ನಮ್ಮ ಮೇಲೆ ಯಾರಾದ್ರೂ ಕೋಪ ಮಾಡ್ಕೊಳೋ ಪರಿಸ್ಥಿತಿ ನಮ್ಮೆಲ್ಲರಿಗೂ ಬಂದಿರುತ್ತೆ. ನಿಮ್ಮ ಸಂಗಾತಿ ಆಗಿರಬಹುದು, ನಿಮ್ಮ ಗೆಳೆಯರಾಗಿರಬಹುದು, ನಿಮ್ಮ ಜೊತೆ ಕೆಲಸ ಮಾಡೋರು ಆಗಿರಬಹುದು ಅಥವಾ ಅಪರಿಚಿತರೂ ನಿಮ್ಮ ಮೇಲೆ ಕೋಪ ಮಾಡ್ಕೋಬಹುದು. ನೀವು ಎಲ್ಲರ ಜೊತೆ ಚೆನ್ನಾಗಿ ಇರೋಕೆ ಇಷ್ಟ ಪಡೋರಾಗಿದ್ರೆ ನಿಮಗೆ ಈ ಸನ್ನಿವೇಶಗಳು ಕಷ್ಟ ಆಗಬಹುದು. ನಿಮಗೆ ಸಮಸ್ಯೆ ಬಗೆಹರಿಸೋಕೆ ಇಷ್ಟ ಇರುತ್ತೆ. ಆದರೆ ನಿಮ್ಮ ಮೇಲೆ ಕೋಪ ಮಾಡ್ಕೊಂಡಿರೋರು ತಕ್ಷಣ ನಿಮ್ಮ ಜೊತೆ ಚೆನ್ನಾಗಿ ಮಾತಾಡೋ ಥರ ಮಾಡೋದು ಹೇಗೆ?

ಇಲ್ಲಿದೆ ನಾಲ್ಕು ವಿಧಾನ…

ಎಲ್ಲಾ ಪರಿಸ್ಥಿತಿಗಳೂ ಒಂದೇ ಥರ ಇರೋದಿಲ್ಲ. ಆದ್ರೆ, ಹಲವಾರು ಸಂದರ್ಭಗಳಿಗೆ ಈ ಸಲಹೆಗಳು ಕೆಲಸಕ್ಕೆ ಬರುತ್ತೆ.

1 . ಅವರ ಕೋಪ ಮಾಡ್ಕೊಂಡ್ರೂ ಅಂತ ಪ್ರತಿದಾಳಿ ಮಾಡ್ಬೇಡಿ

ನಿಮಗೆ ಎಷ್ಟೇ ಕೋಪ ಬಂದ್ರೂ ಅವರ ಮೇಲೆ ರೇಗಬೇಡಿ, ಕೂಗಾಡಬೇಡಿ. ಇದರಿಂದ ಅವರಿಗೆ ಇನ್ನು ಜಾಸ್ತಿ ಕೋಪ ಬರುತ್ತೆ. ಟ್ರಾಫಿಕ್ ನಲ್ಲಿ ನಿಮ್ಮನ್ನ ಹಿಂದೆ ಹಾಕಿ ಯಾರೋ ಮುಂದೆ ಹೋದರು ಅಂತ ಅವರನ್ನ ಓವರ್ ಟೇಕ್ ಮಾಡಿದ್ರೆ, ಅವ್ರಿಗೆ ಇನ್ನೂ ಕೋಪ ಬರುತ್ತೆ.

ನಿಮಗೆ ಎಷ್ಟೇ ಕಷ್ಟ ಆದ್ರೂ ನಿಮ್ಮ ಮೇಲೆ ಕೋಪ ಮಾಡ್ಕೊಂಡಿರೋ ವ್ಯಕ್ತಿ ಮೇಲೆ ಕೋಪ ತೋರಿಸ್ಬೇಡಿ, ನಿಮಗೆ ಗೌರವ ಸಿಕ್ತಿಲ್ಲ ಅನ್ಸಿದ್ರೂ ನಿಮ್ಮ ಅಹಂ ಬದಿಗಿಟ್ಟುಬಿಡಿ. ವ್ಯಂಗ್ಯವಾಗಿ ಮಾತಾಡ್ಬೇಡಿ. ಇದ್ರಿಂದ ಅವರಿಗೆ ಇನ್ನೂ ಕೋಪ ಬಾರೋ ಸಾಧ್ಯತೆ ಇದೆ.

