ಇಟಲಿ ಅಂದ್ರೆ ನಮಗೆ ನೆನಪಾಗೋದು ಪಿಜ್ಜಾ, ಪಾಸ್ಟಾ ಮುಂತಾದ ತಿಂಡಿ ತಿನಿಸುಗಳು. ಅವೆಲ್ಲ ಇಟಲೀನಲ್ಲೇ ಕಂಡ್‍ಹಿಡಿದಿದ್ದು ಅಂತ ಎಲ್ಲರಿಗೂ ಗೊತ್ತು. ಗೊತ್ತಿಲ್ಲದೆ ಇರೋ 10 ಇಲ್ಲಿದೆ ನೋಡಿ:

1. ಜೀನ್ಸ್ (ಅದರಲ್ಲೂ ನೀಲೀದು)

ಸಾಮಾನ್ಯವಾಗಿ ಇದನ್ನ ಅಮೇರಿಕದಲ್ಲಿ ಕಂಡ್‍ಹಿಡಿದ್ರು ಅನ್ನೋ ಅನಿಸಿಕೆ ಹಲವರಲ್ಲಿದೆ. ಆದರೆ ಜೀನ್ಸ್ ಹುಟ್ಟಿದ್ದು ಇಟಲಿನಲ್ಲಿ. ಅದರಲ್ಲೂ ನೀಲಿ ಜೀನ್ಸ್ (ಡೆನಿಮ್) ಅನ್ನೋದು ಜೆನೋವಾ ಅನ್ನೋ ಊರಲ್ಲಿ 17ನೇ ಶತಮಾನದಲ್ಲಿ ನಾವಿಕರು ಹಾಕ್ಕೋತಿದ್ರಂತೆ. ಫ್ರೆಂಚಲ್ಲಿ ಜೆನೋವಾಗೆ ‘ಜೀನ್ಸ್’ ಅನ್ನೋ ಹೆಸರಿತ್ತು. ಅದರಿಂದಾನೇ ಜೀನ್ಸ್ ಅನ್ನೋ ಪದ ಬಂದಿದ್ದು.

2. ನ್ಯೂಸ್ ಪೇಪರ್

ವೆನಿಸ್ಸಲ್ಲಿ 1556ನೇ ಇಸವಿಯಲ್ಲಿ ಆಗಿನ ಇಟಲಿ ಸರ್ಕಾರ ಕೈಬರಹದಲ್ಲಿ ಬರೆದ ’ಅವ್ವಿಸಿ’ ಅನ್ನೋ ಪತ್ರಿಕೆ ಹೊರಡಿಸಿದ್ದೇ ಮೊಟ್ಟಮೊದಲ ನ್ಯೂಸ್ ಪೇಪರ್ ಅನ್ನೋದು ಹಲವು ತಜ್ಞರ ಅನಿಸಿಕೆ. ಆ ಪತ್ರಿಕೆಯಲ್ಲಿ ಪದಬಂಧ, ಕಾರ್ಟೂನ್ ಗೀರ್ಟೂನೆಲ್ಲ ಇರ್ತಾ ಇರಲಿಲ್ಲ. ಬರೀ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಸುದ್ದಿಗಳು.

3. ಜಾಕುಜ಼ಿ

ಈ ಜಾಕುಜ಼ಿಗಳು ಇತ್ತೀಚೆಗೆ ನಮ್ಮಲ್ಲೂ 5-ಸ್ಟಾರ್ ಹೊಟೆಲ್ಗಳಲ್ಲಿ ಸಿಗುತ್ತವೆ. ಇಡೀ ದಿನ ಕೆಲಸ ಮಾಡಿದ ಮೇಲೆ ಇವುಗಳಲ್ಲಿ ಆರಾಮಾಗಿ ಕೂತ್ಕೊಳೋದೇ ಒಂದು ಸೌಭಾಗ್ಯ. ಇದರಿಂದ ಮೈಕೈನೋವು ಕೂಡ ವಾಸಿಯಾಗುತ್ತೆ. ಇದನ್ನ 1949ರಲ್ಲಿ ಕಂಡುಹಿಡಿದಿದ್ದು ಕ್ಯಾಂಡಿಡೋ ಜಾಕುಜ಼ಿ ಅನ್ನೋ ಇಟಾಲಿಯನ್. ಕೆನ್ನಿ ಅನ್ನೋ ತನ್ನ ಮಗನಿಗೆ ಸಂಧಿವಾತ ವಾಸಿ ಮಾಡಕ್ಕೆ ಇದನ್ನ ಕಂಡ್‍ಹಿಡಿದನಂತೆ.

