yogesh-autodr-bangaloremirror.jpgbangaloremirror

ಆಟೋ ಡ್ರೈವರ್ಗಳು ಅಂದ್ರೆ ಕೆಲವರಿಗೆ ಅಲರ್ಜಿ. ಅವರು ಸರಿಯಿಲ್ಲ ಅನ್ನೋ ಅನಸಿಕೆ ಹಲವರಿಗೆ.

ಆದರೆ ಆಟೋ ಓಡಿಸೋದು ಒಂದು ಕೆಲಸ, ಅಷ್ಟೆ. ಅದನ್ನ ಮಾಡೋನೂ ಮನುಷ್ಯನೇ. ಅವನಿಗೂ ಮನುಷ್ಯತ್ವ ಇರುತ್ತೆ, ಒಳ್ಳೇ ಗುಣಗಳು ಇರುತ್ತವೆ ಅಂತ ನೆನಪಿಸುವ ಒಂದು ಘಟನೆ ಮೊನ್ನೆ ಬುಧವಾರ ಬೆಂಗಳೂರಿನ ಚಿಕ್ಕ ಬಾಣಾವರದ ಸಿಡೇದಹಳ್ಳಿಯಲ್ಲಿ ನಡೆದಿದೆ.

ಮಿಥುನ್ ಕುಮಾರ್ ಅನ್ನೋರು ಡ್ರೈವರ್ ಕೆ.ಎಸ್.ಯೋಗೇಶ್ (ಚಿತ್ರದಲ್ಲಿ) ಆಟೋನಲ್ಲಿ ತಮ್ಮ 1 ಲಕ್ಷ ಬೆಲೆ ಬಾಳುವ Macbook Air ಮರೆತು ಹೊರಟು ಹೋಗಿದ್ದಾರೆ.

ಯಾರು ಮರೆತಿದ್ದು ಅಂತ ಯೋಗೇಶ್ಗೆ ಗೊತ್ತಾಗದೆ ಹತ್ತಿರದಲ್ಲಿದ್ದ ಪೋಲೀಸ್ ಕಮಿಷನರ್ ಆಫೀಸಿಗೆ ಹೋಗಿ ಒಪ್ಪಿಸಿದಾರೆ. ಪೋಲೀಸರು ಲ್ಯಾಪ್ಟಾಪ್ ಬಾಗ್ ಬಿಚ್ಚಿದಾಗ ಒಳಗೆ ಮಿಥುನ್ ಹೆಂಡತಿಯ ಮೆಡಿಕಲ್ ಫೈಲ್ಸ್ ಸಿಕ್ಕವಂತೆ. ಅಲ್ಲಿಂದ ಮಿಥುನ್ ಫೋನ್ ನಂಬರ್ರೂ ಗೊತ್ತಾಗಿ ‘ಬಂದು ಲ್ಯಾಪ್ಟಪ್ ತೊಗೊಳಿ’ ಅಂತ ಹೇಳಿದಾರೆ.

ಬಂದು ಇಸ್ಕೊಂಡ ಮಿಥುನ್ಗೆ ಸಂತೋಷದಲ್ಲಿ ಇದೆಲ್ಲ ನಡೀತಿದೆ ಅಂತ ನಂಬಕ್ಕೇ ಆಗಲಿಲ್ಲವಂತೆ. ಅದರಲ್ಲಿ ಬ್ಯಾಂಕ್ ಅಕೌಂಟ್ ಮಾಹಿತಿ, ಎಲ್.ಐ.ಸಿ. ಬಾಂಡು, 10 ವರ್ಷದ ಪ್ರಾಜೆಕ್ಟ್ ಕೆಲಸ, ಎಲ್ಲಾ ಇತ್ತು. ವಾಪಸ್ ಸಿಕ್ಕಾಗ ಖುಶಿ ಆಗದೆ ಇರುತ್ತಾ?

ಯೋಗೇಶ್ ಬಹಳ ಪ್ರಾಮಾಣಿಕ ಡ್ರೈವರ್ ಅಂತ ತಮ್ಮ ಖುಷಿಗೆ ಮಿಥುನ್ ದುಡ್ಡು ಕೊಡಕ್ಕೆ ಮುಂದೆ ಬಂದಾಗ ಯೋಗೇಶ್ ಒಪ್ಪಲಿಲ್ಲವಂತೆ. ಆಮೇಲೆ ಬಹಳ ಒತ್ತಾಯ ಮಾಡಿ 2,000 ರೂ ಇಸ್ಕೊಳ್ಳೇ ಬೇಕು ಅಂದಿದ್ದಾರೆ. ಆಗ ಯೋಗೇಶ್ ಇಸ್ಕೊಂಡಿದಾರೆ ಅಂತ ಬ್ಯಾಂಗಲೋರ್ ಮಿರರ್ ವರದಿ ಮಾಡಿದೆ.

ಒಟ್ಟಿನಲ್ಲಿ ಈ ಘಟನೆಯಿಂದ ಸಮಾಜದಲ್ಲಿ ಇರೋರೆಲ್ಲ ಕಳ್ಳರಲ್ಲ ಅನ್ನೋ ನೆಮ್ಮದಿ. ಯೋಗೇಶು, ಆ ಪೋಲೀಸರು, ಎಲ್ಲರೂ ಚೆನ್ನಾಗಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಒಂದು ಸೆಲ್ಯೂಟ್!