ನೀವು ಯಾವತ್ತಾದ್ರೂ ಒಂದು ರೂಮಿಗೆ ಹೋಗಿ ಏನು ಮಾಡೋಕೆ ಹೋದ್ರಿ ಅನ್ನೋದೇ ಮರ್ತಿದ್ದೀರಾ? ಅಥವಾ ನಿಮ್ಮ ವಸ್ತುಗಳನ್ನ ಹುಡುಕೋಕೆ ಕಷ್ಟ ಪಡ್ತಿರಾ? ಯಾವಾಗ್ಲೂ ತಡವಾಗಿ ಹೋಗೋದು ಅಭ್ಯಾಸ ಆಗಿಹೋಗಿದ್ಯಾ? ನಿಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡೋಕೆ ನಿಮಗೆ ಕಷ್ಟ ಅನ್ಸುತ್ತಾ? ಯಾವುದಕ್ಕೂ ಗಮನ ಕೊಡೋಕೇ ಆಗಲ್ಲ ಅನ್ಸುತ್ತಾ?

ಮೇಲಿನ ಪ್ರಶ್ನೆಗಳಿಗೆ ಹೌದು ಅಂತ ಉತ್ತರ ಕೊಟ್ಟಿದ್ರೆ ಈ ಸಲಹೆಗಳು ನಿಮಗೆ ತುಂಬಾ ಉಪಯೋಗ ಆಗತ್ತೆ. ಎಲ್ಲಾ ವಿಷಯಗಳಿಗೆ ಗಮನ ಕೊಡೊ ಥರ ನಿಮ್ಮ ಬುದ್ಧಿಯನ್ನ ಚುರುಕುಗೊಳಿಸೋಕೆ ಸಹಾಯ ಮಾಡುತ್ತೆ.

1 . ಎಲ್ಲಾ ವಸ್ತುಗಳನ್ನೂ ಅದರ ಜಾಗದಲ್ಲಿ ಇಡಿ

ಕೇಳೋಕೆ ಸುಲಭ ಅನ್ಸಿದ್ರೂ ಕೆಲವರಿಗೆ ಇದು ತುಂಬಾ ಕಷ್ಟ ಆಗ್ಬಹುದು.

ವಸ್ತುಗಳನ್ನ ಒಂದೇ ಜಾಗದಲ್ಲಿ ಇಡೋದನ್ನ ಒಂದು ಅಭ್ಯಾಸ ಮಾಡಿಕೊಂಡುಬಿಡಿ. ಉದಾಹರಣೆಗೆ ಮನೆಗೆ ಬಂದಾಗ ಕೀಗಳನ್ನ ಒಂದೇ ಜಾಗದಲ್ಲಿ ನೇತುಹಾಕಿ, ಮಾಲಿಗೆ ಹೋದಾಗ ಒಂದೇ ಜಾಗದಲ್ಲಿ ಕಾರ್ ನಿಲ್ಲಿಸೋಕೆ ಪ್ರಯತ್ನ ಮಾಡಿ.

ಒಟ್ಟಿನಲ್ಲಿ ಹೊಸ ಅಭ್ಯಾಸಗಳನ್ನ ರೂಢಿಸ್ಕೊಳ್ಳಿ. ಹೊಸ ಅಭ್ಯಾಸಗಳು ನಿಮ್ಮ ದಿನಚರಿ ಆಗೋಕೆ ಸ್ವಲ್ಪ ಸಮಯ ಹಿಡಿಯುತ್ತೆ. ಆದ್ರೆ ಛಲ ಬಿಡ್ಬೇಡಿ.

2 . ಪಟ್ಟಿ ಮಾಡ್ಕೊಳಿ

ಕೆಲವು ಸಲ ನಮ್ಮ ಸುತ್ತಮುತ್ತ ಒಟ್ಟೊಟ್ಟಿಗೆ ಎಷ್ಟೋ ವಿಷಯಗಳು ನಡೀತಿರುತ್ತೆ. ಯಾವುದಕ್ಕೆ ಗಮನ ಕೊಡೋದು ಅಂತ ಗೊತ್ತಾಗ್ದೇ ಯಾವ ಕೆಲಸಾನೂ ಆಗೋದೇ ಇಲ್ಲ. ಇಂಥ ಸಮಯದಲ್ಲಿ ಪಟ್ಟಿ ಮಾಡೋದನ್ನ ಅಭ್ಯಾಸ ಮಾಡ್ಕೊಳಿ.

