ಸ್ಮಾರ್ಟ್-ಫೋನ್ ಬಂದ್ಮೇಲೆ ಸದಾ ಫೋನ್ನ ಕೈಯಲ್ಲೇ ಹಿಡ್ಕೊಂಡಿರೋದು ನಮ್ಗೊಂದು ಅಭ್ಯಾಸ ಆಗ್ಬಿಟ್ಟಿದೆ. ಆಗಾಗ ನೋಟಿಫಿಕೇಶನ್ ಚೆಕ್ ಮಾಡೋಕೆ ಅಂತ ಫೋನ್ ಹೊರಗೆ ತೆಗಿಯೋದು, ಮತ್ತೆ ಏನೋ ನೋಡ್ತಾ ಅದರಲ್ಲೇ ಕಳ್ದು ಹೋಗೋದು, ಗೊತ್ತೇ ಆಗ್ದೆ ಗಂಟೆಗಟ್ಟಲೆ ಸಮಯ ಅದರಲ್ಲಿ ವ್ಯರ್ಥ ಮಾಡೋದು – ಇದೆಲ್ಲಾ ಮಾಮೂಲಿ ಆಗ್ಬಿಟ್ಟಿದೆ. ಎಷ್ಟೋ ಸತಿ ಮನೇಲಿ ಈ ಫೋನಿನ್ ಗೀಳು ಬಿಡೋವರ್ಗೂ ನೀನು ಉದ್ದಾರ ಆಗಲ್ಲ ಅಂತಾನೂ ದೊಡ್ಡೋರು ಹೇಳ್ಬಿಟ್ಟಿರ್ತಾರೆ.

ನಮಗೂ ಅವರು ಹೇಳೋದು ನಿಜಾನೇ ಅನ್ನಿಸಿರುತ್ತೆ, ಆದರೂ‌ ಬಿಡೋದು ಕಷ್ಟ ಅನ್ನಿಸಿರುತ್ತೆ.

ಈಗ ಅದೇನೇ ಇರಲಿ, ನನ್ನ ಜೀವನದಲ್ಲಿ ಈ ಫೋನಿನ ಪಾತ್ರ ಮಿತಿಮೀರಿ ಬೆಳೀಬಾರದು ಅನ್ನೋ ಆಸೆ ನಿಮಗೂ ಇದ್ಯಾ? ಹಾಗಾದ್ರೆ ಮುಂದಿನ್ ಸಲ ಫೋನ್ ಎತ್ಕೋಬೇಕು ಅನ್ನಿಸಿದಾಗ ಎತ್ಕೋಬೇಡಿ, ಅದರ ಬದಲಾಗಿ ಕೆಳಗೆ ಕೊಟ್ಟಿರೋ 11 ಕೆಲಸಗಳ್ನ ಮಾಡಿ… ಆಗ ನಿಧಾನವಾಗಿ “ಫೋನ್ ದಾಸ್ಯ”ದಿಂದ ದೂರ ಆಗ್ತೀರಿ…

1. ನಿಮಗೆ ಇಷ್ಟವಾಗಿರೋದು ಏನಾದರೂ (ಐಸ್ಕ್ರೀಮೋ, ಕೇಕೋ ಮತ್ತೊಂದೋ) ತಿನ್ನಿ

ರುಚಿರುಚಿಯಾಗಿರೋದೇನಾದ್ರೂ ತಿಂತಾ ತಿಂತಾ ಪ್ರಪಂಚ ಮರ್ತಿದ್ದೀರಾ? ಪ್ರಪಂಚಾನೇ ಮರ್ತು ಹೋಗ್ವಾಗ ಫೋನ್ ಮರಿಯೋದ್ರಲ್ಲಿ ಆಶ್ಚರ್ಯ ಏನಿದೆ?

