖ್ಯ ಆಗತ್ತೆ. ಈಗಾಗ್ಲೇ ನಮ್ದೇ ಆದ ಗುಣ, ಸ್ವಭಾವ ಇರತ್ತೆ. ಅದರ ಮಧ್ಯ ಹೊಸದಾಗಿ ಆಗೋ ಪರಿಚಯ, ಜನರಿಂದ ನಮ್ ಬೆಳವಣಿಗೆ, ಏಳ್ಗೆ ಇದೆಲ್ಲಾ ಹೇಗೆ ಆಗತ್ತೆ? ಏನೆಲ್ಲಾ ಬದಲಾವಣೆ ಮಾದ್ಕೊಬೇಕಾಗತ್ತೆ. ಜೊತೆಗೆ ಆ ಬದಲಾವಣೆ ಅವಶ್ಯಕತೆ ಇದ್ಯ, ಇಲ್ವ, ಈ ಥರ ಸಾಕಷ್ಟು ಪ್ರಶ್ನೆ ಕಾದತ್ತೆ. ಅದೆಲ್ಲಾದಕ್ಕೂ ಉತ್ತರ ಇಲ್ಲಿದೆ. ಇಲ್ಲಿ ಕೊಟ್ಟಿರೋ 5 ಕಿವಿಮಾತು ಪಾಲಿಸಿದ್ರೆ ಸಾಕು ಗುಂಪಲ್ಲಿ ನಮ್ ಪಾತ್ರ ಏನು? ಗುಂಪಿಂದ ನಮ್ ಉದ್ದಾರ ಹೇಗೆ ಅನ್ನೋ ಕ್ಲಾರಿಟಿ ಸಿಗತ್ತೆ.

1) ಮೊದಲನೇದಾಗಿ ಆ ಗುಂಪಲ್ಲಿ ಇರ್ಬೇಕಾ ಬೇಡ್ವಾ ಅಂತ ಯೋಚ್ನೆ ಮಾಡಿ

ಮೂಲ

ನಿಮ್ ಸ್ವಭಾವ, ನಂಬಿಕೆ, ಆದರ್ಶಗಳ್ಗೆ ಯಾವ್ ದಿಕ್ಕಿಂದನೂ ಮ್ಯಾಚ್ ಆಗ್ದೇ ಇರೋ ಗುಂಪಲ್ಲಿ ನೀವ್ ಹೋಗ್ ಸೇರ್ಕೊಂಡ್ರೆ, ತಲೆ ಚಚ್ಕೊಬೇಕಾಗತ್ತೆ. ಒಂಥರಾ ಚಿಟ್ಟುಹಿಡಿದೋಗತ್ತೆ ಕಣ್ರಿ. ಹಾಗಾಗಿ, ಪ್ರತೀ ಸಲ ನೀವ್ ಮಜಾ ಮಾಡ್ಬೇಕು ಅಂದ್ಕೊಂಡ್ ಹೋಗಿ, ಗುಂಪಲ್ಲಿ ಬರೀ ಅಡ್ಜಸ್ಟ್ಮೆಂಟ್ ಮಾಡ್ಕೊಂಡು, ಬೇಜಾರ್ ಮಾಡ್ಕೊಂಡ್ ಬರ್ತಿದ್ರೆ, ಅದರ ಸಹವಾಸ ಬಿಟ್ಟು ಬೇರೆ ಗೆಳೆಯರ ಗುಂಪನ್ನ ಹುಡುಕ್ಕೊಳೋ ಸಮಯ ಅಂತ ಅರ್ಥ.