ಯಾವ ಕೆಲಸ ಮೊದಲು ಆಗ್ಬೇಕೋ ಅದನ್ನ ಮೊದಲು ಬರ್ಕೊಳ್ಳಿ. ಬೇಕಿದ್ರೆ ಯಾವ ಸಮಯಕ್ಕೆ ಮಾಡ್ಬೇಕು ಅಂತ ಕೂಡ ಬರ್ಕೊಳಿ. ಒಂದೊಂದೇ ಕೆಲಸ ಮಾಡ್ತಾ ಮಾಡ್ತಾ ಪಟ್ಟಿಯಿಂದ ಆ ಕೆಲಸ ಹೊಡೆದುಹಾಕ್ತಾ ಬನ್ನಿ.

3 . ಟೈಮರ್ ಇಟ್ಕೊಳ್ಳಿ

ನೀವು ಯಾವಾಗ್ಲೂ ತಡ ಮಾಡ್ಕೋತೀರ ಅಂದ್ರೆ ಅಲಾರ್ಮ್ ಇಟ್ಟುಕೊಳ್ಳೋದನ್ನ ಅಭ್ಯಾಸ ಮಾಡ್ಕೊಳಿ.

ನಿಮಗೆ ಮೊದಮೊದಲು ಕೋಪ ಬರೋ ಥರ ಆದ್ರೂ ಅಲಾರ್ಮ್ ಹೊಡೆದಾಗ ನೀವು ಎಲ್ಲಿಗೆ ಗಮನ ಕೊಡ್ಬೇಕೋ, ಅಲ್ಲಿಗೆ ವಾಪಸ್ ಹೋಗಬಹುದು. “ಅಯ್ಯೋ.. ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ” ಅನ್ನೋ ನೆಪ ಹೇಳೋದನ್ನ ತಪ್ಪಿಸಬಹುದು.

4. ಒಂದು ವೇಳಾಪಟ್ಟಿ ಮಾಡ್ಕೊಂಡು ಅದನ್ನ ಪಾಲಿಸಿ

ಕಾಗದದ ಮೇಲಿರಬಹುದು ಅಥವಾ ನಿಮ್ಮ ಫೋನ್ ನಲ್ಲಿ ಇರ್ಬಹುದು- ಹೇಗಾದ್ರು ಸರಿ, ಒಂದು ವೇಳಾಪಟ್ಟಿ ಮಾಡ್ಕೊಳಿ.

ಬರೀ ಪಟ್ಟಿ ಮಾಡ್ಕೊಳೋದು ಮಾತ್ರ ಅಲ್ಲ. ಆಮೇಲೆ ಅದಕ್ಕೆ ತಕ್ಕಂತೆ ಕೆಲ್ಸಗಳನ್ನ ಮಾಡೋದನ್ನೂ ಅಭ್ಯಾಸ ಮಾಡ್ಕೊಳಿ.

5 . ಎಲ್ಲಾ ಕೆಲಸಗಳನ್ನೂ ನಿಮ್ಮ ತಲೆ ಮೇಲೆ ಹಾಕ್ಕೋಬೇಡಿ

ಎಲ್ಲ ಕೆಲಸಗಳನ್ನೂ ಒಬ್ಬರೇ ಮಾಡೋಕಾಗಲ್ಲ. ಎಲ್ಲರ ಕೆಲಸಗಳನ್ನೂ ನಿಮ್ಮ ತಲೆ ಮೇಲೆ ಹೇರಿಕೊಳ್ಳೋದರಿಂದ ನಿಮ್ಮ ಕೆಲಸಗಳ ಮೇಲೆ ಸಹಜವಾಗಿ ಗಮನ ಕಡಿಮೆ ಆಗುತ್ತೆ. ಹೀಗೆ ಆಗ್ತಿದೆ ಅನ್ಸಿದ್ರೆ ಬೇರೆಯವರಿಗೆ ಕೆಲಸಗಳನ್ನ ಹಂಚಿ. ನೀವೇ ಎಲ್ಲಾನೂ ಮಾಡ್ಬೇಕಾಗಿಲ್ಲ.

