https://www.focuzstudios.in

ಮದುವೆ ಅಂದ್ರೇನೆ ಏನೋ ಒಂದು ರೀತಿ ಭಯ, ಆತಂಕ, ಒತ್ತಾಯ ಎಲ್ಲ ಇರುತ್ತೆ. ನಮ್ಮ ಕೈ ಹಿಡಿದು ನಮ್ಮ  ಜೊತೆಗಾರರಾಗಿ ಇರೋವ್ರ ಬಗ್ಗೆ ಸಾಕಷ್ಟು ಕನಸು ಕಂಡಿರ್ತೀವಿ. ಅವರು ನಮಗಾಗೇ ಹುಟ್ಟಿರೋದು, ನಮ್ಮ ಬೇಕು ಬೇಡ ಅರ್ಥ ಮಾಡ್ಕೊಂಡು, ಹೊಂದಿಕೊಂಡು ಎಲ್ಲ ವಿಷಯದಲ್ಲೂ ನಮಗೆ ಒತ್ತಾಸೆಯಾಗಿ ಇರ್ತಾರೆ ಅಂತ ಅಂದುಕೊಂಡಿರ್ತೀವಿ. ತುಂಬಾ ಜನ ಅರೇಂಜ್ಡ್ ಮ್ಯಾರೇಜ್ ಅಂದ್ರೆ ನಮಗೆ ನಮ್ಮ ಮನಸ್ಸಿಗೆ ಹಿಡಿಸೋವ್ರನ್ನ ಹುಡುಕಿಕೊಳ್ಳೋ ಸ್ವಾತಂತ್ರ್ಯ ಇಲ್ಲ ಅಂತ ವಾದ ಮಾಡ್ತಾರೆ. ಆದ್ರೆ ಅರೇಂಜ್ಡ್ ಮ್ಯಾರೇಜ್ ನಿಮಗೆ ಹೆಚ್ಚು ತೃಪ್ತಿ ಕೊಡುತ್ತೆ ಅನ್ನೋದನ್ನ ತಿಳ್ಕೊಂಡ್ರೆ ನಿಮಗೆ ಆಶ್ಚರ್ಯ ಆಗೋದು ಗ್ಯಾರಂಟಿ.

ನಿಮ್ಮ ಮನೆಯವರಲ್ಲ ಒಂದಾಗಿ, ಖುಷಿ ಖುಶಿಯಾಗಿ ಓಡಾಡ್ಕೊಂಡು ಮಾಡೋ ಈ ಮದುವೆ, ಒಬ್ಬ ಅಪರಿಚಿತರ ಕೈ ಹಿಡಿದು ಜೀವನ ನಡೆಸೋದಕ್ಕೆ ಶುರು ಮಾಡೋದೇ ಒಂದು ರೀತಿಯಲ್ಲಿ ನಿಮಗೆ ರೋಮಾಂಚನ ಅನ್ನಿಸಬಹುದು. ಈ 12 ವಿಷಯಗಳು ಅರೇಂಜ್ಡ್ ಮ್ಯಾರೇಜ್ ನೀವು ಅಂದುಕೊಂಡಿರೋದಕ್ಕಿಂತ ಚೆನ್ನಾಗಿರುತ್ತೆ ಅನ್ನೋದನ್ನ ತೋರ್ಸುತ್ತೆ.

 1. ಮನೆಯವರನ್ನೆಲ್ಲ ಹೇಗಪ್ಪಾ ಒಪ್ಪಿಸೋದು ಅನ್ನೋ ತಲೆನೋವಿರಲ್ಲ, ಯಾಕಂದ್ರೆ ಮನೆಯವರೇ ನೋಡಿ ಒಪ್ಪಿಕೊಂಡಿರ್ತಾರೆ.

