Woman Suffering From Depression Sitting On Bed And Crying

ನಮ್ಮ ಸಮಾಜದಲ್ಲಿ ಅಳೋದನ್ನ ಒಂದು ದೌರ್ಬಲ್ಯ ಅನ್ನೋ ಥರ ನೋಡೋ ಅಭ್ಯಾಸ ಇದೆ. ಸಣ್ಣ ವಯಸ್ಸಿಂದನೂ ನಮ್ಮಲ್ಲಿ ಅಳೋದು ತಪ್ಪು ಅನ್ನೋ ಭಾವನೆ ಹುಟ್ಟಿಬಿಡೋ ಥರ ಬೆಳೀತೀವಿ. ನೀವು ಆಗಾಗ ಅಳ್ತೀರ ಅಂದ್ರೆ ಹಾಗೆ ಮಾಡ್ಬೇಡಿ ಅಂತ ಜನ ನಿಮ್ಗೆ ಹೇಳಿರ್ತಾರೆ. ತುಂಬಾ ಜನ ಅಳೋದನ್ನ ದೌರ್ಬಲ್ಯ ಅಂತ ಅನ್ಕೊಂಡ್ರೂ ನಿಮ್ಮ ಭಾವನೆಗಳನ್ನ ಹೊರಗೆ ಹಾಕೋಕೆ ಸಹಾಯ ಮಾಡುತ್ತೆ. ಅಳುವಿನಲ್ಲಿ ಒಂದು ರೀತಿ ಗುಣಪಡಿಸೋ ಶಕ್ತಿ ಇದೆ. ಈ ಶಕ್ತಿಯಿಂದ ಹೆಚ್ಚಿಗೆ ಅಳೋರು ಅಳದೆ ಇರೋರಿಗಿಂತ ಜಾಸ್ತಿ ಆರೋಗ್ಯವಾಗಿರ್ತಾರೆ.

1 . ಅಳೋರು ಭಾವನೆಗಳನ್ನ ಹೊರಹಾಕಿ ಒತ್ತಡ ಕಮ್ಮಿ ಮಾಡ್ಕೊತಾರೆ.

ತುಂಬಾ ಜನ ಅಳೋದನ್ನ ಅಶಕ್ತರು ಮಾಡೋ ಕೆಲಸ ಅನ್ಕೊಂಡ್ರೂ, ಅದ್ರಿಂದ ನಿಜವಾಗಿ ನಿಮ್ಮ ಭಾವನೆಗಳು ಹೊರಗೆ ಹೋಗ್ತಾವೆ. ಕೆಲವು ಭಾವನೆಗಳನ್ನ ನಮ್ಮಲ್ಲೇ ಇಟ್ಕೊಂಡು ಕಷ್ಟ ಪಡ್ತಾ ಇರ್ತೀವಿ. ಇದ್ರಿಂದ ನಮಗೆ ಒತ್ತಡ ಜಾಸ್ತಿ ಆಗುತ್ತೆ. ಅವಾಗವಾಗ ಅಳೋದರಿಂದ ಇಂಥ ನಕಾರಾತ್ಮಕ ಭಾವನೆಗಳು ಹೊರಗೆ ಹಾಕ್ಬೋದು; ಒತ್ತಡದಿಂದ ದೂರ ಇರಬಹುದು.

2. ಅಳೋರು ತಮ್ಮಲ್ಲಿರೋ ಸಹಾನುಭೂತಿ ತೋರ್ಸಿ ಜನರನ್ನ ಹತ್ರ ಮಾಡ್ಕೊತಾರೆ.

ಬೇರೆಯವರನ್ನ, ಅವರ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಳೋದೇ ಸಹಾನುಭೂತಿ. ಅಳೋದರಿಂದ ನಮ್ಮ ಸಹಾನುಭೂತಿ ಹೊರಗೆ ಬರುತ್ತೆ. ಒಂದು ಭಾವನಾತ್ಮಕ ಕಥೆ ಅಥವಾ ಭಾಷಣ ಕೇಳ್ತಾ ಅಳೋದು ನಿಮ್ಮ ಸಹಾನುಭೂತಿ ತೋರಿಸುತ್ತೆ. ನೀವು ಬೇರೆಯವರನ್ನ ಅರ್ಥ ಮಾಡ್ಕೊಂಡಿದೀರಿ ಅಂತ ಅವ್ರಿಗೆ ಇದರ ಮೂಲಕ ಗೊತ್ತಾಗುತ್ತೆ.

3. ಮನಸ್ಸು ಹಗೂರ ಮಾಡ್ಕೊತಾರೆ.