6 . ಸ್ಟಿಕ್ಕಿ ನೋಟ್ (ಪೋಸ್ಟ್-ಇಟ್) ಬಳಸಿ

ತುಂಬಾ ಕೆಲಸ ಇರುವಾಗ ಕೆಲವನ್ನ ಮರೆಯೋದು ಸಹಜ. ಅಂತ ಸಮಯದಲ್ಲಿ ಸ್ಟಿಕ್ಕಿ ನೋಟ್ ಗಳಲ್ಲಿ ಬರೆದು ಬೇಕಾದ ಜಾಗದಲ್ಲಿ ಅಂಟಿಸಿಕೊಳ್ಳಿ. ಅದನ್ನ ನೋಡಿದ ತಕ್ಷಣ ನಿಮ್ಮ ಕೆಲಸ ಜ್ಞಾಪಕ ಆಗುತ್ತೆ.

ಆದ್ರೆ ಎಚ್ಚರ ಇರಲಿ. ಇದನ್ನ ತುಂಬಾ ಬಳಸಬೇಡಿ. ತುಂಬಾ ನೋಟ್ ಗಳು ಇದ್ರೆ ಒಂದೂ ಕಾಣಿಸದೆ ಇರೋ ಥರ ಆಗಿಬಿಡುತ್ತೆ.

7 . ಒಂದೊಂದೇ ಕೆಲಸ ಮಾಡಿ

ಒಂದು ಸಮಯಕ್ಕೆ ಒಂದೊಂದೇ ಕೆಲಸ ತೊಗೊಂಡು ಮಾಡಿ. ಒಟ್ಟೊಟ್ಟಿಗೆ ಕೆಲಸಗಳನ್ನ ಮಾಡ್ತಾ ಹೋದ್ರೆ ಯಾವುದಕ್ಕೂ ಸರಿಯಾಗಿ ಗಮನ ಕೊಡೋಕಾಗದೆ ಒಂದು ಕೆಲಸ ಕೂಡ ಸರಿಯಾಗಿ ಆಗೋದಿಲ್ಲ.

ಒಂದು ಸಲಕ್ಕೆ ಒಂದೇ ಕೆಲಸ ಮಾಡೋದ್ರಿಂದ ಎಲ್ಲ ಕೆಲಸಗಳನ್ನೂ ಚೆನ್ನಾಗಿ ಮಾಡಬಹುದು.

8 . ಆಗಾಗ ಸ್ವಚ್ಛ ಮಾಡಿ

ಕೆಲವರು ಕೆಲಸ ಮಾಡೋ ಜಾಗದಲ್ಲಿ ಎಷ್ಟೋ ವಸ್ತುಗಳನ್ನ ತುಂಬಿಕೊಂಡಿರ್ತಾರೆ. ಬೇಕಾದ ಬೇಡದ ವಸ್ತುಗಳು ಎಲ್ಲ ಒಂದೇ ಕಡೆ ಹೇರ್ಕೊಂಡಿರ್ತಾರೆ. ಹೀಗಿದ್ದಾಗ ನಿಮ್ಮ ಕೆಲಸಗಳಿಗೆ ಗಮನ ಕೊಡೋದು ಕಷ್ಟ.

ಬೇಡದೆ ಇರೋ ವಸ್ತುಗಳನ್ನ ತೆಗೆದು ಸ್ವಚ್ಛ ಮಾಡೋಕೆ ಅಂತಾನೆ ಒಂದು ಟೈಮ್ ಇಟ್ಕೊಳಿ. ಆ ವೇಳಾಪಟ್ಟಿಗೆ ತಕ್ಕಂತೆ ನೀವು ಕೆಲಸ ಮಾಡೋ ಜಾಗವನ್ನ ಚೆನ್ನಾಗಿ ಇಟ್ಕೊಂಡ್ರೆ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡೋದು ಸುಲಭ ಆಗುತ್ತೆ.

9 . ನಿಮ್ಮನ್ನ ಪ್ರಶ್ನೆ ಮಾಡೋಕೆ ಒಬ್ಬರನ್ನ ಗೊತ್ತುಮಾಡಿಕೊಳ್ಳಿ

ಮುಂಚೆ ಹೇಳಿದ ಹೊಸ ಅಭ್ಯಾಸಗಳನ್ನ ರೂಢಿಸಿಕೋಬೇಕು ಅಂತ ಅನ್ಕೊಂಡ್ರೆ ನಿಮ್ಮನ್ನ ಪ್ರಶ್ನೆ ಮಾಡೋರು ಒಬ್ಬರಿದ್ರೆ ಒಳ್ಳೇದು.