2. ಬುಗುರಿ ಆಡಿ

ಬುಗುರಿಯಾಟ ನೆನ್ಪಿದ್ಯಾ? ಚಿಕ್ಕವಯಸ್ಸಲ್ಲಿ ಇದನ್ನ ಆಡ್ತಾ ಇದ್ರೆ ದಿನಾ ಕಳೆಯೋದೇ ಗೊತ್ತಾಗ್ತಿರ್ಲಿಲ್ಲ. ಇದೇ ತರ ಈಗ್ಲೂ ನಿಮಗಿಷ್ಟವಾದ ಆಟದಲ್ಲಿ ಕಳ್ದು ಹೋದಾಗ ಫೋನ್ ನೆನಪಾಗಲ್ಲ.

ಮೂಲ

3. ನಿಮಗಿಷ್ಟವಾದ ಹಾಡಿಗೆ ನಿಮ್ಗಿಷ್ಟ ಬಂದಾಗ್ ಕುಣೀರಿ

ಫೋನನ್ನ ಒಂದು ಮೂಲೆಗೆ ಬಿಸಾಕಿ, ನಿಮಗಿಷ್ಟ ಆಗಿರೋ ಹಾಡು ಹಾಕೊಳಿ. ಇಷ್ಟ ಬಂದ ಹಾಗೆ ಕುಣೀರಿ. ಬಾಗಿಲು ಹಾಕ್ಕೊಳ್ಳೋದು ಮರೀಬೇಡಿ!

4. ಕೈಯಲ್ಲಿ ಒಂದು ಕಪ್ ಕಾಫಿ ಹಿಡ್ಕೊಂಡು ಕಿಟಕಿ ಪಕ್ಕ ಕೂತ್ಕೊಳಿ

ಕಿಟಕಿ ಆಚೆ ಒಂದು ಗಿಡದಲ್ಲಿ ಹೂ ಬಿಟ್ಟಿರ್ಬಹುದು. ಅದ್ರಲ್ಲಿ ಒಂದು ಚಿಟ್ಟೆ ಆಗಾಗ ಬಂದು ಕೂರ್ತಿರ್ಬಹುದು. ಅಥ್ವಾ ಇರುವೆ ಸಾಲಾಗಿ ಗಡಿಬಿಡಿಯಿಂದ ಹೋಗ್ತಿರ್ಬಹುದು. ಇಲ್ದಿದ್ರೆ ಜೋರಾಗಿ ಮಳೆ ಬರ್ತಿರ್ಬಹುದು. ಅದೇನೇ ಇದ್ರೂ, ಕಾಫಿ ಹೀರ್ತಾ ಕಿಟಕಿಯಾಚೆ ನೋಡೋದ್ರಲ್ಲಿ ತುಂಬಾ ಸುಖ ಇದೆ ಕಣ್ರೀ. ಸಮಯ ಹೋಗಿದ್ದೇ ಗೊತ್ತಾಗಲ್ಲ. ಟ್ರೈ ಮಾಡಿ ನೋಡಿ.

ಮೂಲ

5. ಒಂದು ಲಾಂಗ್ ಡ್ರೈವ್ ಹೋಗಿ

ಒಬ್ರೇ ಹೋಗೋದು ಇಷ್ಟ ಆದ್ರೆ ಒಬ್ರೇ ಹೋಗ್ಬಹುದು. ಅಥ್ವಾ ಯಾರನ್ನಾದ್ರೂ ಜೊತೆಗೆ ಕರ್ಕೊಂಡ್ರೂ ಅಡ್ಡಿ ಇಲ್ಲ, ಎಲ್ಲಾದ್ರೂ ದೂರ ಒಂದು ಡ್ರೈವ್ ಹೋಗ್ಬನ್ನಿ. ನಿಮ್ಮ ಫ್ರೆಂಡ್ ಜೊತೆ ಮಾತಾಡ್ತ, ಡ್ರೈವ್ ಮಾಡ್ತ…  ಫೋನ್ ಕೈಗೆತ್ಕೊಳ್ಳೋಕೆ ಸಮಯಾನೇ ಇರಲ್ಲ.

6. ನಿಮ್ ಬೀದಿಲಿರೋ ಮಕ್ಕಳ್ನ ಗುಂಪು ಕಟ್ಕೊಂಡು ಕ್ರಿಕೆಟ್ ಆಡಿ

ಗಲ್ಲಿ ಕ್ರಿಕೆಟ್ ಮಜಾನೇ ಬೇರೆ ಅಲ್ವಾ? ಯಾರ್ದೋ ಕಾರಿಗೆ ಹೊಡೆದ್ರೆ ಔಟು, ಆಚೆ ಬೀದಿಗೆ ಬಿದ್ರೂ ಔಟು – ನಿಮ್ನಿಮ್ದೇ ನಿಯಮಗಳು. ಫೋನ್ ಮನೇಲೇ ಬಿಟ್ಟು ಒಮ್ಮೆ ಒಂದ್ಸರ್ತಿ ಆಡ್ನೋಡಿ.

ಮೂಲ

7. ನಿಮ್ಮ ಫೇವರೇಟ್ ಧಾರಾವಾಹಿಯ ಎಲ್ಲಾ ಎಪಿಸೋಡ್ನೂ ಒಂದೇ ಏಟಿಗೆ ನೋಡಿ

ಟೀವಿ ಸೀರೀಸ್ ನೋಡೋ ಆಸಕ್ತಿ ಇದ್ರೆ ಒಂದೇ ಏಟಿಗೆ ಎಲ್ಲಾ ಎಪಿಸೋಡ್ ನೋಡಿ. ಫೋನ್ ನೆನಪಾಗಲ್ಲ. ಸಖತ್ ಖುಷಿ ಕೊಡತ್ತೆ. ಈಗಿನ ಇಂಟರ್ನೆಟ್ ಮತ್ತು ಆಪ್ ಯುಗದಲ್ಲಿ ಬಹುತೇಕ ಎಲ್ಲಾ ಧಾರಾವಾಹಿಗಳೂ ನೆಟ್ಟಲ್ಲಿ ಸಿಕ್ಕತ್ವೆ. ಯೋಚ್ನೇನೇ ಇಲ್ಲ.

8. ಅಡಿಗೆ ಮಾಡಕ್ ಟ್ರೈ ಮಾಡಿ

ಅಡಿಗೆ ಗೊತ್ತಿದ್ರೆ ನಿಮ್ಗಿಷ್ಟವಾಗಿರೋದೇನಾದ್ರೂ ಮಾಡಿ ತಿಂದು, ಹಂಚಿ ಖುಷಿ ಪಡಿ. ಅಡಿಗೆ ಗೊತ್ತಿಲ್ದೆ ಇದ್ರೆ ಇನ್ನೂ ಒಳ್ಳೇದು! ಯಾಕಂದ್ರೆ ಗೊತ್ತಿಲ್ಲ ಅನ್ನೋ ಟೆನ್ಷನ್ನಲ್ಲಿ, ಸರಿಯಾಗ್ ಮಾಡ್ಬೇಕು ಅನ್ನೋ ಆತಂಕದಲ್ಲಿ ಫೋನ್ ವಿಷ್ಯ ಮರ್ತೇ ಹೋಗತ್ತೆ. ಮುಂಚೇನೇ ರೆಸಿಪಿ ನೋಟ್ ಮಾಡಿಟ್ಕೊಳಿ. ಇಲ್ಲಾ ಅಂದ್ರೆ ತಿರ್ಗಾ ಫೋನ್ ಕೈಯ್ಯಲ್ಲಿ ಹಿಡ್ಕೋಬೇಕಾಗತ್ತೆ.

ಮೂಲ

9. ಎತ್ಕೊಂಡ್ರೆ ಕೆಳಗಿಡಕಾಗ್ದೆ ಇರೋ ಅಂಥಾ ಪುಸ್ತಕ ಓದಿ

ಫೋನ್ ನೋಡ್ತಾ ಕೂರೋ ಬದ್ಲು ಪುಸ್ತಕ ನೋಡ್ತಾ ಕೂರಿ. ಅಭ್ಯಾಸ ಇಲ್ದಿದ್ರೂ ಅಭ್ಯಾಸ ಬೆಳೆಸ್ಕೊಳಿ. ಹೋಗ್ತಾ ಹೋಗ್ತಾ ಇಷ್ಟ ಆಗೇ ಆಗುತ್ತೆ.

10. ಗಂಟೆಗಟ್ಟಲೆ ಬಾತ್ರೂಮಲ್ಲಿ ಚನ್ನಾಗ್ ಸ್ನಾನ ಮಾಡಿ

ಇವತ್ತು ಮನುಷ್ಯನಿಗೆ ಏಕಾಂತ ಬೇಕು ಅಂದ್ರೆ ಬಾತ್ರೂಂಗೆ ಹೋಗ್ಬೇಕಷ್ಟೆ. ಅದೊಂದೇ ಜಾಗದಲ್ಲಿ ಅವ್ನಿಗೆ ಸ್ವಲ್ಪನಾದ್ರೂ ನೆಮ್ಮದಿ ಸಿಗೋದು :-D. ಒಳ್ಳೇ ಘಮಘಮಿಸೋ ಸೋಪ್ ಕೊಂಡ್ಕೊಂಡು ಗಂಟೆಗಟ್ಟಲೆ ಸ್ನಾನ ಮಾಡಿ. ಇಲ್ಲಾ ಸುಮ್ನೆ ಶವರ್ ಕೆಳಗೆ ನಿಲ್ಲಿ. ಫೋನ್ ನೆನಪಾದ್ರೆ ಕೇಳಿ!

ಮೂಲ

11. ಮನೆಯೋರ್ ಜೊತೆ ಮಾತಾಡಿ

ನಿಮ್ ಅಪ್ಪ-ಅಮ್ಮ ನಿಮ್ ಜೊತೆಗೇ ಇದ್ರೆ ದಿವ್ಸ ಮಾತಾಡೋದೇನಿರುತ್ತೆ ಅಂತ ಮಾತಾಡಿರಲ್ಲ. ಇನ್ನು ಬೇರೆ ಊರಲ್ಲಿ ಇದ್ರೆ, ಫೋನಲ್ಲೇನೂ ಜಾಸ್ತಿ ಮಾತಾಡಕ್ಕಾಗಿರಲ್ಲ. ಎಷ್ಟೋ ಹುಡುಗ್ರಿಗೆ ಅಪ್ಪನ ಹತ್ತಿರ, ‘ಅಲ್ಲಿ ಮಳೆ ಬರ್ತಿದ್ಯಾ?’, ಅನ್ನೋದು ಬಿಟ್ಟು ಬೇರೇನ್ ಮಾತಾಡೋದು ಅಂತ ಗೊತ್ತೇ ಇರಲ್ಲ. ಆದ್ರೂ ಎಷ್ಟೇ ಕಷ್ಟ ಅನ್ಸಿದ್ರೂ ಒಮ್ಮೆ ಮಾತಾಡಿ ನೋಡಿ. ಖುಷಿಯಾಗತ್ತೆ.

ಫೋನಿಂದ ಎಷ್ಟೋ ಪ್ರಯೋಜನ ಇದೆ… ಕರೆಕ್ಟು. ಆದ್ರೆ ಕೆಲವು ಸಲ ನಾವು ಅತಿಯಾಗಿ ಅದರಲ್ಲಿ ಮುಳುಗಿ ಹೋಗ್ತೀವಿ. ಸ್ವಲ್ಪ ಹುಷಾರಾಗಿ ಉಪ್ಯೋಗ್ಸಿದ್ರೆ ಎಲ್ರಿಗೂ ಒಳ್ಳೇದು.ಏನಂತೀರ?