2) ನಿಮ್ಮ ಬಟ್ಟೆ ಬರೆ ಸಂದರ್ಭಕ್ ತಕ್ಕಂಗ್ ಇದ್ಯಾ ಅಂತ ನೋಡ್ಕೊಳಿ

ಮೂಲ

ಯಾರ್ದಾದ್ರೂ ಅಂತ್ಯ ಸಂಸ್ಕಾರಕ್ಕೆ ಹೋಗುವಾಗ, ಠಣಾರ್ ಪಣಾರ್ ಅನ್ನೋ ಬಟ್ಟೆ ಹಾಕ್ಕೊಂಡ್ ಹೋಗ್ತಿವ? ಇಲ್ಲ ತಾನೆ. ಹಾಗೆನೇ ಮದುವೆ, ಪಾರ್ಟಿಗೆಲ್ಲಾ ಹೋಗುವಾಗ ನೈಟ್ ಡ್ರೆಸ್ ಹಾಕ್ಕೊಂಡ್ ಹೋಗ್ತಿವ? ಸಾಧ್ಯನೇ ಇಲ್ಲ. ಅಂದ್ರೆ ಎಂಥಾ ಸಂದರ್ಭಕ್ಕೆ ಎಂಥಾ ಬಟ್ಟೆ ಹಾಕ್ಕೊಂಡ್ ಹೋಗ್ಬೇಕು ಅನ್ನೋದ್ ಗೊತ್ತಿರ್ಬೇಕು. ಅದೇ ಥರ ಸೋಶಿಯಲ್ ಗ್ಯಾದರಿಂಗ್, ಗೆಟ್ ಟುಗೆದರ್ ಇಲ್ಲೆಲ್ಲಾ ಇಂಥಾ ಬಣ್ಣದ್ ಬಟ್ಟೆ, ಇಂಥಾ ಪ್ಯಾಟ್ರನ್ ಬಟ್ಟೆನೇ ಹಾಕ್ಕೊಂಡ್ ಹೋಗ್ಬೇಕು ಅನ್ನೋ ಥೀಮ್ ಇರತ್ತೆ. ಆಗ ನಿಮ್ಗೆ ಗೊತ್ತಾಗ್ಲಿಲ್ಲ ಅಂದ್ರೆ, ಅಥವ ಅನುಮಾನ ಬಂತೂಂದ್ರೆ, ಅದೇ ಸಮಾರಂಭಕ್ಕೆ ಬರ್ತಿರೋ ಇನ್ಯಾರನ್ನಾದ್ರೂ ಕೇಳಿ ತಿಳ್ಕೊಳದು ಒಳ್ಳೆದು. ಇವತ್ತಿನ್ ದಿನ ಈ ಥೀಮ್ ವಿಷ್ಯನ ಜನ ಎಷ್ಟು ಗಂಭೀರ್ವಾಗಿ ತೊಗೊತಾರೆ ಅಂದ್ರೆ, ಒಂದುವೇಳೆ ಥೀಮ್ ಪಾರ್ಟಿಗೆ ಆಕಾಶ ನೀಲಿ ಬಣ್ಣ ಕೊಟ್ಟಿದ್ದು, ಅವ್ರ ಹತ್ರ ಅದು ಇಲ್ಲ ಅಂತ ಬೇರೆ ನೀಲಿ ಬಣ್ಣದ್ ಬಟ್ಟೆ ಹಾಕ್ಕೊಂಡ್ ಬಂದಿದ್ರೆ, ಒಂಥರ ಮುಜುಗರ ಪಟ್ಕೊತಾರೆ. ಕೇಳಕ್ಕೆ ಸ್ವಲ್ಪ ಅತಿರೇಕ ಅನ್ನಿಸ್ಬೋದು. ಆದ್ರೆ ಅದ್ರಲ್ಲಿ ಒಂದು ಉದ್ದೇಶ ಇರತ್ತೆ. ಸಾಮಾನ್ಯ ಇಂಥ ಥೀಮ್ ನಾವು ಕಾಲೇಜ್ ಎಥಿನಿಕ್ ಡೇ ದಿನ ನೋಡ್ತಿವಿ. ಹುಡುಗೀರೆಲ್ಲ ಕೆಂಪು ಬಣ್ಣದ್ ಸೀರೆ ಉಟ್ಕೊಂಡ್ ಬರ್ಬೇಕು ಅಂತ ಮಾತಾಡ್ಕೊತಾರೆ. ಇದ್ರಲ್ಲೂ ಒಂಥರ ಮಜ ಇರತ್ತೆ ಕಣ್ರಿ. ಎಲ್ಲಾ ಮ್ಯಾಚ್ ಆಗ್ಲೇಬೇಕು ಅಂತಿಲ್ಲ ಆದ್ರೆ ಆ ಥೀಮ್ಗೆ ಹೊಂದ್ಕೊಬೇಕು.