ನಿಮ್ಮ ಗೆಳೆಯರಿಗೆ ಆಗಾಗ ಮೆಸೇಜ್ ಮಾಡಿ ನಿಮ್ಮ ಕೆಲಸಗಳನ್ನ ನೆನಪಿಸೋಕೆ ಹೇಳಿ. ಅಥವಾ ಅನ್ಕೊಂಡಿರೋ ಕೆಲಸ ಎಷ್ಟು ಆಗಿದೆ ಅಂತ ಕೇಳೋಕೆ ಹೇಳಿ. ನೀವು ಯಾರಿಗೋ ಉತ್ತರ ಕೊಡ್ಬೇಕು ಅನ್ನುವಾಗ ಸರಿಯಾಗಿ ಕೆಲಸ ಮಾಡೋ ಸಾಧ್ಯತೆ ಹೆಚ್ಚು.

10 . ನೀವು ಗಮನ ಕೊಡಲಿಲ್ಲ ಅಂದ್ರೆ ಆಗಬಹುದಾದ ತೊಂದರೆಗಳನ್ನ ಮನಸ್ಸಲ್ಲಿ ಇಟ್ಕೊಳ್ಳಿ

ನೀವು ನಿಮ್ಮ ಕೆಲಸಗಳ ಮೇಲೆ ಗಮನ ಕೊಡಲಿಲ್ಲ ಅಂದ್ರೆ ಅದು ಬೇರೆಯವರ ಮೇಲೆ ಪರಿಣಾಮ ಬೀರುತ್ತೆ. ನೀವು ಯಾವಾಗಲೂ ತಡ ಮಾಡ್ತೀರಾ ಅಂದ್ರೆ ನಿಮ್ಮ ಗೆಳೆಯರಿಗೆ ನಿಮ್ಮ ಮೇಲೆ ಬೇಜಾರಾಗಬಹುದು. ಅಥವಾ ನಿಮ್ಮ ಮಕ್ಕಳಿಗೆ ಸಾಕಷ್ಟು ಸಮಯ ಕೊಡೋಕೆ ಆಗ್ದೇ ಇರ್ಬಹುದು.

ನೀವು ಏನೇ ಮಾಡಿದ್ರೂ ಅದು ಇನ್ನೊಬ್ಬರ ಮೇಲೆ ಪರಿಣಾಮ ಬೀರುತ್ತೆ ಅಂತ ನೆನಪಿಟ್ಕೊಳ್ಳಿ. ಆಗ ನಿಮಗೇ ಜವಾಬ್ದಾರಿ ಜಾಸ್ತಿ ಆಗುತ್ತೆ.

11 . ಮಾತು ನಿಲ್ಲಿಸಿ, ಕೆಲಸ ಮಾಡೋಕೆ ಪ್ರಾರಂಭಿಸಿ

ಬರೀ ಮಾತಾಡ್ತಿದ್ರೆ ಬದಲಾವಣೆ ಬರೋದಿಲ್ಲ. ನಿಮಗೆ ಕೆಲಸದ ಮೇಲೆ ಗಮನ ಕೊಡೋಕೆ ಆಗ್ತಿಲ್ಲ ಅಂತ ಹೇಳ್ತಾನೆ ಇದ್ರೆ ಪ್ರಯೋಜನ ಇಲ್ಲ. ಅದರ ಬಗ್ಗೆ ಮಾತಾಡಬೇಕು ನಿಜ. ಆದರೆ ಮಾತಾಡಿದ ಮೇಲೆ ಅಭ್ಯಾಸಗಳನ್ನ ಬದಲಾಯಿಸಿಕೊಳ್ಳಬೇಕು.

ಈ ಸಲಹೆ ಎಲ್ಲ ಪಾಲಿಸೋಕೆ ಸ್ವಲ್ಪ ಸಮಯ ಆಗುತ್ತೆ. ಆದರೆ ಸ್ವಲ್ಪ ಮನಸ್ಸು ಮಾಡಿ ಪಾಲಿಸಿಬಿಟ್ಟರೆ, ನೀವು ಆರಾಮಾಗಿ ಕೆಲಸಗಳನ್ನ ಮಾಡ್ತಾ ಹೋಗ್ಬಹುದು.