ಅತೀ ಮುಖ್ಯವಾದ ಲಾಭ ಅಂದ್ರೆ ನಿಮ್ಮ ತಂದೆತಾಯಿಯರು ಹಾಗೆ ಮನೆಯವರ ಒಪ್ಪಿಗೆ ಇರುತ್ತೆ. ನಮ್ಮ ತಂದೆ ತಾಯಿ ಒಪ್ಕೋತಾರೋ ಇಲ್ವೋ, ನಮ್ಮ ಮನೆಗೆ ಅಡ್ಜಸ್ಟ್ ಆಗ್ತಾರೋ ಇಲ್ವೋ ಅನ್ನೋ ಭಯ, ಆತಂಕ ಕಮ್ಮಿ ಆಗುತ್ತೆ. ಬದಲಿಗೆ ನಿಮ್ಮ ತಂದೆ ತಾಯಿಯರಿಗೆ ಅವರು ನಿಮಗೆ ಅಂತ ಹುಡುಕಿರೋ ಹುಡುಗ / ಹುಡುಗಿ ನಿಮಗೆ ಇಷ್ಟ ಆಗುತ್ತೋ ಇಲ್ವೋ ಅನ್ನೋ ಯೋಚನೆ ಇರುತ್ತೆ. ನಿಮ್ಮನ್ನ ಅರ್ಥ ಮಾಡ್ಕೊಂಡು ನಿಮ್ಮ ತಂದೆ ತಾಯಿಯರು ನಿಮಗೆ ಅಂತ ಬಾಳ ಸಂಗಾತಿ ಹುಡುಕೋದು ಅಂದ್ರೆ ಅದಕ್ಕಿಂತ ಅದ್ಭುತವಾದ ವಿಷಯ ಬೇರೆ ಏನಿದೆ ಹೇಳಿ.

 1. ಈ ಸಂಬಂಧ ಬರಿ ನಿಮ್ಮಿಬ್ಬರದ್ದಲ್ಲ, ಎರಡೂ ಕುಟುಂಬಗಳದ್ದೂ.

ಈ ಸಂಭಂದಕ್ಕೆ ನಿಮ್ಮಷ್ಟೇ ನಿಮ್ಮ ಮನೆಯವರೂ ಒಪ್ಪಿರ್ತಾರೆ. ಈ ಸಂಭಂದ ಬರಿ ನಿಮ್ಮ ಹಾಗೂ ನಿಮ್ಮ ಸಂಗಾತಿ ಮಧ್ಯದ್ದಲ್ಲ, ನಿಮ್ಮಿಬ್ಬರ ಮನೆಯವರದು. ಎರಡೂ ಕಡೆಯವರೂ ಒಂದಾಗಬೇಕು. ಎಷ್ಟೋ ಸಂದರ್ಭದಲ್ಲಿ ನಿಮಗಿಂತ ನಿಮ್ಮ ಸಂಭಂದಿಕರೇ ನಿಮ್ಮ ಮದುವೆ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿರ್ತಾರೆ, ಯಾಕೆ ಅಂದ್ರೆ ಅವರಿಗೂ ಇದು ಅವರ ಜವಾಬ್ದಾರಿ ಅಂತ ಅನ್ಸಿರುತ್ತೆ. ಹಾಗಾಗೇ ಸುಂಸುಮ್ನೆ ನೀವು ನಿಮ್ಮ ಆಯ್ಕೆ ಸರಿಯಿಲ್ಲ ಅಂತ ನಿಮಗೆ ನೀವೇ ಬೈಕೋಳೋದೂ ಬೇಕಿಲ್ಲ, ಒಬ್ಬರಿಗೊಬ್ಬರು ಅರ್ಥ ಮಾಡ್ಕೊಂಡು ಅನುಸರಿಸ್ಕೊಂಡು ಹೋಗೋ ಪ್ರಯತ್ನ ಮಾಡ್ತೀರಿ. 

 1. ಜೀವನದ ಹೊಸ ಅಧ್ಯಾಯ ಶುರು ಮಾಡಕ್ಕೆ ನಿಮ್ಮ ಮುಂದೆ ಇರೋದು ಏನೂ ಬರೆಯದ ಬಿಳಿ ಹಾಳೆ, ಹೊಸ ಜೀವನ ನಿಮಗೆ ಬೇಕಾದ ಹಾಗೆ ರೂಪಿಸಿಕೊಳ್ಳೋದಕ್ಕೆ ಒಳ್ಳೆ ಅವಕಾಶ ಇದು.