4. ಟೆಲಿಫೋನ್

ಎಲ್ಲರೂ ಕೇಳಿರೋ ಪ್ರಕಾರ ಅಲೆಗ್ಸಾಂಡರ್ ಗ್ರಹಂ ಬೆಲ್ ಅನ್ನೋ ಅಮೇರಿಕದೋನೇ ಫೋನ್ ಕಂಡ್‍ಹಿಡಿದಿದ್ದು ತಾನೆ? ಆದರೆ ಅವನಿಗೆ ಮೊಟ್ಟಮೊದಲ ಪೇಟೆಂಟ್ ಸಿಕ್ಕಿತ್ತು, ಅಷ್ಟೆ. ನಿಜಕ್ಕೂ ಕಂಡುಹಿಡಿದಿದ್ದು ಆಂಟೋನಿಯೋ ಮೆಯುಚ್ಚಿ ಅನ್ನೋ ಇಟಲಿ ದೇಶದೋನು. ಅವನು 1849ರಲ್ಲಿ ಕಂದುಹಿಡಿದ ಸಂವಹನದ ಸಲಕರಣೆಗೆ ’ಟೆಲೆಟ್ರೊಫೋನೋ’ ಅಂತ ಹೆಸರು ಕೊಟ್ಟಿದ್ದನಂತೆ. ಅದು ನೋಡಕ್ಕೆ ಇವತ್ತಿನ ಫೋನ್ ತರಹ ಇರಲಿಲ್ಲ, ಆದರೆ ಕೆಲಸ ಮಾಡ್ತಾ ಇತ್ತು. 2002ರಲ್ಲಿ ಅಮೇರಿಕದ ಸರ್ಕಾರ ಮೆಯುಚ್ಚೀನೇ ಫೋನ್ ಕಂಡ್‍ಹಿಡಿದಿದ್ದು ಅಂತ ಒಪ್ಕೋತು.

5. ರೇಡಿಯೋ

ಗಿಗ್ಲೀಮೋ ಮಾರ್ಕೋನಿ ರೇಡಿಯೋ ಕಂಡ್‍ಹಿಡಿದ ಸಂಶೋಧಕರಲ್ಲಿ ಮುಖ್ಯವಾದೋನು. 1901ರಲ್ಲಿ ಅವನು ಒಂದು ಸಂದೇಶವನ್ನ ಅಟ್ಲಾಂಟಿಕ್ ಮಹಾಸಾಗರ ದಾಟಿಸಿದ. ಈ ಕ್ಷೇತ್ರದಲ್ಲಿ ಅವನು ಮಾಡಿದ ಕೆಲಸಕ್ಕೆ ಅವನಿಗೆ ಫಿಸಿಕ್ಸ್ ನೊಬೆಲ್ ಪ್ರಶಸ್ತಿ ಬೇರೆ ಸಿಕ್ಕಿತು – ಕಾರ್ಲ್ ಬ್ರಾವ್ನ್ ಅನ್ನೋ ಇನ್ನೊಬ್ಬನ ಜೊತೆಗೆ.

6. ಬ್ಯಾಟ್ರಿ

ಜಗತ್ತಿನ ಮೊಟ್ಟಮೊದಲ ಬ್ಯಾಟ್ರಿ ಕಂಡುಹಿಡಿದಿದ್ದು ಅಲೆಸ್ಸಂಡ್ರೊ ವೋಲ್ಟಾ – 1800ರಲ್ಲಿ. ಆಗ ಅಡೆತಡೆಯಿಲ್ಲದೆ ಕರೆಂಟ್ ಕೊಡಬಲ್ಲ ಒಂದೇ ಒಂದು ಸಾಧನ ಅದಾಗಿತ್ತು.

7. ಪಿಯಾನೊ

ಉತ್ತರ ಇಟಲಿಯಲ್ಲಿರೋ ಪಡುವಾ ಅನ್ನೋ ಊರಿನ ಬಾರ್ತೊಲೊಮೆಯೊ ಕ್ರಿಸ್ಟೊಫೋರಿ ಅನ್ನೋನು ಪಿಯಾನೊ ಕಂಡುಹಿಡಿದ. 1700ರ ಆಸುಪಾಸಲ್ಲಿ ಟಸ್ಕನಿಯ ರಾಜಕುಮಾರ ಫರ್ಡಿನಾಂಡೋ ದೆ ಮೆಡಿಚಿ ಅನ್ನೋನ ಆಸ್ಥಾನದಲ್ಲಿದ್ದಾಗ ಈ ಆವಿಷ್ಕಾರ ನಡೀತು.