3) ಬೇರೆಯೋರು ಮಾತಾಡದೆ ಕೊಡ್ತಿರೋ ಸಂದೇಶಗಳ್ನ ಅರ್ಥ ಮಾಡ್ಕೊಳಿ

ಮೂಲ

ಒಂದು ಗುಂಪಲ್ಲಿರುವಾಗ, ಬೇರೆಯೋರೆಲ್ಲಾ ಗಂಭೀರ್ವಾಗಿದ್ದು, ನೀವ್ ಮಾತ್ರ ಹಾಸ್ಯ ಮಾಡ್ಕೊಂಡಿದ್ರೆ, ತುಂಬಾ ಆಭಾಸ ಆಗತ್ತೆ. ಇವ್ರು ಯಾಕ್ ಹೀಗೆ ಅಂತ ಜನ ಅಂದ್ಕೊತಾರೆ. ಇನ್ನು ಎಲ್ರೂ ಜೋಕ್ ಮಾಡ್ಕೊಂಡು, ಹರಟೆ ಹೊಡ್ಕೊಂಡು ಮಜಾ ಮಾಡ್ಕೊಂಡಿರುವಾಗ, ನೀವ್ ಮಾತ್ರ ಮುಖ ಗಂಟಾಕ್ಕೊಂಡಿದ್ರೆ, ಯಾರ ಜೊತೆನೂ ಬೆರಿಯಲ್ಲ, ತುಂಬಾ ರಿಜರ್ವ್ ವ್ಯಕ್ತಿ ಅಂದ್ಕೊತಾರೆ. ಹೀಗೆಲ್ಲ ಆಗ್ಬಾರ್ದು. ಆ ಥರ ವಿರುದ್ಧವಾಗಿ ನಡ್ಕೊಳೋದ್ರಿಂದ, ಗುಂಪಿನ ವಾತಾವರಣ, ಮೂಡ್ ಬದಲಾಯಿಸ್ಬಿಡ್ತಿನಿ ಅಂದ್ಕೊಂಡ್ರೆ ಅದು ತಪ್ಪಾಗತ್ತೆ. ಇನ್ನಿಬ್ರುಗೆ ನಿಮ್ ನಡವಳಿಕೆಯಿಂದ ಹರ್ಟ್ ಆಗತ್ತೆ ಅಷ್ಟೆ. ಹಾಗಾಗಿ, ಪರಿಸ್ಥಿತಿ ತಿಳಿಯಾಗ್ಬೇಕು ಅಂದ್ರೆ ಎಲ್ರೂ ಹೇಗ್ ಇರ್ತಾರೋ ಹಾಗೇ ಇರ್ಬೇಕು ಜೊತೆಗೆ ಸ್ವಲ್ಪ ಬುದ್ಧಿವಂತಿಕೆಯಿಂದ ನಡ್ಕೊಬೇಕು. ಎಲ್ರೂ ಮೌನವಾಗಿ, ಗಂಭೀರ್ವಾಗಿದ್ರೆ, ನೀವು ಚೂರ್ ಜಾಸ್ತಿನೇ ಬಿಗಿಯಾಗಿರಿ ಹಾಗೆನೇ ತರ್ಲೆ ತಮಾಷೆಮಾಡ್ತಿದ್ರೆ, ಚೂರ್ ಅತೀ ಅನ್ಸೋಹಾಗೇ ಇನ್ನೊಬ್ರ ಕಾಲ್ ಎಳದ್ರೆ ಏನೂ ತಪ್ಪಿಲ್ಲ.

4) ಗುಂಪಿನ ಪದ್ದತಿ ಮತ್ತೆ ನಿಯಮಗಳ್ನ ತಪ್ಪದೆ ಪಾಲಿಸಿ

ಮೂಲ

ಈಗಾಗ್ಲೇ ಇರೋ ಒಂದು ಗುಂಪಿನ ಬಳಗಕ್ಕೆ ನೀವು ಹೊಸುಬ್ರು ಅಂದ್ರೆ, ಮೊದುಲ್ನೇ ದಿನದಿಂದನೇ ನಿಮ್ ವರಸೆ ತೋರ್ಸೋ ಬದ್ಲು, ನೀವು ಮೊದ್ಲು ಇದ್ದ ಹಾಗೇ ಇಲ್ಲೂ ನಡ್ಕೊಳ್ದೆ, ಸ್ವಲ್ಪ ದಿನ ಚೆನ್ನಾಗಿ ಗಮನಿಸಿ. ಯಾಕಂದ್ರೆ ನಿಮ್ ಜೊತೆ ಯಾರ್ ಹೇಗ್ ನಡ್ಕೊತಾರೆ, ನಿಮ್ ಮಾತು, ಕೆಲ್ಸಕ್ಕೆ ಯಾರ್ ಹೇಗ್ ರಿಯಾಕ್ಟ್ ಮಾಡ್ತಾರೋ ಗೊತ್ತಿರಲ್ಲ. ಉದಾಹರಣೆಗೆ, ನಿಮ್ ಹಳೆ ಆಫೀಸಲ್ಲಿ, ಎಷ್ಟೇ ಕೆಲ್ಸ ಗುಡ್ಡೆ ಬಿದ್ದಿದ್ರೂ, ರಿಲ್ಯಾಕ್ಸ್ ಆಗ್ಲಿ ಅಂತ ಇನ್ನೊಬ್ರ ಡೆಸ್ಕ್ ಹತ್ರ ಹೋಗಿ, ಹರಟೆ ಹೊಡೆಯೋ ಅಭ್ಯಾಸ ಇರ್ಬೋದು. ಆದ್ರೆ ಹೊಸ ಆಫೀಸಲ್ಲಿ ಇದನ್ನ ಯಾರೂ ಇಷ್ಟ ಪಡ್ದೇ, ನಿಮ್ಮಿಂದ ಕಿರಿಕಿರಿಯಾಗ್ಬೋದು. ಜೊತೆಗೆ, ಜನ ಈ ಕಾರಣಕ್ಕೇ ನಿಮ್ಮನ್ನ ದೂರ ಮಾಡ್ಬೋದು. ಹಾಗೆಲ್ಲಾ ಆಗ್ಬಾರ್ದು ಅಂದ್ರೆ ಎಲ್ರೂ ಯಾವ್ ಥರ ನಡ್ಕೊತಾರೆ, ಏನೆಲ್ಲಾ ರೂಢಿನಲ್ಲಿ ಬಂದಿದೆ, ನಿಯಮ ಮಾಡ್ಕೊಂಡಿದಾರೆ ಅಂತ ಅರ್ಥ ಮಾಡ್ಕೊಂಡು ಮುಂದುವರಿರಿ.