ಕೆಲವು ಆತುರದ, ತಪ್ಪು ನಿರ್ಧಾರಗಳು ನಿಮ್ಮ ಜೀವನದಲ್ಲಿ ಆಗಿರಬಹುದು, ಪ್ರೀತಿಸಿ ಬೇರೆ ಆಗಿರೋದು, ಒಂದೆರಡು ಬ್ರೇಕ್ ಅಪ್ ಇರಬಹುದು, ಇದೆಲ್ಲ ಎಲ್ಲರ ಜೀವನದಲ್ಲೂ ಆಗಿರುತ್ತೆ. ಪಟ್ಟಿ ಸಣ್ಣದೋ ದೊಡ್ಡದೋ ಎಲ್ಲರ ಹತ್ರಾನೂ ಒಂದಲ್ಲ ಒಂದು ಈ ತರದ ಕಾಡೋ ನೆನಪು ಇದ್ದೆ ಇರುತ್ತೆ. ಅರೇಂಜ್ಡ್ ಮ್ಯಾರೇಜ್ ನಿಮಗೆ ಹಳೇದನ್ನ ಮರೆತು ಹೊಸದಾಗಿ ಜೀವನ ಶುರು ಮಾಡೋದಕ್ಕೆ ಅವಕಾಶ ಕೊಡುತ್ತೆ. ನಿಮ್ಮ ಸಂಗಾತಿ ನಿಮ್ಮ ಪಕ್ಕದಲ್ಲೇ  ಇರೋದ್ರಿಂದ ಹೆಚ್ಚು ತಲೆ ಕೆಡಿಸ್ಕೊಳೋ ಅವಶ್ಯಕತೆ ಇಲ್ಲ. ನಿಮ್ಮ ಹಾಗೆ ಅವರೂ ತಮ್ಮ ಪಟ್ಟಿ, ಆಸೆ, ಆಕಾಂಕ್ಷೆಗಳ ಜೊತೆ ಕಾಯ್ತಾ ಇರ್ತಾರೆ, ಇಬ್ಬರೂ ಅರ್ಥ ಮಾಡ್ಕೊಂಡು ಮುಂದುವರಿಬೇಕು ಅಷ್ಟೇ.

 1. ನಿಮ್ಮ ಜವಾಬ್ದಾರಿ ಏನು ಅಂತ ಗೊತ್ತಿರುತ್ತೆ, ಸಂಬಂಧ ಗಟ್ಟಿಯಾಗಿರುತ್ತೆ.

ಎಷ್ಟೋಸಲ ಲವ್ ಮ್ಯಾರೇಜ್ ಆ ಕ್ಷಣದ ತೀರ್ಮಾನ ಆಗಿರುತ್ತೆ, ಅಥವಾ ಆ ಸಂದರ್ಭಕ್ಕೆ ತಕ್ಕ ಹಾಗೆ ಮದುವೆಗೆ ಒಪ್ಪಿಕೊಂಡು ಮದುವೆ ಆಗಿರ್ತಾರೆ. ಕೆಲವೊಮ್ಮೆ, ಅಭದ್ರತೆ, ಹತಾಶ ಪ್ರೀತಿ, ನಿರಾಶೆಯ ಭಯ, ಹಾರ್ಮೋನ್ಗಳ ಬದಲಾವಣೆ, ನಮ್ಮ ವೃತ್ತಿ ಜೀವನಕ್ಕಾಗಿ, ಹೀಗೆ ಹಲವಾರು ಕಾರಣಗಳಿಗೆ ನಾವು ಲವ್ ಮ್ಯಾರೇಜ್ ಮಾಡ್ಕೋತೀವಿ. ಆದ್ರೆ ಅರೇಂಜ್ಡ್ ಮ್ಯಾರೇಜ್ ಲೆಕ್ಕಾಚಾರಾನೆ ಬೇರೆ. ಯಾವಾಗ ನೀವು ನಿಮ್ಮ ಕುಟುಂಬದವರಿಂದ ದೂರ ಇದ್ದು, ನಿಮ್ಮದೇ ಆದ ಒಂದು ಸಂಸಾರ ಶುರು ಮಾಡಿ ಅದರ ಜವಾಬ್ದಾರಿ ತೊಗೊಳೋ ಶಕ್ತಿ ನಿಮಗೆ ಇದೆ ಅಂತ ಗೊತ್ತಾದ್ಮೇಲೆ ನಿಮಗೆ ಸರಿಯಾದ ಸಂಗಾತಿ ನೋಡಿ ಮದುವೆ ಮಾಡಕ್ಕೆ ಮುಂದಾಗೋದು.

 1. ಇದು ಬರಿ ನಿಮ್ಮಿಬ್ಬರ ಮದುವೆ ಅಲ್ಲ, ಎರಡೂ ಕುಟುಂಬಗಳ ಮದುವೆ.