8. ಬ್ಯಾಂಕ್

1397ರಲ್ಲಿ ಜಿಯೊವಾನ್ನಿ ದಿ ಬಿಚ್ಚಿ ದೆ ಮೆಡಿಚಿ ಅನ್ನೋನೊಬ್ಬ ಪ್ರಪಂಚದ ಮೊಟ್ಟಮೊದಲ ಬ್ಯಾಂಕ್ ಸ್ಥಾಪಿಸಿದ. ಆ ಹಳೇ ಬ್ಯಾಂಕ್ ಮೊಂಟೆ ದೇಯ್ ಪಾಸ್ಚಿ ದಿ ಸಿಯೇನಾ ಅನ್ನೋ ಹೆಸರಲ್ಲಿ ಇನ್ನೂ ಕೆಲಸ ಮಾಡ್ತಿದೆ (ಫೋಟೋ ಮೇಲಿದೆ).

9. ಕಾಫಿ ಮೆಶೀನ್

ಎಸ್ಪ್ರೆಸ್ಸೋ ಅಂದ್ರೆ ಗೊತ್ತಲ್ಲ – ಬರೀ ಕಾಫಿ ಡಿಕಾಕ್ಷನ್ನು – ಅದನ್ನ ಮಾಡಕ್ಕೆ ಒಂದು ಮೆಶೀನ್ನ ಟುರಿನ್ ಅನ್ನೋ ಊರಿನ ಏಂಜೆಲೊ ಮೊರಿಯೊಂಡೊ ಅನ್ನೋನು 1884ರಲ್ಲಿ ಕಂಡುಹಿಡಿದ. ಆಮೇಲೆ ಮಿಲಾನ್ ಊರಿನ ಮೆಕ್ಯಾನಿಕ್ ಲುಈಜಿ ಬೆಜ಼ೇರಾ ಅನ್ನೋನು ಇನ್ನಷ್ಟು ಅಭಿವೃದ್ಧಿ ಪಡಿಸಿದ.

10. ಲಿಪೊಸಕ್ಷನ್

ಲಿಪೊಸಕ್ಷನ್ ಅಂದ್ರೆ ಮೈಯಲ್ಲಿರೋ ಕೊಬ್ಬು ತೆಗೆಯೋ ಒಂದು ಸರ್ಜರಿ. ಇದನ್ನ ಕಂಡ್‍ಹಿಡಿದಿದ್ದು ಡಾ. ಆರ್ಪದ್ ಫ಼ಿಶರ್ ಮತ್ತು ಅವನ ಮಗ ಜಿಯಾರ್ಜಿಯೊ ಫ಼ಿಶರ್ ಅನ್ನೋ ಇಬ್ಬರು ಇಟಾಲಿಯನ್ ಡಾಕ್ಟರುಗಳು – 1974ರಲ್ಲಿ. ಇದು ಇತ್ತೀಚೆಗೆ ಭಾರತದಲ್ಲೂ ಸಾಕಷ್ಟು ಜನಪ್ರಿಯವಾಗಿದೆ – ಬೇರೆ ಯಾವ ರೀತಿಯಲ್ಲೂ ಬೊಜ್ಜು ಕರಗಿಸಿಕೊಳಕ್ಕೆ ಆಗದೆ ಇರೋರಿಗೆ ಇದೊಂದೇ ಕಡೆಗೆ ಉಳಿಯೋ ವಿಧಾನ. ಅಷ್ಟೇ ಅಲ್ಲ, 6-ಪ್ಯಾಕ್ ಬರುಸ್ಕೋಬೇಕು ಅನ್ನೋರು, ಒಳ್ಳೇ ಮೈಮಾಟ ಇರಬೇಕು ಅನ್ನೋರು  ಕೂಡ ಇದನ್ನ ಮಾಡಿಸಿಕೊಳ್ತಾ ಇದಾರೆ…

lipoeasy

ಒಳಚಿತ್ರಗಳು, ಮಾಹಿತಿ: thelocal