5) ನಿಮ್ಮ ಗಮನ ಬೇರೆಯವರ ಮೇಲೆ ಇರೋಹಂಗೆ ನೋಡ್ಕೊಳಿ, ನಿಮ್ಮ ಮೇಲಲ್ಲ

ಮೂಲ

ಜನರ ಮಧ್ಯ ಇರುವಾಗ, ನೀವು ಇಷ್ಟ ಪಡೋರು, ಇನ್ನೊಬ್ರು ನಿಮ್ಮನ್ನ ಹೊಗಳ್ಬೇಕು ಅಂತ ಆಸೆ ಪಡ್ತಿರ. ಆದ್ರೆ ಅ ರೀತಿ, ಎಲ್ಲಾ ತಂತಾನೇ ನಿಮ್ ಹತ್ರ ಬರ್ದೇ ಇರ್ಬೊದು. ಹಾಗಾಗಿ, ಅಲ್ಲಿರೋ ಎಲ್ಲರ ಬಗ್ಗೆ, ಅದ್ರಲ್ಲೂ ನೀವ್ ಇಷ್ಟ ಪಡೋರ್ ಬಗ್ಗೆ ಚೆನ್ನಾಗಿ ತಿಳ್ಕೊಳೋವರ್ಗು ಸ್ವಲ್ಪ ಪ್ರಚಾರದಿಂದ ದೂರ ಇರಿ.

ಹೊಸ ಜನ, ಹೊಸ ಹೊಸ ಪರಿಚಯಗಳಿಂದ ನಮ್ ಜೀವನ ಶೈಲಿ, ಪರಿಸ್ಥಿತಿ ಎಲ್ಲಾ ಬದಲಾಗತ್ತೆ. ಜೊತೆಗೆ ನಮ್ಗೂ ಹೊಸ ಪ್ರಪಂಚಕ್ಕೆ ಎಂಟ್ರಿ ಸಿಗತ್ತೆ. ಆದ್ರೆ ಇಲ್ಲಿ ಯೋಚನೆ ಮಾಡ್ಬೇಕಾಗಿರೋ ವಿಷ್ಯ ಏನಪ್ಪ ಅಂದ್ರೆ, ಈ ಎಲ್ಲಾ ಉಪಯೋಗ, ಮೋಜು ಮಸ್ತಿಗೋಸ್ಕರ ನಮ್ ಆದರ್ಶ, ತತ್ವ, ನಂಬಿಕೆಗಳ್ನ ಬಿಟ್ಕೊಡ್ಬೇಕು, ತ್ಯಾಗ ಮಾಡ್ಬೇಕು ಅನ್ನೋದಾದ್ರೆ, ಅಂಥ ಗೆಳೆಯರ ಬಳಗ, ಗುಂಪು, ಆ ಅಸೊಸಿಯೇಷನ್ ಬೇಕ? ಖಂಡಿತ ಬೇಡ. ಸ್ವಲ್ಪ ದಿನ ನೋಡಿ. ನಿಮ್ಗೆ ಹೊಂದತ್ತೆ ಅಂದ್ರೆ ಮುಂದುವರೆಸಿ. ಇಲ್ಲ ಅಂದ್ರೆ, ಯಾವ್ದೇ ಕಾರಣಕ್ಕೂ ಆ ಗುಂಪಿನ್ ಜೊತೆ ಗಾಢವಾದ ಸ್ನೇಹ ಬೆಳೆಸಿ, ಕಷ್ಟ ಪಟ್ಕೊಂಡು ಇರೋ ಅವಶ್ಯಕತೆ ಇಲ್ಲ. ಇನ್ನು ನಿಮ್ಮಿಷ್ಟ.