ಮದುವೆ ಆದಾಗ ಅದು ಬರೀ ನಿಮ್ಮ ಸಂಗಾತಿ ಜೊತೆ ಮಾತ್ರ ಅಲ್ಲ, ಅದು ಎರಡು ಕುಟುಂಬಗಳ ಮದುವೆ. ಇಲ್ಲಿಂದ ಮುಂದೆ ನಿಮಗೆ 2 ತಂದೆ ತಾಯಂದಿರು, ಅಣ್ಣ ತಮ್ಮ, ಅಕ್ಕ ತಂಗಿಯರು ಹೆಚ್ಚಾಗ್ತಾರೆ. ಎಲ್ಲರೂ ನಿಮ್ಮ  ಜೊತೆ ಇದ್ದು ನಿಮ್ಮ ಸುಖ ದುಃಖಗಳಲ್ಲಿ ನಿಮ್ಮ ಜೊತೆ ಇರ್ತಾರೆ. ಮುಖ್ಯವಾಗಿ ಇಬ್ಬಿಬ್ಬರು ತಂದೆತಾಯಂದಿರು ನಿಮಗೆ ಸಂಸಾರ ನಿಭಾಯಿಸೋದಕ್ಕೆ ಸಹಾಯ ಮಾಡಕ್ಕೆ, ಹೇಳಿ ಕೊಡೋದಕ್ಕೆ ನಿಮ್ಮ ಜೊತೆ ಇರ್ತಾರೆ. ನಿಮಗೆ ಗೊತ್ತೇ ಇರದ ಒಂದು ಕುಟುಂಬ ನಿಮ್ಮನ್ನ ಮನಃಪೂರ್ವಕವಾಗಿ ಒಪ್ಪಿಕೊಂಡು ನಿಮ್ಮನ್ನ ತಮ್ಮೊಳಗೆ ಒಬ್ಬರಾಗಿ ಮಾಡಿಕೊಳ್ಳೋದಕ್ಕೆ ರೆಡಿ ಆಗಿರ್ರ್ತಾರೆ.

 1. ಸುಖ ದುಃಖ ಏನೇ ಇರ್ಲಿ ನಿಮ್ಮ ಮನೆಯವರೆಲ್ಲ ನಿಮ್ಮ ಜೊತೆಗಿರ್ತಾರೆ. ಒತ್ತಡ ಸುಲಭವಾಗಿ ನಿಭಾಯಿಸಬಹುದು.

ತುಂಬಾ ಜನ ಅರೇಂಜ್ಡ್ ಮ್ಯಾರೇಜ್ ಅಂದ್ರೆ ಒಂದು ರೀತಿ ಶಿಕ್ಷೆ ಇದ್ದ ಹಾಗೆ, ಬಲವಂತದಿಂದ ಮಾಡ್ತಾರೆ, ಒಂದು ರೀತಿಲಿ ಜನುಮ ಜನುಮದ ನಂಟು, ತುಂಬಾನೇ ಸೀರಿಯಸ್ ವಿಷಯ ಅಂತೆಲ್ಲ ಹೇಳ್ತಾರೆ. ಆದ್ರೆ ಇಲ್ಲಿ ಕುಟುಂಬದವರ ಸಮ್ಮುಖದಲ್ಲಿ, ಒಪ್ಪಿಗೆಯಿಂದ ಮದುವೆ ಆಗೋದ್ರಿಂದ ಸಂಸಾರಕ್ಕೆ, ವೈವಾಹಿಕ ಜೀವನಕ್ಕೆ ಹೊಂದಿಕೊಂಡು ಒತ್ತಡ ಸರಿಯಾದ ರೀತಿಯಲ್ಲಿ ನಿಭಾಯಿಸೋದಕ್ಕೆ ಸುಲಭ ಆಗುತ್ತೆ.

ನಿಮಗೆ ಸಮಾಧಾನ ಮಾಡಕ್ಕೆ, ಅಗತ್ಯ ಇದ್ದಾಗ ಹೆಗಲು ಕೊಡೋದಕ್ಕೆ, ನಿಮ್ಮ ಮಕ್ಕಳನ್ನ ಬೆಳೆಸೋದಕ್ಕೆ, ಅವರಿಗೆ ಆಚಾರ ವಿಚಾರ ಕಳಿಸೋದಕ್ಕೆ ಎಲ್ಲದಕ್ಕೂ ನಿಮ್ಮ ಜೊತೇಲೆ ಇರ್ತಾರೆ.

 1. ನಮ್ಮ ಸಂಸ್ಕೃತಿ, ಆಚಾರ ವಿಚಾರದ ವಿಷಯದಲ್ಲಿ ಭಿನ್ನಾಭಿಪ್ರಾಯ, ಸಮಸ್ಯೆ ಆಗುತ್ತೆ ಅನ್ನೋ ಭಯ ಇರಲ್ಲ.

ನಮ್ಮ ತಂದೆತಾಯಿಯರೇ ನಮಗೆ ಸರಿಯಾದ ಸಂಗತಿ ಹುಡುಕೋದ್ರಿಂದ ನಮಗೆ ಎಲ್ಲ ರೀತಿಲೂ ಸರಿಹೊಂದೋ ಸಂಭಂದಾನೆ ಹುಡುಕಿರ್ತಾರೆ. ತಮಗೆ ಗೊತ್ತಿರೋವ್ರು, ಗುರುತು ಪರಿಚಯ ಇರೋವ್ರು ಹಾಗೆ ಒಂದೇ ಸಮುದಾಯದಲ್ಲಿ ಹುಡುಕ್ತಾರೆ. ಹಾಗಾಗೇ ನಿಮ್ಮಲ್ಲಿ ಯಾವುದೇ ಆಚಾರ ವಿಚಾರಗಳ ಭಿನ್ನಾಭಿಪ್ರಾಯ ಇರೋದಿಲ್ಲ. ಸುಲಭವಾಗಿ ಹೊಂದಿಕೊಳ್ಳಬಹುದು. ಜೊತೆಗೆ  ಯಾವುದೇ ಬದಲಾವಣೆ ಮಾಡ್ಕೋಬೇಕಾಗಿಲ್ಲ.

 1. ಹುಡುಗ / ಹುಡುಗಿ ಬಗ್ಗೆ ವಿಚಾರಿಸಿ ತಿಳ್ಕೊಬೇಕು, ಮನೆತನದ ಬಗ್ಗೆ ಪರಿಶೀಲಿಸಿ, ತನಿಖೆ ಮಾಡಿ ತಿಳ್ಕೊಬೇಕು ಅನ್ನೋ ತಲೆನೋವಿರಲ್ಲ.

ನಾವು ಯಾರನ್ನಾದ್ರೂ ಪ್ರೀತಿ ಮಾಡ್ತಿದ್ರೆ, ಅವರ ಜೊತೆ ಸುತ್ತಾಡಿ ಅವರು ನಮಗೆ ನಮ್ಮ ಮನೆಗೆ ಸರಿ ಹೋಗ್ತಾರಾ ಇಲ್ವಾ ಅಂತ ತಲೆ ಕೆಡಿಸ್ಕೊಬೇಕು, ಅದೇ ಮನೆಯವರೇ ನೋಡಿ ಮಾಡಿಸೋ ಮದುವೇಲಿ ಅದು ಸರಿ ಹೊಂದುತ್ತಾ? ಇದು ಸರಿ ಹೊಂದುತ್ತಾ? ಅವರಿಗೆ ಅದು ಗೊತ್ತಿದ್ಯಾ ಇದು ಗೊತ್ತಿದ್ಯಾ? ಅಂತ ತಲೆ ಕೆಡಿಸ್ಕೊಳೋ ಅವಶ್ಯಕತೆ ಇಲ್ಲ. ತಂದೆತಾಯಂದಿರು  ವ್ಯಕ್ತಿತ್ವ,ಸಾಮರಸ್ಯ ಎಲ್ಲ  ಸರಿಹೊಂದೋ ಸಂಗಾತಿಯನ್ನೇ ಹುಡುಕೋದು. ನಮಗೆ ನಮ್ಮ ಮನೆಗೆ ಬರೋವ್ರ ಬಗ್ಗೆ ತುಂಬಾನೇ ವಿಚಾರ ಮಾಡಿ, ತನಿಖೆ, ವಿಚಾರ ಮಾಡಿ ಆಮೇಲೆ ಅವರು ಮಾಡುವೆ ಮಾಡಕ್ಕೆ ಮುಂದಾಗೋದು. ಇಬ್ಬರೂ ಸುಮ್ಮನೆ ಮಾತಾಡಿ ಮುಂದಿನ ಜೀವನ ಹೇಗೆ ನಡೆಸಬೇಕು ಅನ್ನೋದನ್ನ ಒಟ್ಟಿಗೆ ಪ್ಲಾನ್ ಮಾಡಿದ್ರೆ ಸಾಕು.

 1. ಹೊಂದಾಣಿಕೆ ಚೆನ್ನಾಗಿರುತ್ತೆ.

ಅರೇಂಜ್ಡ್ ಮ್ಯಾರೇಜ್ ಮಾಡ್ಕೊಂಡಿದ್ರೆ, ನಿಮ್ಮ ಮಕ್ಕಳು ಮುಂದೆ ನಮ್ಮ ತಂದೆ ತಾಯಿ ಜೋಡಿ ತುಂಬಾನೇ ಪರ್ಫೆಕ್ಟ್, ಒಬ್ಬರಿಗೊಬ್ಬರು ಹೇಳಿಮಾಡಿಸಿದಹಾಗೆ ಇದ್ದಾರೆ ಅಂತ ಹೇಳ್ತಾರೆ. ಅದೇನು ಹಾಗೆ ಅನ್ನೋ ಪ್ರಶ್ನೆನಾ? ಇಬ್ರೂ ಒಂದೇ ರೀತಿ ಸಾಮಾಜಿಕ ಹಾಗೆ ಆರ್ಥಿಕ ವರ್ಗದಿಂದ ಬಂದಿರೊಡ್ರಿನ ನಿಮ್ಮಲ್ಲಿ ನೈತಿಕತೆ ಮೌಲ್ಯಗಳು ಒಂದೇ ರೀತಿ ಇರುತ್ತೆ, ಹಾಗಾಗೇ ಬರಿ ಪ್ರೀತಿಯಿಂದ ಬಂಧನಕ್ಕೆ ಒಳಗಾಗಿರೋ ದಂಪತಿಗಳಿಗೆ ಹೋಲಿಸಿದ್ರೆ ನೀವು ಎಲ್ಲ ರೀತಿಲೂ ಪರಿಪೂರ್ಣರಾಗಿರ್ತೀರಿ.

 1. ಮಕ್ಕಳಿಗೆ ನಮ್ಮ ಸಂಪ್ರದಾಯ, ಆಚಾರ ವಿಚಾರದ ಬಗ್ಗೆ ಚೆನ್ನಾಗಿ ತಿಳಿಯುತ್ತೆ.

ಅರೇಂಜ್ಡ್ ಮ್ಯಾರೇಜ್ ಆಗಿರೋದ್ರಿಂದ ನಮ್ಮ ಮಕ್ಕಳಿಗೆ ನಮ್ಮ ಸಂಪ್ರದಾಯ, ಆಚಾರ ವಿಚಾರ ಎಲ್ಲ ಚೆನ್ನಾಗಿ ತಿಳಿಯುತ್ತೆ. ತಂದೆ ತಾಯಿ ಇಬ್ಬರೂ ಒಂದೇ ಹಿನ್ನಲೆಯಿಂದ ಬಂದಿರೋದ್ರಿಂದ ಅವರಿಗೆ ಸಂಪ್ರದಾಯ, ಆಚಾರ ವಿಚಾರಗ ಬಗ್ಗೆ ಯಾವುದೇ ಗೊಂದಲ ಇರಲ್ಲ. ಏನು ಆಚರಣೆ ಮಾಡಬೇಕು ಅನ್ನೋದು ಚೆನ್ನಾಗಿ ಅರ್ಥ ಆಗುತ್ತೆ. ಮಾತಾಡೋ ಭಾಷೆಗಳಲ್ಲೂ ಯಾವುದೇ ತೊಂದರೆ, ಗೊಂದಲ ಇರಲ್ಲ. ಬೇರೆ ಬೇರೆ ಜಾತಿ, ಸಂಪ್ರದಾಯದವರು ಪ್ರೀತಿ ಮದುವೆ ಆಗಿದ್ದು ಅಂತವರ ಮಕ್ಕಳಿಗೆ ಎರಡೆರಡು ಧರ್ಮ, ಭಾಷೆ , ಆಚಾರ, ವಿಚಾರದಬಗ್ಗೆ ತಿಳಿದುಕೊಳ್ಳೋದು ಒಳ್ಳೇದಲ್ವಾ ಅಂತ ನಿಮಗೆ ಅನ್ನಿಸಬಹುದು. ಅದು ನಿಜ ಆದ್ರೆ ಅವರಿಗೆ ಮುಂದೆ ಯಾವುದನ್ನ ಪಾಲಿಸಬೇಕು, ಯಾವುದು ಸರಿ, ಯಾವುದು ಸರಿಯಲ್ಲ ಅಂತೆಲ್ಲ ಅನ್ನೋ ಗೊಂದಲ ಇರುತ್ತೆ. ಯಾವುದೇ ಒಂದಕ್ಕೆ ಹೊಂದಿಕೊಳ್ಳೋದಕ್ಕೆ ಕಷ್ಟ ಆಗುತ್ತೆ.

 1. ಇಬ್ಬರಿಗೂ ಎಲ್ಲ ಹೊಸದಾಗಿರೋದ್ರಿಂದ ಸರಿಯಾಗಿ ಅರ್ಥಮಾಡಿಕೊಂಡು ಹೊಂದಿಕೊಳ್ತೀರಿ.

ಅರೇಂಜ್ಡ್ ಮ್ಯಾರೇಜ್ ಆಗಿರೋದ್ರಿಂದ ನಿಮಗೆ ಹೊಸ ಸಂಭಂದ, ಹೊಸ ಹೊಸ ಮುಖಗಳು, ಶುರುವಿನಲ್ಲಿ ಸ್ವಲ್ಪ ಅಡೆತಡೆ ಅಂತ ನನ್ನಿಸಿದ್ರೂ ನಿಮ್ಮಿಬ್ಬರಿಗೂ ಇದು ಹೊಸದಾಗಿರೋದ್ರಿಂದ ಅರ್ಥಮಾಡಿಕೊಂಡು ಮುಂದುವರಿಯೋದಕ್ಕೆ ಸಾಧ್ಯ ಆಗುತ್ತೆ.ಇಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬದಲಾದ ಸಮಯ, ಸಂದರ್ಭಕ್ಕೆ ಹೊಂದಿಕೊಳ್ಳೋದಕ್ಕೆ ಸಹಾಯ ಆಗುತ್ತೆ.

 1. ಸಂಪೂರ್ಣವಾಗಿ ಹೊಸ ವ್ಯಕ್ತಿಯನ್ನ ಕಂಡುಕೊಳ್ತೀರಿ, ಜೀವನದ ಪ್ರೀತಿಯ ಕ್ಷಣಗಳ ಪುಟಗಳನ್ನ ಬರೆಯೋದಕ್ಕೆ ಶುರು ಮಾಡ್ತೀರಿ.

ನಿಮ್ಮ ಸಂಗಾತಿ ನಿಮ್ಮ ಜೊತೆ ಇರೋದ್ರಿಂದ ನೀವು ಮಾಡೋ ಎಲ್ಲ ಕೆಲಸ, ತೆಗದುಕೊಳ್ಳೋ ತೀರ್ಮಾನ ಎಲ್ಲದರಲ್ಲೂ ನಿಮ್ಮ ಸಂಗಾತಿ ಪಾಲು ಇರುತ್ತೆ. ಜೀವನವನ್ನು ನೋಡೋ ದೃಷ್ಟಿಕೋನ ಬದಲಾಗುತ್ತೆ. ನೀವೇ ಒಬ್ಬರಿಗೊಬ್ಬರು ಸ್ನೇಹಿತ, ಸ್ಫೂರ್ತಿ ತುಂಬುವ ಜೊತೆಗಾರ, ವಿಮರ್ಶಕ, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಯಹಾಗೆ ಇರ್ತೀರಿ. ಇದು ನೀವು ಸಂಪೂರ್ಣವಾಗಿ ಒಬ್ಬ ಹೊಸ ವ್ಯಕ್ತಿಯನ್ನು ಕಂಡುಕೊಳ್ಳೋದಕ್ಕೆ ಸಹಾಯ ಮಾಡುತ್ತೆ. ಒಬ್ಬ ಹೊಸ ವ್ಯಕ್ತಿಯ ಜೊತೆ ನಿಮ್ಮ ಜೀವನದ ಪ್ರೀತಿಯ ಪುಟಗಳನ್ನ ಬರೆಯೋದಕ್ಕೆ ಶುರು ಮಾಡ್ತೀರಿ.

ಇಷ್ಟು ಲಾಭ ಇರೋ ಅರೇಂಜ್ ಮ್ಯಾರೇಜ್ ಒಳ್ಳೇದೇ ತಾನೇ?