http://blog.via.com/wp-content/uploads/2016/04/Japan-Kind-People.jpg

ಜಪಾನಿಗೆ ಹೋಗಿ ಬಂದೋರೆಲ್ಲ ಆ ದೇಶವನ್ನ ಹೊಗಳ್ತಾರೆ. ರಸ್ತೆಗಳು ಚೊಕ್ಕವಾಗಿದ್ಯಂತೆ, ಬಸ್ಸು-ಟ್ರೈನು ಬರ್ಬೇಕಾದ ಸಮಯಕ್ಕೆ ಬರುತ್ತೆ ಅಂತೆ. ಜಪಾನಿನ ಜನರೂ ತುಂಬಾ ಶಾಂತ ಸ್ವಭಾವದವರು, ಅಲ್ಲದೆ ವಿನಯವಂತರು. ಹೊರಗಿನಿಂದ ಹೋದವರಿಗೆ ಅವರು ಸ್ವಲ್ಪ ವಿಚಿತ್ರ ಅಂತನೂ ಅನ್ಸುತ್ತೆ, ಆದರೆ ಆ ವಿಚಿತ್ರ ಸ್ವಭಾವದಿಂದಲೇ ಅವರು ಇಷ್ಟವಾಗ್ತಾರೆ. ಜಪಾನಿಗೆ ಒಂದು ವಾರದ ಮಟ್ಟಿಗೆ ಹೋದ್ರೂ ನಿಮ್ಮ ಜೀವನ ಬದಲಾಗ್ಬಹುದು.

ಅವ್ರಿಂದ ನಾವು ಏನೇನು ಕಲೀಬಹುದು ಅಂತ ಸ್ವಲ್ಪ ನೋಡಿ:

1) ಸಹಾಯ ಮಾಡಿದೋರ್ಗೆ ತಿರುಗಿ ಸಹಾಯ ಮಾಡಬೇಕು

ಜಪಾನೀಸ್ ಯಾರಾದ್ರೂ ಸಹಾಯ ಮಾಡಿದ್ದನ್ನ ಯಾವತ್ತೂ ಮರೆಯೊಲ್ಲ. ಅಷ್ಟೆ ಅಲ್ಲ, ಸಹಾಯ ಮಾಡಿದೋರಿಗೆ ತಿರುಗಿ ತಮ್ಮಿಂದಾದ ಸಹಾಯ ಮಾಡೋದು ಅವರ ಗುಣ. ನೀವು ಮನೆ ಬದಲಾಯಿಸ್ವಾಗ ನಿಮ್ಗೆ ಒಬ್ರು ನಿಮ್ ಮನೆ ಸಾಮಾನೆಲ್ಲ ಹೊಸ ಮನೆಗೆ ತರೋದಿಕ್ಕೆ ಸಹಾಯ ಮಾಡಿದ್ರು ಅಂದ್ಕೊಳ್ಳಿ, ಅವ್ರನ್ನ ನೀವು ಮನೆಗೆ ಊಟಕ್ಕೆ ಕರೀಬಹುದು. ಒಟ್ಟಿನಲ್ಲಿ ಅವರ ಉಪಕಾರಕ್ಕೆ ಕೃತಜ್ಞತೆ ತೋರಿಸ್ಬೇಕು ಅಷ್ಟೆ, ಎಷ್ಟು ಸಣ್ಣ ಮಟ್ಟಿನಲ್ಲಾದರ ಸರಿ.

2) ಅವರು ಮುಂದೆ ಎಲ್ಲಾದ್ರೂ ಕಂಡಾಗ ಅವರ ಸಹಾಯ ನೆನಪಿಸ್ಕೋಬೇಕು

ಜಪಾನೀಸ್ ಹಾಗೆನೇ. ಸಹಾಯ ಮಾಡಿದೋರು ಎಲ್ಲಿ ಸಿಕ್ಕಿದ್ರೂ ಮತ್ತೆ ಮತ್ತೆ ಸಹಾಯ ನೆನಪಿಸ್ಕೊಂಡು ಧನ್ಯವಾದ ಹೇಳ್ತಾರೆ.

ಸ್ವಲ್ಪ ಅತಿ ಅನ್ನಿಸ್ಬಹುದಾದ್ರೂ, ಯಾರೋ ನಾವು ಮಾಡಿದ್ ಸಹಾಯಾನ ನೆನಪಿಸ್ಕೊಳ್ಳೋದು ಖುಷಿ ಕೊಟ್ಟೇ ಕೊಡುತ್ತೆ ಅಲ್ವಾ? ಅಂಥ ಖುಷೀನಾ ನೀವ್ಯಾಕೆ ಬೇರೆಯವ್ರಿಗೆ ಕೊಡ್ಬಾರ್ದು? "ಥ್ಯಾಂಕ್ಸ್" ಹೇಳಿ!

ಮೂಲ

3) ಬೇರೆಯವರ ಬಗ್ಗೆ ಮೊದಲು ಯೋಚಿಸಬೇಕು

ನಿಮ್ ಬಗ್ಗೆ ಮಾತ್ರ ಯೋಚನೆ ಮಾಡ್ತಾ ಇರೋದು ಒಳ್ಳೇದಲ್ಲ, ಸ್ವಲ್ಪ ಬೇರೆಯವ್ರ ಬಗ್ಗೆ ಯೋಚನೆ ಮಾಡಿ. ಆಗ ಅವ್ರು ನಿಮ್ ಬಗ್ಗೆ ಕಾಳಜಿ ತೋರಿಸ್ತಾರೆ.

ಕೇಕ್ ಕತ್ತರಿಸುವಾಗ ದೊಡ್ಡ ಪಾಲನ್ನ ಸ್ನೇಹಿತನಿಗೆ ಕೊಡೋದು, ನೆಂಟರ ಜೊತೆ ಹೊರಗೆ ಊಟಕ್ಕ ಹೋದ್ರೆ ಕೂರೋಕೆ ಆರಾಮಾಗಿರೋ ಸ್ಥಳವನ್ನ ಅವ್ರಿಗೆ ಬಿಟ್ ಕೊಡೋದು, ಅಥವಾ ಮನೇಲಿ ಕೇಕ್ ತಯಾರಿಸಿ ನೆರೆಮನೆಯವರಿಗೆಲ್ಲ ಕೊಡೋದು – ಇದೆಲ್ಲ ಜಪಾನಿನಲ್ಲಿ ಸರ್ವೇ ಸಾಧಾರಣ ವಿಷಯ. ಅವರ ಹಳೆಯ ಮನೆಗಳಲ್ಲಿ ಅತಿಥಿಗಳಿಗೆ ಕೂರೋಕೆ ಅಂತಾನೇ ವಿಶೇಷ ಕುರ್ಚಿಗಳಿರ್ತವೆ ಅಂತೆ. ಮನೇಲಿ ಏನೇನೋ ಶೋಪೀಸ್ ಇಟ್ಟಿರ್ತೀವಲ್ಲ, ಅಂತಲ್ಲಿ ಅತಿಥಿಗಳ್ನ ಕೂರಿಸ್ತಾರೆ. ಮನೆಗೆ ಬಂದವರನ್ನ ಖುಷಿಯಾಗಿಡೋ, ಅವ್ರಿಗೆ ಗೌರವ ತೋರಿಸೋ ರೀತಿ ಇದು.

4) ಗುಂಪು ಅಂದಮೇಲೆ ಯಾರನ್ನೂ ಬಿಡೋಹಂಗಿಲ್ಲ

ಒಂದು ಪಾರ್ಟಿ ಕೊಡುವಾಗ್ಲೂ, ಫೋಟೋ ತೆಗೋವಾಗ್ಲೂ, ಎಲ್ಲಾರ್ನೂ ಸೇರಿಸ್ಕೊಳ್ಳೋದು ಮರೀಬೇಡಿ. ಆಫೀಸಿನಿಂದ ಹೊರಗೆ ಊಟಕ್ಕೆ ಹೋಗ್ತಿದ್ದೀರ ಅಂದ್ಕೊಳ್ಳಿ – ನೀವು ನೀವೇ ಸ್ನೇಹಿತರು ಮಾತ್ರ ಹೋಗಿ ಬರ್ಬೇಡಿ. ಆದಷ್ಟೂ ಎಲ್ಲಾರ್ನೂ ಕರೀರಿ. ಜಪಾನಿನಲ್ಲಿ ಹಾಗೆನೇ.

ಮೂಲ

5) ಬೇರೆಯವ್ರ ವಸ್ತು ಬಗ್ಗೆ ಗೌರವ ಇರಬೇಕು

ಜಪಾನಿನಲ್ಲಿ ನೀವು ಹೊರಗೆ ಹೋದಾಗ ಫುಟ್ಪಾತಿನಲ್ಲಿ ನಿಮ್ ಕೊಡೆ ಎಲ್ಲೋ ಬೀಳ್ಸಿದ್ರಿ ಅಂದ್ಕೊಳ್ಳಿ. ನೀವು ಅದನ್ನ ಹುಡುಕಿಕೊಂಡು ಹೋದ್ರೆ, ಅದು ಎಲ್ಲಿ ಬಿದ್ದಿತ್ತೋ ಅಲ್ಲೇ ಇರುತ್ತೆ. ಅಥವಾ, ಅದನ್ನ ಯಾರಾದ್ರೂ ನೋಡಿದ್ರೆ ಪಕ್ಕದ್ ಬೆಂಚಲ್ಲಿ ಇಟ್ಟಿರ್ತಾರೆ. ಅಷ್ಟು ಪ್ರಾಮಾಣಿಕರು. ಬೇರೆವ್ರ ವಸ್ತು ಮೇಲೆ ಕಣ್ಣು ಹಾಕೊಲ್ಲ.

6) ಕುಡಿದೋರೆಲ್ಲ ಜಗಳ ಮಾಡಲೇಬೇಕು ಅಂತಿಲ್ಲ

ಜಪಾನಿನಲ್ಲಿ ಬಿಸಿನೆಸ್ಮೆನ್ ರಾತ್ರಿ ಕುಡಿದು ರಸ್ತೆನಲ್ಲೇ ಶಾಂತವಾಗಿ ಮಲ್ಗಿರ್ತಾರೆ ಅಂತೆ. 'ಹೆಂಗೂ ಕುಡ್ದಿದ್ದೀನಿ' ಅನ್ನೋ ಲೈಸೆನ್ಸ್ ಇಟ್ಕೊಂಡು ಅವ್ರು ಗಲಾಟೆ-ಗದ್ದಲ ಮಾಡೊಲ್ಲ. ಅಲ್ಲಿ ಬಾರ್ಗಳಲ್ಲಿ ಜಗಳ ಆಗೊಲ್ಲ. ನೀವು ರಾತ್ರಿ ಎಲ್ಲ ಕುಡಿದು ಅಲ್ಲೇ ಇದ್ರೂನೂ ನಿಮ್ ಕೂದ್ಲು ಕೂಡ ಕೊಂಕಿರೊಲ್ಲ, ನಿಮ್ ದುಡ್ಡು ಯಾರೂ ಕದಿಯೊಲ್ಲ. ಜಪಾನೀಸ್ ಕುಡ್ದಿದ್ದಾಗ್ಲೂ ಕುಡೀದೇ ಇದ್ದಾಗ್ಲೂ ಒಂದೇ ಥರ – ಶಾಂತವಾಗಿರ್ತಾರೆ.

ಮೂಲ

7) ಬೇರೆಯೋರು ಹೇಳೋದಕ್ಕೆ ಕಿವಿ ಕೊಡಬೇಕು

ನಮ್ಗೆ ಯಾವಾಗ್ಲೂ ನಮ್ ತಲೇಲಿರೋದನ್ನ ಹೊರಗೆ ಹಾಕೋ ಆತುರ. ಬೇರೆಯವ್ರು ಹೇಳೋದನ್ನ ಕೇಳಿಸ್ಕೊಳ್ಳೋದಿಲ್ಲ. ಕೇಳಿಸ್ಕೊಳ್ವಾಗ್ಲೂ, ಅವರ ಮಾತಿಗೆ ಎದುರಾಗಿ ಏನು ಹೇಳ್ಬೇಕು, ಏನು ಹೇಳಿದ್ರೆ ಅವ್ರು ಇಂಪ್ರೆಸ್ ಆಗ್ತಾರೆ, ಈ ಸಂಭಾಣೆಯಲ್ಲಿ ನಾವು ಹೇಗೆ ಗೆಲ್ಲೋದು – ಇದೇ ಯೋಚನೆ ನಮ್ಗೆ. ಅಲ್ಲದೆ ಮುಂದೆ ಇರೋರ ಬಗ್ಗೆ ನಮ್ಗೆ ಒಂದು ಅಭಿಪ್ರಾಯ ಇರುತ್ತೆ – ಇವ್ನೇನು ಹೇಳ್ತಾನೆ ಮಹಾ ಅಂದ್ಕೋತೀವಿ. ಇದರಿಂದ ಯಾರೂ ಯಾರ ಮಾತನ್ನೂ ಪೂರ್ತಿ ಕೇಳಿಸ್ಕೊಳ್ಳೋದೇ ಇಲ್ಲ.

ಆದರೆ ಜಪಾನೀಸ್ ಹೀಗಲ್ಲ. ಅವರು ಯಾವಾಗ್ಲೂ ಮುಂದೆ ಇರೋರ ಮಾತು ಪೂರ್ತಿ ಕೇಳಿಸ್ಕೋತಾರೆ. ಆಮೇಲೆ ತಮಗೆ ಏನು ಅನ್ಸುತ್ತೋ, ಅದನ್ನ ಹೇಳ್ತಾರೆ. ಮಾತು ಮಾತಾಗಿಯೇ ಇರುತ್ತೆ, ಚರ್ಚೆ ಆಗೊಲ್ಲ. ಮಾತು ಪೂರ್ತಿ ಕೇಳಿಸ್ಕೊಳ್ಳೋದ್ರಿಂದ ಮತ್ತೊಬ್ಬರ ಬಗ್ಗೆ ನಮ್ಗೆ ಸಹಾನುಭೂತಿ, ಗೌರವ ಬೆಳಿಯುತ್ತೆ.

8) ಮೂರೂ ಬಿಟ್ಟೋನು ಊರಿಗೆ ದೊಡ್ಡೋನು ಅನ್ನೋದು ತಪ್ಪು

ಜಪಾನಿನಲ್ಲಿ ಜನ ಉದ್ದ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಂತ್ರೂ ಏನೂ ಬೇಜಾರು ಮಾಡ್ಕೊಳೊಲ್ಲ. ಬೇರೆಯವ್ರಿಗೆ ಬಯ್ಕೊಳೊಲ್ಲ. ಆಗ್ಲೂ ಶಾಂತವಾಗಿರ್ತಾರೆ. ಅಲ್ಲಿಗೆ ಪ್ರವಾಸ ಹೋದೋರೂ ಕೂಡ ಅಲ್ಲಿನ ಜನರ ಸ್ವಭಾವ ಕಂಡು ತಾವೂ ಶಾಂತವಾಗಿರೋದು ಕಲೀತಾರೆ. ನಾಚಿಕೆಗೆಟ್ಟ ಸ್ವಭಾವ ಅವ್ರಿಗೆ ಇಷ್ಟ ಆಗೊಲ್ಲ. ಬೇರೆಯವ್ರಿಗೆ ಬಯ್ಯೋದು, ಮುಖ-ಮೂತಿ ಮಾಡೋದು, ಗೊಣಗೋದು, ಸಿಟ್ಟು ಮಾಡ್ಕೊಂಡು ಎಗರಾಡೋದು – ಇದೆಲ್ಲ ಅವ್ರಗೆ ಗೊತ್ತೇ ಇಲ್ಲ! ಮೂರೂ ಬಿಟ್ಟೋನಿಗೆ ಜಪಾನಿನಲ್ಲಿ ಸ್ಥಾನ ಇಲ್ಲ.

ಮೂಲ

9) ನಮ್ ದೇಶವನ್ನ ಮೀರಿಸುವಂಥ ದೇಶಾನೇ ಇಲ್ಲ ಅಂತ ಕೊಚ್ಕೋಬಾರ್ದು

ಬೆಸ್ಟ್ ದೇಶ ಅಂತ ಒಂದಿಲ್ಲ. ಎಲ್ಲಾರ್ಗೂ ಅವ್ರವ್ರ ದೇಶದ್ ಬಗ್ಗೆ ಹೆಮ್ಮೆ, ಪ್ರೀತಿ ಇರುತ್ತೆ. ಹಾಗಾಗಿ ಬೇರೆ ದೇಶದವ್ರಿಗೆ ನಮ್ ದೇಶಾನೇ ಪ್ರಪಂಚದ ಬೆಸ್ಟ್ ದೇಶ ಅಂತ ಸಾಧಿಸಿ ತೋರಿಸೋಕೆ ಹೋಗೋದ್ರಿಂದ ಪ್ರಯೋಜನ ಇಲ್ಲ. ಜಪಾನಿನಲ್ಲಿ ಯಾರೂ ಜಪಾನ್ ಬೆಸ್ಟ್ ದೇಶ ಅಂತ ನಿಮ್ಗೆ ಪಾಠ ಕೊಡೋಕೆ  ಬರೊಲ್ಲ.

10) ಯಾವುದೇ ಕೆಲಸ ಆಗಲಿ, ಅಚ್ಚುಕಟ್ಟಾಗಿ ಮಾಡಬೇಕು

ಗನ್ಬರು – ಅಂತ ಒಂದು ಪದ ಇದೆ ಜಪಾನೀಸ್ ಭಾಷೆಯಲ್ಲಿ. ಅದರ ಅರ್ಥ ಶಕ್ತಿ ಮೀರಿ ಪ್ರಯತ್ನಿಸೋದು ಅಂತ. ಅಲ್ಲಿನ ಜನ ಕೈ ಹಾಕಿದ್ ಕೆಲ್ಸಾನ ಪೂರ್ತಿ ಮಾಡೋಕೆ ತಮ್ಮಿಂದ ಏನೆಲ್ಲ ಆಗುತ್ತೋ ಅದನ್ನ ಮಾಡ್ತಾರೆ. ಅವ್ರು ಅಂದ್ಕೊಂಡಿದ್ದಕ್ಕಿಂತ ಕಷ್ಟ ಇದೆ ಅಂತ ಯಾವ್ದನ್ನೂ ಅರ್ಧಕ್ಕೆ ಬಿಡೊಲ್ಲ. ಅದು ಪೂರ್ತಿ ಆಗೋವರ್ಗೂ ಅವ್ರಿಗೆ ಅದ್ರದ್ದೇ ಯೋಚನೆ.

ಮೂಲ

11) ಮಾತು ಕೊಟ್ಟಮೇಲೆ ಉಳುಸ್ಕೋಬೇಕು

ಕೊಟ್ಟ ಮಾತಿಗೆ ತಪ್ಪಿ  ನಡೆದರೆ ಪರಮಾತ್ಮ ಮೆಚ್ಚೊಲ್ಲ. ಜಪಾನೀಸ್ ಏನಾದ್ರೂ ಮಾತು ಕೊಟ್ರೆ, ಅದೇನೇ ಬಂದ್ರೂ  ಮಾತಿಗೆ ತಪ್ಪೊಲ್ಲ. ಯಾವ್ದೋ ಫಂಕ್ಷನ್ನಿಗೆ ಬರ್ತೀನಿ ಅಂತ ಹೇಳಿದ್ರೆ, ಎಂಥ ಜೋರು ಬಿರುಗಾಳಿ-ಮಳೆ ಇದ್ರೂ ಅವ್ರು ಬಂದೇ ಬರ್ತಾರೆ. ಬರ್ತೀನಿ ಅಂತ ಹೇಳಿದ್ ಮೇಲೆ ಸದ್ದಿಲ್ದೆ ತಪ್ಪಿಸ್ಕೊಳ್ಳೋದು ಅಲ್ಲಿ ದೊಡ್ಡ ಅಪರಾಧ. ನಿಮ್ ಬದಲಿಗೆ ಯಾರನ್ನಾದ್ರೂ ಕಳಿಸ್ಬೇಕು, ಇಲ್ದಿದ್ರೆ ಅವ್ರಿಗೆ ಮೊದಲೇ ಕಾಲ್ ಮಾಡಿ, ’ಬರೋಕಾಗೊಲ್ಲ, ಸಾರಿ.’, ಅಂತ ಹೇಳ್ಬೇಕು.

12) ಜವಾಬ್ದಾರಿ ಬೆಳೆಸ್ಕೊಂಡು ದೇಶಕ್ಕೆ ಒಳ್ಳೆ ಪ್ರಜೆ ಆಗಬೇಕು

ಜಪಾನಿನ ಜನ ಅವ್ರು ಮಾಡಿದ್ ಕೊಳಕನ್ನ ಅವ್ರೇ ಕ್ಲೀನ್ ಮಾಡ್ತಾರೆ. ಕಸ ಎಲ್ಲಿ ಬೇಕೋ ಅಲ್ಲಿ ಎಸೆಯೊಲ್ಲ. ಅವ್ರ ಪಾರ್ಕಿನಲ್ಲಿ ಒಂದು ಪೇಪರ್ ಕಪ್ ಕೂಡ ಎಲ್ಲೆಲ್ಲೋ ಬಿದ್ದಿರೋದು ಕಾಣೋಕೆ ಸಿಗೊಲ್ಲ. ಮತ್ತೊಬ್ರ ಮನೆಗೆ ಏನಾದ್ರೂ ಪಾರ್ಟಿಗೆ ಹೋದ್ರೆ, ಪಾರ್ಟಿ ಮಗಿದ್ ಮೇಲೆ ಪಾತ್ರೆ ಎಲ್ಲ ತೊಳೆದು ಕೊಟ್ಟು ಬರ್ತಾರೆ. ನೆರೆಹೊರೆಯ ಜನ ಗುಂಪು ಕಟ್ಕೊಂಡು ಆಗಾಗ ರಸ್ತೆ, ಪಾರ್ಕ್ ಎಲ್ಲ ಸ್ವಚ್ಛ ಮಾಡ್ತಿರ್ತಾರೆ.

ಮೂಲ

13) ಯಾವಾಗ್ಲೂ ಚೆನ್ನಾಗಿ ಡ್ರೆಸ್ ಮಾಡ್ಕೋಬೇಕು, ಚೆನ್ನಾಗಿ ನಡ್ಕೋಬೇಕು

ಜಪಾನಿನ ಜನ ಎಷ್ಟೇ ಬಡವರಿರ್ಲಿ, ಶ್ರೀಮಂತರಿರ್ಲಿ – ಎಲ್ಲರೂ ತುಂಬಾ ಚೆನ್ನಾಗಿ ನಡ್ಕೊಳ್ತಾರೆ. ಚೆನ್ನಾಗಿ ಡ್ರೆಸ್ ಮಾಡ್ಕೊಳ್ತಾರೆ. ಯಾರನ್ನಾದ್ರೂ ಸ್ವಾಗತಿಸುವಾಗ ಅಥ್ವಾ 'ಗುಡ್ ಮಾರ್ನಿಂಗೋ, ಗುಡ್ ಈವ್ನಿಂಗೋ' ಹೇಳ್ವಾಗ ಚೆಂದದ ಮುಗುಳ್ನಗೆ ಇರುತ್ತೆ ಮುಖದಲ್ಲಿ. ಯಾರಿಗಾದ್ರೂ ಏನಾದ್ರೂ ಕೊಡುವಾಗ ಎರಡೂ ಕೈಯಿಂದ ಕೊಡ್ತಾರೆ.

14) ಟೈಮ್-ಟೈಮಿಗೆ ಕೆಲಸ ಮಾಡಬೇಕು

ಜಪಾನಿನಲ್ಲಿ ಎಲ್ಲವೂ ಸಮಯಕ್ಕೆ ಸರಿಯಾಗಿ ನಡಿಯೋಕೆ ಇದೇ ಕಾರಣ. ಅಲ್ಲಿನ ಜನ ಅವ್ರವ್ರ ಕೆಲಸವನ್ನ ಸಮಯಕ್ಕೆ ಸರಿಯಾಗಿ ಮಾಡ್ತಾರೆ, – ಪ್ರತಿದಿನ, ಪ್ರತಿಸಲ. ಸಮಯ ತಪ್ಪಿ ಅವರಿಗೆ ಅಭ್ಯಾಸಾನೇ ಇಲ್ಲ.

ಮೂಲ

ಹೆಂಗೆ! ಬೇರೆ ಒಂದು ಸಂಸ್ಕೃತಿಯಿಂದ ಎಷ್ಟು ಕಲಿಯೋದಿರುತ್ತೆ ಅಲ್ವಾ?!

ಜಪಾನ್ ಬಗ್ಗೆ ಇನ್ನಷ್ಟು ಓದಿ:

  1. ಈ ಜಪಾನ್ ಕಲಾವಿದ ಕಲ್ಲಲ್ಲಿ ಏನೇನ್ ಮಾಡ್ತಾನೆ ಅಂತ ನೋಡಿ ದಂಗಾಗೋಗ್ತೀರಿ
  2. ಈ ಜಪಾನ್ ಹುಡುಗೀದು ಬರೀ ಸುದೀಪ್ ಅಭಿಮಾನ ಇದ್ದಂಗಿಲ್ಲ
  3. ಮಾಡಬೇಕಾದ ಕೆಲಸಕ್ಕೆ ಟೈಮಿಲ್ಲದಿದ್ದಾಗ ಟೈಂ ಹುಟ್ಟಿಸಿಕೊಳಕ್ಕೆ ಜಪಾನ್ನೋರು ಮಾಡೋ ಉಪಾಯ