ಯಾವುದೋ ಕಾರಣಕ್ಕೆ ಅತ್ತಮೇಲೆ ಮನಸು ಹಗುರ ಆಯ್ತು ಅಂತ ನಿಮ್ಗೆ ಅನ್ನಿಸಿರಬಹುದು. ಇದಕ್ಕೆ ಕಾರಣ ನಮ್ಮ ಎಂಡೊಕ್ರಿನ್ ವ್ಯವಸ್ಥೆ. ನೀವು ಅತ್ತು ಮುಗಿಸಿದ ಮೇಲೆ ನಿಮ್ಮ ದೇಹದಲ್ಲಿ ಎಂಡಾರ್ಫಿನ್ಸ್ ಅನ್ನೋ ರಾಸಾಯನಿಕ ವಸ್ತು ಉತ್ಪತ್ತಿ ಆಗುತ್ತೆ. ಇದರಿಂದಲೇ ನಿಮಗೆ ಮನಸ್ಸು ಹಗುರ ಅನ್ನಿಸೋದು.

4. ಸಂಬಂಧಗಳನ್ನ ಇನ್ನಷ್ಟು ಗಟ್ಟಿ ಮಾಡ್ಕೊತಾರೆ.

ಕೆಲವು ಜನ ಅಳೋದನ್ನ ತಪ್ಪು ಅಂತ ಅನ್ಕೋತಾರೆ. ಆದರೆ ನಿಜವಾಗಿ ಅಳೋದು ನಿಮಗೆ ಜನರ ಜೊತೆ ಒಳ್ಳೆ ಸಂಬಂಧ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ. ಅಳೋದು ನಿಮ್ಮ ಭಾವನೆಗಳನ್ನ ಜನರಿಗೆ ಹೇಳೋ ಒಂದು ರೀತಿ. ನೀವು ಅಳೋದನ್ನ ನೋಡಿದ ವ್ಯಕ್ತಿಗೆ ನಿಮ್ಮ ಭಾವನೆಗಳು ಅರ್ಥ ಆಗಿರುತ್ತೆ. ಇದರಿಂದ ಅವರು ನಿಮ್ಮನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೋಳೋಕೆ ಸಾಧ್ಯ ಆಗುತ್ತೆ.

5. ಅತ್ತು ನಿಜವಾದ ವ್ಯಕ್ತಿತ್ವ ತೋರ್ಸ್ಕೊಂಡು ಧೈರ್ಯವಾಗಿ ಜೀವನ ಮಾಡ್ತಾರೆ.

ಅಳೋದು ನಿಮ್ಮನ್ನ ಅಶಕ್ತರನ್ನಾಗಿ ಮಾಡುತ್ತೆ ಅಂತ ನಮಗೆ ಸಮಾಜ ಹೇಳಿಕೊಟ್ಟಿದೆ. ಇದ್ರಿಂದಾಗಿ ಅಳೋಕೆ ಎಷ್ಟು ಧೈರ್ಯ ಬೇಕು ಅಂತ ನಾವು ಯಾರೂ ಗುರುತಿಸೋದೇ ಇಲ್ಲ. ಕಣ್ಣೀರು ಹಾಕೋದು ನಮ್ಮ ದೇಹದ ನೈಸರ್ಗಿಕ ಪ್ರತಿಕ್ರಿಯೆ. ಭಾವನೆಗಳನ್ನ ಕಣ್ಣೀರ ಮೂಲಕ ತೋರಿಸೋಕೆ ಧೈರ್ಯ ಬೇಕು.

6. ನಂಬಿಕೆ ಹೆಚ್ಚಿಸ್ಕೊತಾರೆ.

ನಿಮ್ಮ ಮನಸ್ಸಿನ ನಿಜವಾದ ಭಾವನೆಗಳು ಅಳುವಾಗ ಹೊರಬರುತ್ತೆ. ನಿಮ್ಮ ಭಾವನೆಗಳನ್ನ ಸರಿಯಾಗಿ ಕಣ್ಣೀರ ಮೂಲಕ ಹೊರಗೆ ಹಾಕಿದಾಗ ಬೇರೆಯವರಿಗೆ ನಿಮ್ಮ ಬಗ್ಗೆ ನಂಬಿಕೆ ಬೆಳೆಯುತ್ತೆ. ನೀವು ಅವರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಬಲ್ಲಿರಿ ಅಂತ ಅವರಿಗೆ ಅನ್ನಿಸುತ್ತೆ. ಇದರಿಂದ ಅವರು ನಿಮ್ಮನ್ನ ನಂಬೋದು ಸುಲಭ ಆಗುತ್ತೆ.

7. ನಕಾರಾತ್ಮಕ ಭಾವನೆ ಹೊರಹಾಕಿ ಹೊಟ್ಟೆ ತಣ್ಣಗಿಟ್ಕೊತಾರೆ

ನಿಮ್ಮ ಭಾವನೆಗಳನ್ನ ನಿಮ್ಮಲ್ಲೇ ಇಟ್ಟುಕೊಳ್ಳೋದು ನಿಮ್ಮ ದಿನನಿತ್ಯದ ಜೀವನವನ್ನ ಹಾಳು ಮಾಡಬಹುದು. ನಕಾರಾತ್ಮಕತೆ ನಿಮ್ಮಲ್ಲೇ ಉಳಿಸಿಕೊಂಡರೆ ಒಂದು ಸಲ ಅದು ಕೆಟ್ಟದಾಗಿ ಹೊರಗೆ ಬರಬಹುದು. ಆಗಾಗ ಅಳೋದರಿಂದ ನಕಾರಾತ್ಮಕ ಭಾವನೆಗಳು ಸಂಗ್ರಹ ಆಗೋದಿಲ್ಲ. ಇದರಿಂದ ನಿಮ್ಮ ಭಾವನೆಗಳನ್ನ ಸರಿಯಾಗಿ ನಿಯಂತ್ರಣ ಮಾಡೋಕೆ ಸಾಧ್ಯ ಆಗುತ್ತೆ.