2 . ಸ್ವಲ್ಪ ಅವರನ್ನೂ ಅರ್ಥ ಮಾಡ್ಕೊಳ್ಳೊ ಪ್ರಯತ್ನ ಮಾಡಿ

ಅವರ ಬಗ್ಗೆ ಕೋಪ ಮಾಡ್ಕೊಳೋ ಬದಲು ಅವರ ಪರಿಸ್ಥಿತಿ ಬಗ್ಗೆ ಕಾಳಜಿ ತೋರಿಸಿ. ಎಷ್ಟೋ ಸಲ ಜನ ಕೋಪ ಮಾಡ್ಕೋಳೋಕೆ ಕಾರಣ ಅವ್ರನ್ನ ಯಾರೂ ಅರ್ಥ ಮಾಡ್ಕೊಳ್ಳದೇ ಇರೋದೇ ಇರಬಹುದು. ಅವರ ಮಾತನ್ನ ಸರಿಯಾಗಿ ಕೇಳಿಸಿಕೊಂಡ್ರೆ ಅವರ ಕೋಪ ಕಮ್ಮಿ ಆಗ್ಬಹುದು. ಸಂದರ್ಭ ನೋಡಿಕೊಂಡು ಈ ಮಾತುಗಳನ್ನ ಆಡಿ:

  • ಏನಾಯ್ತು ಹೇಳಿ. ನಾನೇನಾದ್ರೂ ಸಹಾಯ ಮಾಡಬಹುದಾ?
  • ಹೀಗಾಗಬಾರದಿತ್ತು. ಈಗ ಹೇಗೆ ಅನ್ನಿಸ್ತಿದೆ?
  • ನನ್ನನ್ನ ಕ್ಷಮಿಸಿ.

ಈ ಥರ ಸಣ್ಣ ಮಾತುಗಳು ಕೋಪ ಮಾಡ್ಕೊಂಡಿರೋ ವ್ಯಕ್ತಿ ಜೊತೆ ಮಾತಾಡೋಕೆ ತುಂಬಾ ಸಹಾಯ ಮಾಡುತ್ತೆ. ನಿಧಾನವಾಗಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

3 . ನಿಮಗೆ ಏನೇನ್ ಅನ್ನಿಸ್ತಿದೆ ಅಂತ ಹೇಳ್ಬಿಡಿ

ನಿಮ್ಮ ಮೇಲೆ ಕೋಪ ಮಾಡಿಕೊಂಡವರು ನಿಮ್ಮ ಮೇಲೆ ಹಗೆ ಸಾಧಿಸ್ತಿದ್ರೆ ಅವರಿಗೆ ನಿಮ್ಮ ಭಾವನೆಗಳನ್ನ ತಿಳಿಸಿ. ಅವ್ರು ಕೋಪ ಮಾಡ್ಕೊಂಡಿರೋದ್ರಿಂದ ನಿಮಗೆ ಬೇಜಾರು, ಭಯ ಅಥವಾ ಬೇರೆ ಏನೇ ಅನ್ನಿಸ್ತಿದ್ರೂ ಅದನ್ನ ಹೇಳಿಬಿಡಿ. ಅವರಿಗೆ ತೊಂದ್ರೆ ಕೊಡೋ ಉದ್ದೇಶ ಇಲ್ಲ ಅಂತ ಹೇಳಿ.

4 . ಪರಿಸ್ಥಿತೀನಾ ಸ್ವಲ್ಪ ತಿಳಿ ಮಾಡೊ ಪ್ರಯತ್ನ ಮಾಡಿ

ಈ ವಿಧಾನ ತುಂಬಾ ಒಳ್ಳೆ ಉಪಾಯ ಆದರೂ ಇದನ್ನ ಉಪಯೋಗಿಸುವಾಗ ಹುಷಾರಾಗಿರಿ. ಒಂದು ಜೋಕ್ ಹೇಳಿ, ಸ್ವಲ್ಪ ನಕ್ಕು ಅವರನ್ನೂ ನಗಿಸಿ. ಇದನ್ನ ಸರಿಯಾಗಿ ಮಾಡೋದು ಕಲಿತುಬಿಟ್ಟರೆ ನೀವು ಜೀವನದಲ್ಲಿ ತುಂಬಾ ಸಮಾಧಾನವಾಗಿ ಇರಬಹುದು.

ಯಾರೋ ಬೇರೆಯವರು ನಿಮ್ಮ ಮನಸ್ಸನ್ನ ಹಾಳು ಮಾಡೋಕೆ ಬಿಟ್ಟುಕೊಡಬೇಡಿ.

ಬೇರೆಯವರ ಭಾವನೆಗಳ ಮೇಲೆ ನಮಗೆ ನಿಯಂತ್ರಣ ಇರೋದಿಲ್ಲ. ನೀವು ಎಷ್ಟೇ ಪ್ರಯತ್ನ ಪಟ್ರೂ ಕೆಲವರು ಕೋಪ ಮಾಡ್ಕೊಂಡೇ ಇರಬಹುದು. ಅಂಥ ಸಂದರ್ಭದಲ್ಲಿ ಅವ್ರು ನಿಮ್ಮ ಮನಸ್ಸನ್ನ ಹಾಳು ಮಾಡಕ್ಕೆ ಬಿಡ್ಬೇಡಿ. ಸ್ನೇಹಪೂರ್ವಕವಾಗಿ ಮಾತಾಡಿ, ನೆಮ್ಮದಿಯಾಗಿರಿ.