ಒಂದ ಕೆಲಸಾ ಮಾಡಬಕಾರ ಬ್ಯಾರೆ ಸೈಡ್ ಬಿಸಿನೆಸ್ ಶುರು ಮಾಡೋದಂದ್ರ ಹಗುರಲ್ಲಾ, ಆದ್ರ ಮಾಡಾಕಾಗಲ್ಲಾ ಅಂತಾನೂ ಅಲ್ಲಾ ಮಾಡ್ಬಹುದು. ಭಾಳ ಮಂದಿ ಮಾಡಿದವರದಾರ. ಇದನ್ನ ಮಾಡೋದ ಹೆಂಗ ಅಂತ ನಿಖರವಾದ ಉತ್ತರ ಅಂತೇನಿಲ್ಲ… ಒಬ್ಬೋಬ್ರ ಹತ್ರ ಒಂದೊಂದ್ ಉತ್ತರ ಐತಿ. ಆದರ ಕೆಳಾಗ ತಿಳಿಸಿರೋ‌ ಹೆಜ್ಜೆಗಳನ್ನ ಹಾಕ್ಕೊಂತ ಹೋದ್ರ ನಿಮ್ಮ ಬಾಸ್ ನೀವೇ ಆಗಂತ ದಿನ ಬಂದ ಬರತೈತಿ…

1. ಸೈಡ್ ಬಿಸಿನೆಸ್ ಪ್ರಾರಂಭಿಸೋ ಬಗ್ಗೆ ನಿಮ್ಮ ಮನಸನ್ಯಾಗ ಗಟ್ಟಿ ನಿರ್ಧಾರ ಮಾಡ್ಕೊರ್ರಿ.

ಯಾಕ ಹಿಂಗ ಹೇಳಾಕತ್ತನಿ ಅಂದ್ರ ನೀವು ಮಾಡಾಕ ಹೋಗ್ತಿರೋ ಕೆಲಸ ಅಷ್ಟ ಹಗುರಂದಲ್ಲ. ಈಗ ನೀವು ನಿಮ್ಮ ಮನ್ಯಾಗಿನವರಿಗೆ ಕೊಡ್ತಿರಷ್ಟ ಟೈಮನ ಕೊಡಾಕಾಗಂಗಿಲ್ಲ. ನೀವು ತೋಗೋಳ್ಬೇಕಾದ ನಿರ್ಧಾರಗಳು ಭಾಳ ಕಷ್ಟದ್ದಾಗಿರ್ತಾವು.. ಈ ಕಾರಣಕ್ಕ ಮೊದಲು ನೀವು ನಿಮ್ಮ ಮನಸಿನ್ಯಾಗ ಮಾಡೇ ಮಾಡ್ತನಿ ಅನ್ನೋ ಬಲವಾದ ನಿರ್ಧಾರವನ್ನ ಮಾಡ್ಕೊಬೇಕು. ಆಮ್ಯಾಲೆ ವಾರಂತವಾರ ನಿಮ್ಮ ಸಮಯ ಎಲ್ಲೆಲ್ಲ ಹೊಕ್ಕತಿ ಅಂತ ಲೆಕ್ಕಾ ಹಾಕ್ಕೊರಿ. ಹಿಂಗ ಲೆಕ್ಕಾ ಹಾಕಿದಾಗ ಎಲ್ಲಿ ನೀವು ನಿಮ್ಮ ಸಮಯವನ್ನ ಉಳಿಸ್ಕೊಬಹುದು ಅಂತ ಗೊತ್ತಾಕ್ಕತಿ. ಟೀವಿ ನೋಡೋದು, ಫೇಸ್ಬುಕ್ ಗೀಸ್ಬುಕ್ಕನ್ಯಾಗ ಟೈಮ ಪಾಸ್ ಮಾಡೋದು… ಇದೆಲ್ಲಾನೂ ಕಡಿಮಿ ಮಾಡಾಕಾಕ್ಕತನ ನೋಡ್ರಿ. ನಿಮಗ ಎಷ್ಟು ಸಮಯ ಉಳಿಸೋಕಾಗತ್ತೋ ಅಷ್ಟ ಲಗೂನ ನೀವು ನಿಮ್ಮ ಗುರಿ ತಲಪಾಕಾಕ್ಕತಿ..

2. ನಿಮ್ಮ ಕೈಲೇ ಏನಾಕ್ಕತಿ ಏನಾಗೊದಿಲ್ಲಾ ಅನ್ನೊದನ್ನ ಮೊದಲು ಸ್ಪಷ್ಟವಾಗಿ ತಿಳ್ಕೊರ್ರಿ

ನಿಮ್ಮ ಹೊಸ ಬಿಸಿನೆಸ ಶುರು ಮಾಡಾಕ ಯಾವ್ಯಾವ ಸಾಮರ್ಥ್ಯಗಳು ಬೇಕು? ನಿಮ್ಮೊಳಗ ಆ ಸಾಮರ್ಥ್ಯಗಳು ಐತಾ? ಇಲ್ಲಾ ಅಂದ್ರ ನಿಮಗ ಕಲಿಯಾಕ ಟೈಮ ಬೇಕಾಕ್ಕತಿ ಅಥವಾ ಅದು ಯಾರಿಗ ಬರತೈತೋ ಅವರ ಕಡೆಯಿಂದ ಮಾಡಿಸ್ಕೊಬೇಕಾಕ್ಕತಿ, ಅವರಿಗೆ ಕೊಡಷ್ಟ ರೊಕ್ಕಾ ನಿಮ್ಮ ಹತ್ರ ಐತಾ? ಇದೆಲ್ಲಾನೂ ನೀವು ವಿಚಾರ ಮಾಡ್ಬೇಕು.

ಮೂಲ

3. ಜನರ ಹತ್ರ ನಿಮ್ಮ ಬಿಸಿನೆಸ್ ಐಡಿಯಾನ ಹೇಳಿ ಅವರ ಅಭಿಪ್ರಾಯವನ್ನ ತಿಳ್ಕೊಂಡು ಕೆಲಸ ಮುಂದವರಸ್ರಿ.

ಭಾಳ ಮಂದಿ ಹೊಸಾ ಬಿಸಿನೆಸ್ ಶುರು ಮಾಡ ಹುಮ್ಮಸನ್ಯಾಗ ಮಾಡ್ಬಿರ್ತಾರ, ಆದರ ಅವರು ಮಾರಾಕ ಹೊಗ್ತಿರೋ ವಸ್ತು ಜನಕ್ಕ ಬೇಕಾಗಿರಲ್ಲ! ಆದಕ್ಕ ನೀವು ಪ್ಲಾನ್ ಮಾಡಬಕಾರ ಮೊದಲು ನಿಮ್ಮ ಐಡಿಯಾ ಕೆಲಸ ಮಾಡತೈತೋ, ಇಲ್ಲೊ ಅನ್ನೊದನ್ನ ತಿಳ್ಕೊರ್ರಿ. ನೀವು ಏನ ಮಾರಾಕ ಹೊರಟಿರೋ ಅದು ಜನರಿಗಕ್ಕ ಅವಶ್ಯೈತೋ, ಇಲ್ಲೊ? ಎಂಥ ಜನರಿಕ್ಕ ಅವಶ್ಯ ಐತಿ? ಅಂಥಾರನ್ನ ಮಾತಾಡ್ಸಿ. ಅದನ್ನ ಬಿಟ್ಟ ನಾನು ಮಾಡಿಂದ ಆ ಕೆಲಸಾ ಚೊಲೋ ಇದ್ದ ಇರ್ತೈತಿ ಅಂತ ಅನ್ಕೊಬ್ಯಾಡ್ರಿ. ಇದ್ರಾಗ ಎಡವಿಬಿದ್ರ ನಿಮ್ಮ ಹೊಸ ಬಿಸಿನೆಸ್ ಜಪ್ಪಯ್ಯ ಅಂದ್ರೂ ಉದ್ಧಾರಾಗಲ್ಲ.

4. ಜನರು ಇಷ್ಟಾ ಪಡುವಂತ ಹೋಸದೇನಾದ್ರು ಕೆಲಸ ಮಾಡ್ರಿ

ನಿಮ್ಮ ಬಿಸಿನೆಸಗೆ ಮತ್ತ ಈಗಾಗಲೇ ಇರ ಬಿಸಿನೆಸಗಳಿಗೆ ಏನಾದ್ರೂ ವ್ಯತ್ಯಾಸ ಇರ್ಬೇಕು. ಅಷ್ಟ ಅಲ್ಲ, ಆ ವ್ಯತ್ಯಾಸ ಜನರಿಗೆ ಭಾಳ ಇಷ್ಟ ಆಗ್ಬೇಕು, ಅದಕ್ಕ ಅವರು ರೊಕ್ಕಾ ಕೊಡಾಕ ತಯಾರಾಗಿರ್ಬೇಕು. ಆವಾಗ ಅದು ನಿಮ್ಮ ಬಿಸಿನೆಸ್ ಅಂತ ಅನಿಸ್ಕೋಂತೈತಿ, ಮತ್ತ ಉದ್ಧಾರಾಕ್ಕತಿ! ನಿಮಗ ಬೆಲೆ ಕಮ್ಮಿ ಮಾಡಕ್ಕಾಕ್ಕೈತಾ? ಹೊಸ ತಂತ್ರಜ್ಞಾನ ಅಳವಡಿಸ್ಕೊಳ್ಳಾಕ ಆಕ್ಕತಾ? ಹೊಸ ಸಾಧ್ಯತೆಗಳನ್ನ ಸೇರಿಸ್ಕೊಳ್ಳಾಕ ಆಕ್ಕತಾ? ಇದರ ಬಗ್ಗೆ ಎಲ್ಲಾ ವಿಚಾರ ಮಾಡಬಕಾರ ನಿಮಗ ನೀವ ಸುಳ್ಳು ಹೇಳ್ಕೋಬ್ಯಾಡ್ರಿ. ಮುಂದ ಕಷ್ಟಾಕ್ಕತಿ..

ಮೂಲ

5. ಅಳ್ಯಾಕೂ ಆಗಿರ್ಬೇಕು, ಮುಟ್ಟಾಕೂ ಆಗಿರ್ಬೇಕು ಅಂತ ಗುರಿಗಳು ನಿಮ್ಮದಾಗಿರಲಿ

ನೀವು ನಿಮ್ಮ ಬಿಸಿನೆಸ್ಸನ್ನ ಹೆಂಗ ನಡಸ್ತಿರಿ ಅನ್ನೋದು ನಿಮಗ ಗೊತ್ತಿರ್ಬೇಕು. ಗುರಿ ಇರಲಿಲ್ಲಾ ಅಂದ್ರ, ಅಥವಾ ಅದನ್ನ ಅಳ್ಯಾಕಾ ಆಗದೇ ಹೋದ್ರ, ಅಥವಾ ನಿಮ್ಮ ಕೈಲೆ ಮುಟ್ಟಕ್ಕ‌ ಆಗ್ಲಿಲ್ಲಂದ್ರ ನಿಮ್ಮ ಬಿಸಿನೆಸ ಏಳಿಗಿನ ಆಗಂಗಿಲ್ಲ. ಅದಕ್ಕ ಪ್ರತಿದಿನದ, ಪ್ರತಿ ವಾರದ, ಪ್ರತಿ ತಿಂಗಳಿನ ಗುರಿಗಳನ್ನ ಇಟ್ಕೊಂಡಿರ್ಬೇಕು.

6. ಹೆಂಗ ಶುರು ಮಾಡ್ತೀರಿ, ಶುರು ಮಾಡಿಂದ ಏನ ಮಾಡ್ತೀರಿ ಅನ್ನೋದು ಸ್ಪಷ್ಟವಾಗಿರ್ಬೇಕು

ಕೆಲಸಾ ಮಾಡಾಕ ಗುರಿ ಇದ್ರಷ್ಟ ಆಗಲ್ಲ. ಆ ಗುರಿಗಳನ್ನ ತಲುಪಾಕ ಎನೇನ್ ಮಾಡ್ತೀರಿ? ಬಿಸಿನೆಸ್ ಶುರು ಆದಮ್ಯಾಲೆ ಏನ ಮಾಡ್ತೀರಿ? ಇದರ ಬಗ್ಗೆನೂ ಆಳವಾಗಿ ವಿಚಾರ ಮಾಡ್ರಿ. ಈ ಕೆಲಸಾನ ನಿಮ್ಮನ್ನ ಬಿಟ್ರ ಬ್ಯಾರೇದವರ್ಯಾರು ಮಾಡಾಕಾಗಲ್ಲ.. ನೆನಪಿರಲಿ: ನೀವು ಇವತ್ತ ಮಾಡಿದ ಪ್ಲಾನ್ ನಾಳೆ ನಡಿದಂಗಿರ್ಬಹುದು. ಯಾಕಂದ್ರ ಪರಿಸ್ಥಿತಿ, ವಾತಾವರಣ ಎಲ್ಲಾ ಬದಲಾಕ್ಕಿರ್ತತಿ. ಆದರಿಂದ ನೀವು ಎನ ಬಂದರೂ ಅದನ್ನ ನಿಮ್ಮ ಪ್ಲಾನನ್ಯಾಗ ಸೇರಿಸ್ಕೊಳ್ಳು ಜಾಣತನಾನ ಕಲತಿರ್ಬೇಕು. ನೀವು ಶುರು ಮಾಡಬೇಕು ಅನ್ಕೋಂಡಿರೋ ಬಿಸಿನೆಸ್ ನಿಮಗ ನಿಜವಾಗಲೂ ಭಾಳ ಇಷ್ಟಾ ಆದ್ರ ಇದೆಲ್ಲಾನೂ ನೀವು ಮಾಡೇ ಮಾಡ್ತೀರಿ

ಮೂಲ

7. ನಿಮ್ಮ ಕೈಯಾಗ ಮಾಡಾಕಾಗ್ದೆ ಇರೋ ಕೆಲಸಾನ ಬ್ಯಾರೇರ ಕೈಯಿಂದ ಮಾಡಸ್ರಿ

ನಿಮಗ ಯಾವ ಕೆಲಸಾನ ಚಲೋತ್ತಂಗ… ಎಲ್ಲರಿಗಿಂತ ಚಲೋತ್ತಂತ ಮಾಡಕ್ಕಾಕ್ಕತೋ ಅದನ್ನಷ್ಟ ನೀವು ಮಾಡ್ಬೇಕು. ಉಳಿದಿದ್ದನ್ನ ಬ್ಯಾರೇರ ಕೈಯಾಗ ಮಾಡಸ್ಬೇಕು. ಎಲ್ಲಾನು ನಾನ ಮಾಡ್ತನಿ ಅಂತ ಹೊಂಟ್ರ ಕಷ್ಟಾಕ್ಕತಿ, ಹಂಗ ಎಲ್ಲಾನು ಬ್ಯಾರೇರ ಕಡೆ ಮಾಡಸ್ತನಿ ಅಂದ್ರೂ ಕಷ್ಟಾಕ್ಕತಿ. ಅದಕ್ಕ ಹೇಳದ… ಸರಿಯಾಗಿ ವಿಚಾರ ಮಾಡಿ ಮಾಡಬೇಕಂತ.

8. ನಿಮ್ಮ ಸೇವೆ ಜನಕ್ಕ ಇಷ್ಟಾ ಆಗೇತೋ ಇಲ್ವೋ ಅಂತ ತಿಳ್ಕೊರ್ರಿ

ಜನಕ್ಕ ಉಪಯೋಗ ಆಗಂತ ವಸ್ತುಗಳು/ಸೇವೆಗಳನ್ನ ಕೋಡೊದೇ ನಿಮ್ಮ ಮುಖ್ಯವಾದ ಗುರಿ ಆಗಿರ್ಬೇಕು. ಆದರಿಂದ ಜನರ ಅವಶ್ಯಕೆತೆಗಳನ್ನ ಮೊದಲು ಕೇಳಿ ತಿಳ್ಕೊರ್ರಿ. ಅವರಿಗೆ ಅನಿಸಿದ್ದನ್ನ ಯಾವ ಮುಜುಗರ ಇಲ್ಲದಂಗ ಹೇಳಾಕ ಹೇಳಿ. ಎಷ್ಟ ಸಾಧ್ಯಾನೋ ಅಷ್ಟ ಲಗೂನ ಈ ಕೆಲಸಾ ಮಾಡ್ರಿ, ಮಾಟ್ಕೊಂತಾನ ಇರ್ರಿ. ಇದನ್ನ ನಿಲ್ಲಸಾಕ ಹೋಗ್ಬ್ಯಾಡ್ರಿ. ಈಗ ಫೇಸ್ಬುಕ್, ಟ್ವಿಟರ್ ಹಲವಾರ ಕಡೇನೂ ನೀವು ಸರ್ವೇ ಮಾಡ್ಬಹುದು. ಎಲ್ಲಾನು ಉಪಯೋಗ ಮಾಡ್ಕೊರಿ.

ಮಾಡಬಹುದು. ಅದನ್ನೆಲ್ಲ ಉಪಯೋಗಿಸಿಕೊಳ್ಳಿ.

ಮೂಲ

9. ಈಗ ನೀವು ಮಾಡ್ತರೋ ಕೆಲಸಕ್ಕ ಮತ್ತ ಹೊಸ ಬಿಸಿನೆಸ್ಸಿಗೆ ಏನೇನ ವ್ಯತ್ಯಾಸಾಕ್ಕತಿ ಅಂತ ನೆನಪನ್ಯಾಗಿಟ್ಕೊರಿ

ಈಗ ನೀವ ಇರಂತ ಕಂಪನಿ ಹಂಗ ಮತ್ತೊಂದು ಕಂಪನಿ ಕಟ್ಟದು ಹಗುರನಸ್ತೈತಿ ಒಂದವೇಳೆ ನೀನೇನರ ಹಂಗ ಮಾಡಿದ್ದ ಆದ್ರ ಕಾನೂನಿನ ಸಮಸ್ಯೆಗಳು ಹುಟ್ಕೊಬಹುದು. ಅಷ್ಟ ಅಲ್ಲ, ಈಗಿನ ಕೆಲಸದಾಗ ನಿಮ್ಮ ಸಂಬಂಧಗಳೂ ಸೈತ ಹಾಳಾಕ್ಕಾವು. ಅಲ್ದೆ, ಈಗ ಮಾಡ್ಬೇಕಾದ ಹೊಸ ಬಿಸಿನೆಸ್ ಕೆಲಸ ಮಾಡಕ್ಕ ಹೋದ್ರ ಕಷ್ಟಾಕ್ಕತಿ. ಅದು ಇಲ್ಲ ಇದು ಇಲ್ಲ ಅನ್ನಂಗ ಅತಂತ್ರಾಕ್ಕಿರಿ. ಎಚ್ಚರಾ!!

10. ಹೊಸ ಬಿಸಿನೆಸ್ ಒಂದು ಹಂತಕ್ಕ ಬರಲ್ಲಿ ತನಕ ನೀವಿಗ ಮಾಡ್ತಿರೋ ಕೆಲಸಾನ ಬಿಡ್ಬ್ಯಾಡ್ರಿ

ನಾವ ಯಾವ ಹಂತದ ಬಗ್ಗೆ ಹೇಳಾಕತ್ತವಿ ಅಂತ ನಿಮಗ ಗೊತ್ತಿರ್ಬೇಕು. ಇಂತಿಷ್ಟ ರೊಕ್ಕಾ ಅಂತ ಮಾಡಾಕ ಶುರು ಮಾಡಿರ್ಬೇಕು, ಇಂತಿಷ್ಟ ಹೆಸರು ಮಾಡಿರ್ಬೇಕು… ಇಂತಿಷ್ಟ ಬಳಕೆದಾರರಿರ್ಬೇಕು…. ಇದೆಲ್ಲ ನಿಮಗ ಬಿಟ್ಟಿದ್ದು. ಆದರ ಆ ಘಟ್ಟಾ ತಲುಪೋ ಮೊದಲು ನೀವು ಈಗ ಮಾಡ್ತಿರೋ ಕೆಲಸಾನ ಬಿಟ್ರ ಕಷ್ಟಾಕ್ಕತಿ. ನಿಮ್ಮ ಹತ್ತಿರದವರನ್ನ ಈ ವಿಷಯದ ಬಗ್ಗೆ ಕೇಳ್ರಿ. ನಿಮ್ಮ ಮನ್ಯಾಗಿನವರ ಹತ್ರಾನೂ ಮಾತಾಡಿ ನೋಡ್ರಿ. ಅವಸರದಾಗ ಏನೇನರ‌ ಮಾಡಕ್ಕ ಹೋಗಿ ಕೈ ಸುಟ್ಕೋಬ್ಯಾಡ್ರಿ.

ಮೂಲ

ಸರಿ ಹಂಗಾರ, ಹೊಸ ಬಿಸಿನೆಸ್ ಶುರು ಮಾಡಾಕ ತಯಾರಾದ್ರಾ? ಯಾವ ಬಿಸಿನೆಸ ಶುರು ಮಾಡ್ಬೇಕ ಅನ್ಕೊಂಡಿರಿ?