8. ಅಳೋರು ಅತ್ತು ಮೈ ಕೈ ನೋವು ಕಮ್ಮಿ ಮಾಡ್ಕೊತಾರೆ

ನಾವು ಅತ್ತಾಗ ನಮ್ಮ ದೇಹದಲ್ಲಿ ಉತ್ಪತ್ತಿ ಆಗೋ ಹಾರ್ಮೋನ್ ಗಳು ಸಮಾಧಾನ ತಂದುಕೊಡುತ್ತವೆ ಅಂತ ವೈಜ್ಞಾನಿಕವಾಗಿ ಸಾಬೀತಾಗಿದೆ. ಅಳೋವಾಗ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಉತ್ಪತ್ತಿ ಆಗಿ ನೋವು ಕಮ್ಮಿ ಆಗುತ್ತೆ. ಇದರಿಂದ ಒಂದು ರೀತಿ ಸಮಾಧಾನ ಆಗುತ್ತೆ.

9. ಕಷ್ಟಗಳನ್ನ ಚೆನ್ನಾಗಿ ನಿಭಾಯಿಸ್ಕೊತಾರೆ

ಅಳೋವಾಗ ನಮ್ಮ ಪಿ.ಎನ್. ಎಸ್ ಅಂದರೆ ಪ್ಯಾರಾ-ಸಿಂಪಥೆಟಿಕ್ ನರ್ವಸ್ ಸಿಸ್ಟಮ್ ಜಾಗೃತವಾಗುತ್ತೆ. ಸಾಮಾನ್ಯವಾಗಿ ಈ ಪಿ.ಎನ್.ಎಸ್. ನಾವು ಮಲಗಿರೋವಾಗ ಕೆಲಸ ಮಾಡುತ್ತಾದರೂ ಅತ್ತಾಗಲೂ ಅದೇ ರೀತಿಯ ಸಮಾಧಾನಕರ ಪರಿಣಾಮ ಉಂಟು ಮಾಡುತ್ತೆ. ಇದು ತಕ್ಷಣ ಕಣ್ಣಿಗೆ ಕಾಣಿಸದೆ ಇದ್ರೂ ನಿಧಾನವಾಗಿ ನಿಮಗೆ ನೆಮ್ಮದಿ ಸಿಗುತ್ತೆ.

10. ಒಟ್ಟಾರೆ ಒಳ್ಳೆ ವ್ಯಕ್ತಿ ಅನ್ನಿಸ್ಕೊತಾರೆ

ಅಳೋದು ಆರೋಗ್ಯಕರ ಅಭ್ಯಾಸ ಅಲ್ಲ ಅನ್ನೋದು ಖಂಡಿತ ಸುಳ್ಳು. ಕಣ್ಣೀರು ಹಾಕಿದಾಗ ನಿಮ್ಮ ಸುತ್ತಮುತ್ತಲಿನ ಜನದ ಜೊತೆ ಒಳ್ಳೆ ಸಂಬಂಧ ಬೆಳೆಯುತ್ತೆ. ನೀವು ಅಳೋದನ್ನ ನೋಡಿದವರಿಗೆ ನಿಮ್ಮ ಬಗ್ಗೆ ನಂಬಿಕೆ, ಗೌರವ ಹುಟ್ಟುತ್ತೆ. ನೀವು ಇದರಿಂದ ಬೇರೆಯವರ ಭಾವನೆಗಳನ್ನೂ ಅರ್ಥ ಮಾಡ್ಕೋಬಹುದು ಹಾಗೂ ಅವರ ಮಾನಸಿಕ ಆರೋಗ್ಯ ಚೆನ್ನಾಗಿ ಇರೋದಕ್ಕೂ ಸಹಾಯ ಮಾಡಬಹುದು.

ಎಷ್ಟೋ ಸಮಾಜಗಳಲ್ಲಿ ಅಳೋದು ತಪ್ಪು ಅಂತ ನೋಡ್ತಾರೆ. ವಿಶೇಷವಾಗಿ ಗಂಡಸರು ಅಳಲೇಬಾರದು ಅನ್ನೋ ಧೋರಣೆ ಇದೆ. ಆದರೆ ಅಳೋದು ಒಂದು ದೌರ್ಬಲ್ಯ ಅನ್ನೋದು ಸುಳ್ಳು. ಇದರಿಂದ ಬರೀ ನಿಮ್ಮ ದೇಹಕ್ಕೆ ಒಳ್ಳೇದಾಗೋದು ಮಾತ್ರ ಅಲ್ಲ; ನಿಮ್ಮ ಸಂಬಂಧಗಳೂ ಚೆನ್ನಾಗಿರುತ್